ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಫೋಟೊಗಳಿಗಾಗಿಯೇ ಆ ಜೇನುಹುಳುಗಳು ಅಷ್ಟೊತ್ತು ಕುಳಿತುಕೊಂಡಿದ್ದವೇನೋ..

ಸಿದ್ಧರಾಮ ಕೂಡ್ಲಿಗಿ

ಇದು ಕೆಲವು ವರ್ಷಗಳ ಹಿಂದಿನ ಘಟನೆ. ನಮ್ಮ ಮನೆಯ ಮುಂದೆ ಹೊಸದಾಗಿ ಮನೆಯ ನಿರ್ಮಾಣವಾಗುತ್ತಿತ್ತು. ಅದಕ್ಕಾಗಿ ಅಲ್ಲಿ ಇಟ್ಟಿಗೆಗಳನ್ನು ತರಿಸಿ ಪೇರಿಸಿ ಇಟ್ಟಿದ್ದರು.

ಒಂದು ದಿನ ಬೆಳಗ್ಗೆ ಸುಮ್ಮನೆ ಕಣ್ಣಾಡಿಸುತ್ತಿರುವಾಗಲೇ ಝೊಂಯ್ ಎಂಬ ಶಬ್ದ ಕೇಳಿಬರತೊಡಗಿತು. ನಾನು ಆಗಸದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ ಏನಾದರೂ ಹಾರಾಡತೊಡದೆಯೇ ? ಎಂದುಕೊಂಡೆ. ಆದರೆ ನನ್ನ ಕಣ್ಣೆದುರೇ ಒಂದಿಷ್ಟು ಜೇನ್ನೊಣಗಳು ಹಾರಿಹೋದವು. ಹಾಗೆ ಹೋಗಿ ಎದುರಿಗಿರುವ ಇಟ್ಟಿಗೆಗಳ ಮೇಲೆ ಕುಳಿತವು. ಅವುಗಳ ಹಿಂದೆ ಮತ್ತಷ್ಟು, ಮತ್ತಷ್ಟು ಹೀಗೇ ಅವುಗಳ ಸಂಖ್ಯೆ ಹೆಚ್ಚಾಗತೊಡಗಿ ಝೊಂಯ್ ಎಂಬ ಶಬ್ದ ನಿರಂತರವಾಗಿ ಕೇಳಿಬರತೊಡಗಿತು. ಆ ಶಬ್ದ ಜೇನ್ನೊಣಗಳದ್ದೇ ಎಂದು ನನಗೆ ಸ್ಪಷ್ಟವಾಯಿತು.

ಹೀಗೆ ಒಂದಾದಮೇಲೊಂದರಂತೆ ಅಸಂಖ್ಯಾತ ಜೇನು ಹುಳುಗಳು ಬಂದು ಸೇರಿ ಇಟ್ಟಿಗೆಯ ತುಂಬೆಲ್ಲ ಇವುಗಳೇ ಗಿಜಿಗುಡತೊಡಗಿದವು. ಕೆಲವೇ ನಿಮಿಶಗಳಲ್ಲಿ ಬಂದು ಸೇರಿದ ಇವು ಅಲ್ಲಿಯೇ ಠಿಕಾಣಿ ಹೂಡುವಂತೆ ಕಂಡಿತು. ಬಹುಶ: ಮೊದಲಿಗೆ ರಾಣಿಜೇನು ಬಂದಿರಬಹುದು ಅದಕ್ಕೇ ಇಷ್ಟೆಲ್ಲ ಜೇನ್ನೊಣಗಳು ಬಂದು ಮುತ್ತಿಕೊಂಡಿವೆ ಎಂದು ನನಗೆ ಮನವರಿಕೆಯಾಯಿತು. ನನಗೋ ಕಣ್ಣೆದುರೇ ಇಷ್ಟೊಂದು ಜೇನ್ನೊಣಗಳು ಇರಬೇಕಾದರೆ ಫೋಟೊಗಳನ್ನಾದರೂ ಕ್ಲಿಕ್ಕಿಸೋಣ ಎಂದುಕೊಂಡೆ. ಇಂತಹ ಅವಕಾಶಗಳನ್ನು ನಾನೆಂದೂ ಬಿಟ್ಟುಕೊಡುವುದಿಲ್ಲ.

ಸರಿ ಆಗ ನನ್ನ ಬಳಿ ಇದ್ದ ಪುಟ್ಟ ಕೆಮರಾ ತೆಗೆದುಕೊಂಡು ಸಿದ್ಧನಾಗಿ ಗೇಟಿನ ಹೊರಗೆ ಹೊರಟೆ. ಯಾಕೆಂದರೆ ಸಾಧ್ಯವಿದ್ದಷ್ಟು ಅವುಗಳನ್ನು ಹತ್ತಿರದಿಂದ ಫೋಟೊ ತೆಗೆಯಬೇಕೆಂಬ ಆಸೆ. ಆಗಲೇ ಮನೆಯಿಂದ ಕೂಗು “ಎಲ್ಲಿಗೆ ಹೊಂಟೀರಿ ?” ಅಂತ. “ಇಲ್ಲಿ ಜೇನು ಹುಳು ಬಂದಾವು ಅವುಗಳದ್ದು ಫೋಟೊ ತೆಗೀತೀನಿ” ಎಂದೆ. ಗುಡುಗು ಮಿಂಚು ಆರಂಭಗೊಂಡಿತು.

“ಜೇನುಹುಳ ಭಾಳ ಡೇಂಜರ್ ದೂರ ನಿಂತು ತೆಗೀರೆಲ್ಲಾ ಯಾರು ಬ್ಯಾಡ ಅಂತಾರ ? ಅಲ್ಲೇ ಹೋಗಿ ತೆಗೀಬೇಕನ್ನೋದೇನು ?” ಅಂತ. “ಸಮೀಪದಿಂದ ಇನ್ನೂ ಛೊಲೋ ಫೋಟೊ ತೆಗೀಬಹುದೇ ಮಾರಾಯ್ತಿ” ನಾನೆಂದೆ. “ಜೇನುಹುಳುಗಳ ಜೊತಿ ನಿಮ್ದೇನು ಹುಡುಗಾಟ, ಎಷ್ಟೋಕೊಂದ ಅದಾವು ಏನಾರ ಮ್ಯಾಲೆದ್ದು ಕಚ್ಚಿಬಿಟ್ರ ಅಷ್ಟ” ಎಂಬ ಭಯ ಮನೆಯಾಕೆಯದು.

ಏನಾದರೂ ಆಗಲಿ ಎಂದು ನಾನು. ನಾನು ಬಿಡಲಿಲ್ಲ. ಸ್ವಲ್ಪ ಸಮೀಪವೇ ಹೋಗಿ ಫೋಟೊ ಕ್ಲಿಕ್ಕಿಸಿದೆ. ಒಂದೆರಡು ಜೇನುಹುಳುಗಳು ಹಾರಾಡುವದನ್ನು ಬಿಟ್ಟರೆ ಉಳಿದವುಗಳೇನು ತೊಂದರೆ ಮಾಡಲಿಲ್ಲ. ಮೇಲೆ ಬಿಸಿಲು ಬೇರೆ ಇತ್ತು. ನನಗೂ ಒಳಗೊಳಗೇ ಭಯ. ಆದರೂ ಹುಚ್ಚು. ಇನ್ನೂ ಸ್ವಲ್ಪ, ಇನ್ನೂ ಸ್ವಲ್ಪ ಎಂದು ಪೂರ್ಣ ಸಮೀಪವೇ ಹೋಗಿಬಿಟ್ಟಿದ್ದೆ. ಆಗ ನನ್ನ ಕೆಮರಾ ಚಿಕ್ಕದಾಗಿದ್ದುದರಿಂದ ನಾನು ಸಮೀಪ ಹೋಗಲೇಬೇಕಿತ್ತು.

ಕೆಮರಾದ ಕಣ್ಣಿನಲ್ಲಿ ನೋಡುತ್ತ ನೋಡುತ್ತ ಎಷ್ಟು ಸಮೀಪ ಹೋಗಿದ್ದೆನೆಂದರೆ ನನ್ನ ಕೆಮರಾ ಲೆನ್ಸ್ ಅವುಗಳ ರೆಕ್ಕೆಗಳನ್ನು ತಲುಪುವುದೊಂದೇ ಬಾಕಿ. ಅಂತೂ ನನಗೆ ಇಷ್ಟವಾಗುವಂತೆ ಕ್ಲಿಕ್ ಮಾಡಿದೆ. ತೃಪ್ತಿಯಿಂದ ಉಸಿರು ಬಿಡುತ್ತ ತಿರುಗಿ ನೋಡಿದೆ. ಮನೆಯ ಬಾಗಿಲಲ್ಲಿ ಮತ್ತೊಂದು ಜೇನು ಹುಳು ರೆಡಿಯಾಗಿ ನಿಂತಿತ್ತು “ಕುಟುಕಲು”. “ಅಲ್ರಿ ನಿಮಗೇನಾದರೂ ತಲೆಗಿಲೆ ಐತ್ಯಾ? ಅಷ್ಟೊಕೊಂದ ಹುಳಾ ಅದಾವು ಸಮೀಪ ಹೋಗಿ ಫೋಟೊ ತೆಗೀತೀರಲಾ ನಿಮಗೇನು ಹುಚ್ಚುಗಿಚ್ಚು ಹಿಡದೈತೇನು ?” ಎಂದು ಮನೆಯಾಕೆ ಝೊಂಯ್ ಎನ್ನತೊಡಗಿದಳು. ಹೌದು ಇದೂ ಒಂಥರಾ ಹುಚ್ಚೇ ಎಂದುಕೊಂಡೆ ಮನದೊಳಗೆ.

ನನ್ನ ಫೋಟೊಗಳಿಗಾಗಿಯೇ ಆ ಜೇನುಹುಳುಗಳು ಅಷ್ಟೊತ್ತು ಕುಳಿತುಕೊಂಡಿದ್ದವೇನೋ ಎಂಬಂತೆ ಅವುಗಳೆಲ್ಲ ನಿಧಾನವಾಗಿ ಹೊರಡಲು ಅಣಿಯಾಗತೊಡಗಿದ್ದವು. ಹೇಗೆ ಬಂದಿದ್ದವೋ ಹಾಗೇ ನಿಧಾನವಾಗಿ ಝೊಂಯ್ ಎಂಬ ಶಬ್ದ ಮಾಡುತ್ತ, ನೋಡ ನೋಡುವುದರೊಳಗೇ ಅಲ್ಲಿ ಇದುವರೆಗೂ ಜೇನುಹುಳುಗಳಿದ್ದವಾ ಎಂಬ ಒಂದು ಕುರುಹೂ ಇಲ್ಲದಂತೆ ಮಾಯವಾಗಿದ್ದವು. ಇದೆಲ್ಲ ನಡೆದದ್ದು ಕೆಲವು ನಿಮಿಷಗಳಲ್ಲಿ ಅಷ್ಟೆ. ಆದರೆ ಅತ್ಯಂತ ಸಮೀಪದಿಂದ ಜೇನುಹುಳುಗಳ ಫೋಟೊ ಕ್ಲಿಕ್ ಮಾಡಿದ ತೃಪ್ತಿ ಮಾತ್ರ ನನ್ನಲ್ಲಿತ್ತು. ಇದೊಂದು ರೋಮಾಂಚನಕಾರಿ ಅನುಭವ.

‍ಲೇಖಕರು Admin

20 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading