ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ದೃಷ್ಟಿಯಲ್ಲಿ ಯಾವ ರಾಜಕೀಯ ಪಕ್ಷವೂ ಸಾಚಾ ಅಲ್ಲ.

ಇವರು ನಾಗರಿಕರ ಹಕ್ಕುದಾರರು, ಜೋಪಾನ.

ನಾ. ದಾಮೋದರ ಶೆಟ್ಟಿ.

ಪ್ರಗತಿಪರರು ಎನ್ನಿಸಿಕೊಂಡ ಕೆಲವರಲ್ಲಿ ಒಂದು ಅಭಿಪ್ರಾಯವಿದೆ:’ನಾವು ಸಮಸ್ತ ನಾಗರಿಕರ ಪರವಾಗಿ ಮಾತನಾಡಬಲ್ಲೆವು. ಶ್ರೀಸಾಮಾನ್ಯರಿಗೆ ಲೋಕ ಜ್ಞಾನವಿಲ್ಲ. ಅವರನ್ನು ಸರಿದಾರಿಗೆ ಹಚ್ಚುವುದು ನಮ್ಮ ಧರ್ಮ.’

ಮೂವರು ಬುದ್ಧಿಜೀವಿಗಳೆನಿಸಿಕೊಂಡವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡು, ‘ಬಿಜೆಪಿಯನ್ನು ಸೋಲಿಸಬೇಕಾಗಿದೆ, ಅದಕ್ಕಾಗಿ ಕಾಂಗ್ರೆಸ್ಸಿಗೆ ಮತನೀಡಿ’ ಎಂದರು. ಇನ್ನೊಬ್ಬ ಪ್ರಗತಿಪರರು ‘ಬಿಜೆಪಿಯನ್ನು ಸೋಲಿಸಬೇಕಾಗಿದೆ. ಅದಕ್ಕಾಗಿ ಕೆಜೆಪಿ ಸೇರಿದ್ದೇನೆ’ ಎಂದರು. ನನ್ನ ದೃಷ್ಟಿಯಲ್ಲಿ ಯಾವ ರಾಜಕೀಯ ಪಕ್ಷವೂ ಸಾಚಾ ಅಲ್ಲ. ಪ್ರತಿಯೊಂದು ಪಕ್ಷದ ಮೇಲೆಯೂ ಸಾಕಷ್ಟು ಆರೋಪಗಳಿವೆ. ಭ್ರಷ್ಟತೆಗೆ ಇನ್ನೊಂದು ಹೆಸರು ರಾಜಕೀಯ. ಆಧುನಿಕ ಪರಿಸ್ಥಿತಿಯಲ್ಲಿ ಇದು ವಾಸ್ತವ ಎಂಬುದು ಎಲ್ಲರಿಗೂ ಗೊತ್ತು. ಹೀಗಿರುವಾಗ ನಮ್ಮ ನಡುವಿನ ಈ ಪ್ರಗತಿಪರರೆನಿಸಿಕೊಂಡವರು ನಿರ್ದಿಷ್ಟ ಪಕ್ಷವೊಂದರ ಮೂಲಕ ನಾಗರಿಕರ ಮುಂದೆ ನಿಂತು ‘ನಮ್ಮ ಮಾತನ್ನು ಕೇಳಿ’ ಎಂದು ಹೇಳಿದರೆ ಹಾಗೂ ನಮ್ಮ ವಾರಸುದಾರರಂತೆ ವರ್ತಿಸಿದರೆ ಇವರ ಬಗ್ಗೆ ಅಸಹ್ಯ ಹುಟ್ಟದಿದ್ದೀತೆ?

ಕಾಂಗ್ರೆಸ್ಸಿಗಾಗಿ ಮತ ಯಾಚಿಸುವವರ ಮುಂದಿನ ಉದ್ದೇಶವಂತೂ ಸ್ಪಷ್ಟ. ಕಾಂಗ್ರೆಸ್ ಗೆಲ್ಲುವ ಕುದುರೆ ಎಂಬುದನ್ನು ಅಂದಾಜಿಸಿಕೊಂಡ ಈ ಮೂವರೂ ಮುಂದೆ ರಾಜ್ಯಸಭೆಗೋ ವಿಧಾನ ಪರಿಷತ್ತಿಗೋ ಅನಾಮತ್ತಾಗಿ ಪ್ರವೇಶಿಸಿಬಿಡಬಹುದಲ್ಲ ಎಂಬ ದೂರಾಲೋಚನೆ ಇಟ್ಟುಕೊಂಡವರು. ಸದ್ಯಕ್ಕಂತೂ ಯಾವುದೇ ಉದ್ಯೋಗವಿಲ್ಲದ ಈ ಮೂವರು, ‘ನಾವು ಪಕ್ಷದ ಪರವಾಗಿದ್ದೇವೆ. ನಾವು ಬುದ್ಧಿಜೀವಿಗಳು, ನಾವು ಪ್ರಗತಿಪರರು’ ಎಂದುಮುಂತಾಗಿ ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ರಾಜಕೀಯ ಪಕ್ಷಗಳಿಗೆ ಇವರ ಬೇಳೆಕಾಳು ಗೊತ್ತಿದ್ದರೂ ಅವರಿಗದು ಬೇಕು. ಅದು ಆಯಾ ಪಕ್ಷಗಳ ವರ್ಚಸ್ಸಿನ ಪ್ರಶ್ನೆ.

ಇನ್ನೊಬ್ಬರಿದ್ದಾರೆ. ಕೆಜೆಪಿ ಪಡೆಯಬಹುದಾದ ಕೆಲವೇ ಸೀಟುಗಳ ಪರಿಣಾಮವಾಗಿ ಸಿಗಬಹುದಾದ ವಿಧಾನ ಪರಿಷತ್ತಿನ ಸೀಟಿಗಾಗಿ ಕಾದು ಕುಳಿತವರು. ಬಿಜೆಪಿಯಲ್ಲಿದ್ದ ಕಳಂಕಿತರು ಸೇರಿಕೊಂಡು ಮಾಡಿಕೊಂಡ ಪಕ್ಷವದು. ಸಮಯಸಾಧಕರು. ಸಮಾಜ ‘ಸಂಕ್ರಮಣ’ ಸ್ಥಿತಿಯಲ್ಲಿದೆ, ತಾವು ಸಮಾಜವನ್ನು ಉದ್ಧರಿಸುತ್ತೇವೆ ಎಂದು ಆಶ್ವಾಸನೆ ಕೊಡುತ್ತಾ ,ಸಿಗುವ, ಸಿಗದ ಎಲ್ಲ ಸವಲತ್ತುಗಳನ್ನು ನುಂಗಿ ನೊಣೆದವರು. ಭ್ರಷ್ಟಾತಿಭ್ರಷ್ಟರ ಜೊತೆಗೂಡಿ ಸಮಾಜವನ್ನು ಉದ್ಧರಿಸುವುದಕ್ಕೆ ಹೊರಟ ಇಂಥವರನ್ನು ನಂಬಿ ಹೊರಟ ನಮ್ಮಂಥವರಿಗೇ ನಾವು ಚಪ್ಪಲಿಯಲ್ಲಿ ಹೊಡ್ಕೋಬೇಕು!

ಈ ನಾಲ್ಕೂ ಜನ ಆಯಾ ಪಕ್ಷಗಳಿಗೆ ಸೇರಲಿ ಬಿಡಲಿ, ಚುನಾವಣಾ ಪ್ರಚಾರ ಮಾಡಲಿ ಬಿಡಲಿ, ಆಯಾ ಪಕ್ಷಗಳು ಪಡೆಯುವ ಸೀಟಿನಲ್ಲಿ ಇವರಿಂದಾಗಿ ಯಾವ ವ್ಯತ್ಯಾಸವೂ ಆಗಹೋಗುವುದಿಲ್ಲ. ಬಿಟ್ಟಿ ಸಿಕ್ಕುವುದಾದರೆ ಗೆಲ್ಲುವ ಪಕ್ಷದ ಹೆಸರು ಹೇಳಿಕೊಂಡರೆ ತಮ್ಮದೇನು ಹೋಗುತ್ತದೆ, ಬದಲಿಗೆ ಸಿಗುತ್ತದೆ ಎಂಬುದು ಇವರ ಒಳಗಣ ವಾದ. ಮೇಲಾಗಿ ರಾಜ್ಯಸಭೆ, ವಿಧಾನ ಪರಿಷತ್ತು ಸೀಟುಗಳಿಗೆ ಒತ್ತಡ ಹೇರಲು ಈ ಲೇಬಲ್ ಸಹಾಯ ಮಾಡಬಹುದಲ್ಲ! ಎಲ್ಲವೂ ಸರಿ. ಇವರನ್ನು ನಂಬಿ ಕೂತ ನಿಷ್ಠಾವಂತ ಮಂದಿಗೆ ಮೋಸಮಾಡುತ್ತಿದ್ದಾರೆ ಎಂಬ ಪರಿಜ್ಞಾನವಾದರೂ ಇವರಿಗೆ ಬೇಡವೆ? ಸ್ವಾರ್ಥಿಗಳಾದ ಇವರನ್ನು ನಂಬಿ ನನ್ನಂಥವರು ಕೆಟ್ಟರು.

‍ಲೇಖಕರು avadhi

16 April, 2013

1 Comment

  1. Ganesh Bhat

    Naadaa sir I appreciate your courage.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading