ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನನ್ನು ಕಾಡುವ ಚಿತ್ರ : ’ಇನ್ಸೆಂಡೀಸ್’ – ಹಾಡುವ ಮಹಿಳೆಯ ಕಥೆ

Incendies, the story of ’The woman who sings’ and 1+1=1

– ಇಶ್ತಿಯಾಖ್


ಕೆನಾಡದ ಈಜುಕೊಳದಲ್ಲಿವೊಂದರಲ್ಲಿ  ಈಜಿ ಮೇಲೆ ಬರುವಾಗ ನವಾಲ್ ಮರ್ವನ್  ಮಾನಸಿಕ ಅಘಾತಕ್ಕೊಳಗಾಗುತ್ತಾಳೆ. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆಯುತ್ತಾಳೆ. ಅವಳ ಕೊನೆಯ ಆಸೆಯ ಮೇರೆಗೆ ಅವಳ ಅವಳಿ ಮಕ್ಕಳಲ್ಲಿ (ಒಂದು ಗಂಡು, ಒಂದು ಹೆಣ್ಣು) ಮಗಳಾದ ಜೇನ್ ತನ್ನ ತಂದೆ ಹಾಗೂ ಕಳೆದು ಹೋದ ಸಹೋದರನನ್ನು ಹುಡುಕುವ ಕಥೆಯೇ ಇನ್ಸೆಂಡೀಸ್. ತಾಯಿಯು ಸಾಯುವ ಮುನ್ನ ತನ್ನ ವಿಲ್ ನಲ್ಲಿ ತಂದೆ ಹಾಗೂ ಸಹೋದರನಿಗೆ ಪ್ರತ್ಯೇಕವಾಗಿ ಬರೆದಿಟ್ಟು ಬಿಟ್ಟುಹೋದ ಪತ್ರಗಳನ್ನು ಅವರವರಿಗೆ ತಲುಪಿಸುವ ಜವಾಬ್ದಾರಿ ಕೂಡಾ ಅವರ ಮೇಲಿರುತ್ತದೆ. ಮಗ ಸಿಮೊನ್ ತನ್ನಮ್ಮನ ವಿಚಿತ್ರವಾದ ವಿಲ್ ಬಗ್ಗೆ ಸಿಟ್ಟುಗೊಂಡು ಸಹೋದರಿಯ ಜತೆ ಅಮ್ಮನ ಕೊನೆಯಾಸೆಯನ್ನು  ಪೂರೈಸುವ ಪ್ರಯತ್ನಕ್ಕೆ ಸಹಕಾರ ನೀಡಲೊಪ್ಪದಿದ್ದಾಗ ಜೇನ್ ಒಬ್ಬಳೇ ಆ ಪ್ರಯತ್ನದಲ್ಲಿ ಮುಂದುವರಿಯುತ್ತಾಳೆ.
ನವಾಲ್ ಮರ್ವನ್ ಜನಾಂಗೀಯ ಹಿಂಸೆ ಪೀಡಿತ ಲೆಬನಾನ್ ದೇಶದ ಕ್ರೈಸ್ತ ಕುಟುಂಬದ ಹೆಣ್ಣಾಗಿರುತ್ತಾಳೆ ಹಾಗೂ ನಿರಾಶ್ರಿತ ಮುಸ್ಲಿಮ್ ಯುವಕನೊಬ್ಬನನ್ನು ಪ್ರೀತಿಸುತ್ತಿರುತ್ತಾಳೆ. ಕುಟುಂಬದವರಿಗೆ ಅದನ್ನು ಸಹಿಸಲಾಗುವುದಿಲ್ಲ, ಕೊನೆಗೆ ಆಕೆಯ ಸಹೋದರರು ಸೇರಿ ಆಕೆಯ ಪ್ರೇಮಿಯನ್ನು ಕೊಂದುಹಾಕುತ್ತಾರೆ.  ಅವನಿಂದ ಗರ್ಭವತಿಯಾಗಿದ್ದ ಆಕೆ ರಹಸ್ಯವಾಗಿ ಒಂದು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ ಹಾಗೂ ಅಜ್ಜಿಯ ಮಾತಿನ ಮೇರೆಗೆ ಮಗುವಿನ ಹಿಮ್ಮಡಿಯಲ್ಲಿ ವಿಶಿಷ್ಟವಾದ ಮಚ್ಚೆಯನ್ನು ಹಾಕಿ ಕಫಾರ್  ಎಂಬ ದೂರದ ಊರಿನ ಒಂದು ಅನಾಥಶ್ರಮಕ್ಕೆ ಆ ಮಗುವನ್ನು ಸೇರಿಸಲಾಗುತ್ತದೆ. ಅಜ್ಜಿಯ ಒತ್ತಾಯಕ್ಕೆ ಮಣಿದು ಮರ್ವನ್, ದರೇಶ್ ಎಂಬ ಪಟ್ಟಣಕ್ಕೆ ಫ್ರೆಂಚ್ ಭಾಷ ವ್ಯಾಸಾಂಗಕ್ಕಾಗಿ ಹೋಗುತ್ತಾಳೆ. ಆ ಹೊತ್ತಿನಲ್ಲಿ ಜನಾಂಗೀಯ ಹಿಂಸೆ ಪ್ರಜಾಸಮರವಾಗಿ ಪರಿವರ್ತನೆಗೊಳ್ಳುತ್ತದೆ . ಆಕೆ ತನ್ನ ಮಗನನ್ನು ಹುಡುಕಲು ಕಫಾರ್ ಊರಿಗೆ ತಲುಪುತ್ತಾಳೆ. ಆ ಅನಾಥಾಶ್ರಮವು ಸಮರದ ಮಧ್ಯೆ ಧ್ವಂಸವಾಯಿತೆಂದೂ, ಅಲ್ಲಿದ್ದ ಮಕ್ಕಳನ್ನು ಬೇರೊಂದು ಊರಿನ ಕ್ಯಾಂಪ್ ಗೆ ಸ್ಥಳಾಂತರಿಸಲಾಗಿದೆಯೆಂದೂ ತಿಳಿಯುತ್ತದೆ.
ಭಯಭೀತ ಮುಸ್ಲಿಮರೇ ತುಂಬಿಕೊಂಡಿರುವ ಒಂದು ವ್ಯಾನಿನಲ್ಲಿ ಆಕೆ ತನ್ನ ಕುತ್ತಿಗೆಯಲ್ಲಿರುವ ಶಿಲುಬೆಯನ್ನು ಮರೆಸಿ ಮುಸ್ಲಿಮಳಂತೆ ನಟಿಸಿ ಆ ಕ್ಯಾಂಪ್ ನಡೆಗೆ ಹೊರಡುತ್ತಾಳೆ. ದಾರಿ ಮದ್ಯೆ ಸಶಸ್ತ್ರ ಕ್ರೈಸ್ತ ದಂಗೆಕೋರರು ಆ ವ್ಯಾನನ್ನು ಸುತ್ತುವರಿದು ಗುಂಡಿನ ಮಳೆಗೆರೆಯುತ್ತಾರೆ. ಮರ್ವನ್, ಒಬ್ಬ ಮುಸ್ಲಿಮ್ ಮಹಿಳೆ ಹಾಗೂ ಅವಳ ಸಣ್ಣ ಮಗಳು ವ್ಯಾನಿನೊಳಗೆ ಬದುಕುಳಿದಿರುವಾಗಲೇ ಆ ಗಲಭೆಕೋರರು ವ್ಯಾನಿಗೆ ಬೆಂಕಿ ಹಚ್ಚಲು ಪೆಟ್ರೋಲನ್ನು ಸಿಂಪಡಿಸುತ್ತಾರೆ. ಆಗ ಮರ್ವನ್ ತಾನು ಕ್ರೈಸ್ತಳೆಂದೂ ತನ್ನ ಶಿಲುಬೆಯನ್ನು ತೋರಿಸಿ, ಬದುಕುಳಿದಿರುವ ಆ ಕಿರಿಪ್ರಾಯದ ಹೆಣ್ಣು ಮಗು ತನ್ನದೆಂದು ಹೇಳಿ ಆಕೆಯನ್ನು ಹೊರಕರೆತರುತ್ತಾಳೆ. ದಂಗೆಕೋರರು ವ್ಯಾನನ್ನು ಸುಟ್ಟುಬಿಡುತ್ತಾರೆ. ಆದರೆ ಆ ಮಗು ತನ್ನ ತಾಯಿ ವ್ಯಾನಿನೊಳಗೆ ಸುಡುತ್ತಿರುವುದನ್ನು ಕಂಡು ವಾಪಾಸು ಉರಿಯುತ್ತಿರುವ ವ್ಯಾನಿನೆಡೆಗೆ ಓಡುತ್ತದೆ. ಗಲಭೆಕೋರರು ಆ ಮಗುವನ್ನು ಗುಂಡಿಟ್ಟು ಕೊಲ್ಲುತ್ತಾರೆ.
ಈ ಘಟನೆ ಮರ್ವನ್ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಈವರೆಗೆ ಶಾಂತಿ ಹಾಗೂ ಪ್ರೀತಿಯ ಭಾಷೆಯನ್ನು ಮಾತನಾಡುತ್ತಿದ್ದ ಆಕೆ ಕ್ರೈಸ್ತ ಸಶಸ್ತ್ರ-ಮೂಲಭೂತವಾದಿ ಸಂಘಟನೆಯೊಂದನ್ನು ಸೇರುತ್ತಾಳೆ. ಫ್ರೆಂಚ್ ಶಿಕ್ಷಕಿಯ ವೇಷದಲ್ಲಿ ಪ್ರಭಾವಿ ಕ್ರೈಸ್ತ ನಾಯಕನೊಬ್ಬನನ್ನೇ ಕೊಲೆ ಮಾಡುತ್ತಾಳೆ.  ಕೈದಿ ನಂ. 72 ಆಗಿ 15 ವರ್ಷ ಸೆರೆವಾಸಕ್ಕಾಗಿ ಕಫಾರ್ ನ ಜೈಲು ಸೇರುತ್ತಾಳೆ. ವಿಚಲಿತಳಾಗಿರುವ ಅವಳು ಅಲ್ಲಿ ಜೈಲ್ ಅಧಿಕಾರಿಗಳ ಪ್ರತಿರೋಧದ ಹೊರತಾಗಿಯೂ ಸದಾಕಾಲ ಹಾಡುತ್ತಿರುತ್ತಾಳೆ. ಜೈಲಿನಲ್ಲಿ  “ಹಾಡುವ ಮಹಿಳೆ” ಯಾಗಿ ಗುರುತಿಸಲ್ಪಡುತ್ತಾಳೆ. ಅವಳ ಹಾಡುವ ಅಭ್ಯಾಸವನ್ನು ನಿಲ್ಲಿಸಲು ಅಬುತಾರೇಖ್ ಎಂಬ ಕ್ರೂರಿ (ಟಾರ್ಚರ್ ಸ್ಪೆಶಲಿಸ್ಟ್) ಯನ್ನು ಕರೆತರಲಾಗುತ್ತದೆ, ಆತ ಆಕೆಯನ್ನು ಬಹಳ ಕೆಟ್ಟದ್ದಾಗಿ ಹಿಂಸಿಸಿ ಲೈಂಗಿಕ ಅತ್ಯಾಚಾರ ನಡೆಸುತ್ತಾನೆ. ಆ ಅತ್ಯಾಚಾರದಿಂದಾಗಿ ಮರ್ವನ್ ಜೈಲಿನಲ್ಲೇ ಹೆರುತ್ತಾಳೆ, ಜೈಲಿನ ನರ್ಸ್ ಮಗುವನ್ನು ರಕ್ಷಿಸಿ ತನ್ನೊಂದಿಗೆ ಕರೆದೊಯ್ಯುತ್ತಾಳೆ.  ಬಿಡುಗಡೆಯಾದ ನಂತರ ಮರ್ವನ್ ಮಕ್ಕಳೊಂದಿಗೆ ಕರೆದುಕೊಂಡು ಕೆನಾಡಕ್ಕೆ ವಲಸೆ ಹೋಗುತ್ತಾಳೆ. ಮಗಳು ಜೇನ್ ತಾಯಿಯ ಕೊನೆಯಾಸೆಯ ಮೆರೆಗೆ ಕಳೆದುಹೋದ ಸಹೋದರ ಹಾಗೂ ತಂದೆಯನ್ನು ಹುಡುಕಲು ಬಹಳ ಕಷ್ಟಪಟ್ಟು ಆಕೆಯ ಊರಿಗೆ ತಲುಪುತ್ತಾರೆ. ಆಕೆಯನ್ನು ಕುಲಗೆಟ್ಟ ಹೆಂಗಸು- ಮರ್ವನ್ ಮಗಳು ಎಂದು ತಿಳಿದ ನಂತರ ಯಾರೂ ಸಹಾಯ ಮಾಡಲಿಚ್ಚಿಸುವುದಿಲ್ಲ. ಅಲ್ಲಿಂದ ಕಷ್ಟಪಟ್ಟು ಆಕೆ ತಾಯಿ ಬಂಧಿಯಾಗಿದ್ದ ಕಾರಗೃಹವಿರುವ ಊರಿಗೆ ತಲುಪುತ್ತಾಳೆ, ಅಲ್ಲಿ ಕಾರಗೃಹದ ಮಾಜಿ ಉದ್ಯೋಗಿಯೊಬ್ಬನಿಂದ ತನ್ನ ತಾಯಿಗೆ ಆಗಿರುವ  ಹಿಂಸೆ ಹಾಗೂ ಅಬುತಾರೇಖ್ ನಿಂದ ಅತ್ಯಾಚಾರವಾದ ಬಗ್ಗೆ, ನಂತರ ತಾಯಿ ಜೈಲಿನಲ್ಲೇ ಮಗುವನ್ನು ಹೆತ್ತ ಬಗ್ಗೆ ತಿಳಿಯುತ್ತದೆ. ಆ ಹೆರಿಗೆಗೆ ಸಹಕರಿಸಿದ ನರ್ಸ್ ನ ವಿಳಾಸವನ್ನೂ ಆತ ನೀಡುತ್ತಾನೆ.
ತಮ್ಮ ಕಳೆದುಹೋದ ಸಹೋದರನ ಬಗ್ಗೆ ಮಾಹಿತಿ ಸಿಕ್ಕಿತೆಂದು ಕೆನಾಡದಲ್ಲಿರುವ ತನ್ನ ಸಹೋದರನನ್ನು (ಸಿಮೊನ್) ಕರೆಸಿಕೊಳ್ಳುತ್ತಾಳೆ. ಜತೆಗೆ ತನ್ನ ತಾಯಿಯ ಬಾಸ್ (ಹಾಗೂ ವಕೀಲ/ ನೋಟರಿ) ಕೂಡಾ ಬರುತ್ತಾನೆ. ಅವರೆಲ್ಲರೂ ಸೇರಿ ಮರಣಶಯ್ಯೆಯಲ್ಲಿರುವ ಆ ನರ್ಸ್ ಗೆ ಭೇಟಿಯಾಗುವಲ್ಲಿ ಸಫಲರಾಗುತ್ತಾರೆ.  ಆದರೆ ಆ ನರ್ಸ್ ಅನ್ನು ಭೇಟಿಯಾದ ನಂತರ ಅವರಿಗೆ ಹೊಸ ಹಾಗೂ ಆಶ್ಚರ್ಯಕಾರಿ ಸಂಗತಿಯೊಂದು ತಿಳಿಯುತ್ತದೆ. ಮರ್ವನ್ ಅತ್ಯಾಚಾರದಿಂದಾಗಿ ಅವಳಿ ಮಕ್ಕಳನ್ನು ಹೆತ್ತಾದ್ದಾಗಿಯೂ, ಹಾಗೂ ತಾನು ಆ ಮಕ್ಕಳನ್ನು ರಕ್ಷಿಸಿ, ಬಿಡುಗಡೆಯ ನಂತರ ಮರ್ವನ್ ಗೆ ಹಿಂತಿರುಗಿಸಿದ್ದಾಗಿಯೂ ತಿಳಿಸುತ್ತಾಳೆ. ಪ್ರಯತ್ನ ಮುಂದುವರಿಯುತ್ತದೆ. ಒಬ್ಬ ಸ್ಥಳೀಯ ಬುದ್ದಿವಂತ ನೋಟರಿಯ ಸಹಾಯದಿಂದ ತಮ್ಮ ಕಳೆದುಹೋದ ಸಹೋದರನ ಹೆಸರು (ಮೇ ತಿಂಗಳಿನ) ನಿಹಾದ್ ಎಂದು ತಿಳಿಯುತ್ತದೆ. ಅವರೆಲ್ಲರು ಸೇರಿ ಆತನಿದ್ದ ಅನಾಥಾಶ್ರಮಕ್ಕೆ ದಾಳಿ ಮಾಡಿ ಧ್ವಂಸಗೈದ ಮುಸ್ಲಿಮ್ ಪಡೆಯ ಮುಖ್ಯಸ್ಥನನ್ನು ಹುಡುಕುವಲ್ಲಿ ಯಸಸ್ವಿಯಾಗುತ್ತಾರೆ. ಅಲ್ಲಿದ್ದ ಮಕ್ಕಳನ್ನು ಜೀವಂತ ಉಳಿಸಿದ್ದಾಗಿಯೂ, ಅವರನ್ನು ತಮ್ಮ ಜತೆ ಯುದ್ಧ ತರಬೇತಿಗಾಗಿ ಕೊಂಡೊಯ್ದುದಾಗಿಯೂ ಆತ ಸ್ಮರಿಸುತ್ತಾನೆ. ಆ ಮಧ್ಯೆ ತನ್ನ ತಾಯಿಯ ಹುಡುಕಾಟ ನಡೆಸಿ ವಿಫಲನಾದ ನಿಹಾದ್ ವೈರಿಗಳೊಂದಿಗೆ ಹೋರಾಡಿ ಹುತಾತ್ಮನಾಗಬಯಸಿದ್ದಾಗಿಯೂ, ತಾನು ಆತನಿಗೆ ಅವಕಾಶವನ್ನೂ ನಿರಾಕರಿಸಿದ್ದಾಗಿಯೂ, ಆ ನಂತರದ ಯಾವುದೋ ಬೆಳವಣಿಗೆಯಿಂದ ಆತ ಯುದ್ದದಾಹಿ ಕ್ರೂರಿಯಾದನೆಂದೂ, ಆ ಮುಖ್ಯಸ್ಥ ತಿಳಿಸುತ್ತಾನೆ. ನಂತರ ಆತನನ್ನು ಸ್ನೈಪರ್ (ಗುಂಡಿಕ್ಕುವವ)ನಾಗಿ ದರೇಶ್ ಗೆ ಕಳುಹಿಸಲಾಯಿತು, ಅಲ್ಲಿ ವೈರಿಗುಂಪಿನವರು ಆತನನ್ನು ಸೆರೆಹಿಡಿದರೆಂದೂ, ಹಾಗೂ ಅವರಿಗಾಗಿ ಕೆಲಸಮಾಡಿಸುವಲ್ಲಿ ಸಫಲರಾದರೆಂದೂ,  ಆತನಿಗೆ ಕೈದಿಗಳಿಗೆ ಹಿಂಸಿಸುವ ತರಬೇತಿಯನ್ನು ನೀಡಲಾಯಿತೆಂದೂ ತಿಳಿಸುತ್ತಾನೆ. ಹಿಂಸಿಸುವ ಅತೀ ಕ್ರೂರಿ ಎಂದೇ ಖ್ಯಾತನಾದ ಆತನನ್ನು ವೈರಿಪಡೆಯವರು ಕಫಾರ್ ಜೈಲಿಗೆ (ಮರ್ವನ್ ಳನ್ನು ಬಂಧಿಸಲಾಗಿದ್ದ ಜೈಲು) ಕಳುಹಿಸಿದ್ದರೆಂದೂ, ಆತ ಅಲ್ಲಿಗೆ ಹೋದ ನಂತರ “ಅಬುತಾರೇಖ್” ಹೆಸರನಿಂದ ಚಿರಪರಿಚಿತನಾಗಿದ್ದನೆಂದೂ ಆ ಮುಖ್ಯಸ್ಥ ಬಹಿರಂಗ ಪಡಿಸುತ್ತಾನೆ.!!! ತಮ್ಮ ಸಹೋದರನೆ ತಮ್ಮ ಅಪ್ಪನೆಂದು ತಿಳಿದು ಅವರಿಬ್ಬರೂ ದಿಗ್ಭ್ರಾಂತಿಗೊಳಗಾಗುತ್ತಾರೆ.
ಆತ ನಂತರ ಕೆನಡಾಕ್ಕೆ ವಲಸೆ ಹೋಗಿದ್ದಾನೆಂದೂ ಹೊಸ ಸಭ್ಯ ಜೀವನವನ್ನೂ ನಡೆಸುತ್ತಿದ್ದಾನೆಯೆಂದೂ ತಿಳಿದು, ಆತನ ವಿಳಾಸವನ್ನೂ ಅವರು ಪತ್ತೆ ಹಚ್ಚುತ್ತಾರೆ. ತಮ್ಮ ತಾಯಿಯು, ತಂದೆಗಾಗಿ ಹಾಗೂ ಸಹೋದರನಿಗಾಗಿ ಬರೆದಿರುವ ಎರಡೂ ಪತ್ರಗಳನ್ನೂ ಅವನಿಗೆ ತಲುಪಿಸುತ್ತಾರೆ. ಮುಂದೆ ತಿಳಿಯುದೇನೆಂದರೆ, ಮರ್ವನ್ ಈಜುಕೊಳದಿಂದ ಮೇಲೆದ್ದು ಬರುವಾಗ ಒಬ್ಬ ವ್ಯಕ್ತಿಯ ಹಿಮ್ಮಡಿಯಲ್ಲಿ ತನ್ನ ಕಳೆದುಹೋದ ಮಗನ ಹಿಮ್ಮಡಿಯಲ್ಲಿ ಹಾಕಿದ್ದ ಅದೇ ಮಚ್ಚೆಯಿರುವುದನ್ನು ಕಂಡು ಆ ವ್ಯಕ್ತಿಯ ಬಳಿ ಹೋಗುತ್ತಾಳೆ. ಆ ವ್ಯಕ್ತಿ ಆಕೆಯನ್ನು ಗುರುತಿಸುವುದಿಲ್ಲ, ಆದರೆ ಆ ವ್ಯಕ್ತಿ ತನ್ನ ಮಗನೆಂದೂ, ತನ್ನನ್ನು ಬಲತ್ಕಾರ ಮಾಡಿದ ಅಬುತಾರೇಖ್ ನೆಂದೂ ಈಕೆ ಗುರುತಿಸಿರುತ್ತಾಳೆ. ಪರಿಣಾಮವಾಗಿ ಮಾನಸಿಕ ಅಘಾತಕ್ಕೊಳಗಾಗುತ್ತಾಳೆ, ನಂತರ ಕೊನೆಯುಸಿರೆಳೆಯುತ್ತಾಳೆ.  ಸಾಯುವ ಮುಂಚೆ ತನ್ನ ವಕೀಲನ (ಹಾಗೂ ಬಾಸ್ ಕೂಡಾ) ಮೂಲಕ ತನ್ನ ಮಕ್ಕಳಿಗೆ ಕೊನೆಯ ಆಶಯಗಳನ್ನು ಸೂಚಿಸಿರುತ್ತಾಳೆ.ಇತ್ತ ಪತ್ರಗಳನ್ನೋದಿದ ಮಗ ತಾನು ತಾಯಿಯೊಂದಿಗೆನೇ ಬಲತ್ಕಾರ ಮಾಡಿದ್ದನ್ನು ಅರಿತು ಅಘಾತಕ್ಕೊಳಗಾಗುತ್ತಾನೆ ಹಾಗೂ ತಾಯಿಯ ಗೋರಿಗೆ ಭೇಟಿ ನೀಡುತ್ತಾನೆ.ತಾಯಿ ಮರ್ವನ್ ಹಾಗೂ ಕೈದಿ. ನ 72 , ಮಗನಿಗೆ ಹಾಗೂ ತನ್ನನ್ನು ಬಲತ್ಕರಿಸಿದ ವ್ಯಕ್ತಿಗೆ ಬರೆದ ಆ ಪತ್ರಗಳಲ್ಲೇನಿದೆಯೆಂದು ತಿಳಿಯಲು ಅ ಸಿನೆಮಾವನ್ನು ನೋಡಲೇ ಬೇಕು. ಇನ್ಸೆಂಡೀಸ್ ಎಂದರೆ ಫ್ರೆಂಚ್ ಭಾಷೆಯಲ್ಲಿ ಜ್ವಾಲೆ. ಫ್ರೆಂಚ್ ಹಾಗೂ ಅರಬೀ ಭಾಷೆಯಲ್ಲಿರುವ ಕೆನಡಿಯನ್ ಸಿನೆಮಾವನ್ನು ಡೆನಿಸ್ ವಿಲೆನೀವ್ ನಿರ್ದೇಶಿಸಿರುತ್ತಾರೆ. ಈ ಸಿನೆಮಾ ಕೇವಲ ಕಾಡುವ ಕಥೆಯನ್ನಲ್ಲದೇ, ಉತ್ತಮ ನಿರ್ದೇಶನ, ನಟನೆ, ಛಾಯಾಗ್ರಹಣ ಹಾಗೂ ಸಂಗೀತವನ್ನು ಹೊಂದಿದೆ.

‍ಲೇಖಕರು avadhi

22 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading