‘ರಾಬಿಟ್ ಪ್ರೂಫ್ ಫೆನ್ಸ್’ ಸಿನೆಮಾ
ಮತ್ತು
ಆಸ್ಟ್ರೇಲಿಯಾದ ಕಪ್ಪು ಇತಿಹಾಸ
ದತ್ತು ಕುಲಕರ್ಣಿ
ನಾನು ಇತ್ತೀಚೆಗೆ ಇಲ್ಲಿ ಆಷ್ತ್ರೇಲಿಯಾದ ಟಿವಿ ಚೆನೆಲ್ ಎಸ್.ಬಿ.ಎಸ್ ದಲ್ಲಿ ಬಿತ್ತರಗೊಂಡ ‘ ರಾಬಿಟ್ ಪ್ರೂಫ ಫೆನ್ಸ ‘ ಎನ್ನುವ ಸಿನೆಮಾ ನೋಡಿದೆ.. ಈ ಸಿನೆಮ ಒಂದು ಸರಳ ನೈಜ ಘಟನೆಯನ್ನು ಯಥಾವತ್ತಾಗಿ ಬಿತ್ತರಿಸುವದರೊಂದಿಗೆ ಈ ಘಟನೆಯ ಹಿಂದಿರುವ, ಸಿನಿಮಾದಲ್ಲಿ ತೋರಿಸದೇ ಇರುವ , ಆಷ್ತ್ರೇಲಿಯದ ಚರಿತ್ರೆಯಲ್ಲಿ ಕಪ್ಪು ಚುಕ್ಕೆಯಾಗಿರುವ ‘ಸ್ಟೋಲನ್ ಜೆನರೇಶನ್”, ‘ಹಾಫ ಕಾಸ್ಟ ‘. ‘ಸಾರಿ ಡೇ ಎಂಬ ದಿನಾಚರಣೆ’ ಮುಂತಾದ ವಿಷಯಗಳತ್ತ ತನ್ನ ಬೆಳಕನ್ನು ಚೆಲ್ಲಿ, ಒಂದು ತರಹದ ವಿಶಣ್ಣತೆಯೊಂದಿಗೆ ನಮ್ಮನ್ನು ಕಾಡತೊಡಗುತ್ತದೆ.
ಬ್ರಿಟಿಶ ಸಾಮ್ರಾಜ್ಯಶಾಹಿಯ ಕರಿನೆರಳಿನಲ್ಲಿದ್ದ ಹಲವಾರು ದೇಶಗಳ ಜನರು ಅನುಭವಿಸಿದ ಯಾತನೆಗಳು ಹಲವಾರು ಬಗೆಯವು. ಅದರಲ್ಲಿಯೂ ಸುಮಾರು ಮೂರು ನೂರು ವರ್ಷಗಳ ಬ್ರಿಟಿಷ ದಾಸ್ಯದಲ್ಲಿದ್ದ ಭಾರತೀಯರು ಅನುಭವಿಸಿದ ನೋವುಗಳು ತುಂಬ ಅಘಾತಕರವಾದವುಗಳು. ಆದರೆ ಅದಕ್ಕಿಂತಲೂ ಮಿಗಿಲಾದ, ಬೇರೆ ತರಹದ ಸ್ವರೂಪವನ್ನೂ,ಪರಿಣಾಮವನ್ನು ಹೊಂದಿರುವ ಯಾತನೆಯನ್ನು ಅನುಭವಿಸಿದವರು ಆಷ್ತ್ರೇಲಿಯಾದ ಮೂಲನಿವಾಸಿಗಳು.
ನೋವಿನ ಹಲವು ಮಜಲುಗಳನ್ನು ಎದೆಯಲ್ಲಿ ಹೊತ್ತು ಇಂದಿಗೂ ಸಂಕಟಪಡುತ್ತಿರುವ, ಸ್ಟೋಲನ್ ಜನರೇಶನ್ ಎಂಬ ಹಣೆ ಪಟ್ಟಿ ಹೊತ್ತು, ತಮಗೆ ಗೊತ್ತಿಲ್ಲದಂತೆಯೇ ಎಡಬಿಡಂಗಿಯಾದ ಈ ಆಷ್ತ್ರೇಲಿಯಾದ ಮೂಲನಿವಾಸಿಗಳ ಕರ್ಮಕಾಂಡ ಶುರುವಾಗುವುದು ಇವರನ್ನು ಚಿಕ್ಕವರಾಗಿದ್ದಾಗ ಬಲವಂತವಾಗಿ ಕುಟುಂಬದವರೊಂದಿಗೆ ಬೇರ್ಪಡಿಸಿ ದೊಡ್ಡ ದೊಡ್ಡ ವಸತಿ ಶಾಲೆಗಳಲ್ಲಿ ಕೂಡಿ ಹಾಕಿ ಶಿಕ್ಷಣ ಕೊಡುವ ನೆಪದಲ್ಲಿ ಇವರಿಗೆ ತಮ್ಮ ಭಾಷೆ-ಸಂಸ್ಕೃತಿ ಸಮುದಾಯವನ್ನೇ ಮರೆಯುವಂತೆ ಮಾಡಲು ಶುರು ಮಾಡಿದಾಗಿನಿಂದ. ..ಇದೆಲ್ಲ ಆದದ್ದು ೧೯೦೦ ರಿಂದ ೧೯೭೦ ರವರೆಗಿನ ಸುಮಾರು ಏಳು ದಶಕಗಳಷ್ಟು ದೊಡ್ಡ ಕಾಲಘಟ್ಟದಲ್ಲಿ. ಜಗತ್ತು ಆಧುನಿಕತೆಗೆ,ಮುಕ್ತ ಹೊಸ ವಿಚಾರಗಳಿಗೆ ಸ್ವಾತಂತ್ರ್ಯಕ್ಕೆ ತೆರೆದುಕೊಳ್ಳುತ್ತಿದ್ದ ಈಗಿನ ಕಾಲಘಟ್ಟದಲ್ಲಿ ಇಂಥ ದೊಡ್ಡ ಅಮಾನವೀಯ ಅನ್ಯಾಯವೆಸಗಿದ ಬಿಳಿಯರ ಕೃತ್ಯ ಅಕ್ಷಮ್ಯ ಅಫರಾಧ ಎಂದೆ ಹೇಳಬಹುದು.

ಸ್ವಾತಂತ್ರ್ಯ ಹೊಂದುವದಕ್ಕಿಂತ ಮೊದಲು ಮತ್ತು ಸ್ವಾತಂತ್ರ ಪಡೆದ ನಂತರ ಇಲ್ಲಿ ಅಧಿಕಾರ ಪಡೆದ ಬ್ರಿಟಿಷರು ಇಲ್ಲಿದ್ದ ಮೂಲನಿವಾಸಿಗಳನ್ನು ಮನೆಕೆಲಸಕ್ಕೆ, ಕೃಷಿ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರು. ಮತ್ತು ಆ ಸಮಯದಲ್ಲಿ ಮಹಿಳೆಯರನ್ನು ತಮ್ಮ ಕಾಮಪಿಪಾಸುತನಕ್ಕೂ ಬಳಸಿಕೊಳ್ಳುತ್ತಿದ್ದರು. ಹೀಗೆ ಇಂಥ ಅಕ್ರಮ ಸಂಬಂಧದಿಂದ ಹುಟ್ಟಿದ ಮಕ್ಕಳನ್ನು ಮೂಲನಿವಾಸಿ ಮಹಿಳೆಯರೇ ಬೆಳೆಸುತ್ತಿದ್ದರು ಮತ್ತು ಇಂಥ ಮಕ್ಕಳಿಗೆ ಬ್ರಿಟಿಷ ಅಧಿಕಾರ ವರ್ಗ ಕೊಟ್ಟ ಹೆಸರೇ ‘ಹಾಫ ಕಾಸ್ಟ್’.
ಇಂಥ ಹಾಫ್ ಕಾಸ್ಟ್ ಮಕ್ಕಳ ಸಂಖ್ಯೆ ಜಾಸ್ತಿಯಾದಾಗ ಸರಕಾರ ಮಕ್ಕಳ ರಕ್ಷಣೆ ಮತ್ತು ಒಳ್ಳೆ ಶಿಕ್ಷಣದ ಕಾರಣ ವೊಡ್ಡಿ ಇಂಥ ಮಕ್ಕಳನ್ನು ಅವರ ಮೂಲನಿವಾಸಿ ಕುಟುಂಬದವರಿಂದ ಬಲವಂತವಾಗಿ ಬೇರ್ಪಡಿಸಿ ವಸತಿ ಶಾಲೆಗಳಲ್ಲಿ ಕೂಡಿಹಾಕಿ ತಮ್ಮ ಇಂಗ್ಲಿಷ ಭಾಷೆ ಮತ್ತು ಸಂಸ್ಕೃತಿಯನ್ನು ಕಲಿಸಲು ಪ್ರಾರಂಭಿಸಿತು.ಬಾಹ್ಯ ಜಗತ್ತಿನೊಂದಿಗೆ ಸಂಪರ್ಕವಿರದಂತಹ ೨-೩ ಸ್ಥಳಗಳಲ್ಲಿ ಈ ವಸತಿ ಶಾಲೆಗಳನ್ನು ತೆರೆಯಲಾಗಿದ್ದರಿಂದ ಮಕ್ಕಳು ಒಂದು ತರಹದ ಜೈಲಿನಂತಹ ವಾತವರಣದಲ್ಲಿ ಬೆಳೆಯಬೇಕಾಗುತ್ತಿತ್ತು. ಆ ಶಾಲೆಗಳಲ್ಲಿ ಮಕ್ಕಳು ಅಪ್ಪಿತಪ್ಪಿ ತಮ್ಮ ಮೂಲನಿವಾಸಿ ಭಾಷೆಯಲ್ಲಿ ಮಾತನಾಡಿದರೆ ಅವರಿಗೆ ದೊಡ್ಡ ಶಿಕ್ಷೆ ಕಾದಿರುತ್ತಿತ್ತು. ಮತ್ತು ಈ ಮಕ್ಕಳ ಮೂಲ ಪಾಲಕರಿಗೆ ತಮ್ಮ ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿಯೇ ಇರುತ್ತಿರಲಿಲ್ಲ. ಅಷ್ಟೇ ಅಲ್ಲದೆ ಮಕ್ಕಳ ಹೆಸರುಗಳನ್ನು ಬದಲಾಯಿಸಿ ವ್ಯವಸ್ಥಿತವಾಗಿ ಅವರ ಮೂಲ ಗುರುತು ನೆನಪುಗಳನ್ನೆಲ್ಲ ಅಳಿಸಿಹೋಗುವಂತೆ ಮಾಡಲಾಯಿತು. ಈ ಶಾಲೆಗಳಲ್ಲಿ ಹಾಫ್ ಕಾಸ್ಟ್ ಮಕ್ಕಳಲ್ಲದೆ ಇತರೇ ಮೂಲನಿವಾಸಿಗಳ ಮಕ್ಕಳನ್ನು ಬಲವಂತವಾಗಿ ಸೇರಿಸಿಕೊಂಡಿದ್ದರಿಂದ ಇಡೀ ಮೂಲನಿವಾಸಿಗಳ ಸಮುದಾಯವೇ ಇದರಿಂದ ಘಾಸಿಕೊಂಡಿತೆಂದು ಹೇಳಬಹುದು. ಇದೆಲ್ಲದರ ಪರಿಣಾಮವಾಗಿ ಈ ಮಕ್ಕಳು ಬೆಳೆಯುತ್ತಾ ಹಾಗೂ ದೊಡ್ಡವರಾದ ಮೇಲೆಯೂ ಮಾನಸಿಕ ಖಿನ್ನತೆಗೂ ಒಳಗಾದರು.ತಮ್ಮ ಮೂಲ ಭಾಷೆ ಸಂಸ್ಕೃತಿಯನ್ನು ಕಳೆದುಕೊಂಡು ಇತ್ತ ಮೂಲನಿವಾಸಿಗಳು ಎಂದು ಕರೆಯಿಸಿಕೊಳ್ಳದೆ ಇತ್ತ ಬಿಳಿಯರೆಂದು ಕರೆಯಿಸಿಕೊಳ್ಳದೇ ಎಡಬಿಡಂಗಿಗಳಾದ ಈ ಜನರನ್ನೇ ಸ್ಟೋಲನ್ ಜನರೇಶನ್ಎಂದು ಕರೆಯಲಾಗುತ್ತದೆ.
ಈ ಎಲ್ಲ ಅಂಶಗಳನ್ನು ನೇರವಾಗಿ ಹೇಳದೆಯೇ ಮೂರು ಹಾಫ್ ಕಾಸ್ಟ್ ಹುಡುಗಿಯರ ಒಂದು ಸಾಹಸದ ಕಥೆಯನ್ನು ಹೇಳುತ್ತಲೇ ಈ ‘ ರಾಬಿಟ್ ಪ್ರೂಫ ಫೆನ್ಸ’ ಸಿನೆಮಾ ಈ ಐತಿಹಾಸಿಕ ಸತ್ಯಗಳನ್ನು ತೆರೆದಿಡುತ್ತದೆ. ಇದರಲ್ಲಿ ಹಾಫ್ ಕಾಸ್ಟ್ ಗೆ ಸೇರಿದ ಈ ಮೂರು ಚಿಕ್ಕ ಹುಡುಗಿಯರು ತಮ್ಮ ವಸತಿಶಾಲೆಯಿಂದ ತಪ್ಪಿಸಿಕೊಂಡು ೨೪೦೦ ಕಿ ಮಿ ಗಳಷ್ಟು ದೂರವನ್ನು ೯ ವಾರಗಳ ಕಾಲ ನಡೆದು ಕ್ರಮಿಸಿ, ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಾ ತಮ್ಮ ಪಾಲಕರನ್ನು ಸಮುದಾಯವನ್ನು ಸೇರಿಕೊಳ್ಳುವ ನೈಜ ರೋಚಕ ಘಟನೆಯನ್ನು ಆಧರಿಸಿದೆ.
೧೪ ವರ್ಷದ ಮೋಲಿ ,೧೦ ವರ್ಷದ ಗ್ರೇಸಿ ಮತ್ತು ೮ ವರ್ಷದ ಡೈಸಿ ಎನ್ನುವ ಈ ಹುಡುಗಿಯರು ತಮ್ಮ ತಾಯಿ ಮತ್ತು ಅಜ್ಜಿ ಯೊಂದಿಗೆ ಖುಶಿಯಿಂದ ಇರುವದರಿಂದ ಶುರುವಾಗುವ ಸಿನೆಮ ನಂತರ ಮುಂದಿನ ದೃಶ್ಯದಲ್ಲಿ ಅಧಿಕಾರಿಗಳ ಕಣ್ಣಿ ಗೆ ಬಿದ್ದು ಅಧಿಕಾರಿಗಳು ಈ ಮೂವರೂ ಹುಡುಗಿಯರನ್ನು ಬಲಪ್ರಯೋಗದ ಮೂಲಕ ಅವರ ತಾಯಿ ಮತ್ತು ಅಜ್ಜಿಯಿಂದ ಬೇರ್ಪಡಿಸುವ ಹೃದಯ ವಿದ್ರಾವಕತೆಯನ್ನು ಒಳಗೊಂಡಿದೆ. ನಂತರದ ಕೆಲ ದೃಶ್ಯಗಳಲ್ಲಿ ಅಧಿಕಾರಿಗಳ ಕುಟಿಲತೆ, ಮತ್ತು ಮಕ್ಕಳ ಬಗೆಗಿನ ಸುಳ್ಳು ಕಾಳಜಿಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ. ನಂತರ ವಸತಿ ಶಾಲೆಯಿಂದ ತಪ್ಪಿಸಿಕೊಂಡ ಈ ಮಕ್ಕಳು ತಮ್ಮ ಜಾಣತನದಿಂದ ( ಈ ಹುಟ್ಟು ಜಾಣತನ ಮೂಲನಿವಾಸಿಗಳಿಗೆ ಅವರ ಜೀವನ ವಿಧಾನದಿಂದ ಲಭಿಸಿದ್ದು.)ಕಾಡು. ಕುರುಚಲು ಬೆಟ್ಟಗಳಲ್ಲಿ ಅಲೆಯುತ್ತಾ, ಬೆನ್ನಟ್ಟಿದ ಅಧಿಕಾರಿಗಳ ಕಣ್ಣು ತಪ್ಪಿಸಿ ತಮ್ಮ ಮೂಲ ವಸತಿಯತ್ತ ನಡೆಯಲು ಪ್ರಾರಂಭಿಸುತ್ತರೆ. ತಮ್ಮ ವಸತಿಯನ್ನು ಕಂಡುಕೊಳ್ಳಲು ಈ ಹುಡುಗಿಯರಿಗೆ ನೆರವಾಗುವದು ಒಂದು ಬೇಲಿ. ಆ ಕಾಲದಲ್ಲಿ ಬ್ರಿಟಿಷರು ಇಲಿ, ಮೊಲ ಮತ್ತು ಪೋಸಂ ಗಳಿಂದ ತಮ್ಮ ಬೆಳೆಗಳಿಗೆ ರಕ್ಷಣೆ ಮಾಡಿಕೊಳ್ಳಲು ಸುಮಾರು ೩೦೦೦ ಕಿ ಮಿ ಗಳಷ್ಟು ಉದ್ದದ ಬೇಲಿಯನ್ನು ಹಾಕಿರುತ್ತಾರೆ. ಈ ಬೇಲಿ ತಮ್ಮ ವಸತಿಯ ಹತ್ತಿರ ಹಾದು ಹೋಗಿದ್ದನ್ನು ನೆನೆಪಿಟ್ಟುಕೊಂಡ ಹುಡುಗಿಯರು ಅದನ್ನು ತಮ್ಮ ಗುರಿ ತಲುಪಲು ಉಪಯೋಗಿಸುತ್ತಾರೆ. ಚಿಕ್ಕ ಪ್ರಾಣಿಗಳನ್ನು ಪ್ರತಿಬಂಧಿಸಲು ಮಾಡಿದ ಬೇಲಿಯೇ ಮಕ್ಕಳು ತಮ್ಮ ಸ್ವಾತಂತ್ರ್ಯ ಪಡೆಯಲು ಉಪಯೋಗವಾಗುವದು ಒಂದು ಒಳ್ಳೆಯ ರೂಪಕವಾಗಿದೆ. ಈ ಪ್ರಯಾಣದಲ್ಲಿ ಇಬ್ಬರು ಹುಡುಗಿಯರು ತಮ್ಮ ಗುರಿ ಸೇರಿದರೆ ಮೂರನೆಯವಳು ಬಿಳಿಯ ಅಧಿಕಾರಿಗಳ ಕುಟಿಲತೆಗೆ ಬಲಿಯಾಗಿ ಮತ್ತೆ ವಸತಿ ಶಾಲೆಗೆ ಹಿಂದಿರುಗುತ್ತಾಳೆ.
ಚಿತ್ರದ ಕೊನೆಯಲ್ಲಿ ಈ ಒಂದು ಪಯಣವನ್ನು ಮಕ್ಕಳ,ಮೂಲನಿವಾಸಿಗಳ ಜಯ ಎಂದು ತೋರಿಸಿದರೂ ಈ ಎಲ್ಲ ಘಟನೆಗಳ ಹಿಂದಿನ ನೋವು, ವಿಷಾದ ಗಾಡವಾಗಿ ಮನ ಕಲಕುತ್ತದೆ.
ಅಂದಹಾಗೆ ಈ ಸಿನೆಮಾಗೆ ಪ್ರೇರಣೆ ಆಗಿದ್ದು ‘ಡೋರಿಸ್ ಗರಿಮರ’ ಎನ್ನುವ ಮಹಿಳೆ ಬರೆದ “ಫಾಲೋ ರಾಬಿಟ್ ಪ್ರೂಫ್ ಫೆನ್ಸ್” ಎನ್ನುವ ಪುಸ್ತಕ. ಲೇಖಕಿ ಡೋರಿಸ್ ಗರಿಮರ ಬೇರಾರು ಅಲ್ಲ.. ಈ ಕಥೆಯಲ್ಲಿ ಬರುವ ಮೊಲಿ ಎನ್ನುವ ಹುಡುಗಿಯ ಮಗಳು. ತನ್ನ ತಾಯಿಯ ನಿಜ ಜೀವನದ ಘಟನೆಯನ್ನೇ ಕಥೆಯಾಗಿಸಿದ್ದಾಳೆ ಹಾಗು ವಿಧಿಯ ಇನ್ನೊಂದು ಕ್ರೂರತೆಯೆಂದರೆ ಇವಳು ಸಹಿತ ಚಿಕ್ಕವಳಾಗಿದ್ದಾಗ ತನ್ನ ತಾಯಿಯಿಂದ ಬೇರ್ಪಡೆಯಾಗಿ ಹಲವಾರು ವರ್ಷ ಬಿಳಿಯರ ವಸತಿ ಶಾಲೆಯಲ್ಲಿ ಇದ್ದು ಬಂದವಳು.
ಮೊಲಿ, ಡೋರಿಸ್ ಅವಳಂತಹ ನೊಂದ ಸ್ಟೋಲನ ಜನರೇಶನ್ ದ ಹಲವಾರು ಮೂಲನಿವಾಸಿಗಳು ಇನ್ನೂ ಆಷ್ತ್ರೇಲಿಯದಲ್ಲಿದ್ದಾರೆ. ಅವರ ನೋವುಗಳಿಗೆ ಸ್ಪಂದಿಸದೇಇದ್ದ ಸರಕಾರ ಕೆಲ ಮಾನವ ಹಕ್ಕುಗಳ ಆಯೋಗದ ಒತ್ತಾಯದ ಮೇರೆಗೆ ೧೯೯೭ ರ ಮೇ ೨೬ರಂದು ಪ್ರಥಮವಾಗಿ ‘ಬ್ರಿಂಗಿಂಗ್ ಬ್ಯಾಕ್ ಹೋಮ್’ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ಅವರಿಗೆ ಸಹಾಯ ಮಾಡುತ್ತಿದೆ. ಹಾಗೆಯೇ ಮೇ ೨೬ರನ್ನು ‘ತಪ್ಪಾಯ್ತು ದಿನಾಚರಣೆ'(sorry day )ಯಾಗಿ ಆಚರಿಸಲಾಗುತ್ತದೆ. ಆದರು ಬಹಳಷ್ಟು ಜನ ಈ ಮೂಲನಿವಾಸಿಗಳಿಗಾದ ಅನ್ಯಾಯವನ್ನು ಅನ್ಯಾಯವೆಂದೆ ಒಪ್ಪುತ್ತಿಲ್ಲ. ಆಗಿನ ಬಿಳಿಯರ ಕ್ರಮ ಮೂಲನಿವಾಸಿಗಳನ್ನು ಮೇಲೆತ್ತಲು ಅವಶ್ಯವಾದ ಕ್ರಮವೆಂದೇ ತಿಳಿದಿದ್ದಾರೆ. ಆದರೂ ೨೦೦೭ರಲ್ಲಿ ಆಷ್ಟ್ರೇಲಿಯಾದ ಪ್ರಧಾನಿ ಕೆವಿನ್ ರುಡ್ ಸಾರ್ವಜನಿಕವಾಗಿ ಸರಕಾರದ ವತಿಯಿಂದ ಮೂಲನಿವಾಸಿಗಳಿಗೆ ಕ್ಷಮೆ ಕೇಳಿದ್ದರಿಂದ ಅಧಿಕೃತವಾಗಿ ಬಿಳಿಯರ ತಪ್ಪನ್ನು ಒಪ್ಪಿಕೊಂಡಂತಾಗಿದೆ.
ಆದರೆ ಏನೇ ಮಾಡಿದರೂ ತಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರ, ಮುಂತಾದ ವಿಷಯಗಳಲ್ಲಿ ಮೂಲನಿವಾಸಿಗಳು ಕಳೆದುಕೊಂಡದ್ದನ್ನು, ಕಳೆದುಕೊಳ್ಳುತ್ತಿರುವದನ್ನು ಯಾವದರಿಂದಲೂ ಸರಿದೂಗಿಸುವದಾಗುವದಿಲ್ಲ.






0 Comments