ಸದಾ ಕಾಡುವ ಚಾರಿತ್ರಿಕ ಸಿನಿಮಾ
ಸುಧಾ ಚಿದಾನಂದ ಗೌಡ
ಸ್ಟಾಕ್ ಇದೆಯಾ? ಸಾಂಡ್ರಾ ಕೇಳುತ್ತಾಳೆ
ಸ್ವಲ್ಪ ಇದೆ. ಮ್ಯಾನೇಜ್ ಮಾಡೋಣ ಇದರಲ್ಲೇ…..! ಅವಸರದಲ್ಲೇ ಉತ್ತರಿಸುವ ಎಲ್ವಿನ್ಳ ದನಿಯಲ್ಲಿ ಅಂಥಾ ಆತ್ಮವಿಶ್ವಾಸವೇನೂ ಇಲ್ಲ. ಬಾಂಬ್ ಧಾಳಿ ಹೀಗೇ ಮುಂದುವರಿದರೆ ಸಧ್ಯಕ್ಕೆ ತಮ್ಮ ಆಸ್ಪತ್ರೆಯಲ್ಲಿರುವ ಔಷಧಿಗಳು ಯಾತಕ್ಕೂ ಸಾಲದೆಂಬುದು ಅವಳಿಗೆ ತಿಳಿದಿದೆ. ಆದರೂ ಯಾವ ಗಾಯಾಳುವನ್ನೂ ಸುಶ್ರೂಷೆಗೆ ಒಳಪಡಿಸದೆ ಇರಲಾಗದು. ಯೋಚಿಸುತ್ತಾ ಆಸ್ಪತ್ರೆಯಿಂದ ಹೊರಗಡಿ ಇಡುತ್ತಾಳೆ…. ಅಬ್ಬಾ….. ಎದುರಿಗೆ ಕಂಡಿದ್ದೇನು.. ..?
ಅರೆಬೆಂದ ಮಾನವ ಶರೀರಗಳು ಚೀರುತ್ತಾ, ತಡವರಿಸುತ್ತಾ ಆಸ್ಪತ್ರೆಯತ್ತ ಬರುತ್ತಿವೆ…..! ಮುಖಗಳು ಅರ್ಧಸುಟ್ಟು ಭಯಾನಕವಾಗಿ ಕಾಣುತ್ತಿವೆ….. ಮೈಮೇಲಿನ ಬಟ್ಟೆಗಳು ಸುಟ್ಟುಹೋಗಿ, ಬೆತ್ತಲೆಯಾದ ಶರೀರದ ಭಾಗಗಳೂ ಬೆಂದುಹೋಗಿರುವುದು ಎದುರೇ ಕಾಣಿಸುತ್ತಿದೆ…..ಕೆಲವರಿಗೆ ನಡೆಯಲಾಗದೆ, ಸುಟ್ಟಕಾಲುಗಳು ಮಡಿಚಿ ಮಡಿಚಿ ಬಿದ್ದುಹೋಗುತ್ತಿದ್ದಾರೆ….. ಅವರನ್ನು ತುಳಿದುಕೊಂಡೇ ಉಳಿದ ಅರೆಬೆಂದ ಮನುಷ್ಯರು ಧಾವಿಸುತ್ತಿದ್ದಾರೆ ಆಸ್ಪತ್ರೆಯ ಕಡೆಗೆ…..
ಅಬ್ಬಾ…. ಅದೆಷ್ಟು ಭಯಾನಕ ದೃಷ್ಯವೆಂದರೆ…… 2001ರಲ್ಲಿ ಮೈಸೂರಿನಲ್ಲಿ ನೋಡಿದ ಈ ಪರ್ಲ ಹಾರ್ಬರ್ ಎಂಬ ಅಮೆರಿಕನ್ ಸಿನಿಮಾ ಯಾ ಹೊತ್ತೂ ಕಾಡುವ ಅಂಶವಾಗಿ ಮನಸಿನಲ್ಲಿ ನಿಂತುಬಿಟ್ಟಿದೆ. ಯುದ್ಧದ ಪರಿಣಾಮವನ್ನು ಹಸಿಹಸಿಯಾಗಿ ಚಿತ್ರಿಸಿರುವ ಈ ಸಿನಿಮಾದ ನಿದರ್ೇಶಕ ಮೈಕೇಲ್ ಬೇ. ರ್ಯಾಂಡೇಲ್ ವಾಲೇಸ್ ಬರೆದ ಕಥೆ ಮತ್ತು ಚಿತ್ರಕಥೆ ಸಮ್ಮೋಹನಗೊಳಿಸುವಷ್ಟು ಶಕ್ತಿಶಾಲಿಯಾಗಿದೆ. ಸುಮಾರು 140 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿಮರ್ಾಣಗೊಂಡ ಈ ಸಿನಿಮಾ ಬಾಕ್ಸಾಫೀಸಲ್ಲಿ ಗಳಿಸಿದ್ದು 450 ಮಿಲಿಯನ್ ಡಾಲರ್ಗಳಿಗಿಂತಲು ಅಧಿಕ..!
ಅಮೇರಿಕಾದ ಹವಾಯ್ ದ್ವೀಪಗಳಲ್ಲಿರುವ ನೌಕಾನೆಲೆ ಪರ್ಲ್ ಹಾರ್ಬರ್ನ ಅವಶೇಷಗಳನ್ನು ಹತ್ತೊಂಭತ್ತನೆ ಶತಮಾನದ ಉತ್ತರಾರ್ಧದಲ್ಲಿ ಸಮುದ್ರದಾಳದಲ್ಲಿ ಪತ್ತೆ ಮಾಡಿದ ಅಮೇರಿಕಾದ ವಿಜ್ಞಾನಿಗಳು ಅದರಲ್ಲಿ ದೊರಕಿದ ವಸ್ತುಗಳನ್ನು ಆಧಾರವಾಗಿಟ್ಟುಕೊಂಡು ಅನೇಕ ಡಾಕ್ಯುಮೆಂಟರಿಗಳನ್ನು ಚಿತ್ರೀಕರಿಸಿದ್ದಾರೆ. ಸತ್ಯಸಂಗತಿಗಳನ್ನು, ಐತಿಹಾಸಿಕ ಕಥಾವಸ್ತುಗಳನ್ನು ಆಧರಿಸಿದ ಅನೆಕ ಸಿನಿಮಾಗಳು ಯಾ ಹೊತ್ತು ಗಮನಸೆಳೆಯುತ್ತವೆ ಮತ್ತು ಗಂಭೀರ ಚಿಂತನೆಗೆ ಹಚ್ಚುತ್ತವೆ. ಯುರೋಪಿಯನ್ ಸಾಹಿತ್ಯದ ವಿದ್ಯಾರ್ಥಿನಿಯಾದ, ಮುಖ್ಯವಾಗಿ ಶೇಕ್ಸ ಪಿಯರ್ ಮಹಾಶಯನ ಚಾರಿತ್ರಿಕ ನಾಟಕಗಳ ಸಂಶೋಧನಾರ್ಥಿಯಾದ, ಐತಿಹಾಸಿಕ ನಾಟಕಗಳನ್ನು, ಕಾದಂಬರಿಗಳನ್ನು ಅಭ್ಯಸಿಸುತ್ತಾ ಬಂದ ನನಗೆ ಐತಿಹಾಸಿಕ ಸಿನಿಮಾಗಳ ಕುರಿತು ಕುತೂಹಲವೇ. ಅದರಲ್ಲು ಮುರಿದು ಕಟ್ಟಿದ ಕಥಾನಕಗಳೆಂದರೆ ಇನ್ನಷ್ಟು ಆಸಕ್ತಿ. ಹಾಗಾಗಿ ಅಂಥಾ ಸಿನಿಮಾಗಳ ಸುತ್ತಮುತ್ತ, ಹಿಂದೆಮುಂದೆ ಕೆದಕುವುದು ಹವ್ಯಾಸವಾಗಿ ಬೆಳೆದುಬಿಟ್ಟಿತು. ಈ ದೃಷ್ಟಿಯಲ್ಲಿ ತುಂಬ ನೆನಪಿನಲ್ಲುಳಿದ ಸಿನಿಮಾ ಈ ಪರ್ಲ್ಲ ಹಾರ್ಬರ್.

ತಕ್ಷಣಕ್ಕೆ ನೆನಪಾಗುವ ಕೆಲವು ಸಿನಿಮಾಗಳನ್ನು ಉದಾಹರಣೆಗೆ ತೆಗೆದುಕೊಳ್ಳಿ.
ಇಪ್ಪತ್ತು ವರ್ಷಗಳ ಕೆಳಗೆ ಪೀಟರ್ ಬ್ರೂಕ್ ಮಹಾಭಾರತವನ್ನು ಆಧರಿಸಿ ಇಂಗ್ಲಿಷ್ ಸಿನಿಮಾ ಮಾಡಿದ!
ಮೊನ್ನೆಮೊನ್ನೆಯಷ್ಟೇ avatar ಬಂತು.
ರೋಂ ಸಾಮ್ರಾಜ್ಯದ ಕರಿನೆರಳುಗಳ ಇತಿಹಾಸವುಳ್ಳ ಗ್ಲಾಡಿಯೇಟರ್ ಬಂತು.
ಟೈಟಾನಿಕ್ ಬಗೆಗಂತೂ ಅದ್ಭುತವಾದ ಸಿನಿಮಾ ಮಾಡಿ ಪ್ರಪಂಚದಾದ್ಯಂತ ವೀಕ್ಷಕರ ಮನಸನ್ನು ಸೂರೆಗೊಂಡರು!
2001ರಲ್ಲಿ ಮತ್ತೊಂದು ಸಿನಿಮಾ ಪರ್ಲ್ ಹರ್ಬರ್ ಮತ್ತೊಮ್ಮೆ ಅಮೆರಿಕಾದ ಇತಿಹಾಸವನ್ನು ಓದುವಂತೆ ಮಾಡಿದೆ.
ಪರ್ಲ್ ಹಾರ್ಬರ್
ಇದು ಎರಡನೆಯ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಅಂದರೆ 1940ರ ದಶಕದಲ್ಲಿ ಅಮೆರಿಕಾದ ಬಹುಮುಖ್ಯ ನೌಕಾನೆಲೆಯಾಗಿತ್ತು. ಹವಾಯ್ ದ್ವೀಪ ಸಮೂಹಕ್ಕೆ ಸೇರಿದ ನಡುಗಡ್ಡೆ ಇದು.
ಅಲ್ಲಿ ಮಿಲಿಟರಿ ಆಸ್ಪತ್ರೆಗೆ ನರ್ಸ ಆಗಿ ಕೆಲಸಕ್ಕೆ ಬಂದವಳು ಎವ್ಲಿನ್ ಜಾನ್ಸನ್. ಅಲ್ಲಿಗೆ ಬರುವುದಕ್ಕೆ ಮುಂಚೆ ಭೆಟ್ಟಿಯಾದ ರ್ಯಾಫ್ ಮೆಕಾಲೇಯತ್ತಲೇ ನೆಟ್ಟಿದೆ ಅವಳ ಚಿತ್ತ. ದುರಾದೃಷ್ಟವಶಾತ್, ಯುದ್ಧದ ಮುಂಚೂಣಿ ಸೈನಿಕನಾದ ಆತ ಶತೃಬಣದಿಂದ ಹತನಾದ ಸುದ್ದೀ..! ಜರ್ಝರಿತಳಾದವಳು ಅವಳಷ್ಟೇ ಅಲ್ಲ, ರ್ಯಾಫ್ ನ ಬಾಲ್ಯಸ್ನೇಹಿತ ಡೇನಿಯಲ್ ಕೂಡಾ..! ಇಬ್ಬರೂ ಸೈನಿಕರ ನಡುವೆ ಯುದ್ಧ, ತರಬೇತಿ, ಪೋಸ್ಟಿಂಗ್..ಹೀಗೇ ನಡೆದಿತ್ತು..ಬದುಕು. ಹಠಾತ್ತಾಗಿ ರ್ಯಾಫ್ ನ ಬದುಕು ಕೊನೆಗೊಳ್ಳುವವರೆಗೂ…..! ಆಶ್ಚರ್ಯವೆಂದರೆ ಈ ಸಮಾನ ದು:ಖವೇ ಅವರಿಬ್ಬರನ್ನೂ ಹತ್ತಿರ ತರಲಾರಂಭಿಸುತ್ತದೆ…. ಡ್ಯಾನಿ ಎವ್ಲೀನಳನ್ನೊಮ್ಮೆ ತನ್ನ ವಿಮಾನದಲ್ಲಿ ಹಾರಾಟಕ್ಕೆ ಕರೆದೊಯ್ಯುತ್ತಾನೆ…… ಮೋಡಗಳ ನಡುವೆ ತೇಲಾಡುತ್ತ, ಮಾತಾಡುತ್ತಾ ಅವರಿಬ್ಬರೂ ತಮಗರಿವಿಲ್ಲದೇ ಆಪ್ತರಾಗುತ್ತಾರೆ…. ಅನಂತರ ಡ್ಯಾನಿ ಅವಳೆಡೆಗಿನ ಆಕರ್ಷಣೆಯನ್ನು ಹತ್ತಿಡುವ ಪ್ರಯತ್ನ ಮಾಡಿದರೂ ಅದನ್ನು ಮೀರಿ ಅವರಿಬ್ಬರ ನಡುವೆ ದೈಹಿಕಕ್ರಿಯೆಯು ಸಹಜವೆಂಬಂತೆ ನಡೆದುಹೋಗುತ್ತದೆ..! ಯುದ್ಧಕ್ಕೆ ಸಮಾನಾಂತರವಾಗಿ ಈ ಪ್ರಣಯದ ದೃಷ್ಯಗಳೂ ಎಷ್ಟು ಹೃದಯಸ್ಪಶರ್ಿಯಾಗಿ ಮೂಡಿಬಂದಿದೆ ಎಂದರೆ, ಅವರಿಬ್ಬರ ಆನಂದ, ತನ್ಮಯತೆ ನೋಡುವಾಗ ಮನುಷ್ಯಸಂಬಂಧಗಳ ಕುರಿತು ವಿಸ್ಮಯ, ಸಾಮಾಜಿಕ ಕಟ್ಟುಪಾಡುಗಳ ಅರ್ಥಹೀನತೆ ಕಾಡಿದ್ದವು…….! ಸ್ತ್ರೀಪುರುಷ ದೇಹಗಳ ನಡುವಿನ ಬಾಂಧವ್ಯ ಉಂಟುಮಾಡುವ ಆಪ್ತಭಾವವನ್ನು ನಿರಾಕರಿಸಲಾಗುವುದೂ ಇಲ್ಲ. ಅದು
ಪ್ರಕೃತಿಯನ್ನೇ ನಿರಾಕರಿಸಿದಂತೆ ಎನಿಸುತ್ತದೆ. ಆದರೆ, ಮನುಷ್ಯಮಾತ್ರದವರು ಸೃಷ್ಟಿಸಿಕೊಂಡಿರುವ ಕಟ್ಟಳೆಗಳೂ ಕೆಲವಿದ್ದಾವಲ್ಲ….
ಸಮಸ್ಯೆ ಎದುರಾಗುವುದು….. ರ್ಯಾಫ್ ಮೃತನಾಗಿಲ್ಲ….. ಕೇವಲ ಗಾಯಗೊಂಡಿದ್ದ ಎಂದು ತಿಳಿದಾಗ..! ಎವ್ಲಿನ್ ಳನ್ನು ಕಾಣಲೆಂದು ಓಡೋಡಿಬಂದ ರ್ಯಾಫ್ ಗೆ ಆಶ್ವರ್ಯ..ಎವ್ಲೀನ್ ಸಂತೋಷಗೊಂಡಂತೆ ಕಂಡುಬರುತ್ತಿಲ್ಲ….. ಜೊತೆಗೆ ಡೇನಿಯಲ್ ಟೆಲಿಗ್ರಾಮೊಂದನ್ನು ಹಿಡಿದುಕೊಂಡು ಓಡೋಡಿಬರ್ತಾನೆ…… ಅದರಲ್ಲೂ ರ್ಯಾಫ್ ಬದುಕಿದ್ದಾನೆಂಬ ಸುದ್ದಿ….. ಕಣ್ಣುಗಳು ಸಂಧಿಸಿದ ಕ್ಷಣದಲ್ಲೇ ರ್ಯಾಫ್ ಅರ್ಥೈಸಿಕೊಂಡುಬಿಡುತ್ತಾನೆ…..ಅವರಿಬ್ಬರ ನಡುವೆ ನಡೆದಿರಬಹುದಾದ್ದನ್ನ…..! ಆ ದ್ರೋಹ, ವಂಚನೆ, .. ಓಡಿಬಿಡುತ್ತಾನೆ ಅಲ್ಲಿಂದ.! ಹಿಂಬಾಲಿಸಿಹೋದ ಡೇನಿಯಲ್ ಗೂ ಅವನಿಗೂ ಮಾರಾಮಾರಿ..! ಗುದ್ಯಾಡುತ್ತಲೇ ಸುಸ್ತಾಗಿ, ನಿದ್ದೆಹೋಗಿಬಿಡುತ್ತಾರೆ.. ಯಾವುದೋ ಪರಿಚಿತ ಆದರೆ ಅನಿರೀಕ್ಷಿತ ಶಬ್ದ ರ್ಯಾಫ್ ಎಚ್ಚರಗೊಳ್ಳುವಂತೆ ಮಾಡುತ್ತದೆ….. ಕಣ್ತೆರೆದು ನೋಡುತ್ತಾನೆ.. ಆಕಾಶದ ತುಂಬ ವಿಮಾನಗಳು…..! ಅವನ ಸೈನಕ ಅನುಭವ ತಕ್ಷಣ ಪತ್ತೆ ಹಚ್ಚುತ್ತದೆ.. ಅವು ವೈರಿಪಡೆಯ ಝೀರೋ ಹೆಸರಿನ ಬಾಂಬರ್ಗಳ ಪಡೆ..! ಕರ್ತವ್ಯಪ್ರಜ್ಞೆ ವೈಯಕ್ತಿಕ ನೋವನ್ನು ಮರೆಸುತ್ತದೆ.. ಇಬ್ಬರೂ ಓಡುತ್ತಾರೆ ತಮ್ಮ ವಿಮಾನಗಳಿರುವಲ್ಲಿಗೆ..
ಅಲ್ಲಿಂದ ಮುಂದೆ ಇಪ್ಪತ್ತು ನಿಮಿಷಗಳ ಕಾಲ ತೆರೆಯ ತುಂಬಾ ಯುದ್ಧ, ಯುದ್ಧ ಮತ್ತು ಯುದ್ಧ..! ಲಕ್ಷಾಂತರ ಸಾವು, ಬೆಂದುಹೋದ, ನರಳಾಡುತ್ತಿರುವ ದೇಹಗಳು, ಕರಗಿಹೋದ ಶವಗಳು, ಸರ್ವವ್ಯಾಪಿಯಾದ ಬೆಂಕಿ, ನೀರೊಳಗೆ ಮುಳುಗಿದ ಹಡಗುಗಳು, ಆಕಾಶದಲ್ಲೇ ಭಸ್ಮವಾಗುವ ಯುದ್ಧವಿಮಾನಗಳು.. ನಡುವೆ ಜೀವದ ಹಂಗು ತೊರೆದು ಹೊರಾಡುವ ರ್ಯಾಫ್, ಡ್ಯಾನಿಯರಂಥಾ ಸಾವಿರಾರು ಪೈಲೆಟ್ಗಳು…. ಇದ್ದುದರಲ್ಲೇ ಬದುಕುಳಿದವರಿಗೆ ಚಿಕಿತ್ಸೆ ನೀಡಲು ಹೆಣಗಾಡುವ ಎವ್ಲಿನ್, ಸಾಂಡ್ರಾಳಂಥಾ ನೂರಾರು ದಾದಿಯರು,
ಎಲ್ಲಾ ಸೇರಿ ಪರ್ಲ ಹಾರ್ಬರ್ ನ್ನು ಮರೆಯಲು ಸಾಧ್ಯವೇ ಇಲ್ಲದ ಸಿನಿಮಾವನ್ನಾಗಿ ಮಾಡಿಹಾಕಿವೆ. ಇದಕ್ಕೆ ಅಕಾಡೆಮಿ ಅವಾರ್ಡ ಬಂದಿದ್ದೂ ಸೌಂಡ್ ಎಫೆಕ್ಟ್ ಗಾಗಿಯೇ. ಇಲ್ಲಿ ಕೊಂಚ ಇತಿಹಾಸ ಕೆದಕಬಹುದು.
ಯಾವ್ಯಾವ ರಾಜಕೀಯ ಕಾರಣಕ್ಕೋ, ಅಮೆರಿಕಾ ಎರಡು ಜಾಗತಿಕ ಯುದ್ದಗಳ ಸಂದರ್ಭದಲ್ಲಿ ನೇರಪ್ರವೇಶ ಮಾಡಿಯೇ ಇರಲಿಲ್ಲ. ನಿಜಕ್ಕೂ ಮೊದಲ ಮತ್ತು ಎರಡನೆಯ ಪ್ರಪಂಚ ಯುದ್ಧದ ಸಂದರ್ಭದಲ್ಲಿ ಅಮೆರಿಕಾ ನೇರವಾಗಿ ರಣರಂಗದಿಂದ ದೂರವೇ ಉಳಿದಿತ್ತು.. ಅದರ ಅವಶ್ಯಕತೆಯೂ ಇರಲಿಲ್ಲ. ಏಕೆಂದರೆ ನಿಜವಾದ ಯುದ್ಧ ಇದ್ದದ್ದು ಜರ್ಮನಿ ಮತ್ತು ಫ್ರಾನ್ಸ್ ಮಧ್ಯೆ.
ಆಸ್ಡ್ರಿಯಾ ಮತ್ತು ರಷ್ಯಾದ ಮಧ್ಯೆ ಇಟಲಿ, ಜರ್ಮನಿ ಮತ್ತು ಫ್ರಾನ್ಸ್, ಇಂಗ್ಲೆಂಡ್ಗಳ ಮಧ್ಯೆ! ಜರ್ಮನಿ, ಆಸ್ಟ್ರಿಯಾ, ಹಂಗೇರಿ , ಇಟಲಿ ದೇಶಗಳು ಸೇರಿ ಒಂದು ಬಣ ಎನಿಸಿದರೆ ಇಂಗ್ಲೆಂಡ್, ಫ್ರಾನ್ಸ್ ಮತ್ತು ರಷ್ಯಾ ದೇಶಗಳು ಸೇರಿ ಮಿತ್ರ ರಾಷ್ಟ್ರಗಳು ಎನಿಸಿದ್ದವು.
ಇವುಗಳ ಮಧ್ಯದಲ್ಲೆಲ್ಲೂ ಅಮೆರಿಕಾ ಇರಲಿಲ್ಲ ಎಂಬುದು ಗಮನಾರ್ಹ. ಆದರೆ ಇಂಗ್ಲೆಂಡ್ ಮತ್ತು ಇತರ ಯುರೋಪಿಯನ್ ದೇಶಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿತ್ತೇ ಹೊರತು ಎಲ್ಲೂ ನೇರಪ್ರವೇಶ ಮಾಡಿರಲಿಲ್ಲ. ಯುರೋಪಿನ ಎರಡು ಶಕ್ತಿ ಬಣಗಳೂ ತಮ್ಮ ತಮ್ಮೊಳಗೆ ತಿಕ್ಕಾಟ, ಕಾದಾಟ ಆರಂಭಿಸಿದಾಗ ಅಮೇರಿಕಾ ತಟಸ್ಥವಾಗಿ ಉಳಿದಿದ್ದು ಆಗಿನ ಬಲಿಷ್ಟ ದೇಶ ಜರ್ಮನಿಯನ್ನು ಕೆಣಕಿದಂತಾಯಿತು.
ಲೂಸಿತೇನಿಯಾ ಮೊದಲ ಪ್ರಪಂಚ ಮಹಾಯುದ್ಧ ಸಂದರ್ಭದಲ್ಲಿ ಮುಳುಗಿಹೊದಾಗ ಅಮೇರಿಕಾದ ಅಧ್ಯಕ್ಷರಾಗಿದ್ದವರು ವುಡ್ರೋವಿಲ್ಸನ್. ಯುದ್ಧಕ್ಕಿಂತ ಶಾಂತಿಯ ಬಗ್ಗೆ ಹೆಚ್ಚು ಯೋಚಿಸುತ್ತಿದ್ದ ವ್ಯಕ್ತಿಯೇನಲ್ಲವಾದರೂ ತಟಸ್ಥರಾಗಿ ಉಳಿದಿದ್ದರು.
ಆದರೆ ಯುದ್ಧದ ಸಕಲ ಸಿದ್ಧತೆಗಳೊಂದಿಗೆ ಬಲಿಷ್ಟವಾಗಿ ಮೆರೆಯುತ್ತಿದ್ದ ಜರ್ಮನಿ ಅಮೆರಿಕಾವನ್ನು ತನ್ನಷ್ಟಕ್ಕೆ ತಾನಿರಲು ಬಿಡಲಿಲ್ಲ. ಗ-ಬೋಡ್ ಎಂದು ಕರೆಯಲ್ಪಡುತ್ತಿದ್ದ ಶಕ್ತಿಶಾಲಿ ಸಬ್ಮೆರೀನ್ಗಳನ್ನು ಜರ್ಮನಿಯ ನೌಕಾಪಡೆ ಹೊಂದಿತ್ತು. ಈ ಜಲಾಂತಗರ್ಾಮಿಗಳನ್ನು ಬಳಸಿ ಅಮೇರಿಕಾದ ದೊಡ್ಡ ನಾಗರಿಕ ಹಡಗು ‘ಲೂಸಿತೇನಿಯಾ’ವನ್ನು ಜರ್ಮನಿ ಮುಳುಗಿಸಿ ಬಿಟ್ಟಿತು. ಈ ಘಟನೆಯ ನಂತರ ಅಮೇರಿಕಾ ನೇರವಾಗಿ ಯುದ್ಧ ಪ್ರವೇಶ ಮಾಡಲೇಬೇಕಾಯ್ತು. ಮತ್ತು ಈ ದೇಶದ ಪ್ರವೇಶಾನಂತರ ಯುದ್ಧದ ನಕ್ಷೆಯೇ ಬದಲಾಯ್ತು ಎಂದು ಬೇರೆ ಹೇಳಬೇಕಿಲ್ಲವಷ್ಟೇ! ಅಮೇರಿಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಅಧಿಕ ಸಂಪನ್ಮೂಲದ ಬೆಂಬಲ ಪಡೆದ ಬ್ರಿಟನ್ ಮತ್ತು ಫ್ರಾನ್ಸ್ಗಳು ಕೇವಲ ಕೆಲವು ವಾರಗಳಲ್ಲಿ ಜರ್ಮನಿ ಮತ್ತು ಅದರ ಮಿತ್ರ ರಾಷ್ಟ್ರಗಳನ್ನು ಮಣಿಸಿ, ಬೇಷರತ್ತಾಗಿ ಶರಣಾಗುವಂತೆ ಮಾಡಿದವು. ಜರ್ಮನಿ ತನ್ನೆಲ್ಲ ವಸಾಹಾತುಗಳನ್ನು , ಗೆದ್ದುಕೊಂಡ ಪ್ರದೇಶಗಳನ್ನು ಸೈನ್ಯವನ್ನೂ ಕಳೆದುಕೊಂಡಿದ್ದಲ್ಲದೆ ಯುದ್ಧದ ಅಪಾರ ನಷ್ಟವನ್ನೂ ತುಂಬಿಕೊಡಬೇಕಾಯ್ತು.
ಹೀಗೆ ಪ್ರಥಮ ಜಾಗತಿಕ ಯುದ್ಧದಲ್ಲಿ ಅಮೆರಿಕಾ ನೇರವಾಗಿ ಪಾಲ್ಗೊಳ್ಳಲು ‘ಲೂಸಿತೇನಿಯಾ’ ಕಾರಣವಾದರೆ ಎರಡನೆ ಮಹಾಯುದ್ಧದಲ್ಲಿ ‘ಪಲರ್್ಹಾರ್ಬರ್’ ಕಾರಣವಾಯ್ತು. ಲೂಸಿತೇನಿಯಾವನ್ನು ಮುಳುಗಿಸಿದ್ದು ಜರ್ಮನಿಯ ಸಬ್ ಮರೀನ್ಗಳಾದರೆ ಪಲರ್್ ಹಾರ್ಬರನ್ನು ಆಕ್ರಮಿಸಿದ್ದು ಜಪಾನಿನ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು.
ಆಕ್ರಮಣದ ದಿನ
ಆ ದಿನ ಭಾನುವಾರ
ಕ್ರಿ.ಶ 1941 ರ ನವೆಂಬರ್ 21ನೇ ತಾರೀಕು. ಪರ್ಲ್ ಹಾರ್ಬರ್ನಲ್ಲಿ ಎಂದಿನಂತೆ ದೈನಂದಿನ ಚಟುವಟಿಕೆಗಳು ಆರಂಭಗೊಂಡಿದ್ದವು. ನೌಕಾನೆಲೆಯ ಮೈದಾನದಲ್ಲಿ ಸೈನಿಕರು ಕವಾಯತುಗಳಲ್ಲಿ ತೊಡಗಿಸಿಕೊಂಡಿದ್ದರೆ ಅವರ ಮಕ್ಕಳು ಮನೆ ಮಾಲಿಗೆಯ ಮೇಲೆ ಬೆಳಗಿನ ಗಾಳಿಯಲಿ ಗಾಳಿಪಟವನ್ನು ಹಾರಿಸುವ ಪ್ರಯತ್ನ ಮಾಡುತ್ತಿದ್ದರು. ಅವರ ಅಮ್ಮಂದಿರು ತಂತಮ್ಮ ಮನೆಯ ಬ್ರೇಕ್ಫಾಸ್ಟ್ ಬಗ್ಗೆ ಚಚರ್ಿಸುತ್ತಾ ಬಟ್ಟೆಗಳನ್ನು ಒಣಹಾಕುತ್ತಿದ್ದರು. ಅಂಗಡಿಗಳು, ರಸ್ತೆಗಳು ತೆರೆದುಕೊಂಡು ವ್ಯಾಪಾರಕ್ಕೆ ಸಿದ್ಧವಾಗುತ್ತಿದ್ದವು. ಯಾರಿಗೂ ಯಾವ ಅಪಾಯದ ನಿರೀಕ್ಷಯೂ ಇರಲಿಲ್ಲ. ರಕ್ಷಣಾತ್ಮಕ ಸಿಬ್ಬಂದಿ ಬಿಟ್ಟರೆ ಪಲರ್್ ಹಾರ್ಬರ್ನಲ್ಲಿ ಸಮರ ಸಿದ್ಧತೆಗಳೇನೂ ಇರಲಿಲ್ಲ.
ಇದ್ದಕ್ಕಿದ್ದಂತೆ ಬೆಂಬರ್ ವಿಮಾನಗಳ ಮೊರೆತ! ಆಡುತ್ತಿದ್ದ ಮಕ್ಕಳು ಆಶ್ಚರ್ಯದಿಂದ ತಲೆ ಮೇಲೆತ್ತಿ ನೋಡುತ್ತಿದ್ದಂತೆ 25-30 ವಿಮಾನಗಳ ಗುಂಪು ಜೇನ್ನೊಣಗಳಂತೆ ಹಾರ್ಬರ್ನ್ನು ಮುತ್ತಿಬಿಟ್ಟವು! ಅತ್ಯಂತಬಲಶಾಲಿಯಾದ ಬಾಂಬ್ಗಳು ಮೊದಲು ಬಿದ್ದದ್ದು ಬಂದರು ಕಟ್ಟೆಯ ಬಳಿ ನಿಂತಿದ್ದ ಹಡಗುಗಳ ಮೇಲೆ! ಅದರೊಳಗಿದ್ದ ಸಿಬ್ಬಂದಿ ಸಮೇತ ಛಿದ್ರವಾದ ಹಡಗುಗಳು ಮುಳುಗತೊಡಗಿದಂತೆ. . .
ಮತ್ತೆ ಬಾಂಬ್ಗಳು ಬಿದ್ದವು!
ಈ ಬಾರಿ ಬಂದರಿನ ಒಳಭಾಗದಲ್ಲಿದ್ದ ಹೆಲಿಕ್ಯಪ್ಟರ್ಗಳು ಮತ್ತು ವಿಮಾನಗಳ ಮೇಲೆ!
ಸ್ಫೋಟಗಳು ಸೃಷ್ಟಿಸಿದ ಬೆಂಕಿ, ಹೊಗೆ, ಬಿಸಿಗಾಳಿ ವಾತಾವರಣವನ್ನು ಸುತ್ತಿಕೊಂಡು ಆವರಿಸುತ್ತಿದ್ದಂತೆ. . .
ಒಂದೆರಡು ಕಿ.ಮೀ. ದೂರದಲ್ಲಿ ಕವಾಯಿತಿನಲ್ಲಿ ತೊಡಗಿದ್ದ ಸೈನಿಕರು ಜಾಗೃತರಾಗಿ ಆಯುಧಗಳಿದ್ದಲ್ಲಿಗೆ ಓಡಿದರು. ತಲೆ ಮೇಲೆ ಹಾರಾಡುತ್ತಾ ಇನ್ನೂ ಆಕ್ರಮಣವನ್ನು ಮುಂದುವರಿಸಿಯೇ ಇದ್ದ ವಿಮಾನಗಳತ್ತ ಟ್ಯಾಂಕರ್ಗಳನ್ನು ಗುರಿ ಮಾಡಿ ಪ್ರತಿ ದಾಳಿ ಆರಂಬಿಸಿದರು.
ಕೆಲವು ಬಾಂಬ್ಗಳು ಈ ಟ್ಯಾಂಕರುಗಳ ಮಧ್ಯೆಯೇ ಬಂದು ಬಿದ್ದಾಗ ಇದರಲ್ಲಿ ಕೆಲವು ಸೈನಿಕರೂ ಜೀವಂತ ದಹಿಸಿ ಹೋದರು. ಬದುಕುಳಿದು ಕೊನೆ ತನಕ ಹೋರಾಡಿದವನು ಡೋರಿ ಮಿಲ್ಲರ್.
ನಿಜ ಹೇಳಬೇಕೆಂದರೆ ಈತ ಸೈನಿಕನಲ್ಲ. ಸೈನಿಕರ ಬೇಕು ಬೇಡ ಗಮನಿಸುವ ಸೇವಕನಾಗಿದ್ದ. ಈತ ನೀಗ್ರೋ ಎಂಬ ಕಾರಣಕ್ಕಾಗಿ ಸೈನಿಕ ಎನಿಸಲು ಅನರ್ಹನಾಗಿದ್ದ!
ವರ್ಣ ವ್ಯವಸ್ಥೆ ಅಮೇರಿಕಾದಲ್ಲಿ ಎಷ್ಟು ದಟ್ಟವಾಗಿತ್ತು ಎಂಬುದನ್ನು ಇದು ತೋರಿಸುತ್ತಿದೆ.
ಡೋರಿ ಮಿಲ್ಲರ್ ದೂರದಿಂದ ನೋಡಿಯೇ ಆಯುಧಗಳನ್ನು ಬಳಸುವುದನ್ನು ಕಲಿತಿದ್ದ. ಯಾವ ಸೈನಿಕ ತರಬೇತಿಯೂ ಈತನಿಗಿರಲಿಲ್ಲ. ಈತ ಹೊಡೆದುರುಳಿಸಿದ ಅನೇಕ ವಿಮಾನಗಳು ಜಪಾನೀಯರನ್ನು ಹಿಮ್ಮೆಟ್ಟಿಸಿದವು. ಏಕಾಂಗಿಯಾಗಿ ನಿಂತು ಈ ವ್ಯಕ್ತಿ ಹೋರಾಡಿದ ಪರಿಣಾಮವಾಗಿ ಪಲರ್್ ಹಾರ್ಬರ್ನ ಕೆಲವು ಭಾಗಗಳಾದರೂ ಉಳಿದುಕೊಂಡವು. ಯುದ್ಧ ಮುಗಿದ ನಂತರ ಡೋರಿ ಮಿಲ್ಲರ್ಗೆ ಪಾರಿತೋಷಕ ನೀಡಿ ಗೌರವಿಸಲಾಯ್ತು. ಇ ಪಾತ್ರದಲ್ಲಿ ಕ್ಯೂಬಾ ಗುಡಿಂಗ್ ಮಾಡಿರುವ ಅಭಿನಯ ತುಂಬ ಪ್ರಬುದ್ದವಾದದ್ದು.
ಆಕ್ರಮಣಕ್ಕೆ ಪ್ರತಿಕ್ರಿಯೆ
ಪರ್ಲ್ ಹಾರ್ಬರ್ ಆಕ್ರಮಣದ ವಿಷಯ ಪ್ರಪಂಚದಾದ್ಯಂತ ಹರಡತೊಡಗಿದಾಗಲೇ ಅಮೇರಿಕಾವು ಜಪಾನ್, ಜರ್ಮನಿ ಮತ್ತು ಇಟಲಿಗಳ ಮೇಲೆ ಯುದ್ಧ ಘೋಷಣೆ ಮಾಡಿತು. ಇಲ್ಲಿ ಒಂದು ಮುಖ್ಯ ವಿಷಯವನ್ನು ಗಮನಿಸಬೇಕು.
ಮೊದಲ ಪ್ರಪಂಚ ಯುದ್ಧದ ಸಂದರ್ಭದಲ್ಲಿ ಜಪಾನ್ ದೇಶವು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳ ಜೊತೆಗೇ ಇತ್ತು. ಆದರೆ ಎರಡನೆ ಪ್ರಪಂಚ ಯುದ್ಧದ ಸಮಯದಲ್ಲಿ ಪಕ್ಷಾಂತರ ಮಾಡಿ ಜರ್ಮನಿ ಮತ್ತು ಇಟಲಿಗಳ ಗುಂಪನ್ನು ಸೇರಿಕೊಂಡು ಬಿಟ್ಟಿತು. ಹೆಚ್ಚು ಪ್ರದೇಶಗಳನ್ನು ತನ್ನದಾಗಿಸಿಕೊಳ್ಳುವ ಆಕಾಂಕ್ಷೆಯೇ ಇದಕ್ಕೆ ಕಾರಣ.
ಜಪಾನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಅಮೇರಿಕಾವು ರಷ್ಯಾ ಮತ್ತು ಇಂಗ್ಲೆಂಡ್ಗಳೊಡನೆ ಸಮಾಲೋಚನೆ ನಡೆಸಿತು. ಕ್ರಿ.ಶ.1942 ರ ನವೆಂಬರ್ನಲ್ಲಿ ಟೆಹರಾನ್ನಲ್ಲಿ ನಡೆದ ಸಭೆಗೆ ರಷ್ಯಾದ ವಿನ್ಸ್ಟನ್ ಚಚರ್ಿಲ್ ಮತ್ತು ರಷ್ಯಾದ ಸ್ಟಾಲಿನ್ ಮತ್ತು ರೂಸ್ವೆಲ್ಟ್ ಪಾಲ್ಗೊಂಡಿದ್ದರು. ಜರ್ಮನಿ ಮತ್ತು ಇತರ ದೇಶಗಳ ಮೇಲೆ ಬಾಂಬ್ ದಾಳಿ ನಡೆಸಲು ನಿರ್ಧರಿಸಲಾಯ್ತು. ಜರ್ಮನಿ ಸೋತು ಅಡಾಲ್ಫ್ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ ನಂತರ ಸ್ವತಃ ಅಮೇರಿಕಾ ಜಪಾನ್ ಕಡೆಗೆ ಗಮನ ಕೇಂದ್ರೀಕರಿಸಿತು.
ಶರಣಾಗಬೇಕೆಂಬ ಅಮೇರಿಕಾದ ಕರೆಯನ್ನು ಜಪಾನ್ ತಿರಸ್ಕರಿಸಿದಾಗ ಅಮೇರಿಕಾವು ಪ್ರಥಮ ಬಾರಿಗೆ ಅಣುಬಾಂಬ್ನ ಪ್ರಯೋಗ ಮಾಡಿತು. ಜಪಾನ್ ಶರಣಾಗಿದ್ದಿದ್ದರೆ ಕ್ರಿ.ಶ.1945ರ ಆಗಸ್ಟ್ 6 ಮತ್ತು 7 ರಂದು ಕ್ರಮವಾಗಿ ಹಿರೋಷಿಮಾ ಮತ್ತು ನಾಗಸಾಕಿಗಳ ಮೇಲೆ ಚಿಣಠಟ ಛಠಟಛ ಪ್ರಯೋಗಿಸುತ್ತಲೂ ಇರಲಿಲ್ಲ. ಹಿರೋಶಿಮಾ ನಾಗಸಾಕಿಗಳು ಇಂದಿಗೂ ದುಃಸ್ವಪ್ನದಂತೆ ಕಾಡುವ ಪ್ರಮೇಯವೂ ಇರುತ್ತಿರಲಿಲ್ಲ. ಹಾಗಂತ ಈ ವಿನಾಶಕಾರಿ ಪ್ರಯೋಗಗಳನ್ನು ಮಾಡಿನೋಡುವ ಅಗತ್ಯ ನಿಜಕ್ಕೂ ಅಮೆರಿಕಕ್ಕೆ ಇತ್ತೇ? ಇತಿಹಾಸ ಉತ್ತರಿಸದೇ ಇರುವ ಪ್ರಶ್ನೆಗಳಲ್ಲಿ ಇದೂ ಒಂದು.
ಈ ಎಲ್ಲ ಯುದ್ಧಸಂಬಂಧಿತ ಚಟುವಟಿಕೆಗಳಲ್ಲಿ ರ್ಯಾಫ್ ಮತ್ತು ಡ್ಯಾನಿ ವಿವಿಧ ರ್ಯಾಂಕಿಂಗ್ ಗಳಲ್ಲಿ ಅಧಿಕಾರಿಗಳಾಗಿ ಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಹೋಗುತ್ತಾರೆ….. ಡ್ಯಾನಿ ದಾರುಣವಾಗಿ ಗಾಯಗೊಂಡು ಮರಣಶಯ್ಯೆ ತಲುಪುವವರೆಗೂ….. ಅದೂ ರ್ಯಾಫ್ ನ ಕೈಗಳಲ್ಲೇ..!
ಆಗ ಎವ್ಲೀನ್ ಕೂಡಾ ಹೇಳಿರದ ಸತ್ಯವನ್ನು ಗೆಳೆಯ ಹೇಳುತ್ತಾನೆ
“u can’t die.. u r becoming a father..”
ಅದೇ ನಂಬಿಕೆಯಿಂದ, ಆಪ್ತತೆಯಿಂದ ಡ್ಯಾನಿ ಉತ್ತರಿಸುತ್ತಾನೆ.. You not me.. ಮತ್ತು ಕಣ್ಮುಚ್ಚುತ್ತಾನೆ..
biological father ಎಂಬ ಪದಬಳಕೆ ಹೆಚ್ಚುಹೆಚ್ಚು ಬಳಕೆಯಾಗಿರುವುದು ಇಂಥ ಸಂದರ್ಭಗಳಲ್ಲೆಂದು ತೋರುತ್ತದೆ. ಜನ್ಮ ಕೊಟ್ಟೊಡನೆ ತಂದೆಯೋ, ತಾಯಿಯೋ ಆಗಿಬಿಡುವುದಿಲ್ಲ. ಜವಾಬ್ದಾರಿಗಳನ್ನೂ ನಿರ್ವಹಿಸಬೇಕಲ್ಲ..! ಡ್ಯಾನಿ ಎವ್ಲಿನ್ಳ ಮಗುವಿಗೆ ಜೈವಿಕ ತಂದೆಯಾಗಿ ಮಾತ್ರ ಉಳಿದ. ರ್ಯಾಫ್ ನಿಜಾರ್ಥದಲ್ಲಿ ತಂದೆ ಎನಿಸಿಕೊಂಡ.
ಟೈಟಾನಿಕ್ ನಲ್ಲಿ ಪ್ರೇಮದೊಂದಿಗೆ ಅಪಘಾತವನ್ನು ಹೆಣೆದುಕೊಂಡಿರುವ ರೀತಿಯಲ್ಲಿಯೇ ಪಲ್ ಹಾರ್ಬರ್ ಸಿನಿಮಾವನ್ನು ಪ್ರಸ್ತುತವೆನಿಸುವಂತೆ ಮಾಡಲು ನಿದರ್ೇಶಕ ಮಾಡಿರುವ ತಂತ್ರ ಸರಳವಾದದ್ದು.- ಅದು ಯುದ್ಧದ ಹಿನ್ನೆಲೆಯಲ್ಲಿ ತ್ರಿಕೋನಪ್ರೇಮದ ನೆಪದಲ್ಲಿ ಸ್ತ್ರಿಪುರುಷ ಸಂಬಂಧಗಳನ್ನು ಬಿಡಿಸಲೆತ್ನಿಸುತ್ತಾ ಹೋಗುವುದು. ಅಷ್ಟೊಂದು ಪ್ರಿತಿಸಿದ ರ್ಯಾಫ್ನ ಜೊತೆಗೆ ನಡೆಯದ ಅನುರಾಗದ ದೈಹಿಕ ಕ್ರಿಯೆ ಡೇನಿಯಲ್ನೊಡನೆ ಇದ್ದಕ್ಕಿದ್ದಂತೆ ಘಟಿಸುವುದಕ್ಕೆ ಸ್ವತ: ಇವ್ಲೀನ್ ಳ ಬಳಿ ಯಾವುದೆ ವ್ಯಾಖ್ಯಾನವಿದ್ದಂತೆೆ ತೋರುವುದಿಲ್ಲ. ಅವಳು ಸ್ವತ; ವಿಹ್ವಲಳಾಗಿದ್ದಾಳೆ. ರ್ಯಾಫ್ ಮೌನವಾಗಿಬಿಟ್ಟಿದ್ದಾನೆ. ಎವ್ಲೀನ್ ಮನಸು ಕೂಡಾ ಗೊಂದಲದಲ್ಲಿ ಮೂಕವಾಗಿದೆ.. ಆದರೆ ತಾಯ್ತನದ ಹೊಸಿಲಲ್ಲಿ ನಿಂತಿರುವ ಅವಳು ಮಾತಾಡಲೇಬೇಕಿದೆ…..
ಹೇಳುತ್ತಾಳೆ.. if time permits,, ನಾನು ಡ್ಯಾನಿಯೊಡನೆ ಬದುಕ್ತೇನೆ ಎಂದು.
ಕೇಳುತ್ತಾಳೆ ಕ್ಷಮಿಸು ಎಂದು.
ಹಾಗೆ ಮಾಡುವುದರ ಮೂಲಕ ಆಕೆ ಡ್ಯಾನಿಯೊಡನಿದ್ದ ಆ್ದಮೃತಗಳಿಗೆಗಳಿಗೆ ನಿಷ್ಟಳಾಗಿ ಉಳಿಯುವುದನ್ನೆ ಆಯ್ದುಕೊಳ್ಳುತ್ತಾಳೆ.
ರ್ಯಾಫ್ ಏನೂ ಹೇಳುವುದಿಲ್ಲ….. ಅವನ ಕಣ್ಣಲ್ಲಿ ಕ್ಷಮೆಯಿದೆ, ನೋವು, ಅಸಹಾಯಕತೆ, ಪ್ರೀತಿಯೂ ಇದೆ.
ಆ ಕ್ಷಣ ರ್ಯಾಫ್ ನನಗಂತೂ ಬುದ್ದನಂತೆ, ಸಂತನಂತೆ ಕಾಣಿಸಿದ. ನಿನ್ನೊಂದಿಗೆ ಇರಲಾರೆ ಎನ್ನಲಾರದೆ ಅವನೊಡನೆ ಇರ್ತೇನೆ ಎಂದು ಹೇಳುತ್ತಿದ್ದಾಳೆ ಎಂಬುದನ್ನು ಅರಿಯದವನಲ್ಲ ಆತ. ಮತ್ತು ಅವನಲ್ಲಿ ಹೇಳಿಕೊಳ್ಳುವುದೇ ಮುಖ್ಯ ಅವಳಿಗೆ. ಡ್ಯಾನಿಗೆ ಏನೂ ಹೇಳಬೇಕಿಲ್ಲ. ಡ್ಯಾನಿಯೂ, ತಾನು ಒಂದೇ ಈಗ. ಯಾವುದು ಉನ್ನತ ಈ ಪ್ರೀತಿಯ ರೀತಿಗಳಲ್ಲಿ..? ಅದನ್ನು ಅರಿಯುವುದಕ್ಕಾಗಿ ಜೀವಮಾನವಿಡೀ ಯೋಚಿಸುತ್ತಾ ಬದುಕು ಸವೆಸುತ್ತಾನೆ ಪ್ರತಿ ಮನುಷ್ಯ. ಅರ್ಥಮಾಡಿಕೊಂಡ ನಾನೆಂಬುವವರು ಮಾತ್ರ ಯಾರೂ ಇಲ್ಲ..! ಪ್ರಾಯಶ: ಮುಂದೂ ಇರುವುದಿಲ್ಲ. ಈ ಗೊಂದಲ, ಪ್ರೀತಿ ಉಂಟುಮಾಡುವ ನೋವು, ವಿರಹಗಳನ್ನು ನೋಡುವಾಗ ಬೇಕಿತ್ತಾ ಇದು? ಎನಿಸಿದರೆ ಆಶ್ಚರ್ಯವಿಲ್ಲ. ಯುದ್ಧದ ಭೀಕರತೆ ನೋಡುವಾಗ ಯುದ್ಧ ಬೇಡ ಎನಿಸುವುದೂ ಸಹಜ. ಆದರೆ ವಾಸ್ತವದಲ್ಲಿ ಮನುಕುಲದ ಚರಿತ್ರೆಯಿಡೀ ಯುದ್ಧ ಮತ್ತು ಪ್ರೀತಿಯಿಂದಲೇ ತುಂಬಿ ಹೋಗಿರುವುದು ಅಂಗೈ ಮೇಲಿನ ಸತ್ಯ.
ಈ ಪರಿಯ ಇತಿಹಾಸವನ್ನು ಪ್ರತಿನಿಧಿಸುತ್ತದೆಯಾದ್ದರಿಂದಲೇ ಪರ್ಲ್ ಹಾರ್ಬರ್ ನನ್ನನ್ನು ಸದಾ ಕಾಡಿದೆ/ಕಾಡುತ್ತಲೇ ಇರುತ್ತದೆ.






ಚೆನ್ನಾಗಿದೆ ಲೇಖನ . . ನನ್ನ ಅನಿಸಿಕೆಗಳನ್ನು ನೀವು ಬರೆದಂತಿದೆ . . .