ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ನನ್ನನ್ನು ಕಾಡಿದ ಸಿನಿಮಾ’ ಷಡಕ್ಷರಿ ತರಬೇನಹಳ್ಳಿ ಬರೀತಾರೆ

“ಮಾನಸ ಸರೋವರ”

ಷಡಕ್ಷರಿ ತರಬೇನಹಳ್ಳಿ

ಆ ದಿನಗಳಲ್ಲಿ ಅದು ಬೆಂಗಳೂರಲ್ಲಿ ಬಿಡುಗಡೆಯಾಗಿ  ಎಷ್ಟೋ ವರ್ಷಗಳಾದ ಮೇಲೆ ನಮ್ಮೂರಿನ ತಾತಯ್ಯನ (ಸೂಫೀ ಸಂತ) ಉರುಸಿಗೆ  ಅಥವಾ ಹಳೇಊರು ಆಂಜನೇಯನ ಜಾತ್ರೆಗೆ ಕೇವಲ ಎರಡು ದಿನದ ಬಾಡಿಗೆ ಮೇಲೆ ತಂದು  ಮಹಾಲಕ್ಷ್ಮಿ ಟೆಂಟಲ್ಲಿ ತೋರಿಸಿದಾಗ ನೋಡಿದ್ದು. ಅದೂ  ಅವರ ಬಾಡಿಗೆ ವರ್ಕ್ ಔಟ್ ಮಾಡಿಕೊಳ್ಳೋ ತರಾತುರಿಯಲ್ಲಿ ಇಂಟರ್ವಲ್ಲೂ ಇಲ್ಲದಂತೆ ದಿನಕ್ಕೆ ನಾಲ್ಕು  ಅಥವಾ ಐದೋ ಶೋ ಓಡಿಸಿ ಕಾಸು ಮಾಡಿಕೊಳ್ಳೋ ಟೆಂಟಿನ ಮಾಲೀಕರ ದರ್ದಿನಲ್ಲಿ ನೋಡಿದ್ದು. ಈ ಪಿಚ್ಚರ್ರಿಗೆ ಮತ್ತೊಂದು ನೆನಪನ್ನು ಸೇರ್ಪಡೆಗೊಳಿಸದೇ ಹೋದರೆ ಅಪಚಾರವಾಗುತ್ತೆ. ಅದೇ ವರ್ಷ ನಮ್ಮಕ್ಕನ್ನ ಮದುವೆಯಾಧ  ಪ್ರೀತಿಗೆ ಭಾವ ತನ್ನ ಕರ್ಚಿನಲ್ಲಿ ಮನೆಯ ಎಲ್ಲರನ್ನೂ ಕರೆದುಕೊಂಡು ಹೋಗಿ ತೋರಿಸಿದ ಚಿತ್ರ.. ಈ  ಚಿತ್ರ.
ನಾನಾಗ ವಯಸ್ಸಿನಲ್ಲಿ  ಚಿಕ್ಕವನಿದ್ದರೂ ಅಕ್ಕಂದಿರು ಆಗಲೇ ಕಾಲೇಜಿನಲ್ಲಿ ಓದುತ್ತಿದ್ದರಿಂದ ಅವರಾಡುವ ಸಿನಿಮಾದ ಮಾತು ಕಥೆ, ಗಾಸಿಪ್ಪು ಎಲ್ಲಾ ಕೇಳಿಸಿಕೊಂಡು ಅವರ ಮುಖದ ಭಾವನೆ ಓದುವಷ್ಟು ಸಬಲನೂ ಸಶಕ್ತನೂ ಆಗಿದ್ದೆ. ಈ ಪಿಚ್ಚರಲ್ಲಿ ನನ್ನ ಮನೆಯವರೆಲ್ಲರೂ ತುಂಬಾ ಹೇಟ್ ಮಾಡಿದ್ದು  ಮದ್ಯದಲ್ಲಿ ಬಂದು ಕೆಲಸ ಕೆಡಿಸಿದ ಆ ತರಲೆಯ ರಾಮಕ್ರಿಷ್ಣನ ಮತ್ತು ಪದ್ಮಾ ವಾಸಂತಿಯೆಂಬ ಕಟುಕಿಯ ಪಾತ್ರವನ್ನ. ಅವತ್ತು ತುಂಬಾ ತರಾತುರಿಯಲ್ಲಿ ಈ ಚಿತ್ರವನ್ನು ನೋಡಿದ್ದರೂ ಕೂಡಾ ನಾನು ಪಿಯುಸಿ ಸೇರಿದ ಮೇಲೆ ನನ್ನ ತುಮಕೂರಿನ ಗೆಳತಿ/ಗೆಳೆಯರ ಸಂಗದಿಂದ ಈ ಚಿತ್ರವನ್ನು ಬೇಕೆನಿಸಿದಾಗೆಲ್ಲಾ ಮತ್ತೊಮ್ಮೆ  ಮತ್ತೊಮ್ಮೆ ಸಂಜಯನ ಮನೆಯಲ್ಲಿ ನೋಡಿದ್ದಿದೆ.

ನನಗೆ ವಯಕ್ತಿಕವಾಗಿ ಈ ಚಿತ್ರದ  ರಾಮಕ್ರಿಷ್ಣ ಪದ್ಮಾವಾಸಂತಿ ನಟಿಸಿರುವ “ಚೆಂದ ಚೆಂದಾ ಗುಲಾಬಿ ತೋಟವೇ ಚೆಂದಾ” ಹಾಡು ಇವತ್ತಿಗೂ ಎವೆರ್ ಗ್ರೀನ್  ಮೋಸ್ಟ್ ಫೇವರಿಟ್ ಹಾಡು. ಈ ಹಾಡು ಎಲ್ಲಾದರೂ  ಆ ದಿನಗಳಲ್ಲಿ ರೇಡಿಯೋದಲ್ಲಿ ಬಂದಾಗ ನಾನು ಆ ಹಾಡು ಮುಗಿಯುವವರೆಗೆ ನಿಂತ ಸ್ಥಳದಿಂದ ಕದಲದೇ ಪೂರ್ಣವಾಗಿ ಕೇಳಿದ ನಂತರವೇ ಜಾಗ ಕಾಲಿ ಮಾಡಿದ್ದಿದೆ. ನಾನು ಡಿಗ್ರೀ ಸೇರಿದ ಮೇಲೆ ನಮ್ಮ ಕಾಲೇಜಿನ ಕ್ಯಾಂಟೀನಿನಲ್ಲಿ  ಪಡ್ಡೆ ಹುಡುಗರ ಶೋಕಿಗಳಲ್ಲಿ ಒಂದಾದ 25 ಪೈಸಕ್ಕೆ ನನಗೆ ಬೇಕಾದ ಹಾಡು ಟೇಪ್ ರೆಕಾರ್ಡರ್ ನಲ್ಲಿ ಹಾಕುವ ವ್ಯವಸ್ಥೆ ಇದ್ದದ್ದರಿಂದ  ನಮ್ಮ ಕ್ಯಾಂಟೀನಿನಲ್ಲಿ ಈ ಹಾಡನ್ನೇ ಮತ್ತೆ ಮತ್ತೆ ಹಾಕಿಸಿ ಬೇರೆಯವರಿಗೆ ಬೋರು ಬರಿಸಿದ್ದಿದೆ. ಈ ಹಾಡು ನನ್ನನ್ನು ಅಷ್ಟು ಮತ್ತನನ್ನಾಗಿಸಿತ್ತು ಆ ದಿನಗಳಲ್ಲಿ. ಗಲಾಟೆ ಮಾಡಿದವರಿಗೆ ಸರಿಯಾಗಿ ನಮ್ಮ ಗ್ಯಾಂಗಿನಿಂದಾ ವಿಚಾರಣೆಯಾಗುತ್ತಿತ್ತು.

ಈ ಚಿತ್ರದಲ್ಲಿ ಇಂದಿಗೂ ನನಗೆ ಬಗೆಹರಿಯದ ಕೆಲವು  ಗಾಸಿಪ್ಪುಗಳು ನೆನಪಾಗುವುದು ತಪ್ಪಿಲ್ಲಾ. ಅಂದೆಲ್ಲಾ ನಾವು ಫಿಲ್ಮ್ ಅಪ್ರಿಷಿಯೇಶನ್ನ್ ಅದೂ ಇದೂ ಅಂತಾ  ಲೈಬ್ರರಿಯಲ್ಲಿ ಯೂನಿವರ್ಸಿಟಿಯ ಗೆಳೆಯರು ಸೇರಿಕೊಂಡಾಗ ಚರ್ಚೆಗೆ ಬರುತ್ತಿದ್ದ ಕೆಲವು ಗಾಸಿಪ್ಪುಗಳು ಇಂದಿಗೂ ಹಸಿರು ಹಸಿರು. ಪುಟ್ಟಣ್ಣನವರು ಆರಿಸಿಕೊಂಡಿದ್ದ ಸಬ್ಜೆಕ್ಟಿನಿಂದಾ ಹಿಡಿದು ಅದು ಶ್ರೀನಾಥ್ ಪಾತ್ರ ಯಾಕೋ ಯಾರನ್ನೋ ಹೋಲುತ್ತಿತ್ತಂತೆ ಎಂಬಲ್ಲಿಂದಾ, ಪದ್ಮಾ ವಾಸಂತಿಯ ಪಾತ್ರ ಮತ್ಯಾರೋ ಕೈಕೊಟ್ಟ ನಾಯಕ ನಟಿಯನ್ನ ಹೋಲುತ್ತಿತ್ತಂತೆ  ಎಂದು ಹರಡಿದ್ದ ಕಾಲ್ಪನಿಕ ಕಥೆಗಳ ವರೆಗೆ. ನನಗೆ ಈ ಚಿತ್ರದಲ್ಲಿ ತುಂಬಾ ಇಷ್ಟವಾದದ್ದು ವಿಜಯ ಬಾಸ್ಕರ್ ರವರ ಸಂಗೀತ ಸಂಯೋಜನೆಯ ಎಲ್ಲ ಹಾಡುಗಳು. ಅದರಲ್ಲೂ ಆ ಹಾಡುಗಳ ಸಾಹಿತ್ಯ ಮತ್ತು ಆ ಚಿತ್ರದಲ್ಲಿ ಅದನ್ನ ಬಳಸಿರುವ ಪುಟ್ಟಣ್ಣನವರ ಸಮಯೋಚಿತ ಸಂದರ್ಭಗಳ ಜಾಣ್ಮೆ. ನನಗಂತೂ ಶ್ರೀನಾಥ್ ಅಭಿನಯ ಈ ಚಿತ್ರದಲ್ಲಿ ತುಂಬಾನೆ ಹಿಡಿಸಿತ್ತು. ಆದರೂ ಆ ಪದ್ಮಾವಾಸಂತಿಯವರ ಮುಗ್ಧ ಭಾವಾಭಿನಯ ಇನ್ನೂ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ.

‍ಲೇಖಕರು avadhi

5 January, 2014

1 Comment

  1. h a patil

    – ಮಾನಸ ಸರೋವರ ಚಿತ್ರದ ಎಲ್ಲ ಹಾಡುಗಳ ರಾಗ ಸಂಯೋಜನೆ ಚೆನ್ನಾಗಿದೆ. ಅದರಲ್ಲೂ ಅದರಲ್ಲಿ ಬಳಸಿದ ಜಿ.ಎಸ್.ಎಸ್ ರವರ ಎರಡು ಹಾಡುಗಳು ಇಂದಿಗೂ ತಮ್ಮ ತಾಜಾತನ ಉಳಿಸಿ ಕೊಂಡಿವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading