ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನನಗೊಂದು ಕನಸು ಬೇಕು…' – ಸ್ಮಿತಾ ಬರೀತಾರೆ

ಸ್ಮಿತಾ ಅಮೃತರಾಜ್

ಎಲ್ಲೋ ಓದಿದ ನೆನಪು.. ಬೆಳಕಿಲ್ಲದ ಹಾದಿಯಲ್ಲಿ ಬೇಕಾದರೂ ಪಯಣಿಸ ಬಹುದು.ಆದರೆ ಕನಸುಗಳಿಲ್ಲದ ದಾರಿಯಲ್ಲಿ ಕಷ್ಟ ಅಂತ.ಎಷ್ಟು ಅರ್ಥಪೂರ್ಣ ಸಾಲುಗಳಲ್ಲವಾ ಇದು ಅಂತ ಯೋಚಿಸುತ್ತಿರುವಾಗಲೇ ಕಣ್ಣ ಮುಂದೆ ಕನಸುಗಳ ನಡಿಗೆ. ಕನಸೆಂದರೆ ಏನು? ಯಾರಾದರೂ ಕೇಳಿದರೆ ಕರಾರುವಕ್ಕಾಗಿ ವ್ಯಾಖ್ಯಾನಿಸಬಹುದೇ?ಕನಸೆಂದರೆ ಅದೂ ಇದೂ ಯಾವುದೂ ಅಲ್ಲ.ಕನಸೆಂದರೆ ಬರೇ ಕನಸಷ್ಟೆ.ಇಷ್ಟು ಚೆಂದದ ಪದ ಇನ್ನೆಲ್ಲೂ ಸಿಗದಷ್ಟು.ಅರ್ಥವ್ಯಾಪ್ತಿಗೆ ನಿಲುಕದಷ್ಟು.ಕನಸಿಗೆ ಎಷ್ಟೊಂದು ಅರ್ಥಗಳು? ಎಷ್ಟೊಂದು ಆಯಾಮಗಳು? ಒಮ್ಮೊಮ್ಮೆ ಕನಸೆಂದರೆ ಕವಿತೆಯಂತೆ ಅಥವಾ ಕವಿತೆಯೇ ಕನಸಂತೆ ಗೋಚರಿಸುವುದಿದೆ.

ಒಂದೊಮ್ಮೆ ಕನಸೆಂದರೆ,ರಾತ್ರೆ ನಿದ್ದೆಯಲ್ಲಿ ಆಕಾಶದಿಂದ ಪುತ ಪುತನೆ ಉದುರಿ ಕಣ್ಣಂಚಲಿ ತೇಲಿ ಹೋಗುತ್ತಿದ್ದ ಸಿಹಿ ಕನಸುಗಳು,ಭಯಾನಕ ಕನಸುಗಳು ಅಂತಷ್ಟೇ ಎಂದು ಯೋಚಿಸಿದ್ದೆ.ಬೆಳೆಯುತ್ತಾ ಹೋದಂತೆ ಆ ಕನಸಿನ ಪಟ್ಟಿ ವಿಸ್ತಾರವಾಗುತ್ತಾ ಹೋದದ್ದು .ಮತ್ತು ಇನ್ನೂ ವಿಸ್ತಾರವಾಗುತ್ತಲೇ ಇರುವುದು.ಮುಂದೆ ಓದಿ ನೀವೆಲ್ಲಾ ಏನಾಗಬೇಕೆಂದು ಕನಸು ಕಾಣುವಿರಿ? ಅಂತ ಕನ್ನಡ ಟೀಚರ್ ಒಬ್ಬೊಬ್ಬರಂತೆ ನಮ್ಮನ್ನೆಲ್ಲಾ ಎದ್ದು ನಿಲ್ಲಿಸಿ ಕೇಳಿದಾಗ, ನಾವುಗಳೆಲ್ಲಾ ಆಗಲೇ ನಿದ್ದೆಯ ಮಂಪರಿನ ಕನಸಿನಿಂದ ಎಚ್ಚೆತ್ತು,ಇದಕ್ಕಿಂತ ಹೊರತಾದ ಬೇರೆಯದೇ ಕನಸಿನ ಲೋಕವಿದೆ ಎಂದು ತಿಳಿದು ಎಚ್ಚೆತ್ತುಕೊಂಡು ಮತ್ತೆ ಆ ಕಡೆಗೆ ಹೊರಳಿಕೊಂಡದ್ದು.ಥೇಟ್ ಕನಸಿನಂತೆಯೇ ಬಾಲ್ಯ ಏಕ್ ದಂ ಕಳೆದು ಹೋಗಿ,ಪ್ರೌಡರಾಗಿ ತುಸು ಬುದ್ದಿ ಬಲಿಯುತ್ತಿದ್ದಂತೆ,ಎಳೆ ಬಾಲಿಶ ಕನಸುಗಳೆಲ್ಲಾ ಮಸುಕಾಗಿ ಪ್ರಬುದ್ಧತೆಯ ಲೇಪ ಬಳಿದುಕೊಂಡದ್ದು.ತದ ನಂತರ ಕಾಲೇಜು ಮೆಟ್ಟಿಲು ಹತ್ತಿದ್ದೊಂದೇ ಗೊತ್ತು.ಮೆಟ್ಟಿಲು ಮೆಟ್ಟಿಲಾಗಿ ಏರುತ್ತಲೇ ಹೋಗುವ ರಂಗು ರಂಗಿನ ಚೆಲುವು ಚೆಲುವಾದ ಕನಸು.ಬದುಕೆಂದರೆ ಇದೇ ಚೆಲುವು ಕನಸು ಎನ್ನುವಷ್ಟು ಒಲವು.
ಗೋಗೆರೆದರೂ ಬದುಕಿನೊಂದಿಗೆ ರಾಜಿ ಮಾಡಿಕೊಂಡು ನಿಲ್ಲಲಾರದ ಕಾಲದೊಂದಿಗೆ,ಇದೇ ಕನಸುಗಳು ಬೆಂಬೆತ್ತಿದ ನಡಿಗೆಯಲ್ಲಿ ಅಟ್ಟಿಸಿಕೊಂಡಂತೆ ಓಡಿದರೂ,ಕೆಲವು ಹಾದಿ ಮದ್ಯೆ ಬಸವಳಿದು ಬಿದ್ದರೆ,ಇನ್ನು ಕೆಲವು ಇದರ ಉಸಾಬರಿಯೇ ಬೇಡ ಅಂತ ನಿಟ್ಟುಸಿರಾದರೆ,ಇನ್ನೊಂದಷ್ಟು ಮಾತ್ರ ತನ್ನಷ್ಟಕ್ಕೆ ತಾನೇ ಎಡವಿದರೂ ಕುಂಟಿದರೂ,ಛಲ ಬಿಡದ ತಿವಿಕ್ರಮನಂತೆ,ಸತ್ತರೂ ಕನಸುಗಳನ್ನ ಸಾಯಗೊಡಲಾರೆ ಎಂಬಂತೆ ಕಣ್ಣ ತುಂಬ ಉರಿಯುವ ಕನಸುಗಳನ್ನು ದಾರಿಯ ಬೆಳಕಾಗಿಸಿಕೊಂಡು ,ಮುಂದೊಮ್ಮೆ ಇದೇ ಬದುಕು ಎಂಬಂತೆ ದೌಡಾಯಿಸಿ ನೆಗೆದು ನನಸಾದ ಕನಸುಗಳನ್ನೆಲ್ಲಾ ಬಾಚಿ ಹಿಡಿದು,ನಿಜವಾದ ಕನಸಿನ ಲೋಕಕ್ಕೆ ಲಗ್ಗೆಯಿಟ್ಟು ಬದುಕ್ಕನ್ನ ಇಂಚಿಂಚು ಸವಿದು ಬಿಡುತ್ತಾರೆ.ಈ ಬದುಕಿನ ಕಠೋರ ವಾಸ್ತವದಲ್ಲಿ ಬದುಕು ಎಷ್ಟೇ ಕ್ರೂರತನದಿಂದ ಧಾವಿಸಿ ಬಂದರೂ,ಅಸಾಹಯಕ ಕ್ಷಣಗಳು ದುತ್ತನೆ ಎದುರಾಗಿ ಬುಡ ಮೇಲಾಗಿ ಅಲ್ಲಾಡಿಸಿದರೂ,ದೂರದಲ್ಲೆಲ್ಲೋ ನಾನಿದ್ದೇನೆ ಅಂತ ಕಣ್ಣು ಮಿಟುಕಿಸಿ ಭರವಸೆ ಕೊಡುವ ಕನಸುಗಳಿದ್ದರೆ ಮಾತ್ರ ಬದುಕಿಗೆ ಮತ್ತೂ ಬದುಕುವ,ಜೀವಂತವಾಗಿ ಕುಡಿಯೊಡೆಯುವ ಅದಮ್ಯ ಆಸೆ.
ಇರಲಿ.ಕನಸುಗಳೇ ಹಾಗೆ.ಬೆಚ್ಚಗೆ ನೇವರಿಸಿ ಸಂತೈಸುವಂತವುಗಳು.ಕಂದನ ನೋಡುತ್ತಾ ಭವಿಷ್ಯಕ್ಕೆ ಕನಸಿನ ರೆಕ್ಕೆ ಕಟ್ಟುವ ಅಮ್ಮ, ಅಮ್ಮನ ಮಡಿಲಲ್ಲಿ ಏಳೇಳು ಜನುಮದ ಸುಖ ಹಾಗು ಭದ್ರತೆಯ ಕನಸು ಕಾಣುವ ಮಗು,ಬದುಕಿನ ನೊಗಕ್ಕೆ ಹೆಗಲಿನ ಸಮಕ್ಕೆ ಹೆಗಲು ಕೊಟ್ಟು ಕನಸ ರೂಪಿಸಲು ಹೆಣಗಾಡುವ ಅಪ್ಪ ಅಮ್ಮಂದಿರು,ನನಗೊಂದು ಕನಸು ಬೇಕಿತ್ತು.ಅದು ನೀನು… ಅಂತ ಮೆಲ್ಲನುಸುರುವ ಹರೆಯದ ಮನಸಿನ ಕನಸುಗಳು.ಬದುಕಿನುದ್ದಕ್ಕೂ ಹೀಗೆ ವರ್ಣನೆಗೂ ನಿಲುಕದ ಸಾವಿರ ಸಾವಿರ ಕನಸುಗಳು ಮೆರವಣಿಗೆ ಹೊರಡುತ್ತಿವೆ.ಬದುಕಿನ ಜೋಳಿಗೆಯಲ್ಲಿ ಕನಸಿಗೆಂದೂ ಬರ ಬರದಿರಲಿ ಅಂತ ನಾನೂ ನೆನೆಯುತ್ತಾ ಲೇಖನಿ ಹಿಡಿದು ಕುಳಿತಿರುವೆ.ನನ್ನ ಮುಂದೆ ಹರಡಿಕೊಂಡ ಬಿಳಿ ಹಾಳೆಗಳು ಅಕ್ಷರಗಳಾಗಿ,ಪದಗಳಾಗಿ,ಕವಿತೆಯಾಗುವ ಕನಸು ಕಾಣುತ್ತಿವೆ.ಕಾಣುವ ಮನಸ್ಸು ಮತ್ತು ಕನಸಿನ ಆಯಸ್ಸು ಯಾವತ್ತೂ ಮುಗಿಯದಿರಲಿ.
 

‍ಲೇಖಕರು G

8 November, 2014

3 Comments

  1. mmshaik

    tumba chennagide baraha smita..kansiddre jeevana..

  2. ishwar Bidarannavar

    Kanasina artha vaakyanu swalpara mattige tiliyitu…. Thanks ಅಪ್ಪ ಅಮ್ಮಂದಿರು,ನನಗೊಂದು ಕನಸು ಬೇಕಿತ್ತು.ಅದು ನೀನು……. ista aayithu

  3. savitri hiremath

    so chand bardeeri madam. kanasigendu bara barodu byadri.adu sada hulusagi belili annoda namma harike ri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading