ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗೆ ಸಿಕ್ಕಿದ ಪುಸ್ತಕವೇ ‘ತುಂಗಾ’

ನರೇಂದ್ರ ರೈ ದೇರ್ಲ

‘ನೀವೀಗ ಈ ರಾಜ್ಯದ ಶಿಕ್ಷಣ ಸಚಿವರು, ನೀವೇ ಒಂದು ಶಾಲೆ ಕಟ್ಟುವುದಾದರೆ ಹೇಗಿರುತ್ತೆ ? ನಿಮ್ಮ ಕಲ್ಪನೆಯ ಶಾಲೆ ಎಂದರೆ ಹೇಗೆ?- ಈ ಪ್ರಶ್ನೆಯನ್ನು ಆಗಿನ ಶಿಕ್ಷಣ ಸಚಿವರಾದ ಶ್ರೀ ಗೋವಿಂದೇಗೌಡ್ರಲ್ಲಿ ಕೇಳಿದ್ದೆ. ಸಂಜೆ ಲಾಂಗ್ಬೆಲ್ ಆಗುವಾಗ ಮಕ್ಕಳು ರೆಕ್ಕೆಬಿಚ್ಚಿ ಓಹೋ ಹೋ ಎಂದು ಖುಷಿಯಲ್ಲಿ ಮನೆಗೆ ಹೋಗ್ತಾರಲ್ಲ ಅದೇ ರೀತಿ ಮರುದಿವಸ ಮತ್ತೆ ಶಾಲೆಗೆ ಬರುವಾಗ ಕೂಡ ಖುಷಿ, ಸಂಭ್ರಮ, ಉಲ್ಲಾಸ ಇರುವಂತ ಒಂದು ಶಾಲೆಯನ್ನು ಸೃಷ್ಟಿಸಬೇಕು ಎಂದು ಉತ್ತರಿಸಿದರು ಅಂದು ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಗೋವಿಂದೇಗೌಡರು.

‘ತರಂಗ’ಕ್ಕಾಗಿ ಸುದೀರ್ಘ ಅವಧಿಯಲ್ಲಿ ಸಂದರ್ಶಿಸಿ ಕೊನೆಗೆ ಅವರಿಗೆ ಆ ಪ್ರಶ್ನೆ ಕೇಳಿದ್ದೆ. ಗೋವಿಂದೇಗೌಡರ ಕಲ್ಪನೆಯ ಆ ಶಾಲೆಯನ್ನು ನಾನು ಇನ್ನೂ ಈ ಕ್ಷಣದವರೆಗೂ ಈ ಭೂಮಿಯ ಮೇಲೆ ಹುಡುಕುತ್ತಾ ಇದ್ದೇನೆ. ಅಂತ ಒಂದು ಶಾಲೆ ಕಟ್ಟುವ ಮನಸ್ಸು ಎಷ್ಟು ಜನರಿಗಿದೆ ಹೇಳಿ?. ಅಂಗಳಕ್ಕೆ ಇಳಿಯುವ ಮಗು ಕೆಸರಿಗೆ ಕೈ ಇಕ್ಕಿದರೆ ಹೆತ್ತವರಿಗೆ ಹೇಸಿಗೆಯಾಗುತ್ತದೆ.

ಪುಟ್ಟ ಮಗುವಿನ ಕೈಗೆ ಒಂದಿಷ್ಟು ಹಸಿಮಣ್ಣು ನೀರು ಕೊಡಿ. ಮಗು ಮೃದುಮಣ್ಣನ್ನು ಹಿಚುಕಿ ಹಿಚುಕಿ ಅದಕ್ಕೊಂದು ಆಕಾರ ಕೊಡಲು ಪ್ರಯತ್ನಿಸುತ್ತದೆ. ಮತ್ತು ಆ ಕೆಲಸವನ್ನು ಪ್ರೀತಿಸುತ್ತದೆ. ಮಗುವಿನ ಕುಶಿ ತಾಳ್ಮೆ ಸಂಯಮ ಕೋಪ ಭಾವನೆ ಎಲ್ಲವೂ ಆ ಮಣ್ಣಿನಲ್ಲಿ ಮೂರ್ತ ರೂಪ ಪಡೆಯುತ್ತದೆ. ಇಂಥ ಪರೀಕ್ಷೆ, ಪರಿಸರ, ಶಿಕ್ಷಣ ಈಗ ಎಲ್ಲಿದೆ ಹೇಳಿ? ಈ ಹುಡುಕಾಟದ ಸಂದರ್ಭದಲ್ಲಿ ನನಗೆ ಸಿಕ್ಕಿದ ಪುಸ್ತಕವೇ ‘ತುಂಗಾ’.

ಜಪಾನಿನ ‘ತೊತ್ತೋಚಾನ್’ ಎಂಬ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಕನ್ನಡಕ್ಕೆ ತಂದ ಗಾಯತ್ರಿ ಅದೇ ಎಳೆಯನ್ನು ಹಿಡಿದು ರಚಿಸಿದ ಕಾದಂಬರಿಯೇ ಕನ್ನಡದ’ ತುಂಗಾ’. ಶಾಲೆ ಎಂದರೆ ಕ್ಯಾಂಪಸ್, ಸಿಸಿ ಕ್ಯಾಮೆರಾ, ಹಳದಿ ಬಸ್ಸು, ಬಯೋಮೆಟ್ರಿಕ್ಸ್, ಯೂನಿಫಾರ್ಮ್, ಸ್ಮಾರ್ಟ್ ಬೋರ್ಡ್- ಇವುಗಳೆಲ್ಲ ಎಂದು ಭ್ರಮಿಸುವ ಕಾಲಘಟ್ಟದಲ್ಲಿ, ಶಾಲೆಯ ದಾರಿಯೇ ಶಿಕ್ಷಣವಾಗುವ, ಬೇರು ಮೂಲ ಕಲಿಕೆಯ ಹಾದಿಯನ್ನು ಅದ್ಭುತವಾಗಿ ನಿರೂಪಿಸುವ ಕೃತಿಯೇ ತುಂಗಾ. ಲೇಖಕಿ ಗಾಯತ್ರಿಯವರಿಗೆ ಪ್ರಕಟಿಸಿದ ಬಹುರೂಪಿಗೆ ಒಬ್ಬ ಓದುಗನಾಗಿ ಅಭಿನಂದನೆಯನ್ನು ಕೃತಜ್ಞತೆಯನ್ನು ಸಲ್ಲಿಸುವೆ.

‍ಲೇಖಕರು Admin

13 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading