ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ ‘ಹೆಚ್ಚಾದ’ ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು ಎರಡೂ ಬದಿಯಿಂದ ಬಡಿದು ಸರಳಗೊಳಿಸೋದು ಅವರ ಉದ್ದೇಶ. ಅವರ ಪ್ರಯತ್ನ ಸಫಲವಾಗಲಿ ಅನ್ನೊದು ಹಾರೈಕೆ.
ಹಾಗೆಯೆ ಇನ್ನೂ ಕೆಲವು ವಿಷಯಗಳನ್ನು ಸರಳೀಕರಣಗೊಳಿಸಿದರೆ ಶ್ರೀ ಸಾಮಾನ್ಯರಿಗೆ ತುಂಬಾ ಉಪಕಾರವಾಗುತ್ತಿತ್ತು.
ಈ ಐಟಿ,ಬಿಟಿಯಿಂದಾಗಿ ಪಾಪ ಕೆಲಸಕ್ಕೆ ಹೋಗೋ ಹೆಣ್ಣು ಮಕ್ಕಳಿಗೆ ಅಡುಗೆ ಮಾಡೋದೇ ಒಂದು ದೊಡ್ಡ ತಲೆ ನೋವಾಗಿಬಿಟ್ಟಿದೆ. ಆದ್ದರಿಂದ ಸ್ವಲ್ಪ ಬಲ್ಲ ಹೆಂಗಸರೆಲ್ಲಾ ಸೇರಿ ಅಡುಗೆಯ ಕೆಲಸವನ್ನು ಸರಳೀಕರಣಗೊಳಿಸಿದ್ದಲ್ಲಿ ತುಂಬಾ ಸಹಾಯವಾಗುತ್ತಿತ್ತು!
ಈ ಚಿಕನ್ ಬಿರಿಯಾನಿ ಮಾಡೋದು ಹೇಗೆ ಅಂತ ಏನಾದರು ಹುಡುಕಿದ್ರೆ ಮಾರುದ್ದ ಪಟ್ಟಿ ಸಿಗುತ್ತೆ. ಬಲ್ಲವರೆಲ್ಲಾ ಸೇರಿ ಈ ಚಿಕನ್ ಬಿರಿಯಾನಿಯನ್ನು ಸರಳೀಕರಣಗೊಳಿಸಿದ್ರೆ ಚೆನ್ನಾಗಿರ್ತಿತ್ತು. ಬರೀ ಅನ್ನಕ್ಕೆ ಒಂದೆರಡು ಚಿಕನ್ ಪೀಸ್ ಒಗೆದು ಒಂದಿಷ್ಟು ಖಾರದ ಪುಡಿ ಎರಚಿದರೆ ಚಿಕನ್ ಬಿರಿಯಾನಿ ಸಿದ್ಧ ಆಗೋ ಥರ ಯಾರಾದ್ರೂ ಮಾರ್ಪಾಡು ಮಾಡಿದ್ರೆ ತುಂಬಾ ಖುಷಿ ಆಗ್ತಿತ್ತು. ನಿಂದೊಳ್ಳೆ ಕಥೆ ಆಯ್ತು ಮಾರಾಯ ನಿನಗೆ ಬೇಕಿದ್ರೆ ಹಾಗೇ ಮಾಡಿ ತಿನ್ನು ಅಂತ ಬಯ್ಯಬೇಡಿ. ಎಲ್ಲದಕ್ಕೂ ನೀತಿ, ನಿಯಮಗಳಿರುತ್ತವೆ. ಹಾಗಾಗಿ ಆ ನೀತಿ ನಿಯಮಗಳನ್ನು ಸರಳಗೊಳಿಸಿದ್ರೇನೇ ಚೆನ್ನ!
ಎರಡನೆಯದಾಗಿ ಈ ಪರೀಕ್ಷಾ ವಿಧಾನ ಸರಳೀಕರಣ ಆಗ್ಬೇಕು. ಈ ಸಂಧಿ, ಸಮಾಸ, ಛಂದಸ್ಸು, ಎಲ್ಲವನ್ನೂ ಎತ್ತಿ ಒಗೆದು ಒಂದೇ ಒಂದು ಪ್ರಶ್ನೆ ಇರಬೇಕು ಪರೀಕ್ಷೆಗೆ.
ಅದೇನೆಂದರೆ ” ನಿಮಗೆನು ಗೊತ್ತು ಬರೀರಪ್ಪ … ” ಮಾರ್ಕ್ಸ್ :೧೦೦
ಕನ್ನಡ ಸರಳೀಕರಣಗೊಂಡ ಮೇಲೆ ಇನ್ನು ನಾಲ್ಕು ಕನ್ನಡಗಳಿರುತ್ತವೆ!
ಹಳೆಗನ್ನಡ, ಹೊಸಗನ್ನಡ, ಸುಲಭ ಕನ್ನಡ ಮತ್ತು ಕಷ್ಟ ಕನ್ನಡ! (ಮಂಗಳೂರು ಕನ್ನಡ ಸಿನೆಮಾದಲ್ಲಿ ಮಾತ್ರ! ಬೆಂಗಳೂರು ಕನ್ನಡ ಬೆಂಗಳೂರಲ್ಲಿ ಮಾತ್ರ!)
ಇನು ಕನದ ಸರಲಿಕರನಗೊಲಿಸಿದರೆ ನನಗೆ ಲೆಕನ ಬರೆಯುದು ಇನು ಸುಲಬ. ನಿಮಗೆ ಒದುದು ಕಶತ ಆದರೆ ಮತರ ನನಗೆ ಬಯಬೆದಿ!!!








Super sir ! Ellavanu saralikarisuva manastiti enadaru bedona.
ಹಾ ಹಾ ಹಾ ಸಂದೀಪ..too good!!
ಮೈಕ್ರೋವೇವ್ ಘೆ!! ಉಗ್ಗಿ ರಾಂದಪ ಜಾತ್ತಾ, ಪಟ್ಟಿ ಹೋಡ ಆಸ್ಲ್ಯಾರಿ ಸತಾ!!!!ಬದ್ದಚಿ!
🙂
ಮಾಲತಿ ಎಸ್
ಆತು. ಒದಕೆ ಕಶತ ಆತು. ಇಶತ ಆತು.
“ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ ‘ಹೆಚ್ಚಾದ’ ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು ಎರಡೂ ಬದಿಯಿಂದ ಬಡಿದು ಸರಳಗೊಳಿಸೋದು ಅವರ ಉದ್ದೇಶ. ಅವರ ಪ್ರಯತ್ನ ಸಫಲವಾಗಲಿ ಅನ್ನೊದು ಹಾರೈಕೆ.” ಇದನ್ನು ಸರಳೀಕರಣಗೊಳಿಸಿದವರಿಗೆ ಮಾರ್ಕ್ಸ್ :೧೦೦.
ಅಯ್ಯೋ ಕನ್ನಡ ಕತ್ತಿ ವೀರರ ಜೊತೆ ಗುದ್ದಾಡಿ ಸಾಕಾಗಿದೆ ಸ್ವಾಮಿ. ಪ್ರವಾಹದ ವಿರುದ್ಧ ಹಾಯುವುದರ ಬದಲು ಅದರ ಜೊತೆಗೆ ತೇಲುತ್ತಾ ಅದೆಲ್ಲಿ ಎತ್ತಿಹಾಕುತ್ತೋ ಅಲ್ಲಿ ಬೀಳೋದೇ ಸರಿ ಅನ್ಸುತ್ತೆ. ಅಂದಹಾಗೇ ಹೀಗೆ ತೇಲಿ ಹೋಗೋದೇ ಆದರೆ ಇನ್ನಷ್ಟು ಸರಳೀಕರಣ ಪ್ರಯತ್ನವನ್ನಾದರೂ ಮಾಡಬಹುದು. ಕೆಲವು ಮುಖ್ಯವಾದ್ದು ಹೀಗಿದೆ:
೧) ಇವತ್ತಿನ ಮುಖ್ಯ ಕಳಕಳಿ ಮಕ್ಕಳು ಕನ್ನಡ ಕಲಿಯೊಲ್ಲ ಅಂತ ತಾನೆ? ಅದಕ್ಕೇ ತಾನೆ ಕನ್ನಡ ’ಸರಳ’ ಆಗಬೇಕು. ಸರಿಯಪ್ಪ, ಇವತ್ತಿನ ಮಕ್ಕಳನ್ನೇ ಒಂದು ಸಮೀಕ್ಷೆ ನಡೆಸೋಣ ಯಾವುದು ಕಷ್ಟ ಅಂತ. ಬಹಳಷ್ಟು ಮಕ್ಕಳು Maths ಕಿತ್ತೊಗೀರಿ ಅನ್ನದಿದ್ರೆ ಕೇಳಿ. ಅದು ತೀರ ತಪ್ಪಾತು, ತೀರ ಒಂದು subjectನೇ ಕಿತ್ತೊಗೆಯೋದು ಅಂದ್ರೆ. ಅದನ್ನೇ ತುಸು ಸರಳಗೊಳಿಸಿದರೆ ಅವೂ ಖುಷಿಯಿಂದ ಕಲಿತಾವು. ಸುಮ್ನೇ ಕೂಡೋದು ಕಳೆಯೋದು ಸಾಕಪಾ, ಅದ್ಯಾಕೆ ಗುಣಾಕಾರ, ಭಾಗಾಕಾರ ಎಲ್ಲ? 8 + 8 = 16; 8 x 8 = 16ಏ. ಹಾಗೇ 8 – 8 = 0; 8/8 = ಅದೂ ಸೊನ್ನೇನೇ. ನನ್ನ ಕೇಳಿದ್ರೆ ಈ + ಮಾರ್ಕೂ ದಂಡ. ಸುಮ್ನೇ ಒಂದು ಅಡ್ಡಗೀಟು ಹಾಕಿದ್ರೆ ಆಯ್ತು. ಪ್ಲಸ್ ಅಂದ್ರೆ ಮೈನಸ್ಸು. ಮೈನಸ್ ಅಂದ್ರೂ ಮೈನಸ್ಸೇ. ಎಲ್ಲಾ ಕಳೆದಮೇಲೆ ಕೊನೆಗೆ ಉಳಿಯೂದೂ ಸೊನ್ನೇನೇ. ವಿಷ್ಯಾ ಇಷ್ಟು ಸಿಮ್ಪಲ್ ಇರುವಾಗ ಈ ಸೈನ್ ತೀಟಾ, ಕಾಸ್ ತೀಟಾ, ಟ್ರಿಗನಾಮೆಟ್ರಿ, ಕ್ಯಾಲ್ಕುಲಸ್ಸು ಅಂದೆಲ್ಲಾ ಯಾಕೆ ಬೇಕು. ನಿಜ ಹೇಳಬೇಕು ಅಂದ್ರೆ, ಕನ್ನಡಿಗರ ಏಳಿಗೆಯನ್ನು ಸಹಿಸದೇ, ಅವರು ಮೇಲೇಳುವುದನ್ನು ತುಳಿಯಕ್ಕೋಸ್ಕರ ಆಂಗ್ಲರು ಆರ್ಯರು ಸೇರಿ ಮಾಡಿರೋ ಹುನ್ನಾರ ಇವೆಲ್ಲಾ. ಇದರಿಂದಲೇ ನಮ್ಮ ಕಂದಮ್ಮಗಳು ಸಾಲೀ ಬಿಟ್ಟು ದನ ಕಾಯೋ ಹಾಗಾದ್ದು.
noor sala helri…ellaru ond kiwigaru biddeetu…
ಶ್ರೀ ಸಂದೀಪ್ ಕಾಮತ್ ಅವರಿಗೆ ,
” ತುಂಬಾ ತಿಳಿದಿರುವವರು, ತುಂಬಾ ಓದಿರೋರು, ಪಂಡಿತರು, ಭಾಷಾ ತಜ್ಞರು ಸೇರಿ ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದಾರಂತೆ! ಅದೇನೆಂದರೆ ಕನ್ನಡ ಭಾಷೆಯ ಅಕ್ಷರಗಳನ್ನು ಸರಳೀಕರಣಗೊಳ್ಳಿಸೊದು. ಕನ್ನಡಕ್ಕೆ ‘ಹೆಚ್ಚಾದ’ ಅಕ್ಷರಗಳನ್ನು ಎತ್ತಿ ಕಸದ ಬುಟ್ಟಿಗೆ ಬಿಸಾಕಿ, ಕಷ್ಟದ ಅಕ್ಷರಗಳನ್ನು, ಒತ್ತಕ್ಷರಗಳನ್ನು ಎರಡೂ ಬದಿಯಿಂದ ಬಡಿದು ಸರಳಗೊಳಿಸೋದು ಅವರ ಉದ್ದೇಶ.” ಎಂದು ಹೇಳಿದ್ದೀರಿ .
ನೀವು ಹೇಳಿರುವಂತೆ ಈಗ ಈ ದಿಶೆಯಲ್ಲಿ ಬರೆಯುತ್ತಿರುವವರು ನನಗೆ ತಿಳಿದಿರುವಂತೆ ಇಬ್ಬರು ಮಾತ್ರ . ಒಬ್ಬರು ಡಿ.ಎನ್.ಶಂಕರ ಭಟ್ , ಮತ್ತೊಬ್ಬರು ಕೆ.ವಿ.ನಾರಾಯಣ .
2006 ರಲ್ಲಿ ಮೊದಲು ಡಿ.ಎನ್.ಶಂಕರ ಭಟ್ ಅವರು ” ಕನ್ನಡ ಬರಹವನ್ನು ಸರಿಪಡಿಸೋಣ ” ಎಂಬ ಹೊತ್ತಿಗೆಯಲ್ಲಿ ‘ಲಿಪಿ ಕ್ರಾಂತಿ ‘ ಮತ್ತು ‘ ಪದ ಕ್ರಾಂತಿ ” ಗಳ ಬಗ್ಗೆ ಪ್ರಸ್ತಾಪಿಸಿದರು . ಲಿಪಿ ಕ್ರಾಂತಿ ಎಂದರೆ ” ಈಗಿರುವ ಕನ್ನಡ ವರ್ಣಮಾಲೆಯಿಂದ 16 ಅಕ್ಷರಗಳನ್ನು ಕೈಬಿಟ್ಟು , 31 ಅಕ್ಷರಗಳಲ್ಲಿ ಕನ್ನಡದ ಬರವಣಿಗೆಯನ್ನು ಮಾಡುವುದು .”
ಅಆ ಇಈ ಉಊ ಎಏ ಒಓ
ಕ್ ಗ್
ಚ್ ಜ್
ಟ್ ಡ್ ಣ್
ತ್ ದ್ ನ್
ಪ್ ಬ್ ಮ್
ಯ್ ರ್ ಲ್ ವ್ ಶ್ ಸ್ ಹ್ ಳ್
—- 2007 ರಿಂದ ತಾವು ಹೇಳಿದಂತೆ 31 ಅಕ್ಷರಗಳನ್ನು ಬಳಸಿಕೊಂಡು ಈ ಕೆಳಕಂಡ ಹೊತ್ತಿಗೆಗಳನ್ನು ಡಿ.ಎನ್.ಶಂಕರ ಭಟ್ ಅವರು ರಚಿಸಿದ್ದಾರೆ .
ಕನ್ನಡ ನುಡಿ ನಡೆದು ಬಂದ ದಾರಿ ( 347 ಪುಟ )
ಮಾತಿನ ಒಳಗುಟ್ಟು ( 204 ಪುಟ )
ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು ( 336 ಪುಟ )
ಕನ್ನಡ ವ್ಯಾಕರಣ ಯಾಕೆ ಬೇಕು ? ( 260 ಪುಟ )
ಕನ್ನಡ ಬರಹದ ಸೊಲ್ಲರಿಮೆ-1 ( 328 ಪುಟ )
ಕನ್ನಡ ಬರಹದ ಸೊಲ್ಲರಿಮೆ-2 ( 310 ಪುಟ )
ಪದ ಕ್ರಾಂತಿ ಎಂದರೆ ” ಕನ್ಡಡ ಬರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುತ್ತಿರುವ ಸಂಸ್ಕೃತ ಪದಗಳಿಗೆ ಬದಲಾಗಿ , ಕನ್ನಡ ಪದಗಳನ್ನು ಬಳಸುವುದು . ” ಡಿ.ಎನ್.ಶಂಕರ ಭಟ್ಟರು ಹೇಳಿರುವ ಪದ ಕ್ರಾಂತಿಯ ನಿಲುವನ್ನು ಕೆ.ವಿ.ನಾರಾಯಣ ಅವರು ಇತ್ತೀಚಿನ ತಮ್ಮ ಬರಹಗಳಲ್ಲಿ ಅಳವಡಿಸಿಕೊಂಡಿದ್ದಾರೆ .
ಈ ಕೆಳಕಂಡ ಒಂದು ಹೊತ್ತಿಗೆಯನ್ನು ಇದೀಗ ರಚಿಸಿ ಹೊರತಂದಿದ್ದಾರೆ .
ಕನ್ನಡ ಆಡುನುಡಿಯ ಸೊಲ್ಲರಿಮೆ:1
ಕನ್ನಡದ ಉಲಿಕಂತೆಗಳು ( ಪುಟ 80 )
ಈ ಎಲ್ಲಾ ಹೊತ್ತಿಗೆಗಳು ಕನ್ನಡ ನುಡಿಯ ರಚನೆ ಮತ್ತು ಬಳಕೆಯ ಬಗ್ಗೆ ಭಾಷಾವಿಜ್ಞಾನದ ನೆಲೆಯಲ್ಲಿ ರಚನೆಗೊಂಡಿವೆ . ನೀವು ಈ ಮೇಲ್ಕಂಡ ಹೊತ್ತಿಗೆಗಳನ್ನು ಓದಿಲ್ಲದಿದ್ದರೆ , ಒಮ್ಮೆ ಓದಿ ನೋಡಿ . ಒಂದು ವೇಳೆ ಈ ಹೊತ್ತಿಗೆಗಳನ್ನು ಓದಿದ್ದು , ” ನನಗೆ ಲೆಕನ ಬರೆಯುದು ಇನು ಸುಲಬ..” ಎಂಬ ಬರಹವನ್ನು ಬರೆದಿದ್ದರೆ , ಅದು ನಿಮ್ಮ ವೈಯಕ್ತಿಕ ನಿಲುವೆಂದು ತಿಳಿಯುತ್ತೇನೆ .
ಪ್ರೀತಿಯ ಸಿ ಪಿ ನಾಗರಾಜರೇ,
ನಾನೊಬ್ಬ ಸೆಲೆಬ್ರೆಟಿಯಲ್ಲ! ಹಾಗಾಗಿ ಖಂಡಿತ ನಾನು ಬರೆದಿರೋದೆಲ್ಲವೂ ನನ್ನ ವೈಯುಕ್ತಿಕ ಅಭಿಪ್ರಾಯ!
ನಾನು ಶ್ರೀಯುತ ಶಂಕರ ಭಟ್ಟರ ಹೊತ್ತಿಗೆಗಳನ್ನು ಓದಿಲ್ಲ. ಬಹುಷ: ಓದುವುದೂ ಇಲ್ಲ. ಯಾಕಂದ್ರೆ ನನಗೆ ಅವರ concept ಅಷ್ಟಾಗಿ ಇಷ್ಟ ಆಗಿಲ್ಲ.
ನಾನು ಯಾವುದಾದರೂ ಒಂದು ಬರಹವನ್ನು ಬರೀ 31 ಅಕ್ಷರಗಳಲ್ಲಿ ಬರೆಯ ಹೊರಟರೆ ಬಹುಷಃ ನನ್ಗೆ ಒಂದು ದಿನವೇ ಬೇಕೇನು! ಯಾಕಂದ್ರೆ ಪ್ರತಿಯೊಂದು ಶಬ್ದವನ್ನು ಬರೆಯುವಾಗಲೂ ನಾನು 31 ರ ಪಟ್ಟಿಯಲ್ಲಿದ್ದದ್ದಷ್ಟನ್ನೇ ಬರೆದಿದ್ದೇನೋ ಅಥವಾ ಮೂಲ ಪಟ್ಟಿಯಲ್ಲಿದ್ದನ್ನು ಉಪಯೊಗಿಸಿದ್ದೇನೋ ಎಂದು ಪ್ರಜ್ಞಾಪೂರ್ವಕವಾಗಿ ಪರಿಶೀಲಿಸಬೆಕಾಗುತ್ತದೆ. ಈ ಕೆಲಸದಿಂದಾಗಿ ಸುಲಭವಾಗಬೇಕಿದ್ದ ಕನ್ನಡ ಇನ್ನೂ ಕಷ್ಟವಾಗುತ್ತದೆ!
ಬಹುಷಃ practice ಮಾಡಿದ್ರೆ ಬರಬಹುದೇನೋ! ಆದರೆ ಅದರ ಅಗತ್ಯ ನನಗೆ ಕಾಣಿಸುತ್ತಿಲ್ಲ.
ಕನ್ನಡ ಸರಳೀಕರಣದ ಮೂಲಭೂತ ಉದ್ದೇಶ ಬಹುಷಃ ಬರವಣಿಗೆಯ ಕನ್ನಡವನ್ನು ಸುಲಭಗೊಳಿಸುವುದು. ಆದರೆ ಬರೆಯುವ ತುಡಿತ ಇರುವವರು ಎಷ್ಟೇ ಕಷ್ಟ ಆದರೂ ಬರೆದೇ ಬರೀತಾರೆ! ಬರೆಯಲು ಮನಸ್ಸಿಲ್ಲದವರು ನೀವು ಕನ್ನಡವನ್ನು ಎಷ್ಟು ಸರಳೀಕರಿಸಿದರೂ ಬರೆಯೋದೇ ಇಲ್ಲ! ಓದಲು ಮನಸ್ಸಿರುವವರೂ ಎಷ್ಟೇ ಕಷ್ಟ ಆದರೂ ಓದ್ತಾರೆ. ಓದಲು ಮನಸ್ಸಿರದವರು ನೀವು ಬಿಟ್ಟಿ ಕೊಟ್ಟರೂ ಓದಲ್ಲ!
ಕನ್ಡಡ ಬರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುತ್ತಿರುವ ಸಂಸ್ಕೃತ ಪದಗಳಿಗೆ ಬದಲಾಗಿ , ಕನ್ನಡ ಪದಗಳನ್ನು ಬಳಸುವುದು ಒಳ್ಳೆಯ ಉದ್ದೇಶವೆ. ಆದ್ರೆ ಇದಕ್ಕೂ ಹಲವಾರು ಅಡ್ಡಿ ಆತಂಕಗಳಿವೆ. ಸ್ವಲ್ಪ ದಿನದ ಹಿಂದೆ ನಂ ೧ ಕನ್ನಡ ಪತ್ರಿಕೆಯಲ್ಲಿ ಒಂದು ಶಬ್ದವನ್ನು ಉಪಯೊಗಿಸಿದ್ದರು. ನನಗೆ ಎಷ್ಟು ತಲೆ ಕೆರೆದುಕೊಂಡರೂ ಆ ಶಬ್ದದ ಅರ್ಥ ಗೊತ್ತಾಗಲಿಲ್ಲ.
ಸಂಸ್ಕೃತ ಶಬ್ದದ ಬದಲಾಗಿ ಕನ್ನಡ ಪದಗಳನ್ನು ಬಳಸಿದಲ್ಲಿ ಕೊನೆ ಪಕ್ಷ ಆವರಣದಲ್ಲಾದರೂ ಮೂಲ ಪದವನ್ನು ಕೊಟ್ಟರೆ ಉಪಯುಕ್ತವಾಗುತ್ತಿತೇನೋ. ಅದರೆ ಎಷ್ಟು ದಿನ ಆವರಣದಲ್ಲಿ ಬರೆಯಬಹುದು? ಆರು ಕೋಟಿ ಕನ್ನಡಿಗರೂ ಆ ಪದ ಕಲಿಯೋ ತನಕ? ಅಥವಾ ನಂ ೧ ಪತ್ರಿಕೆಯ ಎಲ್ಲಾ ಓದುಗರೂ ಆ ಪದ ಕಲಿಯೊ ತನಕ? ಹಾಗಿದ್ರೆ ನಂ ೨, ನಂ ೩ ಪತ್ರಿಕೆಗಳ ಓದುಗರ ಪಾಡು? ನಂ ೧ ಪತ್ರಿಕೆಯವರು ನಂ ೧ ನ್ಯೂಸ್ ಚ್ಯಾನೆಲ್ ನವರನ್ನು convince ಮಾಡಬಲ್ಲರೇ?
ಮೊನ್ನೆ ಒಂದು ದಿನ PNB Bank ATM ಒಂದರಲ್ಲಿ ಭಾಷೆ ಕನ್ನಡ ಅಂತ ಆಯ್ಕೆ ಮಾಡಿದ್ದೆ. ಆಗ menu ವಿನಲ್ಲಿ ‘ಮಿಗತೆ ವಿಚಾರ’ ಅಂತ ಬಂತು! ಅದೇನು ಅಂತ ಗೊತ್ತಾಗೋದಕ್ಕೆ cancel ಮಾಡಿ ಮತ್ತೆ ಇಂಗ್ಲೀಷ್ ಗೆ ಹೋಗಬೇಕಾಯ್ತು ನಾನು!
ಭಾಷೆಯ standardization ತುಂಬಾ ಕಷ್ಟ. ಒಂದು ವೇಳೆ ಕರ್ನಾಟಕ ಸರಕಾರ ” ಡಿಸೆಂಬರ್ ೩೧ ರ ಮಧ್ಯರಾತ್ರಿಯಿಂದ ಎಲ್ಲರೂ ‘ಈ ಸುಲಭ ಕನ್ನಡ’ ವನ್ನು ಉಪಯೋಗಿಸತಕ್ಕದ್ದು. ತಪ್ಪಿದಲ್ಲಿ ಪರಪ್ಪನ ಅಗ್ರಹಾರಕ್ಕೆ ಕಳಿಸುತ್ತೇವೆ ” ಅಂತ ಸುತ್ತೋಲೆ ಹೊರಡ್ಸಿದ್ರೆ ಮಾತ್ರ ಎಲ್ಲರೂ ಒಪ್ಪಬಹುದೇನೋ!
ನನಗೆ ಭಾಷಾ ವಿಜ್ಞಾನಿಗಳ ಬಗ್ಗೆ ಅಪಾರ ಗೌರವವಿದೆ. ಆದರೆ ಭಾಷಾ ಸರಳೀಕರಣದ concept ಮಾತ್ರ ಯಾಕೋ ಇಷ್ಟ ಆಗಿಲ್ಲ ಕ್ಷಮಿಸಿ!
ಶಂಕರ ಬಟ್ಟರ ಬಗ್ಗೆ ಓದದೆಯೇ ಅವರ ನಿಲುವು ಇಂತದ್ದೇ ಎಂದು ತೀರ್ಮಾನಕ್ಕೆ ಬಂದಿರುವ ಲೇಖಕರ ಬುದ್ದಿಮತ್ತೆಗೆ ಶರಣೋ ಶರಣು…