ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನದಿಯೊಂದು ನಮ್ಮೊಳಗೂ ಹರಿದು..

ಜಯಂತ್ ಕಾಯ್ಕಿಣಿ ಅವರ ಕಥಾಸಂಕಲನ ‘ಚಾರ್ ಮಿನಾರ್’

ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಕೆ ಎನ್ ಲಾವಣ್ಯ ಪ್ರಭಾ ಅವರ ಒಂದು ನೋಟ ಇಲ್ಲಿದೆ.

-ಕೆ ಎನ್ ಲಾವಣ್ಯ ಪ್ರಭಾ

ಎಂಟು ಕತೆಗಳಿರುವ ಜಯಂತ್ ಕಾಯ್ಕಿಣಿ ಅವರ “ಚಾರ್ ಮಿನಾರ್” ಕಥಾ ಸಂಕಲನದ  ಶೀರ್ಷಿಕೆಯೇ ವಿಶೇಷ. ನಾಲ್ಕು ದಿಕ್ಕುಗಳಲ್ಲಿ ಭೂಮಿ ತಿರುಗುವಂತೆಯೇ ಬದುಕಿನ ನಾಲ್ಕು ಹಂತಗಳ ಪಯಣದ ದಾರಿಯಲ್ಲಾಗುವ ಘಟನೆಗಳು ಅದರಿಂದಾಗುವ ಅನುಭವಗಳು, ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳಲ್ಲಿ ಏರಿಳಿತಗಳು, ಮನುಷ್ಯನೊಳಗೇ ಹುಟ್ಟುವ ತಾಕಲಾಟಗಳು ಮೊದಲಾದ ನಡುವೆಯೂ ಶುದ್ಧ ಸ್ನೇಹ, ಪ್ರೇಮ, ಕಾಳಜಿ, ತವರೂರಿನ ನಂಟಿನ ಆಪ್ತತೆ, ಸಾಮಾಜಿಕ ಕಾಳಜಿ, ಸರಳ ವ್ಯಕ್ತಿತ್ವ, ಮಾನವೀಯ ಸ್ಪರ್ಶಗಳೇ ಇಲ್ಲಿನ ಕೇಂದ್ರವಾಗಿ ಇಂದಿನ ದಿನಗಳಲ್ಲಿ ಅಪರೂಪವಾಗಿರುವ ಇಂತಹ ಮೌಲಿಕ ಗುಣ ಸ್ವಭಾವ ಪರಿಸರದ ನಂಟುಗಳ ಪ್ರಸ್ತುತತೆಯನ್ನು ಇಲ್ಲಿನ ಕತೆಗಳು ಓದುಗರಿಗೆ ಮನಗಾಣಿಸುತ್ತವೆ. 

 “ಮಧು ಬಾಲಾ” ಕತೆಯಲ್ಲಿ ಮುಂಬಯಿಯ ಡಾನ್ಸ್ ಬಾರಿನಲ್ಲಿ ನೃತ್ಯ ಮಾಡಿ ಜೀವನ ನಡೆಸುವ ಮಧುಬಾಲಾಳನ್ನು ಏಕಾಂತ್ ಭಾವೆ ಭೇಟಿಯಾದ ನಂತರ ಕೆಲವೇ ದಿನಗಳಲ್ಲಿ ಆಕೆಯ ಗುಣಗಳಿಂದ ಆತನಿಗೆ ಹತ್ತಿರವಾಗುವ ಮಧುಬಾಲಾ ಜೊತೆ ಆಜಿ ಹಾಲಿ ಸಮುದ್ರ ತೀರದಲ್ಲಿನ ನಡುಗುಡ್ಡೆಯ ದರ್ಗಾಕ್ಕೆ ಹೋಗಿ ಬರುವ ಸಮಯದಲ್ಲಿ  ಆಕೆ ತನ್ನ ಮನೆಯ ಪಕ್ಕದ ಖೋಲಿಯಲ್ಲಿದ್ದವಳ ತಾಯಿಯನ್ನು ಕಳೆದುಕೊಂಡಿದ್ದು ಹಾಜಿ ಆಲಿ ದರ್ಗಾಕ್ಕೆ ಬಂದಾಗೆಲ್ಲಾ ಅಲ್ಲಿನ ಭಿಕ್ಷುಕಿಯರ ಸಾಲಿನಲ್ಲಿ ಅವಳ ತಾಯಿಯನ್ನೂ ಹುಡುಕಿ ಸಿಗದೆ ನಿರಾಶಳಾಗಿ ಹೋಗುವುದನ್ನು ಕೇಳಿ ಮಧುಬಾಲಾ ಸಹಾ ಯಾವುದೇ ಜಾತ್ರೆ ಅಥವಾ ಉತ್ಸವಕ್ಕೆ ಹೋದರೂ ಆಕೆಯ ತಾಯಿಯ ಚಹರೆ ಹೊಂದುವವರನ್ನು ಹುಡುಕುವಾಗಿನ ದೃಶ್ಯ ಓದುಗರನ್ನು ಕಾಡುತ್ತದೆ.ಮಧುಬಾಲಾ ಇದ್ದಕ್ಕಿದ್ದಂತೆ ಕಾಣೆಯಾದಾಗ ಏಕಾಂತ್ ಭಾವೆ ಕೆಲವೇ ದಿನಗಳಲ್ಲಿ ಮನಸ್ಸಿಗೆ ತೀರಾ ಹತ್ತಿರವಾಗಿ ಆಪ್ತಳಾದ ಮಧುಬಾಲಾ ಒಮ್ಮೆ ತನ್ನೊಂದಿಗೆ ಮಾತಾಡುವಾಗ ಉಚ್ಛರಿಸಿದ್ದ ‘ಕ್ಯಾಸಲ್ ರಾಕ್’ ಹುಡುಕಿಕೊಂಡು ಅಲ್ಲಾದರೂ ಆಕೆಯನ್ನು ತಾನು ಭೇಟಿಯಾಗಬಹುದೆಂದು ಹೋಗಿರುತ್ತಾನೆ. ಅಲ್ಲಿ ಟ್ರೇನಿನಲ್ಲಿ ಕಂಕುಳಲ್ಲಿ ಮಗುವನ್ನೆತ್ತಿಕೊಂಡು ಗೊಂಬೆ ಮಾರಲು ಬರುವ ತಾಯಿಯ ಜೊತೆಯನ್ನು ಭೇಟಿಯಾದಾಗ ಆತನಿಗಾದ ಅನುಭವಕ್ಕೂ ಮತ್ತು ಮಧುಬಾಲಾಗೆ ಈ ಮೊದಲು ಭಿಕ್ಷುಕಿಯ ಜೊತೆಗಾಗಿದ್ದ ಅನುಭವಕ್ಕೂ ಒಂದು ನಿಗೂಢ ನಂಟಿದ್ದು ಸತ್ಯವೊಂದು ತೆರೆದುಕೊಳ್ಳುತ್ತಲೇ ಕತೆಯೊಳಗೆ ಹೊಸ ಕತೆಯೊಂದು ಹುಟ್ಟಿಕೊಳ್ಳುತ್ತಾ ಓದುಗರಲ್ಲಿ ಕುತೂಹಲವನ್ನು ಹುಟ್ಟುಹಾಕುತ್ತದೆ. ಅದನ್ನು ಓದಿಯೇ ಅನುಭವಿಸಬೇಕು. ಈ ಕತೆಯೊಳಗೆ ಮುಂಬೈನ ರಸ್ತೆಗಳು, ವಾಹನಗಳ ಓಡಾಟ, ರೈಲ್ವೆ ನಿಲ್ದಾಣಗಳು, ಸಮುದ್ರ , ಡಾನ್ಸ್ ಬಾರಿನಲ್ಲಿ ನರ್ತಿಸುವವರ ಜೀವನದ ಕಷ್ಟಸುಖಗಳು ಮತ್ತು ಗುಣ ಸ್ವಭಾವಗಳು ಮೊದಲಾದವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಸುತ್ತಾ ಹೋಗುತ್ತಾರೆ, ಡ್ಯಾನ್ಸ್ ಮಾಡುವ ಮತ್ತೊಬ್ಬ ಹೆಣ್ಣು ಕಾಮಿನಿಗೆ ಡಾನ್ಸ್ ಬಾರಿನ ಸೇಠ್ ನ ತಮ್ಮ ಊರಲ್ಲಿ ದೇವಸ್ಥಾನ ಕಟ್ಟಿಸುವ ಸಲುವಾಗಿ ಹಣ ಕೇಳಿದಾಗ ‘ನನ್ನ ದೇವರು ನಂಜೊತೆ ಡಾನ್ಸ್ ಬಾರಿಗೆ ಬರ್ತಾನೆ ನನ್ನ ಜೊತೆ ಕುಣೀತಾನೆ ..‌ಅಂತ ಹೇಳ್ತಾ ನಮ್ಮ ನಮೂನೆ ದಿನಗೂಲಿ ಮಾಡೋ ದೇವ್ರೇ ನಮಗೆ ಬೇಕು, ಬಿಸಿನೆಸ್ ಮಾಡುವ ದೇವರು ಬೇಡಪ್ಪಾ’ ಎನ್ನುವ ದೇವರ ಕುರಿತ ಅವಳ ನಂಬಿಕೆ ಶ್ರಮಿಕ ವರ್ಗದವರ ಪಾಡುಗಳನ್ನು ಹೇಳುತ್ತದೆ. ಜನಪದರು ಸಹಾ ದೇವರನ್ನು ತಮ್ಮ ಮಿತ್ರನಂತೆ ಸಲಿಗೆಯಿಂದಲೇ ದೇವರ ಇರುವನ್ನು ಪ್ರೀತಿಸುತ್ತಾ ನೆಮ್ಮದಿಯಿಂದಿರುವುದನ್ನು ನಮ್ಮ ಜನಪದ ಕಾವ್ಯಗಳಲ್ಲಿ ಕಾಣುತ್ತೇವೆ.  

 “ಅಭಂಗ ಅಭಿಸಾರ” ಕತೆಯಲ್ಲಿ  ಈ ಹೆಸರಿನ ಇಬ್ಬರು ಬಾಲ್ಯ ಸ್ನೇಹಿತರು ಆನಂತರ ತಮ್ಮ ವೃತ್ತಿಗನುಸಾರವಾಗಿ ಬೇರೆ ಬೇರೆ ನಗರಗಳಲ್ಲಿ ವಾಸಿಸುವಂತಾದರೂ ಅವರ ಬಾಲ್ಯದ ಕನಸಿನ  ‘ಪಣಜಿ’ ಯಲ್ಲೇ ಅಭಂಗ ಜೀವನ ಶುರುವಾದ್ರೆ ಅಭಿಸಾರ ಪುಣೆಯಲ್ಲಿ ವಾಸವಾಗ್ತಾನೆ.  ನಡುವೆ ಯಾವುದೇ ಕಾಂಟಾಕ್ಟ್ ಇಲ್ಲದಿದ್ದಾಗ್ಯೂ ಅಭಿಸಾರನ ಮದುವೆಯಲ್ಲಿ ದಿಢೀರನೆ ಅಭಂಗ ಕಾಣಿಸಿಕೊಂಡ ಅಚ್ಚರಿ ಆನಂದದಲ್ಲೇ ಮತ್ತೆ ಅವರಿಬ್ಬರ ದೋಸ್ತಿಯ ಮುಂದುವರಿಕೆಯಿದೆ. ಅಭಿಸಾರನ ಮದುವೆಯಂದು ಅಭಂಗ ಕೊಟ್ಟಿದ್ದ ಉಡುಗೊರೆಯ ಲಕೋಟೆ ಬಿಚ್ಚಿದಾಗ ಅದರೊಳಗಿಂದ ಒಂದಿಷ್ಟು ಕಾಗದದ ಪುಟ್ಟ ಚೂರುಗಳು ಬೃಹತ್ ಫ್ಯಾನಿನ ಗಾಳಿಗೆ ಹಾರಾಡತೊಡಗಿದಾಗ ಅಭಿಸಾರ ಓಡಿ ಓಡಿ ಆ ಚೂರುಗಳನ್ನು ಹಿಡಿದು ಕಿಸೆಯಲ್ಲಿ ಹಾಕಿಕೊಳ್ಳುವುದು , ಆತನ ವಧು ಮೇಘನಾ ಮತ್ತು ಫೋಟೋಗ್ರಾಫರ್ ಗಳೂ ಚೂರುಗಳನ್ನು ಎತ್ತಿ ಎತ್ತಿ ಅಭಿಸಾರನಿಗೆ ಕೊಡುವುದನ್ನು ವಿಡಿಯೋಗ್ರಾಫರ್ ಗಳು ಚಿತ್ರೀಕರಿಸುವ ವಿವರಗಳಲ್ಲಿ ಅಭಂಗ ಅಭಿಸಾರ ಪಣಜಿಯ ಹಳೇ ಕಾರೇರ್ ಬಸ್ಸುಗಳಲ್ಲಿ ಪಯಣಿಸಿ ಕಲೆ ಹಾಕಿಕೊಂಡಿದ್ದ ಟಿಕೇಟುಗಳೆಂದು ತಿಳಿಯುತ್ತದೆ ಮತ್ತು ಸ್ನೇಹಿತರಿಬ್ಬರ ಪಣಜಿಯ ಮೇಲಿದ್ದ ವ್ಯಾಮೋಹದ ಸಾಕ್ಷಿಯಾಗಿ ಅಭಂಗ ಅಭಿಸಾರನಿಗೆ ಗಿಫ್ಟ್ ಕೊಟ್ಟು ಮತ್ತೆ ತಮ್ಮಿಬ್ಬರ ಹಳೆಯ ಸ್ನೇಹದ ನೆನಪುಗಳು ಗರಿಗೆದರುವಂತೆ ಮಾಡಿ ಶುದ್ಧ ಸ್ನೇಹದ ನದಿಯೊಂದು ನಮ್ಮೊಳಗೂ ಹರಿದು ತಣಿಸುತ್ತದೆ.     

ಇಲ್ಲಿ ನದಿ ಮತ್ತು ನದಿಯ ಹರಿವು, ದೋಣಿ, ಗಣಿಯ ಅದಿರು ಸಾಗಿಸುವ ಬಾರ್ಜುಗಳು, ಪೋರ್ಚುಗೀಸ್ ಪಟ್ಟಣ ಪಣಜಿಯ ವಿದೇಶಿ ಕಾರ್ ಗಳು, ಊರ ತುಂಬಾ ಕಟ್ಟಿಗೆಯಿಂದ ಬಾಡಿ ಕಟ್ಟಿಸಿಕೊಂಡ ಕಾರೇರ್ ಎಂಬ ಬಸ್ಸುಗಳು, ಪಣಜಿಯ ಬಾರ್ ಗಳಲ್ಲಿ ಕಂಡ ಜಂಟಲ್ ಮನ್ ಕುಡುಕರ ವಿವರಗಳು ಅಂದಿನ ಪಣಜಿಯಲ್ಲಿ ನಮ್ಮನ್ನು ಸುತ್ತಾಡಿಸುತ್ತದೆ. ಬಹಳ ವರ್ಷಗಳ ನಂತರದ ಭೇಟಿಯಲ್ಲೂ ಅವರಿಬ್ಬರಿಗೆ ಎಂತಹುದೇ ಮನಸ್ಸಿಗೆ ಕಸಿವಿಸಿ ಉಂಟು ಮಾಡುವ ಸಮಯದಲ್ಲೂ ಅವರಿಬ್ಬರ ನಡುವಿನ ಆಪ್ತತೆ ಸರಳತೆ ಮತ್ತು ನಂಬಿಕೆಯಲ್ಲಿ ಎಳ್ಳಷ್ಟೂ ವ್ಯತ್ಯಾಸವಿರದಿರುವುದೇ ಅತ್ಯಂತ ವಿಶೇಷ. ಬಹುದಿನಗಳ ನಂತರ ಬಾಲ್ಯ ಸ್ನೇಹಿತ ಅಭಂಗ ಸಿಕ್ಕಾಗ ಸ್ನೇಹದ ಕುರಿತ ಜಯಂತರ ಸಾಲುಗಳು ಮನ ಸೆಳೆಯುತ್ತವೆ- ‘ ತನಗೆ ಅತ್ಯಂತ ನಿಜವಾದ ಜಗತ್ತೊಂದು ಇಲ್ಲೇ ಸ್ವಲ್ಪ ಕೈ ಚಾಚಿದಲ್ಲೇ ನಿಲುಕಬಹುದಾದ ಅಂತರದಲ್ಲೆ ಅದೃಶ್ಯ ನದಿಯಂತೆ ಪ್ರವಹಿಸುತ್ತಿದೆ, ಅಲ್ಲೆಲ್ಲ ಶುದ್ಧವಾಗಿದೆ, ನಿಲುಕಿದರೆ ಸಾಕು ಇಲ್ಲಿಯ ದುಗುಡಗಳಿಗೆ ಉಪಶಮನ ಅಲ್ಲಿದೆ ಎಂಬ ಭಾವನೆ ಅಭಿಸಾರನಿಗಾಗುವ ಸಂದರ್ಭ  ಮತ್ತು ಗೆಳೆತನ ಅಂದರೆ ಬರೇ ಒಂದು ವ್ಯಕ್ತಿ ಅಥವಾ ಪರಸ್ಪರ ಕೊಡುಕೊಳ್ಳುವ ವಹಿವಾಟು ಅಲ್ಲ ಮತ್ತು ಅದು ಕೇವಲ ಒಬ್ಬರಿಗೆ ಸಂಬಂಧಪಟ್ಟದ್ದೂ ಅಲ್ಲ. ಒಬ್ಬ ವ್ಯಕ್ತಿ ನೆಪವಾಗಿ ಆ ಮೂಲಕ ತನ್ನನ್ನು ಬೆಳೆಸಬಲ್ಲ ಆವರಣವೊಂದು ಉದ್ದೀಪನಗೊಳ್ಳುವುದು, ಅದು ವ್ಯಕ್ತಿಯಷ್ಟೇ ಯಾಕೆ ಒಂದು ವಸ್ತುವಾಗಬಹುದು ಕೇರಿ ಆಗಬಹುದು, ಬಣ್ಣ ಆಗಬಹುದು. ನಾವು ಎಲ್ಲಿ ಎಲ್ಲಿ ನಿಜವಾಗಿ ಆಂತರಿಕವಾಗಿ ಬೆಳೆಯುತ್ತೇವೆಯೋ ಆ ವಸ್ತು, ಜಾಗ, ವ್ಯಕ್ತಿಗಳ ಜತೆ ಮಾತ್ರ ನಂಟು, ಗೆಳೆತನ. ಆಗಲೇ ಬಹುಶಃ ಸಂಗತಿಗಳು ‘ಜೀವಕ್ಕೆ ಚಲೋ’ ಆಗತೊಡಗುತ್ತವೆ. ಅಭಂಗ ಬಾಲ್ಯದಲ್ಲಿ ಹೇಳ್ತಿದ್ದ ಜೀವಕ್ಕೆ ಚಲೋ ಆಗ್ತದೆ ಸಾಲುಗಳ ಹಿಂದಿರುವ ಸತ್ಯ ನಮ್ಮ ಹೃದಯಕ್ಕೆ ಅತ್ಯಂತ ಅವಶ್ಯಕವಾದ ಅಮೂಲ್ಯವಾದ ಯಾವುದನ್ನೋ ತಲುಪಿಸುತ್ತಿದೆ ಅನಿಸಿ ಜೀವಕ್ಕೆ ಚಲೋ ಎನಿಸ್ತದೆ. 

ಕತೆಯ ಕೊನೆಯಲ್ಲಿ  ಅಭಂಗನನ್ನು ಭೇಟಿಯಾಗಲು ಬಂದ ಅಭಿಸಾರ ಆತನನ್ನು ಭೇಟಿಯಾಗದೆ ‘ಅವನ ನನ್ನ ನಂಟನ್ನು ಸದ್ದಿಲ್ಲದೆ ಪರಸ್ಪರರಿಗೂ ಮುಜುಗರವಾಗದ ಅವಾಚ್ಯವಾಗದ ರೀತಿಯಲ್ಲಿ ಸೆಲಬ್ರೇಟ್ ಮಾಡಲು ಬಂದಿದ್ದೇನೆ’ ಎಂದುಕೊಳ್ಳುವುದು ಮತ್ತು ಹಾಗೇ ಒಬ್ಬನೇ ಸಂಭ್ರಮಿಸುವ ಅಭಿಸಾರನೊಂದಿಗೆ ಮುಕ್ತಾಯವಾಗುವ ಕತೆ ಕೊನೆಯಲ್ಲಿ ಇಬ್ಬರು ಸ್ನೇಹಿತರ ಬಾಲ್ಯದೊಂದಿಗಿನ ನಂಟನ್ನು ಬೆಸೆಯುವ ರೂಪಕವಾಗಿ ಪಣಜಿ ನಮ್ಮ ಮನಸ್ಸು ಸೆಳೆಯುತ್ತದೆ.  

“ನೀರು” ಎಂಬ ಕತೆಯಲ್ಲಿ ಮುಂಬೈನಲ್ಲಿ ಮಳೆಗಾಲದಲ್ಲಿ ನೀರಿನ ಸೆಳವು ಹೆಚ್ಚಾಗಿ ಜನದಟ್ಟಣೆಯ ಪ್ರದೇಶಗಳಲ್ಲಿ ಆಗುವ ಪ್ರತಿಕೂಲಗಳಲ್ಲಿ ಸಾಮಾನ್ಯ ಜನರಿಂದ ಹಿಡಿದು ಎಲ್ಲಾ ವರ್ಗದ ಜನರೂ ಸಹಾ ಒಬ್ಬರಿಗೊಬ್ಬರು ಸಹಾಯ ಹಸ್ತ ನೀಡುತ್ತಾ ಕೈಲಾಗುವ ನೆರವಿಗೆ ಧಾವಿಸಿ ಸಾಂತ್ವನ ನೀಡಿ ಸಹಕಾರ ಕೊಡುವ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮನಸ್ಸಿಗೆ ಧೈರ್ಯವನ್ನು ನೀಡುವ ಪರಿ ನಿಜಕ್ಕೂ ನಮಗೆಲ್ಲರಿಗೂ ಅನುಕರಣೀಯ ಆದರ್ಶನೀಯ ಎನಿಸಿತು. ಆಟೋದವರು, ಸ್ಲಂನವರು, ಉದ್ಯೋಗಸ್ಥರು, ಶಾಲಾ ಮಕ್ಕಳು ಎಲ್ಲರಿಗೂ ಇಂತಹ ಪರಿಸ್ಥಿತಿಯಲ್ಲಿ ಒಬ್ಬರೊಬ್ಬರ ಸಂವಹನಕ್ಕೆ ಆಕಾಶವಾಣಿಯಿಂದ ಬಿತ್ತರವಾಗುವ ಸಂದೇಶಗಳು ಮೊದಲಾದವು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುತ್ತದೆ. ನಡುನೀರಿನ ಟ್ರಾಫಿಕ್ ನಲ್ಲಿ ಸಿಲುಕಿದ ಆಟೋದಲ್ಲಿದ್ದ  ಚಂದ್ರಹಾಸನನ್ನು ಮತ್ತು ಆತನ ಜೊತೆಗಿದ್ದ ಸಹ ಪ್ರಯಾಣಿಕ ಕ್ಯಾನ್ಸರ್ ಪೇಷೆಂಟ್ ಸಂತೋಷನ್ ಇಬ್ಬರನ್ನೂ ಉದಾರ ಮನಸ್ಸಿನ ಆಟೋ ಡ್ರೈವರ್ ಹತ್ತಿರದ ಸ್ಲಂಗೆ ಕರೆದೊಯ್ದಾಗ ಹಸಿವಿನಿಂದ ಕಂಗೆಟ್ಟಿದ್ದ ಆ ಮೂವರಿಗೂ ಅಲ್ಲಿದ್ದ ತಾಯಿಯೊಬ್ಬಳು ರೊಟ್ಟಿ ನೀಡಿ ತೋರುವ ಮಮತೆ ಆ ಸ್ಲಂನಲ್ಲಿನ ಜನರು ಇಂತಹ ಹೊತ್ತಿನಲ್ಲಿ ತೋರುವ ಮಮತೆಯನ್ನು  ಪ್ರತಿಬಿಂಬಿಸುತ್ತದೆ. ಫುಟ್ ಪಾತ್ನಲ್ಲಿನ ಅಂಗಡಿಯವರು ನೆರೆಯಲ್ಲಿ ಸಿಲುಕಿದ ಶಾಲಾ ಮಕ್ಕಳಿಗೆ ತಿಂಡಿ ಬಿಸ್ಕೆಟ್ ನೀರು ನೀಡಿ ಮಾನವೀಯತೆ ಮೆರೆಯುತ್ತಾರೆ. ಅದೇ ಗಡಿಬಿಡಿಯಲ್ಲೇ ಚಂದ್ರಹಾಸನ ಉದ್ಯೋಗದ ಬಗೆಗಿದ್ದ ದ್ವಂದ್ವ ನಿವಾರಣೆಯಾಗಿ ಒಂದೆಡೆ ಕನ್ಫರ್ಮ್ ಆಗುತ್ತದೆ. ಮೊಮ್ಮಗಳ ಮದುವೆ ನೋಡುವ ಆಸೆಯಲ್ಲಿದ್ದ ಸಹ ಪ್ರಯಾಣಿಕ ಕ್ಯಾನ್ಸರ್ ಪೇಷೆಂಟ್ ಸಂತೋಷನ್ ಆಸ್ಪತ್ರೆಗೆ ತಲುಪಿಸಿ ಚಿಕಿತ್ಸೆ ಕೊಡಿಸುವ ಚಂದ್ರಹಾಸನ ಅಂತಃಕರಣ, ನೀರನ್ನು ಹಣಕ್ಕೆ ಮಾರುವ ವ್ಯಾಪಾರ ಮಾಡಿದ್ದರಿಂದಲೇ ಇಂದು ಮಳೆಯ ಆರ್ಭಟದಲ್ಲಿ ದಾಹವಾದರೂ ಕುಡಿಯುವ ನೀರನ್ನು ದೊರಕಿಸಿಕೊಳ್ಳಲಾಗದ ದುಸ್ತರತೆ ಬಂದದ್ದು ಎನ್ನುವ ಸಂತೋಷನ್ ಇವತ್ತಿನ ಸಂದರ್ಭದಲ್ಲಿ ಶುದ್ಧ ಗಾಳಿ, ನೀರು, ಶುದ್ಧ ಆಹಾರ ಸಿಗದಿರುವುದರ ಹಿಂದೆ ನಾವೆಲ್ಲರೂ ಆತ್ಮವಿಶ್ಲೇಷಣೆ ಮಾಡಿಕೊಳ್ಳಬೇಕಾದ ಜರೂರತ್ತಿದೆ ಎನಿಸಿತು. 

ಕತೆ “ಅಲ್ಪ ವಿರಾಮ” ದಲ್ಲಿ ಪ್ರತಿಭಾವಂತ ಕಡುಬಡತನದ ಹುಡುಗಿ ಬೇಬಿ ಪಿಯುಸಿಯಲ್ಲೇ ನಾಪತ್ತೆಯಾಗುವ ಹಿಂದೆ ಆಕೆ ತನ್ನ ಪ್ರತಿಭೆಯ ಅನಾವರಣಕ್ಕೆ ಸೂಕ್ತ ಪ್ರೋತ್ಸಾಹ ನೀಡದಿರುವ ತಾಯಿ ಮತ್ತು ಅಣ್ಣ, ಮನೆಯ, ಊರಿನ ವಾತಾವರಣ ಕಾರಣ. ತಂದೆ ಸತ್ತ ಮೇಲಂತೂ ಮಗನ ಮೇಲೆಯೇ ತೀರಾ ಅವಲಂಬಿತವಾಗಿ ಮಗಳ ಸಾಮರ್ಥವನ್ನು ಕಡೆಗಾಣಿಸುವ ತಾಯಿ ಮತ್ತು ಅಣ್ಣನ ಹಿರಿತನದ ಸಾಂಸಾರಿಕ ಜವಾಬ್ದಾರಿ ಮತ್ತು ಆತನ ದಬ್ಬಾಳಿಕೆಯಿಂದ ಆಕೆಗೆ ಇರಿಸು ಮುರಿಸುಂಟಾಗಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಭಾಷಣಕ್ಕೆ ಆಯ್ಕೆಯಾಗಿ ಹೊರಟ ಬೇಬಿ ಸ್ಪರ್ಧೆಯಲ್ಲಿ ಬಹುಮಾನ ಗೆದ್ದರೂ ಸಹಾ ಊರಿಗೆ ಹಿಂದಿರುಗದೆ ನಾಪತ್ತೆಯಾಗುವಲ್ಲಿ ತನ್ನ ಸ್ವಂತ ಪ್ರತಿಭೆ ಪರಿಶ್ರಮದ ಮೂಲಕ ತನ್ನ ಜೀವನ ರೂಪಿಸಿಕೊಳ್ಳುವ ನಿರ್ಧಾರ ತೆಗೆದುಕೊಂಡು ದಿಟ್ಟತನ ತೋರುತ್ತಾಳೆ. ತವರೂರಿನಲ್ಲಿ ಹುಡುಗಿ ಕಾಣೆಯಾಗುವ ಹಿನ್ನೆಲೆಯಲ್ಲಿ ಮನೆಯವರು ಎದುರಿಸುವ ತಲ್ಲಣ ಕ್ಷೋಭೆಗಳಲ್ಲೂ ಆಕೆಯ ತಾಯಿ ಭಾಗಕ್ಕನ ಅಂತಃಕರಣ ”ಅಂಥ ಮಹಾ ದುರಂತವೇನೂ ಆಗಿಲ್ಲ” ಎಂದು ಹೇಳುವುದು. ಸಮಾಜ, ಕೆಟ್ಟ ಕಣ್ಣುಗಳು, ಪುರುಷಮೃಗಗಳು, ಎಲ್ಲವನ್ನೂ ಎದುರಿಸಲು ಮಗಳು ಬೇಬಿಯಲ್ಲಿ ಒಂದು ಶಕ್ತಿಶಾಲಿ ಕಿರಣ ಇದೆ, ಅದರೆದುರು ಲೋಕದ ಹುಲುತನಗಳೆಲ್ಲ ಸುಟ್ಟುಹೋಗುತ್ತವೆ ಎಂಬ ಭಾಗಕ್ಕನ ಧೈರ್ಯ ಪರೋಕ್ಷವಾಗಿ ತನ್ನ‌ ಮಗಳ ಕುರಿತ ನಂಬಿಕೆ, ಪ್ರಾಮಾಣಿಕತೆಯ ಪರವಾಗಿ ನಿಲ್ಲುತ್ತದೆ. 

ಅದೆಷ್ಟೋ ವರ್ಷಗಳ ನಂತರ ಬೇಬಿ ‘ವೈಖರಿ’ಯಾಗಿ ಹೆಸರಿನಲ್ಲಿ ಟಿವಿ ಚಾನೆಲ್ ವೊಂದರ ರಿಪೋರ್ಟರ್ ಆಗಿ ತವರೂರಿನ ಮನೆಮನೆಯಲ್ಲೂ ಕಾಣಿಸಿಕೊಂಡು ತಾಯಿ ಮತ್ತು ಅಣ್ಣನಿಗೆ ಭರವಸೆಯನ್ನು ಧೈರ್ಯವನ್ನು ಉಂಟು ಮಾಡುವ, ಊರಿನವರ ಹೆಮ್ಮೆ ಅಭಿಮಾನಗಳಿಗೆ ಪಾತ್ರಳಾಗುವ ಪರಿ ಅದ್ಭುತ! ಹುಡುಗಿ ಎಂದು ಆಕೆಯ ಚಟುವಟಿಕೆಗಳಿಗೆ ಬೇಲಿ ಹಾಕಿ ಉಸಿರುಗಟ್ಟಿಸಿದ್ದ ಅಣ್ಣನನ್ನು ಹಿಂದೊಮ್ಮೆ ಬೆಂಬಲಿಸಿದ್ದ ತಾಯಿ ಈಗ ಬೇಬಿ ಟಿವಿಯಲ್ಲಿ ಕಾಣಿಸಿಕೊಂಡಾಗ ಮಗನನ್ನೂ ದುಡಿದು ಹಣ ಗಳಿಸಿ ಹೆಸರು ಮಾಡಲು ಧೈರ್ಯ ನೀಡಿ ಊರು ಬಿಟ್ಟು ಹೋಗಲು ಪ್ರೋತ್ಸಾಹಿಸುತ್ತಾ ಮುಂದೆ ನಗರಕ್ಕೆ ಹೋಗುವ ಮಗನೊಂದಿಗೆ ಹೋಗದೆ ಊರಿನಲ್ಲೆ ಉಳಿಯುವ ತಾಯಿ ಎಂದಾದರೂ ಮಗಳು ಮತ್ತೆ ಮನೆಗೆ ಬರಬಹುದು ಎಂಬ ಮಮತೆಯ ಹಿಂದೆ ತವರೂರಿನ ನಂಟು ಮತ್ತು ತಾಯಿಕರುಳು ಕಾರಣವಾಗುತ್ತದೆ. 

“ಕೋಮಲ ಗಾಂಧಾರ” – ಹಿಂದೂಸ್ತಾನಿ ಸಂಗೀತದ ಒಂದು ರಾಗದ ಹೆಸರಿನ ಕತೆಯಲ್ಲಿ ಸಿನಿಮಾದ ಪೋಷಕ ಪಾತ್ರಕ್ಕೆ ಆಡಿಷನ್ ಗೆ ಬಂದಾಗ ಆಡಿಷನ್ ನಲ್ಲಿ ಡೈಲಾಗ್ ಹೇಳಬೇಕಾದ ಪಾತ್ರಗಳ ಹೆಸರು ಇವು. ಆಡಿಷನ್ ಗೆ ಬಂದ ಈ ಇಬ್ಬರೂ ಅದರಲ್ಲಿ ಆಯ್ಕೆ ಪ್ರಕಟವಾಗುವ ಮೊದಲೇ ಒಂದಷ್ಟು ಮಾತಾಡುತ್ತಲೇ ಸ್ನೇಹಿತರಾಗುವುದು, ಅವರಿಬ್ಬರ ಸಂಭಾಷಣೆಯಲ್ಲಿ  ದರ್ಶಿನಿಯಲ್ಲಿ ಕೆಲಸ ಮಾಡುವ ಗಾಂಧಾರ ಪ್ರಸ್ತಾಪಿಸುವ ನಗರದೊಳಗಿನ  ದೇಸಿ ಮತ್ತು ಪರದೇಸಿ ಭಾವದ ಅನುಭವಗಳು, ವಾಸ್ತವದ ನೈಜತೆ ಮತ್ತು ಆಡಂಬರದ ನಕಲಿ ವ್ಯಕ್ತಿತ್ವಗಳು ಮೊದಲಾದ ಮಾತುಕತೆಗಳು ಅವರಿಬ್ಬರನ್ನು ಮತ್ತಷ್ಟು ಆತ್ಮೀಯರನ್ನಾಗಿಸುತ್ತದೆ. ಕೋಮಲ ತನ್ನ ಬಗ್ಗೆ ಡಿಟಿಪಿ ಆಪರೇಟರ್ ಎಂದು ಹೇಳುವಾಗ ‘ಯಾರ್ಯಾರೋ ಯಾರ್ಯಾರಿಗೋ ಬರೆದಿರೋ ಅರ್ಜಿ, ರಾಜಿನಾಮೆ, ತಲಾಖ್ ಪತ್ರ, ಕವಿತೆ, ಟೆಂಡರ್ ನೋಟೀಸ್ ಇವನ್ನೆಲ್ಲ ಒಂದೂ ತಪ್ಪಿಲ್ಲದೆ ಟೈಪ್ ಮಾಡೋದು ಮತ್ತು ಯಾರದೋ ಸಂಭಾಷಣೆಯನ್ನು ತಪ್ಪಿಲ್ಲದಂತೆ ಹೇಳುತ್ತ ಅಭಿನಯಿಸೋದು ಎರಡೂ ಒಂದೇ’ ಎಂಬ ಸಾಲುಗಳಲ್ಲಿ ಜೀವನದ ಏಕತಾನತೆ ಯಾಂತ್ರಿಕತೆ ಪ್ರತಿಬಿಂಬಿತವಾಗಿದೆ.  ಕೋಮಲ ಪಾತ್ರದ ಕೇತಕಿಗಿರುವ ವಿಶೇಷ ಕಣ್ಣಿನ ಬಗ್ಗೆ ಪ್ರಸ್ತಾಪವಿದೆ. ಜನರ ಮುಖ ಅಷ್ಟೇ ಅಲ್ಲ, ವ್ಯಕ್ತಿಯ ಹಿಂತಲೆ, ಕಿವಿಯ ಆಕಾರ, ಕೂದಲಿನ ವಿನ್ಯಾಸದಲ್ಲೇ ಆಕೆ ವ್ಯಕ್ತಿಯ ಗುಣ ಸ್ವಭಾವ ವಿಶೇಷತೆಗಳನ್ನು ಗುರುತಿಸುವುದು. ಬಸ್ ಸ್ಟಾಪಿನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಕೂತ ಹಿರಿಯ ಮಹಿಳೆಯೊಬ್ಬರ ಪರಿಚಯವೂ ಈ ಕಾರಣಕ್ಕಾಗಿಯೇ ಆಗುತ್ತದೆ. ಆ ಮಹಿಳೆಯ ಪತಿ ಶಿಕ್ಷಕರಾಗಿ ತುಂಬಾ ಹೆಸರು ಮಾಡಿ ತೀರಿಕೊಂಡ ನಂತರ ಅವರ ಹೆಸರನ್ನು ವಿದ್ಯಾರ್ಥಿಗಳು ರಸ್ತೆಯೊಂದಕ್ಕೆ ನಾಮಕರಣ ಮಾಡಿದ್ದು ಅಕ್ಕಪಕ್ಕದವರಿಂದ ತಿಳಿದು ಅದನ್ನು ನೋಡಲು ಬಂದು ಕೂತು ಕೊನೆಗೆ ಗಂಡನ ಹೆಸರಿರುವ ಆ ರಸ್ತೆ ಅವರಿಗೆ ಆಪ್ತವಾಗಿಬಿಟ್ಟ ಪರಿ, ಇಳಿವಯಸ್ಸಿನಲ್ಲಿ ಸಂಗಾತಿಯನ್ನು ಕಳೆದುಕೊಂಡಾಗ ಆಗಬಹುದಾದ ಖಾಲಿತನ ಒಂದಷ್ಟು ತುಂಬಿಕೊಂಡು ನೆಮ್ಮದಿ ನೀಡುವ ಕ್ಷಣಗಳು ಎನಿಸುತ್ತದೆ. ಆಕೆ ಹೇಳುವ ಮಾತು ‘ನಮ್ಮಂತವರಿಗೆ ಈ ವಯಸ್ಸಲ್ಲಿ ಕಣ್ಣಾಚೆ ಇರೋದ್ರ ಬಗ್ಗೆ ಆಸಕ್ತಿನೇ ಇರೋದಿಲ್ಲ,  ಈಗ ನಿನ್ನ ವಯಸ್ಸಲ್ಲಿ ಕಣ್ಮುಂದೆ ಕಾಣೋದಕ್ಕಿಂತ ಕಣ್ಣಾಚೆ ಇರೋ ವಿಷಯಗಳೇ ನಿಮ್ಮನ್ನು ಮುಂದಕ್ಕೆ ತಳ್ಳೋದು’ ಎಂಬಲ್ಲಿ ಯೌವ್ವನ ಮತ್ತು ವೃದ್ಧಾಪ್ಯದ ನಡುವಿನ ವ್ಯತ್ಯಾಸವನ್ನು ತಿಳಿಸುತ್ತದೆ. ಮತ್ತೆ ಅದು ಸಹಜವೂ ಹೌದು. ‘ಎಕ್ಚುವಲೀ’  ಎಂಬ ಪದವನ್ನು ಎಲ್ಲೆಡೆ ಉಪಯೋಗಿಸುವಾಗ ಆಗುವ ಎಡವಟ್ಟುಗಳು ವಾಸ್ತವ ಜೀವನದ ವಿಡಂಬನೆಯಾಗಿ ಕಾಣುತ್ತದೆ. ‘ನಿಜ ಹೇಳಬೇಕಂದ್ರೆ..’ ಅಂತ ಶುರು ಮಾಡಿದರೆ ಈತನಕದ್ದು ಮತ್ತು ಇದರ ಮುಂದಿನದ್ದು ಎಲ್ಲವೂ ನಿಜವಲ್ಲದ್ದು ಎನ್ನುವ ವಿಶ್ಲೇಷಣೆಯಿಂದ ಎಕ್ಚುವಲೀ ಪದ ಬಳಕೆ ಬಗ್ಗೆ ಸೂಕ್ಷ್ಮವಾಗಿ ಯೋಚಿಸುವಂತೆ ಮಾಡುತ್ತದೆ.

“ಒಳಾಂಗಣ” – ಕತೆಯಲ್ಲಿ ವೃದ್ಧ ತಂದೆ ತಾಯಿಗಳು ವಿಶಾಲ ಕೋಣೆಗಳಿರುವ ದೊಡ್ಡ ಮನೆಯನ್ನು ತಮ್ಮ ಮಗ ಸೊಸೆ ಮತ್ತು ಮೊಮ್ಮಗಳು ವರ್ಷಕ್ಕೊಮ್ಮೆಯಾದರೂ ಬಂದಾಗ ಪಟ್ಟಣದಲ್ಲಿ ಬೆಂಕಿಪೊಟ್ಟಣದಂಥ ಮನೆಯಲ್ಲಿ ಉಸಿರು ಕಟ್ಟಿದಂತೆ ಮಲಗುವ ಅವರು ಇಲ್ಲಾದರೂ ಕಾಲು ಚಾಚಿ ಆರಾಮಾಗಿ ಮಲಗಿ ನದಿ ಮತ್ತು ನದಿತೀರಗಳು ದೋಣಿಯನ್ನು ನೋಡ್ತಾ ಶುದ್ಧಗಾಳಿ ಕುಡಿದು ಆರಾಮಾಗಿರಲಿ ಎಂಬ ಉದ್ದೇಶದಿಂದ ಕಟ್ಟಿಸಿ ಮನೆಯನ್ನು ಅಚ್ಚುಕಟ್ಟಾಗಿರಿಸುವ ವಯಸ್ಸಿಲ್ಲದಿದ್ದರೂ ಸಹಾ ಇಬ್ಬರೇ ಮನೆಯ ಉಸ್ತುವಾರಿ ನೋಡಿಕೊಳ್ಳುವ ಅವರ ಕಾಳಜಿ ಬಹುಶಃ ವೃತ್ತಿಗಾಗಿ ತಂದೆತಾಯಿಗಳಿಂದ ದೂರವಿದ್ದ ಎಲ್ಲಾ ಮಕ್ಕಳಿಗೂ ಅವರ ತಂದೆತಾಯಿಗಳು ತೋರುವ ಕಾಳಜಿಯನ್ನು ಬಿಂಬಿಸುತ್ತದೆ. ಇಂತಹ ವಿಶಾಲ ಮನೆಯೊಂದನ್ನು ಸಿನಿಮಾ ಶೂಟಿಂಗ್ ಗಾಗಿ ಕೆಲವು ದಿನಗಳ ಕಾಲ ಬಾಡಿಗೆ ಕೊಡುವಾಗ ಹೆತ್ತವರಿಗೆ ಆಗುವ ತಳಮಳ ನಮ್ಮ ಮನಸ್ಸನ್ನು ಆರ್ದ್ರಗೊಳಿಸುತ್ತದೆ. 

ಮನೆಯೊಡೆಯ ಭಗೀರಥರು ಊರವರಿಗೆಲ್ಲಾ ತಮ್ಮ ಮನೆಯಲ್ಲಿ ಶೂಟಿಂಗ್ ನಡೆಯುವ ವಿಷಯವನ್ನು ಹೆಮ್ಮೆಯಿಂದ ಹೇಳ್ಕೊಂಡು ಬಂದಿರ್ತಾರೆ. ಹಾಗೆಂದೇ ಶೂಟಿಂಗ್ ನೋಡ್ಲಿಕ್ಕೆ ತುಂಬಾ ಜನರೂ ಬಂದಿರ್ತಾರೆ. 

ಎಲ್ಲಿಂದೆಲ್ಲಿಗೋ ಎಲೆಕ್ಟ್ರಿಕ್ ವೈರುಗಳನ್ನೆಳೆದು, ಕ್ಯಾಮೆರಾಗಳನ್ನಿಟ್ಟು, ದೊಡ್ಡ ದೀಪಗಳನ್ನು ಹೊತ್ತಿಸಿ, ನಟನಟಿಯರು, ನಿರ್ದೇಶಕ, ಕ್ಯಾಮೆರಾಮನ್, ಅವರ ಸಹಾಯಕರು ಮೊದಲಾದವರ ದಡಬಡ ಓಡಾಟ, ಇದರ ನಡುವೆಯೇ ನಟೀಮಣಿಯೊಬ್ಬಳು ನಿರ್ಮಲಕ್ಕನ ಸೊಸೆಯ ರೂಮಿನ ಮಂಚದ ಮೇಲೆ ಸುಸ್ತಾಗಿ ಮಲಗಿದ್ದಾಗ ಆಕೆಯನ್ನು ಕಂಡು ಸೊಸೆಯನ್ನೇ ಕಂಡಂತೆ ಮಮತೆ ತೋರಿಸುವ ನಿರ್ಮಲಕ್ಕನಿಗೆ “ಇಲ್ಲಿ ಕಾಣೆ ಮೀನು ಫೇಮಸ್ಸಂತೆ, ನೀವ್ ಮಾಡಲ್ವ?” ಎಂದು ನಟೀಮಣಿ ಆಪ್ತಳಾಗುವುದು , ಅಡುಗೆಮನೆಯ ಮೇಲ್ ಖಾನೆಯಲ್ಲಿದ್ದ ಡಬ್ಬಿ ತೆಗೆದು ಅದರಲ್ಲಿದ್ದ ರವೆ ಲಾಡು ಅಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರಿಗೂ ಹಂಚುವುದು ಕಂಡಾಗ ವೃದ್ಧರಾಗಿದ್ದ ಭಗೀರಥರು ಮತ್ತು ನಿರ್ಮಲಕ್ಕ ಶೂಟಿಂಗ್ ಕಾರಣದಿಂದ ಮನೆ ಅಸ್ತವ್ಯಸ್ತವಾಗುತ್ತಿದ್ದರೂ ಅದರಿಂದ ಮನಸ್ಸಿಗೆ ಕಸಿವಿಸಿಗೊಂಡರೂ ಮಗ ಸೊಸೆ ಮೊಮ್ಮಗಳಿಗೆ ತೋರುವ ಪ್ರೀತಿ ಮಮತೆಯನ್ನೇ ಅಲ್ಲಿರುವವರಿಗೆ ತೋರುವಲ್ಲಿ ಅವರಿಬ್ಬರ ಮಧುರ ಮನಸ್ಸಿನ ಒಳಾಂಗಣವೇ ಇಲ್ಲಿ ನಿಜವಾಗಿ  ನಮ್ಮನ್ನು ಸೆಳೆದಿಟ್ಟುಕೊಳ್ಳುತ್ತದೆ. 

ಇಂತಹ ಸಮಯದಲ್ಲಿ ಮನೆಯವರು ಮತ್ತು ಮಕ್ಕಳ ಮನೆಯೊಳಗಿನ ಕೋಣೆ ಅಂಗಳ ಎಲ್ಲವೂ ಯಾರದ್ದೋ ಓಡಾಟ ಮತ್ತು ಕೆಲಸಗಳಿಗೆ ಉಪಯೋಗವಾಗುವಾಗ ಮನೆಯ ಖಾಸಗಿತನ ಈಗ ಬೀದಿಯಲ್ಲಿ ಹರಾಜಿಗಿಟ್ಟಂತಹ ಗಂಭೀರ ಸ್ಥಿತಿಗೆ ತಿರುಗಿ ಮನೆಯವರು ಮಾನಸಿಕವಾಗಿ ಕುಸಿದುಹೋಗುವಂತಾಗುವ ದೃಶ್ಯ ನಮ್ಮ‌ ಕಣ್ಮುಂದೆ ಬಂದು ಓದುಗನೊಳಗೆಯೇ ವೇದನೆಯೊಂದು ಆವರಿಸಿಕೊಳ್ಳುವಂತೆ ತುಂಬ ಸೂಕ್ಷ್ಮವಾಗಿ ಭಾವನೆಗಳನ್ನು ಪಾತ್ರಗಳ ಮೂಲಕ ಹೊಮ್ಮಿಸುತ್ತಾರೆ ಲೇಖಕರು‌. 

ಇಂತಹ ಗಡಿಬಿಡಿಯಲ್ಲೇ ಶೂಟಿಂಗ್ ಮುಗಿದು ಶೂಟಿಂಗ್ ಜನ‌ ಮತ್ತು ಅದನ್ನು ನೋಡಲು ಬಂದಿದ್ದ ಊರ ಜನ ಎಲ್ಲರೂ ಹೊರಟು ಹೋದ ನಂತರದ ರಾತ್ರಿಯಲ್ಲಿ ತರುಣ ವಯಸ್ಸಿನ ಪಾತ್ರಧಾರಿಯೊಬ್ಬ ಜ್ವರ ಪೀಡಿತನಾಗಿ ನಡುರಾತ್ರಿಯಲ್ಲಿ ಅಂಗಳದ ಮೂಲೆಯಲ್ಲಿ ಮಲಗಿ ಅರೆನಿದ್ರೆಯಲ್ಲಿ ಬಡಬಡಿಸುವಾಗ ಇಬ್ಬರೂ ವೃದ್ಧರೂ ತಕ್ಷಣವೇ ತಣ್ಣೀರಿನ ಹಣೆಪಟ್ಟಿ ಹಾಕಿ ಪಕ್ಕ ಕೂತು ಹಣೆ ಸವರಿ ನೀರು ಮತ್ತು ಕಷಾಯ ಕುಡಿಸಿ ತಮ್ಮ ಮಗನಂತೆಯೇ ಅಕ್ಕರಾಸ್ಥೆ ತೋರುವುದಷ್ಟೇ ಅಲ್ಲ ತಂದೆತಾಯಿಯರಿಂದ ದೂರವಿದ್ದ ಆ ಪಾತ್ರಧಾರಿಯ ಹೃದಯವೂ ಆ ಕ್ಷಣದಲ್ಲಿ ತನ್ನ ಹೆತ್ತವರನ್ನೇ ಈ ದಂಪತಿಗಳಲ್ಲಿ ಕಂಡ ನೆಮ್ಮದಿಯ ವಿವರಗಳು ನಮ್ಮೊಳಗನ್ನು ಮಿಡಿಯುತ್ತದೆ. ಈ ಮನೆ ನೀಟಾಗಿ ಜೋಡಿಸಿರುವ ತರಹೇವಾರಿ ವಸ್ತುಗಳಿರುವ ಒಳಾಂಗಣವಲ್ಲ ಬದಲಿಗೆ ಆ ವೃದ್ಧರ ಮನದ ಕರುಣೆ ಮಮತೆ ಅಕ್ಕರೆ ಆಸ್ಥೆಗಳೇ ನಿಜವಾದ ಒಳಾಂಗಣ ಎಂದು. ನಿಜಕ್ಕೂ ಮನಸ್ಸಿಗೆ ಆಪ್ತವಾಗುವ ಹಾಗೆ ಕತೆಯ ವಿವರದ ಪ್ರತಿ ಎಳೆಯನ್ನು ನೇಯ್ದಿದ್ದಾರೆ ಲೇಖಕರು. 

ಈ ಕತೆಯಲ್ಲಿ ನಗು ಉಕ್ಕಿಸುವ ಸಂಗತಿಯೆಂದರೆ ಮನೆಯೊಡೆಯ ಭಗೀರಥರು ತಾವು ಹೇಳಿದ ಹಾಗೆ ಕೇಳುವ ನಡೆದುಕೊಳ್ಳುವ ತಮ್ಮ ಪತ್ನಿ ನಿರ್ಮಲಕ್ಕನವರಿಗೆ ಹೆದರುತ್ತಿದ್ದದ್ದು ಹೀಗೆ….ಅದೆಂದರೆ ನಿರ್ಮಲಕ್ಕ ಕನ್ನಡಕ ಹಾಕಿಕೊಂಡು ಮಾತಾಡಿದಾಗೆಲ್ಲಾ ಭಗೀರಥರಿಗೆ ಬಹುಶಃ ನಿರ್ಮಲಕ್ಕನಲ್ಲಿ ಒಂದು ಖಡಕ್ ವ್ಯಕ್ತಿತ್ವವನ್ನು ಕಾಣುವಂತೆ ಭಾಸವಾಗುತ್ತಿತ್ತೇನೋ ಅಂತಹ ಸಮಯದಲ್ಲಿ ಅಂದರೆ ತಮ್ಮ ಮಾತನ್ನು ಗಂಡ ಕೇಳಬೇಕು ಎಂದೇ ನಿರ್ಮಲಕ್ಕ ಕನ್ನಡಕ ಹಾಕಿಕೊಂಡು ಮಾತಾಡುವುದು ಜೋರು ಬಾಯಿಯ ಭಗೀರಥರು ಚುಪ್ಪೆಂದು ತಲೆಯಾಡಿಸುವುದು ತಮಾಷೆಯಾಗಿ ಕಾಣುತ್ತದೆ. ನಗು ಉಕ್ಕಿಸುತ್ತದೆ. ಒಮ್ಮೆ ಭಗೀರಥರು ನಿರ್ಮಲಕ್ಕನ ಕನ್ನಡಕ ಎತ್ತಿಟ್ಟು ತಮ್ಮ ನಿರ್ಧಾರಕ್ಕೆ ಭಂಗ ಬರದಂತೆ ನೋಡಿಕೊಳ್ಳುವ ಜಾಣ್ತನವನ್ನೂ ಮೆರೆಯುವುದು ನವಿರಾದ ಹಾಸ್ಯದ ಹೊನಲು ಹರಿಯುವಂತೆ ಮಾಡುತ್ತದೆ.

“ಬಣ್ಣದ ಬಾನುಲಿ” ಯ ಕತೆಯಲ್ಲಿ ಶಾಪಿಂಗ್ ಮಳಿಗೆಯ ಮತ್ತು ಇನ್ನಿತರ ಬೃಹತ್ ಕಟ್ಟಡಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುವ ಪೇಂಟರ್ ಹುಡುಗರ ಜೀವನ ಕುರಿತು ಬರೆಯುತ್ತಾರೆ. ರಾಜ್ಯದ ಬೇರೆ ಬೇರೆ ಕಡೆಯಿಂದ ವೃತ್ತಿಬದುಕಿಗಾಗಿ ದುಡಿಯಲು ತಮ್ಮ ತವರಿನ ನೆಲದ ನಂಟು ಕಡಿದುಕೊಂಡು ಬೆಂಗಳೂರಿಗೆ ವಲಸೆ ಬರುವ ಜನರ ಜೀವನಕ್ಕೆ ಕನ್ನಡಿ ಹಿಡಿದಂತಿದೆ ಈ ಕತೆ. ವಲಸೆ ಬಂದ ಜನರು ಹೊಸದರಲ್ಲಿ ಪರದೇಸಿ ಭಾವ ಅನುಭವಿಸುತ್ತಲೇ ತಮ್ಮೂರಿನ ನದಿ , ಮಾಸ್ತರರು, ಸಿನಿಮಾ ಟಾಕೀಸು, ಪ್ರೇಮವಾಗಿದ್ದ ನೆರೆಮನೆಯ ಹುಡುಗಿ ಪ್ರತಿಯೊಂದರ ಜೊತೆಗಿನ ಒಡನಾಟದ ಆಪ್ತತೆಯನ್ನು ಬೆಂಗಳೂರಿನಂತಹ ಮಹಾನಗರದ ವೇಗದ ಮತ್ತು ಗಡಿಬಿಡಿಯ ಜೀವನದಲ್ಲೂ ನೆನಪಿಸಿಕೊಳ್ಳುವ ಬಗೆಯನ್ನು ಅತ್ಯಂತ ಗಾಢವಾಗಿ ಚಿತ್ರಿಸಿದ್ದಾರೆ.  

ಬೃಹತ್ ಕಟ್ಟಡದ ಗೋಡೆ ಕಿಟಕಿಗಳಿಗೆ ಬಣ್ಣ ಹಚ್ಚುವಾಗ ಸ್ವಲ್ಪ ಕಾಲನ್ನು ಆಚೀಚೆ ಮಾಡಿದರೂ ಆಯತಪ್ಪಿ ಬಿದ್ದು ಕ್ಷಣದಲ್ಲೇ ಸಾವು ಸಂಭವಿಸಬಹುದಾದ ಸ್ಥಿತಿಯಿದ್ದರೂ ಅಂತಹ ಭಯವನ್ನು ಮೀರುತ್ತಲೇ ತನ್ನೂರಿನ ನೆನಪುಗಳ ಸವಿಯನ್ನು ಅನುಭವಿಸುತ್ತಾ , ಹಾಡುಗಳನ್ನು ಹೇಳುತ್ತಾ ಮತ್ತು ಕೇಳುತ್ತಾ ತಮ್ಮ ಕರ್ತವ್ಯದೆಡೆಗೆ ಗಮನ ಹರಿಸುವ ಈ ಹುಡುಗರಿಗೆ ತುಂಬಾ ಹತ್ತಿರದಲ್ಲಿ ಕಾಣುವ ಆಕಾಶ , ದೂರವಾದ ನಗರದ ರಸ್ತೆ ಮತ್ತು ಮನೆಗಳು ಅದರ ವಿವರಗಳು ನಮ್ಮನ್ನು ಸೆಳೆಯುತ್ತವೆ. 

‘ಶೂನ್ಯದಲ್ಲೊಂದು ಶೂನ್ಯವನ್ನು ಸೃಷ್ಟಿಸುವಂತೆ, ಎಂದೆಂದೂ ಮುಗಿಯದ ಈ ಬೆಂಗಳೂರಿನ ವಿಮಾನ ನಿಲ್ದಾಣದ ದಾರಿಯಲ್ಲಿರುವ ಬೃಹತ್ ಗೋಡೆಯ ಮೇಲೆ ಕೆನೆ ಬಣ್ಣದ ಪದರುಗಳನ್ನು ಬ್ರಶ್ ನಿಂದ ಎಳೆದೂ ಎಳೆದೂ ಆತ ಆ ಶೂನ್ಯದಲ್ಲೇ ತನಗೆ ಬೇಕಾದ ದೃಶ್ಯವನ್ನು ಕಾಣುತ್ತಾ ಅನುಭವಿಸಬಲ್ಲನಾಗಿದ್ದ. ‘ಇಂತಹ ಸಂದರ್ಭದಲ್ಲೇ ತಮ್ಮೂರಿನ ಅಘನಾಶಿನಿ, ಸ್ವಪ್ನ ಸದೃಶ ಮೂಡುಗಾಳಿ, ಅಸಂಖ್ಯ ಏಡಿಗಳ ಉಸುಕಿನ ತೀರ, ಟೂರಿಂಗ್ ಟಾಕೀಸು ಎಲ್ಲವನ್ನೂ ಪೇಂಟ್ ಮಾಡುವಾಗಲೇ ಕಾಣುತ್ತಾ ಹೋಗುವ ಸಂದರ್ಭವನ್ನು ಓದಿಯೇ ಅನುಭವಿಸಬೇಕು. ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಭಾವಗಳು ಸಂಗತಿಗಳು ಬಹು ಆಳವಾದ ಗಹನವಾದ ಅನುಭವಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ.  ರುಕ್ಮಾಂಗದ ಊರು ಬಿಟ್ಟು ಬರುವಾಗ ಆತನ ಮಾಸ್ತರು ಅವನ ಕಿಸೆಗೆ ನೂರು ರೂಪಾಯಿ ತುರುಕಿ ತಲೆಸವರಿ ಕಳಿಸಿದ ಅವರ ಅಂತಃಕರಣ, ಜೊತೆಯ ಕೆಲಸಗಾರರು ಆಕ್ಷೀ ಎಂದು ಸೀನುವಾಗ “ಸ್ವಪ್ನಾಕ್ಷೀ ” ಎಂಬ ತನ್ನೂರಿನ ನೆರೆಮನೆಯ ಹುಡುಗಿಯ ನೆನಪು….ಮೊದಲಾದವು ಗಳಲ್ಲೇ ಮುಳುಗಿ ಆಕಾಶಕ್ಕೆ ಬಣ್ಣ ಹೊಡೆಯುವಂತೆ ಕಾಣುವ ರುಕ್ಮಾಂಗದ ಮಾಲೀಕರ ನಿರ್ದೇಶನಕ್ಕಿಂತ ಹೆಚ್ಚು ಎತ್ತರದ ಮಾಳಿಗೆಯ ಮೇಲೆ ಹೆಜ್ಜೆಯಿರಿಸಿ ಹೋದಂತಹ ಆತಂಕದ ಸಂದರ್ಭದಲ್ಲಿ ಕೆಳಗೆ ನೆಲದ ಮೇಲೆ ಪೋಲೀಸು ಅಗ್ನಿ ಶಾಮಕ ದಳವೋ ತುರ್ತುಪರಿಸ್ಥಿತಿ ನಿಭಾಯಿಸುವ ದಳವೋ ಅವನನ್ನು ಕೆಳಗಿಂದ ಸುತ್ತುವರಿದು ಟಾರ್ಚ್ ಲೈಟ್ ಬಿಟ್ಟು ಧ್ವನಿವರ್ಧಕದ ಮೂಲಕ ಎಚ್ಚರಿಸುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಕೊನೆಯಲ್ಲಿ ನಮ್ಮ ಮನಸ್ಸು ಆರ್ದ್ರ ಗೊಳ್ಳುವ ಕಣ್ಣು ತೇವಗೊಳ್ಳುವ ಸಂದರ್ಭ ಓದಿದಾಗಲೇ ಅನುಭವಕ್ಕೆ ಬರುವುದು. ಮನುಷ್ಯ ಸಂವೇದನೆಗಳ ಮಿಡಿತವನ್ನು ನುಡಿಸುವ ಕಲೆಗಾರ ಜಯಂತ್ ಅವರ ಕವಿಹೃದಯದ ಸೂಕ್ಷ್ಮತೆಗಳು ರೂಪಕಗಳು ಇಲ್ಲಿರುವ ಎಲ್ಲಾ ಕತೆಗಳಲ್ಲೂ ಅನುರಣನಗೊಂಡಿವೆ.

ಸಾಮಾನ್ಯವಾಗಿ ಸಂಜೆಯ ಸಮುದ್ರ ವಿಹಾರಕ್ಕೆ ಬರುವ ಗೋಕರ್ಣದ ನಾಗರಿಕರು ಈ ರುದ್ರಪಾದದತನಕ ಬಂದು ಮರಳಿ ಹೋಗುತ್ತಾರೆ. ಇಲ್ಲಿ ಥಟ್ಟನೆ ಗೋಚರವಾಗುವ ಹೊಸ ಗುಡ್ಡಗಳಿಗೂ ಮತ್ತು ಅವರು ಮರಳುವ ಕ್ಷಣಕ್ಕೂ ಏನೋ ನಂಟಿದೆ. ತಮ್ಮ ನಿತ್ಯದ ನೆರೆಹೊರೆ ಊರು ಕೇರಿ ನಂಟು ಪಾಕಗಳ ಪರಿಚಿತ ಸೂಕ್ಷ್ಮ‌ನೋಟ ಸುಳಿವಿನಲ್ಲಿದ್ದವರಿಗೆ ಇಲ್ಲಿ ಒಮ್ಮೆಗೇ ಅವುಗಳಾಚೆ ಹೋದಂಥ ಭಯವೂ , ನಿತ್ಯದ ಹೊಸ ಆವೃತ್ತಿಯ ಕ್ಷಣವೂ ಒಟ್ಟಿಗೆ ಕವಿಯುತ್ತಿತ್ತು…. “ಚಾರ್ ಮಿನಾರ್ ” ಕತೆಯ ಆರಂಭದಲ್ಲಿ ಹೀಗೆ ಬರುವ ಈ ಸಾಲುಗಳು ನಮ್ಮ ಮೂಲ ನೆಲೆಯನ್ನೂ ಅದರಾಚೆಗಿನ ಲೋಕವನ್ನು ಕಾಣಿಸುತ್ತಲೇ ಅವೆರಡರ ನಡುವಿನ ಒಂದು ಮಿತಿಯ ಪರಿಧಿಯನ್ನು ನಾವು ಹಾಕಿಕೊಂಡು  ಮೂಲದ ಕೇಂದ್ರದೊಳಗೆ ಆದಷ್ಟೂ ಬಂದು ಮತ್ತೆ ಮತ್ತೆ ಸ್ಥಾಪಿತಗೊಳ್ಳುವ  ಸ್ಥಾಯಿಬಿಂದುವಿನಂತೆ ನಮ್ಮನ್ನು ನಾವು ಹೊಸ ಅಲೆಯಲ್ಲಿ ಕೊಚ್ಚಿಹೋಗದೆ ನಮ್ಮ ಹೆಜ್ಜೆ ಗುರುತನ್ನು ಹಿಡಿದು ಮತ್ತೆ ನಮ್ಮ‌ ನೆಲದ ನಂಟಿನೊಳಗೆ ನಿರಾಳವಾಗಿ ಉಸಿರಾಡುವಂತೆ ಮಾಡುತ್ತವೆಯೇನೋ ಎನಿಸಿತು. ಜೀವನ ತೆರೆದಿಡುವ ಅದೆಷ್ಟು ಬಾಹ್ಯದ ಅವಕಾಶಗಳಲ್ಲಿ ನಾವು ತೆರೆದುಕೊಂಡು ಅಗಾಧ ಎತ್ತರಕ್ಕೆ ಬೆಳೆದರೂ ಸಹಾ ಎಲ್ಲೋ ಅಂತರಂಗದ ಮೂಲೆಯ ಆಪ್ತತೆಯೊಳಗೆ ಮುದುಡಿ ಸುರಕ್ಷಿತವಾಗಿರಿಸಿಕೊಳ್ಳುವ ಕ್ರಿಯೆಗಳೂ ಒಟ್ಟಿಗೆ ನಡೆಯುತ್ತಿರುತ್ವೇನೋ ಎಂಬೆಲ್ಲಾ ಹೊಸ ಹೊಸ ಚಿಂತನೆಗಳು ಹೊಳಹನ್ನು ಜಯಂತರ ಎಲ್ಲಾ ಕತೆಗಳೂ ಓದುಗರಿಗೆ ಉಂಟು ಮಾಡುತ್ತವೆ. 

ಇಲ್ಲಿ ಬರುವ ನೈರುತ್ಯ ಗಾಂವ್ಕರ ರೂರಲ್ ಮ್ಯಾನೇಜ್ಮೆಂಟ್ ಪದವಿ ಪಡೆದು ಸಮುದಾಯಕ್ಕೆ ಉಪಯುಕ್ತವಾದ ಕೆಲಸ ಅಥವಾ ಯೋಜನೆಗಳನ್ನು ಹಾಕಿಕೊಂಡು ಬೀಡಿ ಕಾರ್ಮಿಕರ ಬಗ್ಗೆ ಈಚಲಕರಂಜಿಯ ಕೈಮಗ್ಗದ ಸೀರೆ ಕಾರ್ಮಿಕರ ಬಗ್ಗೆ ಹೀಗೆ ಅಧ್ಯಯನಗಳನ್ನು ಮಾಡುತ್ತಾ ಸಾಮಾಜಿಕ ಕಾಳಜಿ ಕಳಕಳಿಯಿರುವ ತರುಣ. ಆತನ ವೃದ್ಧ ತಂದೆ ತಾಯಿಗಳು ಮಗ ಎಂದಾದರೂ ದುಡಿದು ಹಣ ಸಂಪಾದಿಸುತ್ತಾನೆ ಎಂಬ ಆಸೆಯನ್ನು ಕೊನೆಗೆ ಬಿಟ್ಟು ತಮ್ಮ ಜೀವನ ನಿರ್ವಹಣೆಗೆ ಅಂಗಡಿ ಕಟ್ಟಿಸಿ ಬಾಡಿಗೆ ಕೊಡುವುದು ಸಮಾಜ ಸೇವೆಗೆ ಹೊರಟ ಮನೆಯ ಕಡೆ ಆಸ್ತಿಪಾಸ್ತಿಯಿರದ ಎಲ್ಲಾ ಯುವಕ ಯುವತಿಯರ ತಂದೆ ತಾಯಿಯರ ಪಾಡೂ ಹೀಗೆ ಎನಿಸಿತು.  ಅವನದೇ ಆಸಕ್ತಿಯಿರುವ ಪುನರ್ವಸು ನೈರುತ್ಯನ ಪತ್ನಿಯಾಗಿ ಅವನಿಗೆ ಬೆಂಬಲವಾಗಿ ನಿಲ್ಲುವುದು ಅವನ ಜೊತೆ ತಾನೂ ಸೇರಿ ಟ್ರೇನಿನಲ್ಲಿ ಸಣ್ಣ ಪುಟ್ಟ ಕೆಲಸ ಮಾಡಲು ಊರಿಂದ ಓಡಿ ಬಂದ ಮಕ್ಕಳನ್ನು ಕರೆತಂದು ವಿದ್ಯಾಭ್ಯಾಸ ನೀಡುವುದು ಹೀಗೆ ಸಾಮಾಜಿಕ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟುಕೊಂಡುಕೊಳ್ಳುವವರಿಗೆ ನಿಜಕ್ಕೂ ಮಾದರಿ.  

ಯಾರ ಕೈಕೊಳಗೂ ದುಡಿಯುವುದಿಲ್ಲ ಎಂಬ ಶಪಥವನ್ನು ಮುರಿದು ಬೆಂಗಳೂರಿನ ಬೀದಿ ಮಕ್ಕಳ ಪುನರ್ವಸತಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಕೆಲವೇ ದಿನಗಳಲ್ಲಿ ಅಲ್ಲಿ ನಡೆಯುವ ತೋರಿಕೆಯ ಸೇವೆಗಳಿಗಾಗಿ ಹಣಕಾಸಿನ ಲಾಭಕ್ಕಾಗಿ ಅಲ್ಲಿನ ಮಕ್ಕಳನ್ನು ಬಳಸಿಕೊಳ್ಳುವ ಮೊದಲಾದ ಹಗರಣಗಳು ನೈರುತ್ಯನ ಗಮನಕ್ಕೆ ಬರುವುದು ಸಮಾಜ ಸೇವೆಯ ಹೆಸರಲ್ಲಿನ ಕೆಲವು ಸಂಘ ಸಂಸ್ಥೆಗಳ ಮುಖವಾಡವನ್ನು ಬಯಲಿಗೆಳೆಯುತ್ತವೆ. ಇಲ್ಲೂ ಸ್ನೇಹಿತರಿಬ್ಬರ ಸ್ನೇಹ ದೊಳಗಿನ ನಂಬುಗೆ, ಸಲಿಗೆ, ಸರಳತೆಗಳು ಓದುಗರಿಗೆ ಆಪ್ತವಾಗುತ್ತವೆ. ನೈರುತ್ಯನ ಬಾಲ್ಯದ ಗೆಳೆಯ  ಹೇಮಚಂದ್ರ  ಉನ್ನತ ವಿದ್ಯಾಭ್ಯಾಸ ಮಾಡಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರೂ ಭಾರತದಲ್ಲಿರುವ ತನ್ನ ಗೆಳೆಯ ನೈರುತ್ಯನ ಸಮಾಜಸೇವೆಗೆ ಕೈಲಾದಷ್ಟು ಸಹಾಯ ಮಾಡುತ್ತಲೇ ಕೊನೆಗೊಮ್ಮೆ ಅತ ಅಲ್ಲಿಯ ಕೆಲಸ ತೊರೆದು ಹೈದ್ರಾಬಾದಿಗೆ ಬಂದು ನೆಲೆಗೊಳ್ಳುವ ಅವನಲ್ಲಿಗೆ ನೈರುತ್ಯ ಹೋದಾಗ ಅಲ್ಲಿನ ವೈಭವದ ಜೀವನದಲ್ಲಿ ಹೇಮಚಂದ್ರನ ಪತ್ನಿ ಮತ್ತು ಮಗು ನೈರುತ್ಯನನ್ನು ಆದರದಿಂದ ಕಂಡು ತಮ್ಮೂರಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಡ್ಡಾಡಿಸಿ ಕಳಿಸುವ ಅವರಿಬ್ಬರ ನಡುವಿನ ಸ್ನೇಹದ ಸವಿ ಅನನ್ಯ. 

ಹೇಮಚಂದ್ರನ ಮದುವೆಗೆ ಬಂದ ಸಂದರ್ಭದಲ್ಲಿ ಕಲ್ಯಾಣ ಮಂಟಪದ ಬಾಗಿಲಲ್ಲಿ ಯಾಂತ್ರೀಕೃತವಾಗಿ ಕೈಮುಗಿಯುವ ಆಳೆತ್ತರದ ಹೆಣ್ಣಿನ ಗೊಂಬೆಗಳು ತನ್ನೆದುರು ಜನ ಹಾಯದಿರುವ ಸಮಯದಲ್ಲೂ ಯಾಂತ್ರಿಕವಾಗಿ ಕೈ ಮುಗಿಯುತ್ತಲೇ ಇರುವ ಅವುಗಳ ಎವೆಯಿಕ್ಕದ ಕಣ್ಣುಗಳನ್ನು ನೋಡಿ ನಗು ಮತ್ತು ಭಯ ನೈರುತ್ಯನಿಗಾಗುವ ಸಂದರ್ಭ ಇವತ್ತಿನ ಕೃತಕ ಜೀವನದ ವಿಡಂಬನೆಯಾಗಿ ಬಂದಿದೆ. 

ಟ್ರೇನಿನಲ್ಲಿ ಪ್ರಯಾಣಿಸುವಾಗ  ಮನೆಯವರಿಗೆ ಹೇಳದೆ ಊರು ಬಿಟ್ಟು ಓಡಿ ಬಂದು ಟ್ರೇನಿನಲ್ಲಿ ಚಹಾ, ಮಜ್ಜಿಗೆ, ಕುರಕಲು ತಿಂಡಿ ಮಾರುವ ಕೆಲಸಕ್ಕೆ ಬರುವ ಹುಡುಗನೊಬ್ಬ ತನಗಡ್ಡಲಾಗಿ ನೈರುತ್ಯ ಎದುರು ಸೀಟಿನ ಮೇಲೆ ಕಾಲಿಟ್ಟು ಕೂತದ್ದನ್ನು ಕಂಡು “ಕಾಲು ಜರಾ ತೆಗೀರಿ” ಎಂದಾಗ ‘ಎಲ್ಲಿಡಲೋ ಮಾರಾಯ ಕಾಲು?’ ಎಂದ ನೈರುತ್ಯನಿಗೆ ‘ಎಲ್ಲಾರ ಇಡೀ ಸಾರ್ ಕಾಲು, ನನ್ನ ಹೊಟ್ಟೀ ಮ್ಯಾಲ ಇಡಬ್ಯಾಡ್ರೀ ಅಷ್ಟೇ’ ಎಂಬ ಮಾತು ಇಂತಹ ಮಕ್ಕಳನ್ನು ಕರೆದುಕೊಂಡು ಹೋಗಿ ತನ್ನೊಡನೆ ಇಟ್ಟು ವಿದ್ಯಾಭ್ಯಾಸ ಕೊಟ್ಡು ಮತ್ತೆ ಅವರ ಮನೆಗೆ ಬಿಟ್ಟು ಬರುವ ಕೆಲಸ ಮಾಡುತ್ತಿದ್ದ ನೈರುತ್ಯನಿಗೆ ವಿದ್ಯೆ ಇಲ್ಲದೆಯೂ ಸ್ವಂತ ದುಡಿಮೆ ಮಾಡುತ್ತಿದ್ದ ಈ ಹುಡುಗ ‘ನನ್ನ ಕಥೆಯೊಳಗೆ ಬರಬೇಡಾ’ ಎಂಬ ಎಚ್ಚರಿಕೆ ಕೊಟ್ಟಂತಿತ್ತು ಎಂಬುದು ನೈರುತ್ಯನ ಕರುಳನ್ನಷ್ಟೇ ಅಲ್ಲ ಓದುಗರ ಕರುಳನ್ನೂ ಕಲಕುತ್ತದೆ. 

ಪ್ರತಿಮೆಯ ಸ್ಥಾಪನೆಗಳ ಬಗ್ಗೆ ಹೀಗೆ ಬರೆಯುತ್ತಾರೆ : ‘ಕೊನೆಗೂ ನಾವು ಬದುಕುವುದು ಭೌತಿಕವಾಗಿ ಎದುರಿಗಿರುವ ವ್ಯಕ್ತಿಯೊಂದಿಗೋ ಅಥವಾ ಮನಸ್ಸಲ್ಲಿ ಇರುವ ಅದೇ ವ್ಯಕ್ತಿಯ ಪ್ರತಿಮೆಯೊಂದಿಗೋ? ಕಾಣುವ ಜಗತ್ತಿನೊಂದಿಗೋ ಅಥವಾ ಕಾಣದ ಜಗತ್ತಿನೊಂದಿಗೋ?’ ಈ ಸಾಲುಗಳು ನಾವು ವರ್ತಮಾನದಲ್ಲಿ ಅತ್ಯಂತ ಸಹಜವಾಗಿ ಬದುಕಬೇಕಾದ ವಿಚಾರದ ಬಗ್ಗೆ ಬೆಳಕು ಚೆಲ್ಲುತ್ತದೆ. 

ಚಾರ್ ಮಿನಾರ್ ತೋರಿಸುವ ಹೇಮಚಂದ್ರನ ಡ್ರೈವರ್  ಚಾರ್ ಮಿನಾರ್ ತೋರಿಸುತ್ತಾ ಹೇಳುವ ಕತೆ ಬದುಕಿನ ಕ್ರೂರತೆಯನ್ನು ಹೇಳುತ್ತದೆ. 

ಈ ಕತೆಯ ಕೊನೆಯ ಪ್ಯಾರಾದಲ್ಲಿ ಬರುವ ಯೂಸ್ ಮಿ ಎಂದು ಬರೆದುಕೊಂಡಿದ್ದ ಡಸ್ಟ್ ಬಿನ್ನಿನೊಳಗಿಂದ ಪೆಪ್ಸಿ ಕ್ಯಾನು ಫ್ರೂಟಿ ಪೊಟ್ಟಣ ಆರಿಸಿಕೊಂಡು ಹೆಗಲ ಮೇಲಿನ ಚೀಲಕ್ಕೆ ಹಾಕಿಕೊಳ್ಳುತ್ತಾ ತೂಕ ನೋಡುವ ಯಂತ್ರಕ್ಕೆ ನಾಣ್ಯ ಹಾಕಲು ನಿಂತಿದ್ದ ಹುಡುಗನೆಡೆ ನೈರುತ್ಯನ ಗಮನ ಹರಿದು ಅವನನ್ನು ಸಮೀಪಿಸಿದನು ಎಂಬ ಸಾಲುಗಳು ಬೀದಿ ಮಕ್ಕಳ ಜೀವನದ ದುರ್ಭರತೆಯನ್ನ ಕಾಣಿಸುತ್ತದೆ. ತನ್ನ ಗೆಳೆಯ ಹೇಮಚಂದ್ರನ ಆಡಂಬರದ ವೈಭವದ ಜೀವನ ನೋಡಿಯೂ, ತನ್ನ ಮತ್ತು ಪುನರ್ವಸು ಪ್ರೀತಿಯ ಸಂಕೇತವಾಗಿ ಹುಟ್ಟಿದ್ದ ಮಗಳ ಭವಿಷ್ಯವನ್ನು ಚಂದ ರೂಪಿಸುವ ಅಗತ್ಯವಿದ್ದಾಗಲೂ, ವೃದ್ಧ ತಂದೆತಾಯಿಯರನ್ನು ಅವರ ಇಳಿ ವಯಸ್ಸಿನಲ್ಲಿ ಕಾಪಾಡುವ ಜವಾಬ್ದಾರಿ ಹೆಗಲ ಮೇಲಿದ್ದಾಗಲೂ… ಇಂತಹ ಬೀದಿಮಕ್ಕಳ ಜೀವನಕ್ಕೆ ಭದ್ರತೆ ಒದಗಿಸಲು ತನ್ನ ಸ್ವಂತದ ಹಿತಾಸಕ್ತಿಗಳನ್ನು ಲೋಕದ ಮೋಹಗಳನ್ನು ತೊರೆದು ಕಟೀಬದ್ಧನಾಗುವ ನೈರುತ್ಯನಂತಹವರು ಇಂದಿಗೂ ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಸಾಮಾಜಿಕ ಕಾಳಜಿಯಿಂದ ಸೇವೆಗೆ ತೊಡಗಿರುವ ಅನೇಕರ ಉದಾಹರಣೆಯಾಗಿ ನಮ್ಮ ಮನಸ್ಸಲ್ಲಿ ನೆಲೆನಿಂತು ನಮ್ಮ‌ಮನಸ್ಸನ್ನು ಗೆಲ್ಲುತ್ತಾನೆ. 

ಅಪ್ಪಟ ಪ್ರೀತಿಯ, ಸ್ನೇಹದ, ಅಂತಃಕರಣದ, ಮನುಷ್ಯತ್ವದ ಹಿರಿಮೆ ಗರಿಮೆಗಳನ್ನು ಅತ್ಯಂತ ಸೂಕ್ಷ್ಮ ಸಂವೇದನಾಶೀಲವಾಗಿ ಮನುಷ್ಯ ಮನುಷ್ಯರೊಳಗೆ ಅವುಗಳನ್ನು ಕಾಣಿಸುವ ಜಯಂತ್ ಅವರು ಮನುಷ್ಯ ತನ್ನೊಳಗೇ ತಾನೇ ಇಟ್ಟುಕೊಳ್ಳಬಹುದಾದ ಅಂತರಂಗದ ಸಂಬಂಧದಲ್ಲಿ ನಡೆಯುವ ವಿಶ್ಲೇಷಣೆ, ಚಿಂತನ ಮಂಥನಗಳನ್ನು ಅವು ಕಾಣಿಸುವ ಜೀವನ‌ವನ್ನು ಮತ್ತು ಮನುಷ್ಯ ಮನುಷ್ಯ ಸಂಬಂಧಗಳ ಬಗೆಗಿನ ಈಗಾಗಲೇ ನಾವು ಕಂಡೂ ಕಾಣದಂತೆ ಮರೆತಂತೆ ನಟಿಸುವ ನಮ್ಮ ಸಹಜ ಸರಳ ಸ್ವಭಾವನ್ನು ಹೊಸದಾಗಿ ಮತ್ತೆ ಕಂಡುಕೊಳ್ಳಲೇಬೇಕಾದ ದಾರಿಯನ್ನೂ ಅವರ ಈ ಎಲ್ಲಾ ಕತೆಗಳೂ ನಮಗೆ ಮನಗಾಣಿಸುತ್ತವೆ. ಮುಖ್ಯವಾಗಿ ಜಯಂತರ ಬರಹಗಳ ಓದು ನಮಗೆ ನಮ್ಮನ್ನು ನಮ್ಮ ಮಾತು ಆಲೋಚನೆ ಕೆಲಸ ಎಲ್ಲವುಗಳಲ್ಲಿ ಮತ್ತಷ್ಟು ಹೆಚ್ಚು ಸೂಕ್ಷ್ಮ ಸಂವೇದನಾಶೀಲರಾಗಿಸುವಂತೆ ಮಾಡುತ್ತದೆ. 

ಕತೆಯೊಂದರಲ್ಲಿ ಬರುವ ‘ಜೀವಕ್ಕೆ ಚಲೋ’ ಎನಿಸುವ ಮಾತು ಈ ಕತೆಗಳ ಓದಿನಿಂದಲೂ ಇಲ್ಲಿ ನಮ್ಮ ‘ಜೀವಕ್ಕೆ ಚಲೋ’ ಎನಿಸುತ್ತದೆ. 

‍ಲೇಖಕರು Admin

22 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading