ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಗಬೇಡ ಗೆಳೆಯ..

ನಂದಿನಿ ಹೆದ್ದುರ್ಗ

ಒಲವಿನ ಮನೆಯ ಹೊಸಿಲೊಳಗೆ
ಎಂದೂ ಪ್ರವೇಶ ಸಿಗದ
ಬರಪೀಡಿತ ಆತ್ಮಗಳ
ಸನಿಹಕ್ಕೆ ತೃಪ್ತ ಪದಗಳು
ಎಂದಿಗೂ
ಸುಳಿಯುವುದಿಲ್ಲ ಗೆಳೆಯನೆ

ಅಂತೂ ಆಸೆಬಿದ್ದು
ಅಕ್ಕರೆಯಲ್ಲಿ ಕರೆದು
ಪದ್ಯದ ನಡುಮಧ್ಯಕ್ಕೆ
ಕೂರಿಸಿ ರಾಜಮರ್ಯಾದೆ ನೀಡಿದರೆ
ಸಿಡಿದೆದ್ದು ಪ್ರತಿ ಪದದ
ಮೊದಲಿಗೆ ಅ ಅಕ್ಷರವನ್ನು ಕೂರಿಸಿ
ಇಷ್ಟೇ ಎನ್ನುತ್ತಾ ವಿಷಾದದ ಕುಹಕ
ತೋರುತ್ತವೆ

ಶಾಂತಿಯಿದ್ದರೆ ಅ ಶಾಂತಿಯಿರಿಸಿ
ಸತ್ಯವಿದ್ದರೆ ಅ ಸತ್ಯವನ್ನು ಕರೆದು
ತೃಪ್ತಿಯಿದ್ದರೆ ಅ ತೃಪ್ತಿಯಲ್ಲಿ ಬಿಕ್ಕಿ
ಮಾಯವಾಗುತ್ತಿದ್ದರೆ
ಕೆರೆದು ಗಾಯ ಮಾಡಿಕೊಳ್ಳುತ್ತಾ
ಹಾಯಾಗಿರು ಎಂದರೆ
ನೋವು ಆದರಿಸುತ್ತ
ಪ್ರೇಮದ ದಾಹದಲ್ಲಿರುತ್ತವೆ

ದಯಾಮಯಿ ದೇವರಿಗೆ
ಆಗಿಂದ್ದಾಗ್ಗೆ ಕರುಣೆ ಕಡಲಂತೆ ಮೊರೆದು
ನಯವಂಚಕ ಪಾತ್ರದ
ವಂಚಕತನ ಬಚ್ಚಿಟ್ಟು
ನಯದ ನೂಲಿನಿಂದ
ಬಟ್ಟೆ ನೇದು ಮೈತುಂಬ ಹೊರಿಸಿ
ಬಾಯಾರಿದವಳ ಮನೆ ಬಾಗಿಲಿಗೆ
ಕಳಿಸುತ್ತದೆ

ಜೀವದ ಅವಧೂತನನ್ನೇ
ಅನವರತ ಕಾದವಳು
ಕದ ತಟ್ಟಿದವನ ಕರೆದು
ಕಾಲು ನೀರು ಕೊಟ್ಟು
ತಾಟಿಟ್ಟು ತಾದಾತ್ಮ್ಯ ಬಡಿಸಿ
ಪ್ರೇಮದ ಪರಿಯ ತೋರಲು
ಬೀಸಣಿಗೆ ಹುಡುಕುತ್ತ
ಒಳಕೋಣೆಗೆ ಹೋದದ್ದೇ ತಡ

ತಾದಾತ್ಮ್ಯದ
ತನುವನ್ನಷ್ಟೇ ಉಂಡ ವಂಚಕ
ನಯದ ಬಟ್ಟೆ ಕಳಚಿಟ್ಟು
ತಿರುಗಿ ನೋಡದೆ ಹೊರಗೆ
ಓಡುತ್ತಾನೆ
ಹುಡುಕಿ
ಬೀಸಣಿಗೆ ತಂದವಳ ಜೀವ
ಒಡೆದ ಕಾವ್ಯದ ಒಡಲು
ಹೊಲಿಯುತ್ತಿದೆ

ನಗಬೇಡ ಗೆಳೆಯ
ಎಲ್ಲಿಯವರೆಗೂ ಇದನ್ನೇ ಹೊಸಿಯುವಿ
ಎನ್ನುತ್ತಾ…
ನೋಯಿಸಬೇಡ

‍ಲೇಖಕರು Admin

25 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading