ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧಾರವಾಡದ ಸುರೇಶ ಕುಲಕರ್ಣಿ ಕಂಡ ಕಾರ್ನಾಡ್

ಕೇಸರಿ ಹರವೂ

ಗಿರೀಶ ಕಾರ್ನಾಡರ ಆಪ್ತರಲ್ಲಿ ಆಪ್ತರೆಂದು ಕೆಲವರಿದ್ದರೆ ಅವರಲ್ಲಿ ಧಾರವಾಡದ ಸುರೇಶ ಕುಲಕರ್ಣಿ ಖಂಡಿತವಾಗಿಯೂ ಒಬ್ಬರು. ಕಾರ್ನಾಡರು ನಿಧನರಾದರು ಎಂದು ತಿಳಿದ ತಕ್ಷಣ ನನಗೆ ನೆನಪಿಗೆ ಬಂದಿದ್ದು ಸುರೇಶ. ಸುರೇಶ ವಿಶಿಷ್ಟ ಹಾಸ್ಯಪ್ರಜ್ಞೆ, ವಿಭಿನ್ನ ಪ್ರತಿಭೆ ಮತ್ತು ಗಡದ್ದಾದ ಜೀವನಪ್ರೀತಿ ಇರುವ ವ್ಯಕ್ತಿತ್ವ. ಧಾರವಾಡದ ಹವ್ಯಾಸೀ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ಹಲವು ಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನನ್ನ ‘ಭೂಮಿಗೀತ’ ಚಿತ್ರದಲ್ಲೂ, ‘ಸರೋಜಿನಿ’ ಧಾರಾವಾಹಿಯಲ್ಲೂ ನಟಿಸಿದ್ದಾರೆ.

ಸುರೇಶರನ್ನು ಇಂದು ಮಾತಾಡಿಸೋಣ ಎನಿಸಿ ಫೋನ್ ಮಾಡಿದೆ. ಏಕೆಂದರೆ ನನಗೆ ಸುರೇಶ್ ಬಗ್ಗೆ ಚೆನ್ನಾಗಿ ಗೊತ್ತು, ಅವರ ಕಣ್ಣುಗಳು ತೇವವಾಗಿ ಮಿಂಚಿದರೂ ಅವರ ‘ಹಹಹ’ ಎನ್ನುವ ದೊಡ್ಡ ನಗು ಮಾತ್ರ ಮಾಸುವುದಿಲ್ಲ.

‘ಗಿರೀಶ್ ಬಂದಾಗೆಲ್ಲಾ ‘ಏನಂತದ ಧಾರವಾಡ?’ ಅಂತ್ ಕೇಳೇ ಮಾತು ಚಾಲೂ ಮಾಡ್ತಿದ್ರು ನೋಡ್ರೀ’ ಎಂದು ನಗುತ್ತಲೇ ಮಾತಾಡಲು ಶುರು ಮಾಡಿದರು. ‘ಅಲ್ಲಾ ಗಿರೀಶ, ಇಡೀ ಪ್ರಪಂಚ ಅಡ್ಡಾಡಿ ಬರ್ತೀರಿ, ಈ ಧಾರವಾಡ ಯಾಕ ಹಿಂಗ ನಿಮಗಾ?’ ಅಂತ ಕೇಳಿದ್ರೆ, ‘ನೀ ಎಲ್ಲಿಂದ್ ಎಲ್ಲರೇ ಹೋಗಿಬಾ ಸುರೇಶಾ, ಸುತ್ತೂ ಏಳು ಗುಡ್ಡದ ನಡಮಧ್ಯೆ ಇರೂ ಎಂತೆಂತಾ ಸಿಟೀನರೇ ಅಡ್ಡಾಡೂ, ಈ ಏಳುಗುಡ್ಡದ ನಡುವಿನ ಧಾರವಾಡಕ್ಕ ಬಂದಂಗಾಗೂದಿಲ್ಲ…’ ಎಂದು ಧಾರವಾಡದ ಮೇಲಿನ ತಮ್ಮ ಪ್ರೀತಿಯನ್ನು ಹೇಳುತ್ತಿದ್ದರಂತೆ.

ಬಹಳ ಹಿಂದೆ. ಮುಂಬೈನಿಂದ ತಮ್ಮ ವೆಸ್ಪಾ ಸ್ಕೂಟರ್ ಅನ್ನು ಒಮ್ಮೆ ಧಾರವಾಡಕ್ಕೆ ತಂದರಂತೆ ಗಿರೀಶ್. ಅದನ್ನು ಸುರೇಶರಲ್ಲೇ ಬಿಟ್ಟಿದ್ದರಂತೆ. ಅದು ಮಹಾರಾಷ್ಟ್ರ ರಿಜಿಸ್ಟ್ರೇಷನ್ ಗಾಡಿಯಾದ್ದರಿಂದ ಕರ್ನಾಟಕ ರಿಜಿಸ್ಟ್ರೇಷನ್ ಗೆ ಬದಲಾಯಿಸಲು ಆರ್ಟಿಓ ಆಫೀಸಿಗೆ ಇಬ್ಬರೂ ಹೋದರು. ‘ಭಾಳ ಮಜಾ ಅಂದ್ರ ಹೆಲ್ಮೆಟ್ನ ಗಿರೀಶ್ ಹಾಕ್ಕೊಂಡು ಹಿಂದ ಕುಂತ್ರೂ, ನಾ ಖಾಲೀ ತಲ್ಯಾಗ ಸ್ಕೂಟರ್ ಓಡಿಸಿದ್ದೆ’ ಎಂದರು ಸುರೇಶ್.
ಅಲ್ಲಿ ಕಚೇರಿಯಲ್ಲಿ ಗಿರೀಶರನ್ನು ಕಂಡೊಡನೇ ಕೂರಿಸಿ ತಕ್ಷಣ ಕೆಲಸ ಮಾಡಿಕೊಟ್ಟರಂತೆ.

ಇವರು ಅಷ್ಟಕ್ಕೇ ಎದ್ದು ಬರಬೇಕಲ್ಲವೇ? ಏಳಲಿಲ್ಲ, ಬದಲಿಗೆ ‘ನೋಡ್ರೀ ಇನ್ಸಪೆಕ್ಟ್ರಾ, ಇಂವಾ ಖಾಲೀ ತಲ್ಯಾಗಾ ಸ್ಕೂಟರ್ ಓಡಿಸಿಕೊಂಡು ಬಂದಾನ’ ಎಂದು ದೂರಿದರಂತೆ. ಆ ಇನ್ಸಪೆಕ್ಟ್ರು ದೇಶಾವರೀ ನಕ್ಕು ಸುರೇಶನನ್ನು ಮೇಲಿಂದ ಕೆಳಕ್ಕೆ ಒಮ್ಮೆ ನೋಡಿ, ‘ಲೈಸೆನ್ಸರ ಅದೇನ?’ ಎಂದನಂತೆ. ಸುರೇಶ್, ‘ಸ್ಕೂಟರ ಬರೋಬ್ಬರಿ ಓಡಿಸ್ತೇನ್ರೀ’ ಎಂದರಂತೆ. ‘ಅದಾತು, ಲೈಸೆನ್ಸ?’ ಎಂದು ಮತ್ತೆ ಆತ ಕೇಳಿದನಂತೆ. ಸುರೇಶ, ‘ಏ, ಅವೆಲ್ಲಾ ಏನಿಲ್ರೀ…’ ಎಂದರಂತೆ. ಆತ ಮತ್ತೊಮ್ಮೆ ಹಾಗೇ ನಕ್ಕು, ‘ನಾ ಏನ ಮಾಡ್ಲೀ ಈಗ ನಿಮ್ಮುನ್ನ? ಈ ಸಾಹೇಬ್ರ ಜೋಡಿ ಬ್ಯಾರೇ ಬಂದೀರಿ… ಯಾವಾರಾ ಫೋಟೋ ಗೀಟೋ ಕಿಸೇದಾಗ ಇಟ್ಟಿದ್ರ ಒಂದ ಕೊಡ್ರೀ, ಲೈಸೆನ್ಸರ ಮಾಡಿಕೊಟ್ಟುಬಿಡ್ತೇನಿ ಅಚ್ಚಗ’ ಎಂದು ಮಾಡಿಕೊಟ್ಟನಂತೆ. ಹೀಗೆ ಗಿರೀಶ್ ಸುರೇಶ್ ಗೆ ಸ್ಕೂಟರನ್ನೂ ಕೊಟ್ಟು, ಅನಾಯಾಸವಾಗಿ ಒಂದು ಲೈಸೆನ್ಸ್ ಕೊಡಿಸಿದ್ದೂ ಒಂದು ಉದ್ದೇಶದಿಂದಲೇ.

ಧಾರವಾಡಕ್ಕೆ ಬಂದಾಗಲೆಲ್ಲಾ ಅದೇ ಸ್ಕೂಟರಿನ ಹಿಂಬದಿ ಕುಳಿತು ಇಡೀ ಊರು ತಿರುಗುತ್ತಿದ್ದರಂತೆ. ‘ಏನಿಲ್ಲಾ ಅಂದ್ರೂ ಒಂದು ಎರಡು ನೂರು ಸರ್ತಿಯಾರ ನನ ಹಿಂದ ಕುಂತ್ಯಾರ ನೋಡ್ರಿ’ ಎಂದು ಸುರೇಶ ನೆನಪಿಸಿಕೊಂಡರು. ಗಿರೀಶ್ ಧಾರವಾಡಕ್ಕೆ ಬಂದು ಸುರೇಶರ ಗಾಡಿ ಹತ್ತಿದರೆಂದರೆ ಸುರೇಶರ ಗೆಳೆಯರೆಲ್ಲಾ, ‘ಏ, ಈಗ್ಯಾಕ ನಮಿಗ ಸಿಗ್ತಾನಂವಾ? ಅವನ ತಲೈವರ ಬಂದಾರಲ, ಮುಂಜಾಲೆ ಚಾದಿಂದ ಹಿಡುದು, ನ್ಹಾಯಿಟ ಗುಂಡಿನವರಿಗೂ ಅವುರ ಜೋಡಿನೇ ಬಿಡು’ ಎಂದು ಆಡಿಕೊಳ್ಳುತ್ತಿದ್ದರಂತೆ.

ಗಿರೀಶರು ಒಂದು ಹೆಣ್ಣು ನೋಡುವ ಸಲುವಾಗಿ ಸುರೇಶರ ಜೊತೆ ಹೋಗಿದ್ದು, ಅಲ್ಲಿ ‘ರೈಲು ಮಿಸ್ ಆಗಿ ಹೆಣ್ಣೇ ಬಂದಿಲ್ಲ’ ಎಂದು ಆಕೆಯ ತಂದೆ ಸುಳ್ಳುಹೇಳಿ ಸಾಗಹಾಕಿದ್ದ ಘಟನೆಯೂ ಸ್ವಾರಸ್ಯಕರ.

ಹೀಗೆ ಸುಮಾರು ಹತ್ತಿಪ್ಪತ್ತು ಸ್ವಾರಸ್ಯಕರ ಘಟನೆಗಳನ್ನು ಸುರೇಶ ಕುಲಕರ್ಣಿ ನೆನಪಿಸಿಕೊಂಡರು. ಸುರೇಶರೇ ಬರೆಯಲಿ ಎಂದು ನಾನಿಲ್ಲಿ ಅವನ್ನು ಬರೆಯುವುದಿಲ್ಲ. ಬಹುಶಃ ಗಿರೀಶರ ಜೊತೆಗಿನ ಇಂಥಾ ಡೌನ್-ತು-ಅರ್ಥ್ ಅನುಭವಗಳು ಸಿಕ್ಕಿದ್ದು ಕೆಲವೇ ಮಂದಿಗಷ್ಟೇ ಅನಿಸುತ್ತದೆ! ಏಕೆಂದರೆ ಗಿರೀಶ್ ಬೆಳೆಯುತ್ತಾ ಬೆಳೆಯುತ್ತಾ ತಮ್ಮ ಸುತ್ತ ಒಂದು ಪರಿಧಿಯನ್ನು ಕಟ್ಟಿಕೊಂಡವರು, ಒಂದು ಅಂತರವನ್ನು ಕಾಯ್ದುಕೊಂಡವರು. ಸುರೇಶರಿಗೆ ‘ಬರೆಯಿರಿ’ ಎಂದು ಪೀಡಿಸಿದ್ದೇನೆ. ಏಕೆಂದರೆ…

ಗಿರೀಶರಿಗೆ ಸುರೇಶರ ತಂದೆ, ತಾಯಿ ಮತ್ತು ಅಕ್ಕ ವಚ್ಚಕ್ಕ (ವತ್ಸಲಾ ಕುಲಕರ್ಣಿ – ರಂಗ ಕಲಾವಿದೆ, ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಈಗ ರಿಟೈರ್ಡ್ ಆಗಿದ್ದಾರೆ.) ಇವರೊಂದಿಗಿನ ಸ್ನೇಹ ಸುಮಾರು ನಲವತ್ತೈದಕ್ಕೂ ಹೆಚ್ಚು ವರ್ಷಗಳದು. ಆಗ ಅವರೆಲ್ಲ ಒಂದು ಚಾಳದಲ್ಲಿ ವಾಸವಾಗಿದ್ದಾರಂತೆ. ಸುರೇಶ ಅಂದಿನ ಚಾಳ ಸಂಸ್ಕೃತಿ, ಸಹಜೀವನದ ಬಗ್ಗೆ ಬಹಳ ಸ್ವಾರಸ್ಯಕರವಾಗಿ ಮಾತಾಡುವುದನ್ನು ನಾನೇ ಎರಡುಮೂರು ಬಾರಿ ಕೇಳಿದ್ದೇನೆ.

‘ಚಾಳದ ಬದುಕಿನ ಬಗ್ಗೆ ಬರೆದರ ನೀನೇ ಬರೀಬೇಕೋ ಸುರೇಶಾ, ನೀ ಸತ್ತಮ್ಯಾಲ ಬರೀಲಿಕ್ಕ ಯಾರೂ ಇರೂದಿಲ್ಲ ನೋಡು, ಮುಂದಿನ ತಲಮಾರಿಗೆ ಚಾಳ ಅನ್ನೂದು ಒಂದ ಇತ್ತು ಅನ್ನೂದೂ ತಿಳೀವಲ್ದು… ಬರದಾರ ಬರೀತೀಯೇನ ನೋಡ…’ ಎಂದು ಅದೆಷ್ಟು ಬಾರಿ ಗಿರೀಶರು ಹೇಳಿದರೂ ಈ ಸುರೇಶ ಮಾತ್ರ ಇನ್ನೂ ಬರೆದೇ ಇಲ್ಲ.

ಈಗಲಾದರೂ ಬರೆಯುತ್ತಾರಾ ನೋಡಬೇಕು.

‍ಲೇಖಕರು avadhi

12 June, 2019

1 Comment

  1. Kotresh T A M

    ಆಪ್ತ ಬರಹ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading