ದೆಹಲಿ ರಸ್ತೆ ತುಂಬ ಅಮಲ್ತಸ್ ಳ ದಿಬ್ಬಣ

ಚೈತ್ರಿಕಾ ನಾಯ್ಕ ಹರ್ಗಿ

“ಬಾನಿಗಾಗಿ ಭುವಿ ಬರೆವ ಕವನಗಳೆ ಮರಗಳು” (“Trees are poems that the earth writes upon the sky”) ಎನ್ನುತ್ತಾನೆ ಕವಿ ಖಲಿಲ್ ಗಿಬ್ರಾನ್.

ಸುಡು ಬಿಸಿಲಿನ ಗೊಡವೆಯಿಲ್ಲದೆ ಅಮಲ್ತಸ್ ಳೆಂಬ ಸುಂದರಿ ಹಳದಿ ಸೀರೆ ಉಟ್ಟು ದೆಹಲಿಯ ರಸ್ತೆಗಳಲ್ಲಿ ದಿಬ್ಬಣ ಹೊರಟಿರುವುದನ್ನು ನೋಡಿದರೆ ಗಿಬ್ರಾನ್ ಹೇಳಿದ್ದು ಸರಿ ಎನಿಸುತ್ತದೆ. ಸಂಜೆಗಂಪಲ್ಲಿ ಬೆಳಗ ತಂಪಲ್ಲಿ ಅಮಲ್ತಸ್ ಹೂ ನಿಂದ ತೊನೆಯುತ್ತಾ ನಿಂತ ಮರಗಳನ್ನು ನೋಡುವುದೆ ಚೆಂದ. ದೆಹಲಿಯ ಸುಂದರ ಕಾವ್ಯಗಳೇನೊ ಎಂಬಂತೆ ಈ ಹಳದಿ ಸುಂದರಿ ಗೋಚರವಾಗುತ್ತಾಳೆ.

ಬಾನು ಭೂಮಿಯ ವಸಂತದ ಪ್ರೀತಿ ಸಂಭಾಷಣೆಯೆ ಅಮಲ್ತಸ್? ಅಥವಾ ಪ್ರೀತಿಗೆ ಸೋತ ಬಾನು ಅಮಲ್ತಸ್ ಳನ್ನು ಭೂಮಿಗೆ ಉಡುಗೊರೆಯಾಗಿ ನೀಡಿದ್ದಾನಾ? ಇಲ್ಲಾವಾದಲ್ಲಿ, ಭೂಮಿ ಬರೆದ ಕವನಕ್ಕೆ ಸೋತು ಬಾನು ಮತ್ತು ಭೂಮಿಗೆ ಅಮಲ್ತಸ್ ಳೆಂಬ ಮಗಳು ವಸಂತದಲ್ಲಿ ಹುಟ್ಟಿದಳಾ? ಗೊತ್ತಿಲ್ಲ. ಆದರೆ ಬಿರು ಬೇಸಿಗೆಯ ದೆಹಲಿಯನ್ನು ಸಹನೀಯ ಮಾಡಿರುವರಲ್ಲಿ ಅಮಲ್ತಸ್ ಳ ಪಾತ್ರ ಕಡಿಮೆಯೇನಿಲ್ಲ.

ಸೌತ್ ಈಸ್ಟ್ ಏಷಿಯಾ ಮೂಲದ ಇದರ ಸಸ್ಯಶಾಸ್ತ್ರೀಯ ಹೆಸರು ಕಸಿಯಾ ಪಿಸ್ತೂಲಾ (cassia fistula).ಇಂಡಿಯನ್ ಲ್ಯಾಬರ್ನಮ್ ಎಂತಲೂ ಕರೆಯುತ್ತಾರೆ, ಸಾಮಾನ್ಯವಾಗಿ ಗೋಲ್ಡನ್ ಷವರ್, ಕೇರಳದಲ್ಲಿ ಕನಿಕ್ಕೊನ್ನಾ ಎಂದು ಅಮಲ್ತಸ್ ಪ್ರಸಿದ್ಧಳು.

ವಿದೇಶದ ಶರತ್ಕಾಲದ ಮರಗಳ ಚಿತ್ರಗಳಿಗೆ ಸೆಡ್ಡು ಹೊಡಿಯುವಷ್ಟು ಸುಂದರ ಈ ಮರಗಳು. ಏಪ್ರಿಲ್ ನಲ್ಲಿ ಇದರ ಎಲೆಗಳು ಉದುರಲಾರಂಭಿಸಿದರೆ ಅದರ ಜೊತೆ ಮೊಗ್ಗುಗಳು ಆರಂಭವಾಗುತ್ತವೆ. ಮೇ ತಿಂಗಳಿನಲ್ಲಿ ಎಲೆಗಳಿಲ್ಲದ ಬರಿ ಹೂ ತುಂಬಿದ ಅಮಲ್ತಸ್ ಮರಗಳು ಹಳದಿಯುಟ್ಟು ಹಳದಿ ಪುಟ್ಟ ಪುಟ್ಟ ಚಿಟ್ಟೆಗಳು ಮುತ್ತಿಕೊಂಡಂತೆ ಕಾಣುತ್ತವೆ. ಒಂದು ಮಳೆ ಬಿದ್ದರೆ ಸಾಕು ಮತ್ತೆ ಎಲೆಗಳು ಸಣ್ಣದಾಗಿ ಉಕ್ಕಲು ಆರಂಭಿಸಿದರೆ  ಹಳದಿ ಹೂಗಳ ಮಧ್ಯೆ ಹಸಿರು ಎಲೆಗಳು ಚಿಗುರೊಡೆದು ಹಳದಿ ಸೀರೆಗೆ ಹಸಿರು ಚುಕ್ಕೆಯಿಟ್ಟಂತೆ ಕಾಣುತ್ತವೆ.

ಪುರಾಣ, ಸಾಹಿತ್ಯ, ವರ್ಣಚಿತ್ರ, ಆಯುರ್ವೇದ, ಆಹಾರ ಎಲ್ಲೆಂದರಲ್ಲಿ ಸುದ್ದಿಯಾದವಳು ಅಮಲ್ತಸ್. ಮಹಾಭಾರತದಲ್ಲಿ ಮಾತಂಗ ಮುನಿಗಳ ಕುಟೀರದ ಬಳಿ ಅಮಲ್ತಸ್ ಹೂ ಬಿಡುತ್ತಿದ್ದ ಉಲ್ಲೇಖವಿದೆ. ಮುಂದುವರೆದು ನೋಡಿದರೆ ಭಾರತದ ವರ್ಣಚಿತ್ರಕಾರ ಎ. ರಾಮಚಂದ್ರನ್ ಅಮಲ್ತಸ್ ಪೇಂಟಿಂಗ್ ಮಾಡಿದ್ದಾರೆ. ಹಾಗೆಯೆ ಸುನಿತಾ ಕುಮಾರ್ ರ Indian Laburnum ಎಂಬ ಹೆಸರಿನ ಅಮಲ್ತಸ್ ವರ್ಣಚಿತ್ರಗಳು ಅನೇಕ ಸೌಂದರ್ಯಾಧಕರಿಂದ ಶ್ಲಾಘಿಸಲ್ಪಟ್ಟಿವೆ.

ಕವಯತ್ರಿಯರಾದ ಅನನ್ಯಾ ದಾಸ್ ಗುಪ್ತಾ ಮತ್ತು ನಿಶು ಮಾಥುರ್ ಅ ಕವನಗಳಲ್ಲಿ ಕೂಡ ಅಲ್ತಮಸ್ ಇಣುಕುತ್ತದೆ. ಅನನ್ಯಾ ದಾಸ್ Spite ಎಂಬ ಕವನದಲ್ಲಿ

The water bottle in the fridge

Doesn’t cool enough.

The moisturizer on the table

Is warm. Damn the blooming

Amaltas hog washing the heat,

Don’t fall for what it looks like

Delhi is dead beat

ಎನ್ನುತ್ತಾರೆ.

ದೆಹಲಿಯ ಏನೇನೊ ರಗಳೆಗಳ ಹೊರತಾಗಿಯೂ ಕವಯತ್ರಿಗೆ ಅಮಲ್ತಸ್ ಮುದ ನೀಡುತ್ತಾಳೆ.

ಹಾಗೆಯೆ ಪರಿಸರವಾದಿ ಪ್ರದೀಪ್ ಕ್ರಿಶನ್ ತಮ್ಮ ಪುಸ್ತಕ ‘ಟ್ರೀಸ್ ಆಫ್ ದೆಲ್ಲಿ’ ಯಲ್ಲಿ ಅಮಲ್ತಸ್ ಮರಗಳ ಬಗ್ಗೆ ಬರೆದಿದ್ದಾರೆ. ದೆಹಲಿಯಲ್ಲಿ ಮಾತ್ರವಲ್ಲದೆ ಭಾರತದ ಎಲ್ಲೆಡೆಯೂ ಈ ಮರಗಳಿವೆ. ಕೇರಳದಲ್ಲಿ ವಿಶು ಹಬ್ಬದ ಸಂಭ್ರಮಾಚರಣೆಗೆ ಅಲ್ತಮಸ್ ಇರಲೇಬೇಕು. ಕೇರಳದಲ್ಲಿ ಅಮಲ್ತಸ್ ಗೆ  ‘ರಾಜ್ಯದ ಹೂ’  ಸ್ಥಾನ ನೀಡಿದ್ದಾರೆ. ಸಂತಾಲ್ ಎಂಬ ಜಾರ್ಖಂಡದ ಬುಡಕಟ್ಟು ಜನಾಂಗ ಅಮಲ್ತಸ್ ಹೂ ಪಕಳೆ ಮತ್ತು ಎಲೆಯನ್ನು ಆಹಾರಕ್ಕಾಗಿ ಚಟ್ನಿಯಲ್ಲಿ ಬಳಸುತ್ತಿದ್ದರು ಎಂಬ ಮಾಹಿತಿ ಕೂಡ ಸಿಗುತ್ತದೆ.

ಮೇ ಮತ್ತು ಜೂನ್ ತಿಂಗಳಿನಲ್ಲಿ ದೆಹಲಿಯ ಜವಾಹರ್ ಲಾಲ್ ನೆಹರೂ ಯುನಿವರ್ಸಿಟಿ, ಬಂಗ್ಲೋ ರೋಡ್, ಅಮೃತಾ ಶೇರ್ ಗಿಲ್ ಮಾರ್ಗ, ಅಕ್ಬರ್ ರೋಡ್. ಶಾಂತಿ ಪಥ, ತಾಲಕೋತ್ರಾ ರಸ್ತೆ, ಚಾಣಕ್ಯ ಪುರಿ, ಹೈಲಿ ರೋಡ್ , ನೆಹರೂ ಪಾರ್ಕ್, ರಾಜ್ ಘಾಟ್, ಬಿ.ಆರ್.ಟಿ ಕಾರಿಡಾರ್, ಹುಮಾಯುನ್ ಟೂಂಬ್  ಬಳಿ ಯಥೇಚ್ಚವಾಗಿ  ಅಮಲ್ತಸ್ ಮರಗಳು ಸಾಲು ಸಾಲಾಗಿ ಕಾಣುವುದು ಸೋಜಿಗವೆನಿಸುತ್ತದೆ. ಇದಕ್ಕೆ ಕಾರಣೀಕರ್ತರೆಂದರೆ ಖ್ಯಾತ ಬ್ರಿಟಿಷ್ ವಾಸ್ತುಶಿಲ್ಪಿ ಸರ್ ಎಡ್ವಿನ್ ಲ್ಯೂಟಿಯಾನ್ಸ್.

1920ರ ಆರಂಭದಲ್ಲಿ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲ್ಯೂಟಿಯಾನ್ಸ್ ದೆಹಲಿಯ ಅಂದವನ್ನು ಹೆಚ್ಚಿಸಲು ಯೋಚಿಸಿ ಲ್ಯೂಟಿಯಾನ್ಸ್ ಪ್ರದೇಶದ ಸುತ್ತ-ಮುತ್ತ ಅಮಲ್ತಸ್ ಮರಗಳನ್ನು ನೆಡಿಸಿದ್ದ. ದೆಹಲಿಯ ರಾಷ್ಟ್ರಪತಿ ಭವನ್, ಇಂಡಿಯಾ ಗೇಟ್ ಮುಂತಾದ ಕೊಡುಗೆಗಳ ಮೂಲಕ ದೆಹಲಿಯ ಸೌಂದರ್ಯವನ್ನು ಹೆಚ್ಚಿಸಿದ್ದೆ ಎಡ್ವಿನ್ ಲ್ಯೂಟಿಯಾನ್ಸ್ ಎಂದರೆ ತಪ್ಪಿಲ್ಲ. ಆದ್ದರಿಂದ ದೆಹಲಿಗೆ ‘ಲ್ಯೂಟಿಯಾನ್ಸ್ ನ ದೆಹಲಿ’ ಎಂತಲೂ ಕರೆಯುತ್ತಾರೆ. ನಂತರ ಸರ್ಕಾರ ಕೂಡ ತನ್ನ ಯೋಜನೆಗಳಲ್ಲಿ ಅಮಲ್ತಸ್ ಮರಗಳನ್ನು ದೆಹಲಿಯಲ್ಲಿ ನೆಡಿಸಿದೆ. ದೆಹಲಿಯ ಮೈ ಬೆವರಿಳಿಸುವ ಬೇಸಿಗೆಯಲ್ಲೂ ಕಣ್ಣಿಗೆ ಮನಸ್ಸಿಗೆ ಖುಷಿ ಕೊಡುವುದೆಂದರೆ ಬಂಗಾರದ ತುಂತುರು ಅಮಲ್ತಸ್.

 

‍ಲೇಖಕರು avadhi

June 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. Sumithra Lc

    ಕನ್ನಡ ದಲ್ಲಿ ಕಕ್ಕೆ ಹೂ, ಸಂಸ್ಕೃತ ದಲ್ಲಿ ಸುವರ್ಣ ಧಾರಾ…

    ಪ್ರತಿಕ್ರಿಯೆ
  2. T S SHRAVANA KUMARI

    ಅಮಲ್ತಸ್ ಹೂವಿನಷ್ಟೇ ಸೊಗಸಾಗಿದೆ ಲೇಖನ

    ಪ್ರತಿಕ್ರಿಯೆ
  3. Shobha Hirekai

    ಚೈತ್ರಿಕಾ ನಿನ್ನಷ್ಟೇ ..ಚಂದ ನಿನ್ನ ಬರವಣಿಗೆ ಕೂಡಾ. ಅಭಿನಂದನೆ ಪುಟ್ಟಿ..

    ಪ್ರತಿಕ್ರಿಯೆ
  4. ಅವಿಜ್ಞಾನಿ

    ಓದಿದೆ ಚಂದ ಉಂಟು ಚೈತ್ರಿಕಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: