ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೊಡ್ಡಣ್ಣನ ಪಾಲಿಗೆ ಕುವೆಂಪು ಯಾವತ್ತೂ ಆದರಣೀಯರು..

5

ಒಡನಾಟ

ಹಾಮಾನಾ ಜನಸಂಪರ್ಕ ಮತ್ತು ಜನಪ್ರಿಯತೆ ನಿಶ್ಚಯವಾಗಿಯೂ ವ್ಯಾಪಕವಾಗಿತ್ತು. ಕರ್ನಾಟಕದ ಉದ್ದಗಲಕ್ಕೂ—ಅಷ್ಟೇ ಏಕೆ, ದೇಶವಿದೇಶಗಳಿಗೂ—ವಿಸ್ತರಿಸಿತ್ತು ಎನ್ನುವುದು ಅತಿಶಯೋಕ್ತಿ ಅಲ್ಲ.

ಅವನ ಕನ್ನಡದ ಪ್ರೀತಿ ಮತ್ತು ಅದಕ್ಕೆ ಪ್ರತಿಯಾಗಿ ಅವನು ಕನ್ನಡ ಜನತೆಯಿಂದ ಪಡೆದುಕೊಂಡ ಪ್ರೀತಿಯನ್ನು ಕುರಿತು ಹಲವು ದಂತಕತೆಗಳು ಪ್ರಚಾರದಲ್ಲಿವೆ. ಹಾಮಾನಾ ಧಾರವಾಡಕ್ಕೆ ಬರುತ್ತಾರೆಂದರೆ ಅವರನ್ನು ನೋಡಲು ಅಲ್ಲಿಯ ಜನ ‘ಸಿನೆಮಾ ಸ್ಟಾರ್’ ನೋಡಲು ಬರುವಂತೆ ಸೇರುತ್ತಿದ್ದರು ಎಂಬುದಾಗಿ ಪ್ರೊ. ಕಲ್ಬುರ್ಗಿಯವರು ಒಂದು ಸಂದರ್ಭದಲ್ಲಿ ಹೇಳಿದ ಮಾತು ನನ್ನ ನೆನಪಿನಲ್ಲಿದೆ. ಕನ್ನಡ ವಿಮರ್ಶೆಯ ಸಂದರ್ಭದಲ್ಲಿ ನಿರ್ದಾಕ್ಷಣ್ಯವಾಗಿ ಮಾತಾಡುವ ಜಿ. ಎಚ್. ನಾಯಕರು ಒಂದು ಕಡೆ ಈ ಮಾತನ್ನು ಹೇಳುತ್ತಾರೆ: ‘ಕಥೆ, ಕಾದಂಬರಿಗಳನ್ನು ಬರೆಯದೆ ವಿಚಾರಶೀಲ ಸಾಹಿತ್ಯದ ಬರವಣಿಗೆಯ ಮೂಲಕವೇ ಇಷ್ಟು ಪ್ರಸಿದ್ಧಿ ಮತ್ತು ಜನಪ್ರಿಯತೆಯನ್ನು ಪಡೆದ ಕನ್ನಡ ಸಾಹಿತಿ ಬಹುಶಃ ಬೇರೆ ಯಾರೂ ಇಲ್ಲ.’ (1) ಈ ಮಾತುಗಳು ಹಾಮಾನಾ ಜನಾದರಣೀಯತೆಗೆ ಸಾಕ್ಷಿಯಾಗಿವೆ.

ತನ್ನ ವೃತ್ತಿ ಅಥವಾ ಕನ್ನಡದ ಕೆಲಸಗಳಿಗೆ ಸಂಬಂಧಿಸಿದಂತೆ ಅವನು ಜನರೊಡನೆ ಬೆರೆಯುತ್ತಿದ್ದ, ವ್ಯವಹರಿಸುತ್ತಿದ್ದ; ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದ; ಅದ್ಭುತ ಭಾಷಣಕಾರನೆಂದು ಪ್ರಖ್ಯಾತನಾಗಿದ್ದ. ಪತ್ರ ವ್ಯವಹಾರದ ಮೂಲಕ ತನ್ನ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ. ವಿವಿಧ ಪ್ರಾಂತ್ಯ ಮತ್ತು ಭಾಷೆಗಳ ಜನರೊಂದಿಗೆ ದೊಡ್ಡಣ್ಣ ಸಂಪರ್ಕ ಇಟ್ಟುಕೊಂಡಿದ್ದ. ಇದು ಒಂದು ಮಟ್ಟದ ಸಂಬಂಧ.

ಇನ್ನೊಂದು ಮಟ್ಟದಲ್ಲಿ ತನ್ನ ವಿದ್ಯಾಗುರುಗಳು ಮತ್ತು ಹಿರಿಯ ಸಾಹಿತಿಗಳ ಬಗೆಗೆ ಅವನು ತೋರುತ್ತಿದ್ದ ಪ್ರೀತಿ, ವಿಶ್ವಾಸಗಳು; ಪೂಜ್ಯ ಹಾಗೂ ಕೃತಜ್ಞತಾ ಭಾವನೆಗಳಿಂದ ಕೂಡಿದ್ದ ಸಂಬಂಧಗಳನ್ನು ಗುರುತಿಸಬಹುದು. ಈ ಗುಂಪಿನಲ್ಲಿ ಬಹುಶಃ ಕುವೆಂಪು ಅಗ್ರರು. ಅವರು ಅವನ ಬದುಕಿನ ಆದರ್ಶ. ಕುವೆಂಪು ಅವರ ಸ್ವಾಭಿಮಾನ, ಕನ್ನಡ ಪ್ರೇಮ, ಶಿಸ್ತು, ಜಾತ್ಯತೀತ ಮತ್ತು ವೈಜ್ಞಾನಿಕ ಮನೋಭಾವಗಳನ್ನು ದೊಡ್ಡಣ್ಣ ತನ್ನ ಬದುಕಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ರೂಢಿಸಿಕೊಂಡಿದ್ದ.

ದೊಡ್ಡಣ್ಣನ ಪಾಲಿಗೆ ಕುವೆಂಪು ಯಾವತ್ತೂ ಆದರಣೀಯರು. ಕುವೆಂಪು ಸಹ ತಮ್ಮ ಶಿಷ್ಯನನ್ನು ಮೆಚ್ಚುಗೆಯಿಂದಲೇ ಕಂಡು ನಿಕಟ ಸಂಬಂಧ ಮತ್ತು ಸಂಪರ್ಕಗಳನ್ನು ಉಳಿಸಿಕೊಂಡಿದ್ದರು. ದೊಡ್ಡಣ್ಣನ ಬದುಕಿನುದ್ದಕ್ಕೂ ಆತ್ಮೀಯರಾಗಿದ್ದ ಇನ್ನೊಬ್ಬ ಹಿರಿಯರು ಮಾಸ್ತಿ ವೆಂಕಟೇಶ ಅಯ್ಯಂಗಾರರು. ಬಾಲ್ಯದಿಂದಲೇ ದೊಡ್ಡಣ್ಣನನ್ನು ಬಲ್ಲವರಾಗಿದ್ದ ಮಾಸ್ತಿಯವರು ಅವನನ್ನು ಸದಾ ತಮ್ಮ ಪ್ರೀತಿ, ವಿಶ್ವಾಸಗಳಿಂದ ಪ್ರೋತ್ಸಾಹಿಸುತ್ತಲೇ ಇದ್ದರು. ಪ್ರತಿಯಾಗಿ ದೊಡ್ಡಣ್ಣ ಅವರನ್ನು ಪೂಜ್ಯಭಾವನೆಯಿಂದ ಕಾಣುತ್ತಿದ್ದ; ಬೆಂಗಳೂರಿಗೆ ಬಂದಾಗ ಅವಕಾಶ ಒದಗಿಬಂದರೆ ಮಾಸ್ತಿಯವರನ್ನು ಕಂಡು ಅವರ ಜೊತೆ ಕೆಲವು ಸಮಯ ಕಳೆಯುವುದು ಅವನ ಪರಿಪಾಟವಾಗಿತ್ತು.

ಪು. ತಿ. ನರಸಿಂಹಾಚಾರ್, ಗೊರೂರು ರಾಮಸ್ವಾಮಿ ಅಯಂಗಾರ್, ವಿ. ಕೃ. ಗೋಕಾಕ್ ದೊಡ್ಡಣ್ಣನ ಹಿತೈಷಿಗಳಾಗಿದ್ದು, ಅವನ ವಿಶ್ವಾಸ ಗೌರವಗಳಿಗೆ ಭಾಜಕರಾಗಿದ್ದ ಇತರ ಹಿರಿಯ ಸಾಹಿತಿಗಳು. ದೊಡ್ಡಣ್ಣನ ಆರಂಭಿಕ ಬರೆಹಗಳಲ್ಲಿ ಒಂದಾದ ‘ನಮ್ಮ ಮನೆಯ ದೀಪ’ಕ್ಕೆ ಪುತಿನ ಮುನ್ನುಡಿ ಬರೆದು, ಅದನ್ನು ಬಹಳವಾಗಿ ಮೆಚ್ಚಿಕೊಂಡು ಆಶೀರ್ವದಿಸಿದ್ದರು ಎನ್ನುವುದನ್ನು ಗಮನಿಸಬಹುದು. ವಾಸ್ತವವಾಗಿ ಅವನು ಕನ್ನಡದ ಬಹಳಷ್ಟು ಹಿರಿಯ ಮತ್ತು ಕಿರಿಯ ಸಾಹಿತಿಗಳ ನಿಕಟ ಸಂಪರ್ಕದಲ್ಲಿದ್ದು, ಅವರೊಡನೆ ಸಹೃದಯ ಸಂಬಂಧ ಬೆಳೆಸಿಕೊಂಡಿದ್ದ. ಅವರನ್ನೆಲ್ಲ ಇಲ್ಲಿ ಪಟ್ಟಿಮಾಡುವುದು ಸುಲಭಸಾಧ್ಯವಲ್ಲ.

ಹಾಗಾದರೂ ಕೆಲವು ಹೆಸರುಗಳನ್ನು ನಮೂದಿಸದಿದ್ದರೆ ಲೋಪವಾಗುತ್ತದೆ. ತನ್ನ ವಿದ್ಯಾಗುರುಗಳಾಗಿದ್ದ ತ. ಸು. ಶ್ಯಾಮರಾಯರು, ಎಸ್. ವಿ. ಪರಮೇಶ್ವರ ಭಟ್ಟರು, ದೇ. ಜವರೇಗೌಡರು, ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳ ಸಮೂಹದಲ್ಲಿ ಅಗ್ರಗಣ್ಯರು. ಆರಂಭದ ದಿನಗಳಲ್ಲಿ ಅವನಿಗೆ ಸ್ಪೂರ್ತಿಯಾಗಿದ್ದವರು ಅ. ನ. ಕೃಷ್ಣರಾಯರು. ನಂತರದಲ್ಲಿ ದೊಡ್ಡಣ್ಣನ ಆತ್ಮೀಯ ಒಡನಾಟದಲ್ಲಿದ್ದವರು ತ. ರಾ. ಸು, ಚದುರಂಗ, ನಿರಂಜನ ಮತ್ತು ಅನುಪಮ ನಿರಂಜನ, ಕು. ಶಿ. ಹರಿದಾಸ ಭಟ್ಟ, ಹೆಚ್. ಎಂ. ಶಂಕರನಾರಾಯಣರಾವ್ ಮೊದಲಾದವರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ದೊಡ್ಡಣ್ಣನ ಸಾಹಿತ್ಯ ಬಳಗ ಅಪರಿಮಿತ ಮತ್ತು ಉತ್ಕೃಷ್ಟವಾದದ್ದು.

ದೊಡ್ಡಣ್ಣನ ಜನಸಂಪರ್ಕ ಮತ್ತು ಬಾಂಧವ್ಯ ಕರ್ನಾಟಕದ ಭೂಗೋಳ ಮತ್ತು ಕನ್ನಡ ಭಾಷೆಯನ್ನು ಮೀರಿ ವ್ಯಾಪಿಸಿತ್ತು. ಅಂತರಾಷ್ಟ್ರೀಯ ಮಟ್ಟದಲ್ಲಿ ಅವನು ಕೆಲವರ ಜೊತೆ ನಿಕಟ ಸಂಪರ್ಕ ಹೊಂದಿದ್ದ. ಕೇಂದ್ರ ಸಾಹಿತ್ಯ ಅಕಾದೆಮಿ, ಭಾರತೀಯ ಜ್ಞಾನಪೀಠ ಅಕಾದೆಮಿ, ನ್ಯಾಷನಲ್ ಬುಕ್ ಟ್ರಸ್ಟ್, ಬಿ.ಡಿ. ಗೊಯೆಂಕ ಪ್ರಶಸ್ತಿ ಆಯ್ಕೆ ಮಂಡಳಿ ಮುಂತಾದ ಪ್ರತಿಷ್ಠಿತ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದ ದೊಡ್ಡಣ್ಣ ಅನೇಕ ರಾಷ್ಟ್ರಮಟ್ಟದ ವ್ಯಕ್ತಿಗಳ ಬಾಂಧವ್ಯ ಬೆಳೆಸಿಕೊಂಡಿದ್ದ. ತೆಲುಗು ಸಾಹಿತಿ ನಾರ್ಲ ವೆಂಕಟೇಶ್ವರರಾವ್, ಅಸ್ಸಾಮಿ ಲೇಖಕ ಬೀರೇಂದ್ರ ಕುಮಾರ್ ಭಟ್ಟಾಚಾರ್ಯ್, ಉರ್ದು ಲೇಖಕ ಗೋಪಿಚಂದ ನಾರಂಗ(2) ಮುಂತಾದ ಅನೇಕ ಪ್ರಮುಖರನ್ನು ದೊಡ್ಡಣ್ಣನ ಆತ್ಮೀಯರ ಪಟ್ಟಿಯಲ್ಲಿ ಹೆಸರಿಸಬಹುದು.

ಸಾರ್ವಜನಿಕವಾಗಿ ಅಷ್ಟೊಂದು ಪ್ರಮಾಣದ ಸಂಪರ್ಕ ಹೊಂದಿದ್ದ ದೊಡ್ಡಣ್ಣ ಅವನ ವೈಯಕ್ತಿಕ ಬದುಕಿನಲ್ಲಿ ಒಂದು ಬಗೆಯ ‘ಅಂತರ್ಮುಖಿ.’ ವೈಯಕ್ತಿಕ ನೆಲೆಯಲ್ಲಿ ಅವನ ಸ್ನೇಹಿತರು ಎಂದು ಯಾರನ್ನಾದರೂ ಗುರುತಿಸಬಹುದೇ ಎಂದು ನಾನು ಯೋಚಿಸಿದ್ದೇನೆ. ಹೆಸರಿಸಬಹುದಾದ ಕೆಲವು ವ್ಯಕ್ತಿಗಳು ನನ್ನ ಮನಸ್ಸಿನಲ್ಲಿ ತೂರಿ ಬರುತ್ತಾರೆ. ಸಿಂದುವಳ್ಳಿ ಅನಂತಮೂರ್ತಿ, ನ. ರತ್ನ, ಡಿ. ವಿ. ಅರಸು, ಎಸ್. ಎಲ್. ಭೈರಪ್ಪ, ಡಾ. ಎಂ. ಮಹದೇವ್, ಎಂ. ಸತ್ಯನಾರಾಯಣರಾವ್, ವಿ. ಎಚ್. ಗೌಡ, ಬಿ.ಎಸ್.ವಿಶ್ವನಾಥ್ ಮೊದಲಾದವರು ಅವರಲ್ಲಿ ಪ್ರಮುಖರು. ಈ ಪಟ್ಟಿ ಕೇವಲ ಒಂದು ಪ್ರಾತಿನಿಧಿಕ ‘ಸ್ಯಾಂಪಲ್’ಅಷ್ಟೇ. ವಾಸ್ತವದಲ್ಲಿ ಅವನ ಸ್ನೇಹಿತರ ಯಾದಿ ಬಹಳ ದೊಡ್ಡದು ಮತ್ತು ಅದು ಭಾಷೆ, ಪ್ರಾಂತ್ಯ ಅಥವಾ ವರ್ಗಗಳಿಗೆ ಅತೀತವಾದದ್ದು.

ಅಡಿ ಟಿಪ್ಪಣಿಗಳು

1.ಜಿ. ಎಚ್. ನಾಯಕ: ‘ಅಂಕಣ’ದ ಅಗ್ರಗಣ್ಯ: ಹಾ. ಮಾ. ನಾಯಕ. ಗುಣಗೌರವ. ಲೋಹಿಯಾ ಪ್ರಕಾಶನ, ಬಳ್ಳಾರಿ, 2002.

2.ಸರಿಯಾಗಿ ಐವತ್ತು ವರ್ಷಗಳ ಹಿಂದೆ ನಾನು ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಡಾ. ನಾರಂಗರು ಅಲ್ಲಿಯ ‘ಸೌತ್ ಏಸಿಯನ್ ಸ್ಟಡೀಸ್’ ವಿಭಾಗದಲ್ಲಿ ಅಧ್ಯಾಪಕರಾಗಿದ್ದು, ನಾನು ವಾಸಿಸುತ್ತಿದ್ದ ಮನೆಯ ಪಕ್ಕದಲ್ಲೇ ವಾಸವಾಗಿದ್ದು, ಕಿರಿಯನಾಗಿದ್ದ ನನ್ನನ್ನು ವಿಶ್ವಾಸದಿಂದ ನಡೆಸಿಕೊಂಡ ನೆನಪು ಉಳಿದುಕೊಂಡಿದೆ.

‍ಲೇಖಕರು avadhi

20 September, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading