ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ದೇವರು ರಜೆಯಲ್ಲಿದ್ದಾನೆ’ – ಸೂರಿ ಬರೀತಾರೆ

ಸೂರಿ

ನಾವು ಬೆಂಗಳೂರಿನಲ್ಲಿ ಮನೆ ಮಾಡಿದ ಹೊಸ ದಿನಗಳು ಅವು. ಅಂದರೆ ಸುಮಾರು 1981-82ರ ಕಾಲ. ಒಂದು ಜಾಹೀರಾತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆನಾದ್ದರಿಂದ ಕರಾರುವಕ್ಕಾದ ದಿನಚರಿ, ಬೆಳಿಗ್ಗೆ ಹತ್ತಕ್ಕೆ ಹೋದರೆ ಸಂಜೆ ಆರಕ್ಕೆಲ್ಲಾ ಮನೆಗೆ ವಾಪಸ್ಸು. ಟ್ರಾಫಿಕ್ಕು, ಜಾಮು ಅಂತ ಗೋಳಿರದ ಕಾಲ ಅದು. ಹಾಗಾಗಿ ಆರರ ನಂತರದ ಸಂಜೆಯೆಲ್ಲಾ ನಮ್ಮ ಸ್ವತ್ತು. ಹೊತ್ತು ಕಳೆಯಲು ಗೆಳೆಯರು, ನಾಟಕವಿದ್ದರೂ ವಾರದ ಎಲ್ಲಾ ಸಂಜೆಗಳನ್ನು ಕಳೆಯಲು ಇನ್ನಾವುದದಾರೂ ಹವ್ಯಾಸದ ಅನಿವಾರ್ಯತೆಯಿದ್ದೇ ಇತ್ತು.
ರಾಗಿಗುಡ್ಡಕ್ಕೆ ನೇರವಾಗಿ ಢಿಕ್ಕಿ ಹೊಡೆಯುವ ದಾರಿಯಲ್ಲಿ ಒಂದು ಸಕ್ಯರ್ುಲೇಟಿಂಗ್ ಲೈಬ್ರರಿ – ಗುರುದತ್ ಸಕ್ಯರ್ುಲೇಟಿಂಗ್ ಲೈಬ್ರರಿ. ಮಾಲಿಕರ ಹೆಸರು ನನಗೆ ಮರೆತಿದೆ. ದಿನಕ್ಕೊಂದು ಕಾದಂಬರಿ ತಂದು ಓದುವವರ ಪಾಲಿನ ಸ್ವರ್ಗ ಅದು. ಕನ್ನಡದ ಕಾದಂಬರಿಯಾದರೆ ಐವತ್ತು ಪೈಸೆ. ಭೈರಪ್ಪ, ಟಿ ಕೆ ರಾಮರಾಯರಂಥವರ ಕಾದಂಬರಿಗಳಾದರೆ ಒಂದು ರೂಪಾಯಿ ದಿನಕ್ಕೆ. ಇಂಗ್ಲಿಷ್ ಕಾದಂಬರಿಗಳಾದರೆ ಒಂದು ರೂಪಾಯಿ ದಿನಕ್ಕೆ. ಹೊಚ್ಚ ಹೊಸ ಕಾದಂಬರಿಗಳು ಬಂದರೆ ಹೆಸರು ಹಚ್ಚಿಸಿ ಸರದಿಗೆ ಕಾಯಬೇಕು. ಮಾಲಿಕರಿಗಂತೂ ಹೆಚ್ಚೂ ಕಮ್ಮಿ ಎಲ್ಲಾ ಸದಸ್ಯರ (ಗಿರಾಕಿಗಳು ಅಂತ ಅವರು ನಮ್ಮನ್ನು ಕರೆದದ್ದು ನೆನಪಿಲ್ಲ ನನಗೆ) ಹೆಸರುಗಳು ನೆನಪಿರುತ್ತಿದ್ದವು. ಒಂದೆರಡು ವಾರ ನೀವು ದಿನಂಪ್ರತಿ ಪುಸ್ತಕಗಳನ್ನು ಬಾಡಿಗೆಗೆ ಒಯ್ದರೆ ನಿಮ್ಮ ಅಭಿರುಚಿಗೆ ತಕ್ಕಂತೆ ಅವರೇ ಪುಸ್ತಕಗಳನ್ನು ಎತ್ತಿ ಕೊಡುತ್ತಿದ್ದರು.
ವಾಡಿಕೆಯಂತೆ ಒಂದೆರಡು ವಾರಗಳ ನಂತರ ನನ್ನ ಮತ್ತು ನನ್ನ ಹೆಂಡತಿಯ ಹೆಸರುಗಳೂ, ನಮ್ಮ ಅಭಿರುಚಿಗಳೂ ಅವರಿಗೆ ಪರಿಚಯವಾದವು. ನಾವು ಒಳಗೆ ಹೊಕ್ಕಂತೇ ಮೇಜಿನಡಿ ಸಾಲಾಗಿ ಜೋಡಿಸಿದ್ದ ಒಂದಷ್ಟು ಪುಸ್ತಕಗಳನ್ನು ಹೊರತೆಗೆಯುತ್ತಿದ್ದರು. ಒಮ್ಮೊಮ್ಮೆ ಹೊಸ ಪುಸ್ತಕಗಳು ಬಂದಲ್ಲಿ, ನಮಗಾಗೇ ಕಾದಿರಿಸಿಟ್ಟಂತೆ ನಾಟಕವಾಡುತ್ತಾ, ಅದನ್ನು ನಮ್ಮ ಕೈಗೆ ಕೊಡುತ್ತಾ, ಸಾರ್, ಎರಡೇ ದಿನ. ಲೇಟ್ ಮಾಡಬೇಡಿ, ಭಾಳಾ ಜನ ಕಾಯ್ತಿದಾರೆ ಅಂತ ತಾಕೀತು ಮಾಡುತ್ತಿದ್ದರು. ಅರೆ ಕಿವಿಮುರಿದ, ದಪ್ಪನೆಯ ಹೊದಿಕೆ ಹಾಕಿದ, ತನ್ನದೊಂದು ವಿಶೇಷ ಗಮಲಿನಿಂದ ಪುಳಕಗೊಳಿಸುತ್ತಿದ್ದ ಪುಸ್ತಕಗಳು ಅವು. ಪುಸ್ತಕಗಳ ಸಹವಾಸದಲ್ಲಿ ಸಂಜೆಗಳು ಹಗುರಾಗುತ್ತಿದ್ದವು. ಬದುಕು ಸಹ್ಯವಾಗುತ್ತಿತ್ತು. ಒಂದು ಪುಸ್ತಕ ಓದಿ ಮುಗಿಸಿದಲ್ಲಿ ಮತ್ತೊಂದು ತಯಾರು. ವಾರಕ್ಕೆ ಎರಡು ಪುಸ್ತಕ ಓದಲೇ ಬೇಕು.
ನಮ್ಮ ತಂದೆಗೆ (ಅವರನ್ನು ಅಣ್ಣ ಅಂತ ಕರೀತಾ ಇದ್ದದ್ದು) ಓದುವ ಹವ್ಯಾಸ. ಹಾಗಂತ ಅವರು ಸಿಕ್ಕ ಸಿಕ್ಕ ಪುಸ್ತಕಗಳನ್ನು ಓದಿದ ನೆನಪಿಲ್ಲ. ಅವರದ್ದೇ ಒಂದು ಅಭಿರುಚಿ ಇತ್ತು. ಅವರ ಓದೂ ಬಹಳ ವಿಶಿಷ್ಟವಾದದ್ದು. ಅರ್ಲ್ ಸ್ಟಾನ್ಲೀ ಗಾರ್ಡನರ್ ಬರೆದ ಪೆರ್ರಿಮ್ಯಾಸನ್ ಪುಸ್ತಗಳನ್ನು ಒಂದೊಂದಾಗಿ ತಂದು, ಓದಿ ಅವುಗಳನ್ನು, ಗೋಡೆಯ ಮೇಲಿದ್ದ ಹಲಗೆಯ ಮೇಲೆ ಸಾಲಾಗಿ ಜೋಡಿಸುತ್ತಿದ್ದರು. ಅವರಿಗೆ ಚೇಸ್ ಅಷ್ಟು ಇಷ್ಟವಿರಲಿಲ್ಲ. ಚೇಸ್ ಪುಸ್ತಗಳನ್ನು ನೋಡಿದ ನೆನಪು ನನಗಿಲ್ಲ. ಜೊತೆಯಲ್ಲೇ ಎ ಎ ಫೇರ್ ಅನ್ನೋ ಲೇಖಕನ ಪುಸ್ತಕಗಳು. (ಈ ಎ ಎ ಫೇರ್ ಮತ್ತು ಅಲರ್ ಸ್ಟಾನ್ಲೀ ಗಾರ್ಡನರ್ ಒಬ್ಬರೇ ಅಂತ ನನಗೆ ಗೊತ್ತಾಗಿದ್ದು ಬಹಳ ದಶಕಗಳ ನಂತರ.) ಎಡ್ವರ್ಡ್ ಎಸ್ ಅರೋನ್ಸ್, ಎ ಜೇ ಕ್ರಾನಿನ್ ಪುಸ್ತಕಗಳೂ ಸಾಲಾಗಿ ಹಲಗೆಯ ಮೇಲೆ ಕೂರುತ್ತಿದ್ದವು. ಪಿ ಜಿ ವುಡ್ಹೌಸ್ನ ಕಟ್ಟಾ ಅಭಿಮಾನಿ ಅವರು.. ಯಥಾಪ್ರಕಾರ ಆತನ ಎಲ್ಲಾ ಪುಸ್ತಕಗಳನ್ನೂ ತಂದು, ಓದಿ ಹಲಗೆಯ ಮೇಲೆ ಸಾಲಾಗಿ ಜೋಡಿಸುತ್ತಿದ್ದರು. ಆಗಲೇ ನನಗೆ ವೂಸ್ಟರ್, ಜೀವ್ಸ್, ಸ್ಮಿತ್, ಬ್ಲಾಂಡಿಂಗ್ಸ್ ಕಾಸಲ್, ಡ್ರೋನ್ ಕ್ಲಬ್, ಅಂಕಲ್ ಫ್ರೆಡ್ ಇವರೆಲ್ಲರ ಪರಿಚಯವಾಗಿದ್ದು. ಇವೆಲ್ಲವುಗಳ ನಡುವೆ ಬೀ ಹೈವ್ ಪ್ರಕಾಶನದ ಪುಸ್ತಕಗಳು, ಒಂದು ಹತ್ತೋ ಹದಿನೈದೋ ಇರುತ್ತಿದ್ದವು.

ನಮ್ಮ ಆಗಿನ ಕಾಲದ ಭಾಷೆಯಲ್ಲಿ ಹೇಳುವುದಾದಲ್ಲಿ ಅವೆಲ್ಲಾ ಪೋಲಿ ಪುಸ್ತಕಗಳು. ವುಡ್ಹೌಸ್ನ ಎಲ್ಲಾ ಪುಸ್ತಕಗಳಿಗೂ ಹೆಚ್ಚೂ ಕಮ್ಮಿ ಒಂದೇ ಬಣ್ಣದ ಹೊದಿಕೆ, ದಟ್ಟ ಕೇಸರಿ ಅಥವಾ ಕೆಂಪು ಅಥವಾ ಹಳದೀ ಬಣ್ಣದ ಹೊದಿಕೆಗಳಲ್ಲಿ ಮಧ್ಯೆ ತೆರವಾದ ಬಿಳೀ ಬಣ್ಣದಲ್ಲಿ ಕಾದಂಬರಿಯ ಲೇಖಕನ ಹೆಸರು. ಉಳಿದಂತೆ ಯಾವುದೋ ಚಿತ್ರಕಾರ ಬಿಡಿಸಿದ ಚಿತ್ರಗಳು. ವುಡ್ಹೌಸ್ನ, ಅಥವಾ ಗಾರ್ಡನರ್ನ ಅಥವಾ ಕ್ರಾನಿನ್ನ ಪುಸ್ತಕಗಳನ್ನು ಓದಲು ನಮಗೆ ಅನುಮತಿಯಿತ್ತು. ಉಳಿದ ಪುಸ್ತಕಗಳನ್ನು ನಾವು ಕದ್ದು ಕದ್ದು ಓದಬೇಕಿತ್ತು. ಹಲಗೆಯ ಮೇಲಿನ ಪುಸ್ತಕಗಳಲ್ಲಿ ಕನ್ನಡದ ಸಾಲಿನಲ್ಲಿ ಅನಕೃ, ತರಾಸು, ಭಾರತೀಸುತ ಮುಂಚೂಣಿಯಲ್ಲಿದ್ದರು. ಇವರ ಪುಸ್ತಕಗಳನ್ನು ಓದಲು ನಮಗೆ ಅನುಮತಿಯಿರಲಿಲ್ಲ. ಸುಮಾರು ಇನ್ನೂರು ಮುನ್ನೂರು ಪುಸ್ತಕಗಳು ಇದ್ದವೆಂದು ನನ್ನ ನೆನಪು. ಕನ್ನಡದ ಎಲ್ಲಾ ಪ್ರಸಿದ್ಧ ಕವಿಗಳ ಕವನ ಸಂಕಲನಗಳು ಅವರು ತಮ್ಮ ಕೈಗೆಟಕುವಂತೆ ಇಟ್ಟುಕೊಳ್ಳುತ್ತಿದ್ದರು. ರೇಡಿಯೋದಲ್ಲಿ ಒಂದು ಹಾಡು ಬಿತ್ತರವಾಗುತ್ತಿದ್ದಂತೇ ಆ ಸಂಕಲನವನ್ನು ತೆಗೆದು ಜೊತೆಗೇ ಹಾಡಿಕೊಳ್ಳುತ್ತಿದ್ದರು. ವ್ಯವಹಾರದಲ್ಲಿ ಯಾವುದೋ ಒಂದು ಯಡವಟ್ಟು ಮಾಡಿಕೊಂಡು ವಿಪರೀತ ಸಾಲಕ್ಕೆ ಬಿದ್ದು ಕೊನೆಗೆ ಒಂದು ದಿನ ಸೆಕೆಂಡ್ಹ್ಯಾಂಡ್ ಪುಸ್ತಕದಂಗಡಿಯ ಮಾಲಿಕನಿಗೆ, ನಮ್ಮ ಕಣ್ಣೆದುರೇ ಅಷ್ಟನ್ನೂ ಮಾರಿಬಿಟ್ಟರು. ಅಂದಿನ ಅವರ ನೋವು ನಮಗೆ ಅಂದು ಅರ್ಥವಾಗಿರಲಿಲ್ಲ. ಹಣದ ಅನಿವಾರ್ಯತೆಯಲ್ಲಿ ಪುಸ್ತಕಗಳನ್ನು ಮಾರಬೇಕಾದ ಸಂದರ್ಭದ ಬಿಸಿ ನಮಗೆ ಅರಿವಾಗಿರಲಿಲ್ಲ. ಇನ್ನೂ ಓದಬೇಕಾದ ಪುಸ್ತಕಗಳು ಬಹಳಷ್ಟಿದ್ದವು. ಅಂದಿನ ನಷ್ಟದ ಅರಿವು ನಮಗೆ ಅಂದು ಆಗಿರಲಿಲ್ಲ. ಇಂದು ಒಮ್ಮೆ ಹೊರಳಿ ಯೋಚಿಸಿದಾಗ ಯಾಕೋ ಮನಸ್ಸು ಪಿಚ್ಚೆನಿಸುತ್ತದೆ.
ಒಮ್ಮೊಮ್ಮೆ ಯೋಚಿಸುತ್ತೇನೆ. ಈ ಪುಸ್ತಕದ ಅಂಗಡಿಗಳೆಲ್ಲಾ ಎಲ್ಲಿ ಹೋದವು ಅಂತ. ಸುಮಾರು ವರ್ಷಗಳ ಕೆಳಗೆ ರಾಗಿಗುಡ್ಡದ ಬೀದಿಯಲ್ಲಿದ್ದ ಆ ಸಕ್ಯರ್ುಲೇಟಿಂಗ್ ಲೈಬ್ರರಿಯನ್ನು ಹುಡುಕಿಕೊಂಡು ಹೋಗಿದ್ದೆ. ಅಲ್ಲಿ ಒಂದು ಕಾಂಡಿಮೆಂಟ್ ಶಾಪ್ ಬಂದಿತ್ತು. ಆ ಅಂಗಡಿ ಹೇಳ ಹೆಸರಿಲ್ಲದಂತೆ, ಯಾರೋ ಸಾರಿಸಿ ತೊಳೆದಿಟ್ಟಂತೆ, ಯಾವುದೋ ಶಾಪಕ್ಕೆ ಒಳಗಾದ ಅಪ್ಸರೆಗೆ ಮತ್ತೆ ಜೀವ ಬಂದು ಆಕೆ ಜಾಗ ಖಾಲಿ ಮಾಡಿದಂತೆ ಮಾಯವಾಗಿತ್ತು. ನಂತರದಲ್ಲೂ ಬೆಂಗಳೂರಿನಲ್ಲಿ ಸುಮಾರು ಹುಡುಕಿದ್ದೇನೆ, ಅಂತಹ ಲೈಬ್ರರಿಗಳನ್ನು.
ಏನಾದವು ಈ ಅಂಗಡಿಗಳು? ಸರದಿಯಲ್ಲಿ ಹೆಸರು ಹಚ್ಚಿ ಪುಸ್ತಕಕ್ಕಾಗಿ ಕಾಯುತ್ತಿದ್ದ ಮಧ್ಯಮ ವರ್ಗದ ಮಹಿಳೆಯರೆಲ್ಲಾ ಎಲ್ಲಿ ಹೋದರು? ಮಧ್ಯಾಹ್ನದ ಅಡಿಗೆಯಾದ ಮೇಲೆ, ಮನೆಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಪುಸ್ತಕನ್ನು ಎದೆಗವಚಿಕೊಂಡು ಓದುತ್ತಿದ್ದವರೆಲ್ಲಾ ಎಲ್ಲಿ ಹೋದರು? ಯಾವ ಮಾಯೆ ಇವರನ್ನು ಅದೆಲ್ಲಿಗೆ ಕರೆದೊಯ್ದಿದೆ? ಉತ್ತರ ಹುಡುಕಲು ಹೆಚ್ಚು ದೂರ ಹೋಗಬೇಕಿಲ್ಲ. ಮನೆ ಮನೆಯಲ್ಲಿ ತರಹೇವಾರಿ ಗಾತ್ರಗಳಲ್ಲಿ, ಮುಸುಕು ಹೊದ್ದೋ, ಬಟಾಬಯಲಾಗಿ ನಿಂತೋ, ಕೂತೋ ಇರುವ ಟೆಲಿವಿಷನ್ ಒಂದು ರೀತಿಯಲ್ಲಿ ಇದಕ್ಕೆ ಕಾರಣ. ಭಗವಂತನಿದ್ದಾನೋ ಇಲ್ಲವೋ, ಪ್ರತಿ ಮನೆಯಲ್ಲಿ ಟೆಲಿವಿಷನ್ ಇದೆ ಅನ್ನೋದು ಗ್ಯಾರಂಟಿ, ಅಷ್ಟರ ಮಟ್ಟಿಗೆ ಅದು ಸರ್ವಾಂತರ್ಯಾಮಿ. ಟೆಲಿವಿಷನ್ ಭಾರತಕ್ಕೆ ಬಂದಾಗ ಇದು ಒಂದು ಸಂಸ್ಕೃತಿಯನ್ನೇ ನಾಶ ಮಾಡಿಬಿಡಬಲ್ಲ, ಒಂದು ದೇಶದ ಸಾಮಾಜಿಕ ಎಳೆಗಳನ್ನೇ ತುಂಡು ಮಾಡಿಬಿಡಬಲ್ಲ ಸಾಧನವಾಗಬಹುದೆಂದು ಯಾರಿಗೂ ತಿಳಿದಿರಲಿಲ್ಲ. ಒಂದು ಗಂಡ-ಹೆಂಡಿರ ನಡವೆ ನುಸುಳಿ ಮಾತಿಲ್ಲದ ಕಂದಕವನ್ನೇ ಹುಟ್ಟು ಹಾಕಬಲ್ಲದು ಎಂಬ ಅರಿವೇ ಇರಲಿಲ್ಲ.
ಬಿಡಿಸಿ ಹೇಳುತ್ತೇನೆ. ಇಡೀ ಸಂಸಾರ ಒಂದೆಡೆ ಕೂತು ಒಂದೇ ಟೇಬಲ್ಲಿನ ಮೇಲೆ ಜಗತ್ತನ್ನೇ ತನ್ನ ಮಾತಿನಲ್ಲಿ ಎಳೆದು ತಂದು ಊಟ ಮಾಡುತ್ತಿದ್ದ ಆ ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತು. ಈ ಟೆಲಿವಿಷನ್ ಬಂತೂ ನೋಡಿ, ಯಾರೂ ಯಾರೊಂದಿಗೂ ಮಾತನಾಡುವುದಿಲ್ಲ. ಕೈಯಲ್ಲಿ ಊಟದ ತಟ್ಟೆ ಹಿಡಿದು, ಈ ಡಬ್ಬದ ಮುಂದೆ ಕೂತು ಬಿಟ್ಟರೆ ಮುಗಿಯಿತು, ಮುಂದಿನ ನಮ್ಮ ನಡೆ-ನುಡಿಯೆಲ್ಲಾ (ನಡೆ ಮಾತ್ರ, ನುಡಿಯೆಲ್ಲಿಂದ ಬಂತು, ಮಾತನಾಡಿದರೆ ತಾನೇ) ಮೂಕಿಚಿತ್ರ. ಮಾತನಾಡುವುದು ಟೆಲಿವಿಷನ್ನಲ್ಲಿನ ಪಾತ್ರಗಳು ಮಾತ್ರ. ಕಣ್ಣೀರಿಡುವುದು, ನಗುವುದು, ಅಲ್ಲಿನ ದೃಶ್ಯಕ್ಕೆ ಅಳುವುದೋ ನಗುವುದೋ ಮಾಡುವುದು ಮಾತ್ರ ಈ ನರಜೀವಿಗಳ ಕರ್ತವ್ಯ. ನೋಡಿದಾಕ್ಷಣ ಕಥೆ ಮುಗಿಯಿತೇ, ಮಾರನೇ ದಿನ ಆಫೀಸಿನಲ್ಲೋ, ಪಾರ್ಟಿಗಳಲ್ಲೋ ಆ ದೃಶ್ಯವನ್ನು ಮತ್ತೆ ಚರ್ಚಿಸುತ್ತಾ ಮತ್ತೊಮ್ಮೆ ಅಳುವುದೋ ನಗುವುದೋ ಮಾಡಬೇಕು. ಇಲ್ಲವಾದಲ್ಲಿ ತಲೆ ನೂರು ಹೋಳಾಗುವ ಶಾಪ ಗ್ಯಾರಂಟಿ. ಇದಕ್ಕೆ ಕಾರಣವಿಲ್ಲದೇ ಇಲ್ಲ. ಅನುಪಮಾ, ವಾಣಿ, ಮುಕ್ತ, ಇಂದಿರಾ, ತ್ರಿವೇಣಿ ಕಾದಂಬರಿಗಳ ಪಾತ್ರಗಳು ಈಗ ನೇರವಾಗಿ ಬೆಡ್ರೂಮಿಗೋ, ಹಾಲಿಗೋ ಬಂದು ಬಿಡುತ್ತವೆ. ತಮ್ಮೆದುರು ಕೂತು, ಜಗತ್ತನ್ನೇ ಮರೆತು ತಮ್ಮ ಮುಂದೆ ಕೂತಿರುವ ಹುಲು ಮಾನವರನ್ನು ಕುರಿತು ನೇರವಾಗಿ ಸಂಭಾಷಿಸುತ್ತವೆ. ಪಾತ್ರಗಳೇ ನೇರವಾಗಿ ಕಣ್ಣೆದುರೇ ನಿಲ್ಲುವಂತಿರಬೇಕಾದರೆ, ಕಾದಂಬರಿಗಳಲ್ಲಿ ಓದಿ ಅವುಗಳನ್ನು ಚಿತ್ರಿಸಿಕೊಳ್ಳಬೇಕಾದ ಕಷ್ಟ ಯಾರಿಗೆ ಬೇಕು ಹೇಳಿ. ಒಂದು ಮನೆಯಲ್ಲಿ ಎರಡೆರಡು ಟೀವಿಗಳಿದ್ದಲ್ಲಿ ಸಾಂಸಾರಿಕ ಅವಸಾನ ತಪ್ಪಿದ್ದಲ್ಲ.
ಈ ಟೆಲಿವಿಷನ್ ಹೇಗೆ ನುಸುಳಿದೆ ನಮ್ಮ ಜೀವನದಲ್ಲಿ? ಮದುವೆ, ಮುಂಜಿ, ಗೃಹಪ್ರವೇಶ, ಆಫೀಸಿನ ಲಂಚ್ ಬ್ರೇಕ್, ಸಂಜೆ ಮನೆಯ ಕಟ್ಟೆಯ ಮೇಲೋ, ಕಾಂಪೋಂಡಿನ ಆಚೀಚೆ ನಿಂತೋ ಮಾಡುತ್ತಿದ್ದ ಗಾಸಿಪ್ಗಳು, ಹರಟೆಗಳು ಈಗ ನೇರವಾಗಿ ಪ್ರತಿಯೊಂದು ಮನೆಗೇ ಪ್ರತಿ ಅರ್ಧ ಗಂಟೆಗೊಮ್ಮೆ ಬೇರೆ ಬೇರೆ ಕಥೆಗಳ ಹೆಸರಿನಡಿಯಲ್ಲಿ ನಡೆಯುತ್ತಿದೆ. ನಮ್ಮ ಮಾತು, ಗಾಸಿಪ್, ಹರಟೆ ನಿಂತು ಬಿಟ್ಟಿದೆ. ಅದೊಂದು ಕಾಲವಿತ್ತು, ಇಬ್ಬರು ಹೆಣ್ಣು ಮಕ್ಕಳು ಸೇರಿದಲ್ಲಿ ಹೊಸ ಅಡುಗೆ ಮಾಡುವ ಪರಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಈಗ ಅದಕ್ಕೂ ತಿಲಾಂಜಲಿಯನ್ನಿತ್ತಿದ್ದೇವೆ. ಯಾಕೆಂದರೆ ಅದೂ ಪ್ರತಿ ದಿನ ಮಧ್ಯಾಹ್ನ ನೇರ ಅಡುಗೆಮನೆಗೇ ಬಂದು ಬಿಡುತ್ತದೆ. ನಮ್ಮ ಕಷ್ಟ-ಸುಖ-ದುಃಖ-ದುಮ್ಮಾನಗಳನ್ನು ತೀರಾ ಆಪ್ತರಾದವರಿಗೆ ಹೇಳಿಕೊಂಡು ಒಂದಿಷ್ಟು ಹಗುರಾಗುತ್ತಿದ್ದೆವು. ಈಗ ಟೆಲಿವಿಷನ್ನಲ್ಲಿ ಅದಕ್ಕೂ ಉತ್ತರಗಳಿವೆ. ನಮ್ಮ ಸುಖ-ದುಃಖಗಳು ನಮ್ಮಲ್ಲೇ ಉಳಿಯುವಂತಾಗಿದೆ, ಅಥವಾ ಸಾರ್ವಜನಿಕ ಸ್ವತ್ತುಗಳಾಗಿವೆ. ದೇವರ ಮೇಲೆ ಭಾರ ಹಾಕಿ ಕಾಯಲೂ ಸಾಧ್ಯವಿಲ್ಲದಂತಾಗಿದೆ ನಮಗೀಗ. ಬೆಳಿಗ್ಗೆ ಯಾವುದೇ ಚಾನೆಲ್ ನೋಡಿ, ಢಾಳಾಗಿ ವಿಭೂತಿ ಬಳಿದುಕೊಂಡು, ಮೈ ಮೇಲೆ ಮಣ ಭಾರದ ಬಂಗಾರದ ಒಡವೆ ಹಾಕಿಕೊಂಡು, ತಮಗಿಂತಾ ನಾಕು ಪಟ್ಟು ದೊಡ್ಡದಿರುವ, ಶ್ರೀಕೃಷ್ಣದೇವರಾಯ ಬದುಕ್ಕಿದ್ದಲ್ಲಿ, ಅವನಿಗೇ ಇಂಫೀರಿಯಾರಿಟಿ ಕಾಂಪ್ಲೆಕ್ಸ್ ತರುವ ಮಾದರಿಯ ಸಿಂಹಾಸನದಲ್ಲಿ ಕೂತು, ಪರೀಕ್ಷೆ ಪಾಸಾಗಬೇಕೆಂದಲ್ಲಿ ಎಮ್ಮೆಯ ಹಾಲಿನಲ್ಲಿ ಒಂದಿಡೀ ರಾತ್ರಿ ನೆನೆಸಿಟ್ಟ ಹತ್ತಿಯ ದಾರಕ್ಕೆ ಅರಶಿಣ ಸವರಿ, ಅಶ್ವತ್ಥಮರದ ಬೇರಿಗೆ ಕಟ್ಟಿ, (ಓದದಿದ್ದರೂ ಪರವಾಗಿಲ್ಲ) ಪಾಸಾಗದಿದ್ದಲ್ಲಿ ಕೇಳಿ ಎಂದು ಡೈರೆಕ್ಟಾಗಿ ಹುಕುಂ ಕೊಡುವ ದೈವಾಂಶ ಸಂಭೂತರಿದ್ದಾರೆ. ಅಲ್ಲಿಗೆ ದೇವರಿಗೇ ನಾವು ರಜ ಕೊಟ್ಟುಬಿಟ್ಟಿದ್ದೇವೆ. ನಮ್ಮ ವೈಯಕ್ತಿಕ, ಅಥವಾ ಸಾಂಸಾರಿಕ ಜೀವನದ ಯಾವುದೇ ಮಗ್ಗುಲನ್ನು ತೆಗೆದುಕೊಂಡರೂ ಅಲ್ಲಿಗೆ ಟೆಲಿವಿಷನ್ ನುಗ್ಗಿದೆ. ನಮ್ಮೆಲ್ಲಾ ಭಾವನೆಗಳಿಗೆ, ನಮ್ಮೆಲ್ಲಾ ಬಂಧನಗಳಿಗೆ, ನಮ್ಮೆಲ್ಲಾ ಪರಂಪರೆಗಳಿಗೆ, ನಮ್ಮೆಲ್ಲಾ ಸಂಬಂಧಗಳಿಗೆ ಒಂದು ರೀತಿಯ ತಿಲಾಂಜಲಿಯನ್ನಿತ್ತಿದ್ದೇವೆ.
—-
ಪಿ ಜಿ ವುಡ್ಹೌಸ್ನ ಮಾತು ಬಂದಿತಲ್ಲಾ? ವುಡ್ಹೌಸ್ನ ಸ್ಮಿತ್ ಸರಣಿಯಲ್ಲಿ ನನಗೆ ಥಟ್ಟನೆ ನೆನಪಾದ ಒಂದು ಮಾತನ್ನು ಹೇಳಿಬಿಡುತ್ತೇನೆ. ಅದನ್ನು ಕನ್ನಡದಲ್ಲಿ ಬರೆಯಲು ಸಾಧ್ಯವಿಲ್ಲವಾದ್ದರಿಂದ ಇಂಗ್ಲಿಷ್ನಲ್ಲೇ ಬರೆಯುತ್ತೇನೆ. ಓದಿ ನಕ್ಕು ಬಿಡಿ. ಸ್ಮಿತ್ ಸರಣಿಯ ನಾಯಕನೇ ಸ್ಮಿತ್. ಈತ ತನ್ನ ಹೆಸರನ್ನು ಬರೆದುಕೊಳ್ಳುವುದು Psmith ಅಂತ. ಯಾರನ್ನೇ ಭೇಟಿಯಾದಾಗಲೂ ಸ್ಮಿತ್ ಎಂದಿನ ಇಂಗ್ಲಿಷ್ ವಾಡಿಕೆಯಂತೆ ಕೈಯನ್ನು ಮುಂದೆ ಚಾಚಿ, ತನ್ನ ಪರಿಚಯ ಮಾಡಿಕೊಳ್ಳುತ್ತಾನೆ
I am Smith P Silent
ಸೌಜನ್ಯ : ಉದಯವಾಣಿ

‍ಲೇಖಕರು G

7 July, 2014

5 Comments

  1. subhash

    ಈಗಲೂ ರಾಗಿಗುಡ್ಡದ ಮುಂದೆ ಗುರುದತ್ ಲೈಬ್ರರೀ ಇದೆ. ಅವರ ಜ್ಞಾಪಕ ಅಷ್ಟೇ ಚೆನ್ನಾಗಿದೆ.

  2. shobhavenkatesh

    lekhana chennagide. namma atte yavaru oota adamela one dodda kadambari mugisuthiddaru ondu dinadalli.adu nenapige bantu. nimma lekhanadinda haleya nenapu bantu.

  3. lalithasiddabasavaiah

    ಅನೇಕ ಜನದ ಮನಸ್ಸಿನ ಮಾತನ್ನೆ ಬರೆದಿದ್ದೀರಿ, ಲೇಖನ ಇಷ್ಟವಾಯಿತು.

  4. kusumabaale

    ಈ ಲೇಖನ ನೀವು ಬರೆದಿದೀರಿ!!ಎಳೆದೆಳೆದು ಟಿವಿ ಕಥೆಗಳ ರುಚಿ ಹತ್ತಿಸಿದವರು!!! 🙂

  5. Palahalli Vishwanath

    ಲೇಖನ ಇಷ್ಟವಾಯಿತು. ಚಿಕ್ಕ ಪುಟ್ಟ ಲೈಬರಿಗಳೇ ನಮಗೆ ಓದುವ ಅಭ್ಯಾಸ ಮಾಡಿದವು. ಈಗಲೂ ಬೇರೆ ರೂಪದಲ್ಲಿ ಲೈಬ್ರರಿಗಳು ವಾಪಸ್ಸು ಬರುತ್ತಿವೆ. ಸ್ವಲ್ಪ ದುಬಾರಿ. ನಾನು ವುಡ್ ಹೌಸ್ ಅಭಿಮಾನಿ. ಅವಧಿಯಲ್ಲಿ ಅಲ್ಪ ಸ್ವಲ್ಪ ವುಡ್ ಹೌಸ್ ಎನ್ನುವ ಶೀರ್ಷ್ಕೆಯಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದೇನೆ. ದಯವಿಟ್ಟು ಸಮಯವಿದ್ದಾಗ ಓದಿ ಕಾಮೆ೦ಟ್ ಮಾಡಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading