ಡಾ.ಎಸ್.ಬಿ. ಜೋಗುರ
ದಿನಾಂಕ 26-2-2013 ರಂದು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜರುಗಿದ ದೇವನೂರು ಮಹಾದೇವರ ಕೃತಿಗಳ ಕುರಿತು ಒಂದು ದಿನದ ವಿಚಾರ ಸಂಕಿರಣದಲ್ಲಿ ‘ಎದೆಗೆ ಬಿದ್ದ ಅಕ್ಷರ’ ಕುರಿತು ಮಾತು
ಸ್ವತ: ದೇವನೂರು ಮಹಾದೇವ, ವ್ಯಕ್ತಿಯಾಗಿ, ಶಕ್ತಿಯಾಗಿ ಒಂದು ಸೃಜನಶೀಲ ಕೃತಿಯಿರುವಂತೆಯೇ ನಮ್ಮ ನಡುವೆ ಬದುಕಿರುವದಿದೆ. ಮಾತಿನಲ್ಲಿ ನಂಬುಗೆಯನ್ನೇ ಕಳೆದುಕೊಂಡ ಅವರ ಕ್ರೀಯಾಶೀಲತೆ ಮತ್ತು ಆಲೋಚನಾ ಕ್ರಮಗಳು ಅವರ ಬದುಕನ್ನು.. ಬರಹವನ್ನು ಅನನ್ಯವಾಗಿಸಿವೆ. ಮಹಾದೇವ ಅವರು ಸುಮಾರು ನಾಲ್ಕುವರೆ ದಶಕಗಳಿಂದ ಬರೆಯುತ್ತ ಬಂದದ್ದನ್ನು ಅಷ್ಟೇ ಅವಧಿಯಲ್ಲಿ ಇಡೀ ರಾಜ್ಯದ ಜನ ಮತ್ತೆ ಮತ್ತೆ ಓದಿದರೂ ತಿಳಿಯದೇ ಉಳಿವ ಭಾಗ ಸುಮಾರು ಕಾಲು ಭಾಗದಷ್ಟಿದೆ.
ಹೀಗಾಗಿ ಅವರ ಎಲ್ಲ ಬರವಣಿಗೆಯನ್ನು ನನ್ನ ಗ್ರಹಿಕೆ ಮತ್ತು ಅರಿವಿನ ಮಿತಿಯಲ್ಲಿಟ್ಟು ಮಾತನಾಡುವ ಜೊತೆಜೊತೆಗೆ ಗ್ರಹಿಕೆಗೆ ಸಿಗದ ಕಾಲು ಭಾಗವನ್ನು ಹಾಗೇ ಎತ್ತಿ ತಣ್ಣಗೆ ಎದೆಯ ಗೂಡಲ್ಲಿಡಬಯಸುತ್ತೇನೆ. ತಿಳಿಯದೇ ಉಳಿವ ಭಾಗ ಎನ್ನುವಾಗ ಅವರ ದ್ಯಾವನೂರು, ಒಡಲಾಳ, ಕುಸುಮಬಾಲೆ ಎಂದು ಹೇಳುವುದನ್ನೂ ಮರೆಯಲಾರೆ.
ಇಂದು ಬಿಡುಗಡೆಯಾದ 5 ನೆ ಆವೃತ್ತಿ ‘ಎದೆಗೆ ಬಿದ್ದ ಅಕ್ಷರ’ ಹಾಗಲ್ಲ. ಯಾವುದೇ ರೀತಿಯ ಹಂಪ್ಸಗಳಿಲ್ಲದೇ ಸರಾಗವಾಗಿ ಓದಿಸಿಕೊಂಡು, ಓಡಿಸಿಕೊಂಡು ಹೋಗುವ ಕೃತಿ. ಓದುವವರಿಗಿಂತಲೂ ಬರೆಯುವವರು ಹೆಚ್ಚಿಗಿರುವ ಪ್ರಸ್ತುತ ಸಂದರ್ಭದಲ್ಲಿ ಒಂದು ಕೃತಿಯನ್ನು ಓದಿ ಇಷ್ಟಪಡುವವರೂ ಇದ್ದಾರೆ..ಇಷ್ಟ ಪಡುತ್ತಲೇ ಓದುವವರಿದ್ದಾರೆ. ಇಷ್ಟವಾದರೂ ಕಷ್ಟ ಪಡುತ್ತಲೇ ಓದುವವರಿದ್ದಾರೆ. ಇಷ್ಟಾನಿಷ್ಟಗಳ ಗೊಡವೆಯಿಲ್ಲದೇ ಬರೆಯದೆಲೆ ಓದುವವರೂ ಇದ್ದಾರೆ. ಇವರೆಲ್ಲರನ್ನೂ ಮೀರಿ ಓದದೇ ಇಷ್ಟ ಪಡುವ ಪ್ರಚಂಡಪಂಡಿತರೂ ಇದ್ದಾರೆ.
ಯಾವುದೇ ಒಂದು ಕೃತಿಯನ್ನು ಓದುವಾಗ ಲೇಖಕನ ಈ ಮುಂಚಿನ ಜನಪ್ರಿಯ ಕೃತಿಗಳ ಮಾಲಿಕೆಯಲ್ಲಿ ಆತನ ಹೊಸ ಕೃತಿಯನ್ನು ಓದಕೂಡದು. ಹಾಗಾದಾಗ ಒಂದು ಸಮೀಕರಣದ ಸೂತ್ರ ಆರಂಭದಿಂದಲೇ ಓದುಗನನ್ನು ಆವರಿಸಿಬಿಡುತ್ತದೆ. ಸಿ.ಎನ್.ಆರ್ ಹೇಳುವಂತೆ ‘ಒಂದು ಕೃತಿಯ ಮುಖ್ಯ ಅಂಗಗಳು, ವಿವರಗಳು, ಆಶಯಗಳು, ಗಮನ ಸೆಳೆಯುವ ಗುಣಗಳನ್ನು ಮೊದಲು ಸೂಕ್ಷ್ಮವಾಗಿ ಗ್ರಹಿಸಬೇಕು.
ಒಂದು ಕೃತಿಯನ್ನು ಸ್ಥೂಲವಾಗಿ ಅರ್ಥ ಮಾಡಿಕೊಳ್ಳದೇ ಅದರ ಗುಣಾವಗುಣಗಳ ಬಗ್ಗೆ ಮಾತನಾಡುವುದು ಹೊರನೋಟ ಮತ್ತು ಗ್ರಹಿಕೆಯ ತಕ್ಷಣದ ತೀರ್ಮಾನಗಳಾಗುತ್ತವೆ. ಒಂದು ಕೃತಿಯ ಬಗೆಗಿನ ಮಾತು ಮಾನವೀಯ ಮೌಲ್ಯಗಳ ಶೋಧವನ್ನೇ ಆಧರಿಸಿರಬೇಕು.’ ಆಯ್.ಎ.ರಿಚಡ್ಸರ್’ ಹೇಳುವಂತೆ ಒಂದು ಕೃತಿಯ ಮೌಲ್ಯಮಾಪನ ಎನ್ನುವುದು ಅನುಭವಗಳ ಮಧ್ಯೆ ಸೂಕ್ಷ್ಮವಾದ ಬೇಧಗಳನ್ನು ಗುರುತಿಸಿ ಬೆಲೆ ಕಟ್ಟುವುದು’ ಸಾಮಾಜಿಕ ಜವಾಬ್ದಾರಿ ಎನ್ನುವುದರಿಂದ ವಿಚಲಿತನಾಗಿ, ಬದುಕಿನ ಮೌಲ್ಯಗಳನ್ನು ಮರೆಮಾಚಿ ಪ್ರಾಜ್ಞ ಓದುಗನಾದವನು ಒಂದು ಕೃತಿಯ ಬಗ್ಗೆ ಮಾತನಾಡುವಂತಿಲ್ಲ. ಹಾಗೆಯೇ ತಾನು ಹೇಳುವುದು ಸರ್ವಕಾಲಿಕ ತೀರ್ಮಾನ ಎನ್ನುವ ಭ್ರಮೆಯೂ ಇರಕೂಡದು. ಜೊತೆಗೆ ಕೃತಿಯೊಂದು ಎಲ್ಲ ಓದುಗರಿಗೂ ಸಮಾನವಾಗಿಯೇ ತಟ್ಟಬೇಕು ಎನ್ನುವ ನಿರೀಕ್ಷೆಯೂ ಇರಕೂಡದು.
ರಾಜ್ಯದಲ್ಲಿ ದೇವನೂರರ ಬರವಣಿಗೆಯನ್ನು ಎದೆಗೆ ಹಚ್ಚಿಕೊಂಡು ಓದುವ, ಅಪಾರವಾಗಿ ಪ್ರೀತಿಸುವ ಒಂದು ದೊಡ್ಡ ಸಮುದಾಯವೇ ಇದೆ. ಹಾಗಾಗಿಯೇ ಇಷ್ಟು ಬೇಗ ಕನ್ನಡದ ಕೃತಿಯೊಂದು ಐದು ಮುದ್ರಣಗಳನ್ನು ಕಂಡಿತು. ಇದರಲ್ಲಿ ಓದದೇ ಅವರ ಬರವಣಿಗೆಯನ್ನು ಪ್ರೀತಿಸುವ ಒಂದಷ್ಟು ಮೇಲ್ಮುಖ ಸಂಚಲನೆಯ ಅನಧಿಕೃತ ವಕ್ತಾರರೂ ಇದ್ದಾರೆ.
ದೇವನೂರ ಮಹಾದೇವ ಅವರ ಕೃತಿಯನ್ನು ಓದುವಾಗಲೇ ಒಂದು ರೇಡಿಮೇಡ್ ಪ್ರೇಮಲ್ಲಿ ಓದಲು ಕೂಡುವುದು ಲೇಖಕ ಮತ್ತು ಓದುಗ ಇಬ್ಬರಿಗೂ ಹಿತಕರವಲ್ಲ. ಹಾಗೆಯೇ ಅಪಾರವಾದ ಜನಸಮೂಹ ಅವರ ಕೃತಿಗಳ ಬಗ್ಗೆ ಹೊಂದಿರುವ ಒಂದು ಸ್ಥಾಪಿತ ರೇಖೆಯನ್ನು ದಾಟುವ ಇಲ್ಲವೇ ಮುರಿಯುವ ಗೌಜಲು ಬೇಡವೇ ಬೇಡ ಎನ್ನುವ ಪೂರ್ವಪ್ರತಿಜ್ಞೆಯೂ ಬೇಡ. ಅಷ್ಟಕ್ಕೂ ದೇವನೂರ ಮಹಾದೇವ ಅವರು ಎಲ್ಲೂ ತಮ್ಮ ‘ಎದೆಗೆ ಬಿದ್ದ ಅಕ್ಷರ’ ಎನ್ನುವ ಕೃತಿ ಈ ಮಟ್ಟದಲ್ಲಿದೆ. ಅದು ನಿಲ್ಲಬೇಕಾದ ಸ್ತರ ಇಲ್ಲಿದೆ ಎಂದು ಮಾರ್ಕ್ ಮಾಡಿಲ್ಲ. ಹಾಗಿರುವಾಗ ಅವರ ಬರವಣಿಗೆಯ ಹಿಂದಿರುವ ಯಥಾರ್ಥತೆಗಿಂತಲೂ ಓದುವವನ ಯಥಾರ್ಥತೆ ಇನ್ನೂ ಪ್ರಾಮಾಣಿಕವಾಗಿರಬೇಕು.
ದೇವನೂರ ಮಹಾದೇವ ಅವರ ಕತೆ ಮತ್ತು ಕಾದಂಬರಿಗಳಲ್ಲಿರುವ ನೆಲದ ಭಾಷೆ, ಅಲ್ಲಿಯ ಸತ್ವ, ಪ್ರತಿಮೆ, ಸಂಯೋಜನೆ ಇವೆಲ್ಲವುಗಳನ್ನು ಮೀರಿ ಅತ್ಯಂತ ವಿಶ್ವಾಸದಿಂದ ಓದುಗ ಕಣ್ಣು-ಕಿವಿ ಅಗಲಿಸಿ ಕತೆ ಕೇಳುವಂತೆ ಮಾಡುವ ಆ ಚತುರತನ ದೇವನೂರರ ಅಂತರ್ಯದಲ್ಲಿಯೇ ಇದೆ. ಹಾಗಾಗಿಯೇ ಲಂಕೇಶರು ಅವರ ಕತೆಗಳ ಬಗ್ಗೆ ಮಾತನಾಡುತ್ತಾ ‘ ಇಲ್ಲಿಯ ನಿರೂಪಕನ ಮಾತಿಗೂ ಸುತ್ತಣ ಜನರ ಭಾಷೆಗೂ ವ್ಯತ್ಯಾಸವಿಲ್ಲ. ಹೀಗಿರುವುದರಿಂದಲೇ ಕತೆಗಳ ಮೂಲಭೂತ ತೀವ್ರತೆ ಮತ್ತು ಗಾಂಭೀರ್ಯ ನಮ್ಮನ್ನು ಮುಟ್ಟುತ್ತವೆ. ಇದು ನಿರೂಪಣಾ ಕಲೆಯ ನಿಜವಾದ ಕಾಣಿಕೆ.’ ಎಂದಿರುವ ಮಾತು ಅಕ್ಷರಷ: ಸತ್ಯ.
ದೇವನೂರರ ‘ಎದೆಗೆ ಬಿದ್ದ ಅಕ್ಷರ’ ದಲ್ಲಿ ಒಟ್ಟು 90 ಬಿಡಿ ಬರಹಗಳಿವೆ. ಏಳು ವಿಭಿನ್ನ ತಲೆಬರಹಗಳ ಅಡಿಯಲ್ಲಿ ಇಲ್ಲಿಯ 90 ಲೇಖನಗಳನ್ನು ಹೊಂದಿಸಲಾಗಿದೆ. ಅವರ ಆರಂಭದ ಬರವಣಿಗೆಯಿಂದ ಹಿಡಿದು ಇಲ್ಲಿಯವರೆಗಿನ ಅವರ ಎಲ್ಲ ಬಿಡಿ ಬರಹಗಳು ಇದರಲ್ಲಿವೆ. ಇಲ್ಲಿರುವ ಬಹುತೇಕ ಲೇಖನಗಳು ಮಾನವೀಯ ತುಡಿತದಿಂದ ತುಂಬಿ ತುಳುಕುತ್ತವೆ. ಈ ತುಳುಕುವಿಕೆಯಲ್ಲಿ ಎಲ್ಲೂ ಅರ್ಧ ಕೊಡದ ಆರ್ಭಟವಿಲ್ಲ. ಹೀಗೇ ತಣ್ಣಗೆ ಓದುಗನೊಂದಿಗೆ ಕುಳಿತು ಯಥಾರ್ಥವಾಗಿ ಮಾತನಾಡುವಂತಿದೆ. ಹಾಗೆ ಮಾತನಾಡುವಾಗ ಮೋಸ, ಅನ್ಯಾಯ, ಆಕ್ರಮ, ಶೋಷಣೆ, ಸಿಟ್ಟು ಸೆಡವುಗಳನ್ನು ಸಹನೆಯಲ್ಲಿಯೇ ಹೇಳುವ ಸಮರ್ಥತೆ ದೇವನೂರರಿಗೆ ಅಂತರ್ಗತವಾಗಿದೆ.
‘ಮೂರ್ಛಾವಸ್ಥೆಯಲ್ಲಿ ಕಾರುಣ್ಯ’ ಎನ್ನುವ ಲೇಖನದಲ್ಲಿ ಒಂದು ಜೀವಿಯ ಕಂಪನ, ಜೀವಸಂಕುಲದ ಕಂಪನವಾಗಬೇಕು. ಆ ಎಳೆಯ ಮೂಲಕವೇ ಜಾಗತೀಕರಣ ರೂಪಗೊಳ್ಳಬೇಕು ಎನ್ನುವ ಮಾತಿನಲ್ಲಿ ಅವರ ಪರಕಾಯಪ್ರವೇಶದ ಗುಣ ಎದ್ದು ತೋರುತ್ತದೆ. ‘ಬಂಡೆಗಳ ಮೇಲೆ ಚಿಗುರೊಡೆಯಬೇಕಾಗಿದೆ’ ಎನ್ನುವ ಲೇಖನದಲ್ಲಿರುವ ತಾತ್ವಿಕತೆ ಆ ಬಂಡೆಗಿಂತಲೂ ಗಟ್ಟಿಯಾಗಿದೆ. ಕತ್ತಲರಾಜ್ಯದ ಇಡೀ ಮನುಷ್ಯ ಮಾತಾಡುವುದಾದರೆ..? ಒಂದು ಸಮುದಾಯವೇ ಮಾತಾಡಿದಂತಾಗಬಹುದು. ಒಂದು ಆಂದೋಲನ ಇದನ್ನು ಕಾಣಿಸಬಹುದೇನೋ..?’ ಎನ್ನುವ ಮಾತಿನ ಹಿಂದೆ ಮನುಷ್ಯನ ಸಂಬಂಧಗಳನ್ನು ಒಂದು ತರ್ಕಬದ್ಧವಾದ ನೆಲೆಯಲ್ಲಿ ಪ್ರತಿಸ್ಠಾಪಿಸುವ ಹಂಬಲವಿದೆ.
‘ಆನೆ ಮೇಲೆ ಹೋಗಿ, ಆದರೆ..’ ಎನ್ನುವ ಲೇಖನದಲ್ಲಿ ಸಾಂದರ್ಭಿಕವಾಗಿ ಅಸಮಾನತೆಯನ್ನು ಆಚರಿಸುವವನಿಗಿಂತ ಅಸಮಾನತೆಯನ್ನು ತಾತ್ವಿಕಗೊಳಿಸುವವನು ಸಾವಿರಾರು ಪಾಲು ದುಷ್ಟ ಎಂಬ ಎಚ್ಚರ ನಮಗಿರಬೇಕು. ಹೊಂದಾಣಿಕೆಯಲ್ಲಿ ಇದನ್ನು ನೋಡಬೇಕು ಇಲ್ಲದಿದ್ದರೆ ಪ್ರಜ್ಞಾರಹಿತ ರಾಜಕೀಯ ಆಗಿಬಿಡುತ್ತದೆ.’ ಎನ್ನುವ ಮಾತಿನ ಹಿಂದೆ ಪ್ರಜಾಸತ್ತೆಯ ತಾತ್ವಿಕ ಚಿಂತನೆಯ ದಟ್ಟತೆ ಹುದುಗಿದೆ.
‘ಒಂದು ಒಳನೋಟ’ ಎನ್ನುವ ಬರಹದಲ್ಲಿ ‘ಸವರ್ಣೀಯ ತಪ್ಪು ಮಾಡಿದಾಗ ತಪ್ಪು ಮಾಡಿದ ವ್ಯಕ್ತಿಯನ್ನು ಮಾತ್ರ ಹಿಡಿದುಕೊಳ್ಳುತ್ತದೆ. ಆದರೆ ಅದೇ ತಪ್ಪನ್ನು ಒಬ್ಬ ದಲಿತ ಮಾಡಿದರೆ ಆ ತಪ್ಪು ಮಾಡಿದ ದಲಿತನನ್ನು ಮಾತ್ರ ಹಿಡಿದುಕೊಳ್ಳದೇ, ಆತ ಹುಟ್ಟಿದ ದಲಿತ ಜನಾಂಗವನ್ನೂ ಹಿಡಿದುಕೊಳ್ಳುತ್ತದೆ.’ ಎಂದು ಅವರು ಮಾತನಾಡುವಾಗ ತಟ್ಟನೇ ಆಶಿಷ ನಂದಿಯವರ ಇತ್ತೀಚಿನ ಹೇಳಿಕೆ ನೆನಪಾಗದೇ ಇರದು. ಜೊತೆಗೆ ಇಂಥಾ ಜಾತಿಯ ಸೂಕ್ಷ್ಮಗಳನ್ನು ಕುರಿತು ಅವರು ಮಾತನಾಡುವಾಗ ನನಗವರು ಒಬ್ಬ ಶ್ರೇಷ್ಟ ಸಮಾಜಶಾಸ್ತ್ರಜ್ಞನಾಗಿಯೂ ಕಾಣುತ್ತಾರೆ. ಜೀತಬಿಡುಗಡೆಯಲ್ಲಿ ಬಿದ್ದ ಕನಸು ಎನ್ನುವ ಲೇಖನದ ಕೊನೆಯಲ್ಲಿ ಒಂದು ಸಾಲಿದೆ. ‘ಜೀವ ಇರುವ ಹೊಟ್ಟೆಯ ಮೇಲೆ ಈ ಜೀವ ರಹಿತ ಮಿಷನ್ನು ಕ್ರೂರವಾಗಿ ಹರಿದಿತ್ತು’ ಹೀಗೆ ಹೇಳುವ ಮೂಲಕ ಜಾಗತೀಕರಣದ ಭರಾಟೆಯಲ್ಲಿ, ದುಡಿಯುವ ಜನರ ಜೊತೆಯಲ್ಲಿ ಮಶೀನ್ಗಳು ತಂದೊಡ್ದುವ ಅಪಾಯ ಮತ್ತು ಧಾವಂತಗಳನ್ನು ಕುರಿತು ವಸ್ತುನಿಷ್ಟವಾಗಿ ಚರ್ಚಿಸಿದ್ದಾರೆ.
‘ನಾಳೈ ನಮದೈ’ ಎನ್ನುವ ತಮಿಳು ಹಾಡಿನ ಸಾಲೊಂದರ ಬರಹದಲ್ಲಿ ‘ ಹಿಂದೆ ಭಾರತದ ಮೇಲೆ ಧಾಳಿ ಮಾಡಿ ದೋಚುತ್ತಿದ್ದ ಧಾಳಿಕಾರರು ದೋಚಿಕೊಂಡು ಹೋಗುವಾಗ ಏನೋ ಹೆಚ್ಚೂ ಕಮ್ಮಿ ಮಾಡಿ ಹುಟ್ಟಿದ ಸಂತಾನವೇನೋ ಇವರು..!’ ಎಂದು ಗಾಭರಿಯಾಗುವ ಮಟ್ಟಿಗೆ ಲೂಟಿ ಮಾಡುವವವರು ನಮ್ಮ ನಡುವೆಯೇ ಇದ್ದಾರೆ’ ಇಂಥಾ ಪರಮ ಭೃಷ್ಟರ ಬಗೆಗೆ ಎಚ್ಚರವಾಗಿರುವ ಮಾತನ್ನೂ ಆಡಿರುವದಿದೆ. ದೊಂಬಿದಾಸ್ ‘ ಜಾತಿಗೂ ಹುಟ್ಟಿಗೂ ಸಂಬಂಧ ಇರುವ ಹುಟ್ಟಡಗಿಸಬೇಕಾಗಿದೆ’ ಎನ್ನುವ ಮಾತಿನ ಹಿಂದೆ ದೇವನೂರರ ತಾತ್ವಿಕ ಆಶಯದ ಜೊತೆಯಲ್ಲಿ ಸಮುದಾಯಕ್ಕಾಗುವ ಅನ್ಯಾಯದ ಬಗೆಗೂ ಕಾಳಜಿ ಇದೆ.
‘ಎಮ್.ಡಿ.ಎನ್. ಈಜು’ ಎನ್ನುವ ಬರಹದಲ್ಲಿ ‘ನೋಡಿ ನೋಡಿ ಓದಿ ಓದಿ ಪಾಠ ಪ್ರವಚನ ವಿದ್ಯೆ ವೈಚಾರಿಕತೆ ಇಂದು ನೀರಿಗೆ ಇಳಿಯದ ಈಜಿನಂತೆ ನಡೆಯುತ್ತಿದೆ’ ಎನ್ನುವ ಮಾತು ಈ ಸಮಾಜದಲ್ಲಿ ಎಲ್ಲವೂ ಮೇಲ್ ಮೇಲಿನ ಗ್ರಹಿಕೆ, ತೋರಿಕೆಯಾಗಿ ಮುಂದುವರೆದಿದೆ. ಈ ಮಾತು ನಂಜುಂಡಸ್ವಾಮಿಯವರಿಗೆ ಅನ್ವಯವಲ್ಲ ಎನ್ನುವ ಮಾತೂ ಅಲ್ಲಿದೆ. ಹುಟ್ಟುತ್ತ ವಿಶ್ವಮಾನವ ಎನ್ನುವ ಲೇಖನದಲ್ಲಿ ದೇವನೂರರು ಪ್ರತಿಯೊಬ್ಬರಿಗೂ ಪರಕಾಯ ಪ್ರವೇಶ ಮಾಡುವ ಗುಣ, ಆ ಮೂಲಕ ಎಂಪೆಥೆಟಿಕ್ ಸೆನ್ಸ್ ಅನುಭವಿಸುವ ರೀತಿಯನ್ನು ಕುವೆಂಪು ಅವರ ಎದೆಯಗೂಡಲಿ ತೊಟ್ಟಿಲು ಕಟ್ಟುವ ಮಗುವ ಮಲಗಿಸಿ ತೂಗುವ ಕ್ರಿಯೆಯ ಆನಂದದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
‘ಮತಾಂಧರ ಮೆದುಳೊಳಗೆ ಕೆಲವು ಕ್ಷಣಗಳು’ ಎನ್ನುವ ಲೇಖನ ಮಾರ್ಕ್ಸ್ ನ ಧರ್ಮ ಅಫೀಮು ಎನ್ನುವ ಮಾತನ್ನು ದೃಢಪಡಿಸುವಂತಿದೆ. ‘ಯಾರೋ ಒಬ್ಬ ಒಂದು ಕೊಲೆ ಮಾಡಿ ಆ ಮಾಡಿದ ಸ್ಥಳದಲ್ಲೇ ನಿದ್ರಿಸಿದ್ದು ಸುದ್ದಿಯಾಗಿತ್ತು’ ಎನ್ನುವಾಗ ಮತಾಂಧನ ಮನ:ಸ್ಥಿತಿ ಇದಕ್ಕಿಂತ ವಿಭಿನ್ನವಾಗಿರಲಾರದು ಎಂದಿನಸದೇ ಇರದು. ‘ರಾಮನನ್ನು ಹುಡುಕಬೇಕಾಗಿದೆ’ ಎನ್ನುವ ಲೇಖನದಲ್ಲಿ ವ್ಯಭಿಚಾರಿ ಧರ್ಮಿಗಳ ಅಪಾಯವನ್ನು ಸಮಾಜದ ಉಳಿವಿಗಾಗಿ ಚಿಂತಿಸಿರುವದಿದೆ.
ಒಂದು ಡಿ.ಎನ್.ಎ.ಪರೀಕ್ಷೆ ಯಲ್ಲಿ ‘ಎಲ್ಲಾ ಧರ್ಮಗಳ ಪೂಜಾ ಸ್ಥಳಗಳಲ್ಲಿ ಶೇಕಡಾ 90 ರಷ್ಟು ಬೇರೆ ಬೇರೆ ಮತಪಂಥಗಳ ಪೂಜಾ ಸ್ಥಳವಾಗಿರುವುದು ಇತಿಹಾಸ’ ಎನ್ನುವ ಮಾತು ಶಂಕರಾಚಾರ್ಯರು ಮತ್ತು ಪ್ರತಿಗಾಮಿತನ ಗ್ರಂಥವನ್ನು ಮತ್ತೊಮ್ಮೆ ತಕ್ಷಣಕ್ಕೆ ನೆನಪು ಮಾಡಿಕೊಟ್ಟಿತು. ಬೇಕಾದುದು ವೈಷ್ಣವ ದೀಕ್ಷೆಯಲ್ಲ ತ್ರಿಜ ದೀಕ್ಷೆ ಎನ್ನುವ ಬರಹದಲ್ಲಿ ‘ಸಮಾಜಕ್ಕೆ ಇಂದು ತುರ್ತಾಗಿ ಬೇಕಾಗಿರುವುದು ಕರುಳು ಅಂದರೆ ಅಂತ:ಕರಣ, ಬಂಧುತ್ವ ಇದರ ಪ್ರಚೋದನೆಗಾಗಿ ಅಂದರೆ ಕಾರುಣ್ಯದ ಪ್ರಚೋದನೆಗಾಗಿ ತ್ರಿಜ ದೀಕ್ಷೆಯಾಗಲಿ’ ಎನ್ನುವ ಮಾತಿನಲ್ಲಿ ಜಾತಿಯ ಏಣಿಶ್ರೇಣಿ ರೂಪಿಸಿರುವ ರಾಜಕಾರಣದಲ್ಲಿ ತಳ ಸಮುದಾಯಗಳಿಗೆ ಬೇಕಿರುವ ಮಾನವ ಅಂತ:ಕರಣ, ಕಾರುಣ್ಯದ ಬಗ್ಗೆ ಕಳಕಳಿಯಿದೆ.
‘ಹೀಗೆ ಮುಂದುವರೆದರೆ..’ ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಖಾಸಗೀಕರಣ, ಜಾಗತೀಕರಣ, ಉದಾರೀಕರಣ ತಂದೊಡ್ದುವ ಅಪಾಯಗಳು ಮತ್ತು ನಿರ್ಮಿಸಬಹುದಾದ ಅಸಮಾನತೆಯ ಆಳವಾದ ಕಂದಕಗಳ ಬಗ್ಗೆ ಜನಸಮುದಾಯವನ್ನು ಜಾಗೃತಗೊಳಿಸಿದ್ದಾರೆ. ‘ಶಾಪವಿಮೋಚನೆಗಾಗಿ’ ಎನ್ನುವ ಬರಹ ನಮ್ಮ ನೆಲದಲ್ಲಿ ಪ್ರಭುತ್ವಗಳು ಅದು ಹೇಗೆ ಲಜ್ಜಾಹೀನ ಸಂಸ್ಕೃತಿಯನ್ನು ಪರಿಚಯಿಸಿದವು ಎನ್ನುವದರ ವಿಷಾದವನ್ನು ಹೊರಗೆಡಹಿದ್ದಾರೆ.
‘ಕನ್ನಡಕ್ಕೂ ಒಂದು ರಾಷ್ಟ್ರೀಯತೆ’ ಎನ್ನುವ ಲೇಖನದ ಕೊನೆಯಲ್ಲಿ ‘ಜಾಗತೀಕರಣವೆಂದರೆ ಸದ್ದಿಲ್ಲದ ಆಯುಧವಿಲ್ಲದ ಯುದ್ಧಗಳ ತಾಯಿ. ಈಗ ನಾವು ಜೀವ ಕೈಲಿ ಹಿಡಿದುಕೊಂಡು ಉಳಿಯುವ ಉಪಾಯಗಳನ್ನು ಹುಡುಕಬೇಕಾಗಿದೆ’ ಎನ್ನುವ ಮಾತಿನ ಹಿಂದೆ ಮಾನವ ಜನಾಂಗದ ಬಗೆಗಿನ ಖಾಳಜಿಗಳಿವೆ. ‘ಅಂದಿನ ಬಾಯಾರಿಕೆ ಮತ್ತು ಇಂದಿನ ದಾಹ’ ಎನ್ನುವ ಲೇಖನ ಏಕರೂಪದ ಶಿಕ್ಷಣಕ್ಕಾಗಿ ತುಡಿಯುವ ಜೊತೆಗೆ ಎಲ್ಲ ಜಾತಿ, ಮತ ಅಂತಸ್ತುಗಳ ಮಕ್ಕಳು ಕೂಡಿ ಕಲಿಯುವ, ಒಡನಾಡುವ ಕ್ರಿಯೆಯೇ ಬಲುದೊಡ್ದ ಶಿಕ್ಷಣ ಎನ್ನುವ ಆಶಯದೊಂದಿಗೆ ನಿಲ್ಲುತ್ತದೆ.
‘ಲಂಕೇಶ ಎಂಬ ತಲ್ಲಣಿಸುವ ಜೀವ’ 80 ರ ದಶಕದಲ್ಲಿ ದಲಿತರು ಈ ಸಮಾಜದ ಕಡೆ ನೋಡುತ್ತಿರುವುದು ಪ್ರೀತಿಗಾಗಿ ಕೂಡ. ಇದಕ್ಕೆ ಒಂದು ಮುಗುಳ್ನಗೆ ಸಾಕು’ ಎಂದಿದ್ದರು. ಅದೇ ಮಾತನ್ನು ದೇವನೂರರು ಈ ಲೇಖನದ ಕೊನೆಯಲ್ಲಿ ಪುನರುಚ್ಚರಿಸಿ ಲಂಕೇಶರ ಮುಗುಳ್ನಗು ತಮ್ಮೊಂದಿಗೆ ಎನ್ನುತ್ತಾರೆ. ‘ಒಂದು ಹೆಬ್ಬಟ್ಟು ಕತೆ’ ಬನ್ನಿಕೊಪ್ಪದ ಯಜ್ಜೂರಯ್ಯ ಹೆಬ್ಬಟ್ಟಿನಿಂದ ಸೃಷ್ಟಿಸಿಕೊಂಡ ಅವಾಂತರ ಮತ್ತು ಕೂನೆಗೂ ಯಜ್ಜೂರಯ್ಯ ತಮ್ಮ ದಾರಿದ್ರ್ಯ ನಿವಾರಣೆಗೆ ಭೂಮಿಯೇ ಬೇಕು ಎಂದು ಹಂಬಲಿಸುವಲ್ಲಿ ಒಂದು ಸಹಜವಾದ ನೆಲದ ಪ್ರೀತಿ, ತುಡಿತ ಅಲ್ಲಿದೆ.
ಹೊಳೆನರಸೀಪುರದ ಕುರುಡ ಜಾತಿಯ ಕುಣಿತ, ವ್ಯಾಸ, ವಾಲ್ಮಿಕಿ, ಕಾಳಿದಾಸರು ಹುಟ್ಟುವದು ನಿಂತು ಭಾರತ ಮಾತೆ ಬಂಜೆಯಾದದ್ದು, ಅಸಮಾನತೆ ಇರುವಲ್ಲಿ ನಿಜವಾದ ಸ್ವಾತಂತ್ರ್ಯ ಸಾಧ್ಯವಿಲ್ಲ, ಸದ್ಯ ಪ್ರಗತಿಶೀಲ ಸಾಹಿತ್ಯಕ್ಕೆ ಬೇಕಿರುವುದು ತಲೆಯಲ್ಲ ಪಾದ, ಇಂದು ಬುದ್ದಿಗೆ ಅಂತ:ಕರಣ ಮಾನವೀಯತೆ ಕೂಡಿಸಬೇಕಿದೆ, ದಲಿತ ನೌಕರ ತಾನು ತನ್ನ ಕುಟುಂಬ ಎಂದಾಗಿಬಿಟ್ಟ, ತನ್ನ ಸಮುದಾಯ ಎಂದಾಗಲಿಲ್ಲ. ತಮಟೆಯನ್ನು ಮುಟ್ಟದವರೂ ಇಂದು ತಮಟೆ ಬಡಿಯುತ್ತಿದ್ದಾರೆ. ಸಂಸ್ಕೃತ ಶ್ಲೋಕಗಳನ್ನೇ ಉಚ್ಚರಿಸುವವರು ಮತ್ತೆ ಮತ್ತೆ ‘ಸಂಬಂಜ ದೊಡ್ದದು ಕನಾ’ ಅಂದಂತೆ.
ಭಾರತದ ಅಂತ:ಸಾಕ್ಷಿಯಾದ ಪ್ರಜ್ಞಾವಂತರು, ಲೇಖಕರು, ಕಲಾವಿದರು, ಪತ್ರಕರ್ತರು, ನ್ಯಾಯವಂತರು ಅಸ್ಪೃಶ್ಯತೆ ದಲಿತರ ಸಮಸ್ಯೆ ಎಂದು ಸುಮ್ಮನುಳಿದಿರುವ ಖೇದವನ್ನು ವ್ಯಕ್ತ ಪಡಿಸುವ ಮಹಾದೇವರು ಸರ್ವಜ್ಞನ ಹಾಗೆ ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವಾದ ಹಾಗೆ ‘ತಿಳಿದವರ ಒಡನಾಟದಿಂದ ಒಂದಷ್ಟು ತಿಳಿದಿದೆ’ ಎಂದು ನಮ್ರವಾಗಿ ಹೇಳುವ ಮೂಲಕವೇ ಈ ಅಕ್ಷರಗಳು ಎದೆಗೆ ಬಿದ್ದ ಬಗೆಯನ್ನು ಅತ್ಯಂತ ಮಾನವೀಯ ನೆಲೆಯಲ್ಲಿ ಕೇವಲ ಪ್ರೀತಿಬಯಸುವ ಕಂಗಳು ಮತ್ತು ಮನಸನ್ನು ಚಾಚಿ ಮಾಡಿದ ಬರವಣಿಗೆಗಳ ಒಂದು ಸುಂದರ ಗುಚ್ಚವಿದು.
ಇಲ್ಲಿ ದೇವನೂರು ಒಬ್ಬ ಮಾನವಶಾಸ್ತ್ರಜ್ಞನಾಗಿ, ಸಮಾಜಶಾಸ್ತ್ರಜ್ಞನಾಗಿ, ರಾಜಕೀಯ ಚಿಂತಕರಾಗಿ ಸಾಮಾಜಿಕ ಜೀವನವನ್ನು ಗ್ರಹಿಸಿದ್ದಾರೆ. ಇದು ಮನುಷ್ಯ, ಮನುಷ್ಯರಿಗಾಗಿ ಮನವೀಯತೆಯ ಸಾಕಾರಕ್ಕಾಗಿ, ಸಮಾನತೆಯ ಹಂಬಲಕ್ಕಾಗಿ ಮೂಡಿ ಬಂದ ಅಕ್ಷರ. ಇವು ನನ್ನ ,ನಿಮ್ಮ , ನಮ್ಮಂಥ ಸಹಸ್ರ ಸಹಸ್ರ ಅಪ್ಪಟ ಮನುಷ್ಯ ಖಾಳಜಿಯುಳ್ಳವರ ಎದೆಗಿಳಿಯಲಿ.ಎಂದು ಆಶಿಸುತ್ತಾ ನನ್ನ ನುಡಿಗಳಿಗೆ ಪೂರ್ಣ ವಿರಾಮವನ್ನಿಡುವೆ.
I love Mahadeva, but is Trija deekshe idea is trash.
ದೇವನೂರ ಒಡಲಾಳ. ಕುಸಮಬಾಲೆ ಓದಿದ ನನಗೆ ಎದೆಗೆ ಬಿದ್ದ ಅಕ್ಷರ ವಾಸ್ತವಿಕತೆ ಹತ್ತಿರವಿದೆ ಎನ್ನುವಂತೆ ಇದೆ.