ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೇವತೆಯಾದ ದೇವದಾಸಿಯ ಕಥನ' – ಜಗದೀಶ್ ಕೊಪ್ಪ

ದೇವದಾಸಿಗಳ ಬಗ್ಗೆ, ಅವರ ಜೀವನ, ಆಗಿನ ಕಾಲದ ದೇಗುಲ ಸಂಸ್ಕೃತಿ, ಅವರ ನಡುವಿನಲ್ಲೇ ಇದ್ದ ಅದ್ಭುತವಾದ ಕಲಾವಿದೆಯರ ಬಗ್ಗೆ

ವಿಸ್ಟ್ರುತ ಅಧ್ಯಯನ ನಡೆಸಿ ಪುಸ್ತಕ ಬರೆಯುತ್ತಿರುವ ಜಗದೀಶ್ ಕೊಪ್ಪ ಅವರು ಅಂತಹ ಒಬ್ಬ ಸಂಗೀತಗಾರ್ತಿಯ ಬಗ್ಗೆ ಬರೆದಿದ್ದಾರೆ.

ಆಗ ರಾಣಿಯಂತೆ ಬದುಕಿದ, ಜನರ ಗೌರವ ವಿಶ್ವಾಸ ಗಳಿಸಿದ ಕಲಾವಿದೆ ಇಂದು ಯಾರಿಗೂ ಬೇಡವಾದ ನೋವಿನ ಕಥೆ ಇದು.

ಆ ಕಲಾವಿದೆ ಕನ್ನಡದವಳು ಎನ್ನುವುದು ಆಕೆಯನ್ನು ಮತ್ತಷ್ಟು ನಮ್ಮವಳಾಗಿಬಿಡುತ್ತಾಳೆ.

***

ಜಗದೀಶ್ ಕೊಪ್ಪ

ಇದು ಕನ್ನಡದ ದೇವದಾಸಿ ಸಮುದಾಯದ ಅಪ್ರತಿಮ ಹೆಣ್ಣುಮಗಳೊಬ್ಬಳು ದೇವತೆಯಾದ ಸಾಹಸದ ಬದುಕಿನ ಕತೆ. ಹುಟ್ಟಿದ ನೆಲಕ್ಕೆ ಅಪರಿಚಿತಳಾದರೂ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕರ್ನಾಟಕ ಸಂಗೀತದ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿ ಅಲ್ಲಿನ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದವಳ ಕತೆ. ತನ್ನನ್ನು ಹೊರತು ಪಡಿಸಿ, ದಕ್ಷಿಣ ಭಾರತದ ಕರ್ನಾಟಕ ಸಂಗೀತದ ಇತಿಹಾಸದ ಪುಟಗಳು ಪೂರ್ಣವಾಗಲಾರವು ಎಂಬಂತೆ ಬದುಕಿ, ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಘನತೆಯನ್ನು, ಗೌರವವನ್ನು ತಂದಿತ್ತ ಸಾಹಸಿ ಹೆಣ್ಣು ಮಗಳ ಹೋರಾಟದ ಅಪೂರ್ವ ಕಥನ.

ಇಪ್ಪತ್ತನೆಯ ಶತಮಾನದ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ದಂತ ಕಥೆಯಂತೆ ಬದುಕಿದ ಈ ಮಹಾತಾಯಿಯ ಜೀವನದ ವಿವರಗಳನ್ನು, ನಡೆದಾಡಿದ ನೆಲವನ್ನು ಮತ್ತು ವಾಸಿಸಿದ ಮನೆಯನ್ನು ಹುಡುಕಿಕೊಂಡು ಕಳೆದ ಜನವರಿ ಮೊದಲ ವಾರದಲ್ಲಿ ಮೂರು ದಿನಗಳ ಕಾಲ ಚೆನ್ನೈ ನಗರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವನಂತೆ ಜಾರ್ಜ್ಟೌನ್, ಟ್ರಿಪ್ಲಿಕೇನ್, ರಾಯಪೇಟ ಮತ್ತು ಮೈಲಾಪುರ ಪ್ರದೇಶಗಳಲ್ಲಿ ತಿರುಗಾಟ ನಡೆಸಿದ್ದೆ. ಈ ಮಹಾತಾಯಿ ವಾಸಿಸುತ್ತಿದ್ದ ಮನೆ, ಕಟ್ಟಿಸಿದ ದೇಗುಲಗಳು, ಶ್ರೀರಾಮ ದೇವರು ಮತ್ತು ತ್ಯಾಗರಾಜರ ನೆನಪಿನಲ್ಲಿ ನಡೆಸಿದ ಸಂಗೀತ ಕಛೇರಿಗಳ ಸ್ಥಳಗಳನ್ನು ಹುಡುಕಿ ಚಿತ್ರಗಳನ್ನು ತೆಗೆದಿದ್ದೆ. ಅಲ್ಲಿನ ಹಿರಿಯರ ನೆನಪುಗಳಿಗೆ ಕಿವಿಯಾಗಿದ್ದೆ. ನಂತರ ಒಂದು ದಿನ ಮೌಂಟ್ ರಸ್ತೆಯಲ್ಲಿರುವ ಹಿಂದೂ ಇಂಗ್ಲೀಷ್ ದಿನಪತ್ರಿಕೆಯ ಮುಖ್ಯ ಕಛೇರಿಯಾದ ಕಸ್ತೂರಿ ಬಿಲ್ಡಿಂಗ್ ನ ಗ್ರಂಥಾಲಯದಲ್ಲಿ ಕುಳಿತು, ಹಳೆಯ ದಿನಪತ್ರಿಕೆಗಳನ್ನು ತಿರುವು ಹಾಕುತ್ತಾ ಬೆಂಗಳೂರು ನಾಗರತ್ನಮ್ಮ ಎಂಬ ಹೆಸರಿನ ಈ ಸಂಗೀತ ದೇವತೆಯ ತಮಿಳುನಾಡಿನ ಹೋರಾಟದ ಬದುಕನ್ನು ಅಧ್ಯಯನ ಮಾಡಿದ್ದೆ.

ಚೆನ್ನೈ ನಗರದ ನಂತರ ನನ್ನ ಮುಂದಿನ ಪ್ರಯಾಣ ಮತ್ತು ಗುರಿ ತಂಜಾವೂರು ಸಮೀಪದ ತಿರುವಯ್ಯಾರ್ ಆಗಿತ್ತು. ಜನವರಿ 10 ರಂದು ರಾತ್ರಿ ಹನ್ನೊಂದು ಗಂಟೆಗೆ ಚೆನ್ನೈನಗರದ ಎಗ್ಮೋರ್ ಸ್ಟೇಶನ್ ನಿಂದ ಹೊರಡುವ ಕಾರೈಕಲ್ ಎಕ್ಸ್ ಪ್ರಸ್ ರೈಲಿನಲ್ಲಿ ಹೊರಟು ಮರುದಿನ ಬೆಳಿಗ್ಗೆ ತಿರುವರೂರು ಎಂಬ ಜಿಲ್ಲಾ ಕೇಂದ್ರದಲ್ಲಿ ಇಳಿದು, ಅಲ್ಲಿಂದ 75 ಕಿಲೋಮೀಟರ್ ದೂರವಿರುವ ತಿರುವಯ್ಯಾರ್ ಪಟ್ಟಣವನ್ನು ತಂಜಾವೂರು ಮೂಲಕ ತಲುಪಿ, ಊರಿನ ಮಗ್ಗುಲಲ್ಲಿ ತುಂಬಿ ಹರಿಯುತ್ತಿದ್ದ ಕಾವೇರಿ ನದಿಯ ದಡದಲ್ಲಿ ಕುಳಿತು ಪ್ರಯಾಣದ ಮತ್ತು ಸುತ್ತಾಟದ ದಣಿವಾರಿಸಿಕೊಂಡಿದ್ದೆ. ತಿರುವಯ್ಯಾರ್ ಎಂಬುದು ಕರ್ನಾಟಕ ಸಂಗೀತ ಪ್ರೇಮಿಗಳ ಪಾಲಿಗೆ ಕಾಶಿ ಇದ್ದಂತೆ. ಕರ್ನಾಟಕ ಸಂಗೀತದ ಪಿತಾ ಮಹಾರಲ್ಲಿ ತ್ರಿಮೂರ್ತಿಗಳೆಂದು ಹೆಸರಾದ ಶ್ಯಾಮಶಾಸ್ತ್ರಿ, ತ್ಯಾಗರಾಜರು ಮತ್ತು ಮುತ್ತುಸ್ವಾಮಿ ದೀಕ್ಷಿತರಿಗೆ ಜನ್ಮ ಕೊಟ್ಟ ಸ್ಥಳವಿದು.
ನಮ್ಮ ಕನ್ನಡದವರೇ ಆದ ಭೈರವಿ ಕೆಂಪೇಗೌಡ ಮತ್ತು ಮೈಸೂರು ವಾಸುದೇವಾಚಾರ್ಯ ಹತ್ತರಿಂದ ಹನ್ನೆರೆಡು ವರ್ಷಗಳ ಕಾಲ ತಮ್ಮ ಗುರುಗಳಾದ ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಸೇವೆ ಮಾಡಿ ಸಂಗೀತ ಕಲಿತ ಪುಣ್ಯ ಭೂಮಿಯಿದು. ಹದಿನೆಂಟನೆಯ ಶತಮಾನದಲ್ಲಿ ತಂಜಾವೂರನ್ನು ಆಳಿದ ಮರಾಠ ಸಾಮ್ರಾಟ ಸರ್ಪೊಜಿ ಎಂಬಾತ ಕಾವೇರಿ ನದಿ ತೀರದಲ್ಲಿ ಕಟ್ಟಿಸಿರುವ ಸಂಗೀತ ಮಹಲ್ ಎಂಬ ಭವ್ಯ ಕಟ್ಟಡ ಇಂದಿಗೂ ಗತಕಾಲದ ವೈಭವವನ್ನು ಸಾರುತ್ತಾ ನಿಂತಿದೆ. ಈ ಊರಿನ ಸಮೀಪ ಐದು ನದಿಗಳು ಹರಿಯುವ ಕಾರಣ ಇದಕ್ಕೆ ತಿರುವಯ್ಯಾರ್ ಎಂದು ಹೆಸರು ಬಂದಿದೆ. ಇದರರ್ಥ ಐದು ನದಿಗಳಿಂದ ಆವೃತ್ತವಾದ ಪ್ರದೇಶ ಎಂದು. ಇಲ್ಲಿನ ಪ್ರಸಿದ್ಧ ಶಿವನ ದೇಗುಲದಿಂದಾಗಿ (ಪ್ರಣಾತೀರ್ತಹರಸ್ವಾಮಿ) ಈ ಊರನ್ನು ದಕ್ಷಿಣದ ಕೈಲಾಸವೆಂತಲೂ ಕರೆಯಲಾಗುತ್ತಿದೆ. ನದಿ ತಟದ ಅರಳಿ ಮರದ ನೆರಳಿನಲ್ಲಿ ಕುಳಿತು ಈ ಸಾಹಸಿ ಹೆಣ್ಣು ಮಗಳ ರೋಚಕ ಬದುಕನ್ನು ಮೆಲಕು ಹಾಕುತ್ತಾ ಕುಳಿತಿದ್ದೆ. ಓರ್ವ ಅನಾಮಿಕ ಹೆಣ್ಣು ಮಗಳಿಂದ ಇಂತಹ ಸಾಹಸದ ಬದುಕು ಸಾಧ್ಯವೆ? ಎಂದು ಅಚ್ಚರಿಗೊಂಡಿದ್ದೆ. ಆದರೆ, ಆಕೆಯ ಎಲ್ಲಾ ಸಾಧನೆಗಳು ತಿರುವಯ್ಯೂರಿನಲ್ಲಿ ಸಾಕ್ಷಿಗಳಾಗಿ ನನ್ನ ಕಣ್ಮುಂದೆ ಇದ್ದವು.
ಬೆಂಗಳೂರು ನಾಗರತ್ನಮ್ಮ ಎಂಬ ಈ ಸಂಗೀತ ಕಲಾವಿದೆಯ ಹೆಸರು ಕನ್ನಡಿಗರಿಗೆ ಅಪರಿಚಿತವಾದರೂ ಆಂಧ್ರ ಮತ್ತು ತಮಿಳುನಾಡಿನ ಸಂಗೀತ ರಸಿಕರ ಪಾಲಿಗೆ ಅದೊಂದು ಅಜರಾಮರವಾದ ಹೆಸರು. ತಮ್ಮ ಜೀವಿತದ ಸಮಗ್ರ ಸಂಪಾದನೆ ಮತ್ತು ಆಸ್ತಿಯನ್ನು ಕರ್ನಾಟಕ ಸಂಗೀತದ ಪಿತಾ ಮಹಾರಲ್ಲಿ ಒಬ್ಬರಾದ ತ್ಯಾಗರಾಜರ ಸಮಾಧಿಯ ಪುನರುತ್ಥಾನ ಮತ್ತು ದೇವಸ್ಥಾನದ ನಿರ್ಮಾಣಕ್ಕೆ ವಿನಿಯೋಗಿಸಿ, ಆನಂತರ ತ್ಯಾಗರಾಜರ ಆರಾಧನೆಯನ್ನು ಆರಂಭಿಸುವುದರ ಮೂಲಕ ಮೂರು ದಿನಗಳ ಕರ್ನಾಟಕ ಸಂಗೀತ ಉತ್ಸವವನ್ನು ಹುಟ್ಟು ಹಾಕಿದ ನಾಗರತ್ನಮ್ಮನವರು, ತಮ್ಮ ಕೊನೆಯ ದಿನಗಳನ್ನು ತಿರುವಯ್ಯಾರ್ ಪಟ್ಟಣದಲ್ಲಿ ಕಳೆದರು. ಅಂತಿಮವಾಗಿ ತಾನು ಜೀವನ ಪೂರ್ತಿ ಆರಾಧಿಸಿ, ಧ್ಯಾನಿಸಿದ ತಮ್ಮ ಸಂಗೀತಕ್ಕೆ ಸ್ಪೂರ್ತಿಯಾದ ತ್ಯಾಗರಾಜರ ಸಮಾಧಿಯೆದುರು ತಾವೂ ಸಹ ಮಣ್ಣಾದರು.
ಕನ್ನಡನಾಡಿನ ಓರ್ವ ಕನ್ನಡತಿಯಾಗಿ ಜನಿಸಿ, ತಮಿಳುನಾಡಿನಲ್ಲಿ ಇಪ್ಪತ್ತನೇಯ ಶತಮಾನದ ಆದಿ ಭಾಗದಲ್ಲಿ ಪ್ರಸಿದ್ಧ ಕರ್ನಾಟಕ ಸಂಗೀತದ ಕಲಾವಿದೆಯಾಗಿ ಬೆಳೆದು, ನೆರೆಯ ಆಂಧ್ರ ಪ್ರದೇಶದ ಅನೇಕ ಸಂಸ್ಥಾನಗಳಲ್ಲಿ ಆಸ್ಥಾನ ವಿಧುಷಿಯಾಗಿ ಸೇವೆ ಸಲ್ಲಿಸುವುದರ ಜೊತೆಗೆ ತೆಲುಗು ಭಾಷೆಯಲ್ಲಿ ಹಲವು ಕೃತಿಗಳನ್ನು (ರಾಧಿಕಾ ಸ್ವಾಂತನಮು)ಸಂಪಾದಿಸಿ, ರಚಿಸುವುದರ ಮೂಲಕ ತೆಲುಗು ಸಾಹಿತ್ಯದಲ್ಲಿ ವಿದ್ವಾಂಸೆ ಎಂಬ ಕೀರ್ತಿಗೆ ಬೆಂಗಳೂರು ನಾಗರತ್ನಮ್ಮ ಪಾತ್ರರಾಗಿದ್ದರು. ಆದರೆ ತಮ್ಮ ಕೊನೆಯವರೆಗೂ ಕನ್ನಡಿಗರ ಪಾಲಿಗೆ ಮಾತ್ರ ಅವರು ಅನಾಮಿಕರಾಗಿ ಉಳಿದು ಹೋದರು. ತಮಿಳು, ತೆಲುಗು ಮತ್ತು ಇಂಗ್ಲೀಷ್ ಈ ಮೂರು ಭಾಷೆಗಳಲ್ಲಿ ಬೆಂಗಳೂರು ನಾಗರತ್ನಮ್ಮನವರ ಜೀವನ ಸಾಧನೆ ಮತ್ತು ಹೋರಾಟ ಕುರಿತಂತೆ ಕೃತಿಗಳು ಪ್ರಕಟವಾಗಿವೆ. ಕನ್ನಡದಲ್ಲಿ ಡಿ.ವಿ.ಜಿ. ಮತ್ತು ಮೈಸೂರು ವಾಸುದೇವಚಾರ್ಯ ಇಬ್ಬರು ಮಹನೀಯರು ನಾಗರತ್ನಮ್ಮನವರ ಜೊತೆಗಿನ ಒಡನಾಟ ಕುರಿತು ಬರೆದ ಎರಡು ಎರಡು ಲೇಖನಗಳನ್ನು ಹೊರತು ಪಡಿಸಿದರೆ, ಬೇರಾವ ಮಾಹಿತಿಯೂ ಕರ್ನಾಟಕದಲ್ಲಿ ಲಭ್ಯವಿಲ್ಲ.
ನಮ್ಮ ಪಾಲಿಗೆ ಬೆಂಗಳೂರು ನಾಗರತ್ನಮ್ಮ ಎಂದರೆ, ಕರ್ನಾಟಕ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯನ್ನು ಹುಟ್ಟು ಹಾಕಿದ ಬೆಂಗಳೂರು ನಾಗರತ್ನಮ್ಮನವರು ಮಾತ್ರ ನೆನಪಾಗುತ್ತಾರೆ. 1950 ಮತ್ತು 60 ದಶಕದಲ್ಲಿ ನಾಟಕ ಕಂಪನಿಗಳಲ್ಲಿ ಪ್ರದರ್ಶಿತವಾಗುತ್ತಿದ್ದ ಪೌರಾಣಿಕ ನಾಟಕಗಳಲ್ಲಿ ಎಲ್ಲಾ ಪಾತ್ರಗಳನ್ನು ಮಹಿಳಾ ಕಲಾವಿದರಿಂದ ಮಾಡಿಸುವುದರ ಜೊತೆಗೆ ತಾವೇ ಸ್ವತಃ ಭೀಮನ ಪಾತ್ರದಲ್ಲಿ ಅಭಿನಯಿಸಿ ದಾಖಲೆ ಬರೆದ ಬೆಂಗಳೂರು ನಾಗರತ್ನಮ್ಮ ರಂಗ ರಸಿಕರ ಮನದಲ್ಲಿ ಸದಾ ಹಸಿರಾಗಿದ್ದಾರೆ. ಈ ನಾಟಕ ಕಲಾವಿದೆಗಿಂತ ಮುಂಚೆ ಇದೇ ಹೆಸರಿನ ಇಬ್ಬರು ಕಲಾವಿದೆಯರು ಅಂದರೆ, ಕೋಲಾರ ನಾಗರತ್ನಮ್ಮ ಮತ್ತು ಬೆಂಗಳೂರು ನಾಗರತ್ನಮ್ಮ ಇವರುಗಳು ದೇವದಾಸಿ ಸಮುದಾಯದಲ್ಲಿ ಜನಿಸಿ, ಕರ್ನಾಟಕದ ಸಂಗೀತದಲ್ಲಿ ತಮ್ಮ ಪ್ರತಿಭೆಯ ಛಾಪನ್ನು ಒತ್ತಿ ಜನಮಾನಸದಿಂದ ಕಣ್ಮರೆಯಾಗಿದ್ದರು.
ಬೆಂಗಳೂರು ನಾಗರತ್ನಮ್ಮಾಳ್ ಎಂದು ತಮಿಳುನಾಡಿನಲ್ಲಿ ಪ್ರಸಿದ್ಧಿಯಾಗಿದ್ದ ಬೆಂಗಳೂರು ನಾಗರತ್ನಮನವರ್ಮು ಅಂದಿನ ಮದ್ರಾಸ್ ನಗರದ ಜಾರ್ಜ್ ಟೌನ್ ಪ್ರದೇಶದಲ್ಲಿ( ಈಗಿನ ಮದ್ರಾಸ್ ಹೈಕೋರ್ಟ್ ಕಟ್ಟಡದ ಎದುರುಗಿನ ಪ್ರದೇಶ) ಆ ಕಾಲದಲ್ಲಿ ಮ್ಯಾನ್ಸನ್ ಹೌಸ್ ಎಂದು ಕರೆಯಲಾಗುತ್ತಿದ್ದ ಬೃಹತ್ ಬಂಗಲೆಯೊಂದನ್ನು ಕಟ್ಟಿಕೊಂಡು, ರಾಣಿಯಂತೆ ಬದುಕಿದವರು. 1920 ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮವಾಗಿ ಬ್ರಿಟೀಷ್ ಸರ್ಕಾರಕ್ಕೆ ವರಮಾನ ತೆರಿಗೆಯನ್ನು ಪಾವತಿಸಿದ ಏಕೈಕ ಸಂಗೀತ ಕಲಾವಿದೆ ಎಂಬ ಖ್ಯಾತಿ ಪಡೆದವರು. ತಮಿಳು ನಾಡಿನಲ್ಲಿ 26 ವರ್ಷಗಳ ಕಾಲ ಅಂದರೆ 1905-1934 ರ ನಡುವಿನ 29 ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತದ 146 ನಗರ ಮತ್ತು ಪಟ್ಟಣಗಳಲ್ಲಿ ನಡೆದ 1235 ಸಂಗೀತ ಕಛೇರಿಗಳಲ್ಲಿ ನಾಗರತ್ನಮ್ಮನವರು 849 ಕಾರ್ಯಕ್ರಮಗಳನ್ನು ನೀಡಿ ದಾಖಲೆ ಸ್ಥಾಪಿಸಿದ್ದರು.
ಆನಂತರ ತಮ್ಮ ಇಡೀ ಸಂಪಾದನೆಯನ್ನು ಸಂಗೀತ ಲೋಕಕ್ಕೆ ಧಾರೆಯೆರೆದು ದಕ್ಷಿಣ ಭಾರತದ ಸಂಗೀತದ ಇತಿಹಾಸದ ಪುಟಗಳಲ್ಲಿ ಅಳಿಸಲಾದ ಒಂದು ಅಧ್ಯಾಯವಾಗಿ ಉಳಿದು ಹೋದರು. ಓರ್ವ ದೇವದಾಸಿಯ ಪುತ್ರಿಯಾಗಿ ಜನಿಸಿ, ಸ್ವಯಂ ಪ್ರತಿಭೆ, ಮತ್ತು ಸಾಧನೆಗಳ ಮೂಲಕ ಅಪ್ರತಿಮವಾದ ಬದುಕನ್ನು ಬದುಕಿದ ನಾಗರತ್ನಮ್ಮನವರು ದೇವದಾಸಿಯ ಕುಲದ ನೆಲೆಯಿಂದ ದೇವತೆಯ ಸ್ಥಾನಕ್ಕೇರಿದವರು. ಶರಣರ ಗುಣವನ್ನು ಮರಣದಲ್ಲಿ ನೋಡು ಎಂಬಂತೆ ಬೆಂಗಳೂರು ನಾಗರತ್ನಮ್ಮನವರು 1952 ರಲ್ಲಿ ತಿರುವಯ್ಯೂರು ಪಟ್ಟಣದಲ್ಲಿ ನಿಧನರಾದ ಸಂದರ್ಭದಲ್ಲಿ ಅಲ್ಲಿನ ಜನತೆ ಇವರಿಗೆ ತೋರಿದ ಗೌರವ ಹಾಗೂ ಇತರೆ ಸಂಗತಿಗಳು ಹಿಂದೂ ದಿನ ಪತ್ರಿಕೆಯೂ ಒಳಗೊಂಡಂತೆ ಅನೇಕ ತಮಿಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಸವಿವರವಾಗಿ ಪ್ರಕಟವಾಗಿವೆ. ಅವುಗಳನ್ನು ಗಮನಿಸುವಾಗ ಈ ಮಹಾತಾಯಿ ತಮಿಳುನಾಡಿನಲ್ಲಿ ಇಷ್ಟೊಂದು ಪ್ರಭಾವಶಾಲಿ ಹೆಣ್ಣು ಮಗಳಾಗಿದ್ದಳಾ? ಎಂದು ಆಶ್ಚರ್ಯವಾಗುತ್ತದೆ.
ಅವು 1952 ರ ಏಪ್ರಿಲ್ ತಿಂಗಳ ಬಿರುಬೇಸಿಗೆಯ ದಿನಗಳು. ಮಧುಮೇಹ ಮತ್ತು ವೃದ್ಧಾಪ್ಯದ ಕಾಯಿಲೆಗಳಿಂದ ಬಳಲುತ್ತಿದ್ದ ನಾಗರತ್ನಮ್ಮನವರು ತಮ್ಮ ಕೊನೆಯ ದಿನಗಳನ್ನು ಅವರ ಆಕಾಂಕ್ಷೆೆಯಂತೆ ತಿರುವಯ್ಯಾರಿನ ತ್ಯಾಗರಾಜರ ಸನ್ನಿಧಿಯಲ್ಲಿ ಕಳೆಯುತ್ತಿದ್ದರು. ಸೆಕೆ ತಡೆಯಲಾರದೆ ಸಾಮಾನ್ಯವಾಗಿ ಮನೆಯೊಳಗಿನ ಬಾಗಿಲ ಬಳಿ ಕುಳಿತು, ರಸ್ತೆಯಲ್ಲಿನ ಚಟುವಟಿಕೆಗಳನ್ನು ಗಮನಿಸುವುದು ಅವರ ದಿನಚರಿಯಾಗಿತ್ತು. ಒಂದು ದಿನ ಆಗ ತಾನೆ ಸಂಗೀತಗಾರನಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ತರುಣ ಎ.ಆರ್. ಸುಂದರಂ ಎಂಬಾತ ಅವರ ಮನೆಗೆ ತೆರಳಿ ನಾಗರತ್ನಮ್ಮವರ ಕಂಠದಲ್ಲಿ ತ್ಯಾಗರಾಜರ ಒಂದು ಕೀರ್ತನೆಯನ್ನು ಕೇಳಲು ಅಪೇಕ್ಷೆ ಪಟ್ಟ. ಹಿರಿಯರು ಕಿರಿಯರು ಎಂಬ ಭೇದ ಭಾವ ತೋರದ ಅವರು ತಾವು ಕುಳಿತ ಸ್ಥಳದಲ್ಲೇ ಆಂಗೀಕ ಅಭಿನಯದ ಮೂಲಕ ತ್ಯಾಗರಾಜರ ಪ್ರಸಿದ್ಧ ಕೀರ್ತನೆಗಳಲ್ಲಿ ಒಂದಾದ ಉಪಚಾರಮಲನು ಕೀರ್ತನೆಯನ್ನು ಬೈರವಿ ರಾಗದಲ್ಲಿ ಹಾಡಿ ತೋರಿಸಿದರು. ಅದು ಅವರ ಪಾಲಿನ ಕೊನೆಯ ಕೀರ್ತನೆಯಾಯಿತು. ಅವರ ಸಂಗೀತವನ್ನು ಕೇಳಿದ ಕೊನೆಯ ಶೋತೃ ಎಂಬ ಕೀರ್ತಿ ಸುಂದರಂ ಗೆ ಸಂದಿತು.
ಅದೇ ವರ್ಷ ಮೇ 19 ರಂದು ಬೀಸಣೆಗೆಯಿಂದ ಗಾಳಿ ಬೀಸಿಕೊಳ್ಳುತ್ತಾ ಕುಳಿತಿದ್ದ ನಾಗರತ್ನಮ್ಮವನವರ ಮನೆಯೆದುರು ಬೆಳಗಿನ ಜಾವ ಶವಯಾತ್ರೆಯೊಂದು ಹಾದು ಹೋಯಿತು. ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಒಬ್ಬಾತ ನಾಗರತ್ನಮ್ಮನವರ ಮನೆಗೆ ಬಂದು, ರಾಮುಡು ಭಾಗವತರ ಕಿರಿಯ ಪುತ್ರ ಕಾವೇರಿ ನದಿಯಲ್ಲಿ ಈಜಲು ಹೋಗಿ ಮುಳುಗಿ ಸತ್ತ ಘಟನೆಯನ್ನು ಅವರಿಗೆ ವಿವರಿಸಿದ. ಆ ನತದೃಷ್ಟ ಬಾಲಕ ನಾಗರತ್ನಮ್ಮನವರ ಪ್ರೀತಿಗೆ ಪಾತ್ರದವನಾಗಿದ್ದ. ಪ್ರತಿ ದಿನ ಸಂಜೆ ಇವರ ಮನೆ ಬಳಿ ಆಟವಾಡಿ ಕಾಲ ಕಳೆಯುತ್ತಿದ್ದ. ಬಾಲಕನ ಸಾವಿನ ಸುದ್ಧಿ ಕೇಳಿ ಕಣ್ಣೀರು ಹರಿಸಿದ ನಾಗರತ್ನಮ್ಮನವರು, ಸ್ವಲ್ಪ ಸಮಯದ ಬಳಿಕ ಎದೆ ನೋವಿನಿಂದ ಬಳಲತೊಡಗಿದರು. ಅವರ ಸೇವಕ ಕೂಡಲೇ ಸ್ಥಳಿಯ ವೈದ್ಯರನ್ನು ಕರೆತಂದನು. ನೆರೆಹೊರೆಯವರೂ ಸಹ ನಾಗರತ್ನಮ್ಮನವರ ಹಾರೈಕೆಗೆ ಓಡೋಡಿ ಬಂದರು. ನಾಗರತ್ನಮ್ಮವರ ಸ್ಥಿತಿ ಚಿಂತಾಜನಕವೆಂಬುದು ಮೇಲು ನೋಟಕ್ಕೆ ಎಲ್ಲರಿಗೂ ಗೋಚರಿಸುತ್ತಿತ್ತು. ವೈದ್ಯರಿಂದ ಯಾವುದೇ ಔಷಧ, ಇಂಜೆಕ್ಷನ್ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕೆ ಅವರು ನಿರಾಕರಿಸಿದರು.
ತಾವು ಕುಳಿತಿದ್ದ ಕುರ್ಚಿಯಿಂದ ಕೆಳಗಿಸಿ, ನೆಲದ ಹಾಸಲಾಗಿದ್ದ ಚಾಪೆಯ ಮೇಲೆ ಮಲಗಿಸಲು ಕೇಳಿಕೊಂಡರು. ಅವರ ಅಪೇಕ್ಷೆಯಂತೆ ಚಾಪೆಯ ಮೇಲೆ ಅವರನ್ನು ಮಲಗಿಸಲಾಯಿತು. ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿರುವುದನ್ನು ಮದ್ರಾಸ್ ನಗರದಲ್ಲಿದ್ದ ಸಿ.ವಿ. ರಾಜಗೋಪಾಲಚಾರಿ ( ರಾಜಾಜಿ) ಮತ್ತು ಟಿ.ಎ. ರಾಮಚಂದ್ರರಾವ್ ಹಾಗೂ ಬನ್ನಿಬಾಯಿ ಎಂಬ ಹೆಣ್ಣು ಮಗಳಿಗೆ ದೂರವಾಣಿ ಮೂಲಕ ತಿಳಿಸಲಾಯಿತು. ಬನ್ನಿಬಾಯಿ ಎಂಬಾಕೆಯನ್ನು ಸಾಕು ಮಗಳಂತೆ ಮದ್ರಾಸ್ ನಗರದಲ್ಲಿ ಬೆಳಸಿದ್ದ ನಾಗರತ್ನಮ್ಮನವರು ಆಕೆಗೆ ಕರ್ನಾಟಕ ಸಂಗೀತವನ್ನು ಧಾರೆಯೆರೆದು, ಪ್ರಸಿದ್ಧ ಹರಿಕಥಾ ವಿಧ್ವಾನ್ ಆಗಿ ರೂಪಿಸಿದ್ದರು. ಸಾವು ಸನೀಹ ಸುಳಿದಾಡುತ್ತಿದೆ ಎಂಬುದನ್ನು ಗ್ರಹಿಸಿದಂತಿದ್ದ ನಾಗರತ್ನಮ್ಮನವರು ತನ್ನ ಬಳಿಗೆ ಪಚ್ಚಾಯಿ ಎಂಬುವರನ್ನು ಕರೆದು ರಾಮ ಮಂತ್ರ ಜಪಿಸುವಂತೆ ಕೇಳಿಕೊಂಡರು. ತನ್ನ ತೊಡೆಯ ಮೇಲೆ ನಾಗರತ್ನಮ್ಮವರ ತಲೆ ಇರಿಸಿಕೊಂಡ ಅವರ ಗೆಳತಿ ಪಚ್ಚಾಯಿ ಎಂಬಾಕೆ ರಾಮ ಮತ್ತು ಆಂಜನೆಯನನ್ನು ಸ್ತುತಿಸುವ ತೆಲುಗು ಭಕ್ತಿಗೀತೆಗಳನ್ನು ಮೆಲುದನಿಯಲ್ಲಿ ಹಾಡತೊಡಗಿದರು. ರಾಮನ ಭಜನೆ ಅವರ ಕಿವಿಗೆ ಬೀಳುತ್ತಿದ್ದಂತೆ ಮುಖದಲ್ಲಿ ಮಂದಹಾಸ ಬೀರಿದ ನಾಗರತ್ನಮ್ಮನವರು ಅದೇ ನಗೆಯೊಂದಿಗೆ ಕೊನೆಯುಸಿರೆಳೆದಿದ್ದರು. ಕರ್ನಾಟಕದ ಕಪಿಲಾ ನದಿ ತೀರದ ನಂಜನಗೂಡಿನಲ್ಲಿ ಬ್ರಾಹ್ಮಣ ವಕೀಲರೊಬ್ಬರ ಉಪಪತ್ನಿಯಾಗಿದ್ದ ಓರ್ವ ದೇವದಾಸಿಯ ಪುತ್ರಿಯಾಗಿ ಜನಿಸಿದ ನಾಗರತ್ನಮ್ಮ, ತಮಿಳುನಾಡಿನ ಕಾವೇರಿ ತೀರದ ತಿರುವಯ್ಯಾರಿನಲ್ಲಿ ದೇವತೆಯಾಗಿ ಇಹಲೋಕ ತ್ಯಜಿಸಿದ್ದರು.
ಮರುದಿನ ಮದ್ರಾಸ್ ನಗರದಿಂದ ರಾಜಾಜಿ ಮತ್ತು ರಾಮಚಂದ್ರರಾವ್ ತಿರುವಯ್ಯಾರ್ಗೆ ಬಂದರು. ಅವರು ಬರುವ ವೇಳೆಗೆ ಇಡೀ ತಮಿಳುನಾಡಿನ ವಿದ್ವಾಂಸರು ಮತ್ತು ಸಂಗೀತ ಪ್ರೇಮಿಗಳು ನಾಗರತ್ನಮ್ಮನವರ ಮನೆಯ ಮುಂದೆ ನೆರೆದಿದ್ದರು. ತ್ಯಾಗರಾಜರ ಆರಾಧನೆಯಲ್ಲಿ ಸಂಗೀತ ಸವಿಯನ್ನು ಅನುಭವಿಸಿದ್ದ ತಂಜಾವೂರು ಮತ್ತು ಕುಂಬಕೋಣಂ ನ ಸುತ್ತಮುತ್ತಲಿನ ಜನತೆ ಸಾಗರೋಪಾದಿಯಲ್ಲಿ ಬಂದು ಅಂತಿಮ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಉತ್ತರ ಅರ್ಕಾಟ್ ಸಂಸ್ಥಾನದ ನವಾಬರು ನಾಗರತ್ನಮ್ಮನವರ ಅಂತಿಮಯಾತ್ರೆಗೆ ಅನುಕೂಲವಾಗುವಂತೆ ತನ್ನ ಬಳಿ ಇದ್ದ ತೆರೆದ ವಿದೇಶಿ ಕಾರನ್ನು ಕಳಿಸಿಕೊಡುವುದರ ಜೊತೆಗೆ ಹೂವಿನ ಹಾರ ಮತ್ತು ಒಂದು ಬೆಲೆ ಬಾಳುವ ರೇಷ್ಮೆಯ ಸೀರೆಯನ್ನು ಗೌರವಾರ್ಥವಾಗಿ ಕಳುಹಿಸಿಕೊಟ್ಟದ್ದರು.
ತಮಿಳುನಾಡಿನಲ್ಲಿ ಯಾವುದೇ ದೇವದಾಸಿ ಹೆಣ್ಣು ಮಗಳು ಅಂದರೆ, ವಿಶೇಷವಾಗಿ ದೇವಾಲಯಗಳಲ್ಲಿ ನೃತ್ಯದ ಸೇವೆ ಸಲ್ಲಿಸಿದ ಹೆಣ್ಣು ಮಗಳು ಮೃತಪಟ್ಟರೆ, ಆಕೆಯ ಮೃತ ದೇಹಕ್ಕೆ ಹೊದಿಸಲು ದೇವರ ಮೂರ್ತಿಯ ಮೇಲಿನ ಅಂಗವಸ್ತ್ರ ಅಥವಾ ಸೀರೆಯನ್ನು ನೀಡುವುದರ ಜೊತೆಗೆ, ದೇಗುಲದಲ್ಲಿ ಪ್ರಸಾದ ತಯಾರಿಸುವ ಅಡುಗೆ ಮನೆಯಿಂದ ಬೆಂಕಿಯ ಕೊಳ್ಳಿಯೊಂದನ್ನು(ಅಗ್ನಿ) ಶವ ಸಂಸ್ಕಾರಕ್ಕೆ ನೀಡುವುದು ವಾಡಿಕೆ. ದೇಗುಲಕ್ಕೆ ಸಂಬಂಧ ಪಟ್ಟ ದೇವದಾಸಿ ಹೆಣ್ಣು ಮಗಳ ಶವ ಸಂಸ್ಕಾರ ಮುಗಿಯುವವರೆಗೆ ಆ ದಿನ ದೇವಸ್ಥಾನದಲ್ಲಿ ಪೂಜೆ ಇರುವುದಿಲ್ಲ. ನಾಗರತ್ನಮ್ಮನವರು ತಮಿಳುನಾಡಿನ ಯಾವುದೇ ದೇಗುಲಕ್ಕೆ ದೇವದಾಸಿಯಾಗದಿದ್ದರೂ ಸಹ ದೇವದಾಸಿ ಸಮುದಾಯದಿಂದ ಬಂದ ಉದಾತ್ತ ಮನಸ್ಸಿನ ಹೆಣ್ಣು ಮಗಳು ಎಂಬ ಏಕೈಕ ಕಾರಣಕ್ಕೆ ತಿರುವಯ್ಯಾರಿನ ಪ್ರಣಾತೀರ್ಥಹರಸ್ವಾಮಿ ದೇವಾಲಯ, ತಂಜಾವೂರಿನ ಬೃಹದೇಶ್ವರ ದೇವಾಲಯ, ತಿರುವರೂರಿನ ತ್ಯಾಗರಾಜರ್ ದೇವಾಲಯ, ಕುಂಭಕೋಣಂ ನ ಆದಿ ಕುಂಭೇಶ್ವರ್ ದೇವಾಲಯ ಮತ್ತು ತಿರುಚ್ಚನಾಪಳ್ಳಿಯ ಶ್ರೀರಂಗನಾಥ ದೇವಾಲಯ ಇವುಗಳಿಂದ ಅವರ ಗೌರವಾರ್ಥ ಅಗ್ನಿ ಮತ್ತು ಸೀರೆ, ಹಾಗೂ ಅಂಗವಸ್ತ್ರಗಳು, ಅರಿಶಿನ ಕುಂಕುಮ, ವಿಭೂತಿ ಉಂಡೆಗಳ ಸಮೇತ ನಾಗರತ್ನಮ್ಮನವರ ಮನೆ ಬಾಗಿಲಿಗೆ ಬಂದವು.
ನಾಗರತ್ನಮ್ಮನವರ ಮೃತದೇಹಕ್ಕೆ ಸ್ನಾನ ಮಾಡಿಸಿ, ರೇಷ್ಮೆಯ ಸೀರೆಯಿಂದ ಅಲಂಕಾರ ಮಾಡಿ, ಅವರನ್ನು ಮನೆಯ ಗೋಡೆಗೆ ಒರಗಿಸಿ, ದೇವತೆಯ ಮೂರ್ತಿಯಂತೆ ಕೂರಿಸಲಾಯಿತು. ಅಂತಿಮ ದರ್ಶನ ಪಡೆಯಲು ಬಂದ ಜನ ಅವರ ಹಣೆಗೆ ಅರಿಶಿನ ಕುಂಕುಮ ಇಟ್ಟು ನಮಸ್ಕರಿಸಿದರು. ಇನ್ನೂ ಕೆಲವರು ಅವರ ಪಾದಗಳಿಗೆ ತಮ್ಮ ಹಣೆಯನ್ನು ತಾಗಿಸಿ, ಗೌರವ ಸೂಚಿಸಿದರು. ಆ ದಿನ ಇಡೀ ತಿರುವಯ್ಯಾರ್ ಪಟ್ಟಣದ ಜನತೆ ತಮ್ಮ ಅಂಗಡಿ , ಮುಂಗಟ್ಟುಗಳ ವಹಿವಾಟನ್ನು ಸ್ಥಗಿತಗೊಳಿಸಿ ಶೋಕಾಚರಣೆ ನಡೆಸಿದರು.
ಅಂತ್ಯ ಸಂಸ್ಕಾರಕ್ಕೆ ಹಾಜರಿದ್ದ ರಾಜಾಜಿ ಹಾಗೂ ಸಂಗೀತ ವಿಧ್ವಾಂಸರು ನಾಗರತ್ನಮ್ಮನವರ ಮೃತದೇಹವನ್ನು ತೆರೆದ ಕಾರಿನ ಬದಲು ಪಲ್ಲಕ್ಕಿಯಲ್ಲಿ ಹೊತ್ತು ತಿರುವಯ್ಯಾರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ನಂತರ ತ್ಯಾಗರಾಜರ ಸಮಾಧಿ ಎದುರು ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಿದರು. ಪ್ರತಿ ವರ್ಷ ತ್ಯಾಗರಾಜರ ಆರಾಧನೆಯ ಸಂದರ್ಭದಲ್ಲಿ ತ್ಯಾಗರಾಜರ ಭಾವಚಿತ್ರವನ್ನು ಹೊತ್ತು ಮೆರವಣಿಗೆ ಸಾಗುತ್ತಿದ್ದ ಪಲ್ಲಕ್ಕಿಯನ್ನು ನಾಗರತ್ನಮ್ಮನವರ ಅಂತಿಮ ಯಾತ್ರೆಗೆ ಬಳಸಲಾಯಿತು. ತಮ್ಮ ಜೀವನಪೂರ್ತಿ ಯಾವ ಗುರುವನ್ನು ದೇವರೆಂದು ಧ್ಯಾನಿಸಿ, ಆರಾಧಿಸಿದ್ದರೋ, ಅದೇ ಗುರುಗಳ ಪಲ್ಲಕ್ಕಿಯಲ್ಲಿ ನಾಗರತ್ನಮ್ಮ ನಿರ್ಜಿವವಾಗಿ ದೇವತೆಯಂತೆ ಕುಳಿತು ಮರೆವಣಿಗೆಯಲ್ಲಿ ಸಾಗಿದರು. ಅಂತಿಮ ಯಾತ್ರೆಯುದ್ದಕ್ಕೂ ರಘಪತಿ ರಾಘವ ರಾಜಾರಾಂ ಭಜನೆಯನ್ನು ಪಠಿಸಲಾಯಿತು.
ತ್ಯಾಗರಾಜರ ಸಮಾಧಿ ಮತ್ತು ದೇವಸ್ಥಾನದ ಅಭಿವೃದ್ಧಿಗಾಗಿ ಕಾವೇರಿ ನದಿ ತೀರದಲ್ಲಿದ್ದ 23 ಎಕರೆ ತೆಂಗಿನ ತೋಟದ ಪ್ರದೇಶವನ್ನು ಸ್ವತಃ ಹಣದ ಮೂಲಕ ಖರೀದಿ ಮಾಡಿ ಅಭಿವೃದ್ಧಿಪಡಿಸಿದ್ದ ನಾಗರತ್ನಮ್ಮನವರನ್ನು ಅದೇ ಪ್ರದೇಶದಲ್ಲಿ ಹೂಳಲು ರಾಜಾಜಿಯವರು ನಿರ್ಧರಿಸಿದ್ದರು. ಅವರ ಈ ನಿರ್ಣಯಕ್ಕೆ ಬ್ರಾಹ್ಮಣ ಸಮುದಾಯದಿಂದ ವಿರೋಧ ವ್ಯಕ್ತವಾಗಬಹುದೆಂಬ ಆತಂಕವೂ ಎದುರಾಯಿತು. ಆದರೆ, ಭಾರತದ ಪ್ರಥಮ ಗೌರ್ನರ್ ಜನರಲ್ ಹುದ್ದೆಯನ್ನು ಅಲಂಕರಿಸಿದ್ದ, ಸ್ವತಃ ಓರ್ವ ಬ್ರಾಹ್ಮಣ ವ್ಯಕ್ತಿಯಾಗಿ, ಪ್ರಸಿದ್ಧ ವಕೀಲರಾಗಿ, ತಮಿಳುನಾಡಿನ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರಹೊಮ್ಮಿದ್ದ ರಾಜಾಜಿಯವರ ನಿರ್ಧರವನ್ನು ಪ್ರಶ್ನಿಸುವ ಅಥವಾ ಪ್ರತಿಭಟಿಸುವ ನೈತಿಕತೆ ಅಥವಾ ಧೈರ್ಯ ಯಾರಿಗೂ ಇರಲಿಲ್ಲ. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಗಿಸಿ, ತ್ಯಾಗರಾಜರ ಸಮಾಧಿ ಎದುರು ನಾಗರತ್ನಮ್ಮನವರ ಶವವನ್ನು ಪಲ್ಲಕ್ಕಿಯನ್ನು ಹೊತ್ತು ತಂದಾಗ, ನಾಗರತ್ನಮ್ಮನವರ ಇಡೀ ಪಾರ್ಥಿವ ಶರೀರ ಮತ್ತು ಪಲ್ಲಕ್ಕಿ ಇವುಗಳು ಹೂಮಾಲೆಗಳ ರಾಶಿಯಿಂದ ಮುಚ್ಚಿಹೋಗಿದ್ದವು.

ಅಂತಿಮ ವಿಧಿ ವಿದಾನಗಳೊಂದಿಗೆ ತ್ಯಾಗರಾಜರ ಸಮಾಧಿಗೆ ಎದುರಾಗಿ ಸುಮಾರು ಮುನ್ನೂರು ಅಡಿ ದೂರದಲ್ಲಿ ಕಾವೇರಿ ನದಿಯ ತಟದಲ್ಲಿ ನಾಗರತ್ನಮ್ಮನವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಸಂಸ್ಕಾರಕ್ಕೆ ನೆರೆದಿದ್ದ ಜನಸ್ತೋಮವನ್ನು ನಿಯಂತ್ರಿಸಲು ತಂಜಾವೂರು ಪಟ್ಟಣದಿಂದ ಪೊಲೀಸ್ ಸಿಬ್ಬಂದಿ ಮತ್ತು ಸ್ಕೌಟ್ ದಳದ ಕಾರ್ಯಕರ್ತರನ್ನು ಕರೆಸಲಾಗಿತ್ತು.
ಅಂತ್ಯಕ್ರಿಯೆ ನೆರವೇರಿದ ನಂತರ ರಾಜಾಜಿಯವರು ಮದ್ರಾಸ್ ನಗರಕ್ಕೆ ತೆರಳದೆ, ಒಂದು ವಾರ ಕಾಲ ತಿರುವಯ್ಯಾರು ಪಟ್ಟಣದಲ್ಲಿ ನೆಲೆ ನಿಂತರು. ದೇವದಾಸಿ ಹೆಣ್ಣು ಮಗಳನ್ನು ಬ್ರಾಹ್ಮಣ ಕುಲಕ್ಕೆ ಸೇರಿದ ತ್ಯಾಗರಾಜರ ಸಮಾಧಿ ಎದುರು ಶವ ಸಂಸ್ಕಾರ ಮಾಡಿದ್ದು ಸಂಪ್ರದಾಯ ಮನಸ್ಸಿನ ಹಲವು ಬ್ರಾಹ್ಮಣರಿಗೆ ಇಷ್ಟವಾಗಿರಲಿಲ್ಲ. ಹಾಗಾಗಿ ಶವ ಹೊರತೆಗೆದು ನದಿಗೆ ಬಿಸಾಡುವ ಭಯ ಅವರನ್ನು ಕಾಡತೊಡಗಿತು. ಪ್ರತಿ ದಿನ ಸಂಜೆ ನದಿ ತೀರದ ಆ ಸ್ಥಳಕ್ಕೆ ಹೋಗುತ್ತಿದ್ದ ರಾಜಾಜಿಯವರು, ತಮ್ಮ ಶಿಷ್ಯರೊಂದಿಗೆ ಮಧ್ಯರಾತ್ರಿಯ ವರೆಗಲ್ಲಿ ಕುಳಿತು ಬರುತ್ತಿದ್ದರು. ನಾಗರತ್ನಮ್ಮವರನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಬೃಂದಾವನ ನಿರ್ಮಾಣವಾದ ಮೇಲೆ ಅವರು ನಿಟ್ಟುಸಿರು ಬಿಟ್ಟರು.

ಹನ್ನೊಂದನೆಯ ದಿನದ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯಗಳು ಬನ್ನಿಬಾಯಿ ಅವರ ನೇತೃತ್ವದಲ್ಲಿ ಜರುಗಿದವು. ನಾಗರತ್ನಮ್ಮನವರ ಅಪೇಕ್ಷೆಯಂತೆ ಆ ದಿನ ಸಾವಿರಾರು ಮಂದಿ ಬಡವರಿಗೆ ಅನ್ನದಾನ ಮಾಡಲಾಯಿತು. ನಾಗರತ್ನಮ್ಮನವರು ನಿಧನರಾಗಿ ವರ್ಷ ಕಳೆದ ನಂತರ ಮೊದಲ ವರ್ಷದ ಪುಣ್ಯ ತಿಥಿ ಆಚರಿಸಲು ನಾಗರತ್ನಮ್ಮನವರ ಸಾಕುಮಗಳಂತಿದ್ದ ಬನ್ನಿ ಬಾಯಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಸ್ಥಳಿಯ ಹನುಮಾನ್ ದೇವಸ್ಥಾನದಲ್ಲಿ ಸನ್ಯಾಸಿಯಾಗಿ ಬದುಕು ದೂಡುತ್ತಿದ್ದ ವ್ಯಕ್ತಿಯೊಬ್ಬರು ನಾಗರತ್ನಮ್ಮನವರ ಮನೆಗೆ ಬಂದರು. ಬನ್ನಿಬಾಯಿಗೆ ಆ ವ್ಯಕ್ತಿಯ ಮುಖಪರಿಚಯವಿತ್ತು. ದಕ್ಷಿಣ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಆ ವ್ಯಕ್ತಿ ತನ್ನ ನಿವೃತ್ತಿಯ ಸಮಯದಲ್ಲಿ ದೇಗುಲಗಳ ಪಟ್ಟಣವಾದ ಸೊಲಿಂಗೂರ್ ಎಂಬಲ್ಲಿ ಸ್ಟೇಶನ್ ಮಾಸ್ಟರ್ ಕಾರ್ಯನಿರ್ವಹಿಸಿದ್ದರು.
ನಾಗರತ್ನಮ್ಮನವರು ತಿರುವಯ್ಯೂರು ಪಟ್ಟಣದಲ್ಲಿ ಅನಾಥವಾಗಿದ್ದ ತ್ಯಾಗರಾಜರ ಸಮಾಧಿಯನ್ನು ಮುಳ್ಳು ಹಾಗೂ ಗಿಡಗಂಟಿಗಳ ನಡುವೆ ಹುಡುಕಿ ಅದನ್ನು ಪುನರುತ್ಥಾನ ಗೊಳಿಸಿದ್ದು, ತ್ಯಾಗರಾಜರ ಆರಾಧನೆ ಆರಂಭಿಸಿದ್ದು, ಆರಾಧನೆಯ ವೇಳೆ ಪೂಜೆ ಮತ್ತು ಸಂಗೀತಾರಾಧನೆಗಾಗಿ ಎರಡು ಬಣಗಳು ಸೃಷ್ಟಿಯಾಗಿ ಚಿನ್ನ ಕಚ್ಛಿ, ಪೆರಿಯ ಕಚ್ಛಿ ( ಕಿರಿಯಬಣ, ಹಿರಿಯ ಬಣ) ಇವರುಗಳ ಹೋರಾಟದ ನಡುವೆ ನಲುಗಿ, ಕೊನೆಗೆ ಎಲ್ಲರನ್ನೂ ಒಂದುಗೂಡಿಸಿದ್ದು, ಸಂಗೀತ ಕಛೇರಿಗೆ ಮಹಿಳಾ ಕಲಾವಿದೆಯರಿಗೆ ಅವಕಾಶ ನಿರಾಕರಿಸಿದ ಸಂದರ್ಭದಲ್ಲಿ ಆರಾಧನೆಗೆ ಪರ್ಯಾಯವಾಗಿ ಮಹಿಳಾ ಸಂಗೀತಗಾರರಿಂದ ಕಛೇರಿಯನ್ನು ನಡೆಸಿ ಪ್ರತಿಭಟಿಸಿದ್ದು ಹೀಗೆ ನಾಗರತ್ನಮ್ಮನವರ ನೂರಾರು ಘಟನೆಗಳಿಗೆ ಈ ವ್ಯಕ್ತಿ ಮೌನ ಸಾಕ್ಷಿಯಾಗಿದ್ದಕೊಂಡು ಅವರನ್ನು ಮನದಲ್ಲಿ ದೇವತೆಯಂತೆ ಪೂಜಿಸುತ್ತಿದ್ದರು. ಅವರ ಪ್ರಥಮ ಪುಣ್ಯತಿಥಿಯ ಸಂದರ್ಭಕ್ಕೆ ಅವರ ಪ್ರತಿಮೆ ಮಾಡಿಸಿಕೊಡುವುದಾಗಿ, ಅದನ್ನು ಅವರ ಸಮಾಧಿಯ ಸ್ಥಳದಲ್ಲಿ ಸ್ಥಾಪಿಸಲು ಅನುಮತಿ ನೀಡುವಂತೆ ಬನ್ನಿಬಾಯಿ ಬಳಿ ವಿನಂತಿಸಿಕೊಂಡರು. ಆ ವ್ಯಕ್ತಿಯ ಹೃದಯ ವೈಶಾಲ್ಯತೆಗೆ ಮಾರು ಹೋದ ಬನ್ನಿ ಬಾಯಿ ಮತ್ತು ಸಂಗಡಿಗರು ಸನ್ಯಾಸಿಯ ಕೋರಿಕೆಗೆ ಸಮ್ಮತಿಸಿದರು.
ನಾಗರತ್ನಮ್ಮನವರು ಕುಳಿತು, ತನ್ನ ಗುರುವಿಗೆ ಕೈ ಜೋಡಿಸಿ ನಮಸ್ಕರಿಸುತ್ತಿರುವ ಸ್ಥಿತಿಯಲ್ಲಿ ಕಪ್ಪು ಶಿಲೆಯಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಿಸಿದ ಸನ್ಯಾಸಿ, ಅದನ್ನು ನಾಗರತ್ನಮ್ಮನವರ ಸಮಾಧಿಯ ಮೇಲೆ ಪ್ರತಿಷ್ಟಾಪಿಸಿ, ಒಂದು ಚಿಕ್ಕ ಗುಡಿಯನ್ನೂ ಸಹ ತನ್ನ ಸ್ವಂತ ನಿವೃತ್ತಿ ವೇತನದ ಹಣದಲ್ಲಿ ನಿರ್ಮಾಣ ಮಾಡಿಸಿದರು. ತ್ಯಾಗರಾಜರ ದರ್ಶನಕ್ಕೆ ಬಂದವರ ಪಾಲಿಗೆ ನಾಗರತ್ನಮ್ಮ ಎಂಬ ದೇವತೆಯ ದರ್ಶನವೂ ಸಂಗೀತ ಪ್ರೇಮಿಗಳಿಗೆ ದೊರಕುವಂತಾಯಿತು. 1962 ರ ವರೆಗೆ ಎಣ್ಣೆಯ ದೀಪಗಳಿಂದ ಮಾತ್ರ ಬೆಳಗುತ್ತಿದ್ದ ಈ ಎರಡು ದೇಗುಲಗಳಿಗೆ ನಮ್ಮ ಕೋಲಾರದ ಕಲಾವಂತಲು ಎಂದು ಆಂಧ್ರದಲ್ಲಿ ಕರೆಸಿಕೊಳ್ಳುವ ದೇವದಾಸಿ ಸಮುದಾಯದ ಕೋಲಾರ ರಾಜಮ್ಮ ಎಂಬ ಸಂಗೀತ ಕಲಾವಿದೆಯೊಬ್ಬರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟರು. ನಂಜನಗೂಡಿನಲ್ಲಿ ಜನಿಸಿ, ಬಾಲ್ಯದ ಬಡತನದಿಂದಾಗಿ ಮೈಸೂರು ನಗರದ ರಸ್ತೆಗಳಲ್ಲಿ ಸಗಣಿ ಬಾಚುತ್ತಿದ್ದ ಹೆಣ್ಣು ಮಗಳು ಮುಂದೆ ಅದೇ ಮೈಸೂರು ಅರಮನೆಯಲ್ಲಿ ಸಂಗೀತ ನೀಡಿ, ಮಹಾರಾಜರಿಂದ ಕಪ್ಪ ಕಾಣಿಕೆ ಪಡೆದು, ತಮಿಳುನಾಡಿನಲ್ಲಿ ವಿದ್ಯಾಸುಂದರಿ ಎಂಬ ಬಿರುದಿಗೆ ಪಾತ್ರರಾಗಿ ಕೊನೆಗೆ ಕಾವೇರಿ ನದಿಯ ತಟದಲ್ಲಿ ದೇವತೆಯಾಗಿ ಪ್ರತಿಷ್ಟಾಪನೆಗೊಂಡಿರುವ ಈ ಮಹಾತಾಯಿಯ ಕಥನ ಅಕ್ಷರಗಳಿಗೆ ಮತ್ತು ಮಾತುಗಳಿಗೆ ಅಷ್ಟು ಸುಲಭವಾಗಿ ನಿಲುಕುವಂತಹದ್ದಲ್ಲ. ಮನದಲ್ಲಿ ಮೆಲುಕು ಹಾಕುವಂತಹದ್ದು.
ಈ ಮೇಲಿನ ಇತಿಹಾಸವನ್ನು ಮುಂದಿಟ್ಟುಕೊಂಡು, ಈ ದಿನ ತಿರುವಯ್ಯಾರಿನ ತ್ಯಾಗರಾಜ ಟ್ರಸ್ಟ್ ನ ಕಾರ್ಯವೈಖರಿಯನ್ನು ಪರಾಮರ್ಶಿಸಿದರೆ, ತೀರಾ ನಿರಾಸೆಯಾಗುವುದರ ಜೊತೆಗೆ ಬೇಸರವಾಗುತ್ತದೆ. ಚೆನ್ನೈ ನಗರದ ಗ್ರೀನ್ಸ್ ರಸ್ತೆಯಲ್ಲಿ ಕಚೇರಿಯನ್ನು ಸ್ಥಾಪಿಸಿಕೊಂಡು, ವರ್ಷಕ್ಕೊಮ್ಮೆ ಜನವರಿ ತಿಂಗಳಿನಲ್ಲಿ ಮೂರು ದಿನಗಳ ಕಾಲ ತ್ಯಾಗರಾಜರ ಆರಾಧನೆಯನ್ನು ನಡೆಸುವುದನ್ನು ಹೊರತು ಪಡಿಸಿದರೆ, ನಾಗರತ್ನಮ್ಮನವರ ಆಶಯಗಳಾಗಲಿ, ಕನಸುಗಳಾಗಲಿ ನೆರವೇರಿಲ್ಲ. ಇಡೀ ಟ್ರಸ್ಟ್ ಬ್ರಾಹ್ಮಣಮಯವಾಗಿದ್ದು, ಇಡೀ ತಿರುವಯ್ಯಾರನ್ನು ತ್ಯಾಗರಾಜಮಯ ಪಟ್ಟಣವನ್ನಾಗಿ ಪರಿವರ್ತಿಸಲು ಹುನ್ನಾರಗಳು ನಡೆಯುತ್ತಿವೆ ಎಂಬ ಸಂಶಯ ಮೂಡುತ್ತದೆ. ಯಾವುದೇ ಆಹ್ವಾನ ಪತ್ರಿಕೆಯಲ್ಲಾಗಲಿ, ಅಥವಾ ತ್ಯಾಗರಾಜರ ಆರಾಧನಾ ಮಹೋತ್ಸವ ನಡೆಯುವ ಸಂದರ್ಭದಲ್ಲಿ ನಾಗರತ್ನಮ್ಮನವರ ಹೆಸರು ಪ್ರಸ್ತಾಪವಾಗುವುದಿಲ್ಲ. ತ್ಯಾಗರಾಜರ ಸಮಾಧಿ ಇರುವ ದೇವಸ್ಥಾನದ ಒಳಗೋಡೆಯ ಮೇಲೆ ಒಂದು ಭಾವಚಿತ್ರ ಹಾಗೂ ದೇವಸ್ಥಾನದ ಹೊರಗೋಡೆಯಲ್ಲಿ ಶಂಕುಸ್ಥಾಪನೆಯ ಸಂದರ್ಭದಲ್ಲಿ ಬರೆಸಲಾಗಿರುವ ಒಂದು ಶಿಲಾಫಲಕ ಇವುಗಳನ್ನು ಹೊರತು ಪಡಿಸಿದರೆ, ನಾಗರತ್ನಮ್ಮನವರ ಕುರುಹುಗಳನ್ನು ಬಚ್ಚಿಡಲು ಪ್ರಯತ್ನಗಳು ಸಾಗಿವೆ ಎನಿಸುತ್ತದೆ.
ಇಡೀ ತಿರುವಯ್ಯಾರ್ ಇದೀಗ ತ್ಯಾಗರಾಜರ ಸ್ಮೃತಿಯಿಂದ ಆವರಿಸಿಕೊಂಡಿದೆ. ಆದರೆ, ಇದಕ್ಕೆ ಕಾರಣರಾದ ನಾಗರತನಮ್ಮನವರ ನೆನಪು ಯಾರಿಗೂ ಬೇಡವಾಗಿದೆ. ಈಗಿನ ತ್ಯಾಗರಾಜರ ಭಕ್ತರ ಮನಸ್ಸಿನಲ್ಲಿ ಈ ದೇವಸ್ಥಾನ ಅಥವಾ ಸಮಾಧಿ ಇವುಗಳು ದೇವದಾಸಿ ಕುಲದ ಹೆಣ್ಣು ಮಗಳೊಬ್ಬಳಿಂದ ನಿರ್ಮಿತವಾದವುಗಳು ಎಂಬುದು ಕಹಿ ನೆನಪುಗಳಾಗಿದ್ದು, ತ್ಯಾಗರಾಜರ ಆರಾಧನೆ ಆಕೆಯಿಂದ ಆರಂಭಗೊಂಡಿದ್ದು ಎಂದು ಹೇಳಿಕೊಳ್ಳುವುದನ್ನು ವ್ಯವಸ್ಥಿತವಾಗಿ ಮುಚ್ಚಿಡುತ್ತಿದ್ದಾರೆ. ಪ್ರತಿ ಗಂಟೆಗೊಮ್ಮೆ ನೇಮಿಸ್ಪಟ್ಟಿರುವ ಆರ್ಚಕರಿಂದ ತ್ಯಾಗರಾಜರ ಮೂರ್ತಿಯ ಮೇಲಿರುವ ಹೂವಿನ ಮಾಲೆ, ಅಂಗವಸ್ತ್ರ, ರುದ್ರಾಕ್ಷಿಮಾಲೆ ತೆಗೆದು, ಸ್ವಚ್ಚಗೊಳಿಸಿ, ಮೂರ್ತಿಯ ಹಣೆಗೆ ತೇಯ್ದ ಗಂಧವನ್ನಿಕ್ಕಿ, ರುದ್ರಾಕ್ಷಿ ಮಾಲೆ ಮತ್ತು ಹೂವಿನ ಹಾರ ಹಾಕಿ ಅಲಂಕರಿಸಿ, ಮಂಗಳಾರತಿ ಮಾಡಲಾಗುತ್ತಿದೆ. ಇದಕ್ಕೆ ಕಾರಣೀಭೂತರಾದ ಎದುರುಗಿನ ನಾಗರತ್ನಮ್ಮನವರ ಮೂರ್ತಿಯಿರುವ ಚಿಕ್ಕ ಗುಡಿಗೆ ಒಂದಲ್ಲ, ಎರಡಲ್ಲ, ಒಟ್ಟಿಗೆ ಮೂರು ಬೀಗ ಜಡಿಯಲಾಗಿದೆ. ನಾಗರತ್ನಮ್ಮನವರ ಮೂರ್ತಿಗೆ ಉಡಿಸಲಾದ ಸೀರೆಯ ಮೇಲೆ ಮೂರಿಂಚು ದೂಳು ಕುಳಿತಿದೆ. ಈ ಸತ್ಯ ಸಂಗತಿ ಕಣ್ಣೆದುರಿಗೆ ಇದ್ದರೂ ಜಾಣ ಕುರುಡರಂತೆ ಟ್ರಸ್ಟ್ ನ ಸದಸ್ಯರು ವರ್ತಿಸುತ್ತಿದ್ದಾರೆ.
ಇವರು ಮನಸ್ಸಿನಲ್ಲಿ ಎಂತಹ ವಿಕೃತಿ ತಾಂಡವಾಡುತ್ತಿದೆ ಎಂಬುದಕ್ಕೆ ಪ್ರತಿ ವರ್ಷ ನಡೆಯುವ ತ್ಯಾಗರಾಜರ ಆರಾಧನೆಯ ಉತ್ಸವ ನಮಗೆ ಸಾಕ್ಷಿಯಾಗಿದೆ. ಬೃಹತ್ ಪೆಂಡಾಲ್ ಕೆಳಗೆ ನಡೆಯುವ ಸಂಗೀತಾರಾಧನೆಗೆ ನಾಗರತ್ನಮ್ಮನವರ ಸಮಾಧಿ ಮತ್ತು ಮೂರ್ತಿ ಇರುವ ಸ್ಥಳದಲ್ಲಿ ವೇದಿಕೆ ನಿರ್ಮಿಸಿ, ಹಿಂಬಾಗದಲ್ಲಿ ಬೃಹತ್ತಾದ ಪರದೆಯನ್ನು ಹಾಕಿ ಮುಚ್ಚಲಾಗುತ್ತದೆ. ಪರದೆಯ ಮುಂಭಾಗದಲ್ಲಿ ಎರಡು ಸಮಾನಂತರ ವೇದಿಕೆ ನಿರ್ಮಿಸಿ, ಮೂರು ದಿನಗಳ ಕಾಲ ಬೆಳಿಗ್ಗೆ ಆರು ಗಂಟೆಯಿಂದ ಮಧ್ಯರಾತ್ರಿ ಹನ್ನೆರೆಡು ಗಂಟೆಯವರಿಗೆ ನಿರಂತರವಾಗಿ ಸಂಗೀತ ಕಾರ್ಯಕ್ರಮಗಳು ಜರುಗುತ್ತವೆ. ಸಂಗೀತದ ಜೊತೆ ಇತ್ತ ತ್ಯಾಗರಾಜರ ಸಮಾಧಿಯ ಬಳಿ ನಿರಂತರ ಪೂಜೆ ಪುರಸ್ಕಾರ ಜರುಗುತ್ತಲೇ ಇರುತ್ತವೆ. ನಾಗರತ್ನಮ್ಮನವರ ಮೂರ್ತಿ ಮಾತ್ರ ವೇದಿಕೆ ಮತ್ತು ಪರದೆಯ ಹಿಂದೆ ಅನಾಥವಾಗಿರುತ್ತದೆ.

ಸುಮಾರು ಇಪ್ಪತ್ತಮೂರು ಎಕರೆ ಪ್ರದೇಶದಲ್ಲಿ ಮುಖ್ಯ ದ್ವಾರದ ಬಳಿ ಅಥವಾ ಮೈದಾನದಲ್ಲಿ ನಾಗರತ್ನಮ್ಮನವರ ಮೂರ್ತಿ ನಿರ್ಮಾಣ ಮಾಡಿ ಅವರನ್ನು ನೆನೆಯುವ ಮನಸ್ಸು ಇಂದಿನ ಯಾವ ಮನಸ್ಸುಗಳಿಗೂ ಇಲ್ಲವಾಗಿದೆ. ಇತ್ತೀಚೆಗೆ ನಿರ್ಮಾಣವಾದ ಕಲ್ಯಾಣ ಮಂಟಪಕ್ಕೆ ತ್ಯಾಗರಾಜರ್ ಭವನ ಎಂದು ಹೆಸರಿಡಲಾಗಿದೆ, ಜನರೆಟರ್ ಕೊಠಡಿ ಮತ್ತು ಅತಿಥಿ ಭವನವೊಂದಕ್ಕೆ ಶ್ಯಾಮಾಶಾಸ್ತ್ರಿಯವರ ಹೆಸರಿಡಲಾಗಿದೆ. ಆದರೆ, ನಾಗರತ್ನಮ್ಮನವರ ಹೆಸರು ಎಲ್ಲಿಯೂ ಇಲ್ಲ. ಈ ವರ್ಷ ಆರಾಧನೆಗೆ ಒಂದು ವಾರ ಮುನ್ನ ನಾನು ಅಲ್ಲಿದ್ದ ಕಾರಣ, ಈ ಕುರಿತು ಸಂಸ್ಸ್ಥೆಯ ಸದಸ್ಯರನ್ನು ಪ್ರಶ್ನಿಸಿದಾಗ, ಯಾರಿಂದಲೂ ಸಮರ್ಪಕ ಉತ್ತರ ಬರಲಿಲ್ಲ. ಎಲ್ಲರೂ ತಮಿಳು ನಾಡಿನ ಶ್ರೀಮಂತ ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳ ಕುಟುಂಬ ವರ್ಗದವರಿಗೆ ಆಹ್ವಾನ ಪತ್ರಿಕೆ ಮತ್ತು ಅವರ ಕಾರುಗಳಿಗೆ ವಿ.ಐ.ಪಿ. ಪಾಸ್ ಗಳನ್ನು ಕೋರಿಯರ್ ಮೂಲಕ ಕಳಿಸುವ ಸಂಭ್ರದಲ್ಲಿದ್ದರು. ಇವರುಗಳ, ಜಾತಿ ಮತ್ತು ಸಂಕುಚಿತ ಮನೋಭಾವದಿಂದ ಬೇಸರಗೊಂಡು, ಪಕ್ಕದ ಕಾವೇರಿ ನದಿಯ ಸೋಪಾನಗಳ ಮೇಲೆ ಸುಮ್ಮನೇ ಯೋಚಿಸುತ್ತಾ ಕುಳಿತಿದ್ದೆ. ಅದೇ ಸಮಯಕ್ಕೆ ಸರಿಯಾಗಿ ನನ್ನೆದುರು ಒಂದು ವಿಲಕ್ಷಣ ಘಟನೆ ಜರುಗಿತು,
ಅದು ಮಧ್ಯಾಹ್ನ 12-30 ರ ಸಮಯ. ಸುಮಾರು ಎಪ್ಪತ್ತು ವಯಸ್ಸಿನ ದೈತ್ಯಾಕಾರದ ಆರಡಿ ಎತ್ತರದ ಕಪ್ಪನೆಯ ವ್ಯಕ್ತಿಯೊಬ್ಬರು ನದಿ ತೀರಕ್ಕೆ ಬಂದು ತಾನು ಜೊತೆಯಲ್ಲಿ ತಂದಿದ್ದ ಹಳದಿ ಬಣ್ಣದ ಕೈ ಚೀಲದೊಲಕ್ಕೆ ತನ್ನ ಜುಬ್ಬಾ ಮತ್ತು ನಿಕ್ಕರ್ ಜೇಬಿನಿಂದ ಹಣದ ಪಾಕೆಟ್, ಇನ್ನಿತರೆ ವಸ್ತುಗಳನ್ನು ಇಟ್ಟು, ತಾನು ಉಟ್ಟಿದ್ದ ಜುಬ್ಬಾ ಮತ್ತು ಪಂಚೆಯಲ್ಲಿ ನದಿಯಲ್ಲಿ ಮೂರು ಬಾರಿ ಮುಳುಗು ಹಾಕಿದರು. ನಂತರ ಒದ್ದೆ ಮೈಯಲ್ಲಿ ತ್ಯಾಗರಾಜರ ಸಮಾಧಿಯೆದುರು, ಹಾಗೂ ನಾಗರತ್ನಮ್ಮನವರ ಸಮಾಧಿಯೆದುರು ಎರಡು ನಿಮಿಷಗಳ ಕಾಲ ಕೈಮುಗಿಯುತ್ತಾ ನಿಂತು ಪ್ರಾರ್ಥಿಸಿ, ಮತ್ತೇ ನದಿಗೆ ಬಂದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಹೊರಟರು, ಇದೆಲ್ಲವನ್ನು ಕುತೂಹಲದಿಂದ ಗಮನಿಸುತ್ತಿದ್ದ ನಾನು ಅವರನ್ನು ತಮಿಳಿನಲ್ಲಿ ಪ್ರಶ್ನಿಸಿದೆ. ನನ್ನ ಪ್ರಶ್ನೆಗೆ ಉತ್ತರ ಹೇಳುತ್ತಾ, ನನ್ನ ಬದಿ ಬಂದು ಕುಳಿತ ಆ ವ್ಯಕ್ತಿ ನುಡಿದ ಮಾತುಗಳು ನನ್ನ ಮನಸ್ಸನ್ನು ತೀರಾ ಕಲಕಿಬಿಟ್ಟವು.
ತಮಿಳು ಭಾಷೆಯಲ್ಲಿ ವಿದ್ಯಾವಂತರನ್ನು ವಾದ್ಯಾರ್ ಎಂದು ಸಂಬೋಧಿಸುತ್ತಾರೆ. ವಾದ್ಯಾರ್ ಎಂದರೆ ಗುರುಗಳು ಅಥವಾ ಶಿಕ್ಷಕರು ಎಂದರ್ಥ. ನನ್ನನ್ನು ಈ ಶಬ್ಧದಿಂದ ಸಂಬೋಧಿಸುತ್ತಾ, ನಾನು ಕುಂಭಕೋಣಂ ಸಮೀಪದ ಒಂದು ಹಳ್ಳಿಯವನು. ವೃತ್ತಿಯಲ್ಲಿ ಕ್ಷೌರಿಕ ಜನಾಂಗದವನು. ಆದರೆ, ಬಾಲ್ಯದಲ್ಲಿ ಕಲಿತ ನಾದಸ್ವರ ವಾದನ ವೃತ್ತಿಯಿಂದಾಂಗಿ ನನ್ನ ಬದುಕು ಈಗ ಉತ್ತಮವಾಗಿದೆ, ಹಾಗಾಗಿ ತಂಜಾವೂರಿನ ಕಡೆ ಬಂದಾಗ, ಇಲ್ಲಿಗೆ ಬಂದು ಕರ್ನಾಟಕ ಸಂಗೀತದ ಮೂಲಕ ನನ್ನ ಬದುಕಿಗೆ ದಾರಿಯಾದ ಈ ಮಹನೀಯರಿಗೆ ಮತ್ತು ಆ ಮಹಾತಾಯಿಗೆ ಬಂದು ನಮನ ಸಲ್ಲಿಸಿ ಹೋಗುತ್ತೇನೆಎಂದು ಹೇಳುತ್ತಾ ಆ ಎರಡು ಸಮಾಧಿಗಳ ಆ ಹಿರಿಯ ಜೀವಕ್ಕೆ ಕೈ ಮುಗಿದಾಗ ನನ್ನ ಕಣ್ಣುಗಳು ತೇವಗೊಂಡವು. ಗೆದ್ದಲು ಕಟ್ಟಿದ ಹುತ್ತಕ್ಕೆ ಹಾವು ಬಂದು ತಳವೂರಿತು ಎಂಬ ಮಾತಿನಂತೆ, ಅಪಾತ್ರರು ಇಂದು ನಾಗರತ್ನಮ್ಮನವರ ಟ್ರಸ್ಟ್ ಅನ್ನು ಆಕ್ರಮಿಸಿಕೊಂಡು ಸಂಗೀತದ ಫೋಷಕರು ಎಂಬ ಮುಖವಾಡ ಹೊತ್ತಿರುವ ಈ ದಿನಗಳಲ್ಲಿ ಯಾವುದೇ ಮುಖವಾಡವಿಲ್ಲದ ಅಶಿಕ್ಷಿತ ಜನಸಾಮಾನ್ಯನೊಬ್ಬ ನಾಗರತ್ನಮ್ಮನವರನ್ನು ತನ್ನ ಎದೆಯಲ್ಲಿಟ್ಟುಕೊಂಡು ಪೂಜಿಸುತ್ತಿರುವ ಕಥೆ ಕೇಳಿ ಮನಸ್ಸಿಗೆ ಹಗುರವಾಯಿತು. ಹುಟ್ಟಿದ ನೆಲ ಮತ್ತು ತನ್ನ ಕರ್ಮಭೂಮಿಯನ್ನಾಗಿಸಿಕೊಂಡ ನೆಲ ಈ ಎರಡಕ್ಕೂ ಅನಾಮಿಕರಾಗಿ ಹೋಗುತ್ತಿರುವ ನಾಗರತ್ನಮ್ಮನವರ ಸಾಧನೆಗೆ ಸಾವಿಲ್ಲವೆಂಬ ಭರವಸೆ ಮನಸ್ಸಿನೊಳಗೆ ಚಿಗುರೊಡೆಯತೊಡಗಿತು.
(ಪ್ರಕಟಣೆಗೆ ಸಿದ್ಧಗೊಂಡಿರುವ ನಾದದೇವತೆ ನಾಗರತ್ನಮ್ಮ ಕೃತಿಯ ಪ್ರಸ್ತಾವನೆ)

‍ಲೇಖಕರು avadhi

29 April, 2014

10 Comments

  1. ಶ್ರೀಮಾತಾ

    ತಿರುವಯ್ಯಾರಿನಲ್ಲಿರೋದು ‘ಪ್ರಣತಾರ್ತಿಹರ’ ದೇವಸ್ಥಾನ, ‘ತೀರ್ಥ’ ಅಲ್ಲ… ಮತ್ತೆ ನಾಗರತ್ನಮ್ಮ ಕನ್ನಡಿಗರಿಗೆ ಅಪರಿಚಿತರು ಅಂತ ಯಾಕೆ ಹೇಳಿದ್ದೀರಿ ನನಗೆ ಅರ್ಥವಾಗಲಿಲ್ಲ. ಬರಹ ರೂಪದಲ್ಲಿ ನೀವು ಹೇಳಿದ ಹಾಗೆ ಡಿ ವಿ ಜಿ ಹಾಗೂ ವಾಸುದೇವಾಚಾರ್ಯರು ಬರೆದಿರೋದನ್ನ ಬಿಟ್ರೆ ಬೇರೆ ಹೆಚ್ಚು ದಾಖಲೆಗಳಿಲ್ಲ ನಿಜ(though I have seen a few articles in souvenirs etc which are for circulation among the members of a particular music organisation). ಆದ್ರೆ ಇಲ್ಲಿನ ಹಳೆಯ ತಲೆಮಾರಿನ ಸಂಗೀತಗಾರರಿಗೆ, ಸಂಗೀತರಸಿಕರಿಗೆ ಅವ್ರು ಖಂಡಿತಾ ಅಪರಿಚಿತರಲ್ಲ. ವಿ ಶ್ರೀರಾಮ್ ಅವರ ಇಂಗ್ಲಿಷ್ ಪುಸ್ತಕ ಬಂದಮೇಲೆ(ಈ ಪುಸ್ತಕ ಕನ್ನಡಕ್ಕೆ ಅನುವಾದ ಆಗ್ತಿದೆ ಅಂತ ಕೇಳಿದ್ದೆ) ಹೊಸ ತಲೆಮಾರಿನ ಕಲಾವಿದರಿಗೂ ಅವರ ಜೀವನದ ಪರಿಚಯ ಆಗಿದೆ. ಈಗ್ಗೆ ಕೆಲವು ವರ್ಷಗಳ ಹಿಂದೆ ಕರ್ನಾಟಕ ಗಾನಕಲಾ ಪರಿಷತ್ ನ ವಾರ್ಷಿಕ ಸಂಗೀತ ಸಮ್ಮೇಳನದಲ್ಲಿ ನಾಗರತ್ನಮ್ಮ ಅವರ ಬಗ್ಗೆ ಒಂದು ಅವಧಿ ಇದ್ದದ್ದೂ ನೆನಪಿದೆ. nothing to take away from your research, but just wanted to clarify

  2. jagadishkoppa

    ಶ್ರೀಮಾತಾ, ಅವರೇ, ಬೆಂಗಳೂರಿನ ಗಾನಕಲಾಪರಿಷತ್ ನಲ್ಲಿ ನಾಗರತ್ನಮ್ಮನವರ ಭಾವ ಚಿತ್ರ ಇದೆಯಾ? ಕೇವಲ ಸಂಗೀತಗಾರರ ನಡುವೆ, ವಿದ್ವಾಂಸರ ನಡುವಿನ ಮಾತುಗಳಲ್ಲಿ, ಸಂಚಿಕೆಗಳಲ್ಲಿ ಚರ್ಚೆಯಾದರೆ ಸಾಕೆ? ಪಾಮರರಿಗೆ ಇವರು ತಿಳಿಯಬೇಡವೆ? ಇವೊತ್ತು ಈ ಹೆಣ್ಣುಮಗಳ ಭಾವಚಿತ್ರ ಪ್ರದರ್ಶನ ಮಾಡುವುದಕ್ಕೆ ಮತ್ತು ಹೆಸರು ಹೇಳುವುದಕ್ಕೂ ಸಂಕೋಚಪಡುವ ಮನಸ್ಸುಗಳು ನಮ್ಮ ನಡುವೆ ತುಂಬಿಕೊಂಡಿವೆ. ಪುಸ್ತಕ ಮನೆಯ ಹರಿಹರ ಅವರು ನಾಗರತ್ನಮ್ಮನವರ ಕುರಿತು 2008 ರ ಜನವರಿಯಲ್ಲಿ ವಿಶೇಷ ಸಂಚಿಕೆ ಹೊರತಂದಿದ್ದಾರೆ. ದಯಮಾಡಿ ಅದರ ಸಂಪಾದಕೀಯವನ್ನು ಒಮ್ಮೆ ಓದಿ ನೋಡಿ. ಕರ್ನಾಟಕದಲ್ಲೂ ಎಂತಹ ವಿಕೃತ ಮನಸ್ಸುಗಳು ತುಂಬಿವೆ ಎಂಬುದು ಅರಿವಾಗುತ್ತದೆ.

  3. Rupa Hasana

    wonderful sir. Thanq..

  4. ಜಿ.ಎನ್ ನಾಗರಾಜ್

    ಒಂದು ಅತ್ಯಂತ ಪ್ರೀತಿಯಿಂದ ಉದ್ಭವವಾದ ಶ್ರಮದ ಉತ್ತಮ ಅಧ್ಯಯನ . ದಲಿತ ಸಂಘಟನೆಗಳು , ಪ್ರಗತಿಪರ ಸಾಹಿತ್ಯ ,ಸಾಂಸ್ಕೃತಿಕ ಸಂಘಟನೆಗಳು ಇವರ ಹೆಸರು ಮನೆ ಮಾತಾಗುವಂತೆ ಮಾಡಬೇಕು .

  5. Rajalakshmi

    nice article sir.
    worth reading…
    Thank you
    Rajalakshmi

  6. prathibha nandakumar

    very good thank you jagadish koppa

  7. mmshaik

    jagadish avre,nimma lekhanagaLnnu naanu tumba aasaktiyinda oduttene..ee lekhna mana midiyuvantiddu..namma samajada kygannadiyantide.

  8. prathibha nandakumar

    Vepathangudi Ramachandrarao Devika: I have a copy of Bangalore Nagarathnamma’s biography by V.Sriram.. She has not been forgotten at all.. When I went to the Tyagaraja samadhi at Tiruvayyaru, every one was talking about her..

  9. ಶ್ರೀಮಾತಾ

    ಗಾನಕಲಾ ಪರಿಷತ್ ನಲ್ಲಿ ಯಾರ ಫೋಟೋ ಇದೆ ನನಗೆ ಗೊತ್ತಿಲ್ಲ – ಕಾರಣ ಅವರದ್ದು ಒಂದು ಚಿಕ್ಕ ಕಚೇರಿ ಅಷ್ಟೇ ಇದ್ದು, ಅಲ್ಲಿಯ ಕಮಿಟಿ ಮೆಂಬರ್ಸ್ ಕಾರ್ಯನಿಮಿತ್ತ ಹೋಗೋದು ಬಿಟ್ಟು ಬೇರೆ ಸಂಗೀತಗಾರರು ಅಲ್ಲಿ ಜಾಸ್ತಿ ಹೋಗೋ ಪ್ರಮೇಯವಿಲ್ಲ. ಪಾಮರರಿಗೆ ಅವರ ಬಗ್ಗೆ ತಿಳೀಬೇಕು – ನಿಜ ಆದ್ರೆ ಅದು ಬರೀ ಕರ್ನಾಟಕದ ಮಾತಲ್ಲ. ತಮಿಳುನಾಡು – ಆಂಧ್ರದಲ್ಲೂ ಆಕೆಯ ಬಗ್ಗೆ ತಿಳಿದಿರೋದು ಬರೀ ಸಂಗೀತಗಾರರಿಗೆ ಅಷ್ಟೇ ಹೊರತು, ಸಾಮಾನ್ಯಜನರಿಗೆ ಅಲ್ಲ. ಮತ್ತೆ ಅದು ಹಿಂದಿನ ಶತಮಾನದಲ್ಲಿ ಜೀವಿಸಿದ ನಾಗರತ್ನಮ್ಮ ಅವರಿಗೆ ಸೀಮಿತವಲ್ಲ. ಈ ಶತಮಾನದಲ್ಲೂ, ಕೊನೆಯವರೆಗೂ ಹಾಡುತ್ತಲೇ ಇದ್ದ ಡಾ|| ಆರ್ ಕೆ ಶ್ರೀಕಂಠನ್ ಅಂಥವರಿಗೂ ತಪ್ಪಿದ್ದಲ್ಲ – ಶಾಸ್ತ್ರೀಯ ಸಂಗೀತ, ಸಂಗೀತಗಾರರ ಬಗೆಗಿರುವ ಸಾಮಾನ್ಯ ತಿಳುವಳಿಕೆಯ ಕೊರತೆ. ಮತ್ತೆ am not denying caste dynamics at play here. ಆದ್ರೆ ನೀವು ಹೇಳಿದಷ್ಟು ಸರಳ uni-dimensional ಸಮಸ್ಯೆ ಅಲ್ಲ ಅದು ಅಂತ ನನಗನ್ನಿಸುತ್ತೆ. ಪ್ರತಿಭಾ ಮೇಡಂ ಹೇಳಿರೋ ಹಾಗೆ ತಿರುವಯ್ಯಾರಿನಲ್ಲಿ ಅವರನ್ನ ಮರೆತಿಲ್ಲ ಅಂತ ನನಗೂ ಅನ್ನಿಸುತ್ತೆ. of course ಆರಾಧನೆಯ ದಿನಗಳನ್ನು ಬಿಟ್ಟು ಬೇರೆ ದಿನಗಳಲ್ಲಿ ಅಲ್ಲಿ ತ್ಯಾಗರಾಜರನ್ನು ಕೇಳುವವರೂ ಯಾರೂ ಇರಲ್ಲ, ನಾಗರತ್ನಮ್ಮನವರ ಸಮಾಧಿಗೂ ಅದೇ ಅವಸ್ಥೆ. ಆರಾಧನಾ ಟ್ರಸ್ಟ್ ಬ್ರಾಹ್ಮಣಮಯ ಅನ್ನುವುದೂ contestable. ನನಗೆ ಗೊತ್ತಿರುವ ಮಟ್ಟಿಗೆ ಈಗ ಮುಂದಾಳತ್ವ ವಹಿಸಿರುವವರು ತವಿಲ್ ವಿದ್ವಾಂಸರಾದ ಪಳನಿವೇಲ್ ಅವರು. ಟ್ರಸ್ಟ್ ಮಾಡುತ್ತಿರೋದೆಲ್ಲ ಸರಿ ಅಂತಲೂ ಹೇಳ್ತಿಲ್ಲ ನಾನು. ಸಂಗೀತಕ್ಷೇತ್ರದಲ್ಲಿ ಬ್ರಾಹ್ಮಣ – ಅಬ್ರಾಹ್ಮಣ ಗೊಂದಲಗಳು, ಗುಂಪುಗಾರಿಕೆಗಳು ಇಲ್ಲ ಅಂತಲೂ ನಾ ಹೇಳ್ತಿಲ್ಲ, ಆದರೆ ಅದು ಸರಳರೇಖೆಗೆ ನಿಲುಕುವ ಸಮೀಕರಣಗಳಲ್ಲ, ಮತ್ತೆ ಅದೇ ಕಾರಣಕ್ಕೆ ಎಲ್ಲವನ್ನೂ ಅದಕ್ಕೆ ಸಮೀಕರಿಸುವುದು ಸರಿಯಲ್ಲ ಅನ್ನುವುದು ನನ್ನ ಅನಿಸಿಕೆ. ಹರಿಹರಪ್ರಿಯರ ಸಂಪಾದಕೀಯ ನಿಮ್ಮ ಬಳಿ ಇದ್ರೆ share ಮಾಡೋಕಾದ್ರೆ ದಯವಿಟ್ಟು ಇಲ್ಲಿ ಹಾಕಿ, ಓದೋಣ.

  10. ravi dalavayi

    Its an informative

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading