ದೀಕ್ಷಿತ್ ನಾಯರ್
***
ಪೇಟೆ ಬೀದಿಯ ಬೋಳು ತಲೆಯ ಸೇಠು “ವರ್ಷದಿಂದ ಬಡ್ಡಿ ಕಟ್ಟಿಲ್ಲ ನಿಮ್ಮ ಮಾಂಗಲ್ಯ ಸರವನ್ನು ಹರಾಜು ಕೂಗಿಬಿಡುತ್ತೇನೆ” ಎಂದಿದ್ದಾನೆ
ಅಮ್ಮನ ಕಣ್ಣುಗಳಲ್ಲಿ ಆಗಲೇ ನೀರು ಕದಲಿವೆ;
ಮಂಕು ಬಡಿದವಳಂತೆ ಗೋಡೆಗೆ ಒರಗಿಕೊಂಡಿದ್ದಾಳೆ
ತಟ್ಟೆಯ ಮುಂದೆ ಕುಳಿತಿರುವ ನನ್ನನ್ನು ಸಣ್ಣ ನಿರೀಕ್ಷೆಯೊಂದಿಗೆ ನೋಡುತ್ತಿದ್ದಾಳೆ;
ಈ ಪಾಪಿ ಮಗನಿಗೆ ಅಮ್ಮನ ‘ಚಿನ್ನದ ಕನಸು’ ಅರ್ಥವಾಗುತ್ತಿಲ್ಲ
ಅಮ್ಮ ತಾಳಿ ಪೋಣಿಸಿಕೊಂಡಿರುವ ಇನ್ನೂರು ರೂಪಾಯಿ ಬೆಲೆಯ ಉಮಾ ಗೋಲ್ಡ್ ಸರ ತೀರಾ ಕಪ್ಪಗಾಗಿದೆ ಆಕೆಯ ಕುತ್ತಿಗೆಯೂ;
ಸಣ್ಣ ಗುಲಾಬಿ ಬಣ್ಣದ ಚೀಟಿ ಒಂದನ್ನು ಕೈಯಲ್ಲಿ ಹಿಡಿದು ಏನನ್ನೋ ಲೆಕ್ಕ ಹಾಕುತ್ತಾ ಮತ್ತೆ ಮತ್ತೆ ಕ್ಯಾಲೆಂಡರ್ ನೋಡುತ್ತಿದ್ದಾಳೆ
ತಾನು ಕೂಡಿಟ್ಟುಕೊಂಡ ಪುಡಿಗಾಸನ್ನೆಲ್ಲ ತನ್ನ ಸೆರಗಿನೊಳಕ್ಕೆ ಸುರುವಿಕೊಂಡಿದ್ದಾಳೆ
ಅದು ಯಾವುದಕ್ಕೂ ಸಾಲುತ್ತಿಲ್ಲ ;
ಕಡೆಯ ಬಾರಿ ಎಂಬಂತೆ ಆಸೆಯಿಂದ ನನ್ನತ್ತ ಕಣ್ಣು ಹೊರಳಿಸಿದ್ದಾಳೆ
ಉಹೂಂ. ನಾನು ಬಿಲ್ಕುಲ್ ಕರಗುವುದಿಲ್ಲ
ಅಮ್ಮನ ಎರಡು ಎಳೆ ಮಾಂಗಲ್ಯ ಸರ ಗಿರವಿ ಅಂಗಡಿ ಸೇರಿದ್ದು ನನ್ನ ಕಾಲೇಜು ಶುಲ್ಕಕ್ಕಾಗಿ, ಕುಡಿದು ಸತ್ತ ನನ್ನ ಅಪ್ಪನ ದಫನ್ ಗಾಗಿ, ಮುರಿದು ಬಿದ್ದ ಮನೆಯ ಹಂಚಿನ ರಿಪೇರಿಗಾಗಿ;
ಅಮ್ಮನ ಚಿನ್ನದ ಸರ ಯಾವ ಮದುವೆ,ಹಬ್ಬ-ಹರಿದಿನಗಳಿಗೂ ಸಾಕ್ಷಿಯಾಗಲಿಲ್ಲ
ಸೇಠುವಿನ ಕಬ್ಬಿಣದ ಅಲೆಮಾರಿನೊಳಗೇ ಬಂಧಿತವಾಗಿದೆ
ಅಮ್ಮ ಈಗಲೂ ಚಿನ್ನದಾಸೆಯಿಂದ ಬದುಕು ತಳ್ಳುತ್ತಿದ್ದಾಳೆ
ಯಾವುದೋ ಅನಾಮಿಕ ನಂಬರಿನ ಕರೆ ಕೊನೆಗೂ ಸೇಠು ಅಮ್ಮನ ಸರವನ್ನು
ಹರಾಜು ಕೂಗಿಬಿಟ್ಟಿದ್ದಾನೆ;
ಅಮ್ಮ ಮೌನವಾಗಿ ಬಿಕ್ಕುತ್ತಿದ್ದಾಳೆ
ಮತ್ತೆ ಏನೂ ಆಗಿಲ್ಲವೆಂಬಂತೆ ಹೊರಕ್ಕೆ ನಡೆದು ಹೋಗಿದ್ದಾಳೆ
ಅರೆ! ಅಮ್ಮನ ಕುತ್ತಿಗೆಯಲ್ಲಿ ಈಗ ಅರಿಶಿನ ದಾರವಿದೆ
ಅವಳು ಈಗ ಅಳುತ್ತಿಲ್ಲ
ಥೇಟ್ ಚಿನ್ನದರಸಿಯಂತೆ ನಗುತ್ತಿದ್ದಾಳೆ
ಈ ಪಾಪಿಗೇಡಿ ಮಗ ಚಿನ್ನದ ಅರಮನೆಯಲ್ಲಿ ಇರಿಸುತ್ತೇನೆ ಎಂಬ ನಂಬಿಕೆಯೊಂದಿಗೆ!
0 Comments