ಕಳೆದ ಹಲವು ತಿಂಗಳುಗಳಿಂದ ರಾಜ್ಯ ಭಾಜಪ ಸರ್ಕಾರವನ್ನು ಕಾಡುತ್ತಿದ್ದ ಭಿನ್ನಮತದ ಭೂತ ಕೊನೆಗೂ ನಿರ್ಗಮಿಸಿದೆ. 11 ಮಂದಿ ಭಾಜಪ ಶಾಸಕರು ನಾಯಕತ್ವ ಬದಲಾವಣೆಗಾಗಿ ಆಗ್ರಹಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದ ಸಂದರ್ಭದಲ್ಲಿ, ಸಂವಿಧಾನ ನಿಷ್ಠೆಗಿಂತಲೂ ಸ್ವಾಮಿನಿಷ್ಠೆ ಹೆಚ್ಚು ಎಂದು ನಿರೂಪಿಸಿದ ವಿಧಾನಸಭಾ ಸ್ಪೀಕರ್ ಮಾನ್ಯ ಬೋಪಯ್ಯನವರು ಯಡಿಯೂರಪ್ಪ ವಿಶ್ವಾಸ ಮತ ಯಾಚಿಸುವ ಎರಡು ದಿನಕ್ಕೆ ಮುನ್ನ ಈ 11 ಶಾಸಕರನ್ನು ಅನರ್ಹರೆಂದು ಘೋಷಿಸಿ, ಸಕರ್ಾರದ ಹಾದಿಯನ್ನು ಸುಗಮಗೊಳಿಸಿದ್ದರು. ಹಲವಾರು ಆಮಿಷಗಳಿಗೆ ಬಲಿಯಾಗಿ ಸರ್ಕಾರವನ್ನು ಬೆಂಬಲಿಸಿದ್ದ ಐವರು ಪಕ್ಷೇತರರಿಗೂ ಇದೇ ಗತಿಯಾಗಿತ್ತು. ಬೋಪಯ್ಯನವರ ಈ ನಿಲುವನ್ನು ಉಚ್ಚ ನ್ಯಾಯಾಲಯವೂ ಎತ್ತಿಹಿಡಿದಿದ್ದು ಅನೇಕ ಸಂವಿಧಾನ ತಜ್ಞರನ್ನು ತಬ್ಬಿಬ್ಬು ಮಾಡಿದ್ದೂ ನಿಜ. ಆದರೆ ಈಗ ಸರ್ವೋಚ್ಚ ನ್ಯಾಯಾಲಯವು ವಿಧಾನಸಭಾಧ್ಯಕ್ಷರ ತೀರ್ಪನ್ನು ಅಸಿಂಧುಗೊಳಿಸಿ ಎಲ್ಲ ಶಾಸಕರನ್ನೂ ಅರ್ಹರೆಂದು ಘೋಷಿಸಿದೆ. ಅಂದರೆ ಇವರು ಪ್ರಜೆಗಳ ಪ್ರತಿನಿಧಿಗಳಾಗಿರಲು ಅರ್ಹರೆಂದು ಭಾವಿಸಬೇಕಿಲ್ಲ. ಚುನಾಯಿತರಾಗಿರುವುದರಿಂದ ಶಾಸಕರಾಗಿ ಮುಂದುವರೆಯಲು ಅರ್ಹರೆಂದು ಮಾತ್ರ ಭಾವಿಸಬಹುದು.
ಫೋಟೋ: ಕರ್ನಾಟಕ ಫೋಟೋ ನ್ಯೂಸ್ / ಚುರುಮುರಿ
ಸರ್ವೋಚ್ಚ ನ್ಯಾಯಾಲಯದ ತೀರ್ಪು ತ್ರಿಶಂಕು ಸ್ಥಿತಿಯಲ್ಲಿದ್ದ ಈ ಶಾಸಕರಿಗೆ ಜೀವದಾನ ನೀಡಿದ ಕೂಡಲೇ ತಮ್ಮ ಪೂರ್ವಜನ್ಮದ ವಾಸನೆಯ ಜಾಡನ್ನೇ ಹಿಡಿದು ಹೊರಟಿರುವ ಶಾಸಕರು ಈಗ ನಾಯಕತ್ವ ಬದಲಾವಣೆಯ ಪ್ರಸ್ತಾಪವನ್ನೇ ಮಾಡದೆ ಪುನಃ ಯಡಿಯೂರಪ್ಪ ಸರ್ಕಾರಕ್ಕೆ ತಮ್ಮ ಬೇಷರತ್ ಬೆಂಬಲ ಸೂಚಿಸಿರುವುದು ಸರ್ವೋಚ್ಚ ನ್ಯಾಯಾಲಯವನ್ನೂ ಅಣಕಿಸುವಂತಿದೆ. ಸ್ಪೀಕರ್ ಬೋಪಯ್ಯನವರ ಕ್ರಮವನ್ನು ಅಸಿಂಧುಗೊಳಿಸುವುದಷ್ಟೇ ಅಲ್ಲದೆ, ಆ ಸಮಯದಲ್ಲಿ ಅವರು ಕೈಗೊಂಡ ತೀರ್ಮಾನವನ್ನು ಸಂವಿಧಾನ ವಿರೋಧಿ ಎಂದು ಟೀಕಿಸುವ ಮೂಲಕ ನ್ಯಾಯಾಲಯ ಛೀಮಾರಿ ಹಾಕಿದೆ. ರಾಜಕಾರಣ ಎಂದರೆ ತಮ್ಮಿಷ್ಟದಂತೆ ಆಡಬಹುದಾದ ಪಗಡೆ ಆಟ ಎಂದು ಆಳ್ವಿಕರು ಭಾವಿಸಿದ್ದರೆ ಸುಪ್ರೀಂ ಕೋರ್ಟ್ ನ ತೀರ್ಪಿನಲ್ಲಿ ತಕ್ಕ ಉತ್ತರ ದೊರೆತಿದೆ. ಸ್ಪೀಕರ್ ಬೋಪಯ್ಯ ನಿಜಕ್ಕೂ ತಮ್ಮ ಸ್ಥಾನಕ್ಕೆ ಗೌರವ ತೋರುವವರಾದಲ್ಲಿ, ಸಂವಿಧಾನದ ಘನತೆಗೆ ಗೌರವ ಸೂಚಿಸುವವರಾದಲ್ಲಿ ಈ ಕೂಡಲೇ ರಾಜೀನಾಮೆ ನೀಡುವುದು ಸೂಕ್ತ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಸ್ಪೀಕರ್ ಹುದ್ದೆಯನ್ನು ಜೂಜಾಟದ ಅಡ್ಡೆಯನ್ನಾಗಿ ಪರಿವರ್ತಿಸಿದ ಬೋಪಯ್ಯ ತಮ್ಮ ಸ್ಥಾನದಲ್ಲಿ ಒಂದು ನಿಮಿಷ ಮುಂದುವರೆದಿದ್ದೂ ಪ್ರಜಾತಂತ್ರಕ್ಕೆ ಅಪಚಾರವೆಸಗಿದಂತೆ. ಭಾಜಪದ ಹಿರಿಯರಾದ ಎಲ್.ಕೆ.ಅದ್ವಾನಿಯವರೂ ಇದೇ ಮಾತನ್ನು ಹೇಳಿರುವುದು ಸ್ವಾಗತಾರ್ಹ. ಆದರೆ ಕರ್ನಾಟಕದ ರಾಜಕಾರಣದಲ್ಲಿ ಈ ಮೌಲ್ಯಗಳು ಎಂದೋ ಸತ್ತು ಹೋಗಿವೆ. ಅಥವಾ ಸಾಯಿಸಿಬಿಟ್ಟಿದ್ದಾರೆಂದೂ ಹೇಳಬಹುದು. ಆಪರೇಷನ್ ಕಮಲದ ಮಹತ್ವ !
ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಜನಪ್ರತಿನಿಧಿಗಳನ್ನು ಮಾರುಕಟ್ಟೆಯ ಸರಕುಗಳನ್ನಾಗಿ ಪರಿವರ್ತಿಸಿರುವ ಕರ್ನಾಟಕದ ಭಾಜಪ ಸರ್ಕಾರ ರಾಜಕೀಯ ತಂತ್ರಗಾರಿಕೆಯನ್ನು ಮಾರುಕಟ್ಟೆ ತಂತ್ರಗಾರಿಕೆಯಾಗಿಯೂ ಪರಿವರ್ತಿಸಿರುವುದು ಪ್ರಸ್ತುತ ಬೆಳವಣಿಗೆಗೆ ಕಾರಣವಾಗಿದೆ. ಕರ್ನಾಟಕದ ರಾಜಕಾರಣದಲ್ಲಿ ಶಾಸಕರೆಂದರೆ ಬಿಕರಿಗೆ ಸಿದ್ಧರಾಗಿರುವ ಸರಕುಗಳಷ್ಟೆ. 11 ಜನ ಅನರ್ಹರನ್ನು ಅರ್ಹರೆಂದು ನ್ಯಾಯಾಲಯ ಘೋಷಿಸುತ್ತಲೇ ಕೆಲವು ಶಾಸಕರು ಬಿಕರಿಗೆ ಸಿದ್ಧರಾಗಿದ್ದು ಇದಕ್ಕೆ ನಿದರ್ಶನ. ಆದರೆ ಇದು ಜಾಗತೀಕರಣದ ಸ್ಪಧರ್ಾತ್ಮಕ ಮಾರುಕಟ್ಟೆ ಯುಗ. ಮತ್ತೊಬ್ಬರಿಗೆ ದೊರೆಯುವ ಮಾರುಕಟ್ಟೆ ಬೆಲೆ ತಮಗೇ ದೊರೆಯಬಹುದೇನೋ ಎಂಬ ಆಸೆ. ಹಾಗಾಗಿ 11 ಅನರ್ಹರಲ್ಲಿ ಹತ್ತು ಜನ ಮತ್ತೆ ಯಡಿಯೂರಪ್ಪ ಸರ್ಕಾರಕ್ಕೆ ಬೇಷರತ್ ಬೆಂಬಲ ಸೂಚಿಸಿದ್ದಾರೆ. ಇದು ಆಪರೇಷನ್ ಕಮಲದ ಮತ್ತೊಂದು ಆಯಾಮವಷ್ಟೆ.
ಈ ಎಲ್ಲಾ ಬೆಳವಣಿಗೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಸಾಂವಿಧಾನಿಕ ಬಿಕ್ಕಟ್ಟನ್ನು ಪರಿಹರಿಸಬೇಕಾದ ರಾಜ್ಯಪಾಲರಿಂದಲೂ ಅದೇ ಕ್ಷುದ್ರ ರಾಜಕಾರಣ. ರಾಜಕೀಯ ಪರ್ಯಾಯ ಒದಗಿಸಲು ವಿಫಲವಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಮತ್ತೊಂದು ರೀತಿಯ ಹೊಲಸು ರಾಜಕಾರಣ. ಸರ್ಕಾರವನ್ನು ವಜಾ ಮಾಡಲು ಒತ್ತಾಯ. ಬಹುಶಃ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದರೂ ಅಚ್ಚರಿಯೇನಿಲ್ಲ. ಯಡಿಯೂರಪ್ಪನವರಿಗೆ ಮತ್ತೊಮ್ಮೆ ಕಣ್ಣೀರು ಸುರಿಸಿ ಮತ ಯಾಚಿಸಿ, ಅನುಕಂಪದ ಅಲೆಯ ಮೇಲೆ ಚುನಾಯಿತರಾಗಿ ಬರುವ ಅವಕಾಶ. ಯಾರಿಗುಂಟು ಯಾರಿಗಿಲ್ಲ. ಹುತಾತ್ಮ ಪಟ್ಟ ಪದೇ ಪದೇ ಸಿಗುವುದು ಅಪರೂಪ. ವ್ಯಾಸರು ತಮ್ಮ ಭಾರತದಲ್ಲಿ ಶಕುನಿಯ ಪಾತ್ರವನ್ನು ಹೇಗೆ ಮತ್ತು ಏಕೆ ಸೃಷ್ಟಿಸಿದರು ಎಂದು ಈ ವಿದ್ಯಮಾನಗಳಿಂದಲೇ ತಿಳಿಯಬಹುದು. ತಮ್ಮ ಅಪ್ರಬುದ್ಧ ರಾಜಕಾರಣದ ಮೂಲಕ ಮತ್ತು ಕುತಂತ್ರಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತಲೇ ಪ್ರೋತ್ಸಾಹಿಸುವ ಕ್ಷುದ್ರ ರಾಜಕಾರಣವನ್ನು ರಾಜ್ಯದಲ್ಲಿ ಕಾಣುವುದು ಕಷ್ಟವೇನಲ್ಲ.
ಈ ವಿದ್ಯಮಾನಗಳಿಂದ ರಾಜ್ಯ ಸರ್ಕಾರ ಸುಸ್ಥಿರವಾಗಿ ಉಳಿಯಬಹುದು. ಅಥವಾ ರಾಷ್ಟ್ರಪತಿ ಆಳ್ವಿಕೆ ಹೇರಿದ ನಂತರ ಮತ್ತೊಂದು ಚುನಾವಣೆ ನಡೆದು ಪುನಃ ಭಾಜಪ ಅಧಿಕಾರಕ್ಕೂ ಬರಬಹುದು. ಮತ್ತೊಮ್ಮೆ ಆಪರೇಷನ್ ಕಮಲ ಜಾರಿಯಾಗಬಹುದು. ಆದರೆ ಕರ್ನಾಟಕದ ಪ್ರಸಕ್ತ ರಾಜಕಾರಣದಲ್ಲಿ ಸಾಂವಿಧಾನಿಕ ಮೌಲ್ಯಗಳು ಮತ್ತು ಮೌಲ್ಯಾಧಾರಿತ ರಾಜಕಾರಣ ಶಾಶ್ವತ ಮರಣ ಹೊಂದುವುದು ಮಾತ್ರ ಶತಃಸಿದ್ಧ. ಈ ಸಂದರ್ಭದಲ್ಲಿ ಪಕ್ಷಾಂತರ ಪ್ರಕ್ರಿಯೆಯನ್ನು ಕುದುರೆ ವ್ಯಾಪಾರ ಎಂದು ಬಣ್ಣಿಸುವುದು ತರವಲ್ಲ. ಇಂದು ರಾಜ್ಯದಲ್ಲಿ ನಡೆಯುತ್ತಿರುವುದು ಭಾರಿ ದನಗಳ ಜಾತ್ರೆ. ಜನಪ್ರತಿನಿಧಿಗಳೆಂಬ ಲೇಬಲ್ ಹೊತ್ತಿರುವ ಧನ ಪ್ರತಿನಿಧಿಗಳು ಜಾತ್ರೆಯಲ್ಲಿ ಬಿಕರಿಗಿಟ್ಟ ದನಗಳ ಹಾಗೆ ಮಾರುಕಟ್ಟೆಯಲ್ಲಿ ನಿಂತಿದ್ದಾರೆ. ಪಕ್ಷ, ಮೌಲ್ಯ, ಸಿದ್ಧಾಂತ, ನಿಷ್ಠೆ, ಸಂವಿಧಾನ, ಪ್ರಾಮಾಣಿಕತೆ ಇದಾವುದೂ ಗಣನೆಗೆ ಬಾರದ ಮಾರುಕಟ್ಟೆ ವ್ಯವಸ್ಥೆಯಲ್ಲಿ ದುಡ್ಡೇ ದೊಡ್ಡಪ್ಪ, ಅಧಿಕಾರವೇ ಅಂತಿಮ ತಾಣ.
ಈ ದನಗಳ ಜಾತ್ರೆಯಲ್ಲಿ ಬಿಕರಿಯಾಗುವ ಅತ್ಯುತ್ತಮ ತಳಿಗಳಿಗೆ ಅತಿ ಹೆಚ್ಚಿನ ಮೌಲ್ಯ. ಕುದುರೆಗಳಿಗೆ ಲಗಾಮು ಬಿಡಿಸಿಕೊಂಡು ಓಡಿಹೋಗುವ ಸಾಮಥ್ರ್ಯವಾದರೂ ಇರುತ್ತದೆ. ಆದರೆ ದನಗಳಿಗೆ ಪಾಪ ಸ್ವಾಮಿ ನಿಷ್ಠೆ ಹೆಚ್ಚು. ತನ್ನ ಪಾಲಕರನ್ನು ಎಂದಿಗೂ ಮರೆಯದೆ, ವಿಶ್ವಪರ್ಯಟನೆ ಮಾಡಿದರೂ ತವರಿಗೇ ಮರಳುತ್ತದೆ. ತನಗೆ ಎಷ್ಟು ಮೇವು ದೊರೆಯುವುದೋ ಅಷ್ಟೇ ಪ್ರಮಾಣದ ಹಾಲು ನೀಡುತ್ತದೆ. ನಮ್ಮ ಶಾಸಕರೂ ಹಾಗೇ, ಆಪರೇಷನ್ ಕಮಲದ ಮೂಲಕ ತಮಗೆ ಎಷ್ಟು ಹಣ ದೊರೆಯುವುದೋ ಅಷ್ಟೇ ಪ್ರಮಾಣದಲ್ಲಿ ಪಕ್ಷಕ್ಕೆ ನೆರವಾಗುತ್ತಾರೆ. ಪಕ್ಷಭೇದವಿಲ್ಲದೆ ಎಲ್ಲರಿಗೂ ಮುಕ್ತ ಪ್ರವೇಶ ಇರುವ ಈ ಭಾರಿ ದನಗಳ ಜಾತ್ರೆಯಲ್ಲಿ ಯಾವ ತಳಿ ಯಾರಿಗೆ ಲಭಿಸುತ್ತದೋ ಕಾದು ನೋಡಬೇಕು.








ತಮ್ಮ ನೇರ ಹಾಗೂ ದಿಟ್ಟ, ಸಾಮಾಜಿಕ ಕಳಕಳಿಯ ನುಡಿಗಳಿಗೆ ಅಭಿನಂದನೆಗಳು, ತಮ್ಮಂತಹ ಹಿರಿಯ ಮಾರ್ಗದರ್ಶಕರು, ಹಿತ ಚಿಂತಕರು, ನಿಜವಾದ ರಾಜಕಾರಣದ ಕಲ್ಪನೆಯನ್ನು ಅರಿತಿರುವವರು, ನಮ್ಮ ಸಾಮಾಜಿಕ ವ್ಯವಸ್ಥೆಯ ಪ್ರಸ್ತುತ ವಿದ್ಯಮಾನಗಳ ಬಗ್ಗೆ ನೇರವಾಗಿ ಚರ್ಚಿಸುವ ತಮ್ಮಂತಹವರು ನಮ್ಮ ಸಮಾಜದಲ್ಲಿರುವುದು ನಮ್ಮ ಸಮಾಜದ ಭಾಗ್ಯವೇ ಸರಿ.
ನೀವು ನಮ್ಮ ಜನಪ್ರಿಯ ಸರ್ಕಾರವನ್ನು ದನಗಳ ಜಾತ್ರೆಯೆಂದು ನಮ್ಮ ಅತ್ಯಮೂಲ್ಯ ಶಾಸಕರನ್ನು ದನಗಳೆಂದು ವರ್ಣಿಸಿದ್ದೀರಿ, ನಾವು ಇಂತಹ ಸರ್ಕಾರ ಹಾಗೂ ಶಾಸಕರನ್ನು ಆರಿಸಿದ ಪುಣ್ಯಕಾರ್ಯಕ್ಕೆ ನಮ್ಮಂತಹ ಮತಬಾಂಧವರಿಗೆ ಶ್ಲಾಘನೆಯನ್ನು ಸಹ ಪರೋಕ್ಷವಾಗಿ ಮಾಡಿದ್ದೀರಿ. ನಮ್ಮ ಪ್ರಸ್ತುತ ಸರ್ಕಾರದ ಸಕಲರಿಗೆ, ಸಮಾಜಿಕ ಕಳಕಳಿ, ಸಂವಿಧಾನಾತ್ಮಕ ನಡವಳಿಕೆ, ಜವಾಬ್ದಾರಿಯ ಅರಿವು, ನಿಷ್ಪಕ್ಷವಾದ ಆಡಳಿತ, ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನ, ಶಾಸಕತ್ವದ ಘನತೆಯನ್ನು ಕಿಂಚಿತ್ತು ಅರಿಯದೆ, ಸ್ವಾರ್ಥ, ಸ್ವಜನ ಪಕ್ಷಪಾತಕ್ಕಾಗಿ ಶ್ರಮಿಸುತ್ತಿರುವುದು ದುಖಃಕರ ಸಂಗತಿ.
ತಾವು ಕರ್ನಾಟಕದ ಪ್ರಸಕ್ತ ರಾಜಕಾರಣದಲ್ಲಿ ಸಾಂವಿಧಾನಿಕ ಮೌಲ್ಯಗಳು ಮತ್ತು ಮೌಲ್ಯಾಧಾರಿತ ರಾಜಕಾರಣ ಶಾಶ್ವತ ಮರಣ ಹೊಂದುವುದು ಮಾತ್ರ ಶತಃಸಿದ್ಧ ಎಂದು ವಿವರಿಸಿದ್ದೀರಿ, ಆದರೆ ಇವುಗಳು ಈಗಾಗಲೆ ಸತ್ತುಹೋಗಿವೆ ಇದು ನನ್ನ ಅನಿಸಿಕೆ. ಹಿಡಿತವಿಲ್ಲದ ಸರ್ಕಾರ, ಜವಾಬ್ದಾರಿಯಿಲ್ಲದ ಮುಖ್ಯಮಂತ್ರಿ, ಅದಕ್ಕೆ ಪೂರಕವಾದ ಸಚಿವ ಸಂಪುಟ, ಕಾಲೆಳೆಯಲೆಂದೇ ಇರುವ ವಿರೋಧಪಕ್ಷಗಳು ಇವರ ನಾಯಕರಾಗಿ ರಾಜ್ಯಪಾಲರು, ಕರ್ನಾಟಕದ ಭವಿಷ್ಯ ಎತ್ತಲೆತ್ತಲೋ….
ಯಾರನ್ನು ದೋಷಿಸುವುದು, ಪಕ್ಷ, ಮೌಲ್ಯ, ಸಿದ್ಧಾಂತ, ನಿಷ್ಠೆ, ಸಂವಿಧಾನ, ಪ್ರಾಮಾಣಿಕತೆ ಇವುಗಳ ಕನಿಷ್ಟ ಅರಿವು ಇಲ್ಲದ ನಮ್ಮ ರಾಜಕಾರಣಿಗಳು, ಇಂತಹವರನ್ನು ತಾವುಗಳು ದನಗಳೆಂದು ಪರಿಗಣಿಸಿದ್ದೀರಿ.
ದನಗಳು ಕಾಯಕ, ನಿಷ್ಠೆಗೆಂದೆ ಮುಡಿಪಾದ ಜೀವಗಳು.
ತಾವುಗಳು ನಮ್ಮ ಘನ ಸರ್ಕಾರ ಹಾಗೂ ಅದರ ಸಿಬ್ಬಂದಿವರ್ಗ ಹಾಗೂ ಶಾಸಕರನ್ನು, ಮತ್ತು ಸಕಲರನ್ನು ದನಗಳೆಂದು, ವಿಧಾನಸಭೆಯನ್ನು ದನಗಳ ಜಾತ್ರೆಯೆಂದು ದಯವಿಟ್ಟು ಪರಿಗಣಿಸದಿರಿ,
ದನಗಳೆಂಬ ಕಾಯಕ ಜೀವಿಗಳಿಗೆ ಅಪಮಾನವಾದೀತು.
ಇಲ್ಲಿ ನಾನು ರಾಜಕಾರಣಿಗಳನ್ನು ದನಗಳಿಗೆ ಹೋಲಿಸುತ್ತಿಲ್ಲ. ಪಾಪ ಅವು ಎಷ್ಟು ನೊಂದುಕೊಳ್ಳಬಹುದು ಎಂಬ ಆಲೋಚನೆ ನನಗೂ ಇದೆ. ಆದರೆ ಬಂಡವಾಳ ಕೇಂದ್ರಿತ ರಾಜಕಾರಣ ನಮ್ಮ ಆಳ್ವಿಕರನ್ನು ಜಾತ್ರೆಯಲ್ಲಿ ಬಿಕರಿಯಾಗುವ ದನಗಳಂತೆ ಪರಿಗಣಿಸುತ್ತಿದೆ ಎಂಬ ಸೀಮಿತ ಅರ್ಥದಲ್ಲಿ ಮಾತ್ರ ಹೋಲಿಸಿದ್ದೇನೆ. ಕುದುರೆ ವ್ಯಾಪಾರ ಈಗ ಹಳೆಯ ವಿದ್ಯಮಾನ. ದನಗಳಂತೆಯೇ ಸ್ವಾಮಿನಿಷ್ಠೆ ತೋರುವ ಪರಂಪರೆಗೆ ಸ್ಪೀಕರ್ ಬೋಪಯ್ಯನವರೇ ನಾಂದಿ ಹಾಡಿದ್ದಾರೆ. ಪವಿತ್ರ ಕಾಯಕ ಜೀವಿ ದನಗಳೆಲ್ಲಿ ಕಾಯಕವೇ ಇಲ್ಲದೆ ಕೈಲಾಸ ಸೃಷ್ಟಿಸಿ ಜನತೆಗೆ ಲಾಸ್ ಮಾಡುವ ಈ ಜೀವಿಗಳೆಲ್ಲಿ.
ನಾ ದಿವಾಕರ