ದಿಲಾವರ್ ರಾಮದುರ್ಗ ನೋಡಿದ ‘ಲೀಕೌಟ್’

ದಿಲಾವರ್ ರಾಮದುರ್ಗ

**

ಹೆಸರಾಂತ ಕಲಾವಿದೆ ಅಕ್ಷತಾ ಪಾಂಡವಪುರ ಅವರ ವಿಭಿನ್ನ ಪ್ರಯೋಗ ‘ಲೀಕೌಟ್’.

ದಿಲಾವರ್ ರಾಮದುರ್ಗ ಅವರು ಇದರ ಕುರಿತು ಬರೆದ ಬರಹ ಇಲ್ಲಿದೆ.

**

ಮನುಷ್ಯ ಸೂಕ್ಷ್ಮಗಳನ್ನು ಸೂಕ್ಷ್ಮ ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಸಾಂಕೇತಿಕವಾಗಿ ದರ್ಶನ ಮಾಡಿಸುವ ‘ಲೀಕೌಟ್’

ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಗಳ ಬಗ್ಗೆ ಆಸಕ್ತಿಕರವಾದ ಸಣ್ಣ ಕಥನಗಳಿರುತ್ತವೆ. ಮನುಷ್ಯನಾಗಲು ಅಗಾಧ ವ್ಯಕ್ತಿತ್ವವನ್ನೇ ಹೊಂದಬೇಕೆಂದೇನಿಲ್ಲ. ನಡೆ, ನುಡಿ ಮತ್ತು ಒಟ್ಟು ಬದುಕಿನಲ್ಲಿ ಸರಳತೆ, ಸಹಜತೆ ಮೂಲಕ ಬಹುವಾಗಿ ಕಾಡಬಲ್ಲ ಸೂಕ್ಷ್ಮ ಸಂವೇದನೆಗಳನ್ನು ಸೂಸುವ ವ್ಯಕ್ತಿಗಳಿರುತ್ತಾರೆ. ನಮ್ಮ ಸ್ನೇಹಬಳಗದಲ್ಲಿ, ಕುಟುಂಬದಲ್ಲಿ ಮತ್ತು ನಮ್ಮದೇ ವೈಯಕ್ತಿಕ ಬದುಕಿನಲ್ಲಿ ಅಂಥವರಿರುತ್ತಾರೆ. ನಮಗೆಷ್ಷು ಅವರೊಂದಿಗಿನ ಅನುಸಂಧಾನ ಸಾಧ್ಯವಾಗಿದೆ ಅನ್ನೋದು ಮುಖ್ಯ. ಇದು ಆತ್ಮಾವಲೋಕನಕ್ಕೆ ಸಂಬಂಧಿಸಿದ ಬಾಬತ್ತು. ಇಂಥ ಆತ್ಮಾವಲೋಕನಕ್ಕೆ ಪ್ರೇರೇಪಿಸುವಂತಿದೆ ‘ಲೀಕೌಟ್’ ಎನ್ನುವ ಒಂದು ರಂಗಪ್ರಸ್ತುತಿ.

ಇತ್ತೀಚೆಗೆ ನಯನ ಸಭಾಂಗಣದಲ್ಲಿ ಸಿನಿಮಾ ಮತ್ತು ರಂಗಭೂಮಿಯ ಹೆಸರಾಂತ ಕಲಾವಿದೆ ಅಕ್ಷತಾ ಪಾಂಡವಪುರ ತಮ್ಮ ‘ಲೀಕೌಟ್’ ಎನ್ನುವ ವಿಭಿನ್ನ ರಂಗಪ್ರಸ್ತುತಿಯನ್ನು ಪ್ರೇಕ್ಷಕರ ನಡುವೆ ಇಟ್ಟರು. ಇದು ಅತ್ಯಂತ ದಿಟ್ಟತನದ ರಂಗಪ್ರಸ್ತುತಿ. ಅಕ್ಷತಾ ಸಾಹಸಕ್ಕೆ ಮೊದಲ ಸಲಾಂ. ಇದು ಏಕವ್ಯಕ್ತಿ ಪ್ರಯೋಗವಾದ್ದರಿಂದ ಮಾತುಗಳಲ್ಲಿ ಕಥನ ಕಟ್ಟಿಕೊಡಬೇಕಾದ ಅನಿವಾರ್ಯತೆ ಇತ್ತು. ಹಾಗಂತ ಇದು ಏಕಪಾತ್ರಾಭಿನಯದಂತೆ ಅನಿಸುವುದೇ ಇಲ್ಲ. ಈ ಪ್ರಯೋಗದ ವಿಶೇಷವೆಂದರೆ ಆಟದ ಪ್ರತಿ ಹಂತದಲ್ಲಿ ಪ್ರೇಕ್ಷಾಗೃಹದಲ್ಲಿ ನೆರೆದ ಯಾರೂ ಕೂಡ ಒಂದು ಪಾತ್ರವಾಗಿ ಸೇರಿಕೊಳ್ಳಬಹುದು. ಅನಿರೀಕ್ಷಿತವಾಗಿ ಕೂಡ. ಒಂದು ವಿಭಿನ್ನ ಪರಿಸ್ಥಿತಿಯಲ್ಲಿ ಹೆಣ್ಣಿನ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಮಂಜುಳಾ ಎನ್ನುವ ‘ಲೀಕೌಟ್’ ನ ಪಾತ್ರ ನಮ್ಮನ್ನು ಕ್ಷಣಕಾಲ ಆವರಿಸಿಕೊಳ್ಳುತ್ತದೆ.

ಅಕ್ಷತಾ ಇದನ್ನು ನಮ್ಮ ಕಲ್ಪನಾಲೋಕದಲ್ಲಿ ಬೆಳೆಸುತ್ತಾ ಹೋಗುತ್ತಾರೆ. ಸುಂದರಿ ಮಂಜುಳಾ ಪಾತ್ರದ ಬದುಕು ಸರಳ. ಅಡುಗೆಕಲೆಯಲ್ಲಿ ನುರಿತ ಮಂಜುಳಾ ಹಾಕುವ ಒಗ್ಗರಣೆಗೆ ಪಕ್ಕದ ಮನೆಯ ಕಿಟಕಿಗಳೆಲ್ಲ ತೆರೆದುಕೊಳ್ಳುತ್ತವೆ. ಅಡುಗೆ ಕಲೆಗೆ ಮೆಚ್ಚುಗೆ ವ್ಯಕ್ತಪಡಿಸುವ, ಅವಳ ಆಕರ್ಷಣೆಗೊಳಗಾಗುವ, ಅಸಹಾಯಕತೆ ಬಳಸಿಕೊಳ್ಳುವ ಪೂರಕ ಪಾತ್ರಗಳು ಪ್ರೇಕ್ಷಕರ ಭಾವಕೋಶವನ್ನು ಆವರಿಸಿಕೊಳ್ಳಲು ಹೆಚ್ಚು ಸಮಯ ಹಿಡಿಯುವುದಿಲ್ಲ. ಅದೇ ಸಮಯದಲ್ಲಿ ಪ್ರೇಕ್ಷಕರ ನಡುವಿನಿಂದ ಸೇರಿಕೊಳ್ಳುವ ಅತಿಥಿ ಪಾತ್ರಗಳು ಮಂಜುಳಾ ಪಾತ್ರದ ನೋವು, ನಲಿವು ಮತ್ತು ವಿಧವೆ ಆಗುವ ಅವಳ ಶೋಚನೀಯ ಸ್ಥಿತಿಗೂ ಸಾಕ್ಷಿಯಾಗುತ್ತಾರೆ. ಸುಂದರಿ ಮಂಜುಳಾ ವಿಧವೆ ಆಗಿ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಅವಳೊಂದಿಗೆ ನಡೆದುಕೊಳ್ಳುವ ಅವಳನ್ನು ಮೆಚ್ಚುವ ಮತ್ತು ಇಷ್ಟಪಡುವಂತಿರುವ ಡಾಕ್ಟರ್ ಪಾತ್ರ ಗಂಡಸರ ಮನೋಕಾಮನೆ ಮತ್ತು ಸಹಜದ ಸ್ಪಂದನೆಗೆ ಹಿಡಿದ ಕನ್ನಡಿಯಂತೆ ಇದೆ.

ಪುರುಷನ ಅಂತರಂಗದಲ್ಲಿ ಹೆಣ್ಣು ಒಂದು ಬರಿಯ ವಾಸನೆಯೊ, ಸಹಜೀವಿಯೊ, ಸಮಾನಳೊ, ಸೇವಕಳೊ ಎನ್ನುವ ತಕ್ಷಣಕ್ಕೆ ಏಳುವ ಪ್ರಶ್ನೆಗಳನ್ನು ಒಂದೊಂದಾಗಿ ಕೆಣಕುವ ಅಕ್ಷತಾ, ಮೂಡುವ ಆ ಕ್ಷಣದ ಭಾವನೆ, ದ್ವಂದ್ವ, ವ್ಯಭಿಚಾರಿ ಮನಸ್ಥಿತಿ, ದೈಹಿಕ ವಾಂಛೆಯ ಆಚೆಗೂ ಇರಬಹುದಾದ ಮಾನವೀಯ ತುಡಿತ, ಸ್ಪಂದನೆ ಪ್ರೇಕ್ಷಕರ ನಡುವಿನಿಂದಲೇ ಪ್ರಕಟಗೊಳ್ಳುವಂತೆ ಮಾಡುತ್ತಾರೆ. ಹೆಣ್ಣು ತಾಯಿಯಾಗಿ, ಮಗಳಾಗಿ, ಹೆಂಡತಿಯಾಗಿ, ವಿಧವೆಯಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆಲ್ಲ ಸಾಮಾಜಿಕ ಕಟ್ಟುಪಾಡುಗಳಿವೆ. ಬಂಧನಗಳಿವೆ. ಕೆಲವು ಅನಗತ್ಯ ಹೇರಿಕೆಗಳು, ನಿರೀಕ್ಷೆಗಳು ಹೆಣ್ಣಿನ ಒಟ್ಟು ವ್ಯಕ್ತಿತ್ವವನ್ನು ಸೀಮಿತಗೊಳಿಸಿವೆ. ಇದರಿಂದ ಹೊರಬಂದು ತನ್ನದೇ ಉಸಿರಾಟ ಅನುಭವಿಸುವ ತುಡಿತ ಹೆಣ್ಣಿನದು.

ಸಮಾಜ ಅದಕ್ಕೆ ಸುಲಭದ ಅವಕಾಶ ಕೊಟ್ಟಿದೆಯೇ, ಈಗಲೂ ಇದೇ ಪರಿಸ್ಥಿತಿ ಮುಂದುವರಿದಿದೆಯೇ? ಎನ್ನುವ ಹಲವು ಸೂಕ್ಷ್ಮ ಪ್ರಶ್ನೆಗಳನ್ನು ಸಮಾಜ ಮತ್ತು ಪ್ರೇಕ್ಷಕರ ಅಂತರಂಗಕ್ಕೆ ‘ಲೀಕೌಟ್’ ಬಾಣಗಳಂತೆ ಎಸೆಯುತ್ತದೆ. ಇಳಿವಯಸ್ಸಿನ ಶಾರದಮ್ಮನ ಪಾತ್ರವೂ ಅಷ್ಟೇ. ಆಕೆ ತನ್ನ ಬದುಕಿನ ಕೊನೆಯ ಕ್ಷಣಗಳಲ್ಲಿದ್ದಾಳೆ. ಮೂರೋ, ನಾಲ್ಕನೆಯ ಅಂತಸ್ತಿನ ಒಂದು ಕೋಣೆಯಲ್ಲಿ ಹಾಸಿಗೆ ಮೇಲೆ ಮಲಗೋದು ಮತ್ತು ಕುರ್ಚಿ ಮೇಲೆ ಕೂತು ಒಂದು ಸಣ್ಣ ಕಿಟಕಿಯ ಮೂಲಕ ಹೊರಜಗತ್ತನ್ನು ಕಾಣಲು ಪ್ರಯತ್ನಿಸುವುದು. ಗತಕಾಲದ ನೆನಪುಗಳಲ್ಲಿ ಕಳೆದು ಹೋಗುವುದು ಅಷ್ಟೇ ಅವಳ ಬದುಕು. ಅವಳಿಗೊಬ್ಬ ಮಗಳಿದ್ದಾಳೆ. ಪಿಎಚ್‌ಡಿ ಮಾಡುತ್ತಿರುವ ಸಂಶೋಧಕಿ. ಶಾರದಮ್ಮನ ಕೊನೆಯ ಆಸೆಗಳು ಇಂಟರೆಸ್ಟಿಂಗ್. ತನ್ನ ಕಾಲದ ರೋಮ್ಯಾಂಟಿಕ್ ಹಾಡು ಕೇಳುವಾಸೆ, ಗಂಜಿಯಿಂದ ಸಪ್ಪೆಯಾದ ನಾಲಗೆಗೆ ಹೊಸ ರುಚಿ ಸವಿಯುವಾಸೆ, ತನ್ನ ಒಡವೆ ಪೆಟ್ಟಿಗೆಯಲ್ಲಿ ಬಿದ್ದಿರುವ ಒಡವೆಗಳನ್ನು ಕಣ್ತುಂಬಿಕೊಳ್ಳುವ ಆಸೆ. ಏನೇನೋ ಹುಡುಕಾಟದಲ್ಲಿರುವ ಮಗಳಿಗೆ ಅಮ್ಮನ ಈ ಅಂತರಂಗ ಅರಿಯಲು ಪುರುಸೊತ್ತೇ ಇರುವುದಿಲ್ಲ. ಹೊಸ ಪೀಳಿಗೆ ಎಂಥದೋ ಕನಸಿನ ಮರೀಚಿಕೆಯ ಬೆನ್ನು ಹತ್ತಿದೆ.

ಅಮ್ಮನ ಕೊನೆಯ ಆಸೆಗಳ ಹಿಂದಿನ ಜೀವಪ್ರೀತಿ ಅವರಿಗೆ ಅರ್ಥವಾಗುವುದಿಲ್ಲ. ಇಲ್ಲಿ ಒಂದು ಸಣ್ಣ ಟ್ವಿಸ್ಟ್. ಒಡವೆ ಪೆಟ್ಟಿಗೆ ತೆರೆದು ನೋಡುವ ಶಾರದಮ್ಮನಿಗೆ ಕೆಲವು ಒಡವೆಗಳು ಗಾಯಬ್ ಆಗಿದ್ದು ತುಂಬ ಬೇಸರ ಮೂಡಿಸುತ್ತದೆ. ಅವಳ ಆಸ್ಪತ್ರೆ ಖರ್ಚಿಗೆಂದು ಗಂಡ ಪುರುಷೋತ್ತಮ ಒಡವೆಗಳನ್ನು ಮಾರಿದ ವಿಷಯ ತಿಳಿದು ಆಕ್ರೋಶಗೊಳ್ಳುತ್ತಾಳೆ. ತನ್ನ ಅಜ್ಜಿಯ ಒಡವೆಗಳನ್ನು ಅಪ್ಪ ಮದುವೆ ಸಂದರ್ಭದಲ್ಲಿ ಕೈಗಿತ್ತ ನೆನಪುಗಳು ಉಮ್ಮಳಿಸಿಬರುತ್ತವೆ. ಒಂದು ಕರಿಮಣಿ ಬಿಟ್ಟು ಗುಂಜಿ ಬಂಗಾರ ನೀಡದ, ತನಗೊಂದು ಖಾಸಗಿ ಸಂಭ್ರಮವನ್ನು ನೀಡದ, ತನ್ನದೇ ಅಹಮಿಕೆ, ತುತ್ತೂರಿಯಲ್ಲಿ ಮುಳುಗಿಹೋದ ಗಂಡ ಪುರುಷೋತ್ತಮನ ಶಪಿಸುವ ಶಾರದಮ್ಮ, ನಿನ್ನ ಅಪ್ಪ ‘ಪುರುಷೋತ್ತಮ’! ಅವನಂಥವರಿಗೆ ಸುಮ್ಮನೇ ಕೊರಳೊಡ್ಡದೆ ನಿನಗಿಷ್ಟದವನನ್ನ ವರಿಸು, ಹಾಯಾಗಿರು, ಸ್ವಾಭಿಮಾನಿಯಾಗಿ ಬದುಕು ಕಟ್ಟಿಕೋ ಎಂದೆಲ್ಲ ಹೇಳುವ ಮೂಲಕ ಸಮಕಾಲೀನ ಬದುಕಿನ ಹೆಣ್ಣುಗಳಿಗೆ ಸ್ವಾಭಿಮಾನದ, ದಿಟ್ಟ ನಡೆ ರೂಪಿಸಿಕೊಳ್ಳುವ ಮಾತು ಮತ್ತು ಮನೋಧರ್ಮ ದಾಟಿಸುವ ‘ಲೀಕೌಟ್’ ಪ್ರಯತ್ನ ನಿಜಕ್ಕೂ ದಿಟ್ಟತನದ್ದು.

‘ಲೀಕೌಟ್’ ಪಾತ್ರಗಳಿಗಿಂತ ನೆರದ ಪ್ರೇಕ್ಷಕರ ನಿಜ ಬದುಕು ಭಿನ್ನವೇನಲ್ಲ ಅನಿಸುವಂತೆ ಪ್ರಯೋಗದ ನಿರೂಪಣೆ ಇದೆ. ಇಲ್ಲಿ ಪ್ರೇಕ್ಷಕರು ಕೂಡ ಅನಾವರಣಗೊಳ್ಳುತ್ತಾರೆ. ಅಂಥ ಭಾವ ತೀವ್ರತೆಗೆ ಒಳಪಡಿಸುವ ಕಲೆಗಾರಿಕೆಯನ್ನು ಅಕ್ಷತಾ ಕಂಡುಕೊಂಡಿದ್ದಾರೆ. ಸಾಮಾನ್ಯವಾಗಿ ಪ್ರೇಕ್ಷಕ ಆಮಂತ್ರಿತ ಅತಿಥಿ ಅಥವಾ ಅನಾಮಿಕ. ಮೌನದಲ್ಲಿ ಕಥಾವಸ್ತು ಇಲ್ಲವೇ ಘಟಿಸುವ ದೃಶ್ಯಗಳ ಜೊತೆ ಅನುಸಂಧಾನ ಕ್ರಿಯೆಯಲ್ಲಿ ತೊಡಗಿರುವಂಥವ. ಆದರೆ, ಇಲ್ಲಿ ಅವನು ಅನಿರೀಕ್ಷಿತವಾಗಿ ರಂಗಕ್ರಿಯೆಯ ತೆಕ್ಕೆಗೆ ಬಂದುಬಿಡಬಹುದು. ಒಂದು ಪಾತ್ರವಾಗಬಹುದು. ತನ್ನದೇ ಭಾವನೆಯನ್ನು ನಾಟಕದ ವಸ್ತುವಿಗೆ ಅಂತಃಸಂಬಂಧಿ ಆಗಿಸಿಕೊಳ್ಳಬಹುದು. ನೈಜ ಭಾವನೆ ಆಥವಾ ಸ್ಪಂದನೆ ಪ್ರಕಟಿಸಬಹುದು. ಕಥೆಗೆ ತಿರುವನ್ನು ನೀಡಬಹುದು ಇಲ್ಲವೇ ಅದನ್ನು ವಿಸ್ತರಿಸಬಹುದು. ಹೀಗೆ ಥಿಯೇಟ್ರಿಕಲ್ ಅನುಭವವನ್ನು ಪ್ರೇಕ್ಷಕನ ನೇರ ಅಂತರಂಗಕ್ಕೆ ತಲುಪಿಸುವ ಮತ್ತು ಆಮೂಲಕ ಇಡೀ ಸಮಾಜವನ್ನು ಕೆಣಕುವ ಅಕ್ಷತಾ ಪಾಂಡವಪುರ ಅವರ ಪ್ರಯತ್ನ ದಿಟ್ಟತನದಿಂದ ಕೂಡಿದೆ. ಅರ್ಥಪೂರ್ಣವಾಗಿದೆ. ಮನುಷ್ಯ ಸೂಕ್ಷ್ಮಗಳನ್ನು ಸೂಕ್ಷ್ಮ ಬ್ರಹ್ಮಾಂಡ (microcosm) ಪರಿಕಲ್ಪನೆಯಲ್ಲಿ ಸಾಂಕೇತಿಕವಾಗಿ ದರ್ಶನ ಮಾಡಿಸುತ್ತಿರುವ ‘ಲೀಕೌಟ್’ ಒಂದು ಅಭಿಯಾನದಂತೆ ನಾಡಿನ ತುಂಬ ಸಂಚರಿಸುತ್ತಿದೆ. ‘ಲೀಕೌಟ್’ ಈಗಾಗಲೇ 90 ಪ್ರದರ್ಶನಗಳನ್ನು ಕಂಡಿದೆ. ವೆಲ್ ಡನ್ ಅಕ್ಷತಾ.

‍ಲೇಖಕರು Admin MM

March 27, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: