ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿಗ್ಭ್ರಮೆಗೊಂಡ ಮಳೆ ದೇವತೆ..

-ನಂದಿನಿ ಹೆದ್ದುರ್ಗ

ಮೂರ್ಛೆ ತಿಳಿದೆದ್ದ ಮೂರ್ಖ
ಪೂರ್ವಜನ್ಮದ
ನೆನಪಿರುವವನಂತೆ ರಾಗ ಮಲ್ಹಾರದಲ್ಲಿ
ಒಂದೇ ‌ಸಮನೇ ಹಾಡುತ್ತಿದ್ದಾನೆ

ದಿಗ್ಭ್ರಮೆಗೊಂಡ ಮಳೆ ದೇವತೆ
ಮಳೆ ಕಟ್ಟದ ಮುಗಿಲಿನಿಂದಾಚೆ
ಒಮ್ಮೆ ‌ಇಣುಕಿ ಮುಗುಳುನಕ್ಕು
ಮತ್ತೆ ಮಲಗಿದಳು
ಅವಳಿಗೆ ‌ಹಗಲು ನಿದ್ದೆ

ಸಿದ್ಧಾಂತಗಳ ಒದ್ದೋಡಿಸು
ಗೆದ್ದ ಎದೆ ಬೇಕೆಂದರೆ ಒಮ್ಮೆ ಸೋಲು
ಕತ್ತಲು ಹೊದಿಯುವ ಮುನ್ನ
ಕದನ ವಿರಾಮ ನೀಡು

ಎಂದೆಲ್ಲಾ ಬರೆದಿಟ್ಟಿದ್ದೆ ನಿನ್ನೆ
ಇಂದ್ಯಾಕೊ ಎಲ್ಲ ಒಂದರ ಹಿಂದಿನ ಸೊನ್ನೆ
ಎಷ್ಟು ಸಲೀಸು ನಿನಗೆ
ಒಂದು ಸಂದೇಶ ಗೀಚಿ ಎಸೆದು
ಒಂದೇ ಸೆಕೆಂಡಿಗೆ ಇನ್ನೊಂದು ಕರೆಯಲ್ಲಿ
ನಿರತನಾಗುವುದು

ಊರ ಹುಚ್ಚ ಊರಿಗೆ
ಬರುವ ಬಸ್ಸಿಗಾಗಿ
ಕಾಯುತ್ತಿದ್ದಾನೆ
ಎಲ್ಲಿಗೂ ಹೋಗುವುದಿರುವುದಿಲ್ಲ
ಅವನಿಗೆ ,ಆಹಾ..ಎಷ್ಟೊಂದು ಸುಖಿ!!
ಶೂನ್ಯಕ್ಕಿಂತ ಪರಿಪೂರ್ಣವಾದುದು
ಮತ್ತೊಂದಿಲ್ಲ ಈ ಲೋಕದಲ್ಲಿ

ಕೆನ್ನೆ ದಾಟುವ ಉಪ್ಪು ಹನಿಗಳನ್ನು
ಕಾರಣ ಕೇಳಬೇಕೆನ್ನಿಸುತ್ತದೆ
ಯಾರಿಗಾಗಿ ದುಃಖಿಸುತ್ತವೆ ಅವು
ಕೈ ತೊಳೆದುಕೊಳ್ಳುವುದಕ್ಕೆ
ಉಪಮೆಯಾದವರಿಗೊ?
ಮೈ ಮುಳ್ಳೇಳಿಸುತ್ತಿರುವ
ಕಾಲುಂಗುರದ ಕಿರಿಕಿರಿಗೊ?

ಅವನ ಸುದೀರ್ಘ ಕರೆ ಇನ್ನೂ
ಮುಗಿದಿಲ್ಲವಿರಬಹುದು
ಸುಖವಾಗಿರಲಿ ಕೆಲಕಾಲ
ಆ ಹುಡುಗಿಯೂ

‍ಲೇಖಕರು Admin

24 January, 2026

1 Comment

  1. Chandar KrishnaMurthy

    Very interesting poem! Congratulations

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading