ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದಾಂಪತ್ಯದನುಸಂಧಾನ…’

– ಡಾ ಆನಂದ್ ಋಗ್ವೇದಿ

ಹಳೆಯ ಕನ್ನಡ ಚಲನಚಿತ್ರದ ಮಧುರ ಹಾಡು ‘ಮೆಲ್ಲುಸಿರೇ ಸವಿಗಾನ. . ಎದೆ ಝಲ್ಲನೇ ಹೂವಿನ ಬಾಣ’ ಇದರ ಕೊನೆಯ ಚರಣ ಹೀಗಿದೆ;
‘ಈ ದೇಹ ರಸಮಯ ಸದನ
ಈ ನೇಹ ಮಧು ಸಂಗ್ರಹಣ
ಚಿರನೂತನ, ರೋಮಾಂಚನ
ದಾಂಪತ್ಯದನುಸಂಧಾನ’
ನಿಜ, ದಾಂಪತ್ಯವೆಂಬುದು ಒಂದು ಅನುಸಂಧಾನ. ಅದೊಂದು ಕರಾರು ಮಾತ್ರವಲ್ಲ, ಒಪ್ಪಂದವಷ್ಟೇ ಅಲ್ಲ. . ಅದೊಂದು ಸಂಧಾನ, ಭಾವ ಸಮ್ಮಿಲನ. ಹಾಗೆ ಚಿರನೂತನ, ರೋಮಾಂಚನ ಎಂದೆಲ್ಲಾ ಪರಿಭಾವಿಸಿದ್ದ ‘ದಾಂಪತ್ಯ’ ಈಗಲೂ ಹಾಗೆಯೇ ಇದೆಯೇ!?
ವಿವಾಹ ಎನ್ನುವ ಒಟ್ಟು ಚೌಕಟ್ಟನ್ನೇ ಪ್ರಶ್ನಿಸುತ್ತಿರುವ ಈ ಸಂದರ್ಭದಲ್ಲಿ ದಾಂಪತ್ಯವೆಂಬುದೊಂದು ಅರ್ಥವೇ ಆಗದ ಗೊಂದಲಮಯ ಪರಿಕಲ್ಪನೆ! ಭಿನ್ನ ಲಿಂಗಿಗಳು ಜೊತೆಯಾಗಿ ಮುಕ್ತವಾಗಿ ಬದುಕುವ ‘ಸಹ ಜೀವನ (ಲಿವಿಂಗ್ ಟುಗೆದರ್)’ ಪರಿಕಲ್ಪನೆಯ ಈ ದಿನಮಾನಗಳಲ್ಲಿ ಕಾಮವೆಂಬುದು ಕೇವಲ ಲೈಂಗಿಕತೆಯ ನೆಲೆಯಲ್ಲಿ ಮಾತ್ರ ಅರ್ಥ ಪಡೆದುಕೊಂಡಿದೆ! ಹಾಗೆಂದರೆ, ವಿವಾಹಕ್ಕೆ ಕಾಮ ಅವಶ್ಯಕವಲ್ಲವೇ ಎಂಬುದೂ ಈಗಿನ ಆಧುನಿಕ ಕಾಲದ ಪ್ರಶ್ನೆ. ‘ಕಾಮ’ ಎಂಬುದಕ್ಕೆ ಬಯಕೆ, ಆಸೆ, ಕಾಮನೆ, ಆಕಾಂಕ್ಷೆ, ಎಂದೆಲ್ಲಾ ಅರ್ಥ ಸ್ಪುರಿಸುತ್ತಿದ್ದ ಕಾಲದಿಂದ, ಕಾಮ ಎಂದರೆ ಅದು ಲೈಂಗಿಕ ಅಭೀಪ್ಸೆ ಮಾತ್ರ ಎಂದು ಅಥರ್ೈಸುವ ಕಾಲಘಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಈ ಪಲ್ಲಟ ಕೇವಲ ಪದ ಮತ್ತು ಅರ್ಥಗಳ ಪಲ್ಲಟವಲ್ಲ, ಬದಲಿಗೆ ಒಟ್ಟಾರೆ ಮೌಲ್ಯ ಮತ್ತು ಪರಿಕಲ್ಪನೆಗಳ ಮೂಲಧಾತುವೇ ಪಡೆದಿರುವ ಪಲ್ಲಟ!

ಈ ಪಲ್ಲಟ ಕಾಲಕಾಲಕ್ಕೆ ಸಹಜವಾಗಿ ಘಟಿಸುವಂತಹದು. ಮುಕ್ತ ಸಂಬಂಧಗಳ ಸ್ವಚ್ಛಂದತೆಯಲ್ಲಿ ಭವಿತವ್ಯದ ಬಗ್ಗೆ ಬದ್ಧತೆಯ ಕೊರತೆ ಕಂಡು ‘ವಿವಾಹ’ ಎನ್ನುವ ಪರಿಕಲ್ಪನೆ ಜನ್ಮತಳೆದಿರಬಹುದು. ಹಾಗೆಂದಾಗ ಮುಕ್ತಛಂದ ಪಲ್ಲಟಿಸಿಯೆ ವಿವಾಹವೆಂಬ ಬಂಧನ ಸಾಧ್ಯವಾಗಿದ್ದು, ಸಾರ್ವಕಾಲಿಕ ಮಾನ್ಯತೆ ಪಡೆದಿದ್ದು. ಮನುಷ್ಯ ಸಹಜ ಭಾವನೆ, ಸಂವೇದನೆ, ಸಂಮ್ಮೋಹ ಮತ್ತು ಸಂವರ್ಧನೆಗಳ ಪ್ರತೀಕವಾಗಿ ಒಡಮೂಡಿದ ‘ಸಹ ಜೀವನ’ ಪರಿಕಲ್ಪನೆಗೆ ಬೇಕಾಗಿದ್ದ ಬದ್ಧತೆ ಮತ್ತು ಜವಾಬ್ದಾರಿಯನ್ನು ಕೊಡಲೆಂದೇ ಸಹ ಜೀವನ ‘ವಿವಾಹ’ವೆಂಬ ಸಮೀಕರಣವಾಗಿ ಮಾರ್ಪಟ್ಟಿದ್ದು. ಈ ಮಾಪರ್ಾಡು ಸಹ ಜೀವನವನ್ನು ಒಟ್ಟಂದದಲ್ಲಿ ಸಂ-ಬಂಧಗೊಳಿಸುವ ಪ್ರಯತ್ನವೇ. ಈ ಸಂ-ಬಂಧವೇ ಕಾಲಕ್ರಮೇಣ ಬಂಧನವಾಗಿ ಪರಿಣಮಿಸಿದ್ದು ಮತ್ತೊಂದು ಪಲ್ಲಟವೇ ಸರಿ. ಮುಕ್ತ ಛಂದದಿಂದ ಸಹಜೀವನಕ್ಕೆ, ಸಹ ಜೀವನದಿಂದ ಸಂ-ಬಂಧಕ್ಕೆ, ಸಂಬಂಧದಿಂದ ಬಂಧನಕ್ಕೆ ಪಲ್ಲಟಿಸಿದ ಈ ಪರಿಕಲ್ಪನೆ ಮತ್ತೆ ಮುಕ್ತ ಛಂದದೆಡೆಗೆ ತುಯ್ಯತೊಡಗಿದೆ!! ಹಾಗೆಂದೇ ಈಗಿನ ಪ್ರಶ್ನೆ : ‘ದಾಂಪತ್ಯ ನಿಷ್ಠೆ ಈ ಕಾಲದ ಅವಶ್ಯಕತೆಯೇ? ದಾಂಪತ್ಯ ನಿಷ್ಠೆಯೆಂದರೆ ಪರಸ್ಪರ ಲೈಂಗಿಕ ನಿಷ್ಠೆ ಮಾತ್ರವೇ!?’ – ಎಂಬುದು!
ದಾಂಪತ್ಯ ಪದವೇ ನಿಷ್ಠೆಯ ಪರಿಭಾಷೆಯನ್ನೂ ಒಳಗೊಂಡಿದೆ. ಈ ನಿಷ್ಠೆ ಎಂಬುದು ಕೇವಲ ಬದ್ಧತೆಯಲ್ಲ, ಅದು ಜವಾಬ್ದಾರಿ ಕೂಡಾ. ಭಿನ್ನ ಲಿಂಗಿಗಳ ನಡುವೆ ಏರ್ಪಡುವ ಸಂಮ್ಮೋಹದ ಪರಿಣಾಮವನ್ನು ಸಾಮಾಜಿಕವಾಗಿ ನಿರ್ವಹಿಸಲು ಈ ಬದ್ಧತೆ ಅವಶ್ಯಕ ಕೂಡಾ. ಆದಂ ಮತ್ತು ಈವ್ರ ಪರಿಕಲ್ಪಿತ ಕಾಲಘಟ್ಟದಿಂದಲೂ ಮನುಷ್ಯ ಸಹಜವಾದ ಆಕರ್ಶಣೆ ಮತ್ತು ಅರ್ಪಣೆಯನ್ನು ನಿಯಂತ್ರಿಸುವ ಪ್ರಯತ್ನ ನಡೆದೇ ಇದೆ. ಈ ನಿಯಂತ್ರಣಕ್ಕೆ ಕಾರಣ; ಪ್ರಕೃತಿ ಸಹಜವಾದ ಕಾಮವನ್ನು ನಿಯಂತ್ರಿಸುವುದಲ್ಲ, ಬದಲಿಗೆ ಆ ಕಾಮ ಜನ್ಯವಾದ ಪೀಳಿಗೆಗಳನ್ನು ಸಂರಕ್ಷಿಸುವುದು. ಈ ಸಂರಕ್ಷಣೆಯ ಉದ್ದೇಶಕ್ಕಾಗಿಯೇ ಎಲ್ಲಾ ಮಾನವ ಜನಪದಗಳೂ ತಮ್ಮದೇ ಆದ ವಿಧಿ ವಿಧಾನಗಳನ್ನು ರೂಪಿಸಿಕೊಂಡಿವೆ. ಈ ವಿವಾಹವೆಂಬ ತರಹೇವಾರಿ ವಿಧಿ ವಿಧಾನಗಳ ಒಟ್ಟು ಆಶಯವೇ ಈ ಬದ್ಧತೆಯನ್ನು ಒಡಮೂಡಿಸುವುದೇ ಅಲ್ಲವೇ?
‘ಕಾಮವೆಂಬುದು ಕೇವಲ ಸಂತಾನೋತ್ಪತ್ತಿ ಕ್ರಿಯೆ ಎಂದು ಭಾವಿಸಿದ್ದ ಕಾಲದಲ್ಲಿ ವಿಧಿಸಿದ್ದ ಈ ಎಲ್ಲಾ ಕಟ್ಟಳೆಗಳು ಈಗಲೂ ವಿದಿತವೇ!?’ ಎಂಬ ಪ್ರಶ್ನೆ ಈ ಆಧುನಿಕ ಕಾಲಮಾನದ್ದು! ಸಂತಾನ ಸಾಧ್ಯತೆಗಳನ್ನು ನಿಯಂತ್ರಿಸಲು ಹಲವು ವಿಧಾನಗಳು, ತಂತ್ರಗಳೂ. . . ಒಂದೊಮ್ಮೆ ಸಾಧ್ಯವಾದ ಬೇಡವಾದ ಬಸಿರನ್ನು ನಿವಾರಿಸಲು ವೈದ್ಯಕೀಯ ಚತುರೋಪಾಯಗಳೂ ಲಭ್ಯವಿರುವ ಈ ಕಾಲದಲ್ಲಿ ಒಂದು ತೆರನಾದ ನಿರ್ಭಯತೆ ಮತ್ತು ನಿರ್ಲಜ್ಜತೆ ನಿಮರ್ಾಣವಾಗಿದೆ! ಅಲ್ಲದೇ, ಓಶೋ ಆದಿಯಾಗಿ ಬಹಳಷ್ಟು ತಾಂತ್ರಿಕರು ಕಾಮವನ್ನು ಕೇವಲ ಒಂದು ತಂತ್ರ ಎಂದಷ್ಟೇ ಪ್ರತಿಪಾದಿಸಿರುವುದರಿಂದ – ನೈತಿಕ ಮತ್ತು ಅನೈತಿಕ ಪರಿಕಲ್ಪನೆಗಳ ನಡುವಿನ ಗೆರೆ ಬಹುತೇಕ ಅಳಿಸಿಯೇ ಹೋಗಿದೆ! ಮುಕ್ತ ಜೀವನ ಶೈಲಿ, ಮುಕ್ತ ಬೆರೆಯುವಿಕೆಯನ್ನು ಮೌಲ್ಯವಾಗಿ ಸ್ವೀಕರಿಸಿರುವ ಈ ಆಧುನಿಕ ಕಾಲಘಟ್ಟ ತಾಂತ್ರಿಕರ ಪ್ರತಿಪಾದನೆಯನ್ನು ತಮ್ಮ ನಿಲುವಿನ ಸಮರ್ಥನೆಗೆ ಬಳಸುತ್ತಿದೆಯೇ!!?
ಒಂದು ವೇಳೆ ಈ ಅಭಿಮತವನ್ನೇ ಒಪ್ಪಿಕೊಂಡರೆ, ಪುತಪುತನೇ ನಾಯಿಕೊಡೆಗಳಂತೆ ಪ್ರಶ್ನೆಗಳು ಮೈದಾಳುತ್ತವೆ. ಅವೆಂದರೆ; ಸಹ ಜೀವನ ಮತ್ತು ಮುಕ್ತ ಲೈಂಗಿಕತೆಯ ಅಂತಿಮ ನೆಲೆ ಸಂತಾನವನ್ನು ಹೊಂದದೇ ಇರುವುದೇ!? ಒಂದು ವೇಳೆ ಸಂತಾನ ಸಾಧ್ಯವಾದರೆ ಅದರ ಜವಾಬ್ದಾರಿ ಯಾರದ್ದು? ಈಗ ಚಾಲ್ತಿಯಲ್ಲಿರುವ ಎಲ್ಲಾ ರೀತಿಯ ಕೌಟುಂಬಿಕ ನೆಲೆಗಳನ್ನು ಮೀರಿ ಪರಿಭಾವಿಸುವ ಮುಕ್ತ ಸಾಂಗತ್ಯಕ್ಕೆ ಮತ್ತೆ ಕುಟುಂಬವನ್ನು ಪ್ರವೇಶಿಸುವ ಅಥವಾ ನಿಮರ್ಿಸಿಕೊಳ್ಳುವ ಆಸ್ಥೆ ಇದೆಯೇ? ಮಕ್ಕಳಿಗೆ ಸಹಜವಾದ ಬಾಲ್ಯ ಮತ್ತು ಕಿಶೋರವನ್ನು ಒದಗಿಸುವ ಪಕ್ವತೆ ಈ ಸಹಜೀವನಕ್ಕೆ ಇದೆಯೇ? . . . . . ಹೀಗೆ ಪ್ರಶ್ನೆಗಳೇನೋ ನೂರಾರು. ಉತ್ತರ ಮಾತ್ರ ಅಸ್ಪಷ್ಠ!
ಇದಕ್ಕೆ ಪರ್ಯಾಯವಾಗಿ ಮತ್ತೊಂದು ವಾದವೂ ಇದೆ. ಅದೆಂದರೆ; ವಿವಾಹದ ಬದ್ಧತೆಯಲ್ಲಿ ಸಂತಾನವನ್ನು ಪಡೆದು, ಅವುಗಳಿಗೆ ಸೂಕ್ತ ಬಾಲ್ಯ ಮತ್ತು ಕಿಶೋರದ ಪರಿಸರವನ್ನು ಒದಗಿಸುವಲ್ಲಿ ಮಾತ್ರವೇ ವಿವಾಹದ ಸಾರ್ಥಕತೆ ಇದೆಯೇ? ಎಂದೂ ಮನೋನೆಲೆಗಳು ಒಂದಾಗದೇ ಹೋಗುವ, ದೇಹಗಳು ಒಂದಾದರೂ ಲೈಂಗಿಕ ಅಭೀಪ್ಸೆ ಮಾತ್ರ ಅಶಾಂತ ಅಗ್ನಿ ಕುಂಡದಂತೆ ನಿರಂತರ ಧಗಧಗಿಸುವ ಈ ತಪ್ತತೆಯನ್ನು ವಿವಾಹ ಮತ್ತು ದಾಂಪತ್ಯಗಳೆಂಬ ಸ್ಥಾಪಿತ ಮೌಲ್ಯಗಳು ಎಂದಿಗೂ ಪರಿಗಣಿಸದೇ ಜೀವ ಭಾವಗಳನ್ನು ಹೂತು ಹಾಕುವುದಿಲ್ಲವೇ!? ಈ ದಮನಿಕೆ ಮತ್ತು ಧಗಧಗಿಸುವ ತಪ್ತತೆಯ ಕಾರಣದಿಂದಲ್ಲವೇ ಮೌಲ್ಯಗಳು ಸಡಿಲಗೊಂಡು ‘ದಾಂಪತ್ಯ’ ಪರಿಕಲ್ಪನೆಯೇ ಅರ್ಥಹೀನ ಎನ್ನಿಸುವಂತಾಗಿರುವುದು?
ಎರಡೂ ಪಕ್ಷಗಳ ವಾದ ವಿವಾದಗಳನ್ನು ಆಲಿಸಿಯೂ ಯಾವುದೇ ಒಂದು ಪಕ್ಷದ ಪರ ತೀಮರ್ಾನಕ್ಕೆ ಬಂದುಬಿಡುವುದು ಸುಲಭವಲ್ಲ. ಕೇಳುವಾಗ ವಾದಗಳೆಲ್ಲವೂ ಸರಿ ಎನ್ನಿಸಿದರೂ, ಅಂತರಂಗದ ವಿಶ್ಲೇಷಣೆಯಲ್ಲಿ ಒಡಮೂಡುವುದು ಅದೇ ಅಸ್ಪಷ್ಠತೆ, ಗೊಂದಲ! ಈ ಗೊಂದಲ ಎಂಬ ಅಡ್ಡ ಗೋಡೆಯ ಮೇಲಿನ ದೀಪದ ಬೆಳಕಿಗೆ ಬಲಿ ಬಿದ್ದೇ ಪತಂಗಗಳ ಅಮಾಯಕ ಮನಸ್ಸು ಒಂದೋ ಕಟ್ಟಳೆಗಳಲ್ಲಿ ಬಂಧಿಸಿಕೊಳ್ಳುತ್ತಿವೆ, ಇಲ್ಲವೇ ಸ್ವಚ್ಛಂದತೆಯಲ್ಲಿ ಹಾರಾಡಿ ತಮ್ಮ ರೆಕ್ಕೆಗಳನ್ನು ತಾವೇ ಬೆಂಕಿಯಲ್ಲಿ ಸುಟ್ಟುಕೊಳ್ಳುತ್ತಿವೆ!!
ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಮೊದಲು ಉಲ್ಲೇಖಿಸಿದ ಹಾಡಿನ ಸಾಲುಗಳೇ ಮತ್ತೆ ಮತ್ತೆ ಚಿರನೂತನತೆಯಲ್ಲಿ, ಹೊಸ ಅರ್ಥ ಸಾಧ್ಯತೆಗಳಲ್ಲಿ ಕೇಳಿಸುತ್ತಿವೆ! ಆಗೆಲ್ಲಾ ಅನ್ನಿಸುವುದು; ‘ದಾಂಪತ್ಯ ಎಂಬುದು ಪ್ರತಿ ದೀವಳಿಗೆಗೊಮ್ಮೆ ಹಚ್ಚಿಡುವ ಹಣತೆಯಲ್ಲ, ಅದು ಒಳ ಮನೆಯಲ್ಲಿ ನಿತ್ಯ ಉರಿವ ನಂದಾದೀಪ’ವೇಂದೇ!!
 

‍ಲೇಖಕರು G

17 January, 2015

2 Comments

  1. ಅಕ್ಕಿಮಂಗಲ ಮಂಜುನಾಥ

    ಬಹಳ ಒಳ್ಳೆಯ ಲೇಖನ. ಪ್ರಸ್ತುತ ಕಾಲದ ಸಂಬಂಧಗಳ ತಾಕಲಾಟಗಳಿಗೆ ಇಡಿದ ಕನ್ನಡಿ.

  2. ramaswamy d s

    Good You have discussed the right thing in wrong time!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading