ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದರ್ಶನ್‌ ಜಯಣ್ಣ ಸರಣಿ- ಅಪ್ಪ ಹೇಳಿದ ಎರಡು ಪ್ರಸಂಗಗಳು

ದರ್ಶನ್ ಜಯಣ್ಣ 

ಅಪ್ಪ ಹೇಳಿದ ಎರಡು ಪ್ರಸಂಗಗಳು 

( ಪ್ರಸಂಗ ಒಂದು )

ನಡೆದಾಡುವ ದೇವರು ಮತ್ತು ಸಿದ್ದಪ್ಪ ದೇವರು….

ನಮ್ಮೆಲ್ಲರಿಗೆ ನಡೆದಾಡುವ ದೇವರು ಗೊತ್ತು , ಆದರೆ ಈ ಸಿದ್ದಪ್ಪ ದೇವರು ಯಾರು ?
ಇವರು ಸನ್ಯಾಸಿಯಲ್ಲ ಸಂಸಾರಿ, ಇವರಿಗೆ ಮಕ್ಕಳಿರಲಿಲ್ಲ, ಜಮೀನು, ಹೊಲಗದ್ದೆ ಇದ್ದ ಅನುಕೂಲಸ್ಥರು . ಇವರು ನಮ್ಮ ತಾತನ ಅಣ್ಣ, ನಮ್ಮ ದೊಡ್ಡ ತಾತ !

ನಾನು ಚಿಕ್ಕವನಿದ್ದಾಗ ನಮ್ಮಪ್ಪ ಇವರ ಹೆಸರನ್ನು ಹೇಳಿದಾಗಲೆಲ್ಲ “ಅವರು ದೇವ್ರಾ ?“ ಅಂತ ಕೇಳ್ತಿದ್ದೆ ! ನಮ್ಮಪ್ಪ ಇಲ್ಲಪ್ಪ ಅವರ ಹೆಸರೇ ದೇವ್ರು ಅನ್ನುತ್ತಿದ್ದರು. ನನಗೆ ಆಗ ಏನೂ ಅರ್ಥವಾಗುತ್ತಿರಲಿಲ್ಲ ! ಮನುಷ್ಯರು ಯಾಕೆ ದೇವರು ಅಂತ ಹೆಸರು ಇಟ್ಟುಕೊಳ್ಳಬೇಕು ? ಅಲ್ವಾ ?

ಇಂತಹಾ “ಸಿದ್ಧಪ್ಪ ದೇವರಿಗೆ“ ಒಮ್ಮೆ ತುರ್ತಾಗಿ ಹಣದ ಅವಶ್ಯಕತೆ ಇತ್ತು . ಅನುಕೂಲಸ್ಥರಾದರೂ ಅಷ್ಟು ಹಣ ಹೇಗೆ ಹೊಂದಿಸುವುದೆಂದು ಯೋಚಿಸುವಾಗ “ಶಿವಣ್ಣನನ್ನು ಏಕೆ ಕೇಳಬಾರದು ?“ ಎಂದುಕೊಂಡರು.

ಶಿವಣ್ಣ ಎಂದರೆ “ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು“ ಅವರು – ಇವರು ಸ್ನೇಹಿತರು ಮತ್ತು ಓರಗೆಯವರು. ಇವರು ಕೇಳಿದ್ದಕ್ಕೆ ಅವರು ಇಲ್ಲವೆನ್ನಲಿಲ್ಲವಾದರೂ “ನೋಡು ಸಿದ್ದಪ್ಪ ಬೇಗ ಹಿಂದಿರುಗಿಸಿ ಬಿಡು , ನೀನು ಅನುಕೂಲಸ್ಥ !“ ಅಂದರಂತೆ. ಕಾಲಾಂತರದಲ್ಲಿ ಸಿದ್ದಪ್ಪ ದೇವರ ಕಷ್ಟ ಕಳಿಯಿತು ಒಂದಷ್ಟು ದುಡ್ಡನ್ನು ಮರಳಿಸಿದರೂ ಬಾಕಿ ಇನ್ನು ಹಾಗೆ ಇತ್ತು !

ಸಿದ್ದಪ್ಪ ದೇವರು ತೀರಿಸೋಣವೆಂದು ಸುಮ್ಮನಾಗಿರಬೇಕು! ಒಮ್ಮೆ ಮಠದಲ್ಲಿ ಇವರನ್ನು ನೋಡಿದ ಸ್ವಾಮಿಗಳು “ಸಿದ್ದಪ್ಪ ಬಾಕಿ ದುಡ್ಡು ಎಲ್ಲಪ್ಪ ? ಯಾವಾಗ ತೀರಿಸ್ತೀಯ ?“ ಎಂದು ಕೇಳಿದರಂತೆ ! ಅದಕ್ಕೆ ತಬ್ಬಿಬ್ಬಾದ ಸಿದ್ದಪ್ಪ ದೇವರು “ ಶಿವಣ್ಣ ತೀರಿಸ್ತೀನಪ್ಪ , ಮಠದ ದುಡ್ಡು ಹಂಗೆಲ್ಲಾ ಮಾಡೋಕಾಗುತ್ತ ?“ ಅಂದರಂತೆ

ಅದಕ್ಕೆ ನಡೆದಾಡುವ ದೇವರು “ ಮಠದ್ದು ಅಂದ್ರೆ ಮಕ್ಕಳದ್ದು ಸಿದ್ದಪ್ಪ , ಅವರ ಅನ್ನದ್ದು , ವಿದ್ಯೆದು , ಮರಿಬೇಡ ಅಂದರಂತೆ ! “

ಇದು ಅವರು ತಮ್ಮ ಸ್ನೇಹಿತ ಮತ್ತು ಓರಗೆಯವರಾದ ನಮ್ಮ ದೊಡ್ಡತಾತನ ಬಳಿ ನಡೆದುಕೊಂಡ ರೀತಿ. ಈ ಸನ್ನಿವೇಶ ವನ್ನು ಗಂಭೀರವಾಗಿ ತೆಗೆದುಕೊಂಡ ಸಿದ್ದಪ್ಪ
ದೇವರು ಕೂಡಲೇ ಸಾಲ ತೀರಿಸಿದರಂತೆ ! ಅವರಿಗೆ ಸ್ವಾಮೀಜಿಯ ಸ್ನೇಹ ಉಳಿಯಿತು ಮತ್ತು ಹೆಚ್ಚು ಹತ್ತಿರವಾಗಲಿಕ್ಕೆ ಇದು ಕಾರಣವಾಯಿತು ಎಂದು ನಮ್ಮ ಅಜ್ಜಿ ಆಗಾಗ ಹೇಳೋರು.

(ಪ್ರಸಂಗ ಎರಡು)

ಸೌದೆ ಕಂಟ್ರಾಕ್ಟರ್ ಅಪ್ಪ…..

ಅಪ್ಪ ಸೌದೆ ಕಂಟ್ರಾಕ್ಟರ್ ಆಗಿ ಕೆಲವು ವರುಷ ಕೆಲಸ ಮಾಡಿದ್ದರು. ಅವರ ಕೆಲಸವೆಂದರೆ ನಾಮದ ಚಿಲುಮೆ ಮತ್ತು ದೇವರಾಯನ ದುರ್ಗದ ಕಾಡುಗಳಲ್ಲಿ ಹರಾಜಿಗಿರುವ ಹಳೆಯ ಮರಗಳನ್ನು ಗುತ್ತಿಗೆ ಪಡೆದು ಕಡಿಸುವುದು, ಕಡಿಸಿ ಒಟ್ಟುಮಾಡಿದ ಸೌದೆಯನ್ನು ತುಮಕೂರಿನ ಡಿಪೋಗಳಿಗೆ ಮಾರುವುದು. ಅಪ್ಪ ಎಷ್ಟು ನಿಷ್ಣಾತನಾಗಿದ್ದನೆಂದರೆ (ಅವರ ಪ್ರಕಾರ ) ಒಂದು ಮರವನ್ನು ನೋಡೇ ಇಷ್ಟು ಲೋಡ್ ಸೌದೆ ಆಗುತ್ತದೆಂದು ನಿಖರವಾಗಿ ಹೇಳುತ್ತಿದ್ದರಂತೆ !

ಇಂತಿಪ್ಪ ಅಪ್ಪನ ಜೊತೆ ದುರ್ಗದಹಳ್ಳಿಯ ( ದೇವರಾಯನ ದುರ್ಗದ ತಪ್ಪಲಿನ ಒಂದು ಹಳ್ಳಿ ) ಹಲವು ಜನರು ಆಳುತನ ಮಾಡುತ್ತಿದ್ದರು. ಅವರಲ್ಲಿ ಕೆಲವರು ನಮ್ಮ ಜಮೀನಿನಲ್ಲೂ ಕೆಲಸ ಮಾಡುತ್ತಿದ್ದರು. ಒಮ್ಮೆ ಅಪ್ಪನಿಗೆ ಸಿದ್ದಗಂಗಾ ಮಠದಿಂದ ಕರೆಬಂತಂತೆ, ಅಪ್ಪ ಯಾಕಿರಬಹುದೆಂದು ಓಡಿದ. ಮಠದಲ್ಲಿ ಆಗೆಲ್ಲ ಒಲೆಗೆ ಸೌದೆ ಬಳಸುತ್ತಿದ್ದರಿಂದ ಸಹಜವಾಗಿ ಬೇಡಿಕೆ ಇತ್ತು.

ಅಪ್ಪನ ಕಾಂಟ್ರಾಕ್ಟ್ ಕೆಲಸ ಗೊತ್ತಿದ್ದ ಕೆಲವರು ಮಠಕ್ಕೆ ಸೌದೆ ಸರಬರಾಜು ಮಾಡಲು ಕರೆಸಿದ್ದರು. ಅಪ್ಪನೂ ಒಪ್ಪಿದರು. ಬಹುಷಃ ಒಂದೆರಡು ತಿಂಗಳು ಕಳೆದಿರಬೇಕು ಅಪ್ಪ ಅಚಾನಕ್ಕಾಗಿ ಪೂರೈಕೆ ನಿಲ್ಲಿಸಿದರು. ಆಗ ಅಪ್ಪನನ್ನ ಸ್ವಾಮೀಜಿ ಕರೆಸಿ ಕೇಳಿದರಂತೆ ” ಅಲ್ಲಪ್ಪ ಅಡಿಗೆ ಮಾಡೋ ಸೌದೆ, ನೀನು ಧಿಢೀರಂತ ಪೂರೈಕೆ ಮಾಡೋದನ್ನ ನಿಲ್ಲಿಸಿದರೆ ಹೆಂಗೆ? “

ಅದಕ್ಕೆ ಅಪ್ಪ “ಸ್ವಾಮಿ ನಾನು ಮರ ಕೊಳ್ಳೋವಾಗ ಫಾರೆಸ್ಟ್ ಅವ್ರಿಗೆ ಅಡ್ವಾನ್ಸ್ ಕೊಟ್ಟು ಕಡಿಸಿದಮೇಲೆ ಪೂರ್ತಿ ಹಣ ಕೊಡಬೇಕು, ಆಳುಗಳಿಗೆ ಕೂಲಿ ಕೊಡಬೇಕು, ಲಾರಿ ಅವ್ನಿಗೆ ಬಾಡಿಗೆ ಕೊಡ್ಬೇಕು. ಇಲ್ಲಿ ನೋಡಿದ್ರೆ ಒಂದು ತಿಂಗಳಿಂದ ಸರಿಯಾಗಿ ದುಡ್ಡೇ ಬಂದಿಲ್ಲ. ನಾನು ಸಣ್ಣ ಕಾಂಟ್ರಾಕ್ಟದಾರ ಏನು ಮಾಡೋದೋ ಗೊತ್ತಾಗದೆ ಸರಬರಾಜು ನಿಲ್ಲಿಸಿದೆ !” ಅಂದರಂತೆ.

ಅದಕ್ಕೆ, ಮಠದ ಇಲಿ-ಹೆಗ್ಗಣಗಳ ಬಗ್ಗೆ ಎಲ್ಲ ಗೊತ್ತಿದ್ದ ಸ್ವಾಮೀಜಿ ಏನೂ ಮಾತಾಡಲಿಲ್ಲವಂತೆ !

ಅಪ್ಪ ಈ ಎರಡೂ ಪ್ರಸಂಗಗಳನ್ನು ಹೇಳುವಾಗ ಸ್ವಾಮಿಗಳ ಪ್ರಾಮಾಣಿಕತೆ ಮತ್ತು ಮಿತಿಯ ಬಗ್ಗೆ ಹೇಳಿದ್ದು ಇನ್ನೂ ನೆನಪಿದೆ. 

‍ಲೇಖಕರು Avadhi

6 October, 2020

1 Comment

  1. ಲಲಿತಾ ಸಿದ್ಧಬಸವಯ್ಯ

    ಇಲ್ಲಿಯ ಮಠಕ್ಕೆ ಸೌದೆ ಸರಬರಾಜಿನ ಪ್ರಸಂಗವು ವಿರಾಗಿಯನ್ನೂ ಬಿಡದ ಲೌಕಿಕಗಳನ್ನು ‌ಮತ್ತು ಮಹಾನ್ ವಿರಾಗಿಯ ಸನ್ನಿಧಿಯಲ್ಲಿದ್ದೂ ಹೆಗ್ಗಣದಂತೆ ಬದುಕಿದ ಸಾಂಸಾರಿಕರ ಸಣ್ಣತನವನ್ನು ಒಟ್ಟಿಗೇ ಬಿಂಬಿಸುತ್ತದೆ.

    ಸಿದ್ಧಗಂಗೆ ಸಿದ್ಧಗಂಗೆಯಾಗಲು ದೊಡ್ಡ ಬುದ್ಧಿಯವರು ಅದೆಷ್ಟು ಜನ ಅಲ್ಪಮನದವರೊಂದಿಗೆ ಸೆಣೆಸಿರಬೇಕು ? ನ ಯೋಗಿಯೆಂದರೆ ನಿಜಯೋಗಿ ಸಿದ್ಧಗಂಗೆಯ ಶ್ರೀ ಗಳು. ಅಂತಹ ಉಜ್ವಲ ಬೆಳಕಿನಲ್ಲಿ ತಿಗಣೆಯಂತೆ ಬದುಕಿದವರನ್ನು ನೆನೆದರೆ ಅನುಕಂಪ ಮೂಡುತ್ತದೆ. ‌

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading