ಹೀಗೊಂದು ಪತ್ರ
ಶಿವರಾಜ ಬೆಟ್ಟದೂರು
ರಿಗೆ,
ನಿರ್ದೇಶಕರು
ಡಾ. ದ.ರಾ. ಬೇಂದ್ರೆ ಸ್ಮಾರಕ ರಾಷ್ಟ್ರೀಯ ಟ್ರಸ್ಟ್
ಬೇಂದ್ರೆ ಭವನ , ಸಾಧನಕೇರಿ
ಧಾರವಾಡ
ಮಾನ್ಯರೇ,
2011ನೇ ಸಾಲಿನ ಬೇಂದ್ರೆ ಟ್ರಸ್ಟ್ ನಿಂದ ಟ್ರಸ್ಟ್ನಿಂದ ಕಾವ್ಯ ಪ್ರಕಾರಕ್ಕೆ ಕೊಡಮಾಡುವ ಗ್ರಂಥ ಬಹುಮಾನಕ್ಕೆ ನನ್ನ ‘ಈ ಲೋಕದ ಇನ್ನೊಂದು ಗಿಡ’ ಆಯ್ಕೆಯಾಗಿದೆ ಎಂದು ಫೋನಿನಲ್ಲಿ ತಿಳಿಸಿದಿರಿ. ಹೆಸರಿನಲ್ಲಿ ಸ್ವಲ್ಪ ವ್ಯತ್ಯಾಸವಿದ್ದುದಕ್ಕೆ ಅಫಿಡವಿಟ್ ಕೇಳಿದಿರಿ. ಇದೇ 26ಕ್ಕೆ ಕಾರ್ಯಕ್ರಮವಿದೆ ಎಂದೂ ಹೇಳಿದಿರಿ. ಇವತ್ತಿನವರೆಗೆ ನನಗೆ ಅಧಿಕೃತ ಆಹ್ವಾನ ಪತ್ರಿಕೆ ತಲುಪಿಲ್ಲ. ಇ-ಮೇಲ್ ಕೂಡ ಮಾಡಿಲ್ಲ. ಇವತ್ತು ‘ಕನ್ನಡಪ್ರಭ’ ನೋಡಿದಾಗ ಗೊತ್ತಾಯಿತು ಕತೆ, ಕವಿತೆಗೆ ಇಬ್ಬಿಬ್ಬರನ್ನು ಆಯ್ಕೆ ಮಾಡಿದ್ದೀರಿ ಎಂದು. ಆದರೆ ಕಾವ್ಯ ಪ್ರಕಾರಕ್ಕೆ ಇನ್ನೊಬ್ಬರನ್ನು ಆಯ್ಕೆ ಮಾಡಿದ್ದನ್ನು ಫೋನಿನಲ್ಲಿ ತಿಳಿಸಲಿಲ್ಲ (ತಿಳಿಸಬೇಕೆಂದೇನೂ ಇಲ್ಲ).
ಪುಸ್ತಕದ ರಿವ್ಯೂ ಗಳು ಬೇರೆ ಬೇರೆ ಕಾರಣಕ್ಕೆ ಪತ್ರಿಕೆಗಳಲ್ಲಿ ಬರುವುದೇ ದುಸ್ತರವಾಗಿರುವ ಪ್ರಸ್ತುತ ಕನ್ನಡದ ಹೊತ್ತಲ್ಲಿ, ಸ್ಪರ್ಧೆಗಳು ಪಾರದರ್ಶಕತೆಯಿಂದ ಕೂಡಿದ್ದು; ಒಳ್ಳೆಯ ಕೃತಿಗಳನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ಪ್ರಶಸ್ತಿಗಳನ್ನು ಕೊಡುವ ಸಂಸ್ಥೆಗಳ ಹೊಣೆಗಾರಿಕೆಯಾಗಿರುತ್ತದೆ. ಆ ಮೂಲಕ ಬರಹಗಾರನನ್ನು ಪ್ರೋತ್ಸಾಹಿಸುವ ಮತ್ತು ಗಟ್ಟಿಯಾದುದನ್ನು ಜರಡಿ ಹಿಡಿದು ಸೋಸಿ ನೋಡುವ ಮುತುವರ್ಜಿ ತೀರ್ಪುಗಾರರಾದವರಲ್ಲಿ ಇದ್ದರೆ ಒಳ್ಳೆಯದು. ಹೆಚ್ಚಾನೆಚ್ಚು ಸ್ಪರ್ಧೆಗಳು ನಾಮಕೇವಾಸ್ತೆ ಸ್ಪರ್ಧೆಗಳನ್ನು ನಡೆಸಿ ಕಾರ್ಯಕ್ರಮ ಮಾಡಿ ಶಾಲು, ಫಲಕ ಮತ್ತು ಕೊಂಚ ನಗದು ಹಣವನ್ನು ನೀಡಿ ಬರಹಗಾರರನ್ನು ಕೃತಾರ್ಥರನ್ನಾಗಿಸುವ ಪ್ರಯತ್ನಗಳು ನಮ್ಮ ಕಣ್ಣ ಮುಂದೆ ಇವೆ.
ಕೆಲವುಸ್ಪರ್ಧೆಗಳಂತೂ ತೀರ್ಪುಗಾರರನ್ನು ನೇಮಿಸದೇ ತಾವೇ ಏಕಪಕ್ಷೀಯವಾಗಿ ಆಯ್ಕೆ ಮಾಡಿ ಪತ್ರಿಕಾ ಪ್ರಕಟಣೆಗೆ ಕೊಡುವಾಗ ಒಂದಿಬ್ಬರ ಹೆಸರನ್ನುತೀರ್ಪುಗಾರರಾಗಿದ್ದರು ಎಂದು ನಮೂದಿಸಿ ಪ್ರಶಸ್ತಿ ಕೊಟ್ಟ ಉದಾಹರಣೆಗಳು ಇನ್ನೂ ಚಾಲ್ತಿಯಲ್ಲಿವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಜಾತಿ ಮತ್ತು ಇನ್ನಿತರ ಕಾರಣಕ್ಕೆ ಜಂಟಿ ಪ್ರಶಸ್ತಿಯನ್ನು ಘೋಷಿಸಿದ ನಿದರ್ಶನಗಳೂ ಉಂಟು. ಕನ್ನಡದಲ್ಲಿ ಒಂದೆರಡು ಸ್ಪರ್ಧೆಗಳನ್ನು ಹೊರತು ಪಡಿಸಿ ಪಾರದರ್ಶಕವಾಗಿ ನಡೆವ ಸ್ಪರ್ಧೆಗಳು ತೀರಾ ವಿರಳ.
ಬೇಂದ್ರೆ ನನಗೆ ಗುಂಗು ಬಿಡಿಸಿದ ಕವಿ. ಅವರ ಹೆಸರಿನಲ್ಲಿನ ಬಹುಮಾನವನ್ನು ಸ್ವೀಕರಿಸಲು ನನಗೆ ಆಗದಿದ್ದುದಕ್ಕೆ ವಿಷಾದವೆನಿಸುತ್ತದೆ. ಪ್ರಶಸ್ತಿ / ಬಹುಮಾನಗಳು ಅತ್ಯುತ್ತಮವಾದುದನ್ನೆ ಆಯ್ಕೆ ಮಾಡುತ್ತವೆ ಎಂದಲ್ಲ. ಸ್ಪರ್ಧೆಗೆ ಬಂದ ಕೃತಿಗಳಲ್ಲೇ ಅತ್ಯುತ್ತಮವಾದ ಒಂದನ್ನು ಆಯ್ಕೆ ಮಾಡಬೇಕಾದ ಜರೂರಿ ತೀರ್ಪುಗಾರರದಾಗಿರಬೇಕು. ಆಗ ಆ ಪ್ರಶಸ್ತಿ ಪಡೆಯುವವನಿಗೂ, ಕೊಡುವವರಿಗೂ ಗೌರವ.
ಒಂದು ಪ್ರಶಸ್ತಿಯನ್ನು ಇಬ್ಬರು, ಮೂವರಿಗೆ ಹಂಚುವ ವಿಚಾರಕ್ಕೆ ನನ್ನ ವಿರೋಧವಿದೆ. ಒಂದು ಪ್ರಕಾರದಲ್ಲಿ ನಿರ್ವಾಹ ಇಲ್ಲದ ಪರಿಸ್ಥಿತಿಯಲ್ಲಿ, ಮತ್ತೊಂದು ಕೃತಿಗೆ ಅನ್ಯಾಯವಾಗುವುದು ಖಚಿತವೇ (ಎರಡು ಕೃತಿಗಳು ಸಮತೂಕವಿರಲು ಸಾಧ್ಯವಿಲ್ಲ) ಆಗಿದ್ದ ಪಕ್ಷದಲ್ಲಿ ಒಪ್ಪಬಹುದಿತ್ತು. ಕಥಾಪ್ರಕಾರದಲ್ಲೂ ಕಾವ್ಯದಲ್ಲೂ ಹೀಗೆ ಹಂಚುತ್ತಿರುವುದು ಏನನ್ನು ಸೂಚಿಸುತ್ತದೆ? ಖಂಡಿತಾ ಇದು ಕೃತಿಕಾರನನ್ನು ಉತ್ತೇಜಿಸುವ ರೀತಿಯಂತೂ ಅಲ್ಲ. ಒಬ್ಬರಿಗೆ ಬದಲು ಇಬ್ಬರಿಗೆ ಕೊಟ್ಟರಾಯಿತು ಎನ್ನುವ ತಾತ್ಸಾರ. ಪ್ರಶಸ್ತಿಗಳು ಅಪಮೌಲ್ಯಗೊಳ್ಳುತ್ತಿರುವುದು ಇಲ್ಲಿಯೇ!
ಒಂದು ವೇಳೆ ತೀರ್ಪುಗಾರರು ಮೂರು ನಾಲ್ಕು ಜನರಿಗೆ ಸಮನಾದ ಅಂಕಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕೆ ಅವರೆಲ್ಲರಿಗೂ ಪ್ರಶಸ್ತಿಯನ್ನು ಹಂಚುವುದು ಅಭಾಸವಾದೀತು. ಇಂಥ ಸಂಪ್ರದಾಯಕ್ಕೆ ಕೊನೆ ಹಾಡಬೇಕು. ತೀರ್ಪುಗಾರರಿಂದ ಸಮನಾದ ಅಂಕ ಬಂದಾಗಲೂ ತೂಗಿ ನೋಡಿ, ಯಾವ ಕೃತಿ ಅರ್ಹ ಎಂಬುದನ್ನು ಯಾರು ನಿರ್ಧರಿಸಬೇಕು?ತೀರ್ಪುಗಾರರನ್ನು ಕೂಡಿಸಿಕೊಂಡು ಅಂತಿಮಗೊಳಿಸುವ ಅಂತಿಮ ತೀರ್ಪುಗಾರ ಸಮಿತಿಯೇ? ನಿರ್ದೇಶಕರು ಮತ್ತು ತೀರ್ಪುಗಾರರನ್ನೊಳಗೊಂಡ ಮತ್ತೊಂದು ಕೊನೆಯ ಪರಾಮರ್ಶನ ಸಮಿತಿಯೇ? ಅಪಸ್ವರ ಏಳದಂತೆ, ಅನ್ಯಾಯವಾಗದಂತೆ ಮಾಡುವ ಆಯ್ಕೆ ಮಾನದಂಡ ಯಾವುದು? ಅದು ಪ್ರಶಸ್ತಿ/ಬಹುಮಾನ ಕೊಡುವ ಸಂಸ್ಥೆಯ ವಿವೇಚನೆಗೆ ಬಿಟ್ಟದ್ದು.
ದಯವಿಟ್ಟು ಕ್ಷಮಿಸಿ, ಈ ಬಾರಿಯ ಬೇಂದ್ರೆ ಗ್ರಂಥ ಬಹುಮಾನ ನನಗೆ ಬೇಡ.ಇದನ್ನು ನಾನು ಸ್ವೀಕರಿಸಲೊಲ್ಲೆ.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸದ,
ಶಿವರಾಜ ಬೆಟ್ಟದೂರು







ಉತ್ತಮ ನಿರ್ಧಾರ. ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಸಮಾಜಕ್ಕೆ ಮತ್ತು ಸಾಂಸ್ಕತಿಕಲೋಕಕ್ಕೆ ಇಂತಹ ಚುಚ್ಚು ಮದ್ದುಗಳು ಬೇಕಾಗಿವೆ.
ನಿಮಗೆ ಒಳ್ಳೆದಾಗಲಿ, ನಿಮ್ಮ ನಿರ್ಧಾರವೂ ಉಚಿತವಾಗಿರಬಹುದು. ಆದರೆ “ರಿಗೆ,” ಅಂತ ಉಪಯೋಗಿಸಿದ್ದು ಸರಿ ಅನಿಸಲಿಲ್ಲ ಆಂಗ್ಲ ಭಾಷೆಯ ಕುರುಡು ಅನುಕರಣೆ ಅನಿಸುತ್ತಿದೆ.
ನಿಮಗಿಂತ ಸಣ್ಣವ ಎಂದು ತಿಳಿದು ತಪ್ಪಿದ್ದರೆ ಸರಿಪಡಿಸುವುದು.
ವಿಶ್ವಾಸಿ,
ಗಣಪತಿ
Nimma Nirdhara Sariyagide.
Superb sir. Olle nirdhara tegedukondiddiri.
nimma matu nijakku beleyulladdu tirpugarara noota innadaru badalagai
olle nirdhara. kakataaliyavembante ivattina prajavani spraddheyallu prashastiyannu hige hanchalagide.
olleya nirdhara.. aproopada nirdharvoo …..
ಸದಾ ಪತ್ರಿಕೆಯಲ್ಲಿ ಹೆಸರು ಬಂದು ‘ಅಂಕಣ ಕವಿ’ ಗಳಂತೆ ಹೆಸರು ಮಾಡಿಕೊಂಡವರನ್ನೇ ಪ್ರಶಸ್ತಿಗೆ ಸೂಚಿಸುವ; ಪಡಸಾಲೆಗೆ ಕರೆಯುವ ಸಂಪ್ರದಾಯ ನಿಲ್ಲಬೇಕು. ಆತ್ಮರತಿಯ ಭಿಡೆ ಇಲ್ಲದ; ಕೀರ್ತಿಶನಿಯ ಹಂಗಿಲ್ಲದವರು ತೆಗೆದುಕೊಳ್ಳಬೇಕಾದ ನಿರ್ಧಾರವನ್ನೇ ತೆಗೆದುಕೊಂಡಿದ್ದೀರಿ. ನಿಜಕ್ಕು ಪ್ರಶಸ್ತಿಯ ಬೆಲೆ ಹೆಚ್ಚಿತು.
ನಿಮ್ಮ ನಿರ್ಧಾರ ವೈಯುಕ್ತಿಕ. ನಿಜ,ನೀವೆಂದಂತೆ ಈ ಹೊತ್ತಿನ ಅನೇಕಾನೇಕ ಪ್ರಶಸ್ತಿಗಳು giving/taking ಥರದವು. ಒಬ್ಬರದೇ ಪುಸ್ತಕಕ್ಕೆ ಹತ್ತು ಹಲವು ಗರಿ, ಕಿರೀಟ, ಬಿರುದು, ಬಾವಲಿ. ಆದರೆ ಯಾರೋ ತಪ್ಪು ಮಾಡಿದರೂಂತ ಇಡೀ ವ್ಯವಸ್ಥೆಯನ್ನೇ ಹಳಿಯುವುದು ತಪ್ಪು. ಏಕೆಂದರೆ ನಾನು ತಿಳಿದ ಮಟ್ಟಿಗೆ ಧಾರವಾಡದ ಬೇಂದ್ರೆ ಟ್ರಸ್ಟ್ ಕೊಡಮಾಡುತ್ತಿರುವ ಪ್ರಶಸ್ತಿಗಳು ೩೫ರ ಪ್ರಾಯದೊಳಗಿರುವ ಮತ್ತು ಮೊದಲನೇ ಸಂಕಲನ ಪ್ರಕಟಿಸಿರುವ ಲೇಖಕರಿಗೆ ಮೀಸಲಾದದ್ದು. ಹಾಗಾಗಿ ಒಂದು ವರ್ಷದ ಅವಧಿಯಲ್ಲಿ ಪ್ರಕಟವಾಗಿರುವ ಗಮನಾರ್ಹ ಪುಸ್ತಕಗಳೆಲ್ಲವನ್ನೂ ಪರಿಶೀಲಿಸುವುದು ಅತ್ಯಗತ್ಯ. ಹಾಗಾಗಿ ಮತ್ತೊಬ್ಬರ ಜೊತೆಗೆ ಪ್ರಶಸ್ತಿ ಹಂಚಿಕೊಳ್ಳುವುದರಲ್ಲಿ ತಪ್ಪೇನಿಲ್ಲ.ಅಲ್ಲದೇ ಬೇಂದ್ರೆ ಟ್ರಸ್ಟ್ ಸರ್ಕಾರದ ಅನುದಾನದಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಿರುವುದರಿಂದ ಸಹಜವಾಗಿ ಆಗುವ ’ಸರ್ಕಾರೀ’ ಮುಜುಗರಗಳು ಅಫಿಡವಿಟ್ ಇತ್ಯಾದಿ ನಡೆದಿರಬಹುದು.ಅಲ್ಲದೇ ಈ ಪ್ರಶಸ್ತಿಗೆ ಸಾರ್ವಜನಿಕವಾಗಿ ಪುಸ್ತಕಗಳನ್ನು ಲೇಖಕ ಪ್ರಕಾಶಕರಿಂದ ಸ್ವೀಕರಿಸುವಂತೆಯೇ ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿದವರಿಂದಲೂ ಪುಸ್ತಕಗಳ ಯಾದಿಯನ್ನು/ಸಲಹೆಯನ್ನು ಪಡೆದಿರುತ್ತಾರೆ. ಒಬ್ಬ ಸಹ ಬರಹಗಾರನೊಂದಿಗೆ ಗೌರವವನ್ನು ಹಂಚಿಕೊಳ್ಳುವುದು ತಪ್ಪೇನಲ್ಲ. ನೀವು ಸಾರ್ವಜನಿಕವಾಗಿ ಪ್ರಶಸ್ತಿಯನ್ನು ತಿರಸ್ಕರಿಸುವ ಮೊದಲು ಪ್ರಶಸ್ತಿ ಕೊಡಮಾಡುತ್ತಿರವ ಸಂಸ್ಥೆ, ತೀರ್ಪುಗಾರರ ಟಿಪ್ಪಣಿ, ನಿಮ್ಮೊಂದಿಗೆ ಪ್ರಶಸ್ತಿ ಹಂಚಿಕೊಳ್ಳುತ್ತಿರುವವರ ಪುಸ್ತಕ, ಪ್ರಶಸ್ತಿಗಾಗಿ ಇರುವ ನಿಯಮಗಳು ಎಲ್ಲವನ್ನೂ ಈಗಾಗಲೇ ಇದೇ ಪ್ರಶಸ್ತಿ ಪಡೆದ ಇತರರೊಂದಿಗೆ ಹಂಚಿಕೊಳ್ಳಬಹುದಿತ್ತು ಎನ್ನಿಸುತ್ತದೆ. ಏಕೆಂದರೆ ………
ಮಾನ್ಯರೆ
ಲಂಕೇಶ ನಂತರದ ಕಾಲಘಟ್ಟದಲ್ಲಿ ಪ್ರಶಸ್ತಿಗಳು ಅಪಮೌಲ್ಯೀಕರಣ ಗೊಳ್ಳುತ್ತಿವೆ ಎನ್ನುವದಕ್ಕೆ,ಶಿವರಾಜ ಬೆಟದೂರರನ್ನು ಬಿದರಕುಂದಿ ಮತ್ತು ಅವರ ಗ್ಯಾಂಗ್ ನೆಡಸಿಕೊಂಡಿದ್ದೆ ಉದಾಹರಣೆ.ಒಂದು ಗುಂಪು ಕಟ್ಟಿಕೊಳ್ಳುವದು ಅವರವರನ್ನು ಮೆಲೆತ್ತುವದು,ಈಗ ಮಾನಮರ್ಯಾದೆಯಿಲ್ಲದೆ ನೆಡುವ ಸಂದರ್ಭದಲ್ಲಿ,ಬಿದರಕುಂದಿಯವರು ಬೆಟದೂರು ಬೇಂದ್ರೆ ಪ್ರಶಸ್ತಿಯೆನ್ನುವದನ್ನು ಭಿಕ್ಷುಕರಿಗೆ ಹಾಕುವ ತಂಗಳು ಎಂದು ತಿಳಿದುಕೊಂಡರೋ ಏನೋ? ಬೆಟದೂರು ಅನುಭವದ ಪ್ರಕಾರ ಹಾಗೆ ಅನ್ನಿಸುತ್ತದೆ.ನಿನ್ನೆ ದೇಶಕಾಲ, ಇಂದು ಬೇಂದ್ರೆ ಪ್ರಶಸ್ತಿ.ಕರ್ನಾಟಕದ ಸ್ರಜನಶೀಲರನ್ನು ಘಾಸಿಗೊಳಿಸುತ್ತಲೆ ಇವೆ.ಕವಿಮನಸ್ಸಿನ ಮ್ರದು ಜೀವಿ ರಾಮಸ್ವಾಮಿಯವರಿಗೆ ಇದು ಯಾಕೆ ಅರ್ಥವಾಗಲಿಲ್ಲವೋ ನಾ ಕಾಣೇ.ಒಟ್ಟಾರೆ ಕೊನೆಯವರೆಗು ಇವರನ್ನು ನೆಡೆಸಿಕೊಂಡ ರೀತಿಗೆ ಧಿಕ್ಕಾರವಿರಲಿ
ನಿಮ್ಮ ಬರಹ ಓದಿದಾಗ ನನಗೆ ನನ್ನ ಹಳೆಯ ಪ್ರಸಂಗ ನೆನಪಿಗೆ ಬಂತು.
ನಾನಾಗ ಕನ್ನಡ ಎಂಎ ಮುಗಿಸಿದ್ದಷ್ಟೇ. ಅದಾಗಲೇ ಒಂದು ಪುಸ್ತಕಕ್ಕಾಗುವಷ್ಟು ಕವನಗಳಿದ್ದವು. ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟ ಗೊಂಡವುಗಳು.
ಅದೇ ಸಂದರ್ಭದಲ್ಲಿ ಮುದ್ದಣ ಕಾವ್ಯ ಪ್ರಶಸ್ತಿಗೆ ಕರೆದಿದ್ದರು. ನಾನು ನನ್ನ “ಪ್ರವಾದಿಯ ಕನಸು” ಹಸ್ತಪ್ರತಿಯನ್ನು ಕಳುಹಿಸಿದೆ.
ನನ್ನ ಬರೆಯುವ ಹುಮ್ಮಸ್ಸಿಗೆ ನೀರೆರದಂತೆ ನನ್ನ ಮೊತ್ತ ಮೊದಲ ಕೃತಿಗೆ ಮುದ್ದಣ ಕಾವ್ಯ ಪ್ರಶಸ್ತಿ ಸಿಕ್ಕಿತ್ತು.
ಆದರೆ ನನ್ನ ಜೊತೆಗೆ ಖ್ಯಾತ ಹಿರಿಯ ಕವಿ, ಲೇಖಕ ಎಸ್. ದಿವಾಕರ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು.
5 ಸಾವಿರ ರುಪಾಯಿಯನ್ನು ಎರಡುವರೆ ಸಾವಿರದಂತೆ ಹಂಚಿ ಕೊಡಲಾಯಿತು.
ಆದರೆ ಈ ಹಂಚಿಯುವಿಕೆಯಲ್ಲಿ ಹೆಚ್ಚು ಲಾಭ ಪಡೆದುಕೊಂಡವನು ನಾನೇ ಆಗಿದ್ದೆ.
ಒಂದು ಪ್ರಶಸ್ತಿ ಸಿಕ್ಕಿದ ಹೆಗ್ಗಳಿಕೆ. ಇನ್ನೊಂದು ಖ್ಯಾತ ಲೇಖಕರ ಜೊತೆ ಪ್ರಶಸ್ತಿ ಹಂಚಿಕೊಂಡ ಹೆಗ್ಗಳಿಕೆ.
ಎರಡೆರಡು ಲಾಭ. ಪಾಪ, ಎಸ್. ದಿವಾಕರ್ಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತೋ, ಅಥವಾ ನೀಡಿದಂತೆ ಮಾಡಿ ಅವರನ್ನು ಅವಮಾನಿಸಲಾಯಿತೋ ಎಂಬ ಗೊಂದಲ ಈಗಲೂ ನನ್ನನ್ನು ಕಾಡುತ್ತಿದೆ.
ಅಂತು ತೀರ್ಪುಗಾರರು ಎಸ್. ದಿವಾಕರರ ಮೇಲೆ ಹೀಗೆ ಸೇಡು ತೀರಿಸಿಕೊಂಡಿರಬಹುದು ಎನ್ನುದು ನನ್ನ ಬರೇ ಅನುಮಾನ. :-))