ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಮನಕಾರಿ ವಿಷವರ್ತುಲದಲ್ಲಿ ನೆನಪಾಗುತ್ತಿದೆ 'ತುರ್ತುಪರಿಸ್ಥಿತಿ'

ನಾ ದಿವಾಕರ

1975ರ ಜೂನ್ 25 ಭಾರತದ ರಾಜಕೀಯ ಭೂಪಟವನ್ನೇ ಬದಲಾಯಿಸಿದ ದಿನ.

ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯಗಳನ್ನು ಆಧರಿಸಿಯೇ ಆಡಳಿತ ನಡೆಸುವ ರಾಜಕೀಯ ಪಕ್ಷಗಳಿಗೆ ಮತ್ತು ಪ್ರಭುತ್ವದ ಪ್ರತಿನಿಧಿಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭ ಜನವಿರೋಧಿ ನೆಲೆಯಲ್ಲಿ ಕಂಡುಬಂದರೂ, ಇಂದಿಗೂ ಸಹ ಪ್ರಭುತ್ವದ ನೆಲೆಯಲ್ಲಿ 1975ರ ಸಂದರ್ಭದ ಅಗೋಚರ ಛಾಯೆಯನ್ನು ಕಾಪಾಡಿಕೊಂಡೇ ಬಂದಿರುವುದು ಸತ್ಯಸ್ಯಸತ್ಯ.

ಶ್ರೀಮತಿ ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಹೇರಿದ್ದು ಶಾಶ್ವತವಾಗಿ ಅಧಿಕಾರದಲ್ಲಿರುವ ಉದ್ದೇಶದಿಂದ ಮಾತ್ರವಲ್ಲ. ಸಾರ್ವಭೌಮ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡು, ಪ್ರಜಾಸತ್ತೆಯ ಚಾಮರದಡಿಯಲ್ಲಿಯೇ ಸರ್ವಾಧಿಕಾರದ ಧೋರಣೆಯೂ ಸಾಧ್ಯ ಎನ್ನುವ ಕಟು ಸತ್ಯವನ್ನು ಇಂದಿರಾ ತಮ್ಮ ಒಂದು ಸಹಿಯ ಮೂಲಕ ತೋರ್ಪಡಿಸಿದ್ದರು.

ಇದು ಪ್ರಭುತ್ವ ತನ್ನ ಪ್ರಜೆಗಳಿಗೆ ನೀಡಿದ ಎಚ್ಚರಿಕೆಯಾಗಿತ್ತಷ್ಟೆ. 1970ರ ದಶಕದಲ್ಲಿ ಸಂಭವಿಸಿದಂತಹ ವಿಪ್ಲವಕಾರಿ ಘಟನೆಗಳನ್ನು ಭಾರತದ ಪ್ರಜಾಸತ್ತಾತ್ಮಕ ಪ್ರಭುತ್ವ ಸಹಿಸುವುದಿಲ್ಲ ಎಂಬ ಸೂಕ್ಷ್ಮ ಎಚ್ಚರಿಕೆಯನ್ನು ಇಂದಿರಾ ನೀಡಿದ್ದು ತುರ್ತುಪರಿಸ್ಥಿತಿಯ ಮೂಲಕ.

ಈ ಧೋರಣೆ ಮತ್ತು ಆಡಳಿತಾತ್ಮಕ ನೀತಿ ಇಂದಿಗೂ ಜೀವಂತವಾಗಿದೆ. ಈ ಧೋರಣೆಯನ್ನು ಸಮರ್ಥವಾಗಿ ರಕ್ಷಿಸುವ ತರಂಗಾಂತರಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಗರ್ಭದಲ್ಲಿ ಇಂದಿಗೂ ಪ್ರವಹಿಸುತ್ತಲೇ ಇರುವುದು ವಾಸ್ತವ.

ಭಾರತದಲ್ಲಿ ಪ್ರಜಾತಂತ್ರದ ಕತ್ತು ಹಿಸುಕುವ ಶಕ್ತಿಗಳು ಬಲಿಷ್ಠವಾಗಿವೆ, ಮತ್ತೊಮ್ಮೆ ತುರ್ತುಪರಿಸ್ಥಿತಿ ಹೇರುವುದಿಲ್ಲ ಎಂದು ಹೇಳಲಾಗದು ಎಂದು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಹೇಳಿದ್ದುದನ್ನು ಎನ್‍ಡಿಟಿವಿ ವಾಹಿನಿಯ ಮೇಲಿನ ಆಕ್ರಮಣ , ರವಿ ಬೆಳಗೆರೆಯ ಬಂಧನದ ಆದೇಶ ಮತ್ತೊಮ್ಮೆ ನೆನಪಿಸಿದೆ.

ಅಡ್ವಾಣಿಯವರ ಈ ಮಾತುಗಳ ಹಿಂದೆ ಇದ್ದುದು ಹತಾಶೆಯ ಮಾತುಗಳೋ, ತಮ್ಮ ಸೋಮನಾಥ ರಥ ಸಾರಥ್ಯದ ಫ್ಯಾಸಿಸ್ಟ್ ಮುಖವಾಡವನ್ನು ಕಳಚುವ ಪ್ರಯತ್ನವೋ, ಮೋದಿ ಆಳ್ವಿಕೆಯಲ್ಲಿ ತಮ್ಮ ಸ್ಥಾನಮಾನಗಳನ್ನು ಕಳೆದುಕೊಂಡು , ಸಂಭಾವ್ಯ ರಾಷ್ಟ್ರಪತಿ ಹುದೆಯ ಕನಸೂ ಕೈಗೂಡದೆ ಕಂಗಾಲಾಗಿರುವ ಮಹತ್ವಾಕಾಂಕ್ಷಿ ನಾಯಕನ ಮನದಾಳದ ನೋವಿನ ದನಿಯೋ ಅಥವಾ ತಮ್ಮ ವ್ಯಕ್ತಿಗತ-ರಾಜಕೀಯ ಜೀವನದ ಅಂತಿಮ ಹಂತದಲ್ಲಿ ಉಂಟಾಗಿರುವ ಪಶ್ಚಾತ್ತಾಪದ ನುಡಿಗಳೋ ತಿಳಿಯುತ್ತಿಲ್ಲ.

ಉದ್ದೇಶ ಏನೇ ಇರಲಿ, ಅಡ್ವಾಣಿಯ ಹೇಳಿಕೆಯಲ್ಲಿ ಸತ್ವ ಇದೆ ಎನ್ನುವುದನ್ನು ಮೋದಿ ಸರ್ಕಾರ ಸಾಬೀತುಮಾಡಿದೆ. ಆದರೆ ಪ್ರಜಾತಂತ್ರ ಮೌಲ್ಯಗಳ ಕತ್ತು ಹಿಸುಕುವ ಶಕ್ತಿಗಳು ಪ್ರಬಲವಾಗಿದೆ ಎಂದು ಅಡ್ವಾಣಿ ನಂಬಿದ್ದೇ ಆದಲ್ಲಿ, ಇಂತಹ ಫ್ಯಾಸಿಸ್ಟ್ ತೋಳುಗಳಲ್ಲಿ ರಾಜಕೀಯ, ಸಾಂಸ್ಕತಿಕ, ಧಾರ್ಮಿಕ ಮತ್ತು ಸಾಮುದಾಯಿಕ ಬಲ ತುಂಬಿದ ನೈತಿಕ ಹೊಣೆಗಾರಿಕೆಯನ್ನೂ ಹೊರಬೇಕಾಗುತ್ತದೆ.

ಏಕೆಂದರೆ 1970ರ ದಶಕದಲ್ಲಿ ದೇಶವ್ಯಾಪಿಯಾಗಿ ಹರಡಿದ್ದ ಪ್ರಜಾತಂತ್ರದ ದನಿಗಳು ಪ್ರತಿರೋಧಿಸಿದ್ದು ಭಾರತದ ಪ್ರಭುತ್ವ ಅನುಸರಿಸುತ್ತಿದ್ದ ನೀತಿಗಳನ್ನು. ಈ ಪ್ರಭುತ್ವದ ರಕ್ಷಣೆಗಾಗಿಯೇ ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದ್ದರು. ತನ್ಮೂಲಕ ಪ್ರಭುತ್ವವನ್ನು ವಿರೋಧಿಸುವ ಯಾವುದೇ ಪಕ್ಷ, ಸಂಘಟನೆ, ಗುಂಪು ಅಥವಾ ಸಂಸ್ಥೆಯನ್ನು ಕ್ಷಣಮಾತ್ರದಲ್ಲಿ ನಿರ್ನಾಮ ಮಾಡುವ ರಾಜಕೀಯ ತಂತ್ರಗಾರಿಕೆಗೆ ವೇದಿಕೆ ನಿರ್ಮಿಸಿದ್ದರು.

ಇಂದಿರಾಗಾಂಧಿಯ ಈ ಸಂವಿಧಾನ ವಿರೋಧಿ ನಿರ್ಧಾರವನ್ನು ಉಗ್ರವಾಗಿ ವಿರೋಧಿಸಿದ ಜನಸಂಘದ ನಾಯಕರು ಹದಿನೈದು ವರ್ಷಗಳ ನಂತರ ದೇಶಾದ್ಯಂತ ಸಾಂಸ್ಕತಿಕ ತುರ್ತುಪರಿಸ್ಥಿತಿ ಹೇರಿದ್ದನ್ನು ಅಲ್ಲಗಳೆಯಲಾಗುವುದಿಲ್ಲ. ಭಾರತೀಯ ಪ್ರಭುತ್ವದ ಧೋರಣೆಯನ್ನು ಹಿಂದುತ್ವದ ಚಕ್ರವ್ಯೂಹದೊಳಗೆ ಬಂಧಿಸುವ ಸಂಘಪರಿವಾರದ ಪ್ರಯತ್ನಗಳಿಗೆ ಅಡ್ವಾಣಿ ರಾಜತಾಂತ್ರಿಕ ಬೆಂಬಲ ನೀಡಿದರೆ, ಅಟಲ್ ಬಿಹಾರಿ ವಾಜಪೇಯಿ ಚಾಣಕ್ಯ ತಂತ್ರವನ್ನನುಸರಿಸಿ ಜಾಣ್ಮೆಯಿಂದ ಬೆಂಬಲ ಸೂಚಿಸಿದ್ದರು.

ಸಂವಿಧಾನದ ಚೌಕಟ್ಟಿನಲ್ಲೇ ಸಾಫಲ್ಯ ಗಳಿಸಿದ ಈ ಪ್ರಯತ್ನಗಳಿಗೆ ತಾತ್ವಿಕ ಮನ್ನಣೆ ಮತ್ತು ಸಾಮುದಾಯಿಕ ಸ್ವೀಕೃತಿ ದೊರೆತಿದ್ದು 2002ರ ಗುಜರಾತ್ ಹತ್ಯಾಕಾಂಡದಲ್ಲಿ. ಈ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾ ಮುನ್ನಡೆದರೆ 2014ರ ನರೇಂದ್ರ ಮೋದಿಯ ಪೀಠಾರೋಹಣದ ಉದ್ದಿಶ್ಯಗಳು ಸ್ಪಷ್ಟವಾಗುತ್ತವೆ. ಮಂಡಸೂರಿನ ರೈತರ ಹತ್ಯೆ, ದೇಶಾದ್ಯಂತ ಜ್ವಾಲೆಯಂತೆ ಹರಡುತ್ತಿರುವ ದ್ವೇಷಾಸೂಯೆಗಳ ಅಲೆ ಇದಕ್ಕೆ ಸಾಕ್ಷಿಯಷ್ಟೆ.

ಜಾಗತಿಕ ಮಟ್ಟದಲ್ಲಿ ನೋಡುವುದಾದರೆ 1970ರ ದಶಕ ಪುರೋಗಾಮಿ ಜನಪರ ಹೋರಾಟಗಳಿಗೆ ವೇದಿಕೆಯನ್ನು ಒದಗಿಸಿದ ದಶಕವಾಗಿತ್ತು. ಭಾರತದಲ್ಲೂ ಈ ಹೋರಾಟಗಳ ಮತ್ತು ಬೆಳವಣಿಗೆಗಳ ಪರಿಣಾಮಗಳು ವಿವಿಧ ಸ್ವರೂಪಗಳಲ್ಲಿ ವ್ಯಕ್ತವಾಗಿತ್ತು. ಬೆಲೆ ಏರಿಕೆಯ ವಿರುದ್ಧ ಹೋರಾಟ, ದಲಿತ ಚಳುವಳಿ, ಸಾಹಿತ್ಯ ಕ್ಷೇತ್ರದ ಬಂಡಾಯ ಚಳುವಳಿ, ನಕ್ಸಲ್ ಚಳುವಳಿ ಮತ್ತು ಮುಖ್ಯವಾಗಿ ವಿದ್ಯಾರ್ಥಿಗಳ ಹೋರಾಟಗಳು ಈ ದಶಕದ ಆಕರ್ಷಣೆಯಾಗಿತ್ತು. ಅಮೆರಿಕಾದ ವಿರುದ್ಧ ವಿಯಟ್ನಾಮ್‍ನ ವಿಜಯ, ಭಾರತ ಮತ್ತು ಪಾಕಿಸ್ತಾನದ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಹರಡಿದ್ದ ಕ್ಷೋಭೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾಗುತ್ತಿದ್ದ ಸಾಮ್ರಾಜ್ಯಶಾಹಿಗಳ ಹಿಡಿತ, ಈ ಎಲ್ಲ ವಿದ್ಯಮಾನಗಳು ಈ ದಶಕದ ಹೋರಾಟಗಳಿಗೆ ಸ್ಪೂರ್ತಿಯಾಗಿದ್ದವು.

ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾರತೀಯ ಸಮಾಜದಲ್ಲಿ ಏರ್ಪಟ್ಟ ವಿಪ್ಲವಕಾರಿ ಬದಲಾವಣೆಗಳಿಗೆ ಜನರ ಪ್ರತಿಸ್ಪಂದನ ಸ್ವಲ್ಪ ಮಟ್ಟಿಗೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದೂ 70ರ ದಶಕದ ವೈಶಿಷ್ಟ್ಯವಾಗಿತ್ತು. ಪ್ರಜಾತಾಂತ್ರಿಕ ಹೋರಾಟಗಳು ಉಗ್ರ ಸ್ವರೂಪ ತಾಳಿದಂತೆಲ್ಲಾ ತಮ್ಮ ಅಧಿಕಾರಕ್ಕೆ ಸಂಚಕಾರ ಒದಗಿಬರುವ ಸಾಧ್ಯತೆಗಳನ್ನು ಕಂಡುಕೊಂಡ ಸರ್ಕಾರ ತುರ್ತುಪರಿಸ್ಥಿತಿ ಹೇರುವ ಮೂಲಕ ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಮುಂದಾಗಿತ್ತು.

ಪ್ರಸ್ತುತ ಸಂದರ್ಭದಲ್ಲಿ ಭಾರತೀಯ ಸಮಾಜ ಮತ್ತೊಂದು ಮನ್ವಂತರದ ಹಾದಿಯಲ್ಲಿ ಸಾಗುತ್ತಿದೆ. 70ರ ದಶಕದಲ್ಲಿದ್ದ ಜಾಗತಿಕ ಸನ್ನಿವೇಶಕ್ಕೂ, ಪ್ರಸ್ತುತ ಸಂದರ್ಭಕ್ಕೂ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲವೆಂದೇ ಹೇಳಬಹುದು. 90ರ ದಶಕದಲ್ಲಿ ಪ್ರಾರಂಭಗೊಂಡ ಜಾಗತೀಕರಣ ಪ್ರಕ್ರಿಯೆಯ ನಾಲ್ಕನೆಯ ಹಂತ ಜಾರಿಯಲ್ಲಿರುವ ಈ ಸಂದರ್ಭದಲ್ಲಿ, ಸಮಾಜದ ಎಲ್ಲ ವರ್ಗಗಳೂ ಸಾಮಾಜಿಕ ಅಸ್ಥಿರತೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿವೆ. ಜನತೆಯ ಈ ಸಾರ್ವತ್ರಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಆಳುವ ವರ್ಗಗಳು ವಿಫಲವಾಗಿರುವುದು ಮಾತ್ರವಲ್ಲದೆ, ತಮ್ಮ ರಾಜಕೀಯ ಪ್ರಾಬಲ್ಯ, ಅಧಿಕಾರವನ್ನು ಉಳಿಸಿಕೊಳ್ಳಲು ದಮನಕಾರಿ ನೀತಿಗಳನ್ನು ಅನುಸರಿಸುತ್ತಿವೆ.

ಜನತೆಯ ಅಹಿಂಸಾತ್ಮಕ ಪ್ರಜಾತಾಂತ್ರಿಕ ಹೋರಾಟಗಳಿಗೂ ಹಿಂಸೆಯ ಮೂಲಕವೇ ಸ್ಪಂದಿಸುವುದು ಸಾಮಾನ್ಯ ಸಂಗತಿಯಾಗಿದೆ. ಒಂದೆಡೆ ಜಾಗತೀಕರಣ ಪ್ರಕ್ರಿಯೆಯಲ್ಲಿ ಶ್ರಮಜೀವಿ ವರ್ಗಗಳು ಸಾವಿಗೆ ಶರಣಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರಗಳ ಗುಂಡೇಟಿಗೆ, ದಬ್ಬಾಳಿಕೆಗೆ, ಕರಾಳ ಶಾಸನಗಳಿಗೆ ಬಲಿಯಾಗುತ್ತಿದ್ದಾರೆ. ದೇಶದಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಹೇರಲಾಗಿಲ್ಲವಾದರೂ, ಅನೇಕ ರಾಜ್ಯಗಳಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜಾರಿಯಲ್ಲಿರುವ ಕರಾಳ ಶಾಸನಗಳು ಜನರ ಪ್ರಜಾತಾಂತ್ರಿಕ ಹೋರಾಟಗಳನ್ನು ಹತ್ತಿಕ್ಕುವ ಅಸ್ತ್ರಗಳಾಗಿವೆ.

ಪ್ರಜಾತಂತ್ರದ ಚೌಕಟ್ಟಿನಲ್ಲೇ, ಸಂವಿಧಾನದ ಪರಿಧಿಯಲ್ಲೇ 1975ರ ಸಂದರ್ಭ ಮರುಕಳಿಸಲು ಸಾಧ್ಯ ಎಂಬ ಸ್ಪಷ್ಟ ಸಂದೇಶವನ್ನು ನರೇಂದ್ರ ಮೋದಿ ಸರ್ಕಾರ ಸಾರ್ವಭೌಮ ಜನತೆಗೆ ನೀಡಿದೆ. ಪ್ರತಿರೋಧದ ದನಿಗಳ ವಿಘಟನೆ, ಅವಕಾಶವಾದಿ ರಾಜಕಾರಣ ಮತ್ತು ನವ ಉದಾರವಾದದ ಭೀಕರ ದುಷ್ಪರಿಣಾಮಗಳ ಅವಗಣನೆ ಇವೆಲ್ಲವೂ ಪ್ರಭುತ್ವವನ್ನು ಬಲಪಡಿಸುತ್ತಿವೆ. 1975ರ ಕರಾಳ ದಿನಗಳು ಮರುಕಳಿಸಿದ್ದೇ ಆದರೆ ಇದೇ ಕಾಲಘಟ್ಟದ ಸಮಗ್ರ ಕ್ರಾಂತಿ ಏಕೆ ಸಾಧ್ಯವಿಲ್ಲ ? ಇಚ್ಚಾಶಕ್ತಿ ಇರಬೇಕಷ್ಟೆ.

‍ಲೇಖಕರು admin

25 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading