ಡಾ. ಅಪ್ಪಗೆರೆ ಸೋಮಶೇಖರ್
ದಕ್ಷಿಣ ಭಾರತದ ದಲಿತ ಚಳವಳಿಗೆ ಪುರಾತನವಾದ ಚಾರಿತ್ರಿಕ ಹಿನ್ನೆಲೆ ಇದೆ. ಸಾಮಾಜಿಕ ಪರಿವರ್ತನ ಚಳವಳಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಅನೇಕ ಮಹತ್ವದ ದಲಿತ ಹೋರಾಟಗಾರರಲ್ಲಿ; ಕೇರಳಾದ ಅಯ್ಯನ್ ಕಾಳಿ, ತಮಿಳುನಾಡಿನ ರಟ್ಟೆಮಲೈ ಶ್ರೀನಿವಾಸನ್, ಕರ್ನಾಟಕದ ದೇವರಾಯ ಇಂಗಳೆ, ಬಿ. ಶ್ಯಾಮಸುಂದರ್ ಮುಂತಾದವರು ಪ್ರಮುಖರು. ‘ಪಂಡಿತ ಅಯೋತಿದಾಸ್’ ತಮಿಳುನಾಡಿನ ದಲಿತ ಹೋರಾಟಗಾರರಲ್ಲಿ ಅತಿ ಮುಖ್ಯರಾಗಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಹೋರಾಟವನ್ನು ಸಮಪ್ರಮಾಣದಲ್ಲಿ ಕಟ್ಟಿ ಬೆಳೆಸಿದ ಇವರು ‘ತಮಿಳು ಬೌದ್ಧ ದಲಿತ ಹೋರಾಟಗಾರ’ ಎಂದೇ ಹೆಸರಾದವರು. ತಮ್ಮ ಹೋರಾಟ, ವ್ಯಕ್ತಿತ್ವ, ಚಿಂತನೆಗಳ ಮೂಲಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್ ಅವರನ್ನೂ ಒಳಗೊಂಡಂತೆ ಅನೇಕ ಹೋರಾಟಗಾರರು ಹಾಗೂ ಸಮಾಜಿಕ ಚಳವಳಿಗಳನ್ನು ಪ್ರಭಾವಿಸಿದವರು. ಇವರು ರೂಪಿಸಿದ ಚಳವಳಿ ಹಾಗೂ ಚಿಂತನೆಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎನಿಸುತ್ತವೆ.
ಬಿ. ಸುಜ್ಞಾನಮೂರ್ತಿ ಅವರು ತಮಿಳು ಬೌದ್ಧ ದಲಿತ ಹೋರಾಟಗಾರ ಅಯೋತಿದಾಸ್(ಪಲ್ಲವ ಪ್ರಕಾಶನ, ಚನ್ನಪಟ್ಟಣ, 2012) ಎಂಬ ಕೃತಿಯ ಮೂಲಕ ಅಯೋತಿದಾಸ್ ಅವರ ಚಿಂತನೆ ಹಾಗೂ ಹೋರಾಟವನ್ನು ಕನ್ನಡಕ್ಕೆ ಪರಿಚಯಿಸಿದ್ದಾರೆ. ಮೊದಲು ಇಂಗ್ಲೀಷಿನಲ್ಲಿ ‘ಜಿ. ಎಲೋಶಿಯಸ್, ಗೀತ, ಎಸ್. ವಿ. ರಾಜಾದುರೈ’ ಅವರು ರಚಿಸಿದ ಈ ಕೃತಿಯನ್ನು ‘ಕಾತ್ಯಾಯನಿ’ ಎಂಬುವರು ತೆಲುಗಿಗೆ ಅನುವಾದಿಸಿದರು. ತೆಲುಗಿನ ಈ ಕೃತಿಯನ್ನೆ ‘ಬಿ. ಸುಜ್ಞಾನಮೂರ್ತಿ’ ಕನ್ನಡೀಕರಿಸಿದ್ದಾರೆ.
ಹೊಲಗೇರಿಗಳು ಇರುವಷ್ಟು ಕಾಲ ಈ ದೇಶವನ್ನು ನಮ್ಮ ತಾಯ್ನೆಲವೆಂದು ಹೇಗೆ ಪ್ರೀತಿಸಬಲ್ಲೆವು ಎಂದು ತೀಕ್ಷ್ಣವಾಗಿ ಬ್ರಾಹ್ಮಣಶಾಹಿ ಹಿಂದೂ ವ್ಯವಸ್ಥೆಯನ್ನು ಪ್ರಶ್ನಿಸಿದ ಅಯೋತಿದಾಸ್ ಅವರು 1845 ಮೇ 20 ರಂದು ಕೊಯಮತ್ತೂರು ಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ‘ಕಂದಸಾಮಿ’ ಪರಯಾ ಎಂಬ ಅಸ್ಪೃಶ್ಯ ಜಾತಿಗೆ ಸೇರಿದವರು. ಅಯೋತಿದಾಸ್ರ ಮೊದಲ ಹೆಸರು ಕಥವಾರಯನ್. ಇದು ಇವರ ತಂದೆ ತಾಯಿ ಇವರಿಗಿಟ್ಟ ಹೆಸರು. ಕಾಲಾನಂತರದಲ್ಲಿ ತಮ್ಮ ಗುರುಗಳ ಹೆಸರಾದ ಅಯೋತಿದಾಸ್ ಎಂಬುದನ್ನೆ ತಮ್ಮ ಹೆಸರನ್ನಾಗಿ ಸ್ವೀಕರಿಸಿದರು. ಬಾಲ್ಯವನ್ನು ನೀಲಗಿರಿಯಲ್ಲಿ ಕಳೆದ ಇವರು, 1870ರಲ್ಲಿ ನೀಲಗಿರಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದ ತೋಡ ಹಾಗೂ ಇತರೆ ಬುಡಕಟ್ಟು ಜನರನ್ನು ಸಂಘಟಿಸಿ ಅವರ ಅಭಿವೃದ್ಧಿಗಾಗಿ ಹೋರಾಟವನ್ನು ರೂಪಿಸಿದವರು.
ಸಿದ್ಧವೈದ್ಯ ನಿಪುಣರಾದ ಇವರು ಮದ್ರಾಸಿನಲ್ಲಿ ನೆಲೆಸಿದ್ದರು. ಅಯೋತಿದಾಸ್ ಶೋಷಿತ ಸಮುದಾಯದ ಧಾರ್ಮಿಕ ಚಳವಳಿಯ ನೇತಾರ. ಬ್ರಾಹ್ಮಣಶಾಹಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ತೀವ್ರವಾಗಿ ಖಂಡಿಸುತ್ತಿದ್ದ ಇವರು, ದಲಿತರ ಧಾರ್ಮಿಕ ಅಸ್ಮಿತೆಯನ್ನು ಬೌದ್ಧಧಮ್ಮದಲ್ಲಿ ಕಂಡುಕೊಂಡವರು. ಅಂಬೇಡ್ಕರ್ ಅವರಿಗಿಂತ ಮೊದಲೇ 1886ರಲ್ಲೆ ‘ಅಸ್ಪೃಶ್ಯರು ಹಿಂದೂಗಳಲ್ಲ’ ಎಂಬ ಕ್ರಾಂತಿಕಾರಿ ನಿಲುವನ್ನು ಸಾರಿದ ಇವರು, 1891ರಲ್ಲಿ ‘ದ್ರಾವಿಡ ಮಹಾಜನ ಸಭಾ’ವನ್ನು ಸ್ಥಾಪಿಸಿ, ಅಂದಿನ ಜನಗಣತಿಯಲ್ಲಿ ಅಸ್ಪೃಶ್ಯರು ಹಿಂದೂಗಳು ಎಂದು ನಮೂದಿಸದೆ, ಜಾತಿಯಿಲ್ಲದ ದ್ರಾವಿಡರು ಎಂದು ದಾಖಲಿಸಬೇಕೆಂದು ದಲಿತರಿಗೆ ಕರೆಕೊಟ್ಟರು.
19ನೇ ಶತಮಾನದಿಂದ ಈ ದೇಶದ ಕೆಳಜಾತಿ, ಆದಿವಾಸಿಗಳು ಹಿಂದೂ ಧರ್ಮವನ್ನು ನಿರಾಕರಿಸಿ ಅನ್ಯ ಧರ್ಮಗಳಿಗೆ ಮತಾಂತರಗೊಂಡ ಸಂಗತಿಯನ್ನು ಈ ಕೃತಿಯಲ್ಲಿ ಚಾರಿತ್ರಿಕವಾಗಿ ಗುರುತಿಸಲಾಗಿದೆ. ಕೇರಳದ ಇಝವಲದ ‘ಶ್ರೀ ನಾರಾಯಣಗುರು ಧರ್ಮಪರಿಪಾಲನ ಚಳವಳಿ’; ತಮಿಳು ನಾಡಿನ ಶನಾರರಲ್ಲಿ ಮುತ್ತುಕುಟ್ಟಿಸ್ವಾಮಿ ಆರಂಭಿಸಿದ ‘ಅಯ್ಯವಾಜಿ ಚಳವಳಿ’; ಆಂಧ್ರಪ್ರದೇಶದ ಅಸ್ಪೃಶ್ಯರು ಪರಿಪಾಲಿಸಿದ ‘ರಾಜಯೋಗಿ, ನರ್ಸಯ್ಯ ಭಕ್ತಿಶಾಖೆ’; ಒರಿಸ್ಸಾದ ಬಾವರಿಗಳು ಅನುಸರಿಸಿದ ‘ಭೀಮಾಬಾಯಿ, ಮಹಿಮಧರ್ಮ’ ಸಂಪ್ರದಾಯಗಳು; ಬಂಗಾಳದ ನಾಮಶೂದ್ರರು, ರಾಜ್ಬನ್ಸೀಗಳು, ಬರ್ಮಾಲಿ, ಕಾಯಬ್ರತುಗಳು ಕಟ್ಟಿದ ‘ಮತುವಾ ಚಳವಳಿ’; ಪಂಜಾಬ್ನ ಚಮ್ಮಾರರು ರೂಪಿಸಿದ ‘ಆದಿ ಧರ್ಮ ಚಳವಳಿ’; ಬಿಹಾರದ ಮುಂಡಾ ಬುಡಕಟ್ಟಿನ ಜನರ ‘ಬಿರ್ಸಾ ಧರ್ಮ ಚಳವಳಿ’ಗಳು ಮತಾಂತರ, ಧರ್ಮಾಂತರ ಹೋರಾಟದ ಚಾರಿತ್ರಿಕ ನೆಲೆಗಳನ್ನು ಸ್ಪಷ್ಟಪಡಿಸುತ್ತವೆ.
ಮುಂಬೈನ ಮಾಂಗ್, ಮಹಾರ್; ಪಂಜಾಬ್ನ ಛೂರಾ, ಮಝಾಭಿ; ವಾರಣಾಸಿಯ ಡೋಮರು; ಬಿಹಾರದ ಚಮ್ಮಾರರು; ಉತ್ತರ ಪ್ರದೇಶದ ಬಲಿಯಾಗಳು; ಆಂಧ್ರದ ಹೊಲೆಮಾದಿಗರು ತಮಿಳುನಾಡಿನ ಶಾಂಬವ, ಶನಾರ್, ಪರಯಾರರು ಹಿಂದೂ ಧರ್ಮದಲ್ಲಿನ ಜಾತೀಯತೆಗೆ ಬೇಸತ್ತು, ಕ್ರೈಸ್ತ ಮಿಶನರಿಗಳ ಪ್ರಭಾವಕ್ಕೆ ಒಳಗಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಸಂಗತಿಯನ್ನು ಸಹಾ ಇಲ್ಲಿ ಚರ್ಚಿಸಲಾಗಿದೆ. ಅಂಬೇಡ್ಕರ್ ಅವರು ‘ಹಿಂದೂ ಆಗಿ ಹುಟ್ಟಿದ್ದೇನೆ ಆದರೆ ಹಿಂದೂ ಆಗಿ ಸಾಯಲಾರೆ’ ಎಂದು ಹೇಳಿ ಬೌದ್ಧಧಮ್ಮ ಸ್ವೀಕರಿಸಿದ ಐತಿಹಾಸಿಕ ಘಟನೆಯ ಹಿಂದೆ ಈ ಎಲ್ಲಾ ಚಳವಳಿಗಳ ದಟ್ಟ ಪ್ರಭಾವ ಇರುವುದನ್ನು ಗ್ರಹಿಸಬಹುದು.
ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ತಾನದ ನೆಲೆಗಳನ್ನು ಸಹಾ ಇಲ್ಲಿ ವಿವೇಚಿಸಲಾಗಿದೆ. ಎಡ್ವಿನ್ ಅರ್ನಾಲ್ಡ್ ಬರೆದ ‘ಲೈಟ್ ಆಫ್ ಏಶಿಯಾ’ ಕೃತಿ; 1891ರಲ್ಲಿ ‘ಅನಾಗರಿಕ ಧರ್ಮಪಾಲ’ ಅವರು ಕೊಲಂಬೋದಲ್ಲಿ ಸ್ಥಾಪಿಸಿದ ‘ಮಹಾಬೋಧಿ ಸೊಸೈಟಿ’; 1892ರಲ್ಲಿ ಕಲ್ಕತ್ತಾದ ‘ಯುನೈಟೆಡ್ ಬುದ್ಧಿಸ್ಟ್ ಹವರ್ಲ್ಡ್ ಸಂಸ್ಥೆ ಪ್ರಕಟಿಸುತ್ತಿದ್ದ ‘ಮಹಾಬೋಧಿ’ ಪತ್ರಿಕೆ; ಧರ್ಮಾನಂದ ಕೊಸಾಂಬಿ ಅವರು ಮುಂಬೈನಲ್ಲಿ ಸ್ಥಾಪಿಸಿದ ‘ಬಹುಜನ ವಿಹಾರ’ ಎಂಬ ಬೌದ್ಧ ವಿಹಾರ ಈ ಎಲ್ಲಾ ಸಂಗತಿಗಳು ಸಹಾ ಭಾರತದಲ್ಲಿನ ಬೌದ್ಧ ಧಮ್ಮದ ಪುನರುಜ್ಜೀವನದ ಕಾಯಕದಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ನಿರ್ವಹಿಸಿದ್ದಾವೆ. ಇದಕ್ಕೆ ಪೂರಕವಾಗಿ ಸೂರ್ಯೋದಯ(1869), ಪಂಚಮ(1871), ಸುಗೀರ್ತವಾಸನಿ(1877), ದ್ರವಿಡ ಪಾಂಡ್ಯನ್(1885), ಆಂದ್ರಾರ್ ಮಿತ್ರನ್(1886), ಮಹಾವಿಕಟ ತೂತನ್(1888), ಪರಯನ್(1893), ಇಲ್ಲಾರ ಒಲುಕ್ಕಮ್(1898), ಪೂಲೋಗವ್ಯಾಸನ್(1900), ಒರು ಪೈಸಾ ತಮಿಳನ್(1907), ದ್ರವಿಡ ಕೋಕಿಲಮ್(1907), ತಮಿಳ್ ಪೆಣ್(1916) ಪತ್ರಿಕೆಗಳು ಬುದ್ಧನ ವಿಚಾರಗಳನ್ನು ಪ್ರಕಟಿಸುವ ಮೂಲಕ ಓದುಗರನ್ನು ಎಚ್ಚರಿಸಿ, ಪ್ರಭಾವಿಸಿದ್ದಾವೆ. ರೆವರೆಂಡ್ ಜಾನ್ರತ್ನಂ ಅವರು 1886ರಲ್ಲಿ ಸ್ಥಾಪಿಸಿದ ‘ದ್ರವಿಡಾರ್ ಕಜಗಮ್’; 1891ರಲ್ಲಿ ನೀಲಗಿರಿಯಲ್ಲಿ ಸ್ಥಾಪಿಸಲ್ಪಟ್ಟ ‘ದ್ರವಿಡ ಮಹಾಜನ ಸಭ’; 1892ರಲ್ಲಿ ರಚನೆಯಾದ ‘ಪರಯಾರ್ ಮಹಾಜನ ಸಭ’; ‘ಆದಿ ದ್ರಾವಿಡ ಮಹಾಜನ ಸಭ’ ಸಂಘಟನೆಗಳು ಸಹಾ ಪರಿಣಾಮಕಾರಿಯಾಗಿ ದುಡಿದಿದ್ದಾವೆ. ಇದರ ಅರಿವಿದ್ದ ಅಯೋತಿದಾಸ್ ಅವರು ಬೌದ್ಧ ಧಮ್ಮದ ಪುನರ್ ಪ್ರತಿಷ್ಠಾಪನೆಯ ಹೋರಾಟವನ್ನು ಪ್ರಾಮಾಣಿಕವಾಗಿ ಮುಂದುವರಿಸಿದರು. ಇದಕ್ಕಾಗಿ ತಮಿಳುನಾಡು ಮತ್ತು ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.
ಭಾರತೀಯ ದಲಿತರು ಮೂಲತಃ ದ್ರಾವಿಡರು, ಬೌದ್ಧರು ಎಂಬುದನ್ನು ತಮ್ಮ ಹೋರಾಟದ ಮೂಲಕ ಸಾಬೀತುಪಡಿಸ ಹೊರಟ ಅಯೋತಿದಾಸ್ ಅವರು ಆ ನಿಟ್ಟಿನಲ್ಲಿ ಮೌಲಿಕ ಚರ್ಚೆಯನ್ನು ಹುಟ್ಟುಹಾಕಿದರು. ಮದ್ರಾಸ್ನ ಥಿಯೋಸಾಫಿಕಲ್ ಸೊಸೈಟಿಯ ನಾಯಕರಾಗಿದ್ದ ಎಚ್. ಎಸ್. ಆಲ್ಕಾಟ್ ಅವರನ್ನು 1898ರಲ್ಲಿ ಭೇಟಿಯಾಗಿದ್ದ ಅಯೋತಿದಾಸ್ ಅವರೆದುರು : ಪರಯಾ ಜಾತಿಗೆ ಸೇರಿದ ಜನರು ತಮಿಳುನಾಡಿನ ಮೂಲನಿವಾಸಿಗಳು. ಅಶೋಕ ಚಕ್ರವರ್ತಿಯ ಕಾಲದಲ್ಲೆ ಬೌದ್ಧ ಧರ್ಮವನ್ನು ಸ್ವೀಕರಿಸಿದವರು ಎಂಬುದಾಗಿ ತಮ್ಮ ವಾದವನ್ನು ಮಂಡಿಸುತ್ತಾರೆ. ಅಯೋತಿದಾಸ್ ಅವರು ಪಿ. ಕೃಷ್ಣಸ್ವಾಮಿ ಅವರ ಜೊತೆಗೂಡಿ, ಅದಾಗಲೇ ಅಸ್ತಿತ್ವದಲ್ಲಿದ್ದ ಪರಯಾ ಸಂಘದ ಪ್ರತಿನಿಧಿಗಳಾಗಿ 1898 ಜುಲೈ 1ರಂದು ಬೌದ್ಧ ಧಮ್ಮದ ಹೆಚ್ಚಿನ ಅಧ್ಯಯನಕ್ಕಾಗಿ ಕೊಲಂಬೋಗೆ ತೆರಳುತ್ತಾರೆ. ಪ್ರವಾಸದಿಂದ ಮರಳಿ ಬಂದ ಅಯೋತಿದಾಸ್ ಮದ್ರಾಸ್ನ ರಾಯಪೇಟೆಯಲ್ಲಿ ಸಖ್ಯ ಬೌದ್ಧ ಸಮಾಜವನ್ನು ಸ್ಥಾಪಿಸಿದರು. ತಮ್ಮನ್ನು ತಾವು ಬೌದ್ಧರೆಂದು ಪ್ರಕಟಿಸಿಕೊಳ್ಳುವುದೆಂದರೆ, ವರ್ತಮಾನದಲ್ಲಿರುವ ಗುಲಾಮಗಿರಿಯನ್ನು ಧಿಕ್ಕರಿಸುವುದು, ಭವಿಷ್ಯತ್ತಿನಲ್ಲಿ ವಿಮೋಚನೆಯೆಡೆಗೆ ಸಾಗಿ ಹೋಗುವುದು ಎಂಬುದನ್ನು ಸ್ಪಷ್ಟಪಡಿಸಿದರು. ರೆವರೆಂಡ್ ಜಾನ್ರತ್ನಂ ಅವರ ಜೊತೆ ಸೇರಿ ‘ದ್ರವಿಡ ಪಾಂಡಿಯನ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದ ಇವರು, 1891ರಲ್ಲಿ ನೀಲಗಿರಿಯಲ್ಲಿ ಅಸ್ತಿತ್ವಕ್ಕೆ ಬಂದ ‘ದ್ರವಿಡ ಮಹಾಜನ ಸಭ’ದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಅಯೋತಿದಾಸ್ ಅವರು ದ್ರವಿಡ ಮಹಾಜನ ಸಭದ ಮೂಲಕ ಅಂದಿನ ರಾಷ್ಟ್ರೀಯ ಕಾಂಗ್ರೇಸ್ಗೆ 1891 ಡಿಸೆಂಬರ್ 21ರಂದು ಮನವಿ ಪತ್ರದ ಮೂಲಕ ಈ ಕೆಳಕಂಡ ಶೋಷಿತಪರ ಬೇಡಿಕೆಗಳನ್ನ ಸಲ್ಲಿಸುತ್ತಾರೆ :
1 .ಅಸ್ಪೃಶ್ಯರನ್ನು ‘ಪರಯಾರ’ರೆಂದು ಕರೆಯುವುದು ಉಚಿತವಲ್ಲ. ಪರಯಾ ಎಂದು ಅವಮಾನಿಸುವುದನ್ನು ಅಪರಾಧವೆಂದು ಪರಿಗಣಿಸಿ ಮಾನನಷ್ಟ ಮೊಕದ್ದಮೆ ಶಿಕ್ಷೆ ವಿಧಿಸುವ ಕಾನೂನು ರೂಪಿಸಬೇಕು.
2. ಅಸ್ಪೃಶ್ಯರ ಶಿಕ್ಷಣಕ್ಕಾಗಿ ಉಚಿತ ಶಾಲೆಗಳನ್ನು ಸ್ಥಾಪಿಸಬೇಕು. ವಿದ್ಯಾರ್ಥಿಗಳ ಶುಲ್ಕವನ್ನು ಮಾಫಿ ಮಾಡಬೇಕು.
3. ಮೆಟ್ರಿಕ್ಯುಲೇಶನ್ ಪಾಸಾದ ಅಸ್ಪೃಶ್ಯ ವಿದ್ಯಾವಂತರಿಗೆ ಸರ್ಕಾರಿ ನೌಕರಿ ಕಲ್ಪಿಸಬೇಕು.
4. ಮುನ್ಸಿಪಲ್ ಕಾರ್ಪೋರೇಷನ್, ಗ್ರಾಮ ಸಮಿತಿಗಳಿಗೆ ಅಸ್ಪೃಶ್ಯರನ್ನ ಪ್ರತಿನಿಧಿಗಳನ್ನಾಗಿ ನೇಮಿಸಬೇಕು.
5. ಅಸ್ಪೃಶ್ಯರು ಸಾರ್ವಜನಿ ಕೆರೆ ಬಾವಿ, ದೇವಾಲಯ, ಕೋರ್ಟು, ಕಚೇರಿ ಪ್ರವೇಶದ ನಿರ್ಬಂಧನೆಯನ್ನು ತೊಲಗಿಸಬೇಕು.
6. ಗೋಮಾಳ ಭೂಮಿಯನ್ನು ಪಂಚಮರಿಗೆ ಹಂಚಬೇಕು.
-ಎಂಬುದಾಗಿ ಶೋಷಿತರ ಸಾಮಾಜಿಕ ನ್ಯಾಯದ ಅಗತ್ಯತೆಯನ್ನು ಕುರಿತು ಒತ್ತಾಯಿಸುತ್ತಾರೆ.
ಬುದ್ಧ : ಹಗಲಿರುಳನ್ನು ಬೆಳಗಿಸುವ ಕಾಂತಿ ಎಂಬ ಕರಪತ್ರದ ಮೂಲಕ, ತಮಿಳು ಬೌದ್ಧ ಚಳವಳಿಯನ್ನು ಕುರಿತ ತಮ್ಮ ಯೋಜನೆಯನ್ನು ವಿವರಿಸಿದ ಅಯೋತಿದಾಸ್ ಅವರ ಹೋರಾಟ, ಚಿಂತನೆಯ ಪ್ರಭಾವಕ್ಕೆ ಒಳಗಾದ ದಲಿತೇತರರಲ್ಲಿ ‘ಪ್ರೊ. ಲಕ್ಷ್ಮಿನರಸು, ಸಿಂಗಾರವೇಲು ಚೆಟ್ಟಿಯಾರ್, ಎ. ಎಸ್. ಮುದಲಿಯಾರ್, ಸ್ವಪ್ನೇಶ್ವರಿ ಅಮ್ಮಾಳ್, ಗೋಪಾಲ್ ಚೆಟ್ಟಿಯಾರ್’ ಪ್ರಮುಖರು. ಬೌದ್ಧಧಮ್ಮ ಪ್ರಸಾರಕ್ಕಾಗಿ ಸ್ಥಾಪಿಸಿದ್ದ ‘ಸಖ್ಯ ಬೌದ್ಧ ಸಮಾಜ’ ಸಂಸ್ಥೆಯನ್ನು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ರೂಪಿಸಿದ್ದ ಅಯೋತಿದಾಸ್ ಅವರು, ಮುಸ್ಲೀಂ, ಕ್ರೈಸ್ತ ಧರ್ಮಗಳಿಂದ ಬಂದವರನ್ನು ಸಹಾ ಈ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಿಸುತ್ತಿದ್ದರು. ತಮ್ಮ ಧರ್ಮ ಪ್ರಧಾನವಾಗಿ ಶೋಷಿತ ಜಾತಿಗಳ ವಿಮೋಚನೆಯ ಗುರಿಯಿಂದ ಕೆಲಸ ಮಾಡಿದರೂ, ಒಟ್ಟು ಸಮಾಜದ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಳ್ಳುತ್ತದೆ ಎಂಬುದನ್ನು ಸ್ಪಷ್ಟಪಡಿಸಿದರು. ಅಯೋತಿದಾಸ್ರ ನಿರ್ದೇಶನದಂತೆ, 1907ರಲ್ಲಿ ಕೋಲಾರದ ಕೆ. ಜಿ. ಎಫ್. ಮತ್ತು ಬೆಂಗಳೂರಿನಲ್ಲೂ ‘ಸಖ್ಯ ಬೌದ್ಧ ಸಮಾಜ’ದ ಶಾಖೆಗಳು ಸ್ಥಾಪನೆಯಾದವು. ಅವುಗಳ ನೇತೃತ್ವದಲ್ಲಿ ಬೌದ್ಧ ವಿದ್ಯಾಲಯ, ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು. ಇವುಗಳನ್ನ ನಿರ್ವಹಿಸುತ್ತಿದ್ದವರು ಇಯಕ್ಕಣ್ಣು ಪುಲವಾರ್ ಅವರು. ಸ್ವತಃ ಕವಿಗಳು, ಗಾಯಕರು ಆಗಿದ್ದ ಇವರು ಬುದ್ಧನ ಬೋಧನೆ ಹಾಗೂ ಜೀವನವನ್ನು ಕುರಿತು ಹಾಡು ಬರೆದು ಹಾಡುತ್ತಿದ್ದರು. ಇವರೆ ಸ್ಥಾಪಿಸಿದ ‘ಬೌದ್ಧ ಸಂಗೀತ ಸಭೆ’ ಹಲವು ಶ್ರೇಷ್ಠ ಗಾಯಕರನ್ನು ಬೆಳಕಿಗೆ ತಂದಿತು. ಈ ಎಲ್ಲದರ ಪ್ರಭಾವದ ಹಿನ್ನೆಲೆಯಲ್ಲಿ ಕೆ. ಜಿ. ಎಫ್. ನಲ್ಲಿ 1911ರಲ್ಲಿ ‘ಬೌದ್ಧ ಯುವಜನ ಸಂಘ’ ಸ್ಥಾಪನೆಯಾಯಿತು.
ಈ ಸಂಘದ ವತಿಯಿಂದ ‘ಧಮ್ಮ ಸಹಾಯ ನಿಧಿ’ಯನ್ನು ಸ್ಥಾಪಿಸಿ ಅನೇಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ನೀಡಲಾರಂಭಿಸಿತು. ‘ಒರು ಪೈಸಾ ತಮಿಳನ್’ ಪತ್ರಿಕೆಗಾಗಿ ಪ್ರಿಂಟಿಂಗ್ ಪ್ರೆಸ್ ಖರೀದಿಸುವಲ್ಲಿ ಕೂಡ ಕೆ.ಜಿ.ಎಫ್.ನ ಶಾಖೆ ಹಣ ಸಹಕಾರ ನೀಡಿದೆ. ಕೆ. ಜಿ. ಎಫ್. ನ ಸಖ್ಯ ಬೌದ್ಧ ಸಮಾಜದ ಅಂದಿನ ಸದಸ್ಯರಾಗಿದ್ದ ಸಿ. ಲಿಂಗಯ್ಯ ಅವರು ಆ ದಿನಗಳಲ್ಲೇ ಸಿಲೋನಿನ ಮಾಲಿಕಕಾಂಡ ವಿಹಾರಕ್ಕೆ ತೆರಳಿ ಪಾಳಿ ಭಾಷೆ ಕಲಿತು ಬರುತ್ತಾರೆ. 1911ರ ನಂತರ ಅಪ್ಪಾದುರೈ ಅವರು ಕೋಲಾರ ಶಾಖೆಯ ಜವಾಬ್ದಾರಿಯನ್ನು ಕೈಗೆತ್ತುಕೊಂಡು ಅಯೋತಿದಾಸ್ ನಂತರ ಬೌದ್ಧ ಚಳವಳಿಯನ್ನು ಮುಂದುವರಿಸಿದರು. ಇದರ ಪ್ರಭಾವದ ಹಿನ್ನೆಲೆಯಲ್ಲಿ ಎ. ಪಿ. ಪೆರಿಯಸಾಮಿ ಪುಲವಾರ್ ಮತ್ತು ಎಂ. ರಘುವಾರ್ ಅವರು ತಿರುಪತ್ತೂರ್ನಲ್ಲಿ ಬೌದ್ಧ ಸಮಾಜದ ಶಾಖೆಯನ್ನು ಸ್ಥಾಪಿಸಿದರು. 1907 ರಿಂದ 1914ರವರೆಗಿನ ಕಾಲಘಟ್ಟವನ್ನು ಸಖ್ಯ ಬೌದ್ಧ ಚಳವಳಿಯ ವಿಸ್ತರಣೆಯ ಹಂತವೆಂದೆ ಚರಿತ್ರೆಯಲ್ಲಿ ಗುರುತಿಸಲಾಗಿದೆ. ಈ ಕಾಲಘಟ್ಟದಲ್ಲೆ ಬೌದ್ಧ ಚಳವಳಿ ದೇಶ-ವಿದೇಶಗಳಲ್ಲಿ ವ್ಯಾಪಿಸಿತು. ಸಿಕಂದರಾಬಾದ್, ನಾಗಪುರ, ಪುಣೆ, ದಕ್ಷಿಣ ಆಫ್ರಿಕಾ, ಎಟಿಕೋಲಾ, ರಂಗೂನ್ಗಳಲ್ಲಿ ಸಖ್ಯ ಬೌದ್ಧ ಸಮಾಜದ ಶಾಖೆಗಳು ಸ್ಥಾಪನೆಯಾದವು.
1907 ಜೂನ್ 19ರಂದು ಅಯೋತಿದಾಸ್ ಅವರ ಸಂಪಾದಕತ್ವದಲ್ಲಿ ‘ಒರು ಪೈಸಾ ತಮಿಳನ್’ ಎಂಬ ತಮಿಳು ವಾರಪತ್ರಿಕೆಯನ್ನು ರಾಯಪೇಟೆಯ ಸಖ್ಯ ಬೌದ್ಧ ಸಮಾಜದ ಕಾರ್ಯಲಯದಿಂದ ಪ್ರಕಟಿಸಲಾಯಿತು. ಪತ್ರಿಕೆಯ ಧ್ಯೇಯವನ್ನು ಕುರಿತು : ಕೆಲವು ತತ್ವಶಾಸ್ತಜ್ಞರು, ಸಮಾಜಶಾಸ್ತ್ರಜ್ಞರು, ಗಣಿತಶಾಸ್ತ್ರಜ್ಞರು, ಸಾಹಿತಿಗಳು ಸೇರಿ ಸಾಮಾನ್ಯ ಜನರಿಗೆ ನ್ಯಾಯವನ್ನು ಒಳ್ಳೆಯ ಮಾರ್ಗವನ್ನು ಮತ್ತು ಸತ್ಯವನ್ನು ಬೋಧಿಸುವ ಉದ್ದೇಶದಿಂದ ಈ ‘ಒರು ಪೈಸಾ ತಮಿಳನ್’ ಪತ್ರಿಕೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಆರಂಭದ ಸಂಚಿಕೆಯಲ್ಲೆ ಸ್ಪಷ್ಟಪಡಿಸಿದರು. ಕೆ.ಜಿ.ಎಫ್., ಬೆಂಗಳೂರು, ತಿರುಪತ್ತೂರು, ರಂಗೂನ್, ದಕ್ಷಿಣ ಆಫ್ರಿಕಾದಿಂದ ಪತ್ರಿಕಾ ಪ್ರತಿನಿಧಿಗಳು ತಪ್ಪದೆ ವರದಿಗಳನ್ನ ಕಳುಹಿಸುತ್ತಿದ್ದರು. ಅಯೋತಿದಾಸ್ ಅವರು ಬರೆಯುತ್ತಿದ್ದ ಸಂಪಾದಕೀಯ ಬರಹಗಳು ಹೊಸ ಆಲೋಚನೆ, ಚರ್ಚೆಗಳನ್ನು ಹುಟ್ಟುಹಾಕಿದವು. ತಮಿಳು ಮೂಲನಿವಾಸಿಗಳ ಪರಂಪರೆ ಹಾಗೂ ಬೌದ್ಧ ಚಿಂತನೆಗಳನ್ನು ಕುರಿತು ಇವರು ಬರೆದ ‘ಪೂರ್ವ ತಮಿಳನ್ ಒಲ್ಲಿ’ ಎಂಬ ಧಾರವಾಹಿ ಸ್ವರೂಪದ ಬರಹವೇ 1921ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಇಂದ್ರಾರ್ ದೇಶದಲ್ಲಿ ಬೌದ್ಧ ಪರ್ವ ದಿನಗಳು(1923); ಜಾತಿಪದ್ಧತಿ-ಹುಟ್ಟು ಬೆಳವಣಿಗೆ; ಯತಾರ್ಥ ಬ್ರಾಹ್ಮಣರು-ಸುಳ್ಳು ಬ್ರಾಹ್ಮಣರು; ಪೌರಾಣಿಕ ಕತೆಗಳಲ್ಲಿನ ಸತ್ಯಾಸತ್ಯತೆಗಳು ಮೊದಲಾದ ಅಯೋತಿದಾಸ್ ಅವರ ಬರಹಗಳೆಲ್ಲ ಅವರು ತಮಿಳನ್ ಪತ್ರಿಕೆಗೆ ಬರೆದ ಬರಹಗಳೆ ಆಗಿವೆ. ಇವುಗಳಲ್ಲದೆ ಅಯೋತಿದಾಸ್ ಅವರು ತಮಿಳಿನಲ್ಲಿ : ಕೊನೆಯಿಲ್ಲದ ಬೆಳಕು(1898); ಜಾತಿಗಳ ಅವತರಣೆ(1912); ಆದಿವೇದಂ(1912); ಅಂಬಿಕೈ ಅಮ್ಮನ್ ಚರಿತ್ರೆ(1921); ವಿವಾಹ ಧರ್ಮ ವ್ಯಾಖ್ಯಾನ(1926); ನಂದನ ಚರಿತ್ರೆಯಲ್ಲಿ ಅಭೂತ ಕಲ್ಪನೆಗಳು(1930); ಮುರುಗನ್ ಚರಿತ್ರೆ(1932); ವೇಷ ಬ್ರಾಹ್ಮಣ ಚರಿತ್ರೆ(1932); ಯಥಾರ್ಥ ಬ್ರಾಹ್ಮಣ ಚರಿತ್ರೆ(1932); ಕಪಾಲೇಶನ ಮೇಲೆ ಚಾರಿತ್ರಿಕ ಸಂಶೋಧನೆ(1932); ವಿಭೂತಿ ಸಂಶೋಧನೆ(1932); ತಿರುಕ್ಕುರುಳ್ ದೈವ ಚಿಂತನೆ(1950); ಹರಿಶ್ಚಂದ್ರನ ಅಸತ್ಯಗಳು(1950); ತಿರುವಳ್ಳುವರ್ ಚರಿತ್ರೆ(1950); ಬೌದ್ಧ ಧರ್ಮ : ಪ್ರಶ್ನೆಗಳು-ಉತ್ತರಗಳು(1955); ಸಖ್ಯ ಮಹಾಮುನಿ(1977) -ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ. ‘ಇಂದ್ರಾರ್ ದೇಶ ಚರಿತೆ(1957)’ ಬರಹದಲ್ಲಿ ಅಯೋತಿದಾಸ್ ಅವರು, ಪ್ರಾಚೀನ ಬೌದ್ಧ ಚರಿತ್ರೆಯನ್ನು ಕುರಿತು ಹೇಳುತ್ತ : ಪಂಚೇಂದ್ರಿಯಗಳನ್ನು ಗೆದ್ದ ಬುದ್ಧನ ಹೆಸರಿನಲ್ಲಿ ಭಾರತವನ್ನು ಮೊದಲು ‘ಇಂದ್ರಾರ್ ದೇಶ’ ಎಂದು ಕರೆಯಲಾಗುತ್ತಿತ್ತು. ಜಾತಿಭೇದಗಳು ನಾಶವಾಗಿ, ಶ್ರಮಜೀವಿಗಳಿಗೆ ಒಳ್ಳೆಯ ಬದುಕು ಸಿಕ್ಕಾಗಲೇ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂತೆಂದು ಗುರುತಿಸಬೇಕೆಂದು ಪ್ರತಿಪಾದಿಸಿದ್ದಾರೆ. ಇದೇ ಪತ್ರಿಕೆಯನ್ನು ಕೆ.ಜಿ.ಎಫ್.ನ ಶಾಖೆಯವರು 1908ರಲ್ಲಿ ‘ತಮಿಳನ್’ ಎಂಬ ಹೆಸರಿನಲ್ಲಿ ಪ್ರಕಟಿಸಲಾರಂಭಿಸಿದರು. ಅದೇ ವರ್ಷ ಆಗಸ್ಟ್ನಲ್ಲಿ ಗೌತಮ್ ಪ್ರಿಂಟಿಂಗ್ ಪ್ರೆಸ್ ಅನ್ನು ಸ್ಥಾಪಿಸಿದರು.
1914 ಮೇ 5ರಂದು ರಾಯಪೇಟೆಯಲ್ಲಿ ಅಯೋತಿದಾಸ್ ನಿಧನ ಹೊಂದಿದ ತರುವಾಯದಲ್ಲಿ ಅವರು ಕಟ್ಟಿ ಬೆಳೆಸಿದ ‘ಸಖ್ಯ ಬೌದ್ಧ ಸಮಾಜ ಚಳವಳಿ(ಪರಯಾರರ ಚಳವಳಿ)’ ತನ್ನ ಪ್ರಭಾವವನ್ನು ಕಳೆದುಕೊಳ್ಳಲಾರಂಭಿಸಿತು. ಶೋಷಿತರ ವಿಮೋಚನೆಯನ್ನು ಧ್ಯೇಯವನ್ನಾಗಿಸಿಕೊಂಡಿದ್ದ ಅಯೋತಿದಾಸ್ ಅವರ ಸಖ್ಯ ಬೌದ್ಧ ಚಳವಳಿ ಮುಂದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ದ್ರಾವಿಡ ಸ್ವಾಭಿಮಾನ ಚಳವಳಿಯನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿತು. ಬೌದ್ಧ ಚಳವಳಿಯ ನಾಯಕ ಜಿ. ಅಪ್ಪಾದುರೈ ಅವರು 1932ರಲ್ಲಿ ಕೋಲಾರದ ಬೌದ್ಧ ಸಮಾಜದ ನೇತೃತ್ವದಲ್ಲಿ ನಡೆದ ‘ದ್ರಾವಿಡ ಆತ್ಮಗೌರವ ಚಳವಳಿಯ ಮೊದಲ ಸಮಾವೇಶ’ಕ್ಕೆ ಪೆರಿಯಾರ್ ಅವರನ್ನು ಕರೆತಂದು ‘ನಮ್ಮ ಆಳು'(ನಮ್ಮ ಮನುಷ್ಯ) ಎಂದು ಶೋಷಿತ ಸಮಾಜಕ್ಕೆ ಪರಿಚಯಿಸಿದರು. ಒಟ್ಟಾರೆ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಬೌದ್ಧ ಚಳವಳಿಯನ್ನು ಶೋಷಿತರ ಸ್ವಾಭಿಮಾನಿ ಚಳವಳಿಯನ್ನಾಗಿ ಕಟ್ಟಿ ಬೆಳೆಸಿದ ತಮಿಳು ದಲಿತ ಹೋರಾಟಗಾರ ‘ಪಂಡಿತ ಅಯೋತಿದಾಸ್’ ಅವರನ್ನು ಕನ್ನಡಕ್ಕೆ ಪರಿಚಯಿಸಿರುವ ಬಿ. ಸುಜ್ಞಾನಮೂರ್ತಿ ಅವರಿಗೆ ಕನ್ನಡ ಓದುಗರು ಎಂದೆಂದೂ ಕೃತಜ್ಞರು.








tumba upyogkar brha ede sir…
ಧನ್ಯವಾದಗಳು ಸಾರ್
ತುಂಬಾ ಉಪಯುಕ್ತ ಬರಹ. ದಕ್ಷಿಣ ಭಾರತದ ಮೊದಲ ದಲಿತ ಹೋರಾಟಗಾರನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಂತಾಯಿತು ಸರ್.
ಧನ್ಯವಾದಗಳು
ಅಯೋತಿದಾಸ್ ಅವರ ಬಗ್ಗೆ ಪರಿಚಯಿಸಿದ ಸಹೋದರರಾದ ಸೋಮಶೇಖರ್ ಅವರಿಗೆ ಧನ್ಯವಾದಗಳು. ಹಾಗೆ ಮೊದಲ ತಲೆಮಾರಿನ ಕವಿ ಗೋವಿಂದದಾಸ್ ಅವರ ಬಗ್ಗೆ ಪರಿಚಯಿಸಿದ ಕೀರ್ತಿ ಡಾ. ಎಂ.ಎಸ್. ಶೇಖರ್ ಅವರಿಗೆ ಸಲ್ಲಬೇಕು. ಇಂತಹ ಹಲವಾರು ಹೋರಾಟಗಾರರ ಬಗ್ಗೆ ಡಾ. ಶೇಖರ್ ಈಚೆಗೆ ಹಾಸನದ ಸಾಹಿತ್ಯ ಸಮ್ಮೇಳನದಲ್ಲಿ ಹೇಳುತ್ತಿದ್ದರು. ಸೋಮಶೇಖರ್ ಇಂತಹವರನ್ನು ಹೆಕ್ಕಿ ಪರಿಚಯಿಸುತ್ತಿರುವುದಕ್ಕೆ ಅವರಿಗೆ ಧನ್ಯವಾದಗಳು. ಇನ್ನೂ ಹಲವಾರು ದಲಿತ ಹೋರಾಟಗಾರರ ಬದುಕು ಹಾಗೂ ಹೋರಾಟ ನಿಮ್ಮ ಸಂಶೋಧನೆಯಿಂದ ಹೊರಬರಲಿ ಎಂಬುದು ನಮ್ಮ ಆಶಯ
ಧನ್ಯವಾದಗಳು ಬ್ರದರ್
ತಮಿಳುನಾಡಿನಲ್ಲಿ ದಲಿತರಿಗೂ ವಣ್ಣಿಯಾರ್ ಎಂಬ ಶೂದ್ರ ಜಾತಿಯ ಜನರಿಗೂ ತಲೆತಲಾಂತರಗಳಿಂದ ಬದ್ಧ ವೈಷಮ್ಯ. ಇದಕ್ಕೆ ಕಾರಣ ಏನು ಅಂತ ಗೊತ್ತ ಸೋಮಶೇಖರ್?
ಕಾರಣ ತಿಳಿಸಿ ಸಾರ್
ಈ ಬರಹದ ಸಂಕ್ಷಿಪ್ತ ವ್ಯಾಪ್ತಿಯಲ್ಲಿ ಅತ್ಯಂತ ಸಮಗ್ರವಾದ ಮಾಹಿತಿ ನೀಡಿದ ಉತ್ತಮ ಬರಹ. ಧನ್ಯವಾದಗಳು
thank u apgere for informative article
Someshekar Sir, Good article. Expect more from you.
Vasanth, Mysore.
its wonder to us becoz v returing to our hisrory….gud works somanna….