ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಕ್ಷಿಣಾಯಣ ಕರ್ನಾಟದೊಂದಿಗೆ ಬನ್ನಿ..

 ದಕ್ಷಿಣಾಯಣ ಕರ್ನಾಟಕ

ಭಾರತದ ಖ್ಯಾತ ಬರಹಗಾರರು ಭಾಷಾತಜ್ಞರು ಆಗಿರುವ ಗಣೇಶ್ ದೇವಿಯವರು ಮಹಾರಾಷ್ಟ್ರದ ಧಾಭೋಲ್‌ಕರ್, ಪಾನ್ಸರೆ ಹಾಗೂ ಕರ್ನಾಟಕದ ಕಲಬುರ್ಗಿಯವರ ಹತ್ಯೆಗಳ ನಂತರ ಸಾಹಿತ್ಯವಲಯದಲ್ಲಿ ನಡೆದ ಪ್ರತಿಭಟನೆಯ ಬಹುದೊಡ್ಡ ಅಭಿಯಾನದಲ್ಲಿ ಭಾಗಿಯಾಗಿ ತಮ್ಮ ಪ್ರಶಸ್ತಿಯನ್ನು ವಾಪಸ್ಸು ಮಾಡಿದರು.

ತಮ್ಮ ವೃತ್ತಿ ಜೀವನದ ಅರ್ಧಭಾಗವನ್ನು ಆದಿವಾಸಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಕಳೆದಿರುವ ಅವರು ಸಾಹಿತ್ಯ ವಿಮರ್ಶೆಯಲ್ಲಿ ’ದೇಶೀವಾದದ’ ಪ್ರಬಲ ಸಮರ್ಥಕರು ಬರಹಗಾರ ಬುದ್ಧಿಜೀವಿಗಳ ಕೊಲೆಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ಯದ ಹಲ್ಲೆಗಳಿಂದಾಗಿ ತೀವ್ರ ಕಳವಳದಲ್ಲಿದ್ದ ಗಣೇಶ್ ದೇವಿಯವರಿಗೆ ಹೊಳೆದದ್ದೆಂದರೆ ಮರಾಠಿ, ಗುಜರಾತಿ, ಕೊಂಕಣಿ ಮತ್ತು ಇತರ ಬರಹಗಾರರ ಬಳಗವೊಂದನ್ನು ಮಾಡಿಕೊಂಡು ಅಭಿಯಾನವೊಂದನ್ನು ಆರಂಭಿಸುವುದು. ಇದಕ್ಕಾಗಿ ಅವರಿಗೆ ಹೊಳೆದದ್ದು ಒಂದು ಅದ್ಭುತವಾದ ರೂಪಕ.

ದಕ್ಷಣಾಯಣ – ಈ ಕಾಲದಲ್ಲಿ ರಾತ್ರಿಗಳು ದೀರ್ಘವಾಗಿರುತ್ತವೆ. ಹಗಲುಗಳು ಚಿಕ್ಕದಾಗಿರುತ್ತವೆ. ರಾತ್ರಿಗಳೇ ದೀರ್ಘವಾಗಿರುವ ಕಾಲದಲ್ಲಿ ಎಚ್ಚರವಾಗಿರುವುದು ಅನಿವಾರ್ಯ.

ಒಬ್ಬರ ಬೆಂಬಲಕ್ಕೆ ಇನ್ನೊಬ್ಬರು ಕೈಹಿಡಿಯುವುದು ಅವಶ್ಯಕ.

ಅದರಲ್ಲೂ ಬರಹಗಾರರು, ಕ್ರಿಯಾಶೀಲರು, ಚಲನಚಿತ್ರ ನಿರ್ದೇಶಕರು, ಪತ್ರಿಕೋದ್ಯಮಿಗಳು, ಚಿತ್ರಕಾರರು, ಹೀಗೆ ಸೂಕ್ಷ್ಮಮನಸ್ಸಿನವರು ಮುಖ್ಯವಾಗಿ ಸಮಾಜದೊಂದಿಗೆ ಇರುವವರು ಒಂದುಗೂಡಲೇಬೇಕಾದ ಕಾಲ.

ಹೀಗೆ ಆರಂಭವಾದ ಅಭಿಯಾನ ಈಗ ಭಾರತದ ಅನೇಕ ರಾಜ್ಯಗಳ, ಅನೇಕ ಕ್ರಿಯಾಶೀಲ ವ್ಯಕ್ತಿಗಳನ್ನು ಒಂದುಗೂಡಿಸಿದೆ. ಇದು ಯಾವ ರಾಜಕೀಯ ಪಕ್ಷದ ಬಾಲಂಗೋಚಿಯೂ ಅಲ್ಲ; ಒಂದೇ ಸಿದ್ಧಾಂತದ ಬೆಂಬಲವನ್ನು ಅದು ಮಾಡುವುದಿಲ್ಲ. ಮುಖ್ಯವಾಗಿ ಪ್ರಜಾಪ್ರಭುತ್ವವನ್ನು ಒಳಗಿಂದಲೇ ನಾಶಮಾಡುವ, ಅಭಿವ್ಯಕ್ತಿ ಸ್ವಾತಂತ್ಯವನ್ನು ಹರಣಮಾಡುವ ಎಲ್ಲಾ ಪ್ರವೃತ್ತಿಗಳನ್ನು ವಿರೋಧಿಸುವ ಸಹಮನಸ್ಕರ ಚಳುವಳಿ ಇದಾಗಿದೆ.

ಇದು ಸಂಘಟನೆಯಲ್ಲ. ಇದಕ್ಕೆ ಅಧಿಕೃತ ಪದಾಧಿಕಾರಿಗಳೂ ಇಲ್ಲ. ನಮ್ಮ ಕಾಲದ ಎಲ್ಲಾ ದಂಡುಗಳಿಗೆ ರಾಜಕಾರಣ ಕಾರಣವಾಗಿರುವುದರಿಂದ ರಾಜಕಾರಣದಿಂದ ದೂರವಿರುವುದು ಸಾಧ್ಯವೇ ಇಲ್ಲ. ನಮ್ಮ ಚಿಂತನೆ, ನಮ್ಮ ಬರಹಕ್ಕೆ ಅದೊಂದು ಆಯಾಮ ಇದ್ದೇ ಇರುವುದಕ್ಕೆ ಬಂಡವಾಳಶಾಹಿ, ಕೋಮುವಾದ, ಹಿಂಸೆ ಇವುಗಳನ್ನು ಅತ್ಯಂತ ವಿಮರ್ಶಕವಾಗಿ ನೋಡುವುದು ಅನಿವಾರ್ಯ.

ಮುಖ್ಯವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯವಿರುವವರೆಲ್ಲ ಇಂದು ಬರೆಯುವ, ಮಾತನಾಡುವ ಹೇಳುವ ದೊಡ್ಡ ಜವಾಬ್ದಾರಿಯನ್ನು ಹೊರಲೇಬೇಕಿದೆ. ಈ ಜವಾಬ್ದಾರಿಯನ್ನು ನಮ್ಮ ಸಮುದಾಯಗಳು ನಮಗೆ ಒಪ್ಪಿಸಿವೆ.

ಎಲ್ಲಾ ಹೋರಾಟಗಳಿಗೆ ಈಗ ಒಂದು ದಿಕ್ಕು ನಿಚ್ಚಳವಾಗಿ ಕಾಣುತ್ತಿದೆ. ಪ್ಲಾಸಿಜಮ್‌ನ ವಿರುದ್ಧ ನಾವು ಒಂದಾಗಿ ಈಗ ನಿಲ್ಲದಿದ್ದರೆ ನಮಗೆ ನಾಳೆಗಳೇ ಇಲ್ಲ. ಅತಿಶಯೋಕ್ತಿಯೆಂದುಕೊಳ್ಳಬೇಡಿ. ಈಗ ಆಗಬೇಕಿರುವುದು ಒಂದು ಅಂತಿಮವಾದ ದೊಡ್ಡ ಸಾಂಸ್ಕೃತಿಕ ಹೋರಾಟ.

ಅದರಲ್ಲಿ ಇದು ನಾಯಕರಿಗಾಗಿ ಕಾಯುವ ಹೋರಾಟವಲ್ಲ. ಪಕ್ಷ ಪ್ರಣಾಳಿಕೆಗಳ ಬಿಸಿಲುಗುದುರೆಗಳನ್ನು ಹಿಂಬಾಲಿಸುವುದಲ್ಲ. ನಮಗೆ ಇರುವ ಎಲ್ಲಾ ಶಕ್ತಿಯನ್ನು ನಮಗೆ ಗೊತ್ತಿರುವ ಮಾಧ್ಯಮಗಳ ಮೂಲಕ ಪ್ರಾಮಾಣಿಕವಾಗಿ ದುಡಿಸಿಕೊಳ್ಳಬೇಕಾಗಿದೆ.

ಇದಕ್ಕಾಗಿ ದಕ್ಷಿಣಾಯಣ ಒಂದು ಸಾಂಸ್ಕೃತಿಕ ಚಳುವಳಿಯಾಗಿ, ಸಾಂಸ್ಕೃತಿಕ ರಾಜಕೀಯವಾಗಿ ರೂಪುಗೊಳ್ಳುತ್ತಿದೆ. ಇದು ಸಹಭಾಗಿಗಳಾಗುವ ಎಲ್ಲರಿಗೂ ಒಂದು ಹುಡುಕಾಟ. ದಕ್ಷಿಣಾಯಣದ ಇಲ್ಲಿಯವರೆಗಿನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಮ್ಮ ಅನುಭವವೆಂದರೆ ಪ್ರತಿಭಟನೆ, ಅಭಿವ್ಯಕ್ತಿಯಲ್ಲಿ ನಾವು ಒಂಟಿಯಲ್ಲ. ಭಾರತೀಯ ಬರಹಗಾರರ, ಕಲಾವಿದರ, ಕ್ರಿಯಾಶೀಲರ ದೊಡ್ಡ ಸಮುದಾಯವೇ ನಮ್ಮ ಜೊತೆಗಿದೆ. ಇದಕ್ಕಿಂತ ಹೆಚ್ಚಿನ ನೈತಿಕ ಧೈರ್ಯ, ಸಂಕಲ್ಪವನ್ನು ಯಾವ ಚರಿತ್ರೆಯೂ ನಮಗೆ ನೀಡಲಾರದು.

ಈಗ ನಾವು ಕರ್ನಾಟಕದ ಸಹಮನಸ್ಕರೆಲ್ಲ ಸೇರಿ ದಕ್ಷಿಣಾಯಣ ಕರ್ನಾಟಕವನ್ನು ರೂಪಿಸಬೇಕಿದೆ. ಇದು ಒಟ್ಟಿಗೆ ಹೆಜ್ಜೆ ಇಡಲು ಸಿದ್ಧರಾಗಿರುವ ಎಲ್ಲರ ಚಳುವಳಿ. ಇದಕ್ಕೆ ಶಕ್ತಿ ಕನ್ನಡದ ಮಾನವಪರ, ಜನಸಮುದಾಯಗಳ ಪರಂಪರೆಗಳು ಮತ್ತು ಅವುಗಳನ್ನು ಇಂದಿನ ತುರ್ತುಗಳಿಗೆ ಒಗ್ಗೂಡಿಸಬೇಕಾದ ಅರಿವು ಮತ್ತು ವಿವೇಕ.

ಇಲ್ಲಿ ಯಾರೂ ನೇತಾರರಿಲ್ಲ. ಒಟ್ಟಿಗೆ ಕುರಿತು ಚಿಂತಿಸುವುದು. ಸುತ್ತಲಿನ ವಿದ್ಯಮಾನಗಳ ಅರಿಯುವುದು. ಅರಿವು ತೋರಿದಂತೆ ನಮ್ಮ ನಡೆಯನ್ನು ಒಟ್ಟಾಗಿ, ಸಾಂಘಿಕವಾಗಿ ರೂಪಿಸಿಕೊಳ್ಳುವುದು. ನಮಗೆ ಅನ್ನಿಸಿದ್ದು ನಿಮಗೂ ಅನ್ನಿಸಿದರೆ ನಮ್ಮನ್ನು ಸಂಪರ್ಕಿಸಿ.

ಪತ್ರ ಯಾವುದಾದರು ಸರಿ. ನೀವು ನಮ್ಮೊಂದಿಗೆ ಇದ್ದೀರಿ ಎನ್ನುವುದಾದರೆ ಬೇಗನೇ ಒಂದು ಕಡೆಗೆ ಸೇರೋಣ. ದಕ್ಷಿಣಾಯಣ ಕರ್ನಾಟದೊಂದಿಗೆ ಬನ್ನಿ.

ರಾಜೇಂದ್ರ ಚೆನ್ನಿ
ಸಂಚಾಲಕ

 

‍ಲೇಖಕರು admin

23 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading