ಸಾವಿನಲ್ಲಿ ಬದುಕು ಬೆಳಗಿದ ಆಧುನಿಕ ದಾರ್ಶನಿಕ ಲೀ
ಜಯಶ್ರೀ ಭಟ್
ಕೆಲ ವರ್ಷಗಳ ಹಿಂದೆ ’ಭಾಗ್ ಬಾನ್’ ಎನ್ನುವ ಅಮಿತಾಭ್, ಹೇಮಾ ಮಾಲಿನಿಯ ಮನೋಜ್ನ ಅಭಿನಯದ ಸಿನಿಮಾ ಬಂದಿತ್ತು. ಅದರಲ್ಲಿ ಅಮಿತಾಭ್, ಹೇಮಾ ತಮ್ಮದೇ ಪುಟ್ಟ ಸಂಸಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ನಿವ್ರುತ್ತಿಯಲ್ಲಿ ಮಕ್ಕಳ ಮನೆಗೆ ಆಸರೆ ಬಯಸಿ ಹೋದಾಗ ಅನುಭವಿಸಿದ ಅವಮಾನ, ಕಷ್ಟಗಳ ಭಾವುಕ ಕಥೆಯದು. ಆದರೆ ನಾನು ಹೇಳ ಹೊರಟಿರುವ ಈ ತೋಟಗಾರ ಬರೀ ತನ್ನ ಮನೆಯನ್ನಲ್ಲ ಒಂದಿಡೀ ದೇಶವನ್ನು ಹೋದೋಟದಂತೆ ಬೆಳೆಸಿ ವಿಶ್ವ ಮಟ್ಟದಲ್ಲಿ ಮೆರೆಸಿದ ಮಾಂತ್ರಿಕ. ಅವರ ಸಾರ್ವಜನಿಕ ಜೀವನ ಆಧುನಿಕ ಇತಿಹಾಸದಲ್ಲಿ ಅದ್ಭುತವಾದದ್ದಾದರೆ ಅವರ ಖಾಸಗೀ ಬದುಕು ಎಂದೆಂದಿಗೂ ಮನುಕುಲಕ್ಕೆ ಆದರ್ಶ ಪ್ರಾಯವಾದದ್ದು. ಅವರೇ ಇತ್ತೀಚೆಗೆ ಜಗತ್ತಿನ ಪರದೆಯಿಂದ ನಿರ್ಗಮಿಸಿದ ಸಿಂಗಪುರದ ನಿರ್ಮಾತ್ರು ಲೀ ಕ್ವಾನ್ ಯೂ.
’ಕೆಂಪು ಚುಕ್ಕೆ” ಎಂದು ಕರೆಯಲ್ಪಡುವ ಅಂಗೈಯಗಲದ ದ್ವೀಪರಾಷ್ಟ್ರ ಸಿಂಗಪುರ ನಮ್ಮ ಬೆಂಗಳೂರಿನಷ್ಟೂ ದೊಡ್ಡದಿಲ್ಲ ವಿಸ್ತೀರ್ಣದಲ್ಲಿ. ಆದರೆ ಇದರ ಆರ್ಥಿಕ ಸಾಮರ್ಥ್ಯ ಮಾತ್ರ ಜಗತ್ತಿನ ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದನ್ನಾಗಿ ಮಾಡಿದೆ. ಇಲ್ಲಿನ ಚಾಂಗಿ ಏರ್ ಪೋರ್ಟ್ ವಿಶ್ವದಲ್ಲೇ ಅಗ್ರಶ್ರೇಣಿಯದ್ದು. ಇಲ್ಲಿ ಸ್ವಂತ ಮನೆಯಿಲ್ಲದ ಒಬ್ಬ ನಾಗರಿಕನೂ ಇಲ್ಲ. ಇಲ್ಲಿ ಎಲ್ಲಿ ನೋಡಿದರೂ ಹಸಿರು ಕಣ್ಣಿಗೆ ರಾಚುವಂತಿದೆ, ಇಲ್ಲಿ ರಾತ್ರಿ ಹಗಲೆನ್ನದೆ ಹೆಂಗಸರು, ಹುಡುಗಿಯರು ಚೋಟುದ್ದ ಚಡ್ಡಿ ಹಾಕಿಕೊಂಡು ರೈಲಿನಲ್ಲಿ, ಬಸ್ಸಿನಲ್ಲಿ, ಕಾರಿನಲ್ಲಿ, ಪಾರ್ಕಿನಲ್ಲಿ ಎಲ್ಲೆಂದರಲ್ಲಿ ನಿರ್ಭೀತಿಯಿಂದ ಸಂಚರಿಸಬಹುದು. ಹಾಗಾಗಿ ಬೆಂಗಳೂರಿಗರು ಸಿಂಗಪುರ ಚಿಕ್ಕದೆಂದು ಮೂಗು ಮುರಿಯುವುದಾದರೆ ಒಮ್ಮೆ ಯೋಚಿಸಬೇಕಾಗುತ್ತದೆ. ಐದು ದಶಕಗಳ ಹಿಂದೆ ತನ್ನದೇ ಆದ ಸೈನ್ಯವನ್ನೂ ಹೊಂದಿರದ ಮೀನುಗಾರರ ಪುಟ್ಟ ದ್ವೀಪದ ಚುಕ್ಕಾಣಿ ಹಿಡಿದು ನಿಂತವರೇ ಕೇಂಬ್ರಿಡ್ಜ್ ನಿಂದ ಕಾನೂನು ಶಿಕ್ಷಣ ಮುಗಿಸಿ ಬಂದ ಮೂವತ್ತರ ಯುವಕ ಲೀ ಕ್ವಾನ್ ಯೂ.

ಸಿಂಗಪುರದ ಐವತ್ತು ವರ್ಷಗಳ ಇತಿಹಾಸದಲ್ಲಿ ಯಾರೂ ಯೋಚಿಸಲಾಗದಷ್ಟು ಅಗಾಧ ಪ್ರಮಾಣದ ಪ್ರಗತಿ ಸಾಧ್ಯವಾದ ಶ್ರೇಯಸ್ಸು ಸಂಪೂರ್ಣವಾಗಿ ಲೀಯವರದ್ದು. ಆದರೆ ಅವರು ಯಾವತ್ತೂ ಈ ಯಶಸ್ಸಿನ ಶ್ರೇಯಸ್ಸನ್ನು ತಮ್ಮ ಅದ್ಭುತ ಟೀಮಿಗೆ ಸಲ್ಲಿಸುವುದನ್ನು ಮರೆಯಲಿಲ್ಲ. ಅಶಿಕ್ಷಿತ ಜನರಲ್ಲಿ ಶಿಸ್ತಿನ, ಶಾಂತಿಯ, ಸಹಬಾಳ್ವೆಯ ಬದುಕಿನ ಕನಸು ಬಿತ್ತಿ ಅವರನ್ನೆಲ್ಲ ನಿಜ ಅರ್ಥದಲ್ಲಿ ಮನುಷ್ಯರನ್ನಾಗಿ ರೂಪಿಸಿದ ಕೀರ್ತಿ ಈ ಲೀಯವರದ್ದು. ತಾನು ಅಧಿಕಾರಕ್ಕೆ ಬಂದ ಹತ್ತು ವರ್ಷಗಳಲ್ಲಿ ಎಲ್ಲರ ತಲೆಯ ಮೇಲೊಂದು ಸೂರು, ಮಕ್ಕಳಿಗೆ ಕಲಿಯಲು ಶಾಲೆ, ಆಡಲು ಮೈದಾನ, ಮೈಮುರಿದು ದುಡಿಯುವ ಜನರಿಗೆ ಉದ್ಯೋಗ, ಸುಂದರ ರಸ್ತೆ, ಪಾರ್ಕು, ಹಸಿರಿನಿಂದ ಕಂಗೊಳಿಸುವ ನಗರ ನಿರ್ಮಿಸಿದ ಇವರ ದೂರದರ್ಶಿತ್ವ ನಿಚ್ಚಳವಾಗಿ ಕಾಣಿಸುವುದು ಇದ್ಯಾವುದರಲ್ಲೂ ಅಲ್ಲ. ಇದು ಕಾಣುವುದು ಇಲ್ಲಿನ ಜನರಲ್ಲಿ ಬಹುಸಂಖ್ಯಾತ ಚೀನೀಯರೂ, ಮೂಲನಿವಾಸಿಗಳಾದ ಮಲಯ್ ಮುಸ್ಲಿಮರು ಹಾಗೂ ತಮಿಳು ಮೂಲದ ಭಾರತೀಯರಲ್ಲಿ ಇವರು ಮೂಡಿಸಿದ ಕೋಮುಸೌಹಾರ್ದದಲ್ಲಿ, ಮಾತೆತ್ತಿದರೆ ಮುಷ್ಕರ ಹೂಡುತ್ತಿದ್ದ ಲೇಬರ್ ಯೂನಿಯನ್ ಗಳು ಮುಷ್ಕರ ಬಿಟ್ಟು ಕೌಶಲ ಅಭಿವ್ರುದ್ದಿಯತ್ತ ಮನಸ್ಸು ಮಾಡುವಂತೆ ಮಾಡುವುದರಲ್ಲಿ, ಧೂಳು ಮುಸುಕಿರಬೇಕಾಗಿದ್ದ ರಸ್ತೆಯ ಎಡಬಲಗಳಲ್ಲಿ ಹಸಿರು ಉಕ್ಕಿಸಿದ್ದರಲ್ಲಿ, ಕುಡಿಯುವ ನೀರನ್ನು ಕಡ ಪಡೆಯಬೇಕಾದವರು ಇಂದು ಜಗತ್ತಿಗೇ ಕಡಲ ನೀರನ್ನು ಕುಡಿಯಲು ಯೋಗ್ಯ ಮಾಡುವ ವಿಧಾನ ಹೇಳಿಕೊಡುವಂತೆ ಮಾಡಿದ್ದರಲ್ಲಿ….. ಹೀಗೇ ಹೇಳಬೇಕಾದ ಸಾಧನೆಗಳ ಪಟ್ಟಿ ಬಲು ದೊಡ್ಡದಿದೆ.
ಸತತ ಮೂವತ್ತು ವರ್ಷ ಪ್ರಧಾನಿಯಾಗಿ ಅಧಿಕಾರ ಅನುಭವಿಸಿದರೂ ಅಧಿಕಾರದ ಮದ ಇವರ ತಲೆಗೇರಲಿಲ್ಲ. ಆರೋಗ್ಯವಂತರಾಗಿದ್ದೂ ತಾವಾಗೇ ಕುರ್ಚಿಯಿಂದ ಕೆಳಗಿಳಿದು ಸೂಕ್ತ ವ್ಯಕ್ತಿಯನ್ನು ಆ ಪಟ್ಟಕ್ಕೇರಿಸಿದ್ದು ಇವರನ್ನು ಇನ್ನುಳಿದ ಐತಿಹಾಸಿಕ ವ್ಯಕ್ತಿಗಳಿಂದ ಭಿನ್ನವಾಗಿ ಬಿಂಬಿಸುತ್ತದೆ. ನಂತರದ ಇಪ್ಪತ್ತು ವರ್ಷ ಅಂದರೆ ತಮ್ಮ ತೊಂಬತ್ತೊಂದನೇ ವಯಸ್ಸಿನಲ್ಲೂ ಅವರ ಹ್ರುದಯ ಸಿಂಗಪುರದ ಏಳಿಗೆಗಾಗಿ ಮಿಡಿಯುತ್ತಿತ್ತು. ತಮ್ಮಷ್ಟೇ ಪ್ರತಿಭಾವಂತೆಯಾದ, ಕೇಂಬ್ರಿಡ್ಜ ನಲ್ಲೇ ಓದಿದ ತಮ್ಮ ಪತ್ನಿಯನ್ನು ಲೀಯವರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆಕೆಯೂ ಅವರ ನೆರಳಿನಂತಿದ್ದು ಪತಿಯ ಅಧಿಕಾರದ ದುರುಪಯೋಗ ಪಡಿಸಿಕೊಳ್ಳದೆ ಆ ಪ್ರೀತಿಗೆ ಅರ್ಹರಾಗಿದ್ದರೆಂದು ಸಾಬೀತು ಪಡಿಸಿ ಕೆಲವರ್ಷಗಳ ಹಿಂದೆ ಇಹಲೋಕ ಯಾತ್ರೆ ಮುಗಿಸಿದರು. ಆಕೆ ಕೋಮಾದಲ್ಲಿದ್ದಾಗಲೂ ದಿನವೂ ಆಕೆಗೆ ಪೇಪರ್ ಓದಿ ಹೇಳುತ್ತಿದ್ದ ಲೀ, ವಿದೇಶದಲ್ಲಿದ್ದರೂ ಅಲ್ಲಿಂದ ಫೋನಿನಲ್ಲಿ ಮಾತಾಡುತ್ತಿದ್ದರಂತೆ ಹೆಂಡತಿಯೊಡನೆ, ಆಕೆ ತಿರುಗಿ ಒಂದು ಮಾತಾಡುವ ಸ್ಥಿತಿಯಲ್ಲಿಲ್ಲದಾಗಲೂ. ತೊಂಬತ್ತೊಂದನೇ ವಯಸ್ಸಿನಲ್ಲೂ ಮ್ಯಾಂಡರಿನ್ ಭಾಷೆಯಲ್ಲಿ ಪರಿಣತಿ ಹೊಂದಲು ಪಾಠ ಹೇಳಿಸಿಕೊಳ್ಳುತ್ತಿದ್ದ ಲೀ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ಸೇರುವವರೆಗೂ ತಮ್ಮ ಕಲಿಕೆಯನ್ನು ನಿಲ್ಲಿಸಲಿಲ್ಲ. ಚ್ಯೂಯಿಂಗ್ ಗಂ ಬ್ಯಾನ್ ಮಾಡಿದ, ತಮ್ಮ ಅಧಿಕಾರಾವಧಿಯಲ್ಲಿ ಗ್ಯಾಂಬ್ಲಿಂಗ್ ಗೆ ಸಿಂಗಪುರದ ಬಾಗಿಲು ತೆರೆಯದ ಧೀರ ಲೀ ಕ್ವಾನ್ ಯೂ.
ತಂದೆಯನ್ನು, ಅವರ ಸಾಧನೆಯನ್ನು, ಅವರ ವ್ಯಕ್ತಿತ್ವವನ್ನು ವಿವರಿಸಿ ವಿದಾಯ ಭಾಷಣ ಮಾಡುತ್ತಿದ್ದ ಅವರ ಹಿರಿಯ ಮಗ ಈಗಿನ ಸಿಂಗಪುರದ ಪ್ರಧಾನಿ ಒತ್ತರಿಸಿ ಬರುತ್ತಿದ್ದ ದುಃಖವನ್ನು ತಡೆಯಲು ಶ್ರಮಿಸುತ್ತಿದ್ದರು. ಅತ್ಯಂತ ಪ್ರತಿಭಾಶಾಲಿಯಾದ, ಕೇಂಬ್ರಿಡ್ಜ್ ನಲ್ಲಿ ಓದಿದ ಇವರು ತಂದೆ ತಮ್ಮ ಮೇಲಿಟ್ಟಿದ್ದ ಪ್ರೀತಿಯನ್ನು, ಕಾಳಜಿಯನ್ನು ಹೇಳುವಾಗ ನನ್ನ ಕಣ್ಣುಗಳೂ ಒದ್ದೆಯಾದವು. ಮಗನೇ ಪ್ರಧಾನಿಯಾಗಿದ್ದರೂ ಲೀ ಯವರು ಸತ್ತಾಗ ಒಂದು ದಿನದ ರಜೆಯನ್ನೂ ಕೊಡಲಿಲ್ಲ ಇಲ್ಲಿನ ಸರ್ಕಾರ. ಅವರಿಗಾಗಿ ನಗರದ ಮಧ್ಯ ಭಾಗದಲ್ಲಿ ಬ್ರುಹತ್ತಾದ ಸ್ಮಾರಕವನ್ನೂ ಕಟ್ಟಲಿಲ್ಲ. ತುಪ್ಪ ಸುರಿದು, ಟನ್ ಗಟ್ಟಲೆ ಗಂಧದ ಕಟ್ಟಿಗೆ ಸುಡುವ ಸಂಪ್ರದಾಯ ಇವರಲ್ಲಿಲ್ಲವೇನೋ? ಮಂತ್ರಿಗಳಿಂದ ಹಿಡಿದು ಜನಸಾಮಾನ್ಯರೆಲ್ಲ ಒಂದು ವಾರ ಶೋಕಾಚರಣೆ ಮಾಡಿ ಅವರ ಆದರ್ಶಗಳನ್ನು ಸ್ಮರಿಸಿದ ಪರಿ ನಮ್ಮನ್ನು ಮೂಕವಿಸ್ಮಿತರನ್ನಾಗಿಸಿತು. ಅವರ ಕಣ್ಣಲ್ಲಿ ಹನಿ ಮೂಡುತ್ತಿದ್ದರೆ ನನಗಲ್ಲಿ ಲೀಯವರ ದಿವ್ಯ ಆಕ್ರುತಿ ಕಾಣುತ್ತಿತ್ತು. ಇಂದು ಅವರ ಅಂತಿಮ ಯಾತ್ರೆಯ ಸಮಯದಲ್ಲಿ ರಸ್ತೆಯುದ್ದಕ್ಕೂ ನಿಂತ ಜನ ತಮ್ಮ ದೇಶದ ಬಾವುಟ ಹಾರಿಸುತ್ತಾ ’ಲೀ ಕ್ವಾನ್ ಯೂ, ವಿ ಲವ್ ಯೂ’ ಎಂದು ಹೇಳುತ್ತಾ ಭಾವುಕರಾಗುತ್ತಿದ್ದಾಗ ನನ್ನ ಕಣ್ಣೆದುರೇ ಇಂಥಾ ಒಂದು ಅದ್ಭುತ ವ್ಯಕ್ತಿ ಬದುಕಿ ಇಂಥಾ ಆದರ್ಶವನ್ನು ಬಾಳಿ ಹೀಗೆ ಅತ್ಯಂತ ಗೌರವಯುತವಾಗಿ ನಿರ್ಗಮಿಸುತ್ತಿದ್ದಾರಲ್ಲ ಎಂದು ನಂಬುವುದೇ ಕಷ್ಟವಾಯಿತು. ಸಿಂಗಪುರದ ಶಿಲ್ಪಿ ಲೀ ಕ್ವಾನ್ ಯೂ.






nice artical..adarshpraya nade..kaNtumbi banditu..
ಈ ವ್ಯಕ್ತಿತ್ವದ ಬಗ್ಗೆ ಅನೇಕ ಬರಹ ಓದಿದ್ದೆ, ಆದರೆ ಇದು ಅವೆಲ್ಲಕ್ಕಿಂತ ಪರಿಣಾಮಕಾರಿಯಾಗಿದೆ ಅನ್ನಿಸಿತು. ನಿಮಗೆ ಧನ್ಯವಾದ ಜಯಶ್ರೀ.
lee quen yoಅವರ ಕುರಿತು ಅವರ ಆದರ್ಶಗಳ , ಅವರ ಸಾಧನೆಗಳ ಕುರಿತು ಒಂದು ಸುಂದರ್ ಬರಹಹಾಗು ಬಹಳ ಉತ್ತಮ ಮಾಹಿತಿ . ನೀಡಿದ್ದೀರಾ .ಧನ್ಯವಾದಗಳು
Thank you Arathi, Lalita and mmshaik for your likes and comments
Nice article!