ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ತೇಜಸ್ವಿ ಬಗ್ಗೆಯೇ ಕಥೆ

ಪ್ರಸಾದ್ ರಕ್ಷಿದಿ

97ನೇ ಇಸವಿಯ ಸುಮಾರಿಗೆ ಒಂದುದಿನ ಚಿಕ್ಕಮಗಳೂರಿಗೆ ಹೋದವನು ಹಿಂದಿರುಗುವಾಗ ಮೂಡಿಗೆರೆಯಲ್ಲಿ ಇಳಿದೆ. ಸಕಲೇಶಪುರದತ್ತ ಹೋಗುವ ಬಸ್ಸಿಗಾಗಿ, ಬಸ್ಟ್ಯಾಂಡಿನಲ್ಲಿ ಕಾಯುತ್ತ ಕುಳಿತಿದ್ದೆ, ನಾರಾಯಣಗೌಡ ನನ್ನಮುಂದೆ ತನ್ನ ಬೈಕನ್ನು ತಂದು ನಿಲ್ಲಿಸಿದ.

ಈತ ಹೈಸ್ಕೂಲಿನಲ್ಲಿ ನನ್ನ ಸಹಪಾಠಿ. ನಂತರ ಕೆಲವು ವರ್ಷ ದೂರಾಗಿದ್ದೆವಾದರೂ ರೈತಸಂಘ ಮತ್ತೆ ನಮ್ಮನ್ನು ಹತ್ತಿರ ತಂದಿತ್ತು.  ಗೆಳೆತನ ಮತ್ತೊಮ್ಮೆ ಮುಂದುವರಿಯಿತು. ನಾರಾಯಣಗೌಡ ಮೂಡಿಗೆರೆಯ ಪಕ್ಕದ ಬಣಕಲ್ ಎಂಬ ಊರಿನವನು. ಅಲ್ಲೇ ಅವನಿಗೆ ಒಂದಷ್ಟು ಗದ್ದೆ -ತೋಟವೂ ಇದೆ. ಸಾಕಷ್ಟು ಅನುಕೂಲವಿದ್ದವನು. ಎಪ್ಪತ್ತರ ದಶಕದ ಆದಿಬಾಗದಲ್ಲೇ ಒಂದು ಸೆಕೆಂಡ್ ಹ್ಯಾಂಡ್ ಜಾವಾ ಬೈಕನ್ನು ಖರೀದಿಸಿದ್ದ. ಅದನ್ನು ಕಾಡು, ಗುಡ್ಡ, ಗದ್ದೆ ಎಲ್ಲೆಂದರಲ್ಲಿ ಓಡಿಸುತ್ತಿದ್ದ. ಗದ್ದೆಗೆ ಗೊಬ್ಬರ ಸಾಗಿಸುವುದರಿಂದ ಹಿಡಿದು ದನಗಳಿಗೆ ಹುಲ್ಲು ತರಲೂ ಅದನ್ನೇ ಬಳಸುತ್ತಿದ್ದ. ಚಿಕ್ಕಮಗಳೂರು-ಶಿವಮೊಗ್ಗದವರೆಗೂ ಅದರಲ್ಲೇ ಸಂಚರಿಸುತ್ತಿದ್ದ. ಆಗಲೇ ಇವನಿಗೆ ‘ಬೈಕ್ ನಾರಾಯಣಗೌಡ’ ಎಂದ ಅಭಿದಾನ ಪ್ರಾಪ್ತವಾಗಿತ್ತು. ಬೈಕನ್ನು ಎಲ್ಲೆಂದರಲ್ಲಿ ನಿಲ್ಲಿಸಿ ರಿಪೇರಿ ಮಾಡುವ ಕಲೆ ನಾರಾಯಣ ಗೌಡನಿಗೆ ಕರಗತವಾಗಿತ್ತು. ಅದು ಹೇಗೋ ತೇಜಸ್ವಿಯವರೊಂದಿಗೆ ಈತನಿಗೆ ಸಂಪರ್ಕವಿತ್ತು. ಕೆಲವುಬಾರಿ ಅವರಲ್ಲಿಗೆ ಈತ ಹೋಗಿಬರುತ್ತಿದ್ದ. ಇದನ್ನೇ ನೆಪವಾಗಿಟ್ಟುಕೊಂಡು ಸಂದರ್ಭ ಸಿಕ್ಕಿದಾಗಲೆಲ್ಲ, ತೇಜಸ್ವಿಯವರಿಗೆ ಸ್ಕೂಟರ್ ರಿಪೇರಿಯನ್ನು ತಾನೇ ಹೇಳಿಕೊಟ್ಟುದ್ದಾಗಿ ರೀಲು ಬಿಡುತ್ತಿದ್ದ!.

ನಾರಾಯಣ ಗೌಡ ನನ್ನನ್ನುದ್ದೇಶಿಸಿ ಎತ್ಲಾಗೋ ಮಾರಾಯ ಎಂದ.

ಚಿಕ್ಮಗ್ಳೂರಿಗೋಗಿದ್ದೆ, ಈಗ ಊರಿಗೆ ಎಂದೆ.

ಬಾ ಇಲ್ಲೇ ತೇಜಸ್ವಿ ಮನೆತಂಕ ಹೋಗ್ಬರೋಣ ಬಾ ಎಂದು ಕರೆದ.

ನನಗೆ ಅವನೊಂದಿಗೆ ಹೋಗುವ ಮನಸ್ಸಾದರೂ. ಆಗಲೇ ಸಂಜೆ ನಾಲ್ಕಾಗುತ್ತ ಬಂದಿತ್ತು. ಬಸ್ಸು ತಪ್ಪಿದರೆ ಎಂಬ ಚಿಂತೆಯಾಯಿತು. ನಾನು ಬರುವುದಿಲ್ಲ ನೀನೆ ಹೋಗಿ ಬಾ ಎಂದೆ.

ನನಿಗೆ ಒಬ್ನೇ ಹೋಗಕ್ಕೆ ಬೇಜಾರು, ಅಲ್ಲದೇ ಒಬ್ನೇ ಹೋದ್ರೆ ಮಾರಾಯ ಅವ್ರು ತುಂಬ ಹೊತ್ತು ಮಾತಾಡ್ತ ಕೂತ್ಕಂಡ್ಬಿಡ್ತಾರೆ, ಆಮೇಲ್ ಪಜೀತಿ, ಇಬ್ರಾದ್ರೆ  ಏನಾರಹೇಳಿ ಬೇಗ ಹೊರಡ್ಬೋದು ಬಾ ಎಂದ. ಅವನು ಹೇಳಿದ ದಾಟಿ ತೇಜಸ್ವಿಯವರಿಗೆ ಇವನಂತಹ ಆತ್ಮೀಯ ಸ್ನೇಹಿತ ಇನ್ನೊಬ್ಬರಿಲ್ಲ ಎನ್ನುವಂತಿತ್ತು.

ಈತನ ಮಾತಿನ ಬಗ್ಗೆ ನನಗೇನೋ ಅನುಮಾನವಾಯಿತು. ಆದ್ದರಿಂದ ತಪ್ಪಿಸಿಕೊಳ್ಳಲು ನೆಪಹುಡುಕುತ್ತಾ ನಾನೀಗ ಅಲ್ಲಿಗೆ ಬಂದು ಐದು ಗಂಟೆ ಬಸ್ ತಪ್ಪಿದ್ರೆ ನಾನಿಲ್ಲೇ ಬಾಕಿ ಎಂದೆ.

ಬಾ ಅಮೇಲೆ ನಮ್ಮೂರಿಗೋಗಾಣ, ನಾಳೆ ನಾನು ಆಕಡೆ(ಸಕಲೇಶಪುರ) ಬರೋದಿತ್ತು ಜೊತೆಲೇ ಹೋಗಣ ಎಂದು ಗಂಟುಬಿದ್ದ. ನನಗೆ ಇವತ್ತು ಊರಿಗೆ ಹೋಗಲೇ ಬೇಕೆಂದೂ ನಾಳೆ ಬೆಳಗ್ಗೆ ಮುಖ್ಯವಾದ ಕೆಲಸವಿರುವುದರಿಂದ ನಿಮ್ಮೂರಿಗೆ ಬಂದು ಉಳಿಯಲು ಸಾಧ್ಯವಿಲ್ಲವೆಂದು ಹೇಳಿದೆ.

ಸರಿ ಹಂಗಾದ್ರೆ ಇವತ್ತೆ ನಾನು ಸಕಲೇಶಪುರಕ್ಕೆ ಬರ್ತೀನಿ, ನಿನ್ನ ಊರೀಗೇ ಬಿಡ್ತೀನಲ್ಲ ಬಾ, ಹೆಂಗೂ ನಿಂಗೆ ಬಸ್ ಚಾರ್ಜ್ ಉಳಿಯುತ್ತಲ್ಲ ಅದು ದಾರೀಲಿ ಹಾನುಬಾಳಲ್ಲಿ ಸಾಯಂಕಾಲದ ಖರ್ಚಿಗಾಯ್ತು ಎಂದು ಎಳೆದು ಬೈಕ್ ಹತ್ತಿಸಿದ. ನಾಲ್ಕು ರುಪಾಯಿ ಉಳಿಸಿಕೊಟ್ಟು ನಲವತ್ತು ರುಪಾಯಿ ಖರ್ಚು ಮಾಡ್ಸೋ ಐಡಿಯಾ ಹಾಕ್ಬೇಡ, ನಿನಗಾಗಿ ಬರ್ತೀನೀ ಆದರೆ ಸಾಯಂಕಾಲದ ಖರ್ಚೆಲ್ಲ  ನಿಂದೇ ಎನ್ನುತ್ತಾ ಅವನೊಂದಿಗೆ ಹೊರಟೆ.

ನಾನೂ ತೇಜಸ್ವಿಯವರನ್ನು ಭೇಟಿ ಮಾಡದೆ ತುಂಬ ಸಮಯವಾಗಿತ್ತು. ಈಗ ನಾರಾಯಣಗೌಡ ಜೊತೆಯಲ್ಲಿ ಇರುವುದರಿಂದ ಅವರಲ್ಲಿಗೆ ಹೋಗಲು ಒಂದು ಕಾರಣ ಸಿಕ್ಕಿತ್ತು.

ಹ್ಯಾಂಡ್ ಪೋಸ್ಟಿಗೆ ಬರುತ್ತಿದ್ದಂತೆ ಹೋಟೆಲೊಂದರ ಮುಂದೆ ಬೈಕ್ನಿಲ್ಲಿಸಿದ ನಾರಾಯಣಗೌಡ ಬಾ ಕಾಫಿ ಕುಡ್ದು ಹೋಗಣ ಎಂದ.

ಹೋಟೆಲಿನಲ್ಲಿ ಕಾಫಿಗೆ ಮೊದಲು ತಿಂಡಿಗೂ ಹೇಳಿದ. ನನ್ನ ಅನುಮಾನ ಬೆಳೆಯುತ್ತಲೇ ಇತ್ತು.

ನಾರಾಯಣ ನೀನು ಯಾವಾಗ ಬೇಕಾದ್ರೂ ಅವರಲ್ಲಿಗೆ ಒಬ್ನೇ ಹೋಗ್ತಿದ್ದೆ, ಈಗ ನಾನು ಬರಲ್ಲ ಅಂದ್ರು ಎಳ್ಕೊಂಡು ಹೋಗ್ತಾ ಇರೋದು ನೋಡಿದ್ರೆ ನಂಗ್ಯಾಕೋ ಡೌಟು.. ನೀನೇನೋ ಮುಚ್ಚಿಡ್ತಾ ಇದ್ದೀಯ, ಎಂದೆ.

ಅದೊಂದು ಕತೆ ಮಾರಾಯ, ಈಗ ಒಂದು ತಿಂಗ್ಳಲ್ಲಿ ನಂಗೆ ಅವ್ರತ್ರ ಅರ್ಜೆಂಟಾಗಿ  ಒಂದು ಕೆಲ್ಸ ಆಗ್ಬೇಕಿತ್ತು, ಬೆಳಗ್ಗೆ..ಬೆಳಗ್ಗೇನೆ ಅವ್ರ ಮನೆಹತ್ರ ಹೋದೆ. ಮನೇಲಿ ಯಾರೂ ಕಾಣುಸ್ಲಿಲ್ಲ, ಅಲ್ಲೇ ಮನೆ ಪಕ್ಕದಲ್ಲೇ ಕೆಲಸದೋನಿದ್ದ, ಅವನ್ನ  ಕೇಳುದ್ರೆ ‘ಅವುರಾಗಳೇ ಕ್ಯಾಮರಾ ತಗಂದು ತ್ವಾಟಕ್ಕೋದ್ರು’ ಅಂದ, ಅವ್ರು ಹೋದ ದಿಕ್ಕಿಗೇ ಹುಡುಕ್ತಾ ಹೋಗಿ ತೋಟದಲ್ಲೆಲ್ಲಾ ನೋಡ್ದೆ, ಅಲ್ಲೆಲ್ಲೂ ಕಾಣುಸ್ಲಿಲ್ಲ, ಹಂಗೇ ಅವ್ರುಮನೆ ಕೆರೆ ದಾಟಿ ಕಾಡು ಹತ್ತಿ ಗದ್ದೆ ಕಡೀಗ್ ಬಂದು ನೋಡಿದ್ರೂ ಅಸಾಮಿನೇ ಪತ್ತೆ ಇಲ್ಲ. ಇನ್ನೆಂಗೂ ವಾಪಸ್ ಹೋಗದಲ್ಲ, ನನಗ್ ಅವುರ್ನ ಅರ್ಜೆಂಟಾಗಿ ಕಾಣ್ಲೇ ಬೇಕಿತ್ತು, ಇಲ್ಲೇ ಎಲ್ಲಾರ ಇರ್ಬೌದು ಅಂದ್ಕಂಡ್… ಅಣ್ಣಾ…  ಅಣ್ಣಾ….. ಅಂತ ಜೋರಾಗಿ ಕೂಗ್ದೆ. ಅವೆಂತವೋ ಹಕ್ಕಿಗಳು ಮರದಿಂದ ಬರ್ರ್….. ಅಂತ ಹಾರಿಹೋದ್ವು.. ಜೊತಿಗೇ ದಡಕ್ಕಂತೆ ಎಂತದೋ ಪ್ರಾಣಿ ನೆಲದಿಂದ ಎದ್ದಂಗಾಯ್ತು. ನಾನು ಇದೆಂತದೋ ಕಾಡು ಹಂದಿನೋ.. ಕಾಟಿನೋ ಅಂತ ಗಾಭರಿಲಿ ಯಾವ್ದಾರು ಮರ ಹತ್ತಾಣ ಅಂತ ನೋಡ್ತಿದ್ರೆ, ಅದು ಇವ್ರೇ ಮಾರಾಯ… ನೆಲದಲ್ಲಿ ಸೊಪ್ಪು ಕಣಾರ (ಟೊಂಗೆ) ಎಲ್ಲ ಗುಡ್ಡಿಗೆ ಹಾಕ್ಕೊಂಡು ಅದರೊಳಗೆ ಮಲಗಿ ಫೋಟೋ ತೆಗಿಯಕ್ಕೆ ಮಾಡ್ಕಂಡಿದ್ರು, ನಂಗೆ ಗಾಬರೀಲೂ ನಗು ಬಂತು. ಅವರು ಎದ್ದೋರೆ ‘ಯಾವೋನೊ ಅವನು, ನಾನು ಅಷ್ಟೊಂತ್ತಿಂದ ಕಾಯ್ತಾ ಇದ್ರೆ ಎಲ್ಲಾ ಹಾಳು ಮಾಡ್ದೋನು, ಇಲ್ಲಿಗ್ಯಾಕಯ್ಯ ಬಂದೆ’ ಅಂಕ ಕಣಾರ ತಗಂದು ಹೊಡಿಯೋಕೇ ಬೆರಸ್ಕಂಡ್ ಬಂದ್ರು, ನಾನು ಸಿಕ್ಕಿದ್ರೆ ಹೊಡದೇ ಬಿಡೋರೋ ಏನೋ, ನಾನು ಹೆಂಗೆ ಪದರಾಡುಹಾಕ್ದೇ (ಓಟಕಿತ್ತೆ)  ಅಂದ್ರೇ ಮತ್ತೆ ಇವತ್ತೇ ನೋಡು ನೀನಿರೋಹೊತ್ಗೆ ಧೈರ್ಯವಾಗಿ ಅಲ್ಲಿಗೆ ಹೊರಟಿರೋದು ಅಂದ.

ನಾನು ಇದೇ ಕತೆಯನ್ನು ಬೇರೊಂದು ರೂಪದಲ್ಲಿ ಇನ್ನೊಬ್ಬನ ಬಾಯಲ್ಲಿ ಕೇಳಿದ್ದೆ. ಆದ್ದರಿಂದ ಇವರಿಬ್ಬರಲ್ಲಿ ಯಾರು ಯಾರ ಕಥೆಯನ್ನು ಕದ್ದಿದ್ದಾರೆ ಎಂದು ತಿಳಿಯಲಿಲ್ಲ. ಆದರೂ ಇವನೂ ಇಷ್ಟೆಲ್ಲ ಕಥೆಕಟ್ಟಿ ನನ್ನನ್ನು ಅಲ್ಲಿಗೆ ಕರೆದೊಯ್ಯತ್ತಿರಬೇಕಾದರೆ ಏನೋ ಭೀಕರವಾದದ್ದನ್ನು ಎದುರಿಸಬೇಕಾದೀತೆಂದು ಆತಂಕವಾಯಿತು. ನೀನು ಏನೇ ಹೇಳಿದ್ರೂ ನಾರಾಯಣ ನಂಗ್ಯಾಕೋ ನಿನ್ನ ಕಥೆ ಬಗ್ಗೆ ನಂಬಿಕೇನೇ ಬರ್ತಾಇಲ್ಲಾ ನಿನ್ನ ಮಾತು ಕೇಳ್ತಾ ನನ್ನ ಅನುಮಾನ ಇನ್ನೂ ಜಾಸ್ತಿ ಆಯ್ತು ಎಂದೆ.

‍ಲೇಖಕರು G

30 May, 2011

1 Comment

  1. swathi

    hello sir…tejaswi ಻ಅವರ friend ಕಡಿದಾಳು ಶಾಮಣ್ಣ ಻ಅವರ ಬಗ್ಗೆನೂ ನೀವು ಬರಿಬೇಕು..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading