ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ಕಥನ: ಕಿರುಗೂರಿನ ಗಯ್ಯಾಳಿಗಳ ವಿರುಧ್ಧ..

ತೇಜಸ್ವಿ ಕಥನ- ೫

ಪ್ರಸಾದ್ ರಕ್ಷಿದಿ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ಘೋಷಣೆಯಾಗಿತ್ತು. ಹಾನುಬಾಳು ಕ್ಷೇತ್ರದಿಂದ (ನಮ್ಮ ಬೆಳ್ಳೇಕೆರೆ ಹಾನುಬಾಳು ಹೋಬಳಿಗೆ ಸೇರಿರುವ ಗ್ರಾಮ) ಆ ಬಾರಿ, ಕಾಂಗ್ರೆಸ್ಪಕ್ಷದಲ್ಲಿದ್ದ ಅಪ್ಪಣ್ಣ ಎಂಬವರನ್ನು ಕರೆದುತಂದು ಜನತಾದಳದಿಂದ ಅಭ್ಯಥರ್ಿಯಾಗಿ ನಿಲ್ಲಿಸಿದರು. ಜನತಾದಳಕ್ಕೆ ಅನುಕೂಲವಾದ ವಾತಾವರಣ ಕಂಡುಬರುತ್ತಿದ್ದುದರಿಂದ ಆ ಪಕ್ಷದ ಕಾರ್ಯಕರ್ತರು ಎಲ್ಲಾಕಡೆ ಉತ್ಸಾಹದಿಂದ ಓಡಾಡುತ್ತಿದ್ದರು. ನಮ್ಮ ರಂಗ ತಂಡದ ಸದ್ಯರೆಲ್ಲ ಒಟ್ಟಾಗಿ ಚುನಾವಣೆಗೆ ಮುಂಚೆಯೇ ಅಪ್ಪಣ್ಣನವರಲ್ಲಿ ನೀವು ಗೆದ್ದರೆ ಈ ಬಾರಿ ನಮ್ಮಲ್ಲಿ ನಡೆಯುವ ನೀನಾಸಂ ತಿರುಗಾಟದ ನಾಟಕಗಳಿಗೆ ನೀವು ಪ್ರಾಯೋಜಕರಾಗಬೇಕು (ನಾಟಕ ಪ್ರದರ್ಶನವೇರ್ಪಡಿಸಲು ಬೇಕಾದ ಹಣಕ್ಕೆ ನಮ್ಮಲ್ಲಿ ಕೊರತೆ ಇತ್ತು) ಎಂಬ ಶರತ್ತಿನೊಡನೆ ಅವರಿಗೆ ಬೆಂಬಲ ಕೊಟ್ಟಿದ್ದೆವು.! ಕಾಂಗ್ರೆಸ್ನವರು ಜನತಾದಳದ ಅಭ್ಯಥರ್ಿ ಕಾಂಗ್ರೆಸ್ ಅಪ್ಪಣ್ಣ ಎಂದು ಹಾಸ್ಯ ಮಾಡತೊಡಗಿದರು. ಆ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ  ಜನತಾ ಅಲೆ ಇದ್ದುದರಿಂದ ಅಪ್ಪಣ್ಣ ಚುನಾವಣೆಯಲ್ಲಿ ಗೆದ್ದು ಜಿಲ್ಲಾಪಂಚಾಯತ್ ಸದಸ್ಯರಾದರು.

ನಮ್ಮ ಬಳಗವೆಲ್ಲ ಅಪ್ಪಣ್ಣನವರ ಪರವಾಗಿ  ಚುನಾವಣಾ ಪ್ರಚಾರದಲ್ಲಿ ತೊಡಗಿದ್ದುದರಿಂದ, ಚುನಾವಣೆ ಮುಗಿಯುವವರೆಗೆ ನಾವು ಯಾವುದೇ ರಂಗ ಚಟುಚಟಿಕೆಗೆ ಇಳಿಯಲಿಲ್ಲ. ಆದರೆ  ‘ನೀನಾಸಂ ತಿರುಗಾಟ’ವನ್ನು ನಮ್ಮಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಿದ್ದೆವು. ನಮ್ಮ ಶರತ್ತಿನ ಅಭ್ಯಥರ್ಿ ಚುನಾವಣೆಯಲ್ಲಿ ಗೆದ್ದಿದ್ದರಾದ್ದರಿಂದ ನಾಟಕಗಳ ಪ್ರಾಯೋಜಕರಾಗಲು ಒಪ್ಪಿಕೊಂಡಿದ್ದರು. ಆದ್ದರಿಂದ ನಾವು ಖಚರ್ುವೆಚ್ಚಗಳ ಬಗೆಗೆ ತಲೆಕೆಡಿಸಿಕೊಳ್ಳದೆ ನಾಟಕ ಪ್ರದರ್ಶನದ ವ್ಯವಸ್ಥೆ ಮಾಡಿದರೆ ಸಾಕಾಗಿತ್ತು. ನಾಟಕ ತಂಡದ ವಸತಿಗೆ ನಮ್ಮೂರ ಶಾಲೆಯಿದ್ದರೆ, ಊಟದ ವ್ಯವಸ್ಥೆಗೆ ಮತ್ತು ಅಡಿಗೆಗೆ ಕರಿಯಪ್ಪ ಗೌಡರನ್ನೇ ಕರೆಸಿದ್ದೆವು.

ಆ ವರ್ಷ. ನೀನಾಸಂ ತಿರುಗಾಟ ‘ಕನಕಾಗಮನ’, ‘ಆಊರು-ಈಊರು’ ಮತ್ತು ‘ಕಿರಗೂರಿನ ಗಯ್ಯಾಳಿಗಳು’ ಎಂಬ ಮೂರು ನಾಟಕಗಳನ್ನು ಪ್ರದರ್ಶನಕ್ಕೆ ಸಿದ್ಧಪಡಿಸಿಕೊಂಡಿತ್ತು. ನಾಟಕಗಳಿಗೆ ಪ್ರಾಯೋಜಕರಿದ್ದುದರಿಂದ ಟಿಕೆಟ್ ಇಟ್ಟಿರಲಿಲ್ಲ. ಆಗಷ್ಟೇ ಚುನಾವಣೆಗಳು ಮುಗಿದ ಹುಮ್ಮಸ್ಸಿನಲ್ಲಿ ಇದ್ದುದರಿಂದ ಸುತ್ತಮುತ್ತ ಹಲವು ಊರುಗಳಿಂದ ನಾಟಕ ನೋಡಲು ತುಂಬಾ ಜನ ಬಂದು ಸೇರಿದ್ದರು. ಮೊದಲನೇ ದಿನವೇ ‘ಕಿರಗೂರಿನ ಗಯ್ಯಾಳಿಗಳು’ ನಾಟಕ. ಈ ನಾಟಕದಲ್ಲಿ ಕೆಲವು ಮಾತುಗಳು ದಲಿತರನ್ನು ಅವಹೇಳನ ಮಾಡುವಂತೆ ಇದೆ ಎಂದು ಯಾರೋ ಕೆಲವರು ನಮ್ಮೂರಿನ ದಲಿತ ಹುಡುಗರಿಗೆ ಹೇಳಿದ್ದರಂತೆ. ಅದಕ್ಕೆ ತಾಳೆಯಾಗುವಂತೆ ನಾಟಕದ ಪ್ರಥಮಾರ್ಧದಲ್ಲಿ ದಲಿತರನ್ನು ಬೈಯುವ ಒಂದೆರಡು ಮಾತುಗಳೂ ಇವೆ.  ಇದನ್ನು  ಕೇಳಿದ ತಕ್ಷಣ ಕೆಲವು ಕಿಡಿಗೇಡಿಗಳು ಆ ಬೈಗುಳ  ಮಾತುಗಳನ್ನು ಬೇಕೆಂದೇ ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಪುನರುಚ್ಚರಿಸುತ್ತಾ ಕೂತರು. ದಲಿತ ಹುಡುಗರು ರೊಚ್ಚಿಗೆದ್ದರು. ಇನ್ನೇನು ಪ್ರೇಕ್ಷಕರಲ್ಲೇ ಎರಡು ಗುಂಪಾಗಿ ಹೊಡೆದಾಟವಾಗುವ ಲಕ್ಷಣಗಳು ಕಾಣಿಸತೊಡಗಿತು. ಅಷ್ಟರಲ್ಲಿ ನಾಟಕದ ಮಧ್ಯಂತರ ವಿರಾಮ ಬಂತು.

ಆಗ ಕೆಲವರು ದಲಿತ ಹುಡುಗರು ಈ ನಾಟಕದಿಂದ ನಮಗೆ ಅವಮಾನವಾಗುತ್ತಿದೆ. ಈ ನಾಟಕವನ್ನು ಕೂಡಲೇ ನಿಲ್ಲಿಸಬೇಕೆಂದು ನಮ್ಮಲ್ಲಿ ಒತ್ತಾಯ ಮಾಡತೊಡಗಿದರು. ಅಲ್ಲೇ ಇದ್ದ ಕೆಲವರು ಮರಿ ರಾಜಕಾರಣಿಗಳಿಗೆ, ನಾಟಕದ ಬಗ್ಗೆ ಏನೇನೂ ಗೊತ್ತಿಲ್ಲದ್ದಿದ್ದರೂ ‘ದಲಿತ ವಿರೋಧಿಗಳು’ ಎಂಬ ಹಣೆಪಟ್ಟಿ ತಮಗೂ ಬಂದೀತೆಂಬ ಭಯ ಕಾಡತೊಡಗಿ ಈ ನಾಟಕ ನಿಲ್ಲಿಸುವುದೇ ಒಳ್ಳೆಯದು, ಸುಮ್ಮನೆ ಗಲಾಟೆ ಯಾಕೆ ಎಂದೆಲ್ಲ ಹೇಳತೊಡಗಿದರು.

ನಾವೇನಾದರೂ ನಾಟಕವನ್ನು ನಿಲ್ಲಿಸಿದರೆ ದೊಡ್ಡ ರಾದ್ಧಾಂತವೇ ಆಗುತ್ತಿತ್ತು. ನಾಟಕವನ್ನು ನಿಲ್ಲಿಸಿದ ಕೂಡಲೇ ಇತರರು ಗಲಾಟೆ ಮಾಡುವುದಲ್ಲದೆ ದಲಿತರ ಮೇಲೆ ಹೊಡೆದಾಟಕ್ಕೂ ಹೋಗುತ್ತಿದ್ದರು. ಅಲ್ಲದೆ ಮುಂದಿನ ಎರಡು ದಿನಗಳಲ್ಲೂ ನಾಟಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಾವು ಇದುವರೆಗೆ ನಂಬಿಕೊಂಡು ಬಂದ ಮೌಲ್ಯಗಳನ್ನು ಗಾಳಿಗೆ ತೂರಿದಂತಾಗುವುದಲ್ಲದೆ, ‘ನಾಟಕ ದಲಿತ ವಿರೋಧಿಯಾಗಿದೆ’ ಎಂದು ಪ್ರಚಾರವಾಗುತ್ತಿತ್ತು.

ಈ ದಲಿತ ಹುಡುಗರೆಲ್ಲ ನಮ್ಮ ಸುತ್ತಲಿನ ಊರವರೇ. ನಮಗೆಲ್ಲ ಚೆನ್ನಾಗಿ ಪರಿಚಿತರೇ. ಆದರೆ ಯಾರೂ ಹೆಚ್ಚಿನ ವಿದ್ಯಾವಂತರಿರಲಿಲ್ಲ.

ಈ ವೇಳೆಗೆ ನಮ್ಮ ತಾಲ್ಲೂಕಿನಲ್ಲಿ ಬಹುಜನ ಸಮಾಜ ಪಾಟರ್ಿ ಸ್ವಲ್ಪ ಮಟ್ಟಿಗೆ ಪ್ರಚಾರಕ್ಕೆ ಬಂದಿತ್ತು. ಒಂದೆರಡು ಚುನಾವಣೆಗಳಲ್ಲಿ ಬಿ.ಎಸ್.ಪಿ. ಅಭ್ಯಥರ್ಿಗಳು ಸ್ಪಧರ್ಿಸಿಯೂ ಇದ್ದರು. ಈ ಹುಡುಗರಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರೂ ಇದ್ದರು. ನಾವೊಂದೆರಡು ಜನರು ಅವರಲ್ಲಿ ಕೆಲವರನ್ನು ಸ್ವಲ್ಪ ದೂರಕ್ಕೆ ಕರೆದೊಯ್ದು ಹೇಳಿದೆವು.

ನಿಮ್ಮಲ್ಲಿ ಕೆಲವರು ಬಿ.ಎಸ್.ಪಿ ಕಾರ್ಯಕರ್ತರಿದ್ದೀರ ಹೌದಲ್ಲ

ಹ್ಞುಂ

ಬಿ.ಎಸ್.ಪಿ. ಪೋಸ್ಟರ್ಗಳಲ್ಲಿ ಕುವೆಂಪು ಚಿತ್ರ ಇದೆ ಯಾಕೆ?

ಅವರು ವಿಚಾರವಾದಿಗಳು ಅದಕ್ಕೆ

ಅಂದರೆ ನೀವು ನಂಬಿದ ತತ್ವಕ್ಕೆ ಹೊಂದಿಕೆಯಾಗುವಂತೆ ಅವರ ವಿಚಾರಗಳು ಇದೆ ಅಲ್ವೆ?

ಹೌದು, ಆದ್ರೆ ಅದ್ಕೂ ಇದ್ಕೂ ಏನು ಸಂಬಂಧ?

ಅದೇ ಹೇಳ್ತೀವಿ, ಈ ನಾಟಕದ ಕಥೆ ಬರೆದವರು ಯಾರು ಗೊತ್ತಾ?

ಅದೇ ಹಾಕಿದ್ದೀರಲ್ಲ- ಹ್ಯಾಂಡ್ಬಿಲ್ಲಲ್ಲಿ ತೇಜಸ್ವಿ ಅಂತ

ಅವರ್ಯಾರು ಗೊತ್ತಾ?

…………..

ಹೇಳಿ

ಕುವೆಂಪು ಮಗ

ಸರಿ ಅವರು ನಿಮ್ಮ ವಿರುದ್ಧ ಇದ್ದಾರಾ?

. . . . . .  . .  .

ತೇಜಸ್ವಿ ಕೂಡಾ ಕುವೆಂಪು ಅವರಷ್ಟೇ ವಿಚಾರವಾದಿಗಳು, ನಿಮಗೆ ಗೊತ್ತಿರಬೇಕಲ್ಲ?

……………………..

ಅವರ ಗೊಂದಲವನ್ನು ಗಮನಿಸಿದ ನಾನು, ನೋಡಿ ನೀವು ಸುಮ್ಮನೆ ತಪ್ಪು ತಿಳಿದಿದ್ದೀರಿ. ಮೊದಲು ಇಡೀ ನಾಟಕವನ್ನು ನೋಡಿ, ಆಮೇಲೂ ನಿಮಗೆ ಈ ನಾಟಕದಿಂದ ಅವಮಾನ ಆಗ್ತಿದೆ ಅನ್ಸಿದ್ರೆ ಹೇಳಿ-ನಾನು ಮತ್ತು ಈ ನಾಟಕ ತಂಡದ ಮ್ಯಾನೇಜರ್, ಇಬ್ರೂ ಜೊತೇಲಿ ವೇದಿಕೆ ಮೇಲೆ ನಿಂತು ದಲಿತರ ಕ್ಷಮೆ ಕೇಳ್ತೀವಿ. ಮತ್ತು ಇನ್ನೊಂದಿನ ತೇಜಸ್ವಿಯವರಿಂದಲೇ ಸ್ಪಷ್ಟೀಕರಣ ಕೊಡಿಸ್ತೀವಿ. ಈಗ ಹೋಗಿ ನಾಟಕ ನೋಡಿ ಎಂದೆ.

ಸ್ವಲ್ಪ ಹೊತ್ತು ಗುಸು ಗುಸು ಮಾಡುತ್ತಿದ್ದವರು, ಮತ್ತೆ ಸುಮ್ಮನಾಗಿ ನಾಟಕ ನೋಡುತ್ತಾ ಕೂತರು. ನಾಟಕ ಮುಂದುವರೆಯಿತು. ಉಳಿದೆರಡು ದಿನ ಇನ್ನೂ ಹೆಚ್ಚು ಜನರು ನಾಟಕ ನೋಡಲು ಬಂದಿದ್ದರು.

ನಾಟಕ ಮುಗಿದು ಕೆಲವು ದಿನಗಳಾಗಿದ್ದವು. ಕೆಲವರು ದಲಿತ ಹುಡುಗರು ನಮ್ಮಲ್ಲಿಗೆ ಬಂದರು.

ಏನ್ರಯ್ಯ ಅಂದೆ

ಸಾರ್ ಅವತ್ತು ಅಂದ್ರಲ್ಲ ತೇಜಸ್ವಿ-ಕುವೆಂಪು ಮಗ ಅವ್ರು ನಿಮ್ಗೆ ತುಂಬಾನೇ ಕ್ಲೋಸಂತೆ

ಕ್ಲೋಸು-ಗೀಸು ಏನೂ ಇಲ್ಲ, ಒಂದೆರಡು ಸಾರಿ ಅವ್ರತ್ರ ಮಾತಾಡಿದ್ದೀನಿ ಅಷ್ಟೆ ಏನಿವಾಗ?

ಅವ್ರನ್ನ ಕರ್ಸ್ ಬೇಕಲ್ಲ

ಯಾಕೆ ನಾಟ್ಕ ನೋಡಿ ಸಮಾಧಾನ ಆಯ್ತಲ್ಲ ಇನ್ನೇನ್ ನಿಮ್ಗೆ ?

ಮುಂದಿನ ವಾರ ನಮ್ಮ ಸಂಘಟನೆ ರ್ಯಾಲಿ ಇದೆ. ಅವ್ರನ್ನ ಭಾಷ್ಣಕ್ಕೆ ಕರಿಯಾಣಾಂತ!

ನೀವೇ ಹೋಗಿ ಕರೀರಿ, ನಿಮ್ಮ ಕಾರ್ಯಕ್ರಮ ಒಳ್ಳೇದು ಅನ್ಸಿದ್ರೆ, ಅವ್ರಿಗೆ ಪುರುಸೋತ್ತಿದ್ರೆ ಬರ್ತಾರೆ ಹೋಗಿ ಎಂದು ಆ ಹುಡುಗರನ್ನು ಸಾಗಹಾಕಿದೆ.

‍ಲೇಖಕರು G

23 May, 2011

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading