ಶಿವಪ್ರಸಾದ್ ಪಟ್ಟಣಗೆರೆ
MEN 6625
‘ಸರ್ ಪುಸ್ತಕ ಬಂದಿದೆ ಬನ್ನಿ’ ಅಂತ ಪುಟ್ಟಸ್ವಾಮಿ ಕರೆ ಮಾಡಿದ್ರು. ನಾನು ಗಾಡಿ ತಗೆದುಕೊಂಡು ಹೊರಟೆ, ಗಾಡಿ ಡಿಕ್ಕಿಯಲ್ಲಿ ಹಿಡಿಸುವಷ್ಟು ಹಾಗೂ ಒಂದು ಬಾಕ್ಸಿನಲ್ಲಿ ಒಂದಷ್ಟು ಹಳೆಪುಸ್ತಕಗಳನ್ನ ತುಂಬಿಕೊಂಡು ಹತ್ತತ್ರಾ ನಾಗರಬಾವಿ ಬಳಿಗೆ ಬಂದೆ. ಆ ಟ್ರಾಫಿಕ್ಕಿನ ಹೊಗೆಗೆ ಹೆಲ್ಮೆಟ್ಟೂ ತೆಗೆಯಲಾಗದೆ, ಹಳೆಯ ಪುಸ್ತಕಗಳಿಗೆ ಬೈಂಡ್ ಹಾಕಲೆಂದು ಸ್ಟೇಷನರಿ ಅಂಗಡಿಯ ಒಳಕ್ಕೆ ನುಗ್ಗಿದೆ. ಆತನ ಬಳಿ ಒಂದಿಷ್ಟು ಚರ್ಚೆ ಮಾಡಿ ಈಚೆ ಬರುವಷ್ಟರಲ್ಲಿ ನನ್ನ ಗಾಡಿ ನಾಪತ್ತೆ.
ಅದೇ ಸಮಯಕ್ಕೆ ದೀಪಕ್ ಫೋನ್ ಏನೋ ಸಮಸ್ಯೆ ಮಾಡ್ಕೊಂಡು ‘ಸರ್ ಈ ತೇಜಸ್ವಿ ಅವರನ್ನ ಫಾಲೋ ಮಾಡಿ ಹಾಳಾಗೋದೆ ಸರ್’ ಅಂತ ಬಡಬಡಾಯಿಸ್ತಾ ಇದ್ರು. ಇದರ ಮದ್ಯೆ ನನಗೆ ನನ್ನ ಗಾಡಿ ಎಲ್ಲಿ ಹೋಯ್ತು ಎನ್ನುವ ಚಿಂತೆ. ‘ಸರ್ ನಾನು ಆಮೇಲೆ ಕರೆ ಮಾಡ್ತೀನಿ ಬಿಡಿ’ ಅಂತ ಹೇಳಿ ಪುಸ್ತಕದ ಸಮೇತ ಗಾಡಿ ಒಯ್ದ ಆ ಪೋಲೀಸರ ಬಗೆಗೆ ಸಿಟ್ ಬಂತು. ಹಣವಿಲ್ಲದೆ ಸಾಲಕ್ಕೆ ಪುಸ್ತಕ ತಂದಿದ್ದೆ. ಇನ್ನು ಹಾಳಾದ್ ಪೋಲೀಸನವರಿಗೆ ಹಣ ತೆತ್ತಬೇಕಲ್ಲ. ಇವರೀಗ ಕೊಡೋ ದುಡ್ಡಲ್ಲಿ ಇನ್ನೂ ಒಂದಿಷ್ಟು ಪುಸ್ತಕ ಕೊಳ್ಳಬಹುದಿತ್ತು ಅಂತೇಳಿ ಚೌಕಾಸಿ ಮಾಡ್ತಾ, ಯೋಚಿಸ್ತಾ ಇದ್ದೆ ಅಷ್ಟರಲ್ಲಿ ನನ್ನ ಜತೆಗೆ ಇನ್ನೊಬ್ರು ಸಿಕ್ರು, ಪಕ್ಕಾ ಚಡ್ಡಿ ಹಾಕ್ಕೊಂಡು ಗಾಡೀಲಿ ವಾಯುವಿಹಾರಕ್ಕೆ ಬಂದಿದ್ರು ಅನ್ನಿಸತ್ತೆ ಪಾಪ, ‘ಬನ್ನಿ ಸರ್ ನನ್ನ ಗಾಡಿನೂ ಹೊತ್ಕೊಂಡ್ ಹೋಗಿದರೆ ಹೇತ್ಲಾಂಡಿ ಬಡ್ಡಿ ಮಕ್ಳು ಈಗತಾನೆ ಎಂ.ಆರ್. ಪಿ. ಲಿ ಹೊಸ ವಿಸ್ಕಿ ತಂದಿದ್ದೆ. ಅದನ್ನು ಗಾಡಿ ಡಿಕ್ಕೀಲಿ ಇಟ್ಟಿದೀನಿ. ಬಾಟ್ಲಿ ಹೊಡೆದು ಹರಾಮ್ ಆಗಿರ‍್ತತೆ ತಥ್’ ಅಂತೇಳಿ ಬಡಬಡಾಯಿಸುತ್ತಲೇ ಇದ್ರು.
ಕೊನೆಗೆ ಚಂದ್ರ ಲೇಔಟ್ ಪೋಲೀಸ್ ಠಾಣೆಯ ಬಳಿಗೆ ಬಂದ್ವಿ. ಅಲ್ಲಿ ಕಾರ್ಪೊರೇಶನ್ ಅವ್ರು ನಾಯಿಗಳನ್ನ ಹಿಡಿದುಕೊಂಡು ಗುಡ್ಡೆ ಹಾಕಿದ ರೀತೀಲಿ ತರಾವರಿ ವಿನ್ಯಾಸದ ಗಾಡಿಗಳನ್ನು ತಂದು ಗುಡ್ಡೆ ಹಾಕಿದ್ರು. ಕೊನೆಗೆ ಪೋಲೀಸಪ್ಪನ್ನ ಮಾತಾಡಿಸಿದೆ. ಹಾಗೆ ಹೀಗೆ ವಾದ ಆಯ್ತು, ಕೊನೆಗೆ ಪೋಲೀಸಪ್ಪ -‘ನೀನು ಗಾಡಿ ಮೇಲೆ ಮೆನ್ ೬೬೨೫ ಅಂತ ಹಾಕಿದಿಯ, ನಂಬರ್ ಪ್ಲೇಟ್ ನೋಡಿದ್ರೆ ಬೇರೆನೇ ಐತೆ ?’ ಅಂತ ಬಯ್ಯಕ್ಕೆ ಶುರುಮಾಡಿದ್ರು . ನಾನು ಸಪ್ಪೆ ಮೋರೆ ಹಾಕ್ಕೊಂಡು ಸುಮ್ಮನಾದೆ.
ಸುಮಾರು ಹೊತ್ತಿನ ನಂತರ ಮತ್ತೊಬ್ಬ ಪೋಲೀಸ್ ಸಾಹೇಬ್ರು ಬಂದು ‘ನಮಸ್ತೆ ಸಾರ್’ ಅಂತ ಪೂರ್ಣ ಮಾರ್ಯಾದೆ ಕೊಡೋಕೆ ಸ್ಟಾರ್ಟ್ ಮಾಡಿದ್ರು. ನನಗೆ ಎಲ್ಲಿಲ್ಲದ ಆಶ್ಚರ್ಯ ಆಯ್ತು. ‘ಸಾರ್ ನಾನು ತೇಜಸ್ವಿ ಅಭಿಮಾನಿ’ ಅಂತ ಪರಿಚಯ ಮಾಡಿಕೊಂಡ್ರು ನನಗಂತು ಜೀವ ಬಂದಂಗಾಯ್ತು. ಅವರ ಬಳಿ ‘ಸರ್ ಹಣವಿಲ್ಲ ಏನು ಮಾಡೋದು ?’ ಅಂತ ಹೇಳಿದೆ ಕೊನೆಗೆ ಫೈನ್ ಅನ್ನ ಅವರೇ ಕಟ್ಟಿದ್ರು. ನನಗಂತೂ ಎಲ್ಲಿಲ್ಲದ ಕುಷಿ ಜಂಭ ಹೆಚ್ಚಾಯ್ತು. ಅದೇ ಕುಶಿಯಲ್ಲಿ ಕೆಲವು ಪುಸ್ತಕಗಳನ್ನು ಕೊಟ್ಟೆ. ‘ಇವುಗಳನ್ನ ಎಲ್ಲಿ ಕೊಂಡ್ರಿ ?’ ಅಂತೇಳಿ ಮಾತನಾಡುತ್ತಾ. ಪುಟ್ಟಸ್ವಾಮಿ ಅವರ ಬಳಿ ಸಿಗುವ ಹಳೆ ಪುಸ್ತಕಗಳ ಬಗೆಗೆ ತಿಳಿಸಿದೆ. ಪರಸ್ಪರ ಪರಿಚಯ ಮಾಡಿಕೊಂಡು ಅಲ್ಲಿಂದ ನನ್ನ ಮೆನ್ ೬೬೨೫ ಜತೆ ಹೊರಟು ಬಂದೆ.
ದೀಪಕ್ ಗೆ ಕರೆ ಮಾಡಿ ‘ಏನ್ ಸರ್ ತೇಜಸ್ವಿ ಇಂದ ಕೆಟ್ಟೆ ಅಂತಿದ್ರಿ ಏನ್ ಸಮಾಚಾರ? ಸಾರಿ ನಾನು ಹೀಗೆ ಪೋಲೀಸ್ ಅವರ ಬಳಿ ತಗ್ಲಾಂಕಂಡೆ ಅದಕ್ಕೆ ಕರೆ ಕಟ್ ಮಾಡಿದ್ದೆ’ ಹೀಗೀಗಾಯ್ತು ಅಂತೇಳಿ ಮುಂದೆ ನಡೆದ ಎಲ್ಲಾ ವಿಚಾರವನ್ನ ತಿಳಿಸಿದೆ. ದೀಪಕ್ ಅವ್ರು ‘ನೋಡುದ್ರಾ ತೇಜಸ್ವಿ ಇಲ್ಲ ಅಂತಿದ್ರೆ ಅವ್ರು ನಮ್ಮನ್ನ ಎಲ್ಲೊ ಒಂದು ಕಡೆ ಕಾಪಾಡ್ತಾ ಇದಾರೆ ಅಲ್ವ ಸಾರ್’ ಅಂತ ದೇವರನ್ನ ನಂಬುವ ಜನರ ಹಾಗೆ ಮಾತಾಡಿದ್ರು. ಆಗ ನನಗೆ ಕೊಂಚ ಮೊದಲು ದೀಪಕ್ ಅವರು ಹೇಳಿದ ಮಾತಿಗಿಂತ ಇದು ಸ್ವಲ್ಪ ಸರಿ ಅನ್ನಿಸ್ತು ಆದ್ರೆ ಅವರು ಯಾಕೆ ಹೀಗೆ ಹೇಳಿದ್ರು ಅನ್ನೋದು ಗೊತ್ತಾಗ್ಲಿಲ್ಲ..
ತೇಜಸ್ವಿ ನಮ್ಮನ್ನ ಅಗಲಿ ಇಂದಿಗೆ ೧೩ ವರ್ಷ ಕಳೆಯುತ್ತಾ ಬಂದಿದೆ ಆದರೆ ಅವರ ಯೋಚನಾ ಕ್ರಮಗಳು, ಬದುಕಿನ ಆರ್ಧ್ರತೆ ನಮ್ಮನ್ನೆಲ್ಲಾ ಕಾಡುತ್ತಲೇ ಇದೆ.
—
ತೇಜಸ್ವಿ ಏನಾದ್ರು ಬದುಕಿದ್ರೆ ಖಂಡಿತ ಈ ಮಾತನ್ನ ಹೇಳ್ತಾ ಇದ್ರು
ಅಣುಬಾಂಬು, ನ್ಯೂಕ್ಲಿಯರ್ ಗಳು, ದೊಡ್ಡ ದೊಡ್ಡ ಬಾಂಬು, ಜೆಟ್ ವಿಮಾನ, ರಾಕೆಟ್ಟು ಏನೆಲ್ಲಾ ಕಂಡುಹಿಡಿದರೂ ಸಹ. ಈ ಅತೀ ಸಣ್ಣ ವೈರಸ್- ಕರೋನಾವನ್ನು ಮನುಷ್ಯನಿಂದ ಹೊಡೆಯೋಕೆ ಆಗಲಿಲ್ವಲ್ರೀ-
ತೇಜಸ್ವಿ ನನ್ನನ್ನು ಎಷ್ಟು ಪ್ರಭಾವಿಸಿಬಿಟ್ಟರು, ಆವರಿಸಿ ಬಿಟ್ಟರು ಎಂದರೆ……ನನ್ನ ಮಗನಿಗೆ ಅವರೆಸರಿಡುವಷ್ಟು…
ಡಾ.ಚಂದ್ರಪ್ಪ ಎನ್.ಸಿ.ಮಾಲೂರು.