’ಶಿವ’…ಅಕ್ಷರಶಃ ತೇಜಸ್ವಿಯವರ ಬಲಗೈ ಭಂಟ. ಸುಮಾರು ೨೫ ವರ್ಷಗಳ ಕಾಲ ತೇಜಸ್ವಿಯವರಿಗೆ ಬಹುತೇಕ ಅವರ ಎಲ್ಲಾ ಕೆಲಸಗಳಲ್ಲಿ, ಆಸಕ್ತಿಗಳಲ್ಲಿ, ಅಲೆದಾಟಗಳಲ್ಲಿ ಸಾಥಿಯಾಗಿದ್ದವನು ಈ ಶಿವ. ಅದು ’ನಿರುತ್ತರ’ ತೋಟದ ಸಂಪೂರ್ಣ ನಿರ್ವಹಣೆ ಇರಬಹುದು, ಆಳುಕಾಳುಗಳ ಮೇಲ್ವಿಚಾರಣೆ ಇರಬಹುದು, ಅಥವಾವ ತೋಟದೊಳಗೆ ನೀರು ಕುಡಿಯಲು ಬರುವ, ಗೂಡುಕಟ್ಟಿ ಮೊಟ್ಟೆ ಇಟ್ಟು ಮರಿಮಾಡಿ ತಮ್ಮ ವಂಶಭಿವೃದ್ಧಿಗಾಗಿ ಶ್ರಮಿಸುವ ಕಾಡಿನ ಹಕ್ಕಿಗಳ ಚಲನವಲನಗಳನ್ನು ಕಂಡು ಕಾಣದಂತೆ ಸೂಕ್ಷ್ಮವಾಗಿ ಗಮನಿಸಿ ಅದನ್ನು ‘ಧಣಿ’ಗೆ ತಿಳಿಸಿ ಅವುಗಳ ಫೋಟೊ ತೆಗೆಯಲು ಸಹಕರಿಸುವ ಇನ್ಫಾರ್ಮರ್ ಕೆಲಸ ಇರಬಹುದು, ಅಥವ ದಾರಿ ತಪ್ಪಿ ಕಾಡಿನಿಂದ ತೋಟಕ್ಕೆ ನುಗ್ಗುವ ಕಾಡುಹಂದಿಗಳ ಜಾಡು ಹಿಡಿದು ತನ್ನ ಧಣಿ ಅವುಗಳನ್ನು ಬೇಟೆಯಾಡುವಂತೆ ಪ್ರೇರೇಪಿಸುವುದಿರಬಹುದು ಅಥವ ಕಾರು ಜೀಪು, ಸ್ಕೂಟರ್ ರಿಪೇರಿಯ ಸಂದರ್ಭದಲ್ಲಿ ಶ್ರೀರಾಮಚಂದ್ರನ ಆಜ್ಞಾಪಾಲಕ ಹನುಮಂತನಂತೆ ಒಡೆಯನ ಹಿಂದೆ ನಿಂತು ಅವರ ಆಜ್ಞೆಗಳನ್ನು ಚಾಚುತಪ್ಪದಂತೆ ಪಾಲಿಸುವುದಾಗಲಿ ಹೀಗೆ ತೇಜಸ್ವಿಯವರ ಸಕಲ ಕೆಲಸ ಕಾರ್ಯಗಳೆಲ್ಲದಕ್ಕೂ ಈ ಶಿವ ಬೇಕೆಬೇಕಿತ್ತು.
ಈ ಶಿವ ತನ್ನರ್ಧ ಬದುಕನ್ನ ತೇಜಸ್ವಿ ಹೇಳಿದ ಪ್ರತಿಯೊಂದು ಮಾತನ್ನು ವೇದವಾಕ್ಯದಂತೆ ಸ್ವೀಕರಿಸಿ ಪಾಲಿಸಿದ್ದಾನೆ ಮತ್ತು ತನ್ನರ್ಧ ಬದುಕನ್ನ ಅವರ ಹಿಂದೆ ಸುತ್ತುತ್ತಲೇಕಳೆದಿದ್ದಾನೆ.ಅಷ್ಟೂ ಹೆಮ್ಮೆ, ತೃಪ್ತಿ, ಸಂತೋಷಗಳನ್ನ ಕಣ್ಣಿನಲ್ಲಿ ತುಂಬಿಕೊಂಡೇ ಶಿವ ನಮ್ಮೊಂದಿಗೆ ಮಾತು ಪ್ರಾರಂಭಿಸಿದ.
’ನನ್ನೆಸ್ರು ಶಿವ ಅಂತ. ನಮ್ಮೂರು ಕಾಸರಗೋಡಿನ ಹತ್ತಿರದ ಒಂದು ಹಳ್ಳಿ.ತುಂಬಾ ವರ್ಷಗಳ ಹಿಂದೆ ನಾನು ಮೂಡಿಗೆರೇಲಿ ಕೆಲಸ ಏನೂ ಮಾಡದೇ ಓಡಾಡ್ಕೊಂಡಿದ್ದೆ. ಆಗ ಸಾರೇ ನನ್ನನ್ನ ಕರೆದು ತೋಟದ ಕೆಲಸ ಮಾಡು ಅಂತೇಳಿ ಅಡ್ವಾನ್ಸ್ ಕೊಟ್ರು. ನಾನು ಮೂರುದಿನ ಬಿಟ್ಟು ಬರ್ತೀನಿ ಅಂತ ಹೇಳಿ ಹೋದವನು ವಾಪಸ್ ಬರಲೇ ಇಲ್ಲ. ಒಂದಿನ ಸಾರ್ ಮೂಡಿಗೆರೇಲಿ ಸಿಕ್ಕಿ ’ಏಯ್ ಶಿವ, ಎಲ್ಲಯ್ಯ ನೀನು ಬರ್ತೀನಿ ಅಂತ ಹೋದವ್ನು ಅಡ್ರೆಸ್ಸಿಗೆ ಇಲ್ಲ. ನಡಿ ತೋಟಕ್ಕೆ’ ಅಂದ್ರು. ನಾನು ’ಸಾರ್ ಇನ್ನೊಂದೆರಡು ದಿನದಲ್ಲಿ ಬರ್ತೀನಿ’ ಅಂತ ಹೇಳ್ದೆ. ಅವರು ಸುಮ್ನೆ ಹೊರಟು ಹೋದ್ರು. ಆದರೆ ಒಂದು ವಾರ ಕಳೆದ್ರೂ ನಾನು ಅವರ ತೋಟದ ಕೆಲಸಕ್ಕೆ ಹೋಗದೇ ಅಲ್ಲಿ ಇಲ್ಲಿ ಓಡಾಡ್ಕೊಂಡೇ ಇದ್ದೆ. ಕಡೆಗೆ ಒಂದಿನ ಸಿಕ್ಕಿದಾಗ ಬಿಡದೇ ಸ್ಕೂಟ್ರಲ್ಲಿ ಕೂರಿಸ್ಕೊಂಡು ತೋಟಕ್ಕೆ ಕರ್ಕೊಂಡ್ ಬಂದ್ರು. ಅವತ್ತಿಂದ ನಾನು ಈ ತೋಟದಲ್ಲೇ ಕೆಲಸ ಮಾಡ್ತಾ ಬಂದಿದೀನಿ’ ಎಂದು ತೋಟದ ಕೆಲಸದ ನೆಪದಿಂದ ತೇಜಸ್ವಿಯವರ ಸಂಪರ್ಕಕ್ಕೆ ಬಂದ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ಶಿವು ಮಾತು ಪ್ರಾರಂಭಿಸಿದರು.
’ಮೊದಲು ಬಂದಾಗ ಬೇರೆ ಒಬ್ರು ಇಲ್ಲಿ ರೈಟರ್ ಆಗಿದ್ರು.ಸ್ವಲ್ಪ ದಿನ ಆದ್ಮೇಲೆ ಅವರು ಬಿಟ್ಟು ಹೋದ ನಂತ್ರ ನಾನು ಇಲ್ಲಿ ರೈಟರ್ ಆಗಿದ್ದೀನಿ’ ಎಂದು ಮುಂದುವರೆಸಿದರು.
’ಅಮೇಲೆ?’ ನನಗರಿವಿಲ್ಲದಂತೆಯೇ ಪ್ರಶ್ನೆ ಹೊರಬಿತ್ತು.
’ಅಮೇಲೆ ತೋಟದ ಕೆಲಸದ ಜೊತೆಗೆ ಇತರೆ ಕೆಲಸಾನೂ ಮಾಡ್ತಾ ಬರ್ತಾ ಇದ್ದೀನಿ’, ಶಿವು ಉತ್ತರಿಸಿದರು.
’ಇತರೆ ಕೆಲಸ ಅಂದ್ರೆ?’ ಮತ್ತೊಂದು ಪ್ರಶ್ನೆ ನನ್ನ ಕಡೆಯಿಂದ.
’ಅವರಿಗೆ ಈ ಫೋಟೋ ತೆಗೆಯೋದು, ಶಿಕಾರಿ ಅಭ್ಯಾಸ ಎಲ್ಲಾ ಇತ್ತಲ್ಲ, ಆಗೆಲ್ಲ ನಾನು ಅವರ ಜೊತೆಗಿರ್ತಿದ್ದೆ’ ಶಿವು ಉತ್ತರಿಸಿದರು.
’ಸ್ವಲ್ಪ ವಿವರವಾಗಿ ಹೇಳ್ತೀರ?’ ನಾನು ಕೇಳಿದೆ.
ಶಿವು ಒಂದೊಂದಾಗಿ ನೆನಪಿಸಿಕೊಳ್ಳುತ್ತಾ ಹೋದರು,
ಫೋಟೋಗ್ರಫಿ ಎಂಬ ಪರಮ ಸೆನ್ಸಿಟಿವ್ ಹಾಬಿ
‘ನಾನು ತೋಟದಲ್ಲಿ ಕೆಲಸ ಮಾಡ್ತಾ ಓಡಾಡ್ಕೊಂಡ್ ಇರ್ತಿದ್ದೆ. ಆಗ ಸಾರು ’ಹಕ್ಕಿಗಳು ಎಲ್ಲಿ ನೀರು ಕುಡಿಯಕ್ ಬರ್ತವೆ? ಎಲ್ಲಿ ಇಳಿತವೆ? ಎಲ್ಲಿ ಗೂಡು ಕಟ್ತವೆ? ಅದನೆಲ್ಲಾ ಗಮನಿಸಿ ನನಗೆ ಬಂದು ಹೇಳು’ ಅಂತ ಹೇಳಿದ್ರು. ನಾನು ಅವರು ಹೇಳಿದ್ರಲ್ಲ ಅಂತ ಅವತ್ತಿನಿಂದ ಯಾವ ಹಕ್ಕಿ ಎಲ್ಲಿ ಇಳಿತದೆ? ಎಲ್ಲಿ ನೀರು ಕುಡೀಲಿಕ್ಕೆ ಬರ್ತದೆ ಅದನೆಲ್ಲಾ ತೋಟದ ಕೆಲಸದ ಜೊತೆಗೆ ಗಮನಿಸ್ತಿರ್ತಿದ್ದೆ. ಯಾವುದಾದರೂ ಕಣ್ಣಿಗೆ ಬಿದ್ರೆ ಅದನ್ನ ಬಂದು ಸಾವ್ಕಾರ್ರಿಗೆ (?) ಬಂದು ಹೇಳ್ತಿದ್ದೆ. ಅಮೇಲೆ ಅವರು ನಾನು ಹೇಳಿದ ಪಾಯಿಂಟ್ಸ್ ನೆಲ್ಲಾ ಇಟ್ಕೊಂಡು ಆ ಹಕ್ಕಿಗಳಿಗೆ ಗೊತ್ತಾಗದ ಹಾಗೆ ಅವುಗಳ ಫೋಟೋ ತೆಗಿತಿದ್ರು’.
‘ಹಕ್ಕಿಗಳಿಗೆ ಗೊತ್ತಾಗದ ಹಾಗೆ ಫೋಟೋ ತೆಗೆಯೋದು ಅಂದ್ರಿ. ಅದು ಹ್ಯಾಗೆ?’ ಶಿವು ರ ಮಾತು ತಡೆದು ಕೇಳಿದೆ.‘ಅದು ಹೇಗೆ ಅಂತ ನಿಮಗೆ ಹೇಳೋಕ್ಕಿಂತಲೂ ತೋರಿಸಿದ್ರೆ ಚೆನ್ನಾಗಿರುತ್ತೆ.ಬನ್ನಿ ನನ್ಜೊತೆ’ ಎಂದು ಹೇಳೆ ನಮ್ಮನ್ನು ಅವರ ಸಂಗಡ ಕರೆದುಕೊಂಡು ತೇಜಸ್ವಿಯವರ ಮನೆ ಎದುರಿಗಿನ ಮರವೊಂದರ ಮುಂದಕ್ಕೆ ಕರೆದುಕೊಂಡು ಬಂದರು. ನಾವು ನೋಡುನೋಡುತ್ತಿದ್ದಂತೆ ಶಿವು ಸುಮಾರು ನಾಲ್ಕಡಿ ಅಳತೆಯ ಒಂದಡಿ ಒಂದುವರೆ ಅಡಿ ಎತ್ತರದ ದಪ್ಪನೆಯ ಬಟ್ಟೆಯೊಂದನ್ನು ಮನೆಯೊಳಗಿನಿಂದ ತಂದು ನಾಲ್ಕು ಕಡ್ಡಿಯ ಗೂಟಗಳನ್ನು ನೆಲಕ್ಕೆ ಹುಗಿದು ಆ ಗೂಟಗಳಿಗೆ ಕೈಲಿದ್ದ ಬಟ್ಟೆಯನ್ನು ಹೊದಿಸತೊಡಗಿದರು. ಕೆಲವೇ ನಿಮಿಷಗಳಲ್ಲಿ ನಾಯಿ ಗೂಡಿನಂತೆ ಕಾಣುವ ಚೌಕಾಕಾರದ ಆಕೃತಿಯೊಂದು ನಮ್ಮ ಕಣ್ಮುಂದೆ ಸಿದ್ದವಾಯಿತು.
’ಏನಿದು?’ ಎಂದು ಪ್ರಶ್ನಿಸಲೂ ಅವಕಾಶವೇ ಕೊಡದೇ ಶಿವು ಮಾತು ಮುಂದುವರೆಸಿದರು.’ಇದು ಹೈಡ್ ಔಟು.ಯಾರಿಗೂ ಕಾಣದ ಹಾಗೆ ಇದರ ಒಳಗೆ ಮುದುರಿಕೊಂಡು ಕುತ್ಕೊಬಹುದು.ಇದನ್ನ ಬಳಸೇ ಸಾರು ಹಕ್ಕಿಗಳಿಗೆ ಗೊತ್ತಾಗದ ಹಾಗೆ ಅವುಗಳ ಫೋಟೋ ತೆಗೀತಾ ಇದ್ದಿದ್ದು. ನಾನು ಆಗ್ಲೇ ಹೇಳಿದ ಹಾಗೆ ಹಕ್ಕಿಗಳು ತೋಟದೊಳಗೆ ನೀರು ಕುಡಿಲಿಕ್ಕೆ ಬರ್ತಿದ್ದದ್ದು, ಗೂಡುಕಟ್ಟಿದ್ದು, ಮರಿಮಾಡಿದ್ದು ಏನಾದ್ರು ನೋಡಿ ಬಂದು ಹೇಳಿದ್ರೆ ಇವರು ಆ ಜಾಗದ ಹತ್ತಿರ ಈ ಹೈಡ್ ಹಾಕ್ಲಿಕ್ಕೆ ಹೇಳ್ತಿದ್ರು. ನಾನು ಹಾಗೇ ಮಾಡ್ತಿದ್ದೆ. ಆದರೆ ತಕ್ಷಣ ಹೈಡ್ ಹಾಕ್ಕೊಂಡು ಕೂತು ಫೋಟೋ ತೆಗಿಲಿಕ್ಕೆ ಆಗೋದಿಲ್ಲ. ಹಕ್ಕಿಗಳು ನಮಗಿಂತಲೂ ಸಾವಿರ ಪಾಲು ಸೂಕ್ಷ್ಮ ಇರ್ತವೆ. ಅವು ದಿನಾ ಬರೋ ಜಾಗದಲ್ಲಿ ಒಂದು ಸ್ವಲ್ಪ ವ್ಯತ್ಯಾಸ ಆಗಿದ್ರು ಅವಕ್ಕೆ ಗೊತ್ತಾಗಿಬಿಡುತ್ತೆ. ಆಗ ಅವು ಹುಷಾರಾಗ್ಬಿಟ್ಟು ಹಾರಿ ಹೋಗ್ಬಿಡ್ತವೆ. ಅದಕ್ಕೆ ಸಾರು ಒಂದು ವಾರ ಮೊದಲೇ ಹಕ್ಕಿಗಳು ನೀರುಕುಡಿಯೋಕೆ ಬಂದ ಜಾಗದ ಹತ್ತಿರ ಈ ಹೈಡ್ ಹಾಕಿ ಬಿಟ್ಟುಬಿಡ್ತಿದ್ರು. ಹಕ್ಕಿಗಳು ಅದಕ್ಕೆ ಹೊಂದಿಕೊಂಡ ನಂತರ ಇವರು ಬೆಳಿಗ್ಗೇನೆ ಹೋಗಿ ಅದರೊಳಗೆ ಸದ್ದಾಗದಂಗೆ ಕೂತ್ಕೊಂಡು ಅವುಗಳ ಫೋಟೋ ತೆಗೀತಿದ್ರು. ಒಂದ್ ಸ್ವಲ್ಪ ಸದ್ದಾದ್ರೂ ಎಲ್ಲ ಹಾರಿ ಹೋಗ್ಬಿಡ್ತವೆ. ತುಂಬಾ ಹುಷಾರಾಗಿ, ಎಚ್ಚರಿಕೆಯಿಂದ ಕೆಲಸ ಮಾಡ್ಬೇಕಿತ್ತು.
ಅಮೇಲೆ ಯಾವುದಾದರೂ ಹಕ್ಕಿ ಗೂಡುಕಟ್ಟಿದ್ರೆ ಅಲ್ಲಿ ಅದರ ಫೋಟೋ ತೆಗೀಲಿಕ್ಕೆ ಆಗಲ್ಲ ಅಂತ ಅನ್ಸಿದ್ರೆ ಪ್ರತಿದಿನ ಸ್ವಲ್ಪ ಸ್ವಲ್ಪ ಸ್ವಲ್ಪ ಸ್ವಲ್ಪನೇ ಆ ಗೂಡನ್ನ ಇಷ್ಟಿಷ್ಟೇ ಇಷ್ಟಿಷ್ಟೇ ಜರಗಿಸಿ ಜರಗಿಸಿ ತಮಗೆ ಬೇಕಾದ ಕಡೆ ಇಟ್ಕೊಂಡು ಅದರ ಫೋಟೋ ತೆಗೀತಿದ್ರು. ಹಾಗೇ ಬಾರಿ ಎಚ್ಚರಿಕೆಯಿಂದ ಕೆಲಸ ಮಾಡ್ತಿದ್ರು.ಒಂದೇ ಸಲ ಆ ಗೂಡನ್ನ ಎತ್ತಿ ಬೇಕಾದ ಇಟ್ಟಿದ್ದೇ ಆದರೆ ತಾಯಿಹಕ್ಕಿ ಮರಿಗಳನ್ನು ತೊರೆದುಹೋಗುವ ಅಪಾಯ ಇರುವುತ್ತದೆ.ಹಾಗಾಗಿ ತೇಜಸ್ವಿಯವರು ಹಾಗೆ ಮಾಡುತ್ತಿದ್ದದ್ದು’ ಎಂದು ಶಿವು ವಿವರಿಸಿದರು.
ಎಲ್ಲೊ ನಿನ್ ತಲೆ, ಹಂದೀನು ಇಲ್ಲ…ಎಂಥದ್ದೂ ಇಲ್ಲ…
ಹೀಗೆ ಮಾತನಾಡುತ್ತಲೇ ಮಾತು ಫೋಟೋಗ್ರಫಿಯಿಂದ ಶಿಕಾರಿಯ ದಿನಗಳ ಹಾದಿ ಹಿಡಿಯಿತು.
ಶಿವು ಶಿಕಾರಿಗೆ ಸಂಬಂಧಪಟ್ಟ ಸ್ವಾರಸ್ಯಕರ ಘಟನೆಯೊಂದನ್ನು ನಮ್ಮೊಂದಿಗೆ ಹಂಚಿಕೊಳ್ಳತೊಡಗಿದರು.
“ಒಂದ್ಸಾರ್ತಿ ನಾನು ತೋಟಕ್ಕೆ ಸ್ಪ್ರಿಂಕ್ಲರ್ ಇಡಕ್ಕೆ ಅಂತ ಹೋಗ್ತಿದ್ದೆ. ನನ್ನ ಜೊತೆಗೆ ಇಬ್ರು ಹೆಲ್ಪರ್ಸ್ ಇದ್ರು. ಆಗ ಏಳೆಂಟು ಹಂದಿಗಳು ಹಳ್ಳ ಇಳಿದು ತೋಟದ ಕಡೆ ಬರ್ತಾ ಇದ್ವು. ಅದರ ಜೊತೆಗೆ ಮರಿಗಳು ಇದ್ವು. ನಾನು ತಕ್ಷಣ ನನ್ನ ಜೊತೆ ಇದ್ದ ಇಬ್ಬರಿಗೂ ’ಗಲಾಟೆ ಮಾಡ್ಬೇಡಿ. ಅವು ಎಲ್ಲಿ ಬಂದು ಕೂರ್ತವೆ ಅಂತ ನೋಡ್ಕೊಳಿ’ ಅಂತೇಳಿ ಮನೆಕಡೆ ಓಡಿಬಂದು ’ಸಾರ್ ಹಂದಿಗಳು ಬಂದಿದಾವೆ’ ಅಂತ ಸಾವ್ಕಾರ್ರಿಗೆ ಹೇಳ್ದೆ. ಅವ್ರು ’ಎಲ್ಲಿ?ಏನು?ಅಂತ ಕೇಳ್ಕೊಂಡು ತಕ್ಷಣ ಬೇಕಾದವರಿಗೆಲ್ಲ ಫೋನ್ ಮಾಡಿದ್ರು. ಜಗದೀಶ್ ಅಂತಿದ್ರು ಹಳೇಮೂಡಿಗೆರೆ ಜಗದೀಶ್, ಭೂತನಕಾಡು ಅಮರಣ್ಣ, ರಘು ಅಣ್ಣ ಅವ್ರಿಗೆಲ್ಲ ಫೋನ್ ಮಾಡಿ ಬೇಗ ಬರೋದಿಕ್ಕೆ ಹೇಳಿದ್ರು. ಎಲ್ರೂ ಕೋವಿ ತಗೊಂಡ್ ಬೇಗ ಬಂದ್ರು.ನಾನು ಅವ್ರನ್ನೆಲ್ಲ ಹಂದಿಗಳು ಇದ್ದ ಜಾಗಕ್ಕೆ ಕರ್ಕೊಂಡ್ ಹೋದೆ. ಹಂದಿಗಳು ಅದೇ ಹೊಂಡದಲ್ಲಿ ಅಡಗಿಕೊಂಡಿದ್ವು. ಎಲ್ರೂ ಒಂದೊಂದ್ ದಿಕ್ಕಿಗೆ ಗುರಿ ಹಿಡಿದು ಹಂದಿಗಳು ಮೇಲೆ ಬರೋದನ್ನೇ ಕಾಯ್ತಾ ಕೂತ್ಕೊಂಡ್ರು. ನಾನು ಒಂದು ಕಡೆ ನಿಂತಿದ್ದೆ. ಒಬ್ರು ಹಂದಿ ಮೇಲಕ್ಕೆ ಓಡ್ಸೋಕೆ ಹಳ್ಳಕ್ಕೆ ಇಳಿದ್ರು. ಇವ್ರು ಈ ಕಡೆ ಹುಡುಕ್ತಿದ್ರೆ ಹಂದಿಗಳು ಆ ಕಡೆ ಸೇರ್ಕೊಂಡಿದ್ವು. ಹಂಗಾಗಿ ಹಂದಿಗಳು ಹಳ್ಳಕ್ಕೆ ಇಳಿದವ್ರಿಗೆ ಕಾಣ್ಲೇಇಲ್ಲ.
ಅಮೇಲೆ ಅವ್ರು ಮೇಲೆ ಬಂದು ’ಎಲ್ಲೊ ನಿನ್ ತಲೆ, ಹಂದೀನು ಇಲ್ಲ…ಎಂಥದ್ದೂ ಇಲ್ಲ…ಸುಮ್ನೆ ನಮ್ಮ ಒಂದು ದಿನ ಹಾಳು ಮಾಡ್ದ. ಇವನ ಮಾತು ಕಟ್ಕೊಂಡ್ ಬಕ್ರಾ ಆದ್ವಿ ನಾವು’ ಅಂತೆಲ್ಲಾ ಬೈಯೊಕೆ ಶುರು ಮಾಡಿದ್ರು. ನಾನು ’ಇಲ್ಲ ಸಾರ್ ಹಂದಿ ಉಂಟು. ನಾನು ನೋಡ್ತೀನಿ ಬನ್ನಿ’ ಅಂತೇಳಿ ಹಳ್ಳಕ್ಕೆ ಇಳಿದೆ. ನಾನು ಹಳ್ಳಕ್ಕೆ ನೆಗದಿದ್ದು…ನೇರ ಹಂದಿಗಳ ಮಧ್ಯಕ್ಕೆ!!! ತೋಟದಲ್ಲಿ ಆಗ ’ಜೂಲಿ’ ಅಂತ ನಾಯಿ ಇತ್ತು. ಸ್ಪ್ಯಾನಿಯಲ್ಲು…ಅದು ಹಂದಿ ನೋಡಿದ್ದೇ ನನ್ನ ಹಿಂದೆ ಅದೂ ಕೆಳಕ್ಕೆ ನೆಗೀತು. ನಾಯಿ ನೋಡಿದ್ದೇ ಹಂದಿಗಳೆಲ್ಲಾ ದಿಕ್ಕಾಪಾಲಾಗಿ ಆಕಡೆ ಒಂದಷ್ಟು ಈಕಡೆ ಒಂದಷ್ಟು ಎಲ್ಲಾ ಓಡೋಕೆ ಶುರು ಮಾಡಿದ್ವು.
ಇವ್ರೆಲ್ಲಾ ಕೋವಿನ ಸ್ಟೈಲಾಗಿ ಹೆಗಲ್ ಮೇಲೆ ಇಟ್ಕೊಂಡು ಮಾತಾಡ್ತಾ ನಿಂತಿದ್ರು. ಎರಡು ಹಂದಿಗಳು ಅವರ ಮಧ್ಯ ನುಗ್ಗಿ ಓಡಿ ಹೋದ್ವು. ಇವರು ನಿಧಾನಕ್ಕೆ ಗುಂಡು ಹಾರಿಸೊ ಅಷ್ಟರಲ್ಲಿ ಅವೆಲ್ಲಾ ದಿಕ್ಕಾಪಾಲಾಗಿ ಓಡಿಹೋಗಿದ್ವು. ಒಂದೇ ಒಂದು ಹಂದೀನೂ ಅವತ್ತು ನಮಗೆ ಹೊಡೆಯೋಕೆ ಆಗಲಿಲ್ಲ. ನಾನು ಮೇಲೆ ಬಂದು ’ನನ್ನೇ ಬೈತಿದ್ರಲ್ಲ ಸಾರ್.ಈಗ ಎಲ್ಲಿಂದ ಬಂತು ಹಂದಿ?’ ಅಂದೆ. ’ಹೌದು ಕಣೋ…ನಿನ್ ಮಾತು ಕೇಳ್ದೆ ತಪ್ಪು ಮಾಡ್ಬಿಟ್ವಿ…ಇಲ್ಲಾಂದಿದ್ರೆ ಇವತ್ತು ಹಬ್ಬ ಮಾಡ್ಬಹುದಿತ್ತು…!!!’ಅಂತ ಎಲ್ರೂ ಪೇಚಾಡಿದ್ರು’ ಎಂದು ಅಂದಿನ ಘಟನೆಯನ್ನು ನೆನಪಿಸಿಕೊಂಡು ನಕ್ಕರು. ಹೀಗೆ ಶಿವು ಧಣಿಯ ಕುರಿತ ನೆನಪಿನ ಪಯಣ ಮುಂದುವರೆಸಿದರು.
…ಹಳೆಪ್ಯಾಂಟ್ ಹಾಕ್ಕೊಂಡ್ ಹೋದ್ರು ನಾನ್ ನಾನೇ ಆಗಿರ್ತೀನಿ!!!
ಮತ್ತೆ ನಮ್ ಸಾವ್ಕಾರ್ರು ಬಗ್ಗೆ ತುಂಬಾ ಜನ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ‘ಅವ್ರಿಗೆ ತುಂಬಾ ಸಿಟ್ಟು. ಮನೆಗೆ ಹೋದವ್ರಿಗೆ ಬೈತಾರೆ’ ಅಂತೆಲ್ಲ. ಆದ್ರೆ ನಾನು ಕಂಡ ಹಾಗೆ ಅವ್ರು ಕಾರಣ ಇಲ್ಲದೇ ಸುಮ್ಸುಮ್ನೆ ಯಾರಿಗೂ ಯಾವತ್ತೂ ಬೈದಿಲ್ಲ. ಕೆಲವರು ಬೇಡದೆ ಇರೊ ವಿಚಾರ ತಗೊಂಡ್ ಬಂದು ಇವರ ತಲೆ ತಿನ್ತಿದ್ರು. ಇವ್ರಿಗೆ ಸಂಬಂಧಪಡದೇ ಇರೊ ವಿಚಾರದ ಬಗ್ಗೆ ಯಾರಾದ್ರು ಮಾತಾಡಿದ್ರೆ ಇವ್ರಿಗೆ ನಿಜವಾಗಿಯೂ ಸಿಟ್ಟು ಬರ್ತಿತ್ತು.ಆಗ ಇವ್ರು ’ಈ ಥರ ಮಾತು ನನ್ ಹತ್ರ ಆಡ್ಬೇಡಪ್ಪ. ನಮಗೂ ನಿಮಗೂ ಆಗ್ಬರೋದಿಲ್ಲ. ನೀವು ಹೋಗ್ಬಿಡಿ’ ಅಂತ ಹೇಳಿ ಕಳಿಸಿಬಿಡ್ತಿದ್ರು.ಮತ್ತೆ ಹೊರಗಿನಿಂದ ಬಂದೋರು ಇವರ ಸಮಯ ಹಾಳು ಮಾಡ್ತಾರೆ ಅಂತ ಗೊತ್ತಾದ್ರೆ ಮೊದಲೇ ನೇರವಾಗಿ ಹೇಳಿಬಿಡೋರು, ’ನಿಮ್ ಜೊತೆ ಇಷ್ಟು ಸಮಯ ಮಾತ್ರ ನನಗೆ ಇರೋಕ್ಕಾಗುತ್ತೆ. ನನಗೆ ತುಂಬಾ ಕೆಲಸ ಇದಾವೆ. ಇಡೀ ದಿನ ನಿಮ್ ಜೊತೆ ಕೂತಿರೋಕ್ಕಾಗಲ್ಲ ನನಗೆ’ ಅಂತ. ಅದು ಕೆಲವರಿಗೆ ಹಿಡಿಸ್ತಿರ್ಲಿಲ್ಲ. ಹೊರಗಡೆ ಹೋಗಿ ’ತೇಜಸ್ವಿ ಬೈದ್ರು, ಅವ್ರು ಹಾಗೆ ಹೀಗೆ’ ಅಂತೆಲ್ಲ ಸಿಕ್ಕ್ ಸಿಕ್ಕಿದವರ ಹತ್ರ ಹೇಳ್ಕೊಂಡು ಓಡಾಡ್ತಿದ್ರು. ಆದ್ರೆ ಇವರು ಅದರ ಬಗ್ಗೆ ಎಲ್ಲ ತಲೆಕೆಡಿಸ್ಕೊಳ್ತಾನೆ ಇರ್ಲಿಲ್ಲ’.
’ನಿಮ್ಮ ಧಣಿಗಳು ತುಂಬಾ ಸಿಂಪಲ್ ಅಂತಾರೆ.ಹೌದಾ?’ ಎಂದು ಅವರನ್ನುಕೇಳಿದೆ.
ಶಿವು ನನ್ನ ಪ್ರಶ್ನೆಯ ಧಾಟಿಗೆ ನಗುತ್ತಾ ಆ ಕುರಿತು ಮಾತನಾಡತೊಡಗಿದರು.’ಆಡಂಬರದ ಜೀವನನೇ ಇರಲಿಲ್ಲ ಅವರತ್ರ. ಸಿಂಪ್ಲಿಸಿಟಿ ಅಂದ್ರೆ ಹೊರಗಡೆ ಕಂಬಿ ಮೇಲೆ ಬಟ್ಟೆ ಒಗೆದು ಒಣಗಿಹಾಕಿದ್ರೆ ಸ್ನಾನ ಮಾಡಿ ಕಂಬಿ ಮೇಲಿದ್ದ ಬಟ್ಟೇನೆ ಹಾಕ್ಕೊಂಡ್ ಹೋಗ್ತಿದ್ರು.ಸಾರ್ ಪ್ಯಾಂಟ್ ಎಲ್ಲ ಹರಿದುಂಟು ಬೇರೆ ಪ್ಯಾಂಟ್ ಹಾಕ್ಕೊಂಡ್ ಹೋಗಿ ಅಂತ ಹೇಳಿದ್ರೆ, ’ಏಯ್ ಪ್ಯಾಂಟ್ ಹರಿದಿದ್ರೆ ನನಗೇನೊ?ನಾನು ಹೊಸ ಪ್ಯಾಂಟ್ ಹಾಕ್ಕೊಂಡ್ ಹೋದ್ರು ನಾನ್ ನಾನಾಗಿರ್ತೀನಿ, ಹಳೆಪ್ಯಾಂಟ್ ಹಾಕ್ಕೊಂಡ್ ಹೋದ್ರು ನಾನ್ ನಾನೇ ಆಗಿರ್ತೀನಿ.ಹೊಸ ಬಟ್ಟೆ ಹಾಕ್ಕೊಂಡ್ ಮಾತ್ರಕ್ಕೆ ನಾನೇನ್ ಬದಲಾಗಲ್ಲ!!!’ ಅಂತ ಹೇಳ್ತಿದ್ರು.ಮನೇಲಿ ಕಾರಿದ್ರು ಸ್ಕೂಟ್ರಲ್ಲೇ ಓಡಾಡ್ತಿದ್ರು.’ಸಾರ್ ಕಾರು ತುಂಬಾ ದಿನ ಆಯ್ತು ಹೊರಗೆ ತೆಗೆದೇ ಇಲ್ವಲ್ಲ ಸಾರ್. ಕಾರ್ ತಗೊಂಡ್ ಹೋಗಿ’ ಅಂದ್ರೆ, ’ಲೋ ನಿನಗೊತ್ತಿಲ್ಲ ಸ್ಕೂಟ್ರಲ್ಲಿ ಹೋದ್ರೆ ಎಷ್ಟು ಅನುಕೂಲ ಇದೆ ಅಂತ. ಎಲ್ಲಿ ಬೇಕಂದ್ರೆ ಅಲ್ಲಿ ನಿಲ್ಲಿಸ್ಕೊಬಹುದು.ಅದು ಅಲ್ದೇ ಈ ಮೂಡಿಗೆರೇಲಿ ಕಾರ್ ಓಡ್ಸೋದು ಸಾವಾಸ ಅಲ್ಲ ಕಣೊ’ ಅಂತಿದ್ರು.ಅಷ್ಟು ನೇರ, ಸಿಂಪಲ್ಲು’ ಶಿವು ಮಾತಿಗೆ ಅಲ್ಪ ವಿರಾಮ ಹಾಕಿದರು.
ಈ ಹಂತದಲ್ಲಿ ಚಿತ್ರೀಕರಣಕ್ಕೆ ಹತ್ತು ನಿಮಿಷಗಳ ವಿರಾಮ ಘೋಷಿಸಿದೆ, ಅರ್ಧ ಗಂಟೆಯಿಂದ ಶಿವು ಮಾತುಗಳನ್ನು ಶೂಟ್ ಮಾಡುತ್ತಲೇ ನಿಮಿಷಕ್ಕೊಮ್ಮೆ ನನ್ನ ಮುಖ ನೋಡುತ್ತಿದ್ದ ನಮ್ಮ ಕ್ಯಾಮೆರಮನ್ ದರ್ಶನ್ ರ ಕೋರಿಕೆಯ ಮೇರೆಗೆ. ಬ್ರೇಕ್ ಸಿಕ್ಕ ತಕ್ಷಣ ದರ್ಶನ್ ಕ್ಯಾಮೆರ ಇದ್ದಲೇ ಬಿಟ್ಟು ತೋಟದ ಮೂಲೆಯ ಮರದ ಬುಡದಲ್ಲಿ ವಂದನಾರ್ಪಣೆ ಕಾರ್ಯಕ್ರಮ ಮುಗಿಸಿ ಪ್ಯಾಂಟ್ ಸರಿ ಮಾಡಿಕೊಂಡು ವಾಪಸ್ ಬಂದರು.ಚಿತ್ರೀಕರಣ ಮತ್ತೆ ಮುಂದುವರೆಯಿತು.
ಶಿವುರನ್ನು ತೇಜಸ್ವಿ ಟ್ರೀಟ್ ಮಾಡುತ್ತಿದ್ದ ಕುರಿತು ಮಾತು ಮುಂದುವರೆಯಿತು.
ತಂದೆಯಂತಹ ದಣಿಗೆ ಮಗನಂತಹ ನೌಕರ
“ತಪ್ಪು ಮಾಡಿದ್ರೆ ಕರೆದು ಹೇಳೋರು, “ನೋಡು ನೀನು ಈ ಥರ ಈ ಥರ ಮಾಡಿದಕ್ಕೆ ಹೀಗಾಗಿದೆ. ಈಗ ಅಗೋಗಿದಕ್ಕೆ ಚಿಂತೆ ಮಾಡ್ತಾ ಕೂರ್ಬೇಡ. ಮುಂದೆ ಆಗ್ಬೇಕಾದ ಕೆಲಸದ ಬಗ್ಗೆ ಯೋಚ್ನೆ ಮಾಡು. ಮುಂದೆ ಇದೇ ತಪ್ಪು ಆಗದ ಹಾಗೆ ಎಚ್ಚರವಹಿಸು’ ಅಂತ ಕರೆದು ಬುದ್ದಿ ಹೇಳೋರು.ಅವ್ರು ಯಾವತ್ತೂ ನನಗೆ ಬೋಳಿಮಗ್ನೆ, ಸೂಳೆಮಗ್ನೆ ಅಂತೆಲ್ಲ ಬೇರೆ ಸಾವ್ಕಾರ್ರು ಬೈದ ಹಾಗೆ ಬೈದಿದ್ದೇ ಇಲ್ಲ. ಕೆಲಸ ಹಾಳಾದ್ರೂ ಬೈತಿರ್ಲಿಲ್ಲ. ತಿಳಿಸಿ ಹೇಳೋರು. ಅಂತ ಧಣಿನ ನಾನು ಕಂಡಿಲ್ಲ…(ಕಂಡುಕಾಣದ ಹಾಗೆ ಶಿವನ ಕಣ್ಣುಗಳು ತುಂಬಿಕೊಳ್ಳಲಾರಂಭಿಸಿದವು. ಧ್ವನಿ ಸ್ಥಿರತೆ ಕಳೆದುಕೊಂಡು ಬಿಕ್ಕುವವರಂತೆ ನಡುಗತೊಡಗಲಾರಂಭಿಸಿತು)…
’ನನ್ನದು ಅಂತ ಒಂದು ಆಶ್ರಯ ಮನೆ ಮೂಡಿಗೆರೇಲಿ ಇತ್ತು. ನಾನೊಂದಿನ ’ಸಾರ್ ನಂದು ಮನೆ ಉಂಟಲ್ಲ ಸಾರ್ ಆಶ್ರಯ ಮನೆ ಅದನ್ನ ಮಾರ್ತೀನಿ ಸಾರ್’ ಅಂದೆ. ’ಯಾಕೊ ಮಾರ್ತೀಯ. ನಿನಗೇನು ತಲೆ ಕೆಟ್ಟಿದ್ಯ?’ ಅಂದ್ರು. ’ಇಲ್ಲ ಸಾರ್ ಮಗಳನ್ನ ಕೇಳ್ಕೊಂಡು ಗಂಡಿನ ಕಡೆಯವ್ರು ಬರ್ತಾ ಉಂಟು. ಅದಕ್ಕೆ ಅದನ್ನ ಮಾರಿ ಅವಳ ಮದುವೆ ಮಾಡ್ಬೇಕು ಅಂತಿದೀನಿ’ ಅಂತ ಹೇಳ್ದೆ. ’ಲೋ ಅದನೆಲ್ಲ ಮಾರಬೇಡ್ವೊ. ನಿನ್ ಮಗಳ ಮದುವೆಗೆ ನಾನ್ ಸಹಾಯ ಮಾಡ್ತೀನಿ. ನನ್ನ ಕೈಲಾದ ಸಹಾಯ ನಾನ್ ಮಾಡ್ತೀನಿ. ನಾನು ಇರೋತನಕ ನೀನು ಹೆದರ್ಕೊಬೇಡ ಕಣೊ’ ಅಂತ ಹೇಳಿದ್ರು. ನಾನು ’ನೀವೀಗ ಹೇಳ್ತೀರ ಸಾರ್. ಆದ್ರೆ ಅಮೇಲೆ ಸಮಯ ಸಂದರ್ಭ ಹ್ಯಾಗೊ?’ ಅಂತ ಹೇಳ್ದೆ. ಅದಕ್ಕವ್ರು ’ಒಂದ್ಸಲ ಹೇಳಿದ್ರೆ ನಿನಗರ್ಥ ಆಗಲ್ವೇನೊ. ಹೇಳ್ತಾ ಇರೋದು ನಾನು. ನಾನು ಹೇಳಿದ ಮೇಲೆ ಮುಗಿದೋಯ್ತು’ ಅಂತ ಹೇಳ್ತಿದ್ರು. ನನ್ನನ್ನಂತೂ ಅವ್ರು ಯಾವತ್ತೂ ಕೆಲಸದವನ ಹಾಗೆ ನೋಡೇ ಇಲ್ಲ. ಸ್ವಂತದವನ ಹಾಗೇ ನೋಡ್ಕೊಂಡಿದಾರೆ. ನಾನು ಅಷ್ಟೆ ಅವರನ್ನ ನನ್ನ ತಂದೆ ಅಂತಲೇ ಭಾವಿಸ್ಕೊಂಡಿದ್ದೀನಿ.ಒಂದ್ಸಲ ನಾನು ತುಂಬಾ ಹುಷಾರಿಲ್ದೇ ಜ್ವರ ಬಂದು ಮೂರು ದಿವಸ ಮನೇಲೆ ಮಲಗಿಬಿಟ್ಟಿದ್ದೆ. ಆಗ ಇವ್ರೇ ಬಂದು ನನ್ನನ್ನ ಎತ್ಕೊಂಡ್ ಹೋಗಿ ಕಾರಲ್ಲಿ ಹಾಕ್ಕೊಂಡ್ ಆಸ್ಪತ್ರೆಗೆ ಕರ್ಕೊಂಡ್ ಹೋಗಿ ತೋರಿಸಿ ಔಷಧಿ ಕೊಡಿಸಿ ತಂದು ಮಲಗಿಸಿದ್ರು. ರಾತ್ರಿ ೧೨ ಗಂಟೆಲೆಲ್ಲಾ ಬಂದು ನನ್ನನ್ನ ನೋಡ್ಕೊಂಡಿದಾರೆ. (ಶಿವ ತುಂಬಿಬಂದ ಕಣ್ಣೀರನ್ನ ತೋಳಿನಿಂದ ಒರೆಸಿಕೊಂಡ)…
ಒಂದ್ಸಾರ್ತಿ ನನ್ನ ಮಕ್ಕಳಿಗೆ ಸ್ಕೂಲಿಗೆ ಬೇಕು ಅಂತ ಇನ್ ಕಂ ಸರ್ಟಿಫಿಕೇಟ್ ಮಾಡ್ಸಕ್ಕೆ ಅಂತ ಹೋಗಿದ್ದೆ. ಆಫೀಸಿನಲ್ಲಿ ಕೇಳಿದ್ರು, ಎಲ್ಲಿ ಕೆಲಸ ಮಾಡೋದು ಅಂತ?ನಾನು ’ಹೀಗೆ ಹೀಗೆ ತೇಜಸ್ವಿಯವರ ತೋಟದಲ್ಲಿ ಅಂತ ಹೇಳಿದೆ.ತಕ್ಷಣ ಅವರು ನನ್ನತ್ರ ಗೌರ್ಮೆಂಟ್ ಫೀಸ್ ಮಾತ್ರ ತಗೊಂಡು ಬೇಕಾಗಿದ್ದ ಕಾಗದ ಪತ್ರನೆಲ್ಲಾ ಬೇಗ ಬೇಗ ಮಾಡಿಕೊಟ್ರು.ನಾನು ಹತ್ತು ರೂಪಾಯಿ ಎಕ್ಸ್ಟ್ರ ಕೊಡೋಕೆ ಹೋಗಿದಕ್ಕೆ ಹೆದರಿಬಿಟ್ರು.‘ಬೇಡ ಬೇಡ ನೀವು ದುಡ್ಡುಕೊಟ್ಟಿದ್ದು ತೇಜಸ್ವಿಯವರಿಗೇನಾದ್ರೂ ಗೊತ್ತಾದ್ರೆ ಪೇಪರಿನಲ್ಲಿ ಬರೆದುಬಿಡ್ತಾರೆ. ಅಮೇಲೆ ನಾವೆಲ್ಲಾ ಬಾಯಿಗೆ ಮಣ್ಣಾಕೊಬೇಕಾಗುತ್ತೆ.ದಯವಿಟ್ಟು ನೀವು ಇಲ್ಲಿಂದ ಹೋಗಿ’ ಅಂತ ಹೇಳಿ ಕಳಿಸಿಬಿಟ್ರು.ನಾನು ಬಂದು ಇದನ್ನ ಸಾವ್ಕಾರ್ರತ್ರ ಹೇಳ್ದೆ.ಅದಕ್ಕವರು ’ಅಯ್ಯೋ ಮಾರಾಯ ನೀನು ಇನ್ಯಾವತ್ತೂ, ಎಲ್ಲೂ ನನ್ನ ಹೆಸರು ಹೇಳಿ ಯಾವ ಕೆಲಸನೂ ಮಾಡಿಸ್ಕೊಬೇಡ’ ಅಂತ ಹೇಳಿದ್ರು. ನಾನು ಮತ್ತೆ ಅವರ ಹೆಸರನ್ನ ಎಲ್ಲೂ ಬಳಸಿಕೊಳ್ಳಲೇ ಇಲ್ಲ. (ಶಿವು ತಡೆಯಲು ಪ್ರಯತ್ನಿಸಿದಂತೆಲ್ಲಾ ಅವನ ಧ್ವನಿಯಲ್ಲಿನ ನಡುಕ ಹೆಚ್ಚಾಗುತ್ತಾ ಹೊಯಿತು. ಕಣ್ಣುಗಳಿಂದ ಇಳಿಯುತ್ತಿದ್ದ ನೀರನ್ನು ಆಗಾಗ ಒರೆಸಿಕೊಳ್ಳುತ್ತಲೇ ಶಿವು ಮಾತು ಮುಂದುವರೆಸಿದರು).
“ಅವರು ಹೇಳಿದ ಯಾವ ಮಾತನ್ನೂ ನಾನಿನ್ನು ಮರೆತಿಲ್ಲ. ಪ್ರತಿಯೊಂದು ಮಾತು ಈಗಷ್ಟೇ ಆಡಿ ಹೋದಂಗಾಗ್ತದೆ ನನಗೆ. ತೋಟದಲ್ಲಿ ಒಬ್ನೇ ನಡೆದು ಹೋಗ್ತಿದ್ರೆ ಅವರು ಎದುರಿಗೆ ಬಂದಂಗೆ ಆಗೋದು, ಕೆಲಸ ಮಾಡ್ತಿದ್ರೆ ಎಲ್ಲೊ ಮೂಲೇಲಿ ನಿಂತು ಅವರು ’ಏಯ್ ಶಿವ ಎಲ್ಲಿದ್ದೀಯೊ?ಏನ್ ಮಾಡ್ತಿದ್ದೀಯೋ?ಎಲ್ಲಿಗೆ ಹೋಗ್ತಿದ್ದಿಯೊ? ಅಂತ ಕೇಳಿದಂಗಾಗ್ತದೆ.ನಾನು ನಿಮ್ಮತ್ರ ಮಾತ್ರ ಹೇಳ್ತಿದ್ದೀನಿ.ಬೇರೆ ಯಾರತ್ರನಾದ್ರೂ ಹೇಳಿದ್ರೆ ಹುಚ್ಚ ಇವ್ನು ಅಂತಾರೆ. ಅವರು ಇಲ್ಲ ಅಂತ ನನಗೆ ಈಗ್ಲೂ ನಂಬೋಕಾಗ್ತಿಲ್ಲ. ಅವರು ಹೋದ ಮೇಲೆ ನನಗ್ಯಾರೂ ಇಲ್ಲ, ನಾನು ಅನಾಥ ಅಂತ ಅನ್ನಿಸ್ತಿದ್ದೆ….
ಗಂಟಲು ಉಬ್ಬಿಬಂದು ಶಿವ ಮುಂದಕ್ಕೆ ಮಾತನಾಡಲಾಗಲಿಲ್ಲ. ’ನಿರುತ್ತರ’ದ ಮಧ್ಯದ ಆ ಮೌನದಲ್ಲಿ ಶಿವ ಮಗುವಿನಂತೆ ಬಿಕ್ಕತೊಡಗಿದ. ಅಲ್ಲಿಗೆ ಶಿವನ ಭಾಗದ ಚಿತ್ರೀಕರಣ ಮುಗಿಯಿತೆನ್ನಿಸಿ ಕ್ಯಾಮೆರ ಪ್ಯಾಕ್ ಮಾಡುವಂತೆ ಹೇಳಬೇಕು ಎಂದುಕೊಳ್ಳುವಷ್ಟರಲ್ಲಿ ಶಿವ ಸಾವರಿಸಿಕೊಂಡು ಮತ್ತೆ ಮಾತನಾಡತೊಡಗಿದ.
“ಒಂದ್ಸಾರ್ತಿ ಅಮ್ಮವರು ಮೈಸೂರಿಗೆ ಹೋಗಿದ್ರು. ಆಗ ಇವರು ಒಬ್ಬರೇ ಮನೇಲಿದ್ರು.ಸುಮಾರು ೧೧ ಗಂಟೆ ಟೈಮು ಅದು.ನಾನು ತೋಟದಲ್ಲಿ ಒಂದು ಕಡೆ ಕೆಲಸ ಮಾಡಿಸ್ತಿದ್ದೆ.ಇವರು ಮೇಲೆ ಬರೀತಾ ಕೂತಿದ್ರು. ಆಗ ಇದ್ದಕ್ಕಿದ್ದಂಗೆ ಬಾಂಬ್ ಸಿಡಿದ ಸದ್ದು ಕೇಳಿಸ್ತು ನನಗೆ. ನನಗೆ ಗೊತಾಯ್ತು ಅದು ಮನೆ ಕಡೆಯಿಂದಲೇ ಬಂದಿದ್ದು ಅಂತ. ತಕ್ಷಣ ನಾನು ಇದ್ದ ಕೆಲಸ ಎಲ್ಲಾ ಬಿಟ್ಟು ಓಡಿಬಂದೆ. ಸಾವ್ಕಾರ್ರು ಹೊರಗೆ ಬಂದ್ರು.’ಸಾರ್ ಏನೋ ಭಯಂಕರ ಸದ್ದಾಯ್ತಲ್ಲ…ಏನದು?’ ಅಂತ ಕೇಳಿದೆ.’ಅದನ್ನೇ ನಾನು ನಿನ್ನ ಕೇಳ್ತಿರೋದು.ಏನದು ಸದ್ದು?ಅಂದ್ರು.’ಸಾರ್ ಶಬ್ದ ಮನೆ ಒಳಗಿಂದ್ಲೇ ಬಂದಿದ್ದು. ಒಳಗೆ ನೋಡಿ ಅಂದೆ. ಅದಕ್ಕವರು ’ನಿನ್ ತಲೆ.ಮನೆ ಒಳಗೆ ಎಂಥದ್ದೂ ಇಲ್ಲ…’ಅನ್ನೊ ಅಷ್ಟರಲ್ಲಿ ಏನೊ ನೆನಪು ಮಾಡ್ಕೊಂಡ್ ಅಡಿಗೆ ಮನೆಗೆ ಓಡಿಹೋಗಿ ನೋಡಿದ್ರು.ಸ್ಟೌವ್ ಮೇಲಿಟ್ಟಿದ್ದ ಕುಕ್ಕರ್ ಸಿಡಿದಿತ್ತು.
ಇವರು ಸ್ಟೌವ್ ಮೇಲೆ ಬೇಳೆ ಬೇಯೋಕೆ ಕುಕ್ಕರ್ ಇಟ್ಬಿಟ್ಟು ಬರೀತಾ ಕೂತು ಮರೆತುಬಿಟ್ಟಿದ್ದಾರೆ… ಅದು ಬರ್ಸ್ಟ್ ಅಗಿದ್ದ ಫೋರ್ಸಿಗೆ ಬೇಳೆ ಎಲ್ಲಾ ಮೇಲೆ ಹೆಂಚಿಗೆ ಹೋಗಿ ಅಂಟಿಕೊಂಡಿತ್ತು.ಹಾಗೆ ನಮ್ ಸಾವ್ಕಾರ್ರು…ಕೆಲಸ ಮಾಡೋಕೆ ಇಳಿದ್ರು ಅಂದ್ರೆ ಪ್ರಪಂಚಾನೇ ಮರೆತುಬಿಡ್ತಿದ್ರು….’ಶಿವು ತನ್ನ ಕಡೆಯ ಮಾತನ್ನು ಆಡಿ ಮುಗಿಸಿದರು.ಶಿವನ ಸ್ವಾಮಿಭಕ್ತಿಯನ್ನು ನಾವೆಲ್ಲಾ ಮೆಚ್ಚಿ ಮಾತನಾಡಿಕೊಳ್ಳುತ್ತಾ ಅಂದಿನ ಚಿತ್ರೀಕರಣ ಪ್ಯಾಕಪ್ ಮಾಡಿದೆವು. ಶಿವ ನಮ್ಮ ಪ್ಯಾಕಿಂಗ್ ಕೆಲಸದಲ್ಲಿ ನೆರವಾದರು. ಸಮಯ ರಾತ್ರಿ ೮ ಗಂಟೆಯ ಸುಮಾರು. ರಾಜೇಶ್ವರಿ ಮೇಡಂಗೆ ವಂದಿಸಿ ಆದಷ್ಟೂ ಬೇಗ ಅಂತಿಮ ಸಾಕ್ಷ್ಯಚಿತ್ರದೊಂದಿಗೆ ಮರಳಿಬರುವುದಾಗಿ ತಿಳಿಸಿ ’ನಿರುತ್ತರ’ದ ಗೇಟಿನ ಕಡೆ ಹೊರಟೆವು. ಆ ದಿನ ತೇಜಸ್ವಿಯ ಅತ್ಯಾಪ್ತ ವಲಯದ ಇಬ್ಬರೊಂದಿಗೆ ಒಡನಾಡಿದ ತೃಪ್ತಿ ನಮಗಾಗಿತ್ತು…
(ಮುಂದುವರೆಯುವುದು…)
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402
ಪ್ರಿಯ ಪರಮೇಶ್
ತೇಜಸ್ವಿ ಅವರ ಬರವಣಿಗೆಯಲ್ಲಿ ಸತ್ಯದರ್ಶನ ಯಾವಾಗಲೂ ಇರುವಂತಹದ್ದು. ಸಾಧ್ಯವಾದರೆ ಪಾಕಕ್ರಾಂತಿ ಪುಸ್ತಕ ಓದಿ. ಕುಕ್ಕರ್ ಸಿಡಿಯುವ ಸಂದರ್ಭವನ್ನು ಅತ್ಯಂತ ಸಹಜವಾಗಿ ಬರೆದಿದ್ದಾರೆ. ಆದರೆ ಅದರ ನಿಜವಾದ ಮೂಲ ಮತ್ತು ಪ್ರತ್ಯಕ್ಷದರ್ಶಿ ಶಿವು ಮೂಲಕ ನಮಗೂ ತಿಳಿಸಿಕೊಟ್ಟಿರಿ. ಶಿವು ಬಿಕ್ಕುತ್ತಿದ್ದರೆ ನನ್ನ ಕಣ್ಣುಗಳೂ ತೇವವಾದವು. ನಿಮ್ಮ ಆಪ್ತ ಬರವಣಿಗೆಗೆ ಧನ್ಯವಾದಗಳು. ಇನ್ನೂ ಡಾಕ್ಯುಮೆಂಟರಿಯ ಕೆಲಭಾಗಗಳನ್ನು ಮತ್ತೆ ಮತ್ತೆ ನೋಡುತ್ತಿರುವೆ. ತುಂಬಾ ವಿಚಾರಗಳು ತೆರೆದುಕೊಳ್ಳುತ್ತಿವೆ. ಸಾರಸ್ವತ ಲೋಕಕ್ಕೆ ಗೊತ್ತಿಲ್ಲದ ತುಂಬಾ ವಿವರಗಳನ್ನು ಕಟ್ಟಿಕೊಡುತ್ತಿರುವ ನಿಮಗೆ ಮತ್ತೊಮ್ಮ ಧನ್ಯವಾದಗಳು
ಪ್ರಿಯ ಪರಮೇಶ್
ತುಂಬಾ ಭಾವುಕ ನೆಲೆಯಲ್ಲಿ ಈ ಲೇಖನ ಬಂದಿದೆ. ಶಿವು ಹೇಳುತ್ತಿರುವುದನ್ನು ಓದುತ್ತಿರುವಾಗ ನಮಗರಿವಿಲ್ಲದೆಯೇ ಕಣ್ಣುಗಳು ಒದ್ದೆಯಾದವು. ಅತ್ಯಂತ ಮನೋಜ್ಞವಾಗಿ ನಿರೂಪಿಸಿರುವಿರಿ. ಸಹಜವಾದ ನೆಲೆಯಲ್ಲಿ ಬರಹ ಮೂಡಿಬಂದಿದೆ. ಸದಾ ತೇಜಸ್ವಿ ಅವರನ್ನು ನಮ್ಮೊಡನೆ ಇರುವಂತೆ ಅವರೊಡನಾಟದಲ್ಲಿರುವಂತೆ ಮಾಡುತ್ತಿರುವಿರಿ. ಅವರ ಪಾಕಕ್ರಾಂತಿ ಪುಸ್ತಕದಲ್ಲಿನ ಸಂದರ್ಭಕ್ಕೆ ಶಿವು ಸಾಕ್ಷಿಯಾಗಿದ್ದಾರೆ. ಅರ್ಥಾತ್ ತೇಜಸ್ವಿ ಅವರ ಬರವಣಿಗೆ ನಿತ್ಯದ ಎಲ್ಲ ಆಗುಹೋಗುಗಳ ನೆಲೆಯಲ್ಲೇ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಏನಾದರಾಗಲಿ ಇಂಥ ಬರವಣಿಗೆ ನೀಡುತ್ತಿರುವ ನಿಮಗೆ ಅಭಿನಂದನೆಗಳು.
ಗೆಳೆಯರ ಆಪ್ತ ಪ್ರತಿಕ್ರಿಯೆಗಳೆಗೆ ಧನ್ಯವಾದಗಳು
ಕೆ.ಎಸ್ ಪರಮೇಶ್ವರ
ಪಾಕಕ್ರಾಂತಿ ಪುಸ್ತಕ ಓದಿದ್ದೇನೆ. ನೆನಪಿಸಿದ್ದಕ್ಕೆ ಧನ್ಯವಾದಗಳು
Yeshtondu vishayagalu, yeshtella vivaragalu….Tejasvi bagegina nimma abhimaana namage sikka laabha…Thanks Parameshwar avare..lekhana mana muttuvantide.
ಹಿಂದಿನ ಸಂಚಿಕೆಯಂತೆ ಆಪ್ತವಾದ ಬರಹ. ಇನ್ನೂ ಹಲವು ಮಗ್ಗಲುಗಳಿಂದ ಈ ದೀರ್ಘಕಾಲದ ಸಂಬಂಧವನ್ನು ವಿಸ್ತರಿಸಬಹುದಿತ್ತೇನೋ ಎನಿಸುತ್ತದೆ
ಮಾರ, ಮಂದಣ್ಣ, ಕರಿಯಪ್ಪ, ಎಂಗ್ಟ, ಪ್ಯಾರ ಮುಂತಾದವರ ಲೋಕವೇ ತೇಜಸ್ವಿಯವರ “ಮಾಯಾಲೋಕ”. ಈ ಪಟ್ಟಿಗೆ ಹೊಸ ಸೇರ್ಪಡೆ ಶಿವುರವರು ಎನ್ನಬಹುದೇನೋ.. ಇವರುಗಳ ಮೂಲಕ ನಮ್ಮೆಲ್ಲರಿಗೂ ಹೊಸಹೊಸ ಸಂವೇದನೆಗಳನ್ನು ನಿಲುಕಿಸಿದವರು ತೇಜಸ್ವಿ.. ಸರ್ ನಿಮ್ಮ ಬರಹಗಳು ಆಪ್ತವಾಗಿದೆ.. ಆದಷ್ಟು ಬೇಗ ಪುಸ್ತಕ ರೂಪದಲ್ಲಿ ಬಂದು ನಮಗೆಲ್ಲರಿಗೂ ಓದಲು ಸಿಗುವಂತಾಗಲಿ..