ಅತಿಮಳೆ ತಂದ ಅವಾಂತರಗಳು
’….ಎಲ್ಲಿದ್ದೀರ? ಅರ್ಧ ಗಂಟೆಯಿಂದ ಇಬ್ರೂ ಕಾಯ್ತಾ ಇದೀವಿ.’
’ಇನ್ನೊಂದ್ ಐದತ್ತು ನಿಮಿಷ ಅಷ್ಟೇ ಸಾರ್. ಲಾಸ್ಟ್ ಶಾಟು. ಹೊರಟ್ಟಿದ್ದೀವಿ,ಪ್ಲೀಸ್…ಸರ್ಕಲ್ ನಲ್ಲೇ ಇರಿ…’
’ಬೇಗ ಬನ್ರಿ ಮಾರಾಯ್ರ… ಸರ್ಕಲ್ ನಲ್ಲೇ ಕಾಯ್ತಿದೀವಿ’
’ಓಕೆ ಓಕೆ…’
ಮರುದಿನ ಬೆಳಿಗ್ಗೆ 7 ಗಂಟೆಯ ಸುಮಾರಿನಲ್ಲಿ ನನ್ನ ಹಾಗೂ ಗೆಳೆಯ ಧನಂಜಯರ ನಡುವೆ ನಡೆದ ಮೊಬೈಲ್ ಫೋನ್ ಸಂಭಾಷಣೆ ಇದು. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಅವರು ಮೂಡಿಗೆರೆಯ ಹ್ಯಾಂಡ್ ಪೋಸ್ಟ್ ಸರ್ಕಲ್ ಗೆ ಬರುವುದೆಂದು ನಾವು ಅಲ್ಲಿಂದ ಅವರನ್ನು ಪಿಕ್ ಮಾಡಿಕೊಂಡು ಅಂದಿನ ಚಿತ್ರೀಕರಣ ಪ್ರಾರಂಭಿಸುವುದೆಂದು ನಿನ್ನೆ ರಾತ್ರಿ ಧನಂಜಯರ ಮನೆಯಲ್ಲಿ ಚರ್ಚಿಸಿ ನಿಗದಿಪಡಿಸಿಕೊಂಡಿದ್ದೆವು. ಅಂದು ಭಾನುವಾರವಾದ್ದರಿಂದ ಧನಂಜಯ್ ರವರು ಕೆಲಸ ಮಾಡುವ ಕೆನರಾ ಬ್ಯಾಂಕಿಗೆ ರಜೆ.
ಹಾಗಾಗಿ ಇಡೀ ದಿನ ನಮ್ಮ ಜೊತೆಗೇ ಇದ್ದು ಹಲವಾರು ಕಾರಣಗಳಿಗಾಗಿ ತೇಜಸ್ವಿಯವರೊಂದಿಗೆ ಅಲೆದ ಪಶ್ಚಿಮ ಘಟ್ಟದ ಆಯ್ದ ಪ್ರದೇಶಗಳಿಗೆ ಹೋಗಿ ತೇಜಸ್ವಿಯವರೊಂದಿಗಿನ ಅಂದಿನ ಒಡನಾಟದ ನೆನಪುಗಳನ್ನು ಹಂಚಿಕೊಳ್ಳುವುದಾಗಿ ಅವರುಹೇಳಿದ್ದರು.
ಆ ಪ್ರಕಾರ ಬೆಳಿಗ್ಗೆ 7ಕ್ಕೆ ಸರಿಯಾಗಿ ಹ್ಯಾಂಡ್ ಪೋಸ್ಟ್ ಸರ್ಕಲ್ ಲ್ಲಿಗೆಬಂದು ಅವರು ನಮಗಾಗಿ ಕಾಯುತ್ತಿದ್ದರು. ಆದರೆ7.30 ಆದರೂ ಅಲ್ಲಿ ನಾವ್ಯಾರು ಕಾಣಿಸಿಕೊಳ್ಳಲಿಲ್ಲವಾದ್ದರಿಂದ ಸಹಜವಾಗೇ ಬೇಸರವಾಗಿ ನಮಗೆ ಫೋನ್ ಮಾಡಿ ನಾವು ಅಲ್ಲಿಗೆ ತಲುಪದ ಕಾರಣ ಕೇಳಿದರು. ಹ್ಯಾಂಡ್ ಪೋಸ್ಟ್ ಸಮೀಪದಲ್ಲೇ ಇರುವ ನಿರುತ್ತರದ ಬಳಿ ಕೆಲ ಮಾಂಟೇಜ್ ಶಾಟ್ಸ್ ಚಿತ್ರೀಕರಿಸುತ್ತಿದ್ದ ನಾವು ಆ ಕೆಲಸ ಮುಗಿಸಿ ಐದತ್ತು ನಿಮಿಷದಲ್ಲಿ ಅವರು ಕಾಯುತ್ತಿದ್ದ ಜಾಗ ತಲುಪುವುದಾಗಿ ತಿಳಿಸಿದೆವು.
ಇದಾಗಿ ಕೆಲವೇ ನಿಮಿಷಗಳಲ್ಲಿ ನಾವು ಹ್ಯಾಂಡ್ ಪೋಸ್ಟಿಗೆ ವಾಪಸ್ ಬಂದೆವು. ಮನೆಯೊಂದರ ಸೂರಿನ ಕೆಳಗೆ ನಿಂತು ಮಳೆಯಿಂದ ರಕ್ಷಿಸಿಕೊಂಡಿದ್ದ ಅವರು ಓಡಿ ಬಂದು ವ್ಯಾನ್ ಏರಿದರು. ಅವರ ಜೊತೆಗೆ ಟಿವಿ ಅಂಗಡಿ ಸುರೇಂದ್ರ ಸಹ ಬಂದಿದ್ದರು. ನಿನ್ನೆ ರಾತ್ರಿ ಅವರನ್ನು ಮನೆಗೆ ಡ್ರಾಪ್ ಮಾಡಲು ಹೋದಾಗ ‘ನಾಳೆಯ ಚಿತ್ರೀಕರಣಕ್ಕೆ ನಾನು ಬರಬಹುದೇ?’ ಎಂದು ಕೇಳಿದ್ದರು. ‘ಸ್ಥಳೀಯರು ಜೊತೆಗಿದ್ದರೆ ನಮಗೂ ಒಳೆಯದೇ’ ಎನ್ನಿಸಿ ಅವರು ನಮ್ಮ ಜೊತೆ ಬರಲು ಒಪ್ಪಿದ್ದೆವು.
ಅವರು ನಿನ್ನೆ ರಾತ್ರಿ ಡಾಕ್ಟರ್ ರವರ ಕ್ಲಿನಿಕ್ ಮುಂದೆ ಕಾಣಿಸಿಕೊಂಡ ಹಾಗೆಯೇ ಕಪ್ಪು ಜರ್ಕಿನ್ನು, ಬರ್ಮುಡಾ ಚಡ್ಡಿ, ಮಂಕಿ ಕ್ಯಾಪಿನಲ್ಲಿ ಸಿದ್ದರಾಗಿ ಬಂದಿದ್ದರು. ಧನಂಜಯ್ ನಾನವರನ್ನು ಯಾವಾಗಲೂ ಕಂಡಂತೆ ಜೀನ್ಸು, ಜರ್ಕಿನ್ನು, ತಲೆಗೆ ಕ್ಯಾಪ್ ಹಾಕಿಕೊಂಡಿದ್ದರು. ಇಬ್ಬರೂ ಹತ್ತಿಕೊಂಡ ನಂತರ ನಮ್ಮ ವ್ಯಾನು ಕೊಟ್ಟಿಗೆಹಾರದ ಕಡೆ ಹೊರಟಿತು. ಅವರಿಬ್ಬರಿಗೂ ತಡವಾಗಿದ್ದಕ್ಕೆ ಕ್ಷಮೆ ಕೇಳಿ ಕಾರಣ ಹೇಳಿದೆ. ಅವರು ನಗುತ್ತಾ ‘ಪರವಾಗಿಲ್ಲ’ ಎಂದರು. ಹೊರಗೆ ಮಳೆ ನಿಮಿಷ ನಿಮಿಷಕ್ಕೂ ಹೆಚ್ಚಾಗುತ್ತಿತ್ತು. ಹಾಗಾಗಿ ಇಷ್ಟು ಜೋರು ಮಳೆಯಲ್ಲಿಇಂದಿನ ಚಿತ್ರೀಕರಣ ಹೇಗೆ ಮಾಡುವುದೆಂದು ನಾನು, ನಮ್ಮ ತಂಡ ಚಿಂತಿತರಾಗಿದ್ದೆವು.
ನಮ್ಮ ಕಳವಳವನ್ನು ಅರ್ಥ ಮಾಡಿಕೊಂಡ ಧನಂಜಯ್, ’ಡೋಂಟ್ ವರಿ, ಏಷ್ಟೇ ಕಷ್ಟ ಆದ್ರೂ ಮಾಡೋಣ…’ ಎಂದು ಧೈರ್ಯದ ಮಾತನಾಡಿದರು. (ಸಾಕ್ಷ್ಯಚಿತ್ರದ ಚಿತ್ರೀಕರಣದ ಅಷ್ಟೂ ದಿನಗಳಲ್ಲಿ ನಾವು ಮಳೆಯಿಂದ ಹೆಚ್ಚು ತೊಂದರೆ ಅನುಭವಿಸಿದ್ದು ಅಂದೇ). ಅದಾಗಿ ಅರ್ಧಗಂಟೆಯಲ್ಲಿ ನಮ್ಮ ವ್ಯಾನು ಕೊಟ್ಟಿಗೆಹಾರ ತಲುಪಿತ್ತು. ಬೆಳಗಿನ ತಿಂಡಿಯ ಸಮಯ ಆಗಿದ್ದರಿಂದ ಕೊಟ್ಟಿಗೆಹಾರದ ನಮ್ಮ ರೆಗ್ಯುಲರ್ ಹೋಟೆಲ್ ಗೆ ಹೋಗಿ ಯಥಾಪ್ರಕಾರ ನೀರು ದೋಸೆ, ಕಾಯಿ ಚಟ್ನಿ, ನಿನ್ನೆಯ ಕೋಳಿ ಸಾರು ಚಪ್ಪರಿಸಿ ಹೊಟ್ಟೆ ತುಂಬಿಸಿಕೊಂಡು ಲೋಟಗಟ್ಟಲೆ ಬಿಸಿ ಬಿಸಿ ಕಾಫಿ ಹೀರಿ ಅಲ್ಲಿಂದ ಮುಂದುವರೆದೆವು. ವ್ಯಾನು ಧನಂಜಯ್ ರವರ ಸೂಚನೆಯಂತೆ ಚಾರ್ಮಾಡಿಯ ಕಡೆ ಹೊರಟಿತ್ತು. ಚಿತ್ರೀಕರಣದ ಪ್ರಕ್ರಿಯೆಯಲ್ಲಿ ಹಲವು ಬಾರಿ ನೋಡಿದ್ದೆವಾದರೂ, ಮಳೆ ಹಿಂದಿನ ದಿನಗಳಿಗಿಂತಲೂ ಹೆಚ್ಚಾಗಿದ್ದದ್ದಕ್ಕೊ ಏನೋ ಕೊಟ್ಟಿಗೆಹಾರ ದಾಟಿದ ನಂತರ ಪ್ರಾರಂಭವಾಗುವ ಚಾರ್ಮಾಡಿ ಘಾಟಿಯ ಇಕ್ಕೆಲಗಳ ಪರ್ವತ ಶ್ರೇಣಿಗಳು ತುಂಬಾ ವಿಶೇಷವಾಗಿ ನಮಗೆ ಕಾಣಿಸುತ್ತಿದ್ದವು.
ಇದೇ ಗುಂಗಿನಲ್ಲಿ ಸುತ್ತಾ ಜರುಗುತ್ತಿದ್ದ ಪ್ರಕೃತಿ ವಿಸ್ಮಯವನ್ನು ನೋಡುತ್ತಾ ಮೈಮರೆತ್ತಿದ್ದಾಗ ’ ಒಂದ್ನಿಮಿಷ ಇಲ್ಲಿ ಗಾಡಿ ನಿಲ್ಸಿ’ ಎಂದು ಧನಂಜಯರ ದನಿ ಕೇಳಿತು. ‘ಯಾಕೆ?’ ಎಂಬಂತೆ ಅವರ ಕಡೆ ನೋಡಿದೆ. ‘ಇಲ್ಲಿ ಒಂದು ಇಂಟರೆಸ್ಟಿಂಗ್ ವಿಷಯ ಇದೆ. ಹೇಳ್ತೀನಿ ಬನ್ನಿ’ ಎಂದು ಧನಂಜಯ್ ಸುರಿವ ಮಳೆಯಲ್ಲೇ ವ್ಯಾನ್ ಇಳಿದು ಹೋದರು. ಕ್ಯಾಮೆರಾವನ್ನು ಮಳೆಯಲ್ಲಿ ನೆನೆಯಬಾರದೆಂದು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ ಕೈಯಲ್ಲಿ ಛತ್ರಿ, ಟಾರ್ಪಲ್ ಮುಂತಾದ ಮಳೆರಕ್ಷಕಗಳನ್ನು ಹಿಡಿದು ಎಲ್ಲರೂ ಕೆಳಗಿಳಿದೆವು. ಧನಂಜಯ ರನ್ನು ಹಿಂಬಾಲಿಸಲು ಕೆಳಗಿಳಿದ ತಕ್ಷಣ ಮಲೆನಾಡಿನ ಮಳೆಯ ಭೀಕರತೆಯ ಪರಿಚಯ ನಮಗಾಯಿತು. ಆ ಘೋರ ಮಳೆಯ ರಭಸದ ಮುಂದೆ ನಮ್ಮ ಕೈಗಳಲಿದ್ದ ಛತ್ರಿ, ಟಾರ್ಪಲ್ ಗಳುಚಂಡಮಾರುತಕ್ಕೆ ಸಿಕ್ಕಿ ಕೊಚ್ಚಿ ಹೋಗುವ ಆಟಿಕೆಗಳಂತೆ ಕ್ಷುಲಕವಾಗಿ ಭಾಸವಾಗತೊಡಗಿದವು.
ಮಳೆಯ ಜೊತೆಗೆ ಜೋರಾಗಿ ಗಾಳಿ ಸಹ ಬೀಸುತ್ತಿದ್ದುದ್ದರಿಂದ ಮಳೆಯ ದಿಕ್ಕು ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಬಲಗಡೆ ಛತ್ರಿ ಹಿಡಿದರೆ ಎಡಗಡೆ, ಎಡಗಡೆ ಛತ್ರಿ ಹಿಡಿದರೆ ಬಲಗಡೆ ಬೀಳುತ್ತಾ ನಮ್ಮನ್ನು ಹೈರಾಣು ಮಾಡಿಹಾಕಿತು. ಜೊತೆಗೆ ಜೋರಾಗಿಬೀಸುತ್ತಿದ್ದ ಗಾಳಿ ನಿಷ್ಕರುಣೆಯಿಂದ ಎಲ್ಲರ ಕೈಲಿದ್ದಛತ್ರಿಗಳನ್ನು ಉಲ್ಟಾ ಮಾಡಿ ಬಾಣಲೆಯ ಆಕಾರಕ್ಕೆ ತಂದು ನಮ್ಮನ್ನು ಅಣಕಿಸುತ್ತಿತ್ತು. ಹಾಗಾಗಿ ಇಷ್ಟು ತೀವ್ರ ಮಳೆಗಾಳಿಯಿಂದ ರೋಸಿಹೋದ ನಾವು ವ್ಯಾನಿನಲ್ಲಿ ಕೆಳಗಿಳಿದ ಸ್ವಲ್ಪ ಹೊತ್ತಿನಲ್ಲೇ ಕೈಯಲ್ಲಿ ಛತ್ರಿ ಹಿಡಿದು ಕೆಲಸ ಮಾಡುವುದು ದುಸ್ಸಾಧ್ಯವೆಂದು ಮನವರಿಕೆಯಾಗಿಅವೆಲ್ಲವನ್ನೂ ಮಡಚಿ ವಾಪಸ್ ವ್ಯಾನಿನಲ್ಲಿ ಹಾಕಿ ಕ್ಯಾಮೆರವನ್ನು ಲೆನ್ಸ್ ಕಾಣುವಷ್ಟು ಟಾರ್ಪಲ್ ನಿಂದ ಮುಚ್ಚಿ ಚಿತ್ರೀಕರಣ ಮುಂದುವರೆಸಿದೆವು.
’ತೇಜಸ್ವಿಯವರ ತೋಟ ಬಾರ್ ನವರ ಡಂಪಿಂಗ್ ಯಾರ್ಡು…!!!’
ಧನಂಜಯ್ ನಮ್ಮಿಂದ ಸುಮಾರು 200 ಮೀಟರ್ ದೂರದಲ್ಲಿ ಗಿಡಗಂಟೆಗಳ ಮಧ್ಯದ ಖಾಲಿ ಜಾಗವೊಂದರಲ್ಲಿ ನಿಂತಿದ್ದರು. ನಾವು ಅವರು ನಿಂತಿದ್ದ ಜಾಗಕ್ಕೆ ಹೋದೆವು. ಅವರ ಎದುರಿಗೆ ಕಸದ ರಾಶಿ ವಿಶಾಲವಾಗಿ ಬಿದ್ದಿತ್ತು. ’ಈ ಕಸದ ರಾಶಿಯ ಹತ್ತಿರ ಏನು ಕೆಲಸ?’ ಎಂದು ಅವರ ಕಡೆ ಪ್ರಶ್ನಾರ್ಥಕ ನೋಟ ಬೀರಿದೆ. ಧನಂಜಯ್ ನಮ್ಮತ್ತ ತಿರುಗಿ ಮಾತನಾಡಲು ಆರಂಭಿಸಿದರು. ದರ್ಶನ್ ಆಗಲೇ ಕ್ಯಾಮೆರ ಆನ್ ಮಾಡಿ ಸಿದ್ದವಾಗಿದ್ದರು, ’ಇಲ್ಲಿ ಕಾಣಿಸ್ತಾ ಇದ್ಯಲ್ಲ ಇದು ಪಂಚಾಯ್ತಿಯವರು ಮೂಡಿಗೆರೆಯ ಕಸ ಹಾಕೋಕೆ ಅಂತ ಅಲಾಟ್ ಮಾಡಿರೊ ಜಾಗ. ಮೂಡಿಗೆರೆ ಮುನ್ಸಿಪಾಲಿಟಿಯವ್ರು ಊರು ತುಂಬಾ ಕಸ ಕಲೆಕ್ಟ್ ಮಾಡಿ ಅದನ್ನೆಲ್ಲಾ ತಂದು ಇಲ್ಲಿ ಡಂಪ್ ಮಾಡ್ತಾರೆ. ಕೆಲವು ಸಲ ಇಲ್ಲಿವರೆಗೂ ತಂದು ಹಾಕೋರು ಯಾರು ಅಂತ ಹೇಳಿ ಅಲ್ಲೇ ಸುತ್ತ ಮುತ್ತ ಯಾವುದಾದ್ರು ಖಾಲಿ ಜಾಗ ಕಂಡ್ರೆ ಹೇಳ್ದೆ ಕೇಳ್ದೆ ಕಸನೆಲ್ಲಾ ಆ ಜಾಗದಲ್ಲಿ ಸುರಿದು ನಮಗೇನು ಗೊತ್ತೆ ಇಲ್ಲ ಅನ್ನೊ ಥರ ಬಿಹೇವ್ ಮಾಡ್ತಾರೆ. ಜೊತೆಗೆ ಈ ಹೋಟೆಲ್ಲು, ಹಾಸ್ಪಿಟಲ್ಲು, ಬಾರಿನ ಕೆಲವರು ಸಹ ಕಸಾನೆಲ್ಲಾ ಚೀಲಕ್ಕೆ ತುಂಬಿ ಯಾರದಾದ್ರು ಖಾಲಿ ಜಾಗದಲ್ಲಿ ಹಾಕಿ ಗೊತ್ತೇ ಇಲ್ಲ ಅನ್ನೊ ಹಾಗೆ ಇದ್ದು ಬಿಡ್ತಾರೆ.
ಯಾಕ್ ಇದನೆಲ್ಲಾ ಹೇಳ್ದೆ ಅಂತಂದ್ರೆ ಹಿಂದೆ ಒಂದ್ಸಲ ಯಾರೋ ತೇಜಸ್ವಿಯವರ ತೋಟದ ಬೇಲಿ ಒಳಗಡೆ ಕಸ ಸುರಿದು ಹೋಗ್ಬಿಡ್ತಿದ್ರಂತೆ. ಇವ್ರು ಆ ಕಸದ ರಾಶಿನ ವಿಂಗಡಿಸಿ ಅದು ಬಾರ್ ಒಂದಕ್ಕೆ ಸಂಬಂಧಪಟ್ಟ ಕಸ ಅಂತ ಅದರ ಮೂಲ ಪತ್ತೆ ಹಚ್ಚಿ ಆ ಬಾರಿನವನನ್ನೇ ಕರೆಸಿ ಕಸ ಎತ್ತಿಸಿದ್ದಾರೆ.ನಮ್ಮಲ್ಲಿಅನ್ಯಾಯ ಆದಾಗ ಅದನ್ನ ಪ್ರತಿಭಟಿಸದೇ ಅದಕ್ಕೆ ಹೊಂದಿಕೊಂಡು ಹೋಗುವ ಜಾಯಮಾನ ಹೆಚ್ಚಿನ ಜನರದ್ದು. ಆದ್ರೆ ಅನ್ಯಾಯದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಅದರ ವಿರುದ್ಧ ಧ್ವನಿ ಎತ್ತಿ ಪ್ರತಿಭಟನೆ ಮಾಡುವ ಧೈರ್ಯ ನಮಗೆ ಕಲಿಸಿದ್ದು ಈ ಘಟನೆ. ತೇಜಸ್ವಿಯವರ ಒಡನಾಟಕ್ಕೆ ಬಂದ ನಂತರ ಮೂಡಿಗೆರೆ ಸುತ್ತಮುತ್ತಲಿನ ನಮ್ಮಂತ ಹುಡುಗರಿಗೆ ಪ್ರತಿಭಟಿಸುವಂತಹ ಒಂದು ಕರೇಜ್ ಬಂದಿದ್ದು’ ಎಂದು ಅನ್ಯಾಯದ ಜೊತೆ ರಾಜಿಕೊಳ್ಳದ ತೇಜಸ್ವಿಯವರ ಗುಣದ ಬಗ್ಗೆ ಮಾತನಾಡಿದರು. ಅಷ್ಟರಲ್ಲಾಗಲೇ ಎಲ್ಲರೂ ಮಳೆಯಲ್ಲಿ ಸಂಪೂರ್ಣ ನೆಂದು ಮುದ್ದೆಯಾಗಿದ್ದೆವು.
“ಎಸಿ ರೂಮಿನಲ್ಲಿ ಕೂತ್ಕೊಂಡು ಪ್ರಕೃತಿ ಬಗ್ಗೆ ಜಡ್ಜ್ ಮೆಂಟು!!!”
ಈ ಭಾಗದ ಚಿತ್ರೀಕರಣ ಮುಗಿದದ್ದೇ ಬೇಗ ಬೇಗ ಬಂದು ವ್ಯಾನ್ ಹತ್ತಿಕೊಂಡೆವು. ಗಾಡಿ ಮುಂದೆ ಹೊರಟಿತು. ನಮ್ಮ ಬಟ್ಟೆಗಳಿದ್ದ ನೀರು ವ್ಯಾನಿನ ಸೀಟಿಗೆ ರವಾನೆಯಾಗುತ್ತಿತ್ತು. ಹಾಗೆ ಮುಂದುವರೆಯುತ್ತಲೇ ಧನಂಜಯ್ ಪಶ್ಚಿಮ ಘಟ್ಟಗಳಲ್ಲಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ಜರುಗುತ್ತಿರುವ ಅನಾಹುತಗಳ ಬಗ್ಗೆ ವಿವರವಾಗಿ ಹೇಳುತ್ತಾ ಹೋದರು. ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳು ಹೇಗೆ ಪ್ರವಾಸಿಗಳ ಆಕರ್ಷಣೆಯ ಕೇಂದ್ರವಾದ ಘಟ್ಟದ ಕಾಡುಗಳನ್ನೇ ಬಲಿ ತೆಗೆದುಕೊಳ್ಳುತ್ತಿವೆ ಎಂಬುದನ್ನು ವಿವರವಾಗಿ ನಮ್ಮೆದುರು ಬಿಡಿಸಿಟ್ಟರು. ಸ್ವಲ್ಪ ದೂರ ಹೋಗುತಿದ್ದಂತೆ ಕಾಣಿಸಿದ ’ಮಲಯ ಮಾರುತ’ ಗೆಸ್ಟ್ ಹೌಸ್ ಮುಂದೆ ಗಾಡಿ ನಿಲ್ಲಿಸುವಂತೆ ಧನಂಜಯ್ ನಿತಿನ್ ಗೆ ಸೂಚಿಸಿದರು.
ಎತ್ತರದ ಜಾಗದಲ್ಲಿ ಪಶ್ಚಿಮ ಘಟ್ಟದ ಪರ್ವತವೊಂದರ ಮೇಲೆ ನಿರ್ಮಿಸಿರುವ ಈ ಗೆಸ್ಟ್ ಹೌಸ್ ಚಕ್ರವರ್ತಿಯೊಬ್ಬನ ಶಿರದ ಮೇಲಿಟ್ಟ ಕಿರೀಟದಂತೆ ಹಿಂದೆ ನೋಡಿದ್ದಕ್ಕಿಂತಲೂ ಹೆಚ್ಚು ರಮ್ಯವಾಗಿ ಕಾಣುತ್ತಿತ್ತು. ಈ ಗೆಸ್ಟ್ ಹೌಸಿನ ಮೇಲೆ ನಿಂತು ಸುತ್ತಲೂ ನೋಡಿದರೆ ಕಾಣುವ ನೋಟದ ಮನಮೋಹಕತೆಯನ್ನು ನೋಡಿಯೇ ಅನುಭವಿಸಬೇಕು. ರಮಾದೇವಿಯವರು ರಾಜ್ಯಪಾಲೆಯಾಗಿದ್ದಾಗ ಅಲ್ಲಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಉಳಿದುಕೊಳ್ಳಲು ಕಟ್ಟಿಸಿದ ಗೆಸ್ಟ್ ಹೌಸ್ ಇದೆಂದು ಧನಂಜಯ್ ನಮಗೆ ತಿಳಿಸಿದರು. ನಾವು ಅಲ್ಲಿಗೆ ತಲುಪಿದ ಕೂಡಲೇ ಅಲ್ಲಿನ ಮೇಟಿ ಬಂದು ಧನಂಜಯರಿಗೆ ವಂದಿಸಿದ. ಆತ ಇವರಿಗೆ ಮೊದಲೇ ಪರಿಚಯಸ್ಥನಿರಬೇಕು ಎಂದು ತಿಳಿಯಿತು. ಧನಂಜಯ್ ಆತನಿಗೆ ಕಾಫಿ ಮಾಡಿಡುವಂತೆ ಹೇಳಿದ ನಂತರ ಗೆಸ್ಟ್ ಹೌಸಿನ ಮೇಲೆ ಹೋದೆವು.
ಧನಂಜಯ್ ಮುಂದುವರೆಸಿದರು, ’ಈದು ತುಂಬಾ ವಿಶಿಷ್ಟವಾದ ಜಾಗದಲ್ಲಿದೆ. ಕರಾವಳಿ ಕಡೆ ಇಂದ ಬೀಸುವ ಗಾಳಿ ನೂರಾರು ಕಿಲೋ ಮೀಟರ್ ಟ್ರಾವೆಲ್ ಮಾಡಿ ಈ ಜಾಗದಲ್ಲಿ ಪರ್ವತಗಳನ್ನ ಸವರಿಕೊಂಡು ಮೇಲೆ ಹೋಗುತ್ತೆ. ಅದಕ್ಕೆ ಇದನ್ನ ಗಾಳಿಗಂಡಿ ಅಂತ ಸಹ ಕರೀತಾರೆ. ಈ ಜಾಗ ತೇಜಸ್ವಿಯವರಿಗೆ ಪ್ರಿಯವಾದ ಜಾಗಗಳಲ್ಲಿ ಒಂದು. ನಾವು ನೇಚರ್ ಕ್ಲಬ್ ಅಂತ ಒಂದು ಸಂಸ್ಥೆ ನಡೆಸ್ತಿದ್ವಿ. ಆ ಸಂಸ್ಥೆ ಮೂಲಕ ಟ್ರೆಕ್ಕಿಂಗ್, ಕಾಡಿನ ಸುತ್ತಾಟ, ಪರಿಸರದ ಬಗ್ಗೆ ಸಂವಾದ ಇತ್ಯಾದಿ ಪ್ರೊಗ್ರಾಮ್ಸ್ organize ಮಾಡ್ತಿದ್ವಿ. ಒಂದ್ಸಲ ತೇಜಸ್ವಿಯವರನ್ನ ನಮ್ಮ ಸಂಸ್ಥೆಗೆ ಸೇರಿಕೊಳ್ಳಿ ಸಾರ್ ಅಂತ ಕೇಳಿದ್ದೆ. ಅವ್ರು ’ಯೋಚಿಸಿ ನೋಡ್ತೀನಿ’ ಅಂತ ಹೇಳಿ ಸುಮ್ನಾಗಿದ್ರು. ಒಂದಿನ ಇದ್ದಕ್ಕಿದ್ದಂತೆ ಬಂದೋರು ’ನಿಮ್ ನೇಚರ್ ಕ್ಲಬ್ ಸೇರೋಕೆ ಏನ್ ಮಾಡ್ಬೇಕು ಮಾರಾಯ?’ ಅಂತ ಕೇಳಿದ್ರು. ನಾನು ಏನಿಲ್ಲ ಸಾರ್ ಈ ಫಾರಂ ತುಂಬಿ 105 ರೂಪಾಯಿ ಫೀಸ್ ಕಟ್ಟಬೇಕು ಅಂದೆ. ಸರಿ ಅಂತ ಹೇಳಿ ಮೂರು ಫಾರಂ ತಗೊಂಡ್ ಹೋದ್ರು. ನೆಕ್ಸ್ಟ್ ಡೇ ಅವರ ಹತ್ತಿರದ ಒಡನಾಡಿ ರಾಘವೇಂದ್ರರವರು ಮೂರೂ ಫಾರಂ ತುಂಬಿ ನನಗೆ ತಂದು ಕೊಟ್ರು. ಒಂದು ತೇಜಸ್ವಿಯರವದ್ದು, ಇನ್ನೊಂದು ಅವರ ಶ್ರೀಮತಿ ರಾಜೇಶ್ವರಿಯವರದ್ದು, ಮತ್ತೊಂದು ರಾಘವೇಂದ್ರ ಅವರದ್ದು.
ನನಗಂತು ತುಂಬಾ ಸಂತೋಷ ಆಯ್ತು. ತೇಜಸ್ವಿ ನಮ್ ಸಂಸ್ಥೆ ಜೊತೆ ಕೈ ಜೋಡ್ಸಿದ್ರಲ್ಲ ಅಂತ. ಆದ್ರೆ ಅವ್ರು ಯೋಚ್ನೆ ಮಾಡದೆ ಯಾವುದೇ ಕೆಲಸಕ್ಕೂ ಕೈ ಹಾಕ್ತಿರ್ಲಿಲ್ಲ. ಹಾಗಾಗಿ ನಮ್ಮ ನೇಚರ್ ಕ್ಲಬ್ ಸೇರಿಕೊಂಡಿದ್ದರ ಹಿಂದೆ ಸಹ ಅವರಿಗೆ ದೂರದೃಷ್ಟಿ ಇತ್ತು. ನಮ್ ಜೊತೆ ಹಲವಾರು ಚಾರಣಗಳಿಗೆ ಅವ್ರು ಅವ್ರ ಶ್ರೀಮತಿಯವರು ಬಂದಿದಾರೆ. ಅದು ಕಾಡಿನ ನಿಗೂಢತೆ ಅರಿಯಲಿಕ್ಕೆ, ಅಳೆಯಲಿಕ್ಕೆ, ಪ್ರಕೃತಿಯನ್ನ ಹತ್ತಿರದಿಂದ ಗಮನಿಸುವುದಕ್ಕೆ ನಮ್ಮ ಜೊತೆ ಚಾರಣಗಳಲ್ಲಿ ಭಾಗಿ ಆಗ್ತಿದ್ರು ಅಂತ ಅನ್ಸುತ್ತೆ. ಅವ್ರು ಯಾವಾಗ್ಲೂ ಹೇಳ್ತಿದ್ದದ್ದು ’ಪ್ರಕೃತಿಯನ್ನ ಎಸಿ ರೂಮಿನಲ್ಲಿ ಕೂತ್ಕೊಂಡು ಜಡ್ಜ್ ಮಾಡೋದಲ್ಲ. ಅದರ ಹತ್ತಿರ ಹೋಗಿ ಅದರ ಜೊತೆ ಒಡನಾಡಬೇಕು. ಆಗ ಸ್ವಲ್ಪ ಆದ್ರೂ ನಮಗೆ ಪ್ರಕೃತಿ ಅರ್ಥ ಮಾಡಿಕೊಳ್ಳೊಕ್ಕೆ ಸಾಧ್ಯ ಆಗಬಹುದು’ ಅಂತ. ಜೊತೆಗೆ ಯುವಕರ ಜೊತೆ ವಿಚಾರಗಳನ್ನ ಹಂಚಿಕೊಳ್ಳೋದಕ್ಕೆ, ಅವರ ಜೊತೆ ಒಡನಾಡೋದಕ್ಕೆ ಅವರಿಗೆ ಹೆಚ್ಚು ಆಸಕ್ತಿ ಇತ್ತು. ಹಾಗಾಗಿ ನಮ್ಮ ನೇಚರ್ ಕ್ಲಬ್ಬಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.
ಪ್ರತಿ ಸಲ ಟ್ರೆಕ್ಕಿಂಗಿಗೆ ಬಂದಾಗಲೂ ಹೊಸ ಹೊಸ ವಿಷಯಗಳ ಬಗ್ಗೆ ನಮಗೆ ಹೇಳ್ತಿದ್ರು, ಚರ್ಚೆ ಮಾಡ್ತಿದ್ರು. ಏನಾದ್ರೂ ಒಂದು ಎಡವಟ್ಟು ಮಾಡ್ಕೊಂಡು ಅವ್ರ ಹತ್ರ ಬೈಸಿಕೊಳ್ಳೋದಂತು ಇದ್ದೇ ಇತ್ತು’ ಎಂದು ನಗುತ್ತಾ ಚಾರಣದ ಸಮಯದಲ್ಲಿ ಆಗುತ್ತಿದ್ದ ಫಜೀತಿಗಳನ್ನು ವಿವರಿಸಿದರು. ಅಷ್ಟರಲ್ಲಿ ಗೆಸ್ಟ್ ಹೌಸಿನ ಮೇಟಿ ಕೆಳಗಿನಿಂದಲೇ ಕಾಫಿ ಸಿದ್ದವಾಗಿರುವುದಾಗಿ ಕೂಗಿ ಹೇಳಿದರು. ಹಾಗಾಗಿ ಕೆಳಗಿಳಿದು ಬಂದು ಅವರು ಕೊಟ್ಟ ಬಿಸಿಬಿಸಿ ಕಾಫಿ ಕುಡಿಯುತ್ತಾ ಕಾಲಿಗೆ ಹತ್ತಿದ್ದ ಇಂಬಳಗಳನ್ನು ಕಿತ್ತು ತೆಗೆಯುವ ಕೆಲಸದಲ್ಲಿ ನಿರತರಾದೆವು. ನಮ್ಮೆಲ್ಲರ ಕಾಲುಗಳಿಗೆ ಇಂಬಳಗಳು ಹತ್ತಿ ರಕ್ತ ಹೀರುತ್ತಿದ್ದವಾದರೂ ನಮ್ಮಲ್ಲಿ ಯಾರು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ದುರಾದೃಷ್ಟವೆಂಬಂತೆ ಇಂತದ್ದೆಲ್ಲಾ ಅನುಭವಿಸಿದ, ಕೊಂಚ ಸೂಕ್ಷ್ಮ ದೇಹ ಪ್ರಕೃತಿಯವರೂ ಆದ ದರ್ಶನ್ ರ ಕಾಲಿಗೆ ಹೆಚ್ಚು ಇಂಬಳಗಳು ಅಂಟಿಕೊಂಡಿದ್ದವು. ಅವರು ಇಂಬಳ ಕಿತ್ತ ನಂತರ ಒಸರುತ್ತಿದ್ದ ರಕ್ತ ನೋಡಿ ಬೆದರಿ ’ಏನೂ ಆಗೋದಿಲ್ಲ ತಾನೆ?’ಎಂದು ಹತ್ತಾರು ಸಲ ಕೇಳಿದರು.
ನಮ್ಮ ಒದ್ದಾಟಗಳನ್ನು ನೋಡಿದ ಆ ಮೇಟಿ ಪುಡಿ ಉಪ್ಪನ್ನು ಪೊಟ್ಟಣಕ್ಕೆ ಹಾಕಿ ಕೊಟ್ಟು ಇಂಬಳ ಹಿಡಿದಾಗ ಹಚ್ಚಿಕೊಳ್ಳಿ ಎಂದು ಹೇಳಿ ಸಹಕರಿಸಿದರು. ’ಏನ್ರಿ ಇಷ್ಟೇನ ನಿಮ್ ಮೀಟ್ರು?’ ಎಂದು ಅವರನ್ನು ರೇಗಿಸಿ ಕಾಲೆಳೆಯುವ ಕೆಲಸವನ್ನು ಶ್ರದ್ಧಾ ಭಕ್ತಿಗಳಿಂದ ಮಾಡುತ್ತಿದ್ದ ನಿತಿನ್ ನ ಮೇಲೆ ರೇಗಿ ಅವನನ್ನು ಸುಮ್ಮನಾಗಿಸಿದೆ. ಹೇಮಂತ ಮಾತ್ರ ’ನಾನ್ಸೆನ್ಸ್, ನೀವು ಏನು ಬೇಕಾದರೂ ಮಾಡ್ಕೊಳಿ’ ಎಂಬ ಧೋರಣೆಯಲ್ಲಿ ಸುತ್ತಲಿನ ಪ್ರಕೃತಿಯ ಫೋಟೋ ತೆಗೆಯುವುದರಲ್ಲಿ ಮುಳುಗಿಹೋಗಿದ್ದ. ದರ್ಶನ್ ರಿಗೆ ಸಮಾಧಾನವಾದ ಕೆಲ ನಿಮಿಷಗಳ ನಂತರ ಆ ಮೇಟಿಯವರಿಗೆ ಧನ್ಯವಾದ ಹೇಳಿ ಅಲ್ಲಿಂದ ಮುಂದಕ್ಕೆ ಪ್ರಯಾಣಿಸಿದೆವು. ಅಷ್ಟರಲ್ಲಿ ಮಳೆ ಕ್ರಮೇಣ ಕಡಿಮೆಯಾಗಿತ್ತಾದ್ದರಿಂದ ನಮ್ಮ ಚಿತ್ರೀಕರಣ ತುಸು ವೇಗ ಪಡೆದುಕೊಂಡು ಮುಂದುವರೆಯಿತು.
“ಸೂರ್ಯಂಗೇ ಟಾರ್ಚು….!!!”
ಒಂದೈದು ಕಿಲೋಮಿಟರ್ ಮುಂದೆ ಬಂದಾಗ ಚಾರ್ಮಾಡಿಯ ತಿರುವೊಂದರಲ್ಲಿ ಧನಂಜಯರ ಸೂಚನೆಯ ಮೇರೆಗೆ ನಿತಿನ್ ಗಾಡಿ ನಿಲ್ಲಿಸಿದ. ಧನಂಜಯ್ ಅವರ ಬಳಿಯಿದ್ದ ಕ್ಯಾಮೆರಾದಲ್ಲಿ ಚಾರ್ಮಾಡಿಯ ಕೆಲ ಫೋಟೋಗಳನ್ನು ತೆಗೆದುಕೊಂಡು ನಂತರ ನಮ್ಮ ಕಡೆ ತಿರುಗಿ ಹಳೆಯ ಘಟನೆಯೊಂದನ್ನು ಬಿಡಿಸಿಡುತ್ತಾ ಹೋದರು.
’ನಾನು ತೇಜಸ್ವಿಯವರ ಸಂಪರ್ಕಕ್ಕೆ ಬಂದ ಪ್ರಾರಂಭದ ದಿನಗಳು ಅವು. ಒಂದ್ಸಲ ಅವ್ರ ಜೊತೆ ಅವ್ರ ಸ್ಕೂಟ್ರಲ್ಲಿ ಈ ಚಾರ್ಮಾಡಿ ಘಾಟಿಗೆ ಬಂದಿದ್ದೆ. ಅವ್ರು ಅವ್ರತ್ರ ಇದ್ದ ಕ್ಯಾಮೆರದಲ್ಲಿ ಫೋಟೋ ತೆಗೀತಿದ್ರು. ನಾನು ಸ್ವಲ್ಪ ಓವರ್ ಉತ್ಸಾಹದಲ್ಲಿ ಅವರಿಗೆ ’ಸಾರ್ ಇದನ್ನ ಫೋಟೋ ತೆಗೀರಿ ಚೆನಾಗಿದೆ, ಅದನ್ನ ತೆಗೀರಿ ಚೆನ್ನಾಗಿದೆ, ಹೀಗ್ ತೆಗೆದ್ರೆ ಚೆನಾಗಿರುತ್ತೆ, ಹಾಗ್ ತೆಗೆದ್ರೆ ಸೂಪರ್ರು… ಅಂತ ಫ್ರೀ ಅಡ್ವೈಸ್ ಮಾಡ್ತಿದ್ದೆ. ಅದನ್ನ ನಮ್ ಭಾಷೇಲಿ ಹೇಳ್ಬೇಕು ಅಂತಂದ್ರೆ ’ಸೂರ್ಯಂಗೆ ಟಾರ್ಚ್ ಬಿಡೋ ಕೆಲ್ಸ’ ಮಾಡ್ತಿದ್ದೆ. ಅವ್ರು ಸ್ವಲ್ಪ ಹೊತ್ತು ನಾನು ಹೇಳೋದನ್ನೆಲ್ಲಾ ಕೇಳಿದ್ರು. ಯಾವಾಗ ನನ್ನ ಬಿಟ್ಟಿ ಅಡ್ವೈಸ್ ಜಾಸ್ತಿ ಆಯ್ತು ’ಏಯ್ ಧನಂಜಯ ಬಾಯ್ಮುಚೊಂಡ್ ಬರಲಿಲ್ಲ ಅಂದ್ರೆ ನಿನ್ ಕಾಲು ಮುರೀತೀನಿ. ಸುಮ್ನೆ ಬಾ’ ಅಂತ ಚೆನ್ನಾಗ್ ಬೈದ್ರು.
ನನಗೆ ಒಂಥರ ಆಯ್ತು. ಹ್ಯಾಗೆ ರಿಯಾಕ್ಟ್ ಮಾಡ್ಬೇಕು ಅಂತ ಗೊತ್ತಾಗ್ದೆ ಪೆಚ್ಚಾಗಿ ಸೈಲೆಂಟ್ ಆಗ್ಬಿಟ್ಟೆ. ನನ್ನ ಮನಸ್ಸಿನಲ್ಲಿ ಆಗ್ತಿದ್ದ ತಳಮಳವನ್ನ ಅರ್ಥ ಮಾಡ್ಕೊಂಡ ತೇಜಸ್ವಿ ಸ್ಕೂಟರನ್ನ ಸೈಡಿಗೆ ನಿಲ್ಸೋಕೆ ಹೇಳಿ ’ನಲವತ್ತು ವರ್ಷದಿಂದ ಫೋಟೋಗ್ರಫಿ ಮಾಡ್ತಾ ಇದೀನಿ. ನನಗೇ ಅಡ್ವೈಸ್ ಮಾಡ್ತೀಯ. ಬೇಜಾರ್ ಮಾಡ್ಕೋಬೇಡ ಕಣಯ್ಯ. ನೊಡು ಇಲ್ಲಿನ ಪ್ರಕೃತಿ, ಇಲ್ಲಿನ ಸುವಾಸನೆ, ಈ ಮಳೆ ಹಾಗೂ ಪರಿಸರದಲ್ಲಿ ಎಲ್ಲವೂ ಸುಂದರವಾಗೇ ಕಾಣ್ತವೆ. ಪ್ರತಿಯೊಂದು ಫೋಟೋನು ಇಂಟರ್ ನ್ಯಾಷನಲ್ ಅವಾರ್ಡ್ ತಗೋಳ್ಳೊ ಫೊಟೋಗ್ರಾಫ್ಸ್ ಅಂತಾನೆ ಅನ್ಸುತ್ತೆ. ಆದ್ರೆ ಫೊಟೊ ಪ್ರಿಂಟ್ ಹಾಕಿ ಡಾರ್ಕ್ ರೂಮಿನಲ್ಲಿ ನೋಡೋವಾಗ ಅದನ್ನೊಂದು ಪೇಪರ್ ತುಂಡಿನ ಹಾಗೆ ನೋಡ್ಬೇಕಾಗುತ್ತೆ. ಆಗ ಈ ಮಳೆ, ಪ್ರಕೃತಿ, ಇಲ್ಲಿನ ಸುವಾಸನೆ ಯಾವ್ದೂ ಅಲ್ಲಿ ಕಾಣೋದಿಲ್ಲ. ನನ್ನ ಅನುಭವದಿಂದ ಹೇಳ್ತಾ ಇದೀನಿ, ತಿಳ್ಕೊ’ ಅಂತ ಹೇಳಿದ್ರು’ ಎಂದು ಹೇಳಿದ ಧನಂಜಯ್ ಜೋರಾಗಿ ನಕ್ಕರು.
ಅಲ್ಲಿನ ಕೆಲವು ಶಾಟ್ಸ್ ತೆಗೆದುಕೊಂಡು ಅಂದಿನ ನಮ್ಮ ಯಾತ್ರೆ ಮುಂದುವರೆಸಿದೆವು. ಸಮಯ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಹಸಿವು ಎಲ್ಲರನ್ನೂ ಬಾಧಿಸತೊಡಗಿತು. ಬೆಳಿಗ್ಗೆ ಕೊಟ್ಟಿಗೆಹಾರದಿಂದ ಹೊರಡುವಾಗ ನಾವು ಮಾಡಿದ ಅತಿ ದೊಡ್ಡ ತಪ್ಪೆಂದರೇ ಮಧ್ಯಾಹ್ನಕ್ಕೆ ಊಟ ಕಟ್ಟಿಸಿಕೊಳ್ಳದೆ ಹಾಗೇ ಬಂದದ್ದು. ಈಗ ಊಟಕ್ಕೆ ಹೋಗಬೇಕೆಂದರೆ ಸುಮಾರು 20 ಕಿಲೋಮೀಟರ್ ದೂರದ ಕೊಟ್ಟಿಗೆಹಾರಕ್ಕೆ ವಾಪಸ್ ಹೋಗಿ ಊಟಮಾಡಿ ಬರಬೇಕಿತ್ತು. ಅದಕ್ಕೆ ಸುಮಾರು 2 ಗಂಟೆಗಳ ಸಮಯವಾದರೂ ಬೇಕಿತ್ತು. ಸಮಯ ಆಗಲೇ ಮೂರು ಗಂಟೆಯಾಗಿದ್ದರಿಂದ ಊಟ ಮುಗಿಸಿ ವಾಪಸ್ ಬಂದು ಚಿತ್ರೀಕರಣ ಮುಗಿಸುವುದಕ್ಕೆ ಸಮಯ ಸಾಲುವುದಿಲ್ಲವೆಂದು ತಿಳಿದು ಇರುವ ಸಂಗತಿಯನ್ನು ಎಲ್ಲರಿಗೂ ತಿಳಿಸಿದೆ. ಭಯಂಕರ ಹಸಿವಾಗಿ, ಎಲ್ಲರ ಮುಖಗಳ ಮೇಲೂ ದಣಿವು, ಆಯಾಸ ಎದ್ದು ಕಾಣುತ್ತಿದ್ದರೂ ಎಲ್ಲರೂ ಪರ್ವಾಗಿಲ್ಲ ಶೂಟಿಂಗ್ ಮುಗಿಸಿ ಅಮೇಲೆ ಒಟ್ಟಿಗೆ ಹೋಗಿ ಊಟ ಮಾಡೋಣ ಎಂದು ಒಕ್ಕೊರಲ ಘೋಷಣೆ ಮಾಡಿದರು. ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲದ್ದರಿಂದ ಅನಿವಾರ್ಯವೆಂಬಂತೆ ಚಿತ್ರೀಕರಣ ಮುಂದುವರೆಸಿದೆವು. ಟಿವಿ ಅಂಗಡಿ ಸುರೇಂದ್ರರವರಂತೂ ನಮ್ಮ ಚಿತ್ರೀಕರಣದ ತಂಡದವರಿಗಿಂತಲೂ ಹೆಚ್ಚಾಗಿ ಕ್ಯಾಮೆರಾ, ಸ್ಟಾಂಡು, ಕೊಡೆ, ಟಾರ್ಪಾಲ್ ಹೊತ್ತುಕೊಂಡು ಬಂದು ನಮಗೆ ಸಹಕರಿಸುತ್ತಿದ್ದರು.
“ಸಾವಿರ ಸಾವಿರ ಕಾಡು ಕೋಳಿಗಳು…ರಸ್ತೆ ಮೇಲೆ!!!”
ಹೀಗೆ ಹಸಿವಿನಿಂದ ಕಂಗೆಟ್ಟು ವಿಧಿ ಇಲ್ಲದೇ ಕ್ಯಾಮೆರ ಇತ್ಯಾದಿ ಸಾಮಾಗ್ರಿಗಳನ್ನು ಹೊತ್ತುಕೊಂಡು ಮೈಮೇಲೆ ಪರಿವೆಯೇ ಇಲ್ಲದೇ ಯಾಂತ್ರಿಕವಾಗಿ ಎಂಬಂತೆ ಚಾರ್ಮಾಡಿಯ ಕಣಿವೆಯೊಂದನ್ನು ಇಳಿಯುತ್ತಿದ್ದೆವು. ಧನಂಜಯ್ ನಮ್ಮನ್ನು ಮುನ್ನಡೆಸುತ್ತಾ ಸಾಗುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮಿಂಚಿನ ವೇಗದಲ್ಲಿ ನಮ್ಮ ಕಾಲ ಹತ್ತಿರದಲ್ಲೇ ಹಕ್ಕಿಯೊಂದು ಗಾಬರಿಯಿಂದ ರೆಕ್ಕೆ ಬಡಿಯುತ್ತಾ ಹಾರಿ ಹೋದಂತಾಯಿತು. ಈ ವಿದ್ಯಮಾನದಿಂದ ಜೀವಂತ ಶವಗಳಂತೆ ನಿರಾಸಕ್ತಿಯಿಂದ ಸಾಗುತ್ತಿದ್ದ ನಮ್ಮೆಲ್ಲರಲ್ಲೂ ಮಿಂಚಿನ ಸಂಚಾರವಾದಂತಾಗಿ ಆಶ್ಚರ್ಯದಿಂದ, ಆ ಹಕ್ಕಿ ಹಾರಿ ಹೋದ ಕಡೆ ನೋಡುತ್ತಾ ನಿಂತಲ್ಲೇ ನಿಂತುಬಿಟ್ಟೆವು. ಧನಂಜಯ್ ’ಕಾಡು ಕೋಳಿ, ನಿಮ್ಮ ಪುಣ್ಯ ಅನ್ಸುತ್ತೆ…ಕಾಣಿಸ್ತು. ನಾನು ಹತ್ತಾರು ಸಲ ಇಲ್ಲಿಗೆ ಬಂದಿದೀನಿ..ಒಂದ್ ಸಲಾನೂ ಒಂದು ಕಾಡು ಕೋಳೀನೂ ನೋಡೋಕೆ ಸಿಕ್ಕಿಲ್ಲ. ಬನ್ನಿ ಬನ್ನಿ…ಹುಶಾರಾಗಿ….’ ಎಂದು ಕಣಿವೆ ಇಳಿದು ಹೋದರು.
ನಾವು ಮಿಂಚಿನಂತೆ ಹಾರಿಹೋದ ಆ ಕಾಡು ಕೋಳಿಯನ್ನೇ ಮನಸಿನಲ್ಲಿ ಧ್ಯಾನಿಸುತ್ತಾ ಅವರನ್ನು ಹಿಂಬಾಲಿಸಿದೆವು. ಈ ಘಟನೆಯ ನಂತರ ಧನಂಜಯ್ ತುಸು ಹೊತ್ತು ಮೌನ ತಾಳಿದರು. ನಾನು ಹಸಿವಿನಿಂದ ಆದ ಆಯಾಸದಿಂದ ಇರಬೇಕು ಎಂದುಕೊಂಡೆ. ಆದರೆ ಸ್ವಲ್ಪ ಹೊತ್ತಿನ ನಂತರ ಅವರ ಮಾತು ಪ್ರಾರಂಭವಾದಾಗ ಆ ಮೌನದ ಹಿಂದಿನ ಕಾರಣ ನಮಗೆ ಸ್ಪಷ್ಟವಾಯಿತು. ’ಈ ಕಾಡು, ಇಲ್ಲಿನ ಜೀವ ವೈವಿಧ್ಯ, ಇಲ್ಲಿನ ನಿಗೂಢತೆಗಳ ಬಗ್ಗೆ ತೇಜಸ್ವಿಯವರಿಗೆ ಬತ್ತದ ಕುತೂಹಲ. ಈ ಕುತೂಹಲ ತಣಿಸಿಕೊಳ್ಳುವ ಒಂದು ಮಾರ್ಗವಾಗಿ ಅವರು ನಮ್ಮ ನೇಚರ್ ಕ್ಲಬ್ ಮೆಂಬರ್ ಆಗಿ ನಮ್ಮ ಜೊತೆ ಬರ್ತಿದ್ರು ಅಂತ ಆಗ್ಲೆ ಹೇಳಿದ್ದೀನಿ. ಇಷ್ಟೇ ಅಲ್ಲದೇ ಬೆಳಿಗ್ಗೆ ಹೊತ್ತು ಕಾಡು ಹೇಗಿರುತ್ತೆ, ಆ ಚುಮುಚುಮು ಬೆಳಕಿನಲ್ಲಿ ಪ್ರಕೃತಿ ಹೇಗೆ ಬಿಹೇವ್ ಮಾಡುತ್ತೆ ಅಂತ ನೋಡ್ಬೇಕು ಅಂತ ತೇಜಸ್ವಿ ಮೂಡಿಗೆರೆಯಿಂದ ಚಾರ್ಮಾಡಿಗೆ ಸ್ಕೂಟರಿನಲ್ಲಿ ಬಂದು ಹಾಗೆ ಒಂದು ಸುತ್ತು ಎಲ್ಲಾ ಕಡೆ ತಿರುಗಾಡಿ ಆಮೇಲೆ ಹಾಗೆ ಬೆಟ್ಟ ಹತ್ತಿ ವಾಪಸ್ ಹೋಗ್ತಿದ್ರು. ಆಗ ಅವ್ರು ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ದಾರಿನಲ್ಲಿ ಬರ್ತಿದ್ರೆ ಕಾಡು ಕೋಳಿಗಳ ಹಿಂಡು ಹಿಂಡೆ ರಸ್ತೆ ಮೇಲೆ ಇರುತ್ತಿದ್ದವಂತೆ. ಇವರಿಗೆ ಆಶ್ಚರ್ಯ’…ಏನಿದು ಇಷ್ಟೊಂದು ಕಾಡು ಕೋಳಿಗಳು? ಇದೇನ್ ಕಾಡು ಕೋಳಿಗಳ ಜಾತ್ರೇನ?’ಅಂತ ಆಶ್ಚರ್ಯ ಆಗ್ತಿತ್ತಂತೆ.
ಕಾರಣ ಏನು ಅಂದ್ರೆ ಮಲೆನಾಡಿನಲ್ಲಿ ಬೆಳೆದ ಅಕ್ಕಿ ಅಥವ ಭತ್ತದ ಮೂಟೆಗಳನ್ನ ಕುಚಿಲಕ್ಕಿ ಮಾಡೋಕ್ಕೆ ಅಂತ ಲಾರಿಗಳಲ್ಲಿ ತುಂಬಿ ಚರ್ಮಾಡಿ ಮಾರ್ಗವಾಗಿ ಮಂಗಳೂರಿಗೆ ಕಳಿಸ್ತಾರೆ. ಆಗ ಲಾರಿಗಳಿಂದ ರಸ್ತೆ ಮೇಲೆ ಚೆಲ್ಲುವ ಭತ್ತದ ಕಾಳುಗಳನ್ನ ಆರಿಸೋದಕ್ಕೋಸ್ಕರ ಚಾರ್ಮಾಡಿ ಸುತ್ತಮುತ್ತಲಿನ ಕಾಡು ಕೋಳಿಗಳೆಲ್ಲ ಗುಂಪಾಗಿ ಬಂದು ಇದೇ ರಸ್ತೆನಲ್ಲಿ ಕಾಳು ಹೆಕ್ಕುತ್ತಿದ್ದವಂತೆ. ತೇಜಸ್ವಿ ಹೇಳ್ತಿದ್ರು ‘ಸಾವಿರ ಸಾವಿರ ಕಾಡು ಕೋಳಿಗಳು ರಸ್ತೆ ಮೇಲೆ’ ಅಂತ….!!! ಎಷ್ಟು ಬೇಗ ಎಷ್ಟು ಬದಲಾಗಿ ಹೋಯ್ತು?…ಈಗ ನೋಡಿದ್ರೆ ನಮ್ಮ ಕಣ್ಮುಂದೆ ಒಂದೇ ಒಂದು ಕಾಡು ಕೋಳಿ ಬುರ್ರ್ರ್ರ್ರ್ ಅಂತ ಹಾರಿ ಹೋಗಿದ್ದಕ್ಕೆ ಎಷ್ಟೊಂದ್ ಆಶ್ಚರ್ಯ ಪಡ್ತಿದ್ದೀವಿ. ಎಂಥಾ ಗತಿ ಬಂತು ನಮಗೆ? ಇನ್ನೂ ಕೆಲವು ವರ್ಷ ಕಳೆದರೆ ಕಾಡು ಕೋಳಿ ಅಲ್ಲ ಯಾವ ಪ್ರಾಣಿ, ಪಕ್ಷೀನೂ ಅಪರೂಪಕ್ಕೂ ಕಾಣಿಸೋದಿಲ್ಲ. ನಮ್ಮ ಮುಂದಿನ ಜನರೇಷನ್ನಿಗೆ ಚಿತ್ರ, ಅಥವ ಫೋಟೋ ತೋರಿಸಿ ಇಂತವೆಲ್ಲ ಈ ಭೂಮಿ ಮೇಲೆ ಇತ್ತು ಅಂತ ಪಾಠ ಮಾಡುವ ದಿನಗಳು ದೂರ ಇಲ್ಲ. ಇದೆಲ್ಲವನ್ನ ತೇಜಸ್ವಿ ಅವತ್ತೇ ಎಚ್ಚರಿಸಿದ್ದರು. ’ಏನ್ ನೋಡ್ಬೇಕು ಅಂತಿದ್ದೀಯೋ ಅದನ್ನೆಲ್ಲಾ ಈಗ್ಲೇ ನೋಡ್ಕೊಂಡ್ಬಿಡು. ಮುಂದೆ ಇದೆಲ್ಲಾ ನಮಗೆ ಸಿಗದಲ್ಲೇ ಹೋಗ್ಬಹುದು’ಅಂತ ಪದೇ ಪದೇ ನಮ್ಮನ್ನ ಎಚ್ಚರಿಸುತ್ತಿದ್ದರು. ಈ ಮಾತು ಕೇಳಿ ಬಹಳ ವರ್ಷ ಏನ್ ಆಗಿಲ್ಲ.
ಆಗ್ಲೇ ಕಳೆದ 25 ವರ್ಷಗಳಲ್ಲಿ ಆದ ಬದಲಾವಣೆ ಕೇವಲ ಐದೇ ವರ್ಷಗಳಲ್ಲಿ ಅಷ್ಟು ವೇಗ ಪಡೆದುಕೊಂಡು ಜಗತ್ತು ಬದಲಾಗ್ತಾ ಇದೆ. ಹಣದ ಮತ್ತು ತಲೆಗೇರಿದವರಿಗೆ ಓಪನ್ ಟ್ರೆಷರಿ ಥರ ಕಾಣಿಸೊ ಈ ದಟ್ಟ ಕಾಡುಗಳು ಕಣ್ಣೆದುರೇ ನಶಿಸಿಹೋಗ್ತಿದ್ದಾವೆ. ಈ ಕಾಡುಗಳನ್ನೇ ನಂಬಿದ ಜೀವಿಗಳು ದಿಗ್ಭ್ರಮೆಗೊಳಗಾಗಿ ಇತಿಹಾಸ ಸೇರಿಕೊಳ್ಳುವ ಕಡೆ ಮೆಟ್ಟಿಲಿನ ಮೇಲೆ ನಿಂತಿವೆ. ತೇಜಸ್ವಿ ಆಗಾಗ ಹೇಳೋರು ’ಇಟ್ಸ್ ಎ ಲೂಸಿಂಗ್ ಬ್ಯಾಟಲ್ ಕಣಯ್ಯ…ಸೋಲಲೇಬೇಕಾದ ಯುದ್ಧ ಇದು…’ಅಂತ. ಇದನ್ನೆಲ್ಲಾ ರಕ್ಷಿಸಬೇಕಾದವರು ’ಹುಚ್ಮುಂಡೆ ಮದುವೇಲಿ ಉಂಡೋನೇ ಜಾಣ’ ಅನ್ನೊ ಥರ ಎರಡೂ ಕೈ ಹೊಲಸು ಮಾಡಿಕೊಂಡು ಕೂತಿರೋದು ನೋಡಿದ್ರೆ ನಮಗೂ ಕೆಲವು ಸಲ ಹಾಗೇ ಅನ್ಸುತ್ತೆ…..ಈಗ ತೇಜಸ್ವಿಯವರು ಇದ್ದು ಇದನ್ನೆಲ್ಲಾ ನೋಡಿದ್ರೆ ಅವರಿಗೇನ್ ಸಂತೋಷ ಆಗ್ತಿತ್ತ? ಉಹೂಂ’….ಎಂದು ಧನಂಜಯ್ ಮೌನವಾದರು. ಚಾರ್ಮಾಡಿಯ ತಪ್ಪಲಿನ ಆ ಕಣಿವೆಯಲ್ಲಿ ನಮ್ಮ ಆರು ಜನರನ್ನು ಬಿಟ್ಟರೆ ಮತ್ಯಾರು ಇರಲಿಲ್ಲ. ನಮ್ಮಗಳ ನಡುವೆ ಒಂದು ಸುದೀರ್ಘ ಮೌನ….ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಪರಿಸರದ ಕಥೆ, ಏರೋಪ್ಲೇನ್ ಚಿಟ್ಟೆ ಮುಂತಾದ ಕಥೆ, ಕಾದಂಬರಿಗಳಲ್ಲಿ ಹಾಸುಹೊಕ್ಕಾಗಿ ಬರುವ ಪ್ರಕೃತಿ, ಪರಿಸರ ಹಾಗೂ ಅಲ್ಲಿನ ಜೀವಿಗಳ ಕುರಿತು ವ್ಯಕ್ತವಾಗುವ ತೇಜಸ್ವಿಯವರ ಕಾಳಜಿಗಳು ನನಗೆ ಸರಮಾಲೆಯಂತೆ ಒಂದೊಂದಾಗಿ ನೆನಪಿಗೆ ಬರಹತ್ತಿದವು.
“ಮೂಡಿಗೆರೆ ಜನಕ್ಕೆಲ್ಲಾ ಟೋಪಿ ಹಾಕಿದ್ದಾನಲ್ಲ, ಅವ್ನು ಸಾಮಾನ್ಯದವನಲ್ಲ”
ನಮ್ಮ ಈ ಸುದೀರ್ಘ ಮೌನವನ್ನು ಕೆಲ ಸಮಯದ ನಂತರ ಟಿವಿ ಅಂಗಡಿ ಸುರೇಂದ್ರ ಮುರಿದು, ’ಈ ಸಂದರ್ಭದಲ್ಲಿ ಒಂದು ಘಟನೆ ಹಂಚಿಕೊಬೇಕು ಅನ್ನಿಸ್ತಿದೆ, ಹೇಳ್ಲಾ?’ ಎಂದು ಮಗುವಿನಂತೆ ಮುಗ್ಧವಾಗಿ ಕೇಳಿದರು. ನಾನು ನಗುತ್ತಾ ‘ಹೇಳಿ ಸಾರ್, ಕೇಳೋದೇನಿದೆ’ ಎಂದೆ. ‘ಇದಕ್ಕೆ ಸಂಬಂಧ ಪಡದೇ ಇರಬಹುದು. ಆದ್ರೂ ಹೇಳ್ತೀನಿ. ಒಂದ್ಸಲ ಮೂಡಿಗೆರೆಗೆ ಒಬ್ಬ ಬಂದ. ಬಂದೋನು ಮೂಡಿಗೆರೆಲಿರೊ ಟು ವೀಲರ್ಸ್ ಗೆಲ್ಲಾ ಮೈಲೇಜ್ ಜಾಸ್ತಿ ಮಾಡೊ ಮೆಷಿನ್ ಹಾಕ್ತೀನಿ, ಅದರಿಂದ ಬೈಕಿನ ಮೈಲೇಜ್ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತೆ ಅಂತ ಹೇಳಿ ಪ್ರತಿಯೊಬ್ಬರ ಹತ್ತಿರಾನೂ 250ರೂಪಾಯಿ ತಗೊಂಡು ಪೆಟ್ರೋಲ್ ಟ್ಯಾಂಕ್ ಕೆಳಗೆ ಅದೇನೊ ಫಿಟ್ ಮಾಡಿ ಕೆಲಸ ಮುಗಿಸಿ ಹೋದ. ಅಮೇಲೆ ನೋಡಿದ್ರೆ ಅದರಿದ ಮೈಲೇಜು ಜಾಸ್ತಿ ಆಗ್ಲಿಲ್ಲ, ಎಂಥಾದ್ದು ಇಲ್ಲ. ಇವನಿಗೆ 250 ರೂಪಾಯಿ ಕೊಟ್ಟು ಬಕ್ರ ಆಗಿದ್ರಲ್ಲ ಅವರಿಗೆಲ್ಲ ಕೋಪ ಬಂದು ಆ ಆಸಾಮಿನ ಹುಡುಕಿದ್ರು. ಆದ್ರೆ ಅವ್ನು ಆಗ್ಲೆ ಗಂಟು ಮೂಟೆ ಕಟ್ಟಿ ಊರು ಬಿಟ್ಟಾಗಿತ್ತು. ಇದನ್ನ ತೇಜಸ್ವಿಯವ್ರ ಹತ್ರ ಹೇಳ್ದೆ.
ತಕ್ಷಣ ಅವ್ರು ’ಯಾರಯ್ಯ ಅವ್ನು? ನೋಡ್ಬೇಕಲ್ಲ ಅವನನ್ನ…’ ಅಂದ್ರು. ನಾನು ’ಯಾಕೆ ಸಾರ್?’ ಅಂದೆ. ’ಅಲ್ಲ ಕಣಯ್ಯ ಇಡೀ ಮೂಡಿಗೆರೆ ಜನಕ್ಕೆಲ್ಲಾ ಟೋಪಿ ಹಾಕಿದ್ದಾನಲ್ಲ, ಅವ್ನು ಸಾಮಾನ್ಯದವನಲ್ಲ. ಅದಕ್ಕೆ ಅವನನ್ನ ನೋಡಿ ಮಾತಾಡಿಸ್ಬೇಕ್ ಅಂದ್ಕೊಂಡೆ’ ಅಂತ ಹೇಳಿದ್ರು’ ಎಂದು ಹೇಳಿ ಟಿವಿ ಅಂಗಡಿ ಸುರೇಂದ್ರ ಜೋರಾಗಿ ನಕ್ಕರು. ನಾನು ನಮ್ಮ ಹುಡುಗರು, ಧನಂಜಯ್ ಎಲ್ಲರೂ ಅವರ ಮಾತಿಗೆ ನಕ್ಕೆವು. ಅಲ್ಲಿಗೆ ಅಂದಿನ ಚಿತ್ರೀಕರಣ ಮುಕ್ತಾಯವಾದಂತಾಯಿತು. ಸಮಯ ಸಂಜೆ 6 ಗಂಟೆ ಆಗಿತ್ತು. ಹಸಿದ ಹೊಟ್ಟೆಯಲ್ಲೇ ಚಾರ್ಮಾಡಿಯ ಕಣಿವೆ ಹತ್ತಿ ಬಂದೆವು. ತುಂಬಾ ಆಯಾಸವಾಗಿದ್ದರಿಂದ ನಾನು, ಹೇಮಂತ ಇಬ್ಬರೂ ಚಾರ್ಮಾಡಿ ಘಾಟಿನ ಬೆಟ್ಟದ ಮೇಲಿನಿಂದ ಹರಿದು ಬರುತ್ತಿದ್ದ ಝರಿಯಲ್ಲಿ ತೊಟ್ಟಿದ್ದ ಬಟ್ಟೆಯಲ್ಲೇ ಬಿದ್ದು ಹೊರಳಾಡಿದೆವು. ಯಾವ ಕಲ್ಮಶವೂ ಇಲ್ಲದೇ ಬೆಟ್ಟದ ಮೇಲಿನಿಂದ ಧುಮ್ಮಿಕ್ಕುತ್ತಿದ್ದ ಸ್ಪಟಿಕ ಶುಭ್ರ ನೀರಿನಲ್ಲಿ ಸ್ನಾನ ಮಾಡಿ ಅದೇ ನೀರನ್ನು ಹೊಟ್ಟೆ ತುಂಬಾ ಕುಡಿದ ಮೇಲೆ ಆಯಾಸ ಕಡಿಮೆಯಾದಂತನಿಸಿತು.
ಆಗ ತೇಜಸ್ವಿ ಎಚ್ಚರಿಸುತ್ತಿದ್ದ ಹಾಗೆ ‘ಅರಣ್ಯ ನಾಶ ಹೀಗೆ ಮುಂದುವರೆದರೆ ಈ ಕಾಡು, ಕಾಡಿನ ಯಾವುದೋ ಮೂಲೆಯಲ್ಲಿ ಹುಟ್ಟಿ ನದಿಯಾಗಿ ಹರಿದು ಲಕ್ಷಾಂತರ ಜನರ ಬದುಕನ್ನು ಹಸನುಗೊಳಿಸುವ ಪಶ್ಚಿಮ ಘಟ್ಟದ ಇಂತಹ ಸಾವಿರಾರು ಝರಿಗಳು, ಇವೆಲ್ಲವನ್ನೂ ನಂಬಿ ಬದುಕುತ್ತಿರುವ ಅಸಂಖ್ಯ ಜೀವರಾಶಿ ಇವುಗಳ ಕಥೆಯೇನು?’ ಎಂಬ ಪ್ರಶ್ನೆ ನನ್ನನ್ನು ಕಾಡಿಸಲಾರಂಭಿಸಿತು. ಗೆಳೆಯರನ್ನು ಅವರವರ ಮನೆಗಳಿಗೆ ಮುಟ್ಟಿಸಿ ಮೂಡಿಗೆರೆ ಐಬಿಯ ನಮ್ಮ ಕೋಣೆಗೆ ಬಂದಾಗಲೂ ಮನಸಿನಲ್ಲಿ ಇದೇ ಪ್ರಶ್ನೆ. ಯಾವುದೋ ಹೊತ್ತಿನಲ್ಲಿ ’ಭೂಮಿ ನಮ್ಮ ಪಾಲಿಗೆ ಹಾಳಾಗುತ್ತದೆಯೇ ಹೊರತು ಅದರಪಾಲಿಗಲ್ಲ…’ ಎಂಬ ’ಚಿದಂಬರ ರಹಸ್ಯ’ದ ಮಾತೊಂದು ನೆನಪಿಗೆ ಬಂತು ಮತ್ತು ಆ ಗುಂಗಿನಲ್ಲಿ ಕಣ್ಣಿಗೆ ನಿದ್ರೆ ಹತ್ತಿದ್ದೇ ತಿಳಿಯಲಿಲ್ಲ…
(ಮುಂದುವರೆಯುವುದು…)
ಗಾಂಧಿನಗರ, ಜಯನಗರ ಹಾಗೂ ಕೋರಮಂಗಲದ ಸಪ್ನ ಪುಸ್ತಕ ಮಳಿಗೆಗಳಲ್ಲಿ, ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ, ರೇಸ್ ಕೋರ್ಸ್ ಬಳಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ “ಮತ್ತೆ ಮತ್ತೆ ತೇಜಸ್ವಿ” ಸಾಕ್ಷ್ಯಚಿತ್ರದ ಡಿವಿಡಿಗಳು ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ ಟೋಟಲ್ ಕನ್ನಡದ ಲಕ್ಷ್ಮಿಕಾಂತ್ (ಡಿವಿಡಿ ವಿತರಣೆಯ ಹಕ್ಕುದಾರರು) ರವರನ್ನು ಸಂಪರ್ಕಿಸಿ. Mobile No: 9986222402
The gate which is shown is tejaswi estate entrance. Regarding scooter one interesting thing is that mr tejaswi had removed his pillion seat permanantly.once I asked mr tejaswi the reason behind it and he said he doesnt wish to give lift to any one from handpost to mudigere and back. Its common in malenadu for offering lifts.he was a very straight forward person.spoke very fact.
Sorry for the English I dont have the facility to use kannada on this mobile.
Dhananjaya canara bank employee is very friendly person. I admire his concerns towards nature .yes they are running a Nature club at mudigere.
Nimma ashtoo lekhanagalannu oduttiruva nanage annisiddu Tejasviyavara adhyayanada baduku yeshtu doddado nimma abhimaana kooda ashte doddadu. nimma utsaha, paduttiruva kashtagalu, kashtagalannu enjoy maaduttiruva nimagellarigoo tumbu manada abhinandanegalu. Nimma anubhavagalu drushyaroopadalli yaavaaga barabahudu emba kutoohala. bega bandare olleyadu. Thanks.