ತೇಜಸ್ವಿಯನ್ನು ಹುಡುಕುತ್ತಾ – ಮೂಡಿಗೆರೆಯ ಪ್ರೇಮಸೇನೆ ಮತ್ತು ಒಲವಿನ ಮದುವೆಗಳು

“ಪುಸ್ತಕ ಪ್ರಕಾಶನದ ಶ್ರೀರಾಮ್ ರವರ ನೆನಪುಗಳಿಂದ…”

ಶ್ರೀರಾಮ್ ರವರು ತೇಜಸ್ವಿಯವರೊಂದಿಗಿನ ತಮ್ಮ ಸುಮಾರು ೫೦ ವರ್ಷಗಳ ಸುದೀರ್ಘ ಒಡನಾಟದ ನೆನಪುಗಳನ್ನು ಹಂಚಿಕೊಳ್ಳುತ್ತಾ ಹೋದರು. ನಂತರದಲ್ಲಿ ಅವರ ಮಾತು ತಿರುಗಿದ್ದು ತೇಜಸ್ವಿ, ಕಡಿದಾಳು ಶಾಮಣ್ಣ ಮೊದಲಾದ ಗೆಳೆಯರೆಲ್ಲರೂ ಸೇರಿ ತಮ್ಮ ತಾರುಣ್ಯದ ವಯಸ್ಸಿನಲ್ಲಿ ಜಾರಿಗೆ ತಂದ ’ಮಂತ್ರಮಾಂಗಲ್ಯ’ ವಿವಾಹ ಪದ್ದತಿಯ ಬಗ್ಗೆ. ಆ ಕುರಿತ ಅವರ ನೆನಪುಗಳನ್ನು ಅವರ ಮಾತುಗಳಲ್ಲೇ ಕೇಳೋಣ,

ಮೂಡಿಗೆರೆಯ ಪ್ರೇಮಸೇನೆ ಮತ್ತು ಒಲವಿನ ಮದುವೆಗಳು

“ಒಲವಿನ ಮದುವೆಗಳು! ಈ ಪ್ರೇಮ ವಿವಾಹ, ಇಂಟರ್ ಕ್ಯಾಸ್ಟು ಇಂತವೆಲ್ಲ ಇದಾವಲ್ಲ ಅವನ್ನ ನಾನು ’ಒಲವಿನ ಮದುವೆಗಳು’ ಅಂತ ಕರಿತೀನಿ. ಅವು ಅವಾಗ ಒಂದು ರೀತಿ ಜಾಸ್ತಿ ಆಗ್ತಾ ಇದ್ವು. ನಮ್ಮ ಯುವ ಸಮುದಾಯದಲ್ಲಿ ವಿದ್ಯಾಭ್ಯಾಸ ಜಾಸ್ತಿ ಆದ ಹಾಗೆ ಅವರ ಸುತ್ತಾ ಇರೊ ಈ ಜಾತಿ ಸಂಕೋಲೆಗಳನ್ನ ಕಿತ್ತು ಹೊರಗೆ ಬರ್ಬೇಕು ಅನ್ನೊ ಒಂದು ಗುಂಪು ತಯಾರಾಗ್ತಾ ಇತ್ತು. ಹಂಗ್ ನೋಡಿದ್ರೆ ಟ್ರಡಿಷನ್ Vs ಮಾಡ್ರನಿಸಂ ಅನ್ನೊ ಥರದ ರೆಬಲ್ ಗುಂಪದು. ನಾವು ವಿದ್ಯಾರ್ಥಿಗಳಾಗಿದ್ದಾಗ ಜಾತಿ ಸಂಕೋಲೆಗಳಿಂದ ಬಿಡಿಸ್ಕೊಂಡು ಒಲವಿನ ಮದುವೆಗಳಾಗೋದು ಜಾಸ್ತಿ ಆಯ್ತು. ಅವುಗಳಿಗೆಲ್ಲಾ ನಾವು ತುಂಬಾ ಸಪೋರ್ಟ್ ಮಾಡ್ತಾ ಇದ್ವಿ. ಅವರು ಎಲ್ಲಿ ಮದುವೆ ಆದ್ರೆ ಅಲ್ಲಿ ಹೋಗ್ತಾ ಇದ್ವಿ, ರಿಜಿಸ್ಟರ್ ಮ್ಯಾರೇಜ್ ಮಾಡಿಸ್ತಾ ಇದ್ವಿ, ಲಾಯರುಗಳ ಸಹಾಯ ಕೋರುತ್ತಾ ಇದ್ವಿ, ಅವರ ಪರವಾಗಿ ಭಾಷಣಗಳನ್ನ ಮಾಡ್ತಾ ಇದ್ವಿ, ಅವರ ತಂದೆ ತಾಯಿಗಳ್ಯಾರಾದ್ರು ಸಿಕ್ರೆ ’ನೀವು ಒಪ್ಪಿ’ ಅಂತ ಹೇಳ್ತಾ ಇದ್ವಿ. ಆಗ ಮೂಡಿಗೆರೆಲೊಂದು ’ಪ್ರೇಮಸೇನೆ’ ಅನ್ನೋದೆ ಶುರು ಆಗ್ಬಿಟ್ಟಿತ್ತು! ಭದ್ರಾವತಿನಲ್ಲಿ ಬಿ.ಕೃಷ್ಣಪ್ಪ ಅಂತ ಒಬ್ರು ಇದ್ರು ದಲಿತ ಸಂಘರ್ಷ ಸಮಿತಿಯವರು. ಅವರು ಬೇಕಾದಷ್ಟು ಜನರನ್ನ ಕರ್ಕೊಂಡು ಬಂದು ಮೂಡಿಗೆರೆನಲ್ಲಿ ರಿಜಿಸ್ಟರ್ ಮ್ಯಾರೇಜ್ ಮಾಡೋರು. ಅಲ್ಲಿ ಮಾಡಿದ್ರೆ ಗಲಾಟೆ ಆಗುತ್ತೆ ಅಂತ ಇಲ್ಲೇ ಯಾರಾದ್ರು ಲಾಯರ್ ಸಹಾಯ ತಗೊಂಡು ರಿಜಿಸ್ಟರ್ ಮ್ಯಾರೇಜ್ ಮಾಡ್ಸೋರು.

ಹೀಗೆ ನಮ್ಮ ಪರ ವಿರೋಧ ಎಲ್ಲ ಥರಾನೂ ನಡೀತಿತ್ತು. ಆಗ ನಾವು ಮದುವೆ ಆಗೊ ವಯಸಲ್ವ. ಆಗ ತೇಜಸ್ವಿ ಮದುವೆ ಆಗ್ಬೇಕು ಅಂತ ತೀರ್ಮಾನಿಸಿದಾಗ ’ಅತ್ಯಂತ ಸರಳವಾಗಿ ಮದುವೆ ಆಗ್ಬೇಕು’ ಅಂತ ತೀರ್ಮಾನ ತಗೊಂಡಿದ್ರು. ಈಗಿನ ಕೆಲವು ಲಗ್ನಪತ್ರಿಕೆಗಳನ್ನ ನೋಡಿದ್ರೇನೆ ಮೂರ್ಛೆ ಹೋಗೋವಂಗೆ ಇರ್ತಾವೆ ಅವು. ಆ ರೀತಿಯ ಡಂಬಾಚಾರ, ಆಡಂಬರ ಇರಬಾರದು ಅನ್ನೊ ಒಂದು ತೀರ್ಮಾನಕ್ಕೆ ಬಂದ್ವಿ. ಸೊ ತೇಜಸ್ವಿ ಮದ್ವೆ ಅತ್ಯಂತ ಸರಳವಾಗಿ ಆಗ್ಬೇಕು ಅಂದುಕೊಂಡಾಗ ಹ್ಯಾಗ್ ಮಾಡೋದು ಅಂತ ಗೊತ್ತಾಗದೇ ನಮ್ಮ ಸುಂದ್ರೇಶನ್ನ ಕುವೆಂಪುರವರ ಹತ್ರ ಕಳಿಸಿದ್ವಿ.

ಕುವೆಂಪುರವರು ಹೇಳಿದ್ರು ’ಏನಯ್ಯ ಎಲ್ರಂತೆ ನಾನು ಮದ್ವೆ ಮಾಡಿದ್ರೆ ಇಡೀ ಕರ್ನಾಟಕವೇ ನನ್ನ ನೆಂಟ್ರು. ಹಾಗಾಗಿ ಎಲ್ರುನ್ನೂ ಕರಿಬೇಕಾಗುತ್ತೆ. ಏನು ಬೇಡ. ನಾನೇ ತೋಟಕ್ಕೆ ಬರ್ತೀನಿ ಮದ್ವೆ ಮಾಡಿಸ್ತೀನಿ. ಇಟ್ ವಿಲ್ ಬಿ ಏ ಸಿಂಪಲ್ ಮ್ಯಾರೇಜ್ ಅಂತ ಹೇಳಿದ್ರು. ಅವತ್ತು ನಾನು, ಸುಂದ್ರೇಶ, ವಾಸುದೇವ್ (ರಾಜೇಶ್ವರಿ ತೇಜಸ್ವಿಯವರ ಅಣ್ಣ), ಕೋಣಂದೂರು ಲಿಂಗಪ್ಪ ಎಲ್ಲ ಸೇರಿದ್ರೆ ಒಟ್ಟು ಒಂದು ೨೫ ಜನ. ನಾವೆಲ್ಲ ಸೇರ್ಕೊಂಡು ಅಲ್ಲೇ ತೋಟದಲ್ಲಿ ಒಂದು ಜಾಗ ಮಾಡಿದ್ವಿ. ಮದ್ವೆ ಊಟ ಮಾಡಿ ಹಾಕೋಕೆ ನಮ್ಮ ಮಾಮೂಲಿ ಬಿರ್ಯಾನಿ ಕರಿಯಪ್ಪನೇ ಬಂದ. ಹಿಂದಿನ ದಿವ್ಸ ಏನೊ ಸಿಹಿ ಊಟ ಜೊತೆಗೆ ಅನ್ನ ಸಾರು ಮಾಡಿದ್ದ. ಮಾರನೇ ದಿನ ಅಂದರೆ ಮದುವೆ ದಿನ ತುಂಬಾ ಅಸಂಪ್ರದಾಯಿಕ ಊಟ ಬಿರ್ಯಾನಿ ಮಾಡಿದ್ದ. ಸಾಮಾನ್ಯವಾಗಿ ಮದುವೆ ದಿವ್ಸ ಮಾಂಸಾಹಾರ ಮಾಡೋದಿಲ್ಲ. ಆದ್ರೆ ಕರಿಯಪ್ಪ ಅವತ್ತು ತೇಜಸ್ವಿ ಮದ್ವೆ ದಿವ್ಸ ಬಿರ್ಯಾನಿ ಮಾಡಿ ಬಡಿಸಿದ್ದ.

ಕುವೆಂಪುರವರು ಕೆಲವು ಮಂತ್ರಗಳು ಮತ್ತು ಪ್ರಾರ್ಥನೆಗಳನ್ನ ಹೇಳಿ ಮದುವೆ ಮಾಡ್ಸಿದ್ರು. ನಂತರ ಈ ಮಂತ್ರಮಾಂಗಲ್ಯದ ರೀತಿ ಮದುವೆ ಆಗುವವರ ಸಂಖ್ಯೆ ಜಾಸ್ತಿ ಆಯ್ತು. ಒಂದು ಆಶ್ಚರ್ಯಕರ ಸಂಗತಿ ಅಂದ್ರೆ ಎಲ್ಲರ ನಿರೀಕ್ಷೆಗೂ ಮೀರಿ ಮಂತ್ರಮಾಂಗಲ್ಯದ ಮದುವೆ ಆಗಿದ್ದು ಮಂಡ್ಯ ಜಿಲ್ಲೆನಲ್ಲಿ! ಕೆಲವು ಕಡೆ ವಿರೋಧ ಕೂಡ ವ್ಯಕ್ತವಾಗ್ತಿತ್ತು. ನನ್ನ ಮದುವೆಗೂ ಆ ವಿರೋಧ ಇತ್ತು. ಆದ್ರೆ ನಾವು ಅವರಿಗೆ ಕನ್ವಿನ್ಸ್ ಮಾಡಿದ್ವಿ. ಅವರೂ ಒಪ್ಪಿದ್ರು. ಇಟ್ ಆಲ್ ಡಿಪೆಂಡ್ಸ್ ಆನ್ ಹೌ ಯು ಕನ್ವಿನ್ಸ್ ದೆಮ್” ಸುಮಾರು ೫೦ ವರ್ಷಗಳ ಮಂತ್ರಮಾಂಗಲ್ಯ ಕುರಿತ ಘಟನೆಗಳನ್ನು, ವಿಷಯ ವಿವರಗಳನ್ನು ಶ್ರೀರಾಮ್ ರವರು ಹಂಚಿಕೊಳ್ಳುತ್ತಾ ಹೋದದ್ದು ಹೀಗೆ. ತೇಜಸ್ವಿ, ಶಾಮಣ್ಣ, ಸುಂದರೇಶ್, ಶ್ರೀರಾಮ್ ಮೊದಲಾದ ಸಮಾನ ಮನಸ್ಕ ಗೆಳೆಯರೆಲ್ಲರೂ ಸೇರಿ ಸಾಮಾಜಿಕ ಬದಲಾವಣೆಗಾಗಿ ಜಾರಿಗೆ ತಂದ ಮಂತ್ರಮಾಂಗಲ್ಯ ವಿವಾಹ ಪದ್ದತಿಯ ಪ್ರಕಾರ ಮದುವೆಯಾಗುತ್ತಿರುವ ಜೋಡಿಗಳನ್ನು ಇಂದು ಸಹ ನೋಡಬಹುದು.

ನನ್ನ ಅನುಭವಕ್ಕೆ ಬಂದ ಹಾಗೆ ನನ್ನ ಇಬ್ಬರು ಗೆಳೆಯರು ಅತ್ಯಂತ ಸರಳವಾಗಿ ಮಂತ್ರಮಾಂಗಲ್ಯದ ಮದುವೆಯಾದರು. ಆದರೆ ನಾನು ಗಮನಿಸಿದ ಆಘಾತಕಾರಿ ಅಂಶವೆಂದರೆ ಈ ಮಂತ್ರಮಾಂಗಲ್ಯ ವಿವಾಹ ಪದ್ದತಿ ಒಂದು ಆದರ್ಶವಾಗದೆ, ಸಾಮಾಜಿಕ ಬದಲಾವಣೆಗೆ ಕಾರಣೀಭೂತವಾಗದೇ ಕೇವಲ ತಮ್ಮ ತಮ್ಮ ವಲಯದಲ್ಲಿ ’ನಾವು ವಿಭಿನ್ನವಾಗಿ ಮದುವೆ ಆದೆವು’ ಎಂದು ತೋರಿಸಿಕೊಳ್ಳುವುದಕ್ಕೆ ಮಾತ್ರ ಈ ಮಂತ್ರಮಾಂಗಲ್ಯದ ಮದುವೆ ಮಾಡಿಕೊಳ್ಳುತ್ತಿರುವುದನ್ನ ನಾನು ನೋಡಿದ್ದೀನಿ. ಮಂತ್ರಮಾಂಗಲ್ಯದ ಮೂಲ ಉದ್ದೇಶ ಜಾತಿ, ಮತ, ಅಂತಸ್ತು ಇವನ್ನೆಲ್ಲಾ ಮೀರಿ ಮನಸಿಗೊಪ್ಪಿದವರನ್ನ ಮದುವೆಯಾಗುವುದು ಒಂದಾದರೆ ಮತ್ತೊಂದು ಅತಿಮುಖ್ಯವಾದದ್ದು ಆಡಂಬರ, ಅದ್ದೂರಿತನ, ವಿಜೃಂಬಣೆಗಳಿಲ್ಲದೇ ಸರಳವಾಗಿ ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆಯಾಗುವುದು ಮತ್ತು ಆ ಮೂಲಕ ಅನಾವಶ್ಯಕ ಖರ್ಚು, ಅದ್ದೂರಿತನ, ಒಣ ಪ್ರತಿಷ್ಟೆಗಳನ್ನು ಧಿಕ್ಕರಿಸುವುದು. ಆದರೆ ಈಗ ಬಹುಪಾಲು ಮಂದಿ ಮಂತ್ರಮಾಂಗಲ್ಯದ ಮದುವೆ ಮಾಡಿಕೊಳ್ಳುತ್ತಿರುವವರು ಮದುವೆಯ ಅದ್ದೂರಿ, ಆಡಂಬರಗಳಲ್ಲಿ ಎಳ್ಳಷ್ಟೂ ಕಡಿಮೆ ಮಾಡಿಕೊಂಡಿರುವುದಿಲ್ಲ. ಲಕ್ಷಾಂತರ ರೂಪಾಯಿ ಬಾಡಿಗೆಯ ಛತ್ರದಲ್ಲಿ, ಸಾವಿರಾರು ಜನಗಳ ಸಮ್ಮುಖದಲ್ಲಿ, ಇಂದ್ರನ ಆಸ್ಥಾನದ ವೈಭವವನ್ನೂ ಮೀರಿಸುವ ಅದ್ದೂರಿತನದ ಮಧ್ಯದಲ್ಲಿ ಮಂತ್ರಮಾಂಗಲ್ಯ ಮದುವೆ ಮಾಡಿಕೊಳ್ಳುವುದಕ್ಕೆ ಹೊರಡುವುದು ಎಂಥ ಹಾಸ್ಯಾಸ್ಪದ ಸಂಗತಿ.

ಇಂಥವರು ಮಾಡಿಕೊಳ್ಳುತ್ತಿರುವ ಇಂತಹ ಮದುವೆಗಳಲ್ಲಿನ ಒಂದೇ ವ್ಯತ್ಯಾಸವೆಂದರೆ ಅಲ್ಲಿ ಪುರೋಹಿತ ಇರೋದಿಲ್ಲ ಅಷ್ಟೆ. ಉಳಿದದ್ದೆಲ್ಲ ಯಥಾ ಪ್ರಕಾರ ಸಾಧ್ಯವಾದರೆ ಇನ್ನೂ ಅದ್ದೂರಿಯಾಗಿ ವ್ಯವಸ್ಥೆಯಾಗಿರುತ್ತದೆ. ಸಾಮಾನ್ಯರು ಅನ್ನಿಸಿಕೊಂಡವರನ್ನ ’ಹೋಗಲಿ ಪಾಪ ಇವರಿಗೆ ಗೊತ್ತಾಗೋದಿಲ್ಲ…’ ಅಂತ ಹೇಳಿ ಕ್ಷಮಿಸಬಹುದೇನೊ. ಆದರೆ ನಾನೇ ಕಂಡ ಹಾಗೆ ಕೆಲ ತಿಂಗಳ ಹಿಂದೆ ಕನ್ನಡದ ಹಿರಿಯ ಪ್ರಾಧ್ಯಾಪಕರೊಬ್ಬರ ಕುಟುಂಬದ ಮದುವೆ ಮಂತ್ರಮಾಂಗಲ್ಯದ ಪ್ರಕಾರ ನಡೆಯಿತು. ಅದು ಬೆಂಗಳೂರಿನ ’ಮೋಸ್ಟ್ ಕಾಸ್ಟ್ಲಿ’ ಛತ್ರದಲ್ಲಿ, ಸುಮಾರು ಐದಾರು ಸಾವಿರ ಜನರ ಸಮ್ಮುಖದಲ್ಲಿ. ಇದಕ್ಕಿಂತಲೂ ದೊಡ್ಡ ದುರಂತ ಎಂದರೆ ಆ ಮದುವೆಗೆ ಹೋಗಿ ಉಂಡು ಬಂದ ಕನ್ನಡದ ಜ್ಞಾನಪೀಠವೊಂದು ವೇದಿಕೆಯ ಮೇಲೆ ಘಂಟಾಘೋಷವಾಗಿ ’ಇಂತ ಮದುವೆಗಳು ಇನ್ನೂ ಹೆಚ್ಚುಹೆಚ್ಚು ಆಗ್ಲಿ..’ ಎಂದು ಬಹಿರಂಗ ಕರೆ ಕೊಟ್ಟು ಬಂದಿರುವುದು. ಮಂತ್ರಮಾಂಗಲ್ಯವನ್ನು ರೂಪಿಸಿದ ಕುವೆಂಪುರವರು ಈಗೇನಾದರೂ ಬದುಕಿದ್ದರೇ ಇಂತವರ ನಡುವಳಿಕೆಗಳನ್ನ ಕಂಡು ಎಲ್ಲೆಲ್ಲಿಂದ ನಗುತ್ತಿದ್ದರೊ ಗೊತ್ತಾಗ್ತಿಲ್ಲ. ಮೊನ್ನೆಮೊನ್ನೆಯಷ್ಟೇ ನನ್ನ ಮತೊಬ್ಬ ಗೆಳೆಯ ಈ ರೀತಿ ಅದ್ದೂರಿಯಾಗಿ ಮಂತ್ರಮಾಂಗಲ್ಯದ ಮದುವೆ ಮಾಡಿಕೊಂಡ. ಅವನ ಈ ಪ್ರಯತ್ನಕ್ಕೆ ಪ್ರತಿಭಟನೆಯಾಗಿ ನಾನು ಆ ಮದುವೆಗೆ ಹೋಗಬಾರದು ಎಂದು ತೀರ್ಮಾನಿಸಿದ್ದೆ. ಹಾಗೆ ಹೋಗಲಿಲ್ಲ. ಇರಲಿ. ಅಂಥವರನ್ನ ಅಲ್ಲೇ ಬಿಟ್ಟು ನಾವು ತೇಜಸ್ವಿ ಕಥೆಗೆ ವಾಪಸ್ ಬರೋಣ. ಶ್ರೀರಾಮ್ ರವರನ್ನು ತೇಜಸ್ವಿಯವರ ಕುತೂಹಲ, ಆಸಕ್ತಿಗಳ ಕುರಿತು ನೆನಪುಗಳನ್ನು ಹಂಚಿಕೊಳ್ಳುವಂತೆ ಕೇಳಿದೆ. ಅವರು ನಿಧಾನವಾಗಿ ಹಳೆಯ ಸಂಗತಿಗಳನ್ನು ನೆನಪಿಸಿಕೊಳ್ಳಲಾರಂಭಿಸಿದರು,

ತೇಜಸ್ವಿ ಕುತೂಹಲ – ಕುವೆಂಪುರವರ ಗಿಫ್ಟು?

“ಕುತೂಹಲ ಅಂದ್ರೆ ವಿಪರೀತ ಅದು. ಅವರು ತೀರಿಹೋದ ಮೇಲೆ ಕೃಪಾಕರ ಸೇನಾನಿ ಒಂದು ಆರ್ಟಿಕಲ್ ಬರೆದ್ರು, ’ಅದಮ್ಯ ಕುತೂಹಲ ಹಠಾತ್ ಅಂತ್ಯ’ ಅಂತ. ಅವರ ಅಂತ್ಯ ಯಾಕಾಯ್ತು ಅಂದ್ರೆ ಅವರ ಅದಮ್ಯ ಕುತೂಹಲದಿಂದ ಆಯ್ತು ಅಂತ. ಯಾವುದನ್ನೇ ಆಗ್ಲಿ ತುಂಬಾ ಕುತೂಹಲದಿಂದ ನೋಡೋರು ಅವರು. ನಾವೆಲ್ಲೊ ಹೋಗ್ತಾ ಇರ್ತೀವಿ ಅಂತ ಇಟ್ಕೊಳಿ. ನಮಗೆ ಕಾಣಸ್ದೇ ಇರೋದೆಲ್ಲ ಅವರಿಗೆ ಕಾಣ್ಸಿರೋದು. ಒಂದ್ಸಾರಿ ಊಟಿಗೆ ಹೋಗ್ತಾ ಇದ್ವಿ ಕಾರಿನಲ್ಲಿ. ಛಕ್ ಅಂತ ನಿಲ್ಸಿದ್ರು ಕಾರನ್ನ. ’ಏನ್ರಿ?’ ಅಂದ್ರೆ ’ಅಲ್ಲಿ ಮರದ ಮೇಲೆ ಕೆಂದಳಿಲು ಇದೆ ನೋಡಿ’ ಅಂತ ತೋರ್ಸೋರು. ನಾವೆಲ್ಲ ನೆಲ ನೋಡ್ತಿದ್ರೆ ಅವರು ಮರದ ಮೇಲೆ ಕೆಂದಳಿಲು ನೋಡ್ತಾ ಇರೋರು. ಹೀಗೆ ಅವರು. ಆಮೇಲೆ ಅವರ ಕುತೂಹಲ ತಣೀತಾ ಇರ್ಲಿಲ್ಲ. ’ಇದು ಇಲ್ಲಿ ಯಾಕಿದೆ? ಈ ಸೀಸನ್ ನಲ್ಲಿ ಯಾಕಿದೆ? ಇದರ ಬದುಕಿನ ಕ್ರಮ ಏನು?’ ಇದನ್ನೆಲ್ಲಾ ತಿಳ್ಕೊಳ್ಳೋಕೆ ಪ್ರಯತ್ನ ಪಡೋರು. ಬಹುಶಃ ಅದು ಅವರಿಗೆ ಕುವೆಂಪುರವರ ಬಳುವಳಿ ಅಂತ ಕಾಣ್ತದೆ. ಕುವೆಂಪುರವರಿಗೆ ಕುತೂಹಲ ಇತ್ತು ಅಂತ ಯಾರೂ ಹೇಳೋದಿಲ್ಲ. ಬಟ್ ನೀವು ನಿಧಾನವಾಗಿ ಅವರ ಕವನಗಳನ್ನ, ಕಾದಂಬರಿಗಳನ್ನ, ಮಲೆನಾಡಿನ ಚಿತ್ರ ಇತ್ಯಾದಿಗಳನ್ನೆಲ್ಲ ಪ್ರಕೃತಿಯನ್ನ ಅವರಷ್ಟು ಸೂಕ್ಷ್ಮವಾಗಿ ಅವಲೋಕಿಸಿರುವ ಲೇಖಕರೇ ಇಲ್ಲ. ಆದ್ರೆ ಅವರು ಅದಕ್ಕೆ ಒಂದು ವೈಜ್ಞಾನಿಕ ಟಚ್ ಕೊಟ್ಬಿಟ್ಟು ಬರೆದಿಲ್ಲ. ಅದಕ್ಕೆ ಬಹಳ ಜನಕ್ಕೆ ಗೊತ್ತಾಗಿಲ್ಲ. ಅವರು ಒಂದು ರೀತಿ ಎಮೋಶನಲ್ ಆಗಿ ಅದನ್ನೆಲ್ಲ ಬರೆದು ನಮಗೆ ಹೇಳಿದಾರೆ.

ನಾವು ಅದನ್ನೆಲ್ಲ ಓದಿಬಿಟ್ಟು ’ಎಷ್ಟು ಚೆನ್ನಾಗಿ ಬರೆದಿದ್ದರೆ?’ ಅಂತೀವಿ. ಬಟ್ ಇಟ್ಸ್ ಆಲೊ ಅಬ್ಸರ್ವೇಷನ್. ಕುವೆಂಪುರವರಿಂದ ಬಳುವಳಿಯಾಗಿ ಪಡೆದ ಆ ಅಬ್ಸರ್ವೇಷನ್ನಿಗೆ ತೇಜಸ್ವಿ ಸೈಂಟಿಫಿಕ್ ಟಚ್ ಕೊಟ್ರು. ಕುವೆಂಪುರವರು ಒಂದು ಹಕ್ಕಿಯ ಗಾನದ ಇಂಪನ್ನ ವಿವರಿಸೋರು. ಇವರು ಇನ್ನೂ ಆಳಕ್ಕೆ ಹೋಗಿ ’ಯಾಕಿದು ಈ ಸೀಸನ್ ನಲ್ಲೇ ಹಾಡ್ತದೆ? ಯಾಕೆ ಹೀಗೇ ಹಾಡ್ತದೆ?’ ಈ ರೀತಿಯ ವೈಜ್ಞಾನಿಕ ವಿಶ್ಲೇಷಣೆಯನ್ನ ಕುವೆಂಪುರವರಿಂದ ಬಳುವಳಿಯಾಗಿ ಪಡೆದ ಅಬ್ಸರ್ವೇಷನ್ನಿಗೆ ಸೇರ್ಸಿದ್ರು. ಸೊ ಅದು ಅವರ ಕುತೂಹಲದ ಮೂಲ ಅಂತ ನನಗನ್ಸುತ್ತೆ” ತೇಜಸ್ವಿಯವರ ಕುತೂಹಲದ ಬಗ್ಗೆ ಶ್ರೀರಾಮ್ ರವರು ಸಂಕ್ಷಿಪ್ತವಾಗಿ ಮಾತನಾಡಿದ್ದು ಹೀಗೆ.

ಈ ಹಂತದಲ್ಲಿ ಶ್ರೀರಾಮ್ ರವರು ನಮ್ಮ ಬಳಿ ವಿನಮ್ರರಾಗಿ ವಿನಂತಿಸಿ ತಮಗೆ ಬಂದ ಫೋನ್ ಕರೆಯನ್ನು ಸ್ವೀಕರಿಸಿಸಲು ಅವರ ಮನೆಯ ಹಿಂದಿನ ಕೋಣೆಯೊಂದಕ್ಕೆ ಹೋದರು. ಆಗ ನಮ್ಮ ಹುಡುಗರಿಗೂ ರೆಸ್ಟ್ ಸಿಕ್ಕಂತಾಗಿ ಅವರೆಲ್ಲರೂ ಶ್ರೀರಾಮ್ ರವರ ಮನೆಯ ಹಿಂದೆಮುಂದೆ ಓಡಾಡತೊಡಗಿದರು. ಸುಮಾರು ಹತ್ತು ನಿಮಿಷಗಳ ನಂತರ ಶ್ರೀರಾಮ್ ರವರು ತೇಜಸ್ವಿ ನೆನಪುಗಳ್ನ್ನು ಹಂಚಿಕೊಳ್ಳಲಾರಂಭಿಸಿದ್ದು ಮನೆಯ ಹಿಂದಿನ ಅದೇ ಕೋಣೆಯಲ್ಲಿ. ಅದು ಉದ್ದನೆಯ ಹಳೆಯ ಗೋಡೋನ್ ನಂತಹ ಒಂದು ಕೋಣೆ. ಆ ಕೋಣೆಯ ತುಂಬಾ ತೇಜಸ್ವಿ ಹಾಗೂ ಕುವೆಂಪುರವರ ಪುಸ್ತಕಗಳ ಸಾವಿರಾರು ಪ್ರತಿಗಳನ್ನು ಪೇರಿಸಿಟ್ಟಿದ್ದರು. ಅದು ಪುಸ್ತಕ ಪ್ರಕಾಶನದ ಆಫೀಸು. ಅಲ್ಲಿಂದ ಕರ್ನಾಟಕದ ಹಲವು ಭಾಗಗಳಿಗೆ ಪುಸ್ತಕಗಳ ಸರಬರಾಜಾಗುತ್ತದೆ. ಮುಂದೆ ಶ್ರೀರಾಮ್ ರವರು ಪುಸ್ತಕ ಪ್ರಕಾಶನದ ಕುರಿತೇ ಮಾತನಾಡತೊಡಗಿದರು,

ಹೆಸರು ’ನಿರುತ್ತರ’… but ಉತ್ತರ ರೆಗ್ಯುಲರ್

“೮೯ನಲ್ಲಿ ಇದನ್ನ ಮಾಡ್ಬೇಕು ಅಂತ ಮನಸ್ಸು ಮಾಡಿದ್ವಿ, ೯೦ನೇ ಇಸ್ವಿನಲ್ಲಿ ಪುಸ್ತಕ ತಂದ್ವಿ. ಮೊದಲನೆಯದು ’ಪರಿಸರದ ಕತೆ’. ಪುಸ್ತಕ ಪ್ರಕಾಶನ ಸ್ಟಾರ್ಟ್ ಮಾಡೋವಾಗಲೇ ನಮಗೆ ನಾವೇ ಕೆಲವೊಂದು ಕಟ್ಟುಪಾಡು ಹಾಕ್ಕೊಂಡಿದ್ವಿ. ಏನು ಅಂದ್ರೆ, ’ಸರಕಾರದ ಸ್ಕೀಂಗಳಲ್ಲಿ ಭಾಗವಹಿಸಬಾರದು, ನಾವು ಜನ ಕೊಂಡು ಓದೋದನ್ನೇ ನಂಬಬೇಕು, ನಮ್ಮ ಮೆರಿಟ್ ಗೊತ್ತಾಗೋದು ಜನ ಕೊಂಡು ಓದಿದ್ರೇನೆ, ಸ್ಕೀಂಗಳು ಅಂತೇಳಿ ತಗೊಂಡೋಗಿ ಲೈಬ್ರರಿಗಳಿಗೆ ಬುಕ್ಸ್ ತುಂಬಿ ಬಂದುಬಿಟ್ರೆ ನಮ್ಮ ಮೆರಿಟ್ ಗೊತ್ತಾಗೋದಿಲ್ಲ,’ ಅಂತ ನಾವು ತೀರ್ಮಾನ ಮಾಡ್ಕೊಂಡು ಶುರು ಮಾಡಿದ್ವಿ. ಆಗ ನಾವು ತೇಜಸ್ವಿಗೆ ಒಂದು ಕಂಡಿಶನ್ ಹಾಕಿದೆ, ’ನೀವು ತುಂಬಾ ಸಂಕೋಚದ ಮನುಷ್ಯ, ಯಾರತ್ರಾನೂ ಮಾತಾಡೋದಿಲ್ಲ, ಸಿಟ್ಟು ಇತ್ಯಾದಿ ನಿಮ್ಮ ಮೇಲೆ ಕಂಪ್ಲೇಂಟ್ ಇದೆ. ಆದ್ರಿಂದ ನಿಮ್ಮ ಸಾಹಿತ್ಯವನ್ನ ಕುರಿತು ಯಾರೇ ಪತ್ರ ಬರೆದ್ರೂನೂ ನೀವು ಅವ್ರಿಗೆ ಉತ್ತರ ಬರೀಬೇಕು. ಉತ್ತರ ಬರೆದ್ರೇನೆ ನಮಗೂ ಓದುಗರಿಗೂ ಸಂವಾದ ಏರ್ಪಡೋದು. ಆದ್ರಿಂದ ಇನ್ಮೇಲೆ ಯಾರೇ ನಿಮಗೆ ಕಾಗದ ಬರೆದ್ರೂ ನೀವು ಅವ್ರಿಗೆ ಉತ್ತರ ಕೊಡ್ಬೇಕು. ನೀವು ಮನೆ ಹೆಸರನ್ನ ’ನಿರುತ್ತರ’ ಅಂತ ಇಟ್ಕೊಂಡಿರಬಹುದು, ಬಟ್ ಉತ್ತರ ಮಾತ್ರ ರೆಗ್ಯುಲರಾಗಿ ಬರಿಬೇಕು’ ಅಂತ ಕಂಡಿಶನ್ ಹಾಕಿದೆ. ಆಯ್ತು ನಾನು ಬರಿತೀನಿ ಅಂತ ಹೇಳಿ ರೆಗ್ಯುಲರ್ ಆಗಿ ಬರೆದ್ರು. ಅವರ ಕಡೆದಿವ್ಸ ಹೋದಾಗಲೂ ಅವರ ಟೇಬಲ್ ಮೇಲೆ ಬಂದ ಪತ್ರಗಳನ್ನ ಇಷ್ಟು ಇಟ್ಕೊಂಡಿದ್ರು, ಉತ್ತರ ಬರೆಯೋದಿಕ್ಕೆ ಇನ್ಲ್ಯಾಂಡ್ ಲೆಟರ್ ಗಳನ್ನು ಇಷ್ಟು ಇಟ್ಕೊಂಡಿದ್ರು. ಹಾಗೆ ಓದುಗರು ಯಾರೇ ಪತ್ರ ಬರೆದ್ರು ಅವರಿಗೆ ಉತ್ತರ ಬರೀತಾ ಇದ್ರು.

ಆಮೇಲೆ ನಾವು ಯಾರದ್ದೇ ಪುಸ್ತಕ ಪಬ್ಲಿಷ್ ಮಾಡ್ಲಿ ಅವ್ರಿಗೆ ರೆಗ್ಯುಲರಾಗಿ ರಾಯಲ್ಟಿ ಕೊಡ್ಬೇಕು ಅಂತ ತೀರ್ಮಾನಿಸಿದ್ವಿ. ಕನ್ನಡದಲ್ಲಿ ಪ್ರಿಂಟಾದ್ರೆ ಸಾಕಪ್ಪ ಅನ್ನೋರೇ ಜಾಸ್ತಿ. ಇನ್ನು ’ಏಯ್ ಎಲ್ಲಯ್ಯ ರಾಯಲ್ಟಿ?’ ಅನ್ನೋರಂತೂ ತುಂಬಾ ಕಡಿಮೆ. ಅವಾಗ ತೇಜಸ್ವಿ ಹೇಳಿದ್ರು ’ಇಂತವನ್ನೆಲ್ಲ ನಾವು ಓಡಿಸಬೇಕು. ಬೇರೆಯವರ ಥರ ನಾವು ಮಾಡ್ಬಾರ್ದು. ಸೊ ಯಾರದ್ದೇ ಪುಸ್ತಕ ನಾವು ಪ್ರಿಂಟ್ ಮಾಡ್ಲಿ ಕರೆಕ್ಟಾಗಿ ದುಡ್ಡು ಕೊಟ್ಟುಬಿಡ್ಬೇಕು. ದಟ್ ಈಸ್ ದಿ ರೆಸ್ಪೆಕ್ಟ್ ವಿ ಪೇ ಫಾರ್ ದಿ ರೈಟರ್!’ ಅಂತ ಹೇಳಿದ್ರು. ಹಂಗೆ ನಾವು ಇಲ್ಲಿವರೆಗೂ ನಡ್ಕೊಂಡು ಬಂದಿದೀವಿ. ಆಮೇಲೆ ಮೊಟ್ಟಮೊದಲನೇ ಸಲ ನಾವು ಫೋರ್ ಕಲರ್ ಬಳಸಿ ಪುಸ್ತಕಗಳನ್ನ ಪ್ರಿಂಟ್ ಮಾಡೋಕೆ ಶುರು ಮಾಡಿದ್ವಿ. ಕವರ್ ಡಿಸೈನ್ ಅಟ್ರಾಕ್ಟಿವ್ ಆಗಿ ಮಾಡೋಕೆ ಶುರು ಮಾಡಿದ್ವಿ. ಸೊ ಇನ್ ಏ ವೇ ಅವೆಲ್ಲಾ ಒಂದು ರೀತಿ ಬುಕ್ ಪಬ್ಲಿಷಿಂಗ್ ನಲ್ಲೇ ಹೊಸ ಬದಲಾವಣೆಗೆ ಮೂಲ ಆಯ್ತು. ಆಮೇಲೆ ತೇಜಸ್ವಿ ’ಮಿಲೇನಿಯಂ ಸರಣಿ’ ಅಂತ ಪ್ರತಿ ತಿಂಗಳು ಒಂದು ಬುಕ್ ಬರೆದ್ರು. ೨೦೦೦ದ ಇಸವಿ ದಾಟಿ ೨೦೦೧ಕ್ಕೆ ಬಂದ್ವಲ್ಲ ಒಂದು ಶತಮಾನ ದಾಟಿ ಆಗ ಕಳೆದ ಶತಮಾನದ ಒಂದು ಪಕ್ಷಿನೋಟ ಅಂತ ಹೇಳಿ ಪ್ರಮುಖವಾದ ಕೆಲವು ಘಟನೆಗಳನ್ನ, ರೋಮಾಂಚಕಾರಿ ವಿಷಯಗಳನ್ನ ಅವರು ಮಿಲೇನಿಯಂ ಸರಣಿನಲ್ಲಿ ಹದಿನಾರು ಪುಸ್ತಕ ಬರೆದ್ರು. ಆ ಪುಸ್ತಕಗಳು ಹಿರಿಯರು, ಕಿರಿಯರು ಅನ್ನದೇ ಎಲ್ಲರಿಗೂ ತುಂಬಾ ಇಷ್ಟವಾದ ಪುಸ್ತಕಗಳಾಗಿದಾವೆ. ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಹಾಕಿದ ಹಣ ವಾಪಸ್ ಬರ್ಬೇಕು ಅಂತ ಆದ್ರೆ ಅದನ್ನ ಜನ ಕೊಂಡುಕೊಳ್ಳಬೇಕು.

ಜನ ಕೊಂಡುಕೊಳ್ಳಬೇಕು ಅಂದ್ರೆ ಅದ್ರಲ್ಲಿ ಅವರಿಗೆ ಇಷ್ಟವಾಗುವ ವಿಷಯ ಇರ್ಬೇಕು. ಹಾಗಾಗಿ ತೇಜಸ್ವಿ ಮೊದಲು ಕತೆ, ಕಾದಂಬರಿ ಬರೆದ್ರು. ನಂತರ ಕೆನೆತ್ ಆಂಡರ್ಸನ್ ನ ’ಕಾಡಿನ ಕತೆಗಳು’ ಬರೆದ್ರು. ಆ ಕತೆಗಳನ್ನ ಓದ್ತಾ ಇದ್ರೆ ನಾವೇ ಕಾಡಿನ ಮಧ್ಯದಲ್ಲಿ ಸಿಕ್ಕಿಬಿದ್ದಿದ್ದೀವೇಮೊ ಅನ್ಸುತ್ತೆ. ಆಂಡರ್ಸನ್ನು ಕಾಡನ್ನ ವಿವರಿಸೋದೆಯಲ್ಲ ಒಂದು ರೀತಿ ರಿಯಲ್ ಆರ್ಟಿಸ್ಟ್ ಥರ ಬರಿತಾನೆ. ಜಿಮ್ ಕಾರ್ಬೆಟ್ ಸಹ ಅಂತಹ ಒಬ್ಬ ಲೇಖಕ. ಸೊ ಆ ರೀತಿ ಕಂಟೆಂಟ್ ಆಲ್ಸೊ ವೆರಿ ಇಂಪಾರ್ಟೆಂಟ್. ತೇಜಸ್ವಿಯವರ ಫೋಕಸ್ಸು ದೊಡ್ಡವರಿಗಿಂತಲೂ ಮಕ್ಕಳ ಬಗ್ಗೆ ಜಾಸ್ತಿ ಇತ್ತು. ‘ದೊಡ್ದವರಿಗೆ ಎಷ್ಟು ಹೇಳಿದ್ರು ಅವರ ತಲೆಗೇ ಹೋಗೋದಿಲ್ಲ’ ಅಂತ ಹೇಳಿ ಮಕ್ಕಳನ್ನ ಗುರಿಯಾಗಿಟ್ಟುಕೊಂಡೇ ‘ಮಿಲೇನಿಯಂ ಸೀರೀಸ್’ ಬರೆದಿದ್ದು. ನಮ್ಮ ಕರ್ನಾಟಕದಲ್ಲೇ ಒಂದೊಂದು ಪುಸ್ತಕಾನ ಒಂದೊಂದು ಕಡೆ ಜಾಸ್ತಿ ಓದ್ತಾರೆ.

’ಕಿರಗೂರಿನ ಗಯ್ಯಳಿಗಳನ್ನ’ ಮಂಗಳೂರಿನಲ್ಲಿ ಜಾಸ್ತಿ ಓದ್ತಾರೆ. ಮಂಗಳೂರಿನಿಂದ ನಮ್ಮ ಅಶೋಕ ವರ್ಧನ (ಅತ್ರಿ ಬುಕ್ ಹೌಸ್) ಬರೀತಾ ಇದ್ದ, ’ಇಲ್ಲಿ ಇರುವವರೆಲ್ಲಾ ಗಯ್ಯಾಳಿಗಳೇ ಎಂದು ಕಾಣುತ್ತದೆ. ಆದ್ದರಿಂದ ೨೫ ಪ್ರತಿ ’…ಗಯ್ಯಾಳಿ’ಗಳನ್ನ ಕಳಿಸಿ’ ಅಂತ. ಪೋಸ್ಟ್ ಮೂಲಕ ಪುಸ್ತಕ ತರಿಸಿಕೊಂಡು ಓದೋರು ಎಲ್ಲಿ ಜಾಸ್ತಿ ಇದಾರೆ ಅಂತ ಹೇಳಿದ್ರೆ ನಿಮಗೆಲ್ಲ ಆಶ್ಚರ್ಯ ಆಗಬಹುದು, ರಾಯಚೂರು ಜಿಲ್ಲೆನಲ್ಲಿದ್ದಾರೆ. ಮತ್ತೆ ಒಂದೇ ಒಂದು enquiry ಬರದೇ ಇರೊ ಜಿಲ್ಲೆಗಳಂದ್ರೆ ಮಂಡ್ಯ ಮತ್ತು ಹಾಸನ! Like that, ವೆರಿ ಪೆಕ್ಯೂಲಿಯರ್ ಎಕ್ಸ್ಪೀರಿಯನ್ಸಸ್ ನಮಗಾಗಿದೆ.

ನಮ್ಮಲ್ಲಿ ಟಾಪ್ ಆಗಿ ಹೋಗುವ ಪುಸ್ತಕ ಅಂದ್ರೆ ’ಕರ್ವಾಲೊ’ ’ಜುಗಾರಿಕ್ರಾಸ್’. ನನಗೆ ಪರ್ಸನಲಿ ತುಂಬಾ ಇಷ್ಟ ಆಗೋದು ಅವರ ’ಮಿಸ್ಸಿಂಗ್ ಲಿಂಕ್’. ಅದು ಮಾನವ ಶಾಸ್ತ್ರದ ಬಗ್ಗೆ ಅತ್ಯಂತ ಸರಳವಾಗಿ ಎಂಥ ಸಾಮಾನ್ಯನಿಗೂ ಅರ್ಥವಾಗೊ ಹಾಗೆ ಬರೆದಿರುವ ಪುಸ್ತಕ ಅದು. ಆ ಪುಸ್ತಕ ಬಂದ ಹೊಸದರಲ್ಲಿ ಮಾನಸ ಗಂಗೋತ್ರಿನಲ್ಲಿ ಇಬ್ಬರು ಪ್ರೊಫೆಸರ್ಸ್ ಸಿಕ್ಕಿದ್ರು. ಅವರು ಸಿಕ್ಕಿ, ’ತುಂಬಾ ಸಂತೋಷನಪ್ಪ…’ ಅಂದ್ರು. ’ಏನ್ ಸಾರ್?’ ಅಂದೆ. ’ಪುಸ್ತಕ ಅದ್ಭುತವಾಗಿದೆ. ಏನ್ ಮಾಡೋದು ನಮ್ಮ ಯೂನಿವರ್ಸಿಟಿ ಪ್ರೊಫೆಸರ್ ಗಳು ಮಾಡ್ಬೇಕಾದ ಕೆಲಸ ಅದು. ನೀವು ಮಾಡ್ತಾ ಇದೀರಿ…’ ಅಂದ್ರು. ಅಷ್ಟು ಸಾಕು ನಮಗೆ. ಯಾವ ಪ್ರಶಸ್ತಿನೂ ಬೇಡ ಎಂಥದ್ದೂ ಬೇಡ”.

ಹೀಗೆ ಪುಸ್ತಕ ಪ್ರಕಾಶನ, ತೇಜಸ್ವಿಯವರ ಸಾಹಿತ್ಯ, ಬರವಣಿಗೆಯ ಗುರಿ ಇವುಗಳ ಬಗ್ಗೆ ಎಲ್ಲಾ ಶ್ರೀರಾಮ್ ರವರು ಸಾದ್ಯಂತವಾಗಿ ಮಾತನಾಡುತ್ತಾ ಹೋದರು. ಅವರು ಹಂಚಿಕೊಳ್ಳುತ್ತಿದ್ದ ಪ್ರತಿಯೊಂದು ವಿಚಾರವು ತೇಜಸ್ವಿಯವರ ವ್ಯಕ್ತಿತ್ವದ ಹಲವು ಮುಖಗಳನ್ನು ಅನಾವರಣಗೊಳಿಸುತ್ತಾ ಹೋದವು. ದಿನಗಟ್ಟಲೆ ಹಂಚಿಕೊಳುವಷ್ಟು ನೆನಪುಗಳು ತೇಜಸ್ವಿಯವರೊಂದಿಗಿನ ಸ್ನೇಹವನ್ನು ಸುಮಾರು ಅರ್ಧ ಶತಮಾನದಷ್ಟು ಸುದೀರ್ಘ ಕಾಲ ಕುಂದದೆ ಉಳಿಸಿಕೊಂಡು ಬಂದ ಶ್ರೀರಾಮ್ ರವರ ಬಳಿ ಇದುದ್ದರಲ್ಲಿ ನನಗ್ಯಾವ ಅನುಮಾನವೂ ಇರಲಿಲ್ಲ. ಆದರೆ ಪ್ರತಿಯೊಂದಕ್ಕೂ ಅಂತ್ಯ ಇರಲೇಬೇಕಾದದ್ದು ಅವಶ್ಯವಾದ್ದರಿಂದ ಅವರ ಬಳಿ ಕಡೆಯದು ಎಂಬಂತೆ ತೇಜಸ್ವಿಯವರ ಹಠಾತ್ ಅಂತ್ಯದ ಕುರಿತು ಮಾತನಾಡುವಂತೆ ಕೇಳಿದೆ. ಸುಮಾರು ೭೦ ವರ್ಷ ದಾಟಿದ್ದರೂ ತಮಲ್ಲಿನ ಮಗುತನ ಉಳಿಸಿಕೊಂಡು ಬಂದಿರುವ ಶ್ರೀರಾಮ್ ರವರು ಸಂತನಂತಹ ನಗೆಯೊಂದನ್ನು ನಗುತ್ತಾ ನಿಧನವಾಗಿ ಮಾತು ಪ್ರಾರಂಭಿಸಿದರು,

ಗೂಸಾ ಆಯಿಲ್ ಮತ್ತು ಬ್ಯಾಕ್ ವಾಟರ್ಸ್ @ಹಾರ್ಟ್

“ಅವ್ರಿಗೆ ಕಾಲಲ್ಲಿ ಸಣ್ಣದು ಒಂದು ಇಸಬು ಅಂತೀವಲ್ಲ ಅದಿತ್ತು. ಏನೂ ತೊಂದ್ರೆ ಕೊಡ್ತಿರ್ಲಿಲ್ಲ ಅದು. ಯಾವಾಗ್ಲೊ ಚಳಿಗಾಲದಲ್ಲಿ ಅದು ಒಂದು ಸ್ವಲ್ಪ ಬಾಧೆ ಕೊಡೋದು. ಅದಕ್ಕೆ ಬೆಟ್ನೋವೈಟ್ ಅಂತ ಇಟ್ಕೊಂಡಿರೋರು, ಅದನ್ನ ಕಾಲಿಗೆ ಹಾಕಿ ಉಜ್ಜಿದ್ರೆ ನೋವು ಕಡಿಮೆ ಆಗ್ಬಿಡೋದು. ಹಿಂಗೆ ಆಗ್ತಿರ್ಬೇಕಾದ್ರೆ ೨೦೦೬ರಲ್ಲಿ ಈ ಚೈನೀಸ್ ಗಳು ಒಂದಷ್ಟು ಔಷಧಿಗಳನ್ನ ಬಿಟ್ರು ಬಜಾರಿಗೆ ಅದು ಅದು ಮಾಡಿಬಿಡುತ್ತೆ, ಇದು ಮಾಡಿಬಿಡುತ್ತೆ ಅಂತ ಹೇಳ್ಕೊಂಡು. ಆ ಔಷಧಿಗಳನ್ನ ಮಾರೊ ಒಬ್ಬ ಏಜೆಂಟ್ ಒಬ್ಬ ಮೂಡಿಗೆರೆನಲ್ಲಿದ್ದ. ಆಚಾರಿ ಅವನು. ಮಾಯಲೋಕ ಓದಿದ್ರೆ ನಿಮಗೆ ಗೊತ್ತಾಗಿರುತ್ತೆ, ಈ ಥರ ಲೋಯರ್ ಸ್ಟ್ರಾಟ ಗಿರಾಕಿಗಳೆಲ್ಲ ನಮ್ಮ ತೇಜಸ್ವಿಗೆ ತುಂಬಾ ಫ್ರೆಂಡ್ಸು. ಅದೇನ್ ಇವರ ಟೈಮು ಅಷ್ಟೊತ್ತಿಗೆ ಕೆಟ್ಟಿತ್ತೊ ಏನೊ ಆ ಆಚಾರಿ ಬಂದು ಇವರಿಗೆ ತಗಲಾಕೊಂಡ. ಬಂದೋನೆ ’ಸಾರ್ ಎಂತ ಖಾಯಿಲೆ ಇದ್ರು ವಾಸಿ ಮಾಡ್ಬಿಡ್ತಾರೆ ಸಾರ್ ಚೈನಾದವರು. ನಾನು ಹೋಗಿ ಒಂದು ಟ್ರೈನಿಂಗ್ ತಗೊಂಡು ಬಂದಿದೀನಿ. ಒಂದು ಆಯಿಲ್ ಇದೆ. ಅದನ್ನ ಮೈಗಾಕಿ ಉಜ್ಜಿದ್ರೆ ನವಯುವಕ ಆಗ್ಬಿಡ್ತೀರಿ ನೀವು’ ಅಂದ.

’ಲೇಯ್ ನವಯುವಕ ಪವಯುವಕ ಯಾವನಿಗ್ ಬೇಕಲೇಯ್? ಕಾಲಲ್ಲಾಗಿರೊ ಇಸುಬು ಹೋದ್ರೆ ಸಾಕು. ಏನೊ ಅದು?’ ಅಂದ್ರು ಇವರು. ’ಸಾರ್ ಆ ಆಯಿಲ್ ಹಾಕಿ ತೀಡಿಬಿಟ್ಟರೆ ಹೊರಟೇ ಹೋಗುತ್ತೆ ಸಾರ್’ ಅಂದ ಅವನು. ’ಸರಿ ತಗೊಂಡ್ ಬಾ ಏನದು ನೋಡೇ ಬಿಡಾಣ…’ ಅಂದ್ರು ತೇಜಸ್ವಿ. ಅದರ ಹೆಸರು ’ಗೂಸಾ ಆಯಿಲ್’ ಅಂತ. ಅವನು ಅದನ್ನ ತಂದ. ತಂದಾಗ ಅದನ್ನ ತಿಡೋದಕ್ಕೆ ಒಂದು ಮೆಥಡ್ ಇದೆ ಹಿಂಗೆ ಬಳಿಬೇಕು, ಹಿಂಗೆ ಉಜ್ಜಬೇಕು ಅಂತೆಲ್ಲ. ಹಂಗೆ ಎಲ್ಲಾ ತೀಡಿಸ್ಕೊಂಡ್ರು. ಆದರೆ ಆ ಆಯಿಲ್ ಜೊತೆ ಬಂದಿರೊ ಬುಕ್ ಲೆಟ್ ನಲ್ಲಿ ಆ ಅಯಿಲ್ ನ ಕೊಬ್ಬರಿ ಎಣ್ಣೆ ತರದ ಯಾವುದಾದ್ರು ಎಣ್ಣೆ ಜೊತೆಗೆ ಜಸ್ಟ್ ಎರಡು ಡ್ರಾಪ್ ಹಾಕಿ ಉಪಯೋಗಿಸಬೇಕು ಅಂತ ಇತ್ತು. ಇವರು ಅದನ್ನ ಓದದೇ ಉದಾಸೀನ ಮಾಡಿದ್ರೊ ಅಥವ ಆ ಆಚಾರಿಗೆ ಅದರ ಬಗ್ಗೆ ಗೊತ್ತಿರಲಿಲ್ಲವೊ ಗೊತ್ತಿಲ್ಲ ಬಟ್ ಆ ಆಯಿಲ್ ನೇ ಡೈರೆಕ್ಟಾಗಿ ಹಾಕ್ಕೊಂಡು ಉಜ್ಜಿ ಉಜ್ಜಿ ಉಜ್ಜಿ ಉಜ್ಜಿ ಇಟ್ಟುಬಿಟ್ರು.

ಆಮೇಲೆ ಆ ಬುಕ್ ಲೆಟ್ ನಲ್ಲಿ ಮತ್ತೊಂದು ಸೂಚನೆ ಇತ್ತು, ’ಒಂದು ವೇಳೆ ನಿಮಗೆ ಬೇರೆ ಯಾವುದಾದರೂ ಹಳೆ ಗಾಯಗಳಿದ್ರೆ ಅವು ಓಪನ್ ಆಗ್ತಾವೆ…’ ಈ ಥರ ಎಲ್ಲ ಅದರಲ್ಲಿತ್ತು  ಆದರೆ ಯಾವಾಗ ಇವರು ಅದನ್ನೆಲ್ಲಾ ಕ್ಯಾರೆ ಅನ್ನದೇ ಹಾಕಿ ಉಜ್ಜಿದ್ರು ಅದರಲ್ಲಿ ಬರೆದಿದ್ದೆಲ್ಲಾ ಒಂದೊಂದೇ ನಿಜ ಆಗೋಕೆ ಶುರು ಆಯ್ತು. ಅವರು ಚಿಕ್ಕಂದಿನಲ್ಲಿ ಗಾಜು ತುಳಿದು ಬಿದ್ದಿದ್ದು ಒಂದು ಗಾಯ ಇತ್ತು ಅದು ಓಪನ್ ಆಯ್ತು, ಆಮೇಲೆ ಇವರು ಎರಡು ಡ್ರಾಪುಗಳಿಗೆ ಬದಲಾಗಿ ನೂರಾರು ಡ್ರಾಪುಗಳನ್ನ ಹಾಕಿ ಉಜ್ಜಿದ್ರಿಂದ ಕಾಲಿನ ಗಾಯಗಳೆಲ್ಲ ಒಂದೊಂದೇ ಓಪನ್ ಆಗ್ಬಿಟ್ವು. ನಿಧಾನವಾಗಿ ಏನಾಯ್ತು ಇವರಿಗೆ ಆ ಆಯಿಲ್ ಉಪಯೋಗಿಸ್ದ್ದು ಇವರಿಗೆ ಅಲರ್ಜಿ ಆಯ್ತು. ಅಲರ್ಜಿ ಆದ ತಕ್ಷಣ ಏನಾಯ್ತು ಮೈಯೆಲ್ಲಾ ನೀರು ತುಂಬೋಕೆ ಶುರುವಾಯ್ತು, ಇಡೀ ದೇಹ. ಅವರ weight increase ಆಗಿ ಕಾಲು ಒಂದು ರೀತಿ ಕಂಬಗಳ ರೀತಿ ಆಗೋಯ್ತು. ಆದ್ರೂ ಈ ವಿಷಯಗಳನ್ನೆಲ್ಲಾ ಯಾರಿಗೂ ಹೇಳ್ಕೊಳ್ಳೊ ಆಸಾಮಿ ಅಲ್ಲ ಅವರು. ತಾವೇ ತಮಗೆ ಗೊತ್ತಿದ್ದ ಕೆಲವು ಲೋಕಲ್ ಔಷಧಿಗಳನ್ನ ಟ್ರೈ ಮಡೋದು, ಆಯುರ್ವೇದ ತಗೊಂಡ್ರೆ ವಾಸಿ ಆಗುತ್ತ ಅಂತ ನೋಡೋದು, ಹೋಮಿಯೋಪತಿ ತಗೊಂಡ್ರೆ ವಾಸಿ ಆಗುತ್ತ ಅಂತ ನೋಡೋದು ಹೀಗೆ ಮಾಡ್ತಾ ಇದ್ರು.

ಆಮೇಲೆ ಕ್ರಮೇಣವಾಗಿ ಅವರ ಶ್ವಾಸಕೋಶದಲ್ಲಿ ನೀರು ತುಂಬೋಕೆ ಶುರು ಆಗೋಯ್ತು. ನಾನು ದಿನ ಅವರ ಜೊತೆ ಫೋನಿನಲ್ಲಿ ಮಾತಾಡ್ತಾ ಇದ್ನಲ್ಲ ಅವರ ವಾಯ್ಸು ಬಹಳ ಮೈಲ್ಡ್ ಆಗಿ ಕೇಳ್ಸೋದು, ಕೆಲವು ಸಾರ್ತಿ ಅದೂ ಕೇಳಿಸ್ತಿರ್ಲಿಲ್ಲ. ನನಗೆ ಗೊತ್ತಾಯ್ತು ‘ಇವರಿಗೆ ಏನೊ ಆಗಿದೆ ಆದ್ರೆ ಹೇಳ್ಕೊತಾ ಇಲ್ಲ’ ಅಂತ. ಮರುದಿನ ಬೆಳಿಗ್ಗೆ ಎದ್ದವರೇ ನಾನು ಪದ್ಮ (ಶ್ರೀರಾಮ್ ರವರ ಪತ್ನಿ) ಮೂಡಿಗೆರೆಗೆ ಹೋದ್ವಿ. ಹೋಗಿ ನೋಡಿದ್ರೆ ಅವರ ಸ್ಥಿತಿ ಬಹಳ ಗಂಭೀರವಾಗಿತ್ತು. ಶಾಕ್ ಆಗ್ಬಿಟ್ಟೆ ಅವರ ಪರಿಸ್ಥಿತಿ ನೋಡಿ! ತಕ್ಷಣ ಗಲಾಟೆ ಮಾಡಿ ಅವರನ್ನ ಚಿಕ್ಕಮಗಳೂರಿನ ಆಸ್ಪತ್ರೆಗೆ ಕರ್ಕೊಂಡು ಹೋದ್ವಿ. ಆದರೆ ಅಲ್ಲಿ ಅಂತ ಫಲ ಕಾಣ್ಲಿಲ್ಲ ಅಂತ ಅವರನ್ನ ಮೈಸೂರಿಗೆ ಕರ್ಕೊಂಡು ಬಂದು ಇಲ್ಲಿ ಟ್ರೀಟ್ಮೆಂಟ್ ಕೊಡ್ಸಿದ್ವಿ. ಇಲ್ಲಿ ಅವರ ಕಾಲಲ್ಲಾಗಿದ್ದ ಗಾಯಗಳನ್ನ ತೊಳೆದು, ಆಪರೇಶನ್ ಮಾಡಿದ್ರು. ಕ್ರಮೇಣ ಅದು ಡ್ರೈ ಆಗ್ತಾ ಬಂತು. ಆಗ ಇಲ್ಲಿನ ಡಾಕ್ಟರ್ಸ್ ಹೇಳಿದ್ರು ’ನೀವು ಬೆಂಗಳೂರಿಗೆ ಹೋಗಿ. ಅಲ್ಲಿ ಯಾರಾದ್ರು ಹಾರ್ಟ್ ಸ್ಪೆಷಲಿಸ್ಟ್, ಪಲ್ಮನಾಲಜಿಸ್ಟ್ ಹತ್ರ ತೋರಿಸಿ’ ಅಂತ ಹೇಳಿ ಅವರೇ ಬೆಂಗಳೂರಿನ ಜಯದೇವ ಆಸ್ಪತ್ರೆನಲ್ಲಿ ಡಾಕ್ಟರ್ ಸಿ.ಎನ್ ಮಂಜುನಾಥ್ ಅವ್ರಿಗೆ ಫೋನ್ ಮಾಡಿ ಅವರ ಹತ್ರ ಕಳಿಸಿದ್ರು.

ಅಲ್ಲಿ ಆ ಡಾಕ್ಟ್ರು ತೇಜಸ್ವಿನ ಪರೀಕ್ಷೆ ಮಾಡಿ ’ಹೃದಯದಲ್ಲೂ ನೀರು ತುಂಬಿಕೊಂಡಿದೆ’ ಅಂತ ಹೇಳಿದ್ರು! ಸಮುದ್ರದಲ್ಲಿ ಈ ಬ್ಯಾಕ್ ವಾಟರ್ಸ್ ಅಂತ ಕರಿತೀವಿ ನೋಡಿ ಹಾಗೆ ಅವರ ಶ್ವಾಸಕೋಶ ಮತ್ತು ಹೃದಯದಲ್ಲೂ ಬ್ಯಾಕ್ ವಾಟರ್ಸ್ ತುಂಬಿಕೊಂಡುಬಿಟ್ಟಿತ್ತು. ಅಲ್ಲೇ ಒಂದು ತಿಂಗಳಿದ್ದು ಅದಕ್ಕೆಲ್ಲ ಟ್ರೀಟ್ಮೆಂಟ್ ತಗೊಂಡ್ರು. ಆದರೂ ಅವರ ಹೃದಯ ಮತ್ತು ಶ್ವಾಸಕೋಶ ಸ್ವಲ್ಪ ಡ್ಯಾಮೇಜ್ ಆಗಿದ್ದಿದ್ದಂತೂ ಸತ್ಯ. ಆಮೇಲೆ ಅಲ್ಲಿಂದ ಬರೋವಾಗ ಡಾಕ್ಟರ್ಸು ಕೆಲವೊಂದು ಪ್ರಿಕಾಷನ್ಸ್ ಹೇಳಿದ್ರು, ’ನೀವು ಸ್ಕೂಟ್ರು ಸ್ಟಾರ್ಟ್ ಮಾಡ್ಬಾರ್ದು, ಸ್ಕೂಟ್ರು ರೈಡ್ ಮಾಡ್ಬಾರ್ದು, ಬೆಟ್ಟ ಗುಡ್ಡ ಹತ್ತಬಾರದು, ಭಾರ ಎತ್ತಬಾರದು…’ ಯಾಕಂದ್ರೆ ಡಾಕ್ಟರ್ಸ್ ಸಸ್ಪೆಕ್ಟೆಡ್ ದಟ್ ಹಿಸ್ ಹಾರ್ಟ್ ವಾಸ್ ಎನ್ಲಾರ್ಜ್ಡ್!

ಆದರೆ ಅವರು ಯಾರ ಮಾತು ಕೇಳೋರಲ್ಲ. ಅವರು ಸ್ಕೂಟ್ರು ಹತ್ತಿದ್ರು, ಸ್ಟಾರ್ಟ್ ಮಾಡಿದ್ರು, ಬೆಟ್ಟ ಹಟ್ಟಿದ್ರು, ಇಳಿದ್ರು, ಭಾರ ಎತ್ತಿದ್ರು, ಹಾಗೇ ನಾರ್ಮಾಲ್ಲಾಗೆ ಕೆಲಸ ಮಾಡ್ತಿದ್ರು…ಹಿಂಗಾಗಿ ಏಪ್ರಿಲ್ ಏಳನೇ ತಾರೀಖು ಅದೇ ಸ್ಕೂಟ್ರಲ್ಲಿ ಹೋಗಿ ಬಿರ್ಯಾನಿ ತಗೊಂಡು ಬಂದು, ಊಟ ಮಾಡಿ…ಹಠಾತ್… … …” ಶ್ರೀರಾಮ್ ರವರ ಮುಖದ ಮೇಲೆ ವಿಶಾದ ತುಂಬಿದ ನಗೆ. ’ಏನ್ ಮಾಡೋದು…ಏನೂ ಮಾಡೊ ಹಾಗಿಲ್ವಲ್ಲ…ಹೋದ್ರು ಅಷ್ಟೆ…’ ಎಂದು ಹುಟ್ಟಿದ ಮನುಷ್ಯ ಸಾಯಲೇಬೇಕಲ್ವೇನ್ರಿ ಅನ್ನುವ ಧಾಟಿಯಲ್ಲಿ ಅವರು ಮಾತಾಡಿದ್ದರೂ ಆ ಮಾತು ಹೇಳುವಾಗ ಅವರ ಮನಸ್ಸಿನಲ್ಲಿದ್ದ ನೋವು ಅವರ ಕಣ್ಣುಗಳಲ್ಲಿ ಸ್ಪಷ್ಟವಾಗಿ ಕಾಣಿಸುವಷ್ಟು ನಿಚ್ಚಳವಾಗಿತ್ತು. ಮುಂದೆ ನಾನೇನೂ ಕೇಳಲು ಹೋಗಲಿಲ್ಲ. ಆದರೆ ಕೆಲ ಹೊತ್ತಿನ ನಂತರ ಅವರೇ ಮಾತು ಮುಂದುವರೆಸಿದರು, “ಅವರು ಹೋಗಿದ್ದು ಈಗಿನ ಮಕ್ಕಳಿಗಂತೂ ಖಂಡಿತ ನಷ್ಟ ಅಂತಾನೇ ಹೇಳ್ತೀನಿ. ಯಾಕಂದ್ರೆ ಅವರು ಇದ್ದಿದ್ರೆ ಇನ್ನೊಂದೆರಡು ಮೂರು ಕಾದಂಬರಿ ಬರಿಬೇಕು ಅಂತಿದ್ರು ಅದಾಗಿರೋದು, ’ಮಿಲೇನಿಯಂ ಸರಣಿ ಥರದ ಇನ್ನೊಂದು ಸೀರೀಸ್ ಬರೆಯೋಣ ಕಣ್ರಿ’ ಅಂತ ಹೇಳಿದ್ರು ಅದು ಬಂದಿರೋದು. ಸೊ ಅವೆಲ್ಲ ಬರಹಗಳ ಗುರಿ ಮುಖ್ಯವಾಗಿ ಮಕ್ಕಳು. ಸೊ ಅದನ್ನೆಲ್ಲ ಗಮನಿಸಿದಾಗ ನಷ್ಟ ಅವರು ಹೋಗಿದ್ದು ಅಂತ ಅನ್ಸುತ್ತೆ” ಶ್ರೀರಾಮ್ ರವರ ಕಡೆಯ ಮಾತಿದು.

ಮೈಸೂರಿನ ಸರಸ್ವತಿಪುರಂನ ಅವರ ಮನೆಯಲ್ಲಿ ಚಿತ್ರೀಕರಣ ಮುಗಿದಾಗ ಸಮಯ ಸಂಜೆ ನಾಲ್ಕು ಗಂಟೆ ಸುಮಾರು. ಶ್ರೀರಾಮ್ ರವರಿಗೆ ಹಾಗೂ ಅವರ ಕುಟುಂಬದವರಿಗೆ ಧನ್ಯವಾದ ಹೇಳಿ ಅವರ ಮನೆಗೆ ಬೆನ್ನು ಹಾಕಿ ಹೊರಡಲನುವಾದೆವು. ತೇಜಸ್ವಿಯವರ ಬಲಗೈ ಭಂಟ ಶ್ರೀರಾಮ್ ರವರು ನಮ್ಮನ್ನು ಬೀಳ್ಕೊಟ್ಟು ಆ ಮನೆಯ ಹಿಂದುಗಡೆಯ ’ಆ’ ಕೋಣೆಯಲ್ಲಿ ರಿಂಗಣಿಸುತ್ತಿದ್ದ ದೂರವಾಣಿ ಕರೆಯನ್ನು ಸ್ವೀಕರಿಸಲು ಆತುರಾತುರದಲ್ಲಿ ಆ ಕಡೆ ಧಾವಿಸಿದರು. ಪುಸ್ತಕ ಪ್ರಕಾಶನದ ಆಫೀಸಿನಂತಹ ಆ ಕೋಣೆಯಲ್ಲಿ ರಿಂಗಣಿಸುತ್ತಿದ್ದ ಆ ಫೋನಿನ ಮತ್ತೊಂದು ತುದಿಯಲ್ಲಿದ್ದ ಆ ಓದುಗ ತೇಜಸ್ವಿಯವರ ಅದ್ಯಾವ ಪುಸ್ತಕ ಬೇಕೆಂದು ಬೇಡಿಕೆ ಇಟ್ಟಿರಬಹುದೆಂದು ಯೋಚಿಸುತ್ತಾ ವ್ಯಾನು ಏರಿದೆ. ವ್ಯಾನು ಬೆಂಗಳೂರಿನ ಹಾದಿ ಹಿಡಿದು ಓಡುತ್ತಿತ್ತು.

(ಹುಡುಕಾಟ ಮುಂದುವರೆಯುವುದು…)

‍ಲೇಖಕರು avadhi

March 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Anonymous

    ಹೃದಯಸ್ಪರ್ಶಿ……….
    ಗೊತ್ತಿರುವ ವಿಚಾರಗಳೆ ಆದರೂ ಓದುವಾಗ ಒಂದು ಭಾವಲೋಕವೇ ಸೃಷ್ಟಿಯಾಗಿಬಿಡುತ್ತದೆ. ಬಹುಶಃ ತೇಜಸ್ವಿ ನಮ್ಮೊಳಗನ್ನು ಹೊಕ್ಕಿರುವ ರೀತಿಯೇ ವಿಶೇಷವಾದುದು
    ತೇಜಸ್ವಿ ತೀರಿಹೋದ ದಿನಾಂಕ ಏಪ್ರಿಲ್ ಐದು ಅಲ್ಲವೆ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: