“ಕೃಷಿ ವಿಜ್ಞಾನಿಗಳ ನೆನಪುಗಳಿಂದ…” (ಮುಂದುವರೆದ ಭಾಗ)
ಕೃಷಿ ವಿಜ್ಞಾನಿಗಳ ಮಾತು ಮುಂದುವರೆದಿತ್ತು. ಬರಬರುತ್ತಾ ಅವರಮಾತಿನ ಸ್ವಾರಸ್ಯ ಸಹ ಹೆಚ್ಚತೊಡಗಿತ್ತು. ಪ್ರೊಫೆಸರ್ ಗಣೇಶಯ್ಯನವರು ತೇಜಸ್ವಿಯವರೊಂದಿಗೆ ಟ್ರೆಕ್ಕಿಂಗ್ ಗೆ ಹೋದ ಸಂದರ್ಭದಲ್ಲಿ ಆದ ಅನುಭವವೊಂದನ್ನು ಹಂಚಿಕೊಳ್ಳತೊಡಗಿದರು, “ಒಂದ್ಸಾರ್ತಿ ಟ್ರೆಕ್ಕಿಂಗ್ ಗೆ ಹೋದಾಗ ನೈಟ್ ಅಲ್ಲೇ ಕಾಡ್ನಲ್ಲೇ ಕ್ಯಾಂಪ್ ಮಾಡಿದ್ವಿ. ನೈಟ್ ೯ಗಂಟೆ ಮೇಲಾಗಿತ್ತು.ಆಗ ತೇಜಸ್ವಿ ’ರೀ ಗೊತ್ತೇನ್ರಿ ಬ್ಯಾಂಬುನಲ್ಲಿ ಅನ್ನ ಮಾಡ್ಬಹುದು’ ಅಂದ್ರು.ನಾನು ’ಏನ್ ಸಾರ್ ಬ್ಯಾಂಬುನಲ್ಲಿ ಅನ್ನ ಅಂದ್ರೆ?ಅದೇ ಬರಗಾಲ ಬಂದಾಗ ಬ್ಯಾಂಬು ಅಕ್ಕಿ ತಗೊಂಡುಬಂದು ಅನ್ನ ಮಾಡ್ತಾರಲ್ಲ ಅದ?’ ಅಂತ ಕೇಳ್ದೆ. ’ಥುಥುಥುಥುಥು….ಅದಲ್ಲರಿ! ನಾವು ತಗೊಂಡು ಬಂದಿರೊ ಅಕ್ಕಿನ ಬ್ಯಾಂಬು ಒಳಗಡೆ ಹಾಕಿ ಅನ್ನ ಮಾಡ್ಕೊಬಹುದು’.’ಹೌದಾ? ಹಾಗಾದ್ರೆ ತೋರ್ಸಿ…’. ಹಾಗಂದಿದ್ದಷ್ಟೇ, ಅವರು ಆ ರಾತ್ರಿನಲ್ಲಿ ಎದ್ದುಹೋಗಿ ಒಂದು ಉದ್ದನೆಯ ಬ್ಯಾಂಬು ಕೊರಡು ಕಡ್ಕೊಂಡು ಬಂದು ಅದರ ಒಳಗಡೆ ನಾವು ತಗೊಂಡ್ ಹೋಗಿದ್ದ ಅಕ್ಕಿ ಹಾಕಿ, ಪಕ್ಕದಲ್ಲಿ ಹರಿತಿದ್ದ ನದಿ ನೀರನ್ನ ಅದರಲ್ಲಿ ತುಂಬ್ಸಿ ಎರಡೂ ಕಡೇ ಮುಚ್ಚಿ, ನಾವು ಕ್ಯಾಂಪ್ ಫೈರ್ ಹಾಕಿದ್ವಲ್ಲ ಅದರ ಒಳಗಡೆ ಹಾಕಿಬಿಟ್ರು. ನಾವು ‘ಏನಾಗುತ್ತೆ?ಹ್ಯಾಗಾಗುತ್ತೆ?’ ಅಂತ ಪಿಳಿಪಿಳಿ ಅಂತ ಕಣ್ಣುಬಿಟ್ಕೊಂಡು ನೋಡ್ತಾ ಕೂತಿದ್ವಿ.
ಒಂದು ಟೂ ಅವರ್ಸ್ ಆದ್ಮೇಲೆ ಬೆಂಕಿಯಿಂದ ಆ ಬ್ಯಾಂಬು ಈಚೆಗೆ ಎತ್ಕೊಂಡು ಒಂದು ಬಟ್ಟೆ ಹಾಸಿ ಅದರ ಮೇಲೆ ಬ್ಯಾಂಬುನಿಟ್ಕೊಂಡು ಸರಿಯಾಗಿ ಅದರ ಮಧ್ಯಕ್ಕೆ ಕೊಡಲಿ ತಗೊಂಡು ಪಠಾರ್ ಅಂತ ಹೊಡುದ್ರು.ಮಧ್ಯದಲ್ಲಿ ಅನ್ನ ಒಳ್ಳೆ ಸಾಯಿಲ್ ಕೋರ್ ತೆಗೆದ್ರೆ ಹ್ಯಾಗ್ ನೀಟಾಗಿ ಶೇಪ್ ಬರುತ್ತೊ ಹಾಗೆ ನೀಟಾಗಿತ್ತು. ತಿಂದ್ರೆ ಏನ್ ರುಚಿ ಇತ್ತು ಅಂತ ಅದು! ಬ್ಯಾಂಬು ಒಳಗಡೆ ತಿರುಳಿರುತ್ತಲ್ಲ ಆ ತಿರುಳಿನ ರುಚಿ ಆ ಅನ್ನಕ್ಕೆ ಬಂದಿರುತ್ತೆ.ಪ್ಲಸ್ ಸ್ಟೀಮಲ್ಲಿ ಬೆಂದಿರುತ್ತೆ ಅದು, ಲೈವ್ ಸ್ಟೀಮ್ ನಲ್ಲಿ.
ಹಾಗೆ ಅವರು ಒಂಥರ ಪ್ಯೂರ್ ನ್ಯಾಚುರಲಿಸ್ಟು.ಆಮೇಲೆ ಸಾಮಾನ್ಯವಾಗಿ ಸ್ನೇಹಿತ್ರೆಲ್ಲ ಸೇರಿದ್ರೆ ಹರಟೇಲಿ ಕಾಲ ಕಳೀತೀವಿ.ಬಟ್ ತೇಜಸ್ವಿ ಇದ್ದ ತಕ್ಷಣ ಆ ಹರಟೆ ಸ್ವರೂಪನೇ ಬೇರೆ ಆಗ್ಬಿಡೋದು.ಆಕ್ಚುಯಲಿ ನಾವು ಕಾಡುಹರಟೆ ಅಂತೀವಲ್ಲ ಅದಲ್ಲ ಕಾಡುಹರಟೆ ಅಂದ್ರೆ.ವಾಟ್ ತೇಜಸ್ವಿ ಯೂಸ್ಡ್ ಟು ಡು ದಟ್ ಈಸ್ ಕಾಡು ಹರಟೆ”. ತೇಜಸ್ವಿಯವರ ಕಾಡುಹರಟೆಯ ಸ್ವರೂಪದ ಬಗ್ಗೆ ಪ್ರೊಫೆಸರ್ ಬೆಳವಾಡಿರವರು ಮಾತು ಮುಂದುವರೆಸತೊಡಗಿದರು, “ನಾನು ಮೂಡಿಗೆರೆಗೆ ಪೋಸ್ಟಿಂಗ್ ಆಗಿ ಹೋದ್ ನಂತರದಲ್ಲಿ ಒಂದಿನ ತೇಜಸ್ವಿ ನಮ್ಮ ರಿಸರ್ಚ್ ಸೆಂಟರ್ ಗೆ ಬಂದು ಬೀಡಾ ಥರ ಇದ್ದ ಒಂದು ಎಲೆನ ತೋರ್ಸಿ ’ನೋಡ್ರಿ ಇದೇನೊ ಬೀಡಾ ಇದ್ದಂಗಿದೆ. ತೋಟದಲ್ಲಿ ಬಿದ್ದಿತ್ತು.ನಾನು ನಮ್ಮ ಆಳುಗಳಿಗೆಲ್ಲ ಬೈದೆ, ’ಬೀಡಾ ತಗೊಂಡು ಬಂದು ಸಿಕ್ಕಸಿಕ್ಕ ಕಡೆಯೆಲ್ಲ ಹಾಕ್ತಿರ’ ಅಂತ. ಅವರು ’ಇಲ್ಲ ನಾವಲ್ಲ’ ಅಂದ್ರು.ಇದೇನೊ ನನಗೆ ಗೊತ್ತಾಗ್ತಿಲ್ಲ. ನೀವು ನೋಡ್ರಿ’ ಅಂತ ನನ್ನ ಕೈಗೆ ಕೊಟ್ರು ಅದನ್ನ. ನಾನು ಬೀಡಾ ಆಕಾರದಲ್ಲಿ ಮಡಚಿಕೊಂಡಿದ್ದ ಆ ಎಲೆನ ಬಿಚ್ಚಿ ನೋಡ್ದೆ.ಅದರೊಳಗೊಂದು ಸಣ್ಣದೊಂದು ಹುಳ ಇತ್ತು.ತಕ್ಷಣ ನಾನು ಇದರಲ್ಲೇನೊ ಇಂಟರೆಸ್ಟಿಂಗ್ ಇದೆ ಅಂತ ಹೇಳಿ ಅದನ್ನ ನಮ್ಮ ಲ್ಯಾಬ್ ನಲ್ಲಿಟ್ಕೊಂಡು ಅಬ್ಸರ್ವ್ ಮಾಡ್ದೆ.ಅದರೊಳಗಿಂದ ಒಂದು ಬ್ಯೂಟಿಫುಲ್ ಆಗಿರೊದೊಂದು ಸಣ್ಣದೊಂದು ದುಂಬಿ ಹೊರಗ್ ಬಂತು.
ಐ ವಾಸ್ ಸರ್ಪ್ರೈಸ್ಡ್! ದೆನ್ ಐ ವಾಸ್ ಏಬಲ್ ಟು ಐಡೆಂಟಿಫೈ ಇಟ್ ಆಲ್ಸೊ.ಅದು ಯಾವ ಗುಂಪಿಗೆ ಸೇರುತ್ತೆ ಅಂತ. ಆಮೇಲೆ ಹೇಳ್ದೆ, ’ಇದು ಈ ಥರ ಮಾಡುತ್ತೆ ಸಾರ್.ತಾಯಿ ದುಂಬಿ ಎಲೆನ ಬೀಡಾ ಥರ ರೌಂಡಾಗಿ ಸುರುಳಿ ಸುತ್ತಿ ಅದರೊಳಗೊಂದು ಮೊಟ್ಟೆ ಇಡುತ್ತೆ.ಸ್ವಲ್ಪ ದಿನದಲ್ಲಿ ಆ ಎಲೆ ಕೆಳಗಡೆ ನೆಲಕ್ಕೆ ಬಿದ್ದು ಕೊಳೆಯೋಕೆ ಶುರುವಾಗುತ್ತಲ್ಲ ಆಗ ಆ ಮೊಟ್ಟೆ ಮರಿ ಆಗಿ ಆ ಎಲೆನೇ ತಿಂದುಕೊಂಡು ಹೊರಗೆ ಬರುತ್ತೆ.ಇಟ್ ಈಸ್ ಎ ವೇ ಆಫ್ ಇಟ್ಸ್ ಸರ್ವೈವಲ್’ ಅಂತ ಹೇಳ್ದೆ. ’ಹೌದ! ಹಾಗಾದ್ರೆ ನೋಡ್ಬೇಕಲ್ರಿ ಅದನ್ನ’ ಅಂದ್ರು.
ನಮ್ಮ ಅದೃಷ್ಟುಕ್ಕೆ ನಮ್ಮ ಲ್ಯಾಬ್ ಎದುರುಗಡೆ ಇದ್ದ ಒಂದು ಸಣ್ಣದು ರೋಸ್ ವುಡ್ ಗಿಡದಲ್ಲಿ ಈ ರೀತಿ ದುಂಬಿ ಮೊಟ್ಟೆ ಇಡೋದು ನಮ್ಮ ಕಣ್ಣಿಗೆ ಬಿತ್ತು.ತಕ್ಷಣ ಫೋನ್ ಮಾಡ್ದೆ ತೇಜಸ್ವಿಯವ್ರಿಗೆ.ಬಂದ್ರು.ಬಂದು ನಾನು ಅವರು ಇಡೀ ದಿನ ಅದರ ಮುಂದೆ ಕೂತ್ಕೊಂಡು ಅದು ಯಾವ್ ಥರ ಎಲೆನ ಕಟ್ ಮಾಡುತ್ತೆ?ಯಾವ್ ಥರ ಸುರುಳಿ ಸುತ್ತುತ್ತೆ?ಎಷ್ಟು ದಿನ ಆದ್ಮೇಲೆ ಅದು ನೆಲಕ್ಕೆ ಬೀಳುತ್ತೆ?ಇದನ್ನೆಲ್ಲಾ ನೋಡಿ ಸ್ಟಡಿ ಮಾಡಿದ್ವಿ.ಆಮೇಲೆ ಅವರು ಅದರ ಬಗ್ಗೇನೆ ಒಂದು ಕಥೆ ಬರೆದ್ರು.(ಏರೋಪ್ಲೇನ್ ಚಿಟ್ಟೆ ಮತ್ತಿತರ ಕಥೆಗಳು).
ಅದಾದ ಮೇಲೆ ಸುಮಾರು ಗಿಡಗಳಲ್ಲಿ ಈ ಬೀಡಾ ಮೇಕರ್ ಕೀಟ ನೋಡುದ್ವಿ ನಾವು. ಸೊ ಯಾಕೆ ಇದನ್ನ ಹೇಳ್ದೆ ಅಂತಂದ್ರೆ, ಅವರು ಮೀನು, ಗಿಡ, ಮರ, ಪ್ರಾಣಿ ಪಕ್ಷಿಗಳಷ್ಟೇ ಅಲ್ಲ ಸಣ್ಣ ಸಣ್ಣ ಕೀಟಗಳನ್ನು ತುಂಬಾ ಆಸಕ್ತಿಯಿಂದ ಗಮನಿಸ್ತಾ ಇದ್ರಲ್ಲ, ಸೊ ಅವರೊಬ್ಬ ಟ್ರೂ ಸೈಂಟಿಸ್ಟ್ ಅಂತ ನನಗನ್ಸುತ್ತೆ”.
ಬೆಳವಾಡಿರವರ ಕಡೆಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸುವವರಂತೆ ಗಣೇಶಯ್ಯನವರು “ಅಲ್ಲಲ್ಲಲ್ಲ…ವಿಜ್ಞಾನಿ ಅಲ್ಲ ಅವರು.ಯಾಕೆ ಅಂತ ಹೇಳ್ತೀನಿ.ವಿಜ್ಞಾನಿಗಳಲ್ಲಿ ಬಾರ್ಡರ್ಸ್ ಇದೆ.ಎಂಟಮಾಲಜಿಸ್ಟು, ಪೆಥಾಲಜಿಸ್ಟು, ಬಾಟ್ನಿಸ್ಟು, ಅದು ಇದು ಅಂತ. ಬಟ್ ಅವರಿಗೆ ಈ ಥರದ ಯಾವ್ ಬಾರ್ಡರ್ಸು ಇರ್ಲಿಲ್ಲ. ಹಿ ವಾಸ್ ಮೋರ್ ದ್ಯಾನ್ ಎ ವಿಜ್ಞಾನಿ.ಏ ಟ್ರೂ ನ್ಯಾಚುರಲಿಸ್ಟ್ ಅನ್ನಬಹುದು.ಅವರ ಮಾಯಾಲೋಕ ಓದ್ತಾ ಇದ್ರಂತು ಆ ಲೋಕದೊಳಗೆ ಕಳೆದೋಗ್ ಬಿಡ್ತೀವಿ ನಾವು.ನಾನು ಒಂದ್ಸಲ ಎಲ್ಲೊ ನೇಪಾಳಕ್ಕೆ ಹೋಗ್ಬೇಕಾದ ಸಂದರ್ಭ ಬಂತು.ಫ್ಲೈಟ್ ನಲ್ಲಿ ಹೋಗ್ತಿದ್ದಾಗ ’ಮಾಯಲೋಕ’ ಓದೋಕೆ ತಗೊಂಡೆ.ಅದನ್ನ ಓದ್ತಾ ಓದ್ತಾ ಆ ಲೋಕಕ್ಕೆ ಎಂಟ್ರಿ ಆಗ್ಬಿಟ್ಟೆ ನಾನು.ನನ್ನನ್ನ ನಾನೇ ಮರೆತೊಗ್ಬಿಟ್ಟೆ.ಲುಕ್ ಅಟ್ ಹಿಸ್ ರೇಂಜ್ ಆಫ್ ಗ್ರಾಸ್ಪಿಂಗ್ ಅಂಡ್ ರೈಟಿಂಗ್. ಬಿಯಿಂಗ್ an ಆರ್ಟ್ಸ್ ಗ್ರಾಜುಯೇಟ್ ಸೈನ್ಸ್ ಬಗ್ಗೆ, ನೇಚರ್ ಬಗ್ಗೆ ಅಷ್ಟು ಕುತೂಹಲ ಇತ್ತಲ್ಲ. ಐ ಬಿಕಮ್ ಸ್ಪೀಚ್ ಲೆಸ್ ವೆನ್ ಐ ರಿಮೆಂಬರ್ ದಟ್ ಆಸ್ಪೆಕ್ಟ್!”
ನಂತರದ ಮಾತು ಬೆಳವಾಡಿಯವರದ್ದಾಗಿತ್ತು, “ಅವ್ರುದ್ದು ಒಂದು ರೊಟೀನ್ ಇತ್ತು. ಡೈಲಿ ಸಾಯಂಕಾಲ ಷಟ್ಲು ಅಥವ ಟೇಬಲ್ ಟೆನ್ನಿಸ್ ಆಡೋದು.ನಾನು, ಚಂದ್ರು, ಮತ್ತೆ ಜಗನ್ನಾಥ್ ಅಂತ ಒಬ್ರಿದ್ರು, ಅವರು ಈಗಿಲ್ಲ ನಾವು ಮೂರು ಜನಾನು ಅವರ ತೋಟಕ್ಕೆ ಡೈಲಿ ಈವೆನಿಂಗ್ ಹೋಗಿ ಅವರ ಜೊತೆ ಆಟ ಆಡ್ಕೊಂಡು ಟೈಮ್ ಪಾಸ್ ಮಾಡ್ತಿದ್ವಿ.ಆಗ ೧೯೯೪ನಲ್ಲಿ ಪ್ರದೀಪ್ ಕೆಂಜಿಗೆ ಅಮೆರಿಕಾಗೆ ಹೈಯರ್ ಸ್ಟಡೀಸ್ ಗೆ ಹೋಗಿದ್ರಲ್ಲ ಅಲ್ಲಿಂದ ಬರೊವಾಗ ಒಂದು ಕಂಪ್ಯುಟರ್ ತಗೊಂಡ್ ಬಂದು ಗಿಫ್ಟು ಅಂತ ತೇಜಸ್ವಿಗೆ ಕೊಟ್ಟು ಹೋದ್ರು.ಅವತ್ತಿಂದ ನಮ್ಮ ಆಟಗಳೆಲ್ಲ ನಿಂತೋಯ್ತು.ಟೇಬಲ್ ಟೆನ್ನಿಸ್ ಟೇಬಲ್ಲು ಕಂಪ್ಯೂಟ್ರು ಟೇಬಲ್ ಆಯ್ತು.ಸಂಪೂರ್ಣವಾಗಿ ಅದರಲ್ಲೇ ಮುಳುಗಿಹೋದ್ರವ್ರು.
ಆಮೇಲೆ ಕಂಪ್ಯೂಟ್ರು ಹಾರ್ಡ್ವೇರ್ ನ ಅವರು ಏಷ್ಟು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ರು ಅವರು ಅಂದ್ರೆ ಅದರ ಬಗ್ಗೆ ಒಂದು ಬುಖ್ ಬರೆಯೋಷ್ಟು ನಾಲೆಡ್ಜ್ ಅವರು ಸ್ವತಃ ಗಳಿಸಿಕೊಂಡಿದ್ರು.ಹೀಗಿರ್ಬೇಕಾದ್ರೆ ಒಂದಿನ ಕಂಪ್ಯೂಟರ್ನ ಒಂದು ಹಾರ್ಡ್ ಡಿಸ್ಕು ಸರೀಗೆ ಕೆಲ್ಸ ಮಾಡ್ತಿಲ್ಲ ಅಂತೇಳಿ ನನಗೆ ಫೋನ್ ಮಾಡಿದ್ರು, ’ಬೆಳವಾಡಿ ಬನ್ರಿ ಈ ಥರ…’ ಅಂದ್ರು.ನಾನು ’ನನಗೆ ಕಂಪ್ಯೂಟ್ರು ಬಗ್ಗೆ ಎಲ್ಲ ಏನು ಗೊತ್ತಿಲ್ವಲ್ಲ ಸಾರ್’ ಅಂದೆ.’ನಾನು ನಿಮ್ಮನ್ನ ಕರೀತಾ ಇರೋದು ನೀವೇನೊ ಇದ್ರಲ್ಲಿ ಎಕ್ಸ್ಪರ್ಟು, ಜೀನಿಯಸ್ಸು ಅಂತಲ್ಲ. ಟು ಫೂಲ್ಸ್ ಆರ್ ಬೆಟರ್ ದ್ಯಾನ್ ಒನ್ ಅಂತ. ಬನ್ನಿ ನೋಡೋಣ ಏನ್ ಮಾಡ್ಬೇಕು ಅಂತ’ ಅಂದ್ರು.
ಬೆಳವಾಡಿರವರ ಈ ಮಾತಿಗೆ ಆ ಗುಂಪಿನಲ್ಲಿ ಜೋರು ನಗು.”ಸರಿ ಅಂತ ಹೋದೆ.ಹೋಗಿ ಆ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಬಿಚ್ಚಿ ನೋಡಿದ್ವಿ. ಹ್ಯಾಗಿದ್ರು ಕೆಟ್ಟೋಗಿದ್ಯಲ್ಲ. ಹಾಳಾದ್ರು ಪರ್ವಾಗಿಲ್ಲ ಅಂತ. ಬಟ್ ಅವತ್ತು ಏನೊ ಎಕ್ಸ್ಪೆರಿಮೆಂಟ್ ಮಾಡಿ ಆ ಹಾರ್ಡ್ ಡಿಸ್ಕ್ ನ ರಿಪೇರಿ ಮಾಡ್ಬಿಟ್ವಿ! ಅದು ಸರೀಗೆ ಕೆಲಸ ಮಾಡೋಕೆ ಶುರು ಮಾಡ್ಬಿಡ್ತು” ಗುಂಪಿನಲ್ಲಿ ಮತ್ತೆ ನಗು ಮುಂದುವರೆಯಿತು.ನಂತರ ಗಣೇಶಯ್ಯನವರು ತೇಜಸ್ವಿಯವರ ಅಬ್ಸರ್ವೇಶನ್ ಕುರಿತು ಮಾತನಾಡತೊಡಗಿದರು.
’ಒನ್ ಥಿಂಗ್ ಐ ಹ್ಯಾವ್ ಅಬ್ಸರ್ವ್ಡ್.ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಕಾಣ್ದೇ ಇರೋದೆಲ್ಲ ಅವ್ರಿಗೆ ಕಾಣಿಸ್ತಾ ಇತ್ತು.ಟ್ರೆಕ್ಕಿಂಗಿಗೆ ಹೋಗ್ತಿರ್ಬೇಕಾದ್ರೆ ಒಂದ್ಸಲ ರಸ್ತೆನಲ್ಲಿ ಬಿದ್ದಿದ್ದ ಒಂದು ಕಬ್ಬಿಣದ ಪೀಸ್ ನ ನಾನು ಕಾಲಲ್ಲಿ ಒದ್ದೆ.ಅವರು ತಕ್ಷಣ ’ರೀ ರೀ ತಾಳ್ರಿ’ ಅಂತೇಳಿ ಅದನ್ನ ತಗೊಂಡು ನೋಡಿ ’ಇದು ಕಾರಿನ ನಟ್ಟು ಅಲ್ವೇನ್ರಿ’ ಅಂದ್ರು.ನಾನು ’ಇರಬಹ್ದು ಸಾರ್’ ಅಂದೆ.’ಅಲ್ಲ ಈ ನಟ್ ಬಿದ್ದೋದ್ರು ಕಾರು ಮುಂದಕ್ಕೆ ಹೋಗಿದೆ ಅಂದ್ರೆ ಏನರ್ಥ?ಈ ನನ್ಮಕ್ಳು ಕಾರಿಗೆ ಸುಮ್ನೆ ಎಕ್ಸ್ಟ್ರ ನಟ್ಟು ಬೋಲ್ಟು ಹಾಕಿ ನಮ್ಮತ್ರ ಕಾಸ್ ಕಿತ್ಕೋತಾರ?’ ಅಂತ ಕೇಳಿದ್ರು.ಅದಕ್ಕೆ ಚಂದ್ರು ಇದ್ದವ್ನು ’ಇಲ್ಲ ಇಲ್ಲ ಅದು ಡಬಲ್ ಸ್ಟ್ರೆಂತ್ ಇರ್ಲಿ ಅಂತ ಕೊಟ್ಟಿರ್ತಾರೆ’ ಅಂದ. ’ಥುಥುಥು ಏನ್ರಿ ಅದು ಡಬಲ್ ಸ್ಟ್ರೆಂತು…?’ ಅಂತ ಅದಕ್ಕಷ್ಟು ಬೈದ್ರು.
ಆಮೇಲೆ ಒಂದು ಡಿಸ್ಕಷನ್ ಶುರು ಆಯ್ತು, ’ನಮ್ಮ ಕಾರುಗಳಲ್ಲಿ ಎಷ್ಟು ವೇಸ್ಟ್ ಮೆಟಿರೀಯಲ್ಸ್ ಇರುತ್ತೆ?ಎಷ್ಟು ಸೇಫ್ಟಿ ಇರುತ್ತೆ?’ ಅಂತ. ಸೊ ಹಾಗೆ ಅವರ ಜೊತೆ ಇದ್ರೆ ಕಾಡುಹರಟೆಗೆ ಕೂಡ ಒಂದು ಅರ್ಥ ಬಂದುಬಿಟ್ಟಿರೋದು.ಮತ್ತೊಮ್ಮೆ ನಾನು ನಮ್ಮ ಮನೆಯವ್ರು ಅವರ ಮನೆಗೆ ಹೋಗಿದ್ವಿ.ಆಗ ನಾನೊಂದು ಹೊಸ ಕಾರ್ ತಗೊಂಡಿದ್ದೆ.ಅದರಲ್ಲೇ ಹೋಗಿದ್ವಿ.ಹೋಗಿ ಅವರ ಮನೆ ತೋಟದೊಳಗಡೆ ಡೌನ್ ನಲ್ಲಿದ್ಯಲ್ಲ, ಆ ಡೌನ್ ಇಳಿತಿರಬೇಕಾದ್ರೆ ಅವರು ಹೊರಗಡೆ ಬಾಗಿಲಿನ ಹತ್ರ ನಿಂತ್ಕೊಂಡು ಜೋರಾಗಿ ’ರೀ ರೀ ಆ ಕಾರನ್ನ ಕೆಳಗಡೆಗೆ ತರಬೇಡ್ರಿ.ಮತ್ತೆ ಮೇಲಕ್ಕೆ ಹತ್ತಲ್ಲ ಅದು!’ ಅಂತ ಕಿರ್ಚೊಂಡು ಹೇಳಿದ್ರು.ನನಗೆ ಆಶ್ಚರ್ಯ ಆಗಿದ್ದು ಹೊಸ ಕಾರದು.ಆ ಕಾರು ವಾಪಸ್ ದಿಬ್ಬ ಹತ್ತಲ್ಲ ಅಂತ ಅವರಿಗೆ ಗೊತ್ತು ಅಂದ್ರೆ ಅವ್ರಿಗೆ ಆ ಕಾರಿನ ಪವರ್ರು, ಅದರ ಡಿಸೈನು, ಇಂಜಿನ್ ಕ್ಯಪಾಸಿಟಿ ಇದೆಲ್ಲ ಗೊತ್ತಿರ್ಬೇಕಲ್ಲ ಅನ್ನೋದು. ನಂತರ ಗೊತ್ತಾಯ್ತು ಆ ಕಾರಿನ ಬಗ್ಗೆ ಅವ್ರಿಗೆ ಸಂಪೂರ್ಣವಾದ ಮಾಹಿತಿ ಇತ್ತು ಅಂತ. ಆ ಕಾರಿನ ಹೆಸರು ಬೇಡ. ಅದರ ಮ್ಯಾನುಫ್ಯಾಕ್ಚರಿಂಗ್ ನಿಂತೋಗಿದೆ ಇವಾಗ. ಆಮೇಲ್ ಪಾಪ ಆ ಕಂಪನಿಗೆ ಅವಮಾನ ಆಗುತ್ತೆ!” ಆ ನಾಲ್ಕೂ ಜನ ಗೆಳೆಯರು ಮತ್ತೆ ನಗಲಾರಂಭಿಸಿದರು.
ತೇಜಸ್ವಿಯವರ ಆಟೋಮೊಬೈಲ್ ಪರಿಣಿತಿಗೆ ಸಂಬಂಧಿಸಿದ ಮತ್ತೊಂದು ಘಟನೆಯನ್ನು ಚಂದ್ರುರವರು ನೆನಪಿಸಿಕೊಳ್ಳಲಾರಂಭಿಸಿದರು, “ನಾವು ಅಂಡಮಾನ್ ಗೆ ಹೋದಾಗ ಲೋಕಲ್ ನಲ್ಲಿ ಓಡಾಡೋಕೆ ಅಂತ ಒಬ್ರುದ್ದು ಲ್ಯಾಂಬ್ರೆಟ್ಟ ಸ್ಕೂಟ್ರು ಇಸ್ಕೊಂಡಿದ್ವಿ. ಒಂದು ಐದಾರು ಕಿಲೊಮೀಟರ್ ನಾನು ತೇಜಸ್ವಿ ಅದರ ಮೇಲೆ ಹೋಗೊಷ್ಟ್ರಲ್ಲೇ ಅದು ನಿಂತೋಗ್ಬಿಡ್ತು.ಇಳಿದು ಯಾಕ್ ನಿಂತೋಯ್ತು?ಅಂತ ಕೂಲಂಕುಶವಾಗಿ ಚೆಕ್ ಮಾಡಿ ಹ್ಯಾಗೊ ಅದನ್ನ ಮತ್ತೆ ಸ್ಟಾರ್ಟ್ ಮಾಡ್ಕೊಂಡು ಹೋದ್ವಿ.ಮಾರನೇ ದಿನಾನೂ ಅದು ಹಾಗೆ ಕೈ ಕೊಡ್ತು.ಮತ್ತೆ ಅದೇ ಥರ ಅದನ್ನ ಸ್ಟಾರ್ಟ್ ಮಾಡ್ಕೊಂಡು ಹೋದ್ವಿ. ಕೆಲ್ಸ ಎಲ್ಲ ಮುಗಿದ್ಮೇಲೆ ಆ ಸ್ಕೂಟ್ರನ್ನ ವಾಪಸ್ ಕೊಟ್ಟು ಬರ್ತಾ ತೇಜಸ್ವಿ ಅಂದ್ರು ’ಸ್ವಲ್ಪ ಟೈಮ್ ಇದ್ದಿದ್ರೆ ಪಾಪ ಅದನ್ನ ಫುಲ್ ಬಿಚ್ಚಿ ರಿಪೇರಿ ಮಾಡಿ ಹೊಸ ಸ್ಕೂಟ್ರು ಥರ ರೆಡಿ ಮಾಡ್ಕೊಟ್ಟು ಬರಬೋದಿತ್ತು!!!’ ಅಂತ.
ಗೆಳೆಯರ ಗುಂಪಿನಲ್ಲಿ ನಗೆ ಸಮಾರಾಧನೆ ಮುಂದುವರೆದಿತ್ತು. ನಂತರ ಗಣೇಶಯ್ಯನವರು ಹಳೆಯ ಘಟನೆಯೊಂದನ್ನು ನೆನಪಿಸಿಕೊಳ್ಳತೊಡಗಿದರು, “ಕುಪ್ಪಳ್ಳಿನಲ್ಲಿ ಒಂದು ಸಮಾರಂಭ ಇತ್ತು, ಕುವೆಂಪು ಅವ್ರದ್ದು ಶತಮಾನೋತ್ಸವ.ಇವ್ರನ್ನ ಕರೆದಿದ್ರು.ಕರೆದು ನೀವೇ ಮುಖ್ಯ ಅತಿಥಿ ಆಗ್ಬೇಕು ಅಂತ ಕೇಳಿದ್ರು.ಸುತಾರಂ ಹೋಗ್ಲಿಲ್ಲ ಮೇಲಕ್ಕೆ.ಬಾಗಲಲ್ಲೇ ಕೂತ್ಕೊಂಡು ಇಡೀ ಪ್ರೊಗ್ರಾಂ ನೋಡಿದ್ರು.ಅದೂ ನೆಲದ ಮೇಲೆ ಕೂತ್ಕೊಂಡು.ನಾವ್ಯಾದ್ರೂ ಆಗಿದ್ರೆ ನಮ್ಮಪ್ಪ ಸಂಪಾದಿಸಿರೊ ಆಸ್ತಿಪಾಸ್ತಿ, ಹೆಸ್ರನ್ನ ಬಳಸ್ಕೊಂಡು, ಕಾಲ್ ಮೇಲೆ ಕಾಲಾಕ್ಕೊಂಡು, ಅಲ್ಲಾಡಿಸ್ಕೊಂಡು ಇರ್ತಿದ್ವಿ”.
ತೇಜಸ್ವಿ ಸರಳತೆ ಕುರಿತಂತೆ ಗಣೇಶಯ್ಯನವರು ಹೇಳಿದ ಈ ಮಾತಿನ ನಂತರ ಮಾತು ಹೊರಳಿದ್ದು ಅಂಡಮಾನ್ ಪ್ರವಾಸದ ಬಗ್ಗೆ.ಮಲ್ಲಿಕ್ ರವರು ಆ ಕುರಿತ ಕೆಲ ಘಟನೆಗಳನ್ನು ಹಂಚಿಕೊಳ್ಳತೊಡಗಿದರು, “ಅಂಡಮಾನ್ ಹೋಗ್ತಿರ್ಬೇಕಾದ್ರೆ ಹಡಗಿನಲ್ಲಿ ನಮಗೊಂದು ಅಪರೂಪದ ದೃಶ್ಯ ಕಾಣುಸ್ತು. ’ಟೈಫೂನ್’ ಅಂತ. ಟೈಫೂನ್ ಅಂದ್ರೆ ಸಮುದ್ರದಲ್ಲಿ ಇದ್ದಕ್ಕಿದ್ದಂಗೆ ಸುಂಟರಗಾಳಿ ಎದ್ದುಬಿಡುತ್ತೆ.ಆಗ ಸಮುದ್ರದಲ್ಲಿ ಒಂದು ಕಡೆ ಒಳ್ಳೆ ಸೀಮೆಣ್ಣೆ ಪನಾಲ್ ಶೇಪ್ ನಲ್ಲಿ ಸಮುದ್ರದ ನೀರು ನೂರಾರು ಅಡಿ ಮೇಲಕ್ಕೆ ಎದ್ದುಬಿಡುತ್ತೆ.ಆಗ ಆ ನೀರಿನ ಜೊತೆಗೆ ಸಮುದ್ರದಲ್ಲಿರೊ ಮೀನುಗಳು ಇತ್ಯಾದಿ ಎಲ್ಲಾ ಮೇಲಕ್ಕೆ ಹಾರ್ತಿರ್ತಾವೆ.ಅಂತ ಒಂದು ರೋಮಾಂಚನಕಾರಿಯಾದ ದೃಶ್ಯ ನಮಗೆ ಆ ಜರ್ನಿನಲ್ಲಿ ಕಾಣಿಸ್ತು”.
ಚಂದ್ರು ನಂತರ ಮುಂದುವರೆಸಿದರು “ಬೇರೆಬೇರೆಯವರು ಹಲವಾರು ಟ್ರಾವೆಲಾಗ್ಸ್ ಬರೆದಿದಾರೆ. ಆದ್ರೆ ಅವೆಲ್ಲ ಬರೀ ಮ್ಯಾಟರ್ ಆಫ್ ಫ್ಯಾಕ್ಟ್, ಮಾಹಿತಿ ಥರ ಆಗ್ತವೆ ಹೊರತು ಅದ್ರಲ್ಲಿ ಒಂದು ಜೀವಂತಿಕೆ ಇರೋದು ಅಪರೂಪ. ಆದ್ರೆ ’ಅಲೆಮಾರಿಯ ಅಂಡಮಾನ್’ ಓದ್ತಾ ಇದ್ರೆ ಆ ಮಾಹಿತಿಯ ಜೊತೆಗೆ ಒಂದು ಕಥನ ಶೈಲಿ, ಜೀವಂತಿಕೆ, ಜೀವನಾನುಭವ ಕಾಣ್ಸುತ್ತೆ. ಅದು ಅವರ ಸ್ಪೆಶಾಲಿಟಿ.ಅಲ್ಲಿ ನಡೆದ ಕೆಲವು ಘಟನೆಗಳನ್ನ ಹೇಳ್ತೀನಿ.ಅವೆಲ್ಲ ಆ ಪುಸ್ತಕದಲ್ಲಿದಾವೆ.
ವಂಡೂರಿನಲ್ಲಿ ಫಿಶಿಂಗ್ ಮಾಡೋಕೆ ಅಂತ ಕೂತಾಗ ಗಾಳ ಹಾಕಿದ ತಕ್ಷಣ ಮೀನು ಬಂದು ಗಾಳ ಕಚ್ಕೊಂಡು ತುಂಬಾ ಸ್ಪೀಡಾಗಿ ದೂರಕ್ಕೆ ಎಳ್ಕೊಂಡ್ ಹೋಗ್ಬಿಡೋದು. ಆ ರಭಸಕ್ಕೆ ದಾರ ಕಟ್ಟಾಗಿ ವಾಪಸ್ ಬಂದು ಆ ದಾರ ನಮ್ಮ ಮುಖದ ಮೇಲೆ ಬೀಳೋದು.ಆದ್ರೆ ಆ ಮೀನ್ಯಾವ್ದು ಅಂತ ನಮಗೆ ನೋಡೋಕೆ ಆಗ್ಲೇ ಇಲ್ಲ. ಮತ್ತೊಂದ್ಸಾರಿ ನನ್ನ ಗಾಳಕ್ಕೆ ಒಂದು ಮೀನು ಸಿಕ್ತು.ಅದನ್ನ ಎಳೆದು ದಡದ ಮೇಲೆ ಹಾಕ್ಕೊಂಡೆ.ಅಲ್ಲಿವರೆಗೂ ಸತ್ತಂತಿದ್ದ ಆ ಮೀನು ನಾನು ಇನ್ನೇನು ಅದಕ್ಕೆ ಕೈಹಾಕ್ಬೇಕು ಅನ್ನೊ ಅಷ್ಟರಲ್ಲಿ ಜೋರಾಗಿ ಒದ್ದಾಡ್ಕೊಂಡು ಹೋಗಿ ಸಮುದ್ರಕ್ಕೆ ಬಿತ್ತು.ಆಗ ಅದರ ಹಲ್ಲು ಗಮನಿಸಿದ್ವಿ.ತುಂಬಾ ಸುಂದರವಾಗಿ, ಒಂದರ ಪಕ್ಕ ಒಂದು ಜೋಡಿಸಿದ ಹಾಗೆ ನೀಟಾಗಿತ್ತು. ಆದ್ರೂ ಅದನ್ನ ನೋಡೋಕಾದ್ರೂ ಸಿಕ್ತಲ್ಲ ಅಂತ ಸಮಾಧಾನ ಮಾಡ್ಕೊಂಡ್ವಿ”
ಹೀಗೆ ವಿಜ್ಞಾನಿ ಮಿತ್ರರ ತೇಜಸ್ವಿ ನೆನಪುಗಳು ನಿರಂತರವಾಗಿ ಹರಿದುಬಂದವು.ಸಮಯ ಸಂಜೆ ೬ ಗಂಟೆ ಆಗಿತ್ತೇನೊ.ಆಗ ಇದ್ದಕ್ಕಿದ್ದಂತೆ ಮಳೆ ಸಣ್ಣಗೆ ಬೀಳಲಾರಂಭಿಸಿತು. ತೇಜಸ್ವಿಯವರ ವಿಜ್ಞಾನಿ ಮಿತ್ರರಿಂದ ನಮ್ಮ ಸಾಕ್ಷ್ಯಚಿತ್ರಕ್ಕೆ ಸಾಕಷ್ಟು ಮಾಹಿತಿ, ವಿಷಯಗಳು ಸಿಕ್ಕಿದ್ದರಿಂದ ಅಲ್ಲಿಗೆ ಚಿತ್ರೀಕರಣ ನಿಲ್ಲಿಸಿ ಅವರೆಲ್ಲರಿಗೂ ಧನ್ಯವಾದ ಹೇಳಿ ಜಿಕೆವಿಕೆ ಕ್ಯಾಂಪಸ್ ನಿಂದ ಹೊರಟೆವು. ಸಣ್ಣಗೆ ಶುರುವಾದ ಮಳೆ ಕ್ರಮೇಣ ಚುರುಕಾಗತೊಡಗಿತ್ತು.
(ಹುಡುಕಾಟ ಮುಂದುವರೆಯುವುದು…)
ತೇಜಸ್ವಿ ಒಬ್ಬ ಮಾನವೀಯ ಅನುಕಂಪವುಳ್ಳ ಮಾನವ.
One of the best part in the series……..
nice