ಕಾಕತಾಳೀಯ ಎನ್ನುವುದು ನಿಜವೇಆದರೂ ಈ ಕ್ಷಣದಲ್ಲಿ ನನಗಾಗುತ್ತಿರುವ ಪರಮಾಶ್ಚರ್ಯವನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟವಾಗುತ್ತಿದೆ. ಕಾರಣ ಈ ಲೇಖನವನ್ನು ಬರೆಯಲು ಕುಳಿತೊಡನೆ ಹೊರಗೆ ಧಾರಾಕಾರ ಮಳೆ, ಅದೂ ಅಲಿಕಲ್ಲು ಸಮೇತ! ‘ಹತ್ತು ವರ್ಷದ ಮೇಲಾಗಿತ್ತೇನೊ ಇಂತ ಆಲಿಕಲ್ಲು ಮಳೆ ನೋಡಿ’, ‘ಹೌದು ನಾನು ಚಿಕ್ಕವನಿದ್ದಾಗ ಆಲಿಕಲ್ಲು ಮಳೆ ನೋಡಿದ ನೆನಪು, ಇತ್ತೀಚೆಗೆ ಇಂತ ಮಳೆ ನೋಡೇ ಇರಲಿಲ್ಲ’ಎಂದು ಹೊರಗಡೆ ಮಳೆಯಿಂದ ರಕ್ಷಣೆ ಪಡೆಯಲು ಛಾವಣಿ ಕೆಳಗೆ ನಿಂತ ಗುಂಪೊಂದು ಮಾತನಾಡುತ್ತಿರುವ ಸದ್ದು ಕಿವಿಗಳ ಮೇಲೆ ಬೀಳುತ್ತಿದೆ. ನನ್ನ ಆಶ್ಚರ್ಯಕ್ಕೆ ಕಾರಣವಾಗಿರುವುದೂ ಇದೇ ಈ ಮಳೆಯೇ. ಏಕೆಂದರೆ ಇಡೀ ಸಾಕ್ಷ್ಯಚಿತ್ರ ರೂಪಿಸುವ ಹಾದಿಯಲ್ಲಿ ಅವಿಭಾಜ್ಯ ಅಂಗವೆಂಬಂತೆ ಮಳೆ ಜೊತೆಜೊತೆಗೆ ಸಾಗಿ ಬಂದಿದೆ. ಪೂರ್ಣಚಂದ್ರ ತೇಜಸ್ವಿ ಎಂಬ ಮಾಯಕಾರನ ಬಗ್ಗೆ ಸಾಕ್ಷ್ಯಚಿತ್ರ ಮಾಡಬೇಕು ಎಂದು ಮನಸ್ಸಿನಲ್ಲಿ ಹೊಳೆದ ಕ್ಷಣದಿಂದ ಮೊದಲುಗೊಂಡು ಸಾಕ್ಷ್ಯಚಿತ್ರ ಪೂರ್ಣವಾಗಿ ಅದನ್ನು ಮೊಟ್ಟಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಪ್ರದರ್ಶಿಸಿದ ಘಳಿಗೆಯವರೆಗಿನ ಪಯಣದ ಪ್ರಮುಖ ಘಟ್ಟಗಳಲ್ಲಿ ಮಳೆ ಸಹಪಯಣಿಗನಾಗಿ ಸಾಗಿ ಬಂದು ಈ ಪಯಣವನ್ನು ಸಾಕ್ಷೀಕರಿಸಿದೆ. ಆ ಅನುಭವಗಳನ್ನೆಲ್ಲಾ ಬರೆಯೋಣವೆಂದುಕೊಂಡು ಮನಸ್ಸು ಮಾಡಿ ಕುಳಿತಿದ್ದೇನೆ, ಈಗಲೂ ಮಳೆ ಧಾರಾಕಾರ!
ಕಳೆದ ವರ್ಷ(2012) ನಾನು ಕನ್ನಡ ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಆ ಚಿತ್ರದ ಚಿತ್ರೀಕರಣ ತುಂಬಾ ತೀವ್ರಗತಿಯಲ್ಲಿ ನಡೆಯುತ್ತಿತ್ತು. ಪ್ರತಿದಿನ ಸಂಜೆ ಚಿತ್ರೀಕರಣ ಮುಗಿದ ನಂತರ ನಾಳೆಯ ಚಿತ್ರೀಕರಣಕ್ಕೆ ಆಗಬೇಕಿದ್ದ ವ್ಯವಸ್ಥೆಗಳ ಕಡೆಗೊಮ್ಮೆ ಗಮನಹರಿಸಿ, ಆಗದೆ ಉಳಿದ ಕೆಲಸಗಳೇನಾದರೂ ಇದ್ದರೆ ಅದನ್ನು ಸಂಬಂಧಪಟ್ಟವರಿಗೆ ತಿಳಿಸಿ, ಎಲ್ಲವನ್ನು ಪಕ್ಕಾ ಮಾಡಿಕೊಂಡ ನಂತರ ನಿರ್ದೇಶನ ವಿಭಾಗದವರ ಕೆಲಸ ಮುಗಿಯುತ್ತದೆ. ಹಾಗಾಗಿ ಕೆಲಸ ಮುಗಿಯುವಷ್ಟರಲ್ಲಿ ತಡರಾತ್ರಿಯಾಗಿರುತ್ತದೆ. ಅವತ್ತೂ ಸಹ ಹಾಗೇ ಅಯಿತು. ಅದು 2012 ಏಪ್ರಿಲ್ ತಿಂಗಳ ದಿನಾಂಕ ನೆನಪಿಲ್ಲದ ಒಂದು ದಿನ. ಅವತ್ತು ಚಿತ್ರೀಕರಣದ ಕೆಲಸವನ್ನೆಲ್ಲಾ ಮುಗಿಸಿ ಕನಕಪುರ ರಸ್ತೆಯ ನನ್ನ ರೂಂ ತಲುಪುವಷ್ಟರಲ್ಲಿ ರಾತ್ರಿ 9 ಗಂಟೆಯಾಗಿತ್ತು. ನೇರ ನನ್ನ ರೂಮಿಗೆ ಬಂದವನೆ ಬಟ್ಟೆ ಬದಲಾಯಿಸುವ ಗೋಜಿಗೆ ಹೋಗದೆ ಲ್ಯಾಪ್ಟಾಪ್ ಆನ್ ಮಾಡಿ ಕಿಸೆಯಲ್ಲಿದ್ದ ಟಾಟ ಪೋಟಾನ್ಮೊಬೈಲ್ ಇಂಟರನೆಟ್ ಡ್ಯಾಂಗಲ್ ಹೊರ ತೆಗೆದು ಲ್ಯಾಪ್ಟಾಪಿಗೆ ಚುಚ್ಚಿಸಿದೆ. ಇಂಟರನೆಟ್ಕನೆಕ್ಟ್ ಆದ ನಂತರ ನನ್ನ ಅಕೌಂಟ್ತೆರೆದು ಹೊಸದಾಗಿ ಬಂದಿದ್ದ ಇಮೇಲ್ಗಳನ್ನು ಚೆಕ್ ಮಾಡತೊಡಗಿದೆ.ತೀರಾ ಮುಖ್ಯವಾದಇಮೇಲ್ಗಳಾವು ಇರಲಿಲ್ಲವಾದರಿಂದ 15 ನಿಮಿಷದಲ್ಲಿ ಅ ಕೆಲಸ ಮುಗಿಸಿ ನಂತರ ಹೊಸ ಚಿತ್ರಗಳ ಹಾಡುಗಳ್ಯಾವು ಬಂದಿವೆ ಎಂದು ಹುಡುಕತೊಡಗಿದೆ. ಇದು ಸಿನಿಮಾ ನಿರ್ದೇಶಕನಾಗ ಬಯಸುವ ಬಹಳಷ್ಟು ಜನ ಮಾಡುವ ಕೆಲಸ.
ಯೂಟ್ಯೂಬ್ನಲ್ಲಿ ಅಪ್ಲೋಡ್ ಅಗಿರುವ ದೇಶವಿದೇಶಗಳ ಹೊಸ ಹೊಸಚಿತ್ರಗಳ ತುಣುಕು ದೃಶ್ಯಗಳನ್ನು, ಹಾಡುಗಳನ್ನು ನೋಡಿ ಅವುಗಳ ದೃಶ್ಯ ಸಂಯೋಜನೆ, ಕ್ಯಾಮೆರಾತಂತ್ರಗಾರಿಕೆ, ಎಡಿಟಿಂಗ್ ತಂತ್ರಗಳು, ಹಿನ್ನಲೇ ಸಂಗೀತ,ಅದನ್ನುಬಳಸಿಕೊಂಡಿರುವ ರೀತಿ, ಕಥಾ ನಿರೂಪಣಾ ಶೈಲಿ, ನಟ, ನಟಿಯರ ಅಭಿನಯ, ಇಂಥ ವಿವರಗಳನ್ನು ಸೂಕ್ಷ್ಮವಾಗಿ ನೋಡಿ, ಗ್ರಹಿಸಿ, ಅಭ್ಯಸಿಸುತ್ತಿರಬೇಕಾಗುತ್ತದೆ. ಏಕೆಂದರೆ ಚಲನಚಿತ್ರದ ತಾಂತ್ರಿಕತೆ, ಕಥೆ ಹೇಳುವ ತಂತ್ರಗಾರಿಕೆ, ಇಂದು ತುಂಬಾ ತೀವ್ರಗತಿಯಲ್ಲಿ ಬದಲಾಗುತ್ತಿರುವುದರಿಂದ ಈ ರೀತಿ ಹೊಸದನ್ನು ನೋಡಿ ಅಭ್ಯಸಿಸುತ್ತಿರುವುದು ತುಂಬಾ ಅವಶ್ಯಕವಾಗುತ್ತದೆ. ಇದರಿಂದ ಬದಲಾಗುತ್ತಿರುವ ಚಲನಚಿತ್ರ ತಂತ್ರಜ್ಙಾನಕ್ಕೆ ಒಗ್ಗಿಕೊಳ್ಳಲು ತುಂಬಾ ಅನುಕೂಲವಾಗುತ್ತದೆ. ನಾನು ಎರಡು ದಿನಕ್ಕೊಮ್ಮೆಯಾದರು ಅಂತರ್ಜಾಲದ ಮೊರೆ ಹೋಗಿ ದೇಶ ವಿದೇಶಗಳ ಚಿತ್ರಗಳ ದೃಶ್ಯಗಳನ್ನು ನೋಡುವ ಅಭ್ಯಾಸ ಇಟ್ಟುಕೊಂಡಿದ್ದೇನೆ. ಅಂದು ರಾತ್ರಿ ಸಹ ಯೂಟ್ಯೂಬ್ತೆಗೆದು ಹೊಸದಾಗಿ ಬಿಡುಗಡೆಯಾಗಿದ್ದ ಚಿತ್ರಗಳ ದೃಶ್ಯ ನೋಡತೊಡಗಿದೆ. ಹೀಗೆ ಒಂದಾದ ಮೇಲೆ ಒಂದು ವಿಡಿಯೋ ನೋಡುತ್ತಾ ಹೋದಂತೆ ಬೇರೆ ಬೇರೆ ಲಿಂಕ್ ಬದಲಾಗುತ್ತಾ ಒಂದು ಹಂತದಲ್ಲಿ ಅದು ತೇಜಸ್ವಿಯವರ ಸಂದರ್ಶಶನದ ಒಂದು ಕೊಂಡಿಗೆ ಕನೆಕ್ಟ್ ಆಯಿತು. ಅದು ಜಯಂತ್ಕಾಯ್ಕಿಣಿಯವರು ತೇಜಸ್ವಿಯವರನ್ನು ಸಂದರ್ಶಿಸಿದ ಒಂದು ವೀಡಿಯೋ ತುಣುಕಾಗಿತ್ತು. ಅದುವರೆಗೂ ನಾನು ತೇಜಸ್ವಿಯ ಅಷ್ಟು ಸಾಹಿತ್ಯವನ್ನು ಹಸಿವಿಗೆ ಬಿದ್ದವನಂತೆ ತೀವ್ರವಾಗಿ ಓದಿಕೊಂಡಿದ್ದೆನಾದರೂ ಅವರ ಸಂದರ್ಶನವನ್ನಾಗಲಿ, ಮಾತುಗಳನ್ನಾಗಲೀ, ಧ್ವನಿಯನ್ನಾಗಲೀ ಕೇಳಿರಲಿಲ್ಲ.
ಈಗ ಯೂಟ್ಯೂಬ್ನ ಈ ವೀಡಿಯೋ ತುಣುಕು ನೋಡಿ ಸಂತೋಷ, ಅಶ್ಚರ್ಯ ಒಟ್ಟಿಗೆಯಾಯಿತು. ತಕ್ಷಣ ಅ ಲಿಂಕ್ ಒತ್ತಿ ಮೈಕೈ ಕೊಡವಿಕೊಂಡು ತೇಜಸ್ವಿಯ ಮಾತು ಕೇಳಲು ಕೂತೆ. ಒಟ್ಟು 13 ನಿಮಿಷಗಳ ಅ ವೀಡಿಯೋ ತುಣುಕು ಮುಗಿಯುವವರೆಗೂ ತೇಜಸ್ವಿಯ ಮಾತುಗಳನ್ನು ಕೇಳುತ್ತಾ ಮೈಮರೆತು ಕುಳಿತ್ತಿದ್ದೆ. ’ನಮಗೆ ಮೌನವನ್ನುಅರ್ಥ ಮಾಡಿಕೊಳ್ಳೊದಕ್ಕೆ ಸಾಧ್ಯವಾಗದಿದ್ದರೆ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸೆನ್ಸಿಬಿಲಿಟಿ ಹೋಗಿಬಿಡ್ತದೆ’ ಆ ಸಂದರ್ಶನದಲ್ಲಿ ಮಾತು ಹಾಗು ಮೌನದ ಬಗ್ಗೆ ತೇಜಸ್ವಿ ಆಡಿದ ಈ ಮಾತುಗಳು ನನ್ನನ್ನು ತೀವ್ರ ಯೋಚನೆಗೆ ಗುರಿಮಾಡಿದವು. 13 ನಿಮಿಷದ ವಿಡಿಯೋ ಮುಗಿದಿದ್ದೇ ಮತ್ತೆ ಅದೇ ವೀಡಿಯೋ ಪ್ಲೇ ಮಾಡಿ ನೋಡತೊಡಗಿದೆ. ಹೀಗೆ ನಾಲ್ಕೆದು ಸಲ ತೇಜಸ್ವಿಯವರ ಮಾತುಗಳನ್ನು ಮತ್ತೆ ಮತ್ತೆ ಕೇಳಿದೆ. ಆದರೆ ತೇಜಸ್ವಿಯವರ ಮಾತುಗಳನ್ನು ಮತ್ತೆ ಮತ್ತೆ ಕೇಳಿ ತೃಪ್ತಿಯಾಗುವ ಬದಲು ನನ್ನ ಅತೃಪ್ತಿ ಹೆಚ್ಚಾಯಿತು. ತೇಜಸ್ವಿಯವರ ಬಗ್ಗೆ ಅವರ ಬದುಕಿನ ಬಗ್ಗೆ ತಣಿಯದ ಕುತೂಹಲವೊಂದು ಪ್ರಾರಂಭವಾಯಿತು.
ತಕ್ಷಣ ತೇಜಸ್ವಿಯ ಬದುಕಿಗೆ ಸಂಬಂಧಪಟ್ಟ ಇದೇ ರೀತಿಯ ಬೇರೆಯಾವುದಾದರು ದೃಶ್ಯಗಳಿವೆಯೆ ಎಂದು ಅಂತರ್ಜಾಲದಲ್ಲಿ ಹುಡುಕಾಡಿದೆ. ಬೇರೆ ಯಾವ ವೀಡಿಯೋ ಚಿತ್ರಿಕೆಗಳಾಗಲೀ, ದೃಶ್ಯಗಳಾಗಲೀ ಸಿಗಲಿಲ್ಲ. ಆದರೆ ಹಾಗೆಂದು ಸುಮ್ಮನೆ ನಿರಾಶನಾಗಿ ಕೈಚೆಲ್ಲಿ ಕೂರಲು ನನ್ನಿಂದ ಸಾಧ್ಯವಾಗಲ್ಲಿಲ್ಲ. ಏಕೆಂದರೆ ಬರಹಗಳ ಮೂಲಕವೇ ಅವರ ಬಗ್ಗೆ ಒಂದು ಬಗೆಯ ಆಕರ್ಷಣೆ, ಅಚ್ಚರಿ ಅದಕ್ಕಿಂತಲೂ ಹೆಚ್ಚಾಗಿ ಒಂದು ಬಗೆಯ ಕುತೂಹಲ ಉಂಟು ಮಾಡಿದ್ದವರು ತೇಜಸ್ವಿ. ಈಗ ಯೂಟ್ಯೂಬ್ನಲ್ಲಿ ಅವರ ಮಾತುಗಳನ್ನು ಕೇಳಿದ ನಂತರ ಅವರ ಬದುಕಿನ ಬಗ್ಗೆ, ಬದುಕಿನ ಶೈಲಿಯ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಯಿತು. ಈ ಕುತೂಹಲವೇ ತೇಜಸ್ವಿಯ ಬಗ್ಗೆ ಸಮಗ್ರವಾದ ಸಾಕ್ಷ್ಯಚಿತ್ರವೊಂದನ್ನು ರೂಪಿಸಬೇಕು, ಆ ಸಾಕ್ಷ್ಯಚಿತ್ರದಲ್ಲಿಅವರ ಬದುಕು, ಬರಹ, ಅವರ ವಿಚಾರಧಾರೆಗಳು ಹಾಗೂ ವಿಚಿತ್ರವಾದ ಅವರ ಹಲವು ಅಸಕ್ತಿಗಳನ್ನು ಹಿಡಿದಿಡಬೇಕು ಎಂದು ನನ್ನನ್ನು ಪ್ರೇರೇಪಿಸಿದ ಅಂಶವಿರಬೇಕು.
ಹಾಗೆಂದುಕೊಂಡೇ ಅದೇ ಯೋಚನೆಯಲ್ಲೇ ಬಾಗಿಲು ತೆರೆದೆ, ಹೊರಗೆ ಧಾರಕಾರ ಮಳೆ.
‘ಮತ್ತೆ ಮತ್ತೆ ತೇಜಸ್ವಿ’ ಸಾಕ್ಷ್ಯಚಿತ್ರದ ಬೀಜ ನನ್ನ ಮನಸ್ಸಿನೊಳಗಿಳಿದದ್ದು ಹಾಗೆ. ಆ ಸರಿರಾತ್ರಿಯಲ್ಲಿ. ಮತ್ತೆ ಎರಡನೆಯ ಯೋಚನೆ ಮಾಡಬೇಕಿರಲಿಲ್ಲ ನಾನು. ಏಕೆಂದರೆ ಸಾಕ್ಷ್ಯಚಿತ್ರಕ್ಕೆ ಬೇಕಾದ ನೋಡುಗ ವಲಯ ಅದಾಗಲೇ ಸಿಕ್ಕಿಬಿಟ್ಟಿದ್ದರು. ನನಗೆ ಚೆನ್ನಾಗಿ ಗೊತ್ತಿತ್ತು. ನಾನೊಬ್ಬನೇ ಅಲ್ಲ ನನ್ನಂತಹ ಸಾವಿರಾರು ಮನಸ್ಸುಗಳು ತೇಜಸ್ವಿಯನ್ನು ಸಾಯುವ ಹಾಗೇ ಓದಿಕೊಂಡಿವೆ, ಅವರನ್ನು ಪ್ರೀತಿಸುತ್ತವೆ, ಅವರ ಬದುಕಿನ ಒಳಹೊಕ್ಕು ನೋಡಲು ಇಚ್ಚಿಸುತ್ತವೆ ಎಂದು. ಕಡೆಗೂ ನಾನು ನಂಬಿಕೊಂಡಿದ್ದು ನಿಜವಾಯಿತು. ‘ಮತ್ತೆ, ಮತ್ತೆ ತೇಜಸ್ವಿ’ ಈಗ ಸಾವಿರ, ಸಾವಿರ ಸಂಖ್ಯೆಯಲ್ಲಿ ಓದುಗರು, ತೇಜಸ್ವಿಯ ಅಭಿಮಾನಿಗಳು ನೋಡಿದ್ದಾರೆ, ನೋಡುತ್ತಿದ್ದಾರೆ. ನನ್ನ ನಂಬಿಕೆ ನಿಜವಾಗಿದೆ.
ಸರಿ ಸಾಕ್ಷ್ಯಚಿತ್ರ ಮಾಡಬೇಕೆಂದು ಮನಸ್ಸಿಗೆ ಬಂದದ್ದೆ, ತಕ್ಷಣ ನನ್ನ ಪೋನ್ತೆಗೆದುಕೊಂಡು 9886978239 ಸಂಖ್ಯೆ ಒತ್ತಿ ಡಯಲ್ ಮಾಡಿದೆ. ಮೊಬೆಲ್ ಸ್ಕ್ರೀನ್ ಮೇಲೆ ಹೇಮಂತ್ ಎಂದು ಹೆಸರು ಪ್ರಕಟವಾಯಿತು. ಒಂದೆರಡು ರಿಂಗ್ ಅದ ತಕ್ಷಣ ಅ ಕಡೆಯಿಂದ ದ್ವನಿ ಕೇಳಿಸಿತು.
ಆಕಡೆಯಿಂದ : ಹಲೋ…
ನಾನು : ಎಲ್ಲಿದ್ದೀಯೊ?
ಆಕಡೆಯಿಂದ :-ಮನೆ ಕಡೆ ಹೋಗ್ತಾ ಇದ್ದೀನಿ…. ಏನೋ ವಿಷ್ಯ?
ನಾನು : -ಎಷ್ಟೊತ್ತಾದರೂ ಪರವಾಗಿಲ್ಲ, ನನ್ನರೂಮಿಗೆ ಬಾ ಮಾತಾಡ್ಬೇಕು…
ಆಕಡೆಯಿಂದ : ಯಾಕೋ? ಏನಾದ್ರೂ ಸಮಸ್ಯೆ ಇತ್ತಾ? ಮಳೆ ಬರ್ತಿದೆ ಕಣೋ…..
ನಾನು : ಹೇಗಾದ್ರು ಬಾ, ಮಾತಾಡ್ಲೇಬೇಕು.
ಆ ಕಡೆಯಿಂದ : ಬರ್ತೀನಿ. ಪೋನ್ಕಟ್ ಆಯಿತು.
ಹೌದುಅವನ ಹೆಸರು ಹೇಮಂತ್, ತುಂಬಾ ವರ್ಷಗಳ ನನ್ನಸ್ನೇಹಿತ, ನನ್ನ ಚಡ್ಡಿ ದೋಸ್ತ್. ನಾವಿಬ್ಬರೂ ಒಂದೇ ಬಡಾವಣೆಯ ವಾಸಿಗಳು, ಒಟ್ಟಿಗೆ ಆಡಿ ಬೆಳೆದವರು. ಸಾಹಿತ್ಯ, ಸಿನಿಮಾ, ರಂಗಭೂಮಿ, ಅಂತೆಲ್ಲಾ ಒಟ್ಟೊಟ್ಟಿಗೆ ತಲೆಗೆ ಹುಳು ಬಿಟ್ಟುಕೊಂಡವರು. ಅವನು ಹೊಸದಾಗಿ ಏನೇ ಯೋಚನೆ ಮಾಡಿದರೂ ಅದನ್ನು ಮೊದಲು ನನಗೆ ಹೇಳುತ್ತಿದ್ದ. ನಾನು ಏನೇ ಯೋಚನೆ ಮಾಡಿದರು ಅದನ್ನು ಅವನ ಜೊತೆ ಚರ್ಚಿಸುತ್ತಿದ್ದೆ. ಈ ಹಾದಿಯಲ್ಲಿ ಸಾಗಿ ಬಂದ ನಾವು ಒಟ್ಟಿಗೆ ರಂಗಭೂಮಿಯಲ್ಲಿ ಕೆಲಸ ಮಾಡಿದ್ದೇವೆ. ಇಬ್ಬರೂ ಸೇರಿ ಕೆಲವು ಶಾರ್ಟಫಿಲಂಗಳನ್ನು ಮಾಡಿದ್ದೇವೆ. ಹಾಗಾಗಿ ತೇಜಸ್ವಿಯ ಬಗ್ಗೆ ಸಾಕ್ಷ್ಯಚಿತ್ರ ಮಾಡುವ ಅಲೋಚನೆ ಬಂದದ್ದೇ ಆ ರಾತ್ರಿ ಸಹ ಮೊದಲು ಅವನಿಗೇ ಪೋನ್ ಮಾಡಿದ್ದೆ.
ರಾತ್ರಿ 11ರ ಸುಮಾರಿಗೆ ನನ್ನಕೋಣೆಯ ಬಾಗಿಲು ಬಡಿದ ಸದ್ದಾಯಿತು. ಅಷ್ಟೊತ್ತಿಗಾಗಲೇ ಲ್ಯಾಪ್ ಟಾಪ್ ಮುಚ್ಚಿಟ್ಟು ಏನನ್ನೋ ಓದುತ್ತಾ ಕುಳಿತ್ತಿದ್ದ ನಾನು ಎದ್ದುಹೋಗಿ ಬಾಗಿಲು ತೆಗೆದೆ. ಹೇಮಂತ ಬಂದು ನಿಂತಿದ್ದ….. ಮಳೆಯಲ್ಲಿ ಪೂರ್ತಿ ತೋಯ್ಸಿಕೊಂಡು.
ನೆನ್ಕೊಂಡು ಬಂದ್ಯೇನೋ? ನಾನು ಕೇಳಿದೆ
ಹೌದು ಕಣೋ ಮಳೆ ನಿಲ್ಲೊ ಹಾಗ್ಕಾಣ್ಲಿಲ್ಲ, ಅದಕ್ಕೆ ಹಾಗೇ ನೆನ್ಕೊಂಡೇ ಬಂದೆ ಎಂದು ರಾಷ್ಟ್ರೀಯ ದುರಂತವೊಂದನ್ನು ವಿವರಿಸುವಂತೆ ಮಳೆಯಲ್ಲಿ ನೆಂದು ಬಂದ ಅವನ ಸ್ಥಿತಿಯನ್ನು ವಿಷಾದಭರಿತ ದನಿಯಲ್ಲಿ ವಿವರಿಸಿದ.
ಸರಿ ಬಾ ಎಂದು ಒಳಗೆ ಕರೆದು ಅವನಿಗೆ ನನ್ನ ಟವೆಲ್ಕೊಟ್ಟೆ … ಆದರೆ ಕೆಲವೇ ಕ್ಷಣಗಳಲ್ಲಿ ನಾನು ಯಾಕಾದರೂ ಅವನಿಗೆ ನನ್ನಟವೆಲ್ಕೊಟ್ಟೆನೊ ಎಂದು ಪ್ರಾಯಶ್ಚಿತ್ತ ಪಡಬೇಕಾದ ಪ್ರಸಂಗ ಬರುತ್ತದೆ ಎಂದು ನನಗೆ ಖಂಡಿತಗೊತ್ತಿರಲಿಲ್ಲ. ಮಳೆಯಲ್ಲಿ ನೆನೆದು ಬಂದಿದ್ದಾನೆ ತಲೆ ಒರೆಸಿಕೊಳ್ಳಲಿ ಎಂದು ನನ್ನ ಬಳಿ ಇದ್ದ ಏಕೈಕ ಟವೆಲನ್ನು ಅವನಿಗೆ ಕೊಟ್ಟರೆ ಪುಣ್ಯಾತ್ಮ ‘ಯಾರ್ದೋ ಟವೆಲ್ ಎಲ್ಲಮ್ಮನ ಜಾತ್ರೆ’ ಅಂದ್ಕೊಂಡು ಧರಿಸಿದ್ದ ಬಟ್ಟೆಗಳ ಒಳಗಿನಿಂದಲೇ ಟವೆಲ್ ತೂರಿಸಿ ಸಿಕ್ಕ ಸಿಕ್ಕಆಯಕಟ್ಟಿನ ಜಾಗಗಳಲ್ಲೆಲ್ಲಾ ಟವಲ್ ಪ್ರಯೋಗಿಸಿ ಗಸ ಗಸ ಉಜ್ಜಿಕೊಳ್ಳುತ್ತಿದ್ದ. ತಕ್ಷಣ ನನಗೆ ತೇಜಸ್ವಿ ಮರೆತು ಹೋಗಿ ಬೇರೆಯದೆ ಚಿಂತೆಪ್ರಾರಂಭವಾಯಿತು!
ನನ್ನ ಬಳಿ ಇದ್ದದ್ದು ಅದೊಂದೇ ಟವೆಲ್ಲು. ನಾಳೆ ಬೆಳಿಗ್ಗೆ ಸ್ನಾನ ಮಾಡಿದ ಮೇಲೆ ಅದೇ ಟವೆಲನ್ನು ಹೇಗಪ್ಪ ಬಳಸುವುದು? ಎಂಬುದುಆ ಕ್ಷಣದ ನನ್ನಚಿಂತೆಯಾಗಿತ್ತು. ಆದರೆಅವನು ಮಾತ್ರ ತುಂಬಾ ಶ್ರದ್ದೆ, ಪ್ರಾಮಾಣಿಕತೆಗಳಿಂದ ‘ಅದು ತನ್ನ ಸ್ವಂತ ಟವೆಲ್ಲು’ ಎಂಬ ಭಾವನೆಯಲ್ಲಿ ಉಜ್ಜಿಕೊಳ್ಳುವ ಕಾರ್ಯವನ್ನು ಮುಂದುವರೆಸುತ್ತಲೇ ಕೇಳಿದ, ‘ಏನೋ ಮಾತಾಡ್ಬೇಕುಅಂದೆ? ಏನ್ ವಿಷ್ಯ?’
‘ಮೊದ್ಲು ನೀನು ಉಜ್ಜಿಕೊಳ್ಳೊದು ನಿಲ್ಸಿ ಆ ಟವೆಲ್ ಆ ಕಡೆ ಬಿಸಾಕಿ ಕೂತ್ಕೊ ಹೇಳ್ತಿನಿ’ ಎಂದು ಖಾಲಿ ಇದ್ದ ಎರಡು ಕುರ್ಚಿಗಳಲ್ಲಿ ಒಂದನ್ನು ಅವನ ಕಡೆಗೆ ತಳ್ಳಿದೆ. ಅವನು ಅದುವರೆಗು ಕೈಗೊಂಡಿದ್ದ ಮೈ ಉಜ್ಜಿಕೊಳ್ಳುವ ಯಜ್ಞವನ್ನುಸಮಾಪ್ತಿಗೊಳಿಸಿ ಆ ಛೇರಿನ ಮೇಲೆ ಕುಳಿತು ಸರಿ ಏನ್ ಹೇಳಪ್ಪ?ಎಂದು ನನ್ನ ಕಡೆನೋಡಿದ. ಒಂದು ಡಾಕ್ಯುಮೆಂಟರಿ ಮಾಡೋಣ ಅಂತ ಕಣೋ ಅವನ ಪ್ರಶ್ನೆಗೆ ಉತ್ತರಿಸಿದೆ.

ತಕ್ಷಣ ಅಶ್ಚರ್ಯಭರಿತ ದ್ವನಿಯಲ್ಲಿ ಅವನು ಕೇಳಿದ ಏನು? ಡಾಕ್ಯುಮೆಂಟರಿನ? ಯಾವುದರ ಬಗ್ಗೇನೊ?
ಯಾವುದರ ಬಗ್ಗೇನೂ ಅಲ್ಲ. ಯಾರ ಬಗ್ಗೆ ಅಂತ ಕೇಳು? ನಾನು ಉತ್ತರಿಸಿದೆ.
ಯಾರ ಬಗ್ಗೆ ಅದೇ ಅಶ್ಚರದ ಧ್ವನಿಯಲ್ಲಿ ಕೇಳಿದ.
ತೇಜಸ್ವಿ ಬಗ್ಗೆ ಚುಟುಕಾಗಿ ಉತ್ತರಿಸಿ ಅವನ ಮುಖ ನೋಡಿದೆ.
ಅವನ ಆಶ್ಚರ್ಯ ಹತ್ತು ಪಟ್ಟಾಗಿ ಕೇಳಿದ ಏನು ತೇಜಸ್ವಿ ಬಗ್ಗೇನ? ‘ಹಿಹಿಹಿಹಿ’ ಎಂದು ಅವನ್ನದ್ದೇ ಟ್ರೇಡ್ ಮಾರ್ಕ ಶೈಲಿಯಲ್ಲಿ ನಗುತ್ತಾ ಕೇಳಿದ ಏನ್ ಹೇಳ್ತಾ ಇದ್ದಿಯೋ?
ತೇಜಸ್ವಿ ಲೈಫ್ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡೋಣ ಅಂತ, ಏನನಿಸುತ್ತದೆ ನಿನಗೆ? ಸೀರಿಯಸ್ ಅಗಿ ಹೇಳು ನಾನು ಧೃಢವಾಗಿ ಕೇಳಿದೆ.
ಅಲ್ಲ ಮಾಡಬಹುದು, ಒಳ್ಳೆ ಐಡಿಯಾ, ಅದರೆ ಬೇರೇ ಯಾರೂ ಡಾಕ್ಯುಮೆಂಟರಿ ಮಾಡಿಲ್ವ ತೇಜಸ್ವಿ ಬಗ್ಗೆ ಎಂದು ಮತ್ತೊಂದು ಪ್ರಶ್ನೆಎಸೆದ.
ಸದ್ಯಕ್ಕೆ ನನಗೆ ಗೊತ್ತಿರುವ ಹಾಗೇ ಇಲ್ಲ. ಹಾಗೇನಾದ್ರು ಬೇರೆ ಯಾರಾದ್ರು ಮಾಡಿದ್ರೆ ಮಾಡ್ಲಿ ಬಿಡು. ನಾವು ಒಂದುಟ್ರೈ ಮಾಡೋಣ. ಅದ್ರೆ ಬೇರೆ ಥರ ಪ್ಲಾನ್ ಮಾಡಿ ಮಾಡೋಣ?ಎಂದು ಅವನ ಪ್ರಶ್ನೆಗಳಿಗೆ ಉತ್ತರಿಸಿದೆ. (ನಂತರದ ದಿನಗಳಲ್ಲಿ ಕೃಪಾಕರ-ಸೇನಾನಿ ಮಾಡಿರುವ ಸಾಕ್ಷ್ಯಚಿತ್ರದ ಬಗ್ಗೆ ತಿಳಿಯಿತು)
ಹೇ;-ಅದ್ಸರಿ…ಅದ್ರೂ ಏನ್ ಇದ್ದಕಿದ್ದ ಹಾಗೆ ಈ ಯೋಚನೆ?
ನಾನು;- ನಂಗೂ ಸರಿಯಾಗಿ ಗೊತ್ತಿಲ್ಲ. ಮಾಡ್ಬೇಕು ಅನಿಸ್ತು, ಮಾಡೋಣ, ಏನಂತೀಯ?
ಹೇ;-ಡೆಫ್ನೇಟ್ ಅಗಿ ಮಾಡೋಣ ಅದ್ರೇ ಯಾವಾಗ? ಅದಕ್ಕೇ ಫೈನಾನ್ಸ್ಅದೆಲ್ಲ ಹ್ಯಾಗೆ?
ನಾನು;-ಅದನ್ನೆಲ್ಲಾ ಇನ್ಮುಂದೆ ಯೋಚನೆ ಮಾಡ್ತಾ ಒಂದೊಂದೆ ಫ್ಲಾನ್ ಮಾಡ್ತಾ ಹೋಗ್ಬೇಕು. ಒಟ್ಟಿಗೆ ಕೆಲಸ ಮಾಡೋಣ
ಹೀಗೆ ಅಂದಿನ ಸರಿರಾತ್ರಿಯ ಹೊತ್ತಿನಲ್ಲಿಸಾಕ್ಸ್ಯಚಿತ್ರದ ಬಗ್ಗೆ ನನ್ನ ಹೇಮಂತನ ಮೊದಲ ಮಾತುಕತೆ ನಡೆಯಿತು. ಅವನಂತೂ ಹತ್ತಾರು ಪ್ರಶ್ನೆಗಳನ್ನು ಕೇಳಿ ಕೇಳಿ ಕೊನೆಗೆ ಒಪ್ಪಿಕೊಂಡ. ಅಂತಿಮವಾಗಿ ಅಂದಿನ ರಾತ್ರಿಯ ನಮ್ಮ ಮಾತುಕತೆಯ ನಿರ್ಣಯಗಳು ಇಷ್ಟೆ. ತಕ್ಷಣ ಸಾಕ್ಷ್ಯಚಿತ್ರ ಕುರಿತು ಕಾರ್ಯ ಪ್ರವೃತ್ತರಾಗುವುದು. ಇದಕ್ಕೆ ಬೇಕಾದ ಪೂರ್ವಭಾವಿ ಕೆಲಸಗಳನ್ನು ಕೈಗೆತ್ತಿಕೊಳ್ಳುವುದು. ಅಂತಿಮವಾಗಿ ನಮ್ಮ ಮಾತುಕತೆ ಮುಗಿಸಿ ಹೇಮಂತ ಅವನ ಮನೆಗೆ ಹೊರಟು ನಿಂತಾಗರಾತ್ರಿ 12..30ಅಗಿತ್ತು. ಮಳೆ ಸಂಪೂರ್ಣ ನಿಂತಿತ್ತು. ಹೊರಗೆ ಗಾಳಿ ತಂಪಾಗಿ ಬೀಸುತ್ತಿದ್ದುದ್ದರಿಂದ ಒಂದೆರಡು ನಿಮಿಷ ಅದೇ ಗುಂಗಿನಲ್ಲೆ ತಂಗಾಳಿಗೆ ಮೈಯೊಡ್ಡಿ ನಿಂತಿದ್ದೆ. ಮನಸ್ಸುತಂಪೆನ್ನಿಸುತಿತ್ತು. ಮೈಮನಗಳನ್ನು ತೇಜಸ್ವಿ ಅವಾಹಿಸಿಕೊಳ್ಳುತ್ತಿದ್ದರು.
ನಾಳೆ ಬೆಳಿಗ್ಗೆ 6 ಗಂಟೆಗೆಲ್ಲ ಚಿತ್ರೀಕರಣದ ಸೆಟ್ನಲ್ಲಿ ಇರಬೇಕೆಂಬ ಯೋಚನೆ ಬಂದದ್ದೇ ದೀರ್ಘವಾಗಿ ಉಸಿರಾಡಿ ನೇರ ನನ್ನಕೋಣೆಗೆ ಬಂದೆ. ಕೋಣೆಯ ಮೂಲೆಯಲ್ಲಿ ಮುದ್ದೆಯಾಗಿ ಬಿದ್ದಿದ್ದ ಟವೆಲ್ಕಣ್ಣಿಗೆ ಬಿತ್ತು. ಅದನೆತ್ತಿ ಕೋಣೆಯ ಹೊರಗೆ ಒಗೆಯಲು ಹಾಕಿದ್ದ ಇತರೆ ಬಟ್ಟೆಗಳ ಜೊತೆಗೆ ಹಾಕಿ ಹೊಸ ಟವೆಲ್ತರುವವರೆಗೂ ಸ್ನಾನ ಮಾಡಬಾರದು ಎಂದು ಕೊನೆ ಕ್ಷಣದಲ್ಲಿ ನಿರ್ಣಯಿಸಿ ಹಿಂತಿರುಗಿ ಕೋಣೆಯೊಳಕ್ಕೆ ಬಂದು ದೀಪವಾರಿಸಿ ಮಲಗಿದೆ. ಕಣ್ಮುಚಿದರೂ, ಕಣ್ತೆಗೆದರೂ ಕಾಣುತ್ತಿದ್ದ ಬಿಂಬ ಒಂದೇ ಆಗಿತ್ತು, ಅದುತೇಜಸ್ವಿ!
ತೇಜಸ್ವಿಯ ಬಿಂಬ ನನ್ನ ಮನಸ್ಸಿನಲಿನಿಧಾನವಾಗಿ ಕದಲಿ ಸಾಕ್ಷ್ಯಚಿತ್ರದರೂಪದಲ್ಲಿ ಜೀವ ಪಡೆಯುತ್ತಿರುವ ಸೂಚನೆ ಕೊಡಲಾರಂಭಿಸಿತ್ತು.



Interesting… ಮುಂದೆ…
Matte matte tejaswiyavra nimja documentarya promo vannae mattae mattar nodi kushi pattidini…. avara bhaggae ondu kuthuhala modidae…… thanks…. edara jothae nimma anubhavagalanna elli akshara roopadalli hanchikollutiruvudu matthu santhoshavaaythu…..
ಕರ್ವಾಲೊ … ಕಥೆಯಷ್ಟು ನಿಗೂಡವಾಗಿ ಸಾಗುತ್ತಿದೆ.. ಉತ್ಸುಕನಾಗಿದ್ದೇನೆ
chennagide. Munduvarisi nimma baravanige. Kutoohalavide Oduvalli. Kayuvenu naanu mundina sanchikege.
‘matte matte’ nimma matu kelona annisatte 🙂
namma nirekshe usigolisilla nivu…kelida astu patra gala jeevantha darshna madisiddiri tejaswi yavara jothege
ತೇಜಸ್ವಿಯೇ ಹಾಗೆ! ಮತ್ತೆ ಮತ್ತೆ ಕಾಕಡುತ್ತಿರಿತ್ತಾರೆ!