ಆ ರೇಡಿಯೋ..

ಜಾನ್ ಮಥಾಯಿಸ್

1980 ರ ದಶಕದಲ್ಲಿ ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭ. ಚಿಕ್ಕಮಗಳೂರಿನಿಂದ 22 ಕಿ.ಮಿ. ದೂರದಲ್ಲಿರುವ ಭಕ್ತರಹಳ್ಳಿ ಎಂಬ ಕುಗ್ರಾಮದಲ್ಲಿ ಅಕ್ಷರ ಕಲಿಯಲು ಸರ್ಕಾರಿ ಶಾಲೆಗೆ ಹೋಗುತ್ತಿದ್ದ ದಿನಗಳವು.
ಈ ಹಳ್ಳಿಯಿಂದ ಒಂದು ಕಿ.ಮೀ ಹೊರಭಾಗದಲ್ಲಿರುವ ದಟ್ಟ ಅರಣ್ಯದಲ್ಲಿ ನಮ್ಮದೊಂದೇ ಸೋಗೆ ಹುಲ್ಲಿನ ಮನೆ. ಅಲ್ಲಿಗೆ ರಸ್ತೆ ಸಂಪರ್ಕವಿರಲಿಲ್ಲ. ವಿದ್ಯುತ್, ಬೋರ್ವೆಲ್ ಎನ್ನುವುದನ್ನು ಅವರಿವರ ಬಾಯಲ್ಲಿ ಕೇಳಿದ್ದೆ ಬಂತು. ಅಮ್ಮ ಬೆಳಿಗ್ಗೆ 4 ಗಂಟೆಗೆ ಎದ್ದು ಆ ದಿನದ ಅಡುಗೆ ಮಾಡಿ ನಮ್ಮನ್ನು ಶಾಲೆಗೆ ಅಣಿಗೊಳಿಸಿ, ಕಾಫಿ ತೋಟದಲ್ಲಿ ಕೂಲಿ ಮಾಡಲು 7 ಗಂಟೆಗೆ ಹೊರಟುಬಿಡುತ್ತಿದ್ದಳು. ಅಪ್ಪನೂ ಕೂಡ ಟಿಂಬರ್ ಕೂಲಿಗೆ ಹೊರಟುಬಿಡುತ್ತಿದ್ದ. ಆ ನಂತರ ನಾನು ಮತ್ತು ನನ್ನ ತಂಗಿ ಧೋ ಎಂದು ಸುರಿವ ಮಳೆಯಲ್ಲಿ ಶಾಲೆಗೆ ಹೋಗುತ್ತಿದ್ದೆವು.


ಅಪ್ಪ – ಅಮ್ಮ ಕೂಲಿಗೆ ಹೋದರೆ ಆ ದಿನದ ಊಟ – ತಿಂಡಿ ಗ್ಯಾರೆಂಟಿ. ವರ್ಷಕ್ಕೆ ಒಂದು ಜೊತೆ ಹೊಸ ಬಟ್ಟೆ ತೆಗೆದುಕೊಂಡರೆ ಅದು ನಮ್ಮ ಸೌಭಾಗ್ಯ. ಅಪ್ಪ ದುಡಿದದನ್ನು ದಿನದ ಸಾರಾಯಿಗೆ ಇಂತಿಷ್ಟು ಎಂದು ಖರ್ಚು ಮಾಡಿ, ಉಳಿದ ಹಣವನ್ನು ಅಮ್ಮನಿಗೆ ತಂದು ಕೊಡುತ್ತಿದ್ದ. ಒಟ್ಟಿನಲ್ಲಿ ’ ಭೂಮಿಯೇ ಹಾಸಿಗೆ ಗಗನವೇ ಹೊದಿಕೆ’ ಎನ್ನುವ ಪರಿಸ್ಥಿತಿ ನಮ್ಮದಾಗಿತ್ತು. ಈಗಿನಂತೆ, ಟಿ.ವಿ ಚಿತ್ರಮಂದಿರಗಳು, ಮಾಲ್ ಗಳ ಭರಾಟೆ ಆಗಿರಲಿಲ್ಲ. ನಾವಿದ್ದ ಕಾಡೇ ನಮಗೆ ಪ್ರಪಂಚವಾಗಿತ್ತು. ಅದರೊಳಗೆ ಹೊಕ್ಕು ಬದುಕನ್ನು ಅನುಭವಿಸುತ್ತಾ ಕಾಲ ಕಳೆಯುತ್ತಿದ್ದೆವು.
ಹಾಗಿರುವಾಗ ದಿಢಿರನೆ ಒಂದು ದಿನ ಅಪ್ಪ ಚಿಕ್ಕಮಗಳೂರು ಪೇಟೆಗೆ ಹೋದವನು ಸಿನೇಮಾ ನೋಡಿ ಹಿಂತಿರುಗುವಾಗ ಆ ಕಾಲದಲ್ಲಿ ಪ್ರಸಿದ್ಧ ಪಡೆದಿದ್ದ ’ ಬುಷ್’ ಬ್ರಾಂಡಿನ ರೇಡಿಯೋವನ್ನು ಹೊತ್ತು ತಂದಿದ್ದ. ಬಹುಶಃ ಅದು ಎರಡು ವಾರಗಳ ದುಡಿಮೆಯ ಹಣವಾಗಿತ್ತು. ಮಕ್ಕಳಿಗೆ ಮನರಂಜನೆ ಬೇಕು ಎನ್ನುವ ಉದ್ದೇಶದಿಂದ ಹೊಸ ರೇಡಿಯೊ ಹೊತ್ತು ತಂದಿದ್ದ ಅಪ್ಪ, ಮೊದಲ ಒಂದು ವಾರ ಅಪ್ಪಿ – ತಪ್ಪಿಯೂ ನಮಗೆ ಮುಟ್ಟಲು ಕೊಡಲಿಲ್ಲ. ರಾಜಕೀಯದಲ್ಲಿ ವಿಪರೀತ ಆಸಕ್ತಿ ಹೊಂದಿದ್ದ ಅಪ್ಪ ಬೆಳಿಗ್ಗೆ – ರಾತ್ರಿ ಪ್ರದೇಶ ಸಮಾಚಾರ ಕೇಳುತ್ತಿದ್ದ. ಆ ನಂತರ ಶುಭ್ರ ಟವೆಲ್ ಒಂದರಲ್ಲಿ ಅದನ್ನು ಸುತ್ತಿ ಎತ್ತಿಡುತ್ತಿದ್ದ. ಮಗುವಿನಂತೆ ಜತನ ಮಾಡುತ್ತಿದ್ದ. ಅಂತೂ – ಇಂತೂ ಪುಸಲಾಯಿಸಿ ಒಂದು ವಾರದ ನಂತರ ರೇಡಿಯೋ ಮುಟ್ಟುವ ಭಾಗ್ಯ ನನಗೆ ಮತ್ತು ತಂಗಿಗೆ ಲಭ್ಯವಾಯಿತು.
ನಾವು ಭಕ್ತಿ ಗೀತೆ, ಭಾವಗೀತೆ ಹಾಗೂ ಚಲನಚಿತ್ರ ಗೀತೆಗಳನ್ನು ಕೇಳುತ್ತಾ ಸಂಭ್ರಮ ಪಡತೊಡಗಿದೆವು. ರೇಡಿಯೊ ನಮ್ಮ ಮನೆ ಪ್ರವೇಶಿಸಿದ ಸಂದರ್ಭದಲ್ಲಿ ನಿಜಕ್ಕೂ ಹಬ್ಬದ ಸಡಗರವಿತ್ತು. ತಾಯಿ ಮೊದಲ ಮಗುವನ್ನು ಹೆರುವ ಸಂಭ್ರಮ ಅದಾಗಿತ್ತು. ಕಾಮನ ಬಿಲ್ಲನ್ನು ಕಂಡು ನರ್ತಿಸುವ ನವಿಲಿನ ಸಡಗರ ಕಂಡಂತ ಅನುಭವವಾಗಿತ್ತು. ಶನಿವಾರ ಮತ್ತು ಭಾನುವಾರ ರಾತ್ರಿ ಮಲಗುವವರೆಗೆ ಆ ರೇಡಿಯೋಗೆ ಬಿಡುವೆನ್ನುವುದೇ ಇರುತಿರಲಿಲ್ಲ. ವಾರಕ್ಕೊಮ್ಮೆ ಅದರ ಶೆಲ್ ಬದಲಾಯಿಸಬೇಕಾಗಿತ್ತು. ನಮ್ಮ ಮನೆಗೆ ರೇಡಿಯೊ ಬಂದಿರುವ ವಿಷಯವನ್ನು ಇಡೀ ಶಾಲೆಯಲ್ಲಿ ಗೆಳೆಯರ ಮುಂದೆ ಹೇಳಿಕೊಂಡು ಜಂಭ ಪಟ್ಟು ಕೊಂಡಿದ್ದೆ. ರಾತ್ರಿ ಮಲಗುವಾಗ ಹಾಸಿಗೆಯಲ್ಲಿ ಅದನ್ನಿಟ್ಟುಕ್ಕೊಂಡು ನಿದ್ರೆ ಮಾಡುತ್ತಿದ್ದೆ. ಎಷ್ಟೋ ವರ್ಷಗಳ ಕಾಲ ಆ ರೇಡಿಯೋ ನನ್ನ ಬದುಕಿನ ಅವಿಭಾಜ್ಯ ಅಂಗವೇ ಆಗಿಹೋಗಿತ್ತು.
ಇದೆಲ್ಲಾ ಏತಕ್ಕೆ ನೆನಪಾಯಿತೆಂದರೆ ಮೊನ್ನೆ ಮನೆಗೆ ಎಲ್.ಇ.ಡಿ ಎನ್ನುವ ಆಧುನಿಕ ತಂತ್ರಜ್ಞಾನದ ಟಿ.ವಿ ಖರೀದಿಸಿದೆ. ಅದು ಮನೆಗೆ ಬಂದಾಗ ದಿನನಿತ್ಯ ಹಣ್ಣು – ತರಕಾರಿ ಖರೀದಿಸಿದ ಅನುಭವದಂತಿತ್ತು. ನನ್ನ ಮಕ್ಕಳಿಗೂ ಅದು ಸಹಜ ಕ್ರಿಯೆಯಾಗಿ ಗೋಚರಿಸಿತು. ಯಾವುದೇ ಸಡಗರ – ಸಂಭ್ರಮ ಕಂಡು ಬರಲೇ ಇಲ್ಲ. ನಾನು 30 ವರ್ಷಗಳ ಹಿಂದಿನ ದಿನಗಳನ್ನು ಮೆಲುಕು ಹಾಕುತ್ತಾ ಆ ದಿನಗಳಲ್ಲಿ ಪಟ್ಟ ಸಂಭ್ರಮವನ್ನ ನೆನಪಿಸಿಕೊಳ್ಳತೊಡಗಿದೆ. ಆದರೆ ಅಂದು ರೇಡಿಯೋ
ತಂದು ಕೊಟ್ಟ ಖುಷಿ ಇಂದು ಅನುಭವಿಸಲು ಸಾಧ್ಯವಾಗಲೇ ಇಲ್ಲ.
 

‍ಲೇಖಕರು G

June 24, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: