ಎನ್ಕೆ ಹನುಮಂತಯ್ಯ ಅವರ ಕವನ ಸಂಕಲನ ‘ಮಾಂಸದಂಗಡಿಯ ನವಿಲು‘
ಈ ಕೃತಿಯನ್ನು ‘ಲಡಾಯಿ ಪ್ರಕಾಶನ’ ಪ್ರಕಟಿಸಿದೆ.
ಈ ಕೃತಿಯ ಕುರಿತು ದೇವರಾಜ್ ಹುಣಸಿಕಟ್ಟಿ ಅವರ ಅನಿಸಿಕೆ ಇಲ್ಲಿದೆ.
-ದೇವರಾಜ್ ಹುಣಸಿಕಟ್ಟಿ
“ಅಸ್ಪೃಶ್ಯ
ಹೌದು ನಾನು ಗೋವು ತಿಂದು
ಗೋವಿನಂತಾದವನು
ನೀವು ನೀಡುವ ಮೇವು ತಿಂದು
ನಿಮ್ಮಂಥ ಮನುಷ್ಯನಾಗಲಾರೆ
ಮನುಷ್ಯರ ತಿನ್ನಲಾರೆ…”
ದಲಿತರ ನೋವನ್ನು ಹೀಗೆ ಹಡೆದು ಕಾವ್ಯಕ್ಕೆ ಒಂದು ತಾಯಿ ಬೇರು ಇರಬೇಕು ಎಂದು ತೋರಿಸಿದವರು ಕವಿ ಎನ್ಕೆ ಹನುಮಂತಯ್ಯ್.ಬಡತನ, ಹಸಿವು, ದಬ್ಬಾಳಿಕೆ, ಶೋಷಣೆ ಎಲ್ಲವನ್ನು ಎಳೆವೆಯಲ್ಲಿ ಕಂಡು ಉಂಡವರ ಕಾವ್ಯ ಅವರದ್ದು.
“ಅವ್ವ ಮತ್ತು ಸೀರೆ ” ಕವಿತೆಯಲ್ಲಿ ಅದನ್ನ ನಿರೂಪಿಸಿದ್ದಾರೆ…
“ಊರಗೌಡರ ಅದ್ದೂರಿ ಮದುವೆಯಲಿ
ಮಿಕ್ಕಿದ್ದ ಹಳಸಲನ್ನ
ಪಾಯಸ ತಿಂದು
ಹೊಟ್ಟೆ ಯಾಕೋ
ಗೊಡ ಗೊಡ ಎಂದಾಗ ಅವ್ವನ
ಬಟ್ಟೇಗೆಲುಜ್ಜಿದ್ದೆ “
ಇಡೀ ಕಾವ್ಯ ಸ್ಥಾಪಿತ ವ್ಯವಸ್ಥೆಯ ಪ್ರಶ್ನಿಸುತ್ತ, ವ್ಯಂಗ್ಯ ವಾಗಿ ತಿವಿಯುತ್ತ, ಎಚ್ಚರದ ಧ್ವನಿಯ ಮೊಳಗಿಸುತ್ತ. ಎಲ್ಲ ಬಗ್ಗಡಗಳಿಂದ ಬಿಡುಗಡೆ ಕಾಣಬಯಸುತ್ತೆ. ಅದು ಅವರ ಕಾವ್ಯದ ಸೊಗಸು. ಉದಾಹರಣೆಗೆ “ನನ್ನ ಗೂಡಲಿ ” ಕವಿತೆಯ ಈ ಸಾಲುಗಳ ಒಮ್ಮೆ ಓದಿ.
“ಹಸಿದೊಡಲ ಬಾನಿನಲ್ಲಿ
ಧೂಮಕೇತು ಮೂಡಿದಾಗ
ಆಗಸದೆಡೆ ತಲೆಯೆತ್ತಿ
ನಾನೇಕೆ ನೋಡಲಿ”
ಬಡತನದ ಝರಿಯುಕ್ಕಿ
ಜೋಗಜಲವ ತೋರುವಾಗ
ಶಿವಮೊಗ್ಗೆವರೆಗೂ ಬಗ್ಗಿ
ನೋಡಲೇಕೆ ಹೋಗಲಿ?
ಅವರ ಕಾವ್ಯದ ಇನ್ನೊಂದು ಸೊಗಸು ಪ್ರತಿಮೆ, ರೂಪಕ ಭಾಷೆ, ಭಾವ ತೀವ್ರತೆ ಇವುಗಳಿಂದಾಗಿ ಓದುಗ ದಿಗಿಲು ಗೊಳ್ಳದೆ ಇರಲಾರ. ಕವಿತೆ ಮೂಲಕ ನಮ್ಮ ಹೃದಯದ ಕಿಟಕಿಗೆ ಕೈ ಹಾಕ ಬಲ್ಲ ಕವಿ ಅವರು. “ಮಾತಿಲ್ಲದ ಮೇಲೆ ” ಕವಿತೆಯ ಸಾಲುಗಳ ನೋಡಿ…
“ನಿನ್ನಂತೆ ಊರ ಹಾದಿಗೆ
ಹೆಜ್ಜೆಯುಜ್ಜಿ
ಯಾರದೋ ತೋಟವನು
ಬೆವರಲೆಜ್ಜಿ
ಮುಟ್ಟಾದ ಹಟ್ಟಿಯಲಿ
ಉಣ್ಣಲಾರದೆ, ಸಣ್ಣಗಾಗಿರುವೆ “
“ನಿನ್ನಂತೆ ಕಣಿಗಲೆ ಹೂ
ಬೇವಿನ ಮಡೆ ಹೊತ್ತು
ತೊಡೆ ತೋಳಿನಲಿ
ಬಾಳಿನ ಜಾತ್ರೆ ಕಾಣಲಾರದೆ
ಯಾರ ಮುಷ್ಠಿಗೋ
ನನ್ನ ಬೀಜಗಳ ನೀಡಿರುವೆ “
ನೋವು ಹಾಡಾಗ ಬಲ್ಲದೆ? ಖಂಡಿತ ಆಗಬಲ್ಲದು. ಅದು ಸಪ್ತ ಸ್ವರಗಳ ಪಡೆದು ನೋವನ್ನೇ ಪದಗಳಲ್ಲಿ ಹಡೆಯಬಹುದು ಕವಿತೆಯೊಂದನ್ನು ಅನ್ನುವುದು ನಿಜ ಅನಿಸಿದ್ದು ಎನ್ ಕೆ ಹನುಮಂತಯ್ಯ್ ಅವರ ಕವಿತೆಗಳ ಓದಿದಾಗ…ಉದಾಹರಣೆಗೆ ಅವರು ತಂದೆಯ ಕುರಿತು ಬರೆದ ಕವಿತೆಯ ಸಾಲುಗಳ ನೋಡಿ…
“ಯಜಮಾನರ ಗದ್ದೆಯೊಳಗೆ
ಗೊಬ್ಬರವಾದವನು…
ಹಾಳೆಯೊಳಗಿನ ಹಕ್ಕಿಗಳು
ನಮ್ಮ ಮುದಿಗಣ್ಣ
ಹಣ್ಣ ತೋಟದಲಿ ಹಾರಾಡದಂತೆ
ಯಾರ ಸೇವೆಗೋ
ಕವಣೆಯ ಬೀಸಿ ಕಾದವನು.”
“ಅವ್ವನ ಜಾರುವ ಸೆರಗಿಗೆ
ಕೊರಗಿ
ಅಪ್ಪ ನೇಣಿಗೆ ಸತ್ತದ್ದು
ಬ್ರಾಹ್ಮಣರ ಕೇರಿಯಲಿ
ನಾಯಿ ಬಾಡ ಕಚ್ಚಿ ದೌಡಾಯಿಸಿದಂತೆ
ಅಪ್ಪನ ಹೆಣವ ತೂತು ಚಾಪೆಗೆ ಸುತ್ತಿ
ಸ್ಥಳದಿಂದ ಸ್ಥಳಕ್ಕೆ ಹಿಡಿದಿದ್ದು.”
ಪ್ರೇಮ, ಕಾಮ, ವಿರಹ ಎಲ್ಲ ಕವಿಗಳ ಕಾಡಿದ ಹಾಗೆ ಅವರನ್ನು ಕಾಡಿದೆ, ಪದಗಳಲ್ಲಿ ಹಾಡಿದೆ, ಮೂಡಿದೆ. ಉದಾಹರಣೆಗೆ “ಮರೆತಿಲ್ಲ ನನ್ನವಳೇ ” ಹೆಜ್ಜೆಯ ಹಿಂದೆ ” ಕವಿತೆಗಳು ಕನ್ನಡಿಹಾಗೆ ಇವೆ.
ಬಾ ಗೆಳತಿ
ಚುರಾದ ಮುಖಗಳನ ಆಯೋಣ
ಎಲ್ಲಾದರೂ
ನಗು ಮೆತ್ತಿಕೊಂಡಿದ್ದರೆ
ನಮ್ಮ ತುಟಿಗಳಿಗೆ ತುಂಬೋಣ “
” ಹೂವಿಗಾಗಿ ಹುಚ್ಚನಾಗಿದ್ದಾಗ
ಸರಿ ರಾತ್ರಿಗಳಲ್ಲಿ
ಅಲೆದಲೆದು ಕೂಗಿ
ಕಪ್ಪು ಕೇದಿಗೆಯ ಹೂವಿತ್ತು
ನೀನು ಅತ್ತಿದ್ದ…”
ಅವಮಾನ,ನೋವು, ಸಂಕಟ ಇವರ ಇಡೀ ಕಾವ್ಯದ ಹೂರಣ. ಇಡೀ ಒಂದು ಕಣ್ಣೋಟ ಅದನ್ನೇ ಉಸಿರಾಡಿದಂತೆ ಬರೆದು ಹಗುರಾದ ಕವಿ ಎನ್ ಕೆ ಹನುಮಂತಯ್ಯ್ ಅನಿಸುತ್ತೆ. ಅವರ “ಕೂಲಿಯವರು” ಕವಿತೆ ನೋಡಿ..
” ಇವರು ಬೆವರಿನ ನದಿಯ
ಮೈಗೆ ಸುತ್ತಿಕೊಂಡು
ಮಣ್ಣು ಮುಟ್ಟಿದರೆ
ಹುಟ್ಟುವುದು ನೆಲದ ಕಾವಾಲುಗರಾರ ಹೊಟ್ಟೆಗಿಷ್ಟು
ಕೂಳು “
ಹೀಗೆ ಬದುಕಿನ ಪ್ರತಿ ಮಗ್ಗುಲನ್ನು ಕವಿತೆಯಾಗಿಸಿ ಬರೆದು ಹಗುರಾದ ಕವಿ ಎನ್ ಕೆ ಹನುಮಂತಯ್ಯ್ ಅವರ ಈ ಸಂಕಲನಕ್ಕೆ ನಾಡಿನ ಹಿರಿಯ ಸಂಸ್ಕೃತಿ ಚಿಂತಕ ಶ್ರೀ ಯುತ ರಹಮತ ತರಿಕೆರೆ ಅವರು ಮುನ್ನುಡಿ ಬರೆದು ಹರಿಸಿದ್ದಾರೆ.
ಲಡಾಯಿ ಪ್ರಕಾಶನ ಈ ಸಂಕಲನ ಪ್ರಕಟಿಸಿದೆ. ಡಾ. ಎಚ್. ಎಸ್ ಅನುಪಮಾ ಅವರ ಅಭಿಪ್ರಾಯ ಕೂಡ ಈ ಸಂಕಲನಕ್ಕೆ ಇದೆ.ಹೃದಯ ಸ್ಪರ್ಶಿ ಕವಿತೆಗಳು ನಿಮ್ಮ ಎದೆಯ ನೆಲವ ತೇವಗೊಳಿಸುತ್ತವೆ ಅಂತಾ ಖಂಡಿತ ಹೇಳಬಲ್ಲೆ. ಬದುಕಿನ ಜಂಜಡಗಳ ಯಾವ ಅಳಕೂ ಇಲ್ಲದೇ ಕಾವ್ಯ ವಾಗಿಸಿದ ಕವಿಗೆ ಕನ್ನಡ ಸಾಹಿತ್ಯ ಜಗತ್ತು ಸದಾ ಚಿರಋಣಿ ಅಂತಾ ಹೇಳುತ್ತಾ ಅವರದೇ ಕಾವ್ಯದ ಕೆಲ ಸಾಲುಗಳ ನೆನೆಯುತ್ತ , ಜಗದ ನೋವು ಸಂಕಟವನ್ನೇ ಬಸಿದು ಬರೆದ ಕವಿಯ ಕುರಿತು ನನ್ನ ಮಾತಿಗೆ ವಿರಾಮವಿಡುತ್ತೇನೆ.
ಬಾ ಗೆಳತಿ
ಎಲ್ಲಾದರೂ
ಅಳು ಅಂಟು ಕೊಂಡಿದ್ದರೆ
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳುವ
ಬಾ ಗೆಳತಿ
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ
ಅಲ್ಲಿ ಬೀಜಗಳಾಗಿ ಮೊಳೆಯೋಣ..






0 Comments