ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತೀರದೂರಿನ ತುಮುಲಗಳು…' – ನಸ್ರಿನ್ ಬಾನು

ನಸ್ರಿನ್ ಬಾನು

‘ಸಿರಿ’ ತುಳು ನಾಡಿನ ಹೆಣ್ಣು ದೈವ ಕುರಿತು ನಮ್ಮ ಮೇಷ್ಟ್ರು ಅಂದೊಮ್ಮೆ ಪಾಠ ಮಾಡಿದ ನೆನೆಪು. ಬಂಟ ಸಮುದಾಯದ ಈ ಹೆಣ್ಣು ಪುರುಷ ಸಮಾಜದ ದೌರ್ಜನ್ಯದ ವಿರುದ್ದ ಮೊದಲು ದನಿ ಎತ್ತಿದ ಹೆಣ್ಣು.  ತುಳು ನಾಡಿನಲ್ಲೆ ಗಂಡನಿಗೆ ಮೊದಲು ವಿಚ್ಛೆದನ ನೀಡಿದ ಮಹಿಳೆ ಎಂಬ ನಂಬಿಕೆ ಅವರಲ್ಲಿ ಗಾಡವಾಗಿದೆ ಎಂಬೆಲ್ಲಾ ಹಳೆಯ ನೆನಪುಗಳನ್ನು ಇಂದು ಮತ್ತೊಮ್ಮೆ ಕೆದುಕಿ  ನೋಡಬೇಕೆನಿಸುತ್ತದೆ.  ಇದಕ್ಕೆ ಕಾರಣ ಇಂದು ನನಗೆ ತುಳು ನಾಡಿನ ಅಥವಾ ಕರಾವಳಿ ಮಹಿಳೆಯ ಕುರಿತು ಅಧ್ಯಯನ ನಡೆಸುವ ಅವಕಾಶ ಸಿಕ್ಕಿದ್ದು.   ತುಳುನಾಡು ಅಥವಾ ಕರಾವಳಿ ಪ್ರದೇಶದ ಮಹಿಳೆ ಇತರ ಪ್ರದೇಶಗಳ ಮಹಿಳೆಗಿಂತ ವಿಭಿನ್ನ ಅಂದರೆ ಅಲ್ಲಿ ಮಾತೃಪ್ರದಾನ ವ್ಯವಸ್ಥೆ ಇರುವುದರಿಂದ ಹೆಚ್ಚಿನ ಬಲಶಾಲಿ ಹಾಗೂ ಸ್ವಾತಂತ್ರಳು ಆಗಿರಬಹುದು ಎಂಬೆಲ್ಲಾ ಊಹೆಗಳೊಂದಿಗೆ ಕರಾವಳಿ ಪ್ರದೇಶಕ್ಕೆ ಹೋದ ನನಗೆ ನನ್ನ ಅಭಿಪ್ರಾಯವನ್ನೆ ತಲೆಕೆಳಗಾಗಿಸುವಂತ ಸಂಗತಿಗಳಿಂದ ನಿರಾಶೆಯಾಗಿದ್ದು ಸುಳ್ಳಲ್ಲ.   ಇಲ್ಲಿಯೂ ಮಹಿಳೆ ಪುರುಷರ ಮರ್ಜಿಗೆ ಒಳಗಾಗಿಯೆ ಬದುಕುತಿದ್ದಾಳೆ.  ಇತರ ಪ್ರದೇಶಗಳಿಗಿಂತ ಒಂದು ಪಟ್ಟು ಹೆಚ್ಚಿನ ಶೋಷಣೆಯನ್ನು ಅನುಭವಿಸುತಿದ್ದಾಳೆ. ಈ ಭಾಗದಲ್ಲಿ ಹೆಚ್ಚಾಗಿಯೇ ಪ್ರಚಲಿತವಿರುವ ಮೂಡನಂಬಿಕೆಗಳಿಂದ, ಕೋಮುಕಲಹಗಳಿಂದ, ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಶೋಷಣೆಗೆ ಒಳಗಾಗುತಿದ್ದಾಳೆ.

ಈ ಮೇಲಿನ ಅಂಶಗಳ ಹಿನ್ನಲೆಯಲ್ಲಿ ನೋಡಿದಾಗ ಇಲ್ಲಿಯೂ ಸಹ ಮಹಿಳೆಯನ್ನು ಕುರಿತು ಅನೇಕ ಸಮಸ್ಯೆಗಳಿವೆ, ಅವು ಬದಲಾಗಿಲ್ಲ ರೂಪಾಂತರಗೊಂಡಿವೆ ಎಂದರೆ ತಪ್ಪಾಗಲಾರದು. ಮಾತೃಪ್ರದಾನ ಸಂಸ್ಕೃತಿಯಿಂದ ಹೆಣ್ಣು ನೇರವಾಗಿ ಅಧಿಕಾರವನ್ನು ಪಡೆದುಕೊಂಡಿದ್ದರೂ ಅದನ್ನು ಪರೋಕ್ಷವಾಗಿ ಆಳುವವನು ಗಂಡನೆ ಆಗಿರುತ್ತಾನೆ. ಈ ನಿಟ್ಟಿನಲ್ಲಿ ಆಕೆ ಅನುಭವಿಸುವ ಶೋಷಣೆ ಯಾವ ಬಗೆ ಇದೆ ಎಂಬುದಕ್ಕೆ ಮಗ ಸತ್ತರೆ ಸೂತಕ, ಸೊಸೆ ಸತ್ತರೆ ಸೋಪಾನ ಎನ್ನುವಂತಹ ನುಡಿಮತ್ತುಗಳೆ ಸಾಕ್ಷಿ.  ಅಲ್ಲದೆ ಇಲ್ಲಿನ ಕೆಳಸಮುದಾಯಗಳ ಮಹಿಳೆಯರ ಪಾಡಂತೂ ದೇವರಿಗೆ ಪ್ರೀತಿ.  ಮಲೆಕುಡಿಯರು, ಕೊರಗ ಜನಾಂಗದವರ ಮಹಿಳೆಯರನ್ನು ಪ್ರಾಣಿಗಳಂತೆ ಕೀಳಾಗಿ ನಡೆಸಿಕೊಳ್ಳುಲಾಗುತ್ತದೆ ಎಂಬುದನ್ನು ಸ್ವತಃ ಅವರ ಬಾಯಲ್ಲೆ ಕೇಳಿದವರಿಗೆ ಕಣ್ಣು ಹನಿಗೂಡದೆ ಇರದು.  ಅಲ್ಲದೆ ಈ ಪ್ರದೇಶದಲ್ಲಿ ಅತಿ ಹೆಚ್ಚಾಗಿರುವ ಹೆಣ್ಣು ಭ್ರೂಣಹತ್ಯೆ. ಒಂದು ಅದ್ಯಯನದ ಪ್ರಕಾರ ಇಲ್ಲಿರುವ ಮಹಿಳೆಯರ ಸಂಖ್ಯೆ ಸರಾಸರಿ ಪುರುಷರ ಸಂಖ್ಯೆಗಿಂತ ಕಡಿಮೆ ಇದೆ.  ಇದನ್ನು ಕೇಳಿದ ತಕ್ಷಣ ಮಾತೃಪ್ರಧಾನ ಸಂಸ್ಕೃತಿ ಇರುವೆಡೆಯಲ್ಲಿಯೇ ಹೆಣ್ಣು ಭ್ರೂಣಹತ್ಯೆ ಇಷ್ಟು ಬಲಿಷ್ಟವಾಗಿದ್ದರೆ, ಇತರ ಪ್ರದೇಶಗಳಲ್ಲಿ ಯಾವ ಪ್ರಮಾಣದಲ್ಲಿರಬಹುದೆಂಬುದು ಪ್ರಶ್ನಾರ್ಹವಾದ ಸಂಗತಿ.  ಕೋಮುವಾದ ತನ್ನ ಕದಂಬ ಬಾಹುಗಳನ್ನು ಚಾಚಿರುವ ಈ ಪ್ರದೇಶಗಳಲ್ಲಿ ಇದರ ಪರಿಣಾಮದಿಂದ ಹೆಚ್ಚು ನೋವನ್ನು ಅನುಭವಿಸುವವಳು ಮತ್ತು ಇದರ ನೇರ ಫಲಾನುಭವಿಯಾಗುವವಳು ಮಹಿಳೆಯೆ.

ಆಚೆ ಹೋದ ತನ್ನ ಮಗ,ಅಣ್ಣ, ತಮ್ಮ,ಗಂಡ, ಅಪ್ಪನಿಗೋಸ್ಕರ ಹೊಸ್ತಿಲಲ್ಲಿ ಕೂತು ನಿಟ್ಟುಸಿರು ಬಿಡುತ್ತಾ ಕಾಯುವವಳು ಮಹಿಳೆ.  ಯಾವ ಸಂದರ್ಭದಲ್ಲಿ ಅವರ ಸಾವಿನ ಸುದ್ದಿ ಕೇಳುತ್ತೇನೊ ಎಂಬ ಭೀತಿಯಲ್ಲಿ ದಿನಕಳೆಯುವ ಹೆಣ್ಣಿನ ಒಳತುಡಿತಗಳಿಗೆ ಬೆಲೆ ತೆರುವವರು, ಅರ್ಥ ಸೂಚಿಸುವವರು ಇಲ್ಲದಂತಹ ಶೋಚನೀಯ ಸ್ಥಿತಿ ಇರುವಲ್ಲಿ ಹೇಗೆ ತಾನೆ ಮಾತೃಪ್ರದಾನ ಸಮಾಜದ ಹರಹನ್ನು ಅರ್ಥೈಸಿಕೊಳ್ಳಲು ಸಾದ್ಯ.   ಕಾಸರಗೋಡು ಮತ್ತು ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಂಡೋಸಲ್ಫಾನ್ ಪರಿಣಾಮದಿಂದ ಪ್ರತಿಯೊಂದು ಮನೆಯಲ್ಲಿಯೂ ಅಂಗವಿಕಲ ಮಕ್ಕಳಿರುವುದನ್ನು ಕಾಣಬಹುದು.  ಆ ಮಕ್ಕಳನ್ನು ಸಾಕುವಲ್ಲಿ, ಸಲಹುವಲ್ಲಿ ಆ ಮಹಿಳೆಯರು ಅನುಭವಿಸುವ ನೋವು ಹೇಳತೀರದು.  ಈ ನೋವಿನ ಬದುಕಲ್ಲಿ ಆ ಪ್ರದೇಶದ ಪ್ರತಿಯೊಬ್ಬ ತಾಯಿಯು ಮಾನಸಿಕ ಬಂಜೆಯಾಗಿದ್ದಾಳೆ.  ಇವುಗಳ ಮದ್ಯೆ ಅವಳ ಆತ್ಮಹತ್ಯೆ ಮಾಡಿಕೊಳ್ಳದೆ ಬದುಕುವುದು ಆಕೆಯ ದೊಡ್ಡ ಸಾಧನೆ ಎಂದರೆ ಅತಿಶಯೋಕ್ತಿಯಾಗಲಾರದು.    ಈ ಭಾಗದ ಮುಸ್ಲಿಂ ಮಹಿಳೆಯ ಸ್ಥಿತಿಯೂ ಮತ್ತೊಂದು ಬಗೆಯದು. ಹಿಂದಿನಿಂದಲೂ ಹೆಚ್ಚು ಶಿಕ್ಷಣ ಪಡೆಯದ ಆಕೆಯ ಬದುಕು ದುಬಾಯಿಗೆ ಹೋದ ತನ್ನವರನ್ನು ಕಾಯುವುದರಲ್ಲೆ ಮುಗಿದು ಬಿಡುತ್ತದೆ.    ಈ ಎಲ್ಲಾ ಅಂಶಗಳನ್ನು ಗಮನಿಸಿದ ನನಗೆ ಕೊನೆಗೆ ಅನಿಸಿದ್ದು ತುಳುನಾಡಿನ ಮಹಿಳೆಯರು ಇತರ ಪ್ರದೇಶಗಳ ಮಹಿಳೆಯರಿಗಿಂತ ತಾವು ಅನುಭವಿಸುವ ನೋವು,ದುಃಖ ದುಮ್ಮಾನ, ಒಳತೋಟಿಯ ತುಮುಲಗಳಲ್ಲಿ ಮಾತ್ರ ವಿಭಿನ್ನ ಅಷ್ಟೆ …

‍ಲೇಖಕರು avadhi

7 February, 2014

1 Comment

  1. Naveen

    ಮತ್ತೊಮ್ಮೆ ನಮ್ಮ ಅಧ್ಯಯನ ಪ್ರವಾಸದ ದಿನಗಳ ನೆನಪಾಯಿತು…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading