ಶ್ರೀದೇವಿ ಕೆರೆಮನೆ
(ತಿನ್ನುವ ಹಕ್ಕಿದೆ. ಆದರೆ ಬಿಸಾಡುವ ಹಕ್ಕಿಲ್ಲ ಇದು ಶಿಕ್ಷಣ ಇಲಾಖೆಯ ಅಕ್ಷರದಾಸೋಹ ಯೋಜನೆಯ ಧ್ಯೇಯವಾಕ್ಯ. ಅದನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಬೇಕಾಗಿದೆ. ತಿನ್ನುವ ಪ್ರತಿ ಕಾಳಿನ ಮೇಲೂ ತಿನ್ನುವಾತನ ಹೆಸರು ಬರೆದಿರುತ್ತದೆಯಂತೆ. ಆದರೆ ಚೆಲ್ಲುವ ಪ್ರತಿ ಅಗುಳೂ ಚೆಲ್ಲುವಾತನಿಗೆ ಹಿಡಿಶಾಪ ಹಾಕುತ್ತದೆ ಎಂಬುದನ್ನು ತಿಳಿಸಬೇಕಿದೆ. ದುಂದುವೆಚ್ಛವೇ ಶ್ರೀಮಂತಿಕೆಯ ಲಕ್ಷಣ ಎಂಬಂತೆ ಅವಶ್ಯಕತೆಗಿಂತ ಹೆಚ್ಚನ್ನು ಬಡಿಸಿಕೊಂಡು ಚೆಲ್ಲುವುದನ್ನೇ ಪ್ಯಾಶನ್ ಎಂಬಂತೆ ಬಿಂಬಿಸುತ್ತಿದ್ದೇವೆ. ಉಳಿಸಿದ ಒಂದು ಕಾಳು ಬೆಳೆದ ನೂರು ಕಾಳಿಗಿಂತ ಶ್ರೇಷ್ಟ ಎಂಬ ಮಾತನ್ನು ನೆನಪಿಡಬೆಕಾದದ್ದು ಸಧ್ಯ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕಿದೆ.ಹೊಟ್ಟೆ ತುಂಬಿದ ಸಾವಿರಾರು ಜನರಿಗೆ ಒತ್ತಾಯ ಪಡಿಸಿ ಉಣಬಡಿಸುವುದಕ್ಕಿಂತ, ಹಸಿದ ಹತ್ತು ಹೊಟ್ಟೆಯನ್ನು ತುಂಬಿಸುವುದು ನಮ್ಮ ಆಧ್ಯತೆಯಾಗಬೇಕಿದೆ. ಉಂಡ ಎಲೆಯನ್ನೂ ಹಸಿದ ನಾಯಿ, ದನಕರುಗಳೊಟ್ಟಿಗೆ ಜಗಳವಾಡಿ ಕಸಿದುಕೊಳ್ಳುವ ಸ್ಥಿತಿಯಲ್ಲಿರುವವರೂ ಇದ್ದಿರುವಾಗ ನಮ್ಮ ಅದ್ದೂರಿತನಕ್ಕೊಂದು ಕಡಿವಾಣವನ್ನು ನಾವೇ ವಿಧಿಸಿಕೊಳ್ಳಬೇಕಿದೆ. ಪೋಲು ಮಾಡುವ, ಅನಾವಶ್ಯಕವಾಗಿ ಚೆಲ್ಲುವುದಕ್ಕಿಂತ ಹಸಿದವರಿಗೊಂದು ತುತ್ತು ನೀಡುವುದೇ ನಿಜವಾದ ಶ್ರೀಮಂತಿಕೆ ಹಾಗೂ ಅದೇ ಒಳ್ಳೆಯ ಫ್ಯಾಶನ್ ಎಂಬುದನ್ನು ಕೊನೆಯ ಪಕ್ಷ ಯುವಜನತೆಯಲ್ಲಾದರೂ ಅಥವಾ ಅವರಿಗಿಂತ ಚಿಕ್ಕವರಲ್ಲಿಯಾದರೂ ಮೂಡಿಸಬೇಕಾದ ತುತರ್ು ಅಗತ್ಯದಲ್ಲಿ ನಾವಿದ್ದೇವೆ.)
ದಿನವಿಡಿ ಇಂಟರ್ನೆಟ್ ಹಚ್ಚದಿದ್ದರೆ ದಿನದ ಕೊನೆಯಲ್ಲಿ ಸುಮಾರು ಇಪ್ಪತೈದರಿಂದ ಮೂವತ್ತು ವಿಡಿಯೋಗಳು, ಸುಮಾರು ಐವತ್ತು ಇಮೇಜ್ಗಳು ವ್ಯಾಟ್ಸ ಆಪ್ಗೆ, ಫೇಸ್ಬುಕ್ ಮೆಸೆಂಜರ್ಗೆ, ವಿ-ಚಾಟ್, ವೈಬರ್, ಲೈನ್, ನಿಂಬೂಜ್, ಹೈಕ್ಗೆ ಬಂದು ಬಿದ್ದಿರುತ್ತದೆ. ಅದರಲ್ಲಿ ಎಷ್ಟೋ ವಿಡಿಯೋಗಳನ್ನು ನೋಡಿ ನಕ್ಕು ಡಿಲಿಟ್ ಮಾಡಿಬಿಡುತ್ತೇನೆ. ಆದರೆ ಕೆಲವೊಂದನ್ನು ಮಾತ್ರ ಸೇವ್ ಮಾಡಿಕೊಳ್ಳುತ್ತೇನೆ. ಮಕ್ಕಳಿಗೆ ತೋರಿಸಲೆಂದು. ಅದರಲ್ಲೂ ದೇಶಭಕ್ತಿಯ, ಸೈನಿಕರ, ಸ್ವಚ್ಛತೆಯ ಕುರಿತಾದ, ಪರೋಪಕಾರದ, ಮಾನವೀಯತೆಯ, ವೈಜ್ನಾನಿಕವಾಗಿ ಉಪಯುಕ್ತವಾಗಿರುವ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಆಹಾರದ ದುಂದುವೆಚ್ಛದ ಬಗ್ಗೆ ಹೇಳುವ ವಿಡಿಯೋಗಳಿದ್ದರೆ ಕರೆದು ತೋರಿಸುತ್ತೇನೆ. ಅದರಲ್ಲೂ ಇದೇ 16ರಂದು ವಿಶ್ವ ಆಹಾರ ದಿನವನ್ನು ಆಚರಿಸಿದೆವು. ಅಂದು ಬಂದ ಹಲವಾರು ವಿಡಿಯೋಗಳು ನಿಜಕ್ಕೂ ಕಣ್ಣು ತೆರೆಸುವಂತಿದ್ದವು. ನಾವು ಒಂದು ದಿನದ ಪಾರ್ಟಿಯ ಹೆಸರಲ್ಲಿ ಪೋಲು ಮಾಡುವ ಆಹಾರ ಪದಾರ್ಥಗಳು ಸೋಮಾಲಿಯಾದ ಒಂದು ಪ್ರಾಂತ್ಯದ ಮಕ್ಕಳಿಗೆಲ್ಲ ಒಂದು ದಿನ ಸಾಕಾಗುತ್ತದೆ ಎಂಬ ಒಂದು ವಿಡಿಯೋ ನಿಜಕ್ಕೂ ಹೃದಯಸ್ಪರ್ಶಿಯಾಗಿತ್ತು. ಹನಿ ಹನಿ ನೀರನ್ನೂ ಉಳಿಸಬೇಕು ಎಂದು ಬೊಮ್ಡಾ ಹೊಡೆಯುವ ನಾವು ಮನುಷ್ಯರೆಂದುಕೊಂಡವರೇ ಹರಿದು ಪೋಲಾಗುವ ನೀರನ್ನು ನಲ್ಲಿ ನಿಲ್ಲಿಸಬೇಕು ಎಂದುಕೊಲ್ಳದೇ ನಿರ್ಲಕ್ಷಿಸಿ ಓಡಾಡುವಾಗ, ಯಕಶ್ಚಿತ್ ಒಂದು ಮಂಗ ನಲ್ಲಿ ನಿಲ್ಲಿಸಿ ಮನುಷ್ಯರ ಮುಖಕ್ಕೆ ಹೊಡೆದಂತೆ ಮಾಡುವ ವಿಡಿಯೋ ನಿಜಕ್ಕೂ ನಮ್ಮನ್ನು ಆಲೋಚನೆಗೆ ಹಚ್ಚುತ್ತದೆ.

ಕೆಲವು ವರ್ಷಗಳ ಹಿಂದೆ ಇಪ್ಪತ್ತೊಂದನೆಯ ಶತಮಾನದ ಮಧ್ಯಭಾಗದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತದೆ ಎಂದು ಆಥರ್ಿಕತಜ್ಞರು, ಸಾಮಾಜಿಕತಜ್ಞರು ಹಾಗೂ ಇನ್ನಿತರ ಪರಿಣಿತರು ಅಭಿಪ್ರಾಯ ಪಡುತ್ತಲೇ ಬಂದಿದ್ದರು. ಆದರೆ ಅವರ ನಿರೀಕ್ಷೆಗಿಂತ ಮುಂಚಿತವಾಗಿಯೆ ಆಹಾರದ ಕ್ಷಾಮ ತಲೆದೋರಿದೆ. ನೀರಿನ ಅಭಾವ ಉಂಟಾಗಿದೆ.
ಒಂದು ಕಾಲವಿತ್ತು. ನಮ್ಮಲ್ಲಿ ಕೃಷಿಭೂಮಿ ಅಧಿಕವಾಗಿತ್ತು. ಕೃಷಿಕರೂ ಬಹುಸಂಖ್ಯೆಯಲ್ಲಿದ್ದರು. ಹೆಚ್ಚು ಕೃಷಿಭೂಮಿ ಇರುವ ಜಮೀನ್ದಾರ ಹೆಚ್ಚು ಹೆಚ್ಚು ಗವರವಕ್ಕೆ ಪಾತ್ರರಾಗುತ್ತಿದ್ದರು. ಮನೆಯಲ್ಲೊಂದು ಧಾನ್ಯದ ಕಣಜ, ಒಂದಿಡೀ ದೊಡ್ಡ ಗೊಡೊನಿನ ತುಂಬ ಪೇರಿಸಿಟ್ಟ ಅಕ್ಕಿ ಅಥವಾ ಭತ್ತದ ಚೀಲಗಳು, ಗೋದಿ, ಜೋಳ, ರಾಗಿಗ ಚೀಲಗಳನ್ನು ನೋಡಿಯೇ ಆತ ಎಂತಹ ಶ್ರೀಮಂತ ಎಂಬ ಅಂದಾಜು ಹುಟ್ಟುತ್ತಿತ್ತು. ಆತನಲ್ಲಿರುವ ದನಕರುಗಳು, ಗದ್ದೆ ಊಳಲು ಬೇಕಾದ ಎತ್ತಿನ ಜೋಡಿಯಿಂದಲೇ ಆತನ ಶ್ರೀಮಂತಿಕೆಯ ಲೆಕ್ಕಾಚಾರವಾಗುತ್ತಿತ್ತು. ನಮ್ಮ ಕಡೆ ಒಂದು ಮಾತಿದೆ. ನೂರಾ ಒಂದು ವಾರಲಾ( ಎತ್ತಿನ ಜೋಡಿ) ಹೊಂದಿರುವ ಜಮೀನ್ದಾರ ಎಂದು. ಅಷ್ಟೆಲ್ಲಾ ನೋಡದಿದ್ದರೂ ಇರುವ ಗದ್ದೆ, ಹೊಲ, ಆತನ ದುಡಿಯುವ ರೀತಿಯನ್ನು ನೊಡಿ ಹೆನ್ಣು ಕೊಡುವ ಪದ್ದತಿ ಇತ್ತು. ಮನೆಯ ಅಂಗಳದಲ್ಲೋ, ವರಾಂಡದಲ್ಲೋ, ಪಡಸಾಲೆಯಲ್ಲೋ ಬತ್ತ, ಅಕ್ಕಿ, ಗೋದಿ, ಜೋಳದ ಚೀಲಗಳನ್ನು ಪೇರಿಸಿಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಅದೇ ಆ ಮನೆಯ ಇಂಟೀರಿಯರ್ ಡೆಕೋರೆಶನ್ ಸಹ ಆಗಿತ್ತು. ಆದರೆ ಮನೆಯ ಸ್ವಚ್ಛತೆಯ, ಒಳಾಂಗಣ ಅಲಂಕಾರದ ಕಲ್ಪನೆಗಳು ಬದಲಾಗುತ್ತ ಸಾಗಿದಂತೆ ಭತ್ತ, ಅಕ್ಕಿಯ ಚೀಲಗಳು ಒಳ ಮನೆಗೆ ಸಾಗಿದವು. ಕೊನೆಗೆ ಅದನ್ನೂ ಮೀರಿ ಮನೆಯಿಡೀ ಧೂಳುಮಯವಾಗುತ್ತದೆ, ಇಲಿ, ಹಾವು ಹುಳ ಹಪ್ಪಟೆ ಹಾಗೂ ಇತರ ಕ್ರಿಮಿ ಕೀಟಗಳ ಕಾರಣವೊಡ್ಡಿ ಭತ್ತದ ಚೀಲಗಳು ಮನೆ ಬಿಟ್ಟು ದೂರದ ಕಣಜಕ್ಕೋ, ಗೋಡೋನಿಗೋ ಸಾಗಿಸಲ್ಪಟ್ಟವು. ಮನೆ ಶಿಸ್ತಿನ ಸಿಪಾಯಿಯಾಯಿತು. ತರಕಾರಿ, ಹಣ್ಣು-ಹಂಪಲು, ಹೂವುಗಳಿಂದ ನಳನಳಿಸುತ್ತಿದ್ದ ಮನೆಯ ಹಿತ್ತಿಲು ಪಾಳು ಸುರಿಯಲಾರಂಭಿಸಿತು. ಕಾಲಿಗೆ ಮಣ್ಣೂ ತಾಗದಂತೆ ಮನೆಯ ಸುತ್ತಲೂ ನುಣ್ಣಗೆ ಸಿಮೆಂಟು ಮಾಡಿಸಿ ಸ್ವಚ್ಛತೆ ಕಾಪಾಡಿಕೊಂಡೆವು. ಗಿಡಗಳ ಬುಡಕ್ಕೆ ಬೀಳುತ್ತಿದ್ದ ಸಗಣಿ ಹೇವರಿಕೆಯಾಗತೊಡಗಿತು. ಗಿಡದ ಬುಡಗಳೆಲ್ಲ ಕಸ-ಕಡ್ಡಿಗಳನ್ನೆಲ್ಲ ಕಳೆದುಕೊಂಡು ಸ್ವಚ್ಛವಾದವು. ಕಸ-ಎಲೆಗಳಿಂದ ಸಿಗುತ್ತಿದ್ದ ಗೊಬ್ಬರಕ್ಕೆ ಬದಲಾಗಿ ರಾಸಾಯನಿಕ ಗೊಬ್ಬರ ಬಂತು. ಅಂತೂ ಊರು ಕೇರಿಗಳೆಲ್ಲ ಸ್ವಚ್ಛವಾಗಿ ರೋಗ ಮುಕ್ತವಾಯಿತೆಂದು ನಾವು ಬೀಗುವ ಹೊತ್ತಿಗೆ ಕೃಷಿ ತನ್ನ ಅಗ್ರ ಸ್ಥಾನ ಕಳೆದುಕೊಂಡಿತ್ತು. ಚಿಕ್ಕ ಪುಟ್ಟ ರೈತರನ್ನು ಬಿಡಿ, ಒಬ್ಬ ದೊಡ್ಡ ಜಮೀನ್ದಾರ ಕೂಡ ಈ ಗದ್ದೆ ಮಾಡ್ಕೊಳ್ಳೋದು ನನಗೇ ಇರಲಪ್ಪ. ನೀನು ಓದಿ ಚಿಕ್ಕದೊಂದು ಕೆಲಸ ಹಿಡಿ ಎನ್ನುವಂತಾದಾಗ ಕೃಷಿ ಮಾಡುವವರಾದರೂ ಯಾರು? ತುಂಬಾ ಶ್ರಮ ಬೇಡುವ, ವರ್ಷವಿಡೀ ಕೆಲಸ ಮಾಡಬೇಕಾದ ನೇಗಿಲ ಕೆಲಸ ಮಹತ್ವ ಕಳೆದುಕೊಳ್ಳಲಾರಂಭಿಸಿದ್ದೇ ಆಹಾರದ ಅಭಾವಕ್ಕೆ ಮೂಲ.
ಎಂದು ನಾವು ಮನೆಯ ಇಂಟೀರಿಯರ್ ಡೆಕೋರೇಶನ್ ಎಂಬ ಹೆಸರಿನಲ್ಲಿ ಸುಂದರವಾಗಿ ಕಟ್ಟಿಟ್ಟ ಅಕ್ಕಿ ಮೂಡೆಯನ್ನು ಎಲ್ಲೋ ಒಂದು ಮೂಲೆಗೆ ತಳ್ಳಿ, ನಂತರ ಮನೆಯಿಂದಲೂ ಹೊರ ಹಾಕಿದೆವೋ ಅಂದೇ ಕೃಷಿ ನಮ್ಮನ್ನು ಬಿಟ್ಟು ಹೋಗ ತೊಡಗಿತು. ಕೃಷಿಕರೇ ಇಲ್ಲ ಎಂದಾದ ಮೇಲೆ ಆಹಾರ ಉತ್ಪಾದನೆಯಾದರೂ ಹೇಗೆ? ಹೈಟೆಕ್ ಪದ್ದತಿಯಿಂದ ಬೆಳೆದ ದುಬಾರಿ ಆಹಾರ ಸಾಮಗ್ರಿಗಳು ಎಷ್ಟಂದು ಹೊಟ್ಟೆ ತುಂಬಿಸಿಯಾವು? ಪ್ರತಿಯೊಬ್ಬ ರೈತ ಕೂಡ ಈ ದುಡಿಯುವ ಕಷ್ಟ ತನ್ನ ತಲೆಮಾರಿಗೆ ಸಾಕು ಎಂದು ಹರಕೆ ಹೊತ್ತವರಮತೆ ವತರ್ಿಸುತ್ತಿರುವಾಗ ದೇಶದ ಅವಶ್ಯಕತೆಗೆ ತಕ್ಕ ಆಹಾರ ಉತ್ಪಾದನೆಯಾದರು ಹೇಗೆ ಸಾಧ್ಯ? ಅಪ್ಪ ಇನ್ನೂ ಗದ್ದೆ ಮಾಡುತ್ತಿದ್ದಾನೆ ಎಂದು ಹೇಳಿಕೊಳ್ಳುವುದೇ ನಮಗೊಂದು ಅವಮಾನದ ವಿಷಯವಾಗಿರುವಾಗ, ‘ಯಾಕ ಹಂಗೆ ಮರ್ಯಾದಿ ತೆಗೀತಿ? ಅಕ್ಕಿ ಪಾಕೆಟ್ ನಾ ತಂದ್ ಹಾಕ್ತೆ. ಮುಂದಿನ್ ವರ್ಷದಿಂದ ಗದ್ದೆ ಮಾಡಬೇಡ ಎನ್ನುವಾಗ ಪಾಪ ಅವರಾದರೂ ಏನು ಮಾಡಿಯಾರು?
ಹಾಗೆಂದು ಕೃಷಿ ಕೆಲಸ ಈಗ ನಾನು ಹೇಳಿದಷ್ಟೇನೂ ಸುಲಭವಲ್ಲ. ಕೃಷಿ ಎಂದರೆ ಒಬ್ಬನೇ ನಿಂತು ಎಲ್ಲವನ್ನೂ ಮಾಡಿಬಿಡಬಹುದಾದ ಸ್ಕಿಲ್ಡ್ ವರ್ಕ ಅಲ್ಲ. ಹಲವಾರು ಜನರು ಒಗ್ಗೂಡಿ ಮಾಡಬೇಕಾದ ಕೆಲಸ ಇದು. ಕೃಷಿ ಕಾರ್ಮಿಕರು, ಕೂಲಿಗಳು ಇಂದು ದುರ್ಲಭವಾಗುತ್ತಿರುವಾಗ ಕೃಷಿ ಮಾಡಿಯೇ ಜೀವನ ಸಾಗಿಸುತ್ತೇನೆ ಎಂಬುದು ಹುಂಬತನದ ಮಾತಾದೀತು. ಹಿಂದೆಲ್ಲ ಇಡೀ ಹಳ್ಳಿಯ ಜನ ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡಿಕೊಂಡು ಇಡೀ ಊರ ಬಯಲಿಗೇ ಬೇಲಿ ನಿರ್ಮಿಸಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದರು. ಕಾಲ ಬದಲಾದಂತೆ ಅಕ್ಕ ಪಕ್ಕದ ಮನೆಯವರನ್ನು, ಸಂಬಂಧಿಗಳನ್ನು ಸಹಾಯಕ್ಕೆ ಕರೆಯುವುದು ಅವಮಾನ ಎನ್ನಿಸತೊಡಗಿದಾಗ ಕೃಷಿ ಕಾರ್ಮಿಕರನ್ನು ಕರೆತರಲಾರಂಭಿಸಿದರು. ಅವರ ಮನೆ ಕೆಲಸ ಮುಗಿದ ನಂತರ ಮತ್ತೊಬ್ಬರ ಮನೆ, ನಂತರ ಇನ್ನೊಬ್ಬರ ಮನೆ… ಹೀಗೆ ಎಲ್ಲಿಂದಲೋ ಬಂದ ಕೃಷಿ ಕೂಲಿಗಳು ತಿಂಗಳುಗಟ್ಟಲೇ ಒಂದೇ ಊರಲ್ಲಿ ನಿಂತು ಎಲ್ಲರ ಮನೆ ಕೆಲಸ ಮಾಡಿ, ಅವರ ಮನೆಯಲ್ಲಿಯೇ ಊಟ-ತಿಂಡಿ ಮಾಡಿ ತಿಂಗಳ ನಂತರ ಹಣ ಎಣಿಸಿಕೊಂಡು ಹೊರಡುತ್ತಿದ್ದರು. ಆದರೀಗ ಎಲ್ಲರೂ ಆಧುನಿಕ ಜೀವನಕ್ಕೆ ಹೊಂದಿಕೊಂಡಿದ್ದೇವೆ. ಕೃಷಿ ಕಾರ್ಮಿಕರ ಸಂಖ್ಯೆಯೂ ಕಡಿಮೆ ಆಗಿದೆ. ಇದ್ದ ಕೆಲವೇ ಕೃಷಿ ಕಾರ್ಮಿಕರ ಸಂಬಳ, ದಿನಗೂಲಿ ಬಡ ರೈತನನ್ನು ಬಿಡಿ, ಸ್ವಲ್ಪ ಅನುಕೂಲಸ್ಥ ರೈತನಿಗೂ ಎಟುಕದಂತಾಗಿದೆ. ಲೆಕ್ಕ ಹಾಕಲು ಹೋದರೆ ಕೃಷಿ ಮಾಡಿ ಅಕ್ಕಿ ಬೆಳೆದು, ಅದನ್ನು ಸಂಸ್ಕರಿಸಿ ಅಕ್ಕಿ ಮಾಡಲು ಬೀಳುವ ಖರ್ಚು ನಿಭಾಯಿಸಲಾಗದಷ್ಟು ಹೆಚ್ಚುತ್ತಿದೆ. ಒಂದು ವರ್ಷಕ್ಕೆ ತೆಗೆದು ಕೊಳ್ಳುವ ಸಂಸ್ಕರಿಸಿದ ಪ್ಯಾಕೆಟ್ ಅಕ್ಕಿಗೆ ತಗಲುವ ವೆಚ್ಛಕ್ಕಿಂತ ಎರಡು ಮೂರು ಪಟ್ಟು ಅಧಿಕ ಖರ್ಚು ಕೃಷಿ ಮಾಡುವುದಕ್ಕೆ ತಗಲುತ್ತಿದೆ. ಸ್ವಾಭಾವಿಕವಾಗಿ ಮೈಕೈ ನೋಯಿಸಿಕೊಂಡು, ಒಂದಕ್ಕೆ ನಾಲ್ಕರಷ್ಟು ಖಚರ್ು ಮಾಡಿ ಬೆಳೆಯುವುದಕ್ಕಿಂತ ಆರಾಮವಾಗಿ ಕೊಂಡುತರುವುದು ಸುಲಭ ಎಂಬ ಭಾವನೆ ಎಲ್ಲರಲ್ಲೂ ಮೂಡಿದೆ.
ಅದಕ್ಕಿಂತ ಹೆಚ್ಚಾಗಿ ಆಧುನಿಕ ಜೀವನದ ಭರಾಟೆಯಲ್ಲಿ ಚಿಕ್ಕ ಚಿಕ್ಕ ಕುಟುಂಬಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಹೆಚ್ಚುತ್ತಿರುವ ಕುಟುಂಬಗಳ ಅನುಕೂಲಕ್ಕೆ ತಕ್ಕಂತೆ ಕೃಷಿ ಇರುವ ಮೂರು ನಾಲ್ಕು ಜನರಿಗೋಸ್ಕರವೇ ದೊಡ್ಡ ದೊಡ್ಡ ಮನೆಗಳನ್ನು ನಿಮರ್ಿಸಿ ಕೃಷಿ ಭೂಮಿಯನ್ನೆಲ್ಲ ಅನ್ಯಕಾರ್ಯ ನಿಮಿತ್ತವಾಗಿ ರಜಿಸ್ಟರ್ ಮಾಡಿಕೊಳ್ಳುತ್ತಿದ್ದೇವೆ. ದಿನದಿಂದ ದಿನಕ್ಕೆ ಕೃಷಿ ಭೂಮಿಗೆ ಬೇಡಿಕೆ ಹೆಚ್ಚುತ್ತಿದೆ. ಭೂಮಿಯ ಬೆಲೆ ಗಗನ ಮುಖಿಯಾಗಿದೆ. ಸುಲಭವಾಗಿ ಸಿಗುತ್ತಿರುವ ಕನಸಿನಲ್ಲೂ ಊಹಿಸಲಾಗದಂತಹ ಬೃಹತ್ ಮೊತ್ತ ಕೃಷಿಕರನ್ನು ಭೂಮಿ ಮಾರುವಂತೆ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ನಿಜಕ್ಕೂ ದಿಗಿಲುಗೊಳ್ಳಬೇಕಾದ ವೇಗದಲ್ಲಿ ಕೃಷಿಭೂಮಿ ಪರಿವರ್ತನೆಯಾಗುತ್ತಿದೆ. ಕಡಿಮೆಯಾಗುತ್ತಿರುವ ಕೃಷಿಭೂಮಿ ಸಹಜವಾಗಿಯೇ ಆಹಾರದ ಕ್ಷಾಮಕ್ಕೆ ಕಾರಣವಾಗುತ್ತಿದೆ.
ಇದೆಲ್ಲದರ ಜೊತೆಗೆ ಆಹಾರದ ದುಂದುವೆಚ್ಚ. ಹಬ್ಬಗಳೇ ಇರಲಿ, ಸಮಾರಂಭಗಳೇ ಇರಲಿ, ಆಹಾರದ ಚೆಲ್ಲುವಿಕೆಯಿಂದಾಗಿ ಆಹಾರ ಪೋಲಾಗುತ್ತಿದೆ. ಒಂದು ಮದುವೆಯನ್ನೇ ತೆಗೆದುಕೊಂಡರೆ ನಾವು ಆ ಸಮಯದಲ್ಲಿ ಚೆಲ್ಲುವ ಆಹಾರದಿಂದ ಮತ್ತಿನ್ನೆಷ್ಟೋ ಜನರು ಊಟಮಾಡಬಹುದಾದುದನ್ನು ಮಣ್ಣುಪಾಲು ಮಾಡುತ್ತಿದ್ದೇವೆ. ದುಂದುವೆಚ್ಛವೇ ಶ್ರೀಮಂತಿಕೆಯ ಲಕ್ಷಣ ಎಂಬಂತೆ ಅವಶ್ಯಕತೆಗಿಂತ ಹೆಚ್ಚನ್ನು ಬಡಿಸಿಕೊಂಡು ಚೆಲ್ಲುವುದನ್ನೇ ಪ್ಯಾಶನ್ ಎಂಬಂತೆ ಬಿಂಬಿಸುತ್ತಿದ್ದೇವೆ. ಉಳಿಸಿದ ಒಂದು ಕಾಳು ಬೆಳೆದ ನೂರು ಕಾಳಿಗಿಂತ ಶ್ರೇಷ್ಟ ಎಂಬ ಮಾತನ್ನು ನೆನಪಿಡಬೆಕಾದದ್ದು ಸಧ್ಯ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕಿದೆ.ಹೊಟ್ಟೆ ತುಂಬಿದ ಸಾವಿರಾರು ಜನರಿಗೆ ಒತ್ತಾಯ ಪಡಿಸಿ ಉಣಬಡಿಸುವುದಕ್ಕಿಂತ, ಹಸಿದ ಹತ್ತು ಹೊಟ್ಟೆಯನ್ನು ತುಂಬಿಸುವುದು ನಮ್ಮ ಆಧ್ಯತೆಯಾಗಬೇಕಿದೆ. ಉಂಡ ಎಲೆಯನ್ನೂ ಹಸಿದ ನಾಯಿ, ದನಕರುಗಳೊಟ್ಟಿಗೆ ಜಗಳವಾಡಿ ಕಸಿದುಕೊಳ್ಳುವ ಸ್ಥಿತಿಯಲ್ಲಿರುವವರೂ ಇದ್ದಿರುವಾಗ ನಮ್ಮ ಅದ್ದೂರಿತನಕ್ಕೊಂದು ಕಡಿವಾಣವನ್ನು ನಾವೇ ವಿಧಿಸಿಕೊಳ್ಳಬೇಕಿದೆ. ಪೋಲು ಮಾಡುವ, ಅನಾವಶ್ಯಕವಾಗಿ ಚೆಲ್ಲುವುದಕ್ಕಿಂತ ಹಸಿದವರಿಗೊಂದು ತುತ್ತು ನೀಡುವುದೇ ನಿಜವಾದ ಶ್ರೀಮಂತಿಕೆ ಹಾಗೂ ಅದೇ ಒಳ್ಳೆಯ ಫ್ಯಾಶನ್ ಎಂಬುದನ್ನು ಕೊನೆಯ ಪಕ್ಷ ಯುವಜನತೆಯಲ್ಲಾದರೂ ಅಥವಾ ಅವರಿಗಿಂತ ಚಿಕ್ಕವರಲ್ಲಿಯಾದರೂ ಮೂಡಿಸಬೇಕಾದ ತುತರ್ು ಅಗತ್ಯದಲ್ಲಿ ನಾವಿದ್ದೇವೆ. ಅದೆಲ್ಲದಕ್ಕೂ ಮನೆಯೇ ಮೊದಲ ಶಾಲೆಯಾಗಬೇಕಿದೆ. ತಿನ್ನುವ ಪ್ರತಿ ಕಾಳಿನ ಮೇಲೂ ತಿನ್ನುವಾತನ ಹೆಸರು ಬರೆದಿರುತ್ತದೆಯಂತೆ. ಆದರೆ ಚೆಲ್ಲುವ ಪ್ರತಿ ಅಗುಳೂ ಚೆಲ್ಲುವಾತನಿಗೆ ಹಿಡಿಶಾಪ ಹಾಕುತ್ತದೆ ಎಂಬುದನ್ನು ತಿಳಿಸಬೇಕಿದೆ. ತಿನ್ನುವ ಹಕ್ಕಿದೆ. ಆದರೆ ಬಿಸಾಡುವ ಹಕ್ಕಿಲ್ಲ ಇದು ಶಿಕ್ಷಣ ಇಲಾಖೆಯ ಅಕ್ಷರದಾಸೋಹ ಯೋಜನೆಯ ಧ್ಯೇಯವಾಕ್ಯ. ಅದನ್ನು ಎಲ್ಲರೂ ಚಾಚೂ ತಪ್ಪದೇ ಪಾಲಿಸಬೇಕಾಗಿದೆ. ವಿಶ್ವ ಆಹಾರದ ದಿನ ಎನ್ನುವುದು ಕೇವಲ ಆಹಾರ, ಪೌಷ್ಟಿಕಾಂಷಕ್ಕಷ್ಟೇ ಸೀಮಿತವಾದೇ ನಿಜಾದ ಅರ್ಥದಲ್ಲಿ ಆಹಾರವನ್ನು ಉಳಿಸಿ, ನಿಜವಾಗಿಯೂ ಹಸಿದವರಿಗೊಂದು ತುತ್ತು ನೀಡುವ ದಿನವಾಗಲಿ.






0 Comments