ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'…..ತಲಾ ಒಬ್ಬ ರೈತನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ…' – ಅಕ್ಕಿಮಂಗಲ ಮಂಜುನಾಥ್

’ಸಾಯಲೆಂದು ಸಾಲ ಮಾಡಬೇಡಿ ’ ಎನ್ನುವ ಡಾ ಎಸ್ ಬಿ ಜೋಗುರ ಅವರ ಲೇಖನಕ್ಕೆ ಅಕ್ಕಿಮಂಗಲ ಮಂಜುನಾಥ್ ಅವರು ಬರೆದ ಪ್ರತಿಕ್ರಿಯೆ ಇಲ್ಲಿದೆ

ಅಕ್ಕಿಮಂಗಲ ಮಂಜುನಾಥ್

ಆ ಸಿನೆಮಾದ ಹೆಸರು ಮಣ್ಣಿನ ಮಗನೆಂದೋ , ಕೃಷಿಕರ ಕುಡಿಯೆಂದೋ , ರೈತನ ಬಾಳೆಂದೋ ಅಥವಾ ಅನ್ನದಾತನೆಂದೋ ಹೆಸರಿಟ್ಟಿದ್ದಿದ್ದರೆ ಬಹುಶಃ ಅದು ಇಷ್ಟೊಂದು ಪರಿಣಾಮಕಾರಿಯಾಗಿರುತ್ತಿತ್ತೋ ಇಲ್ಲವೋ ,
ಆದರೆ “ಭೂಮಿ ತಾಯಿಯ ಚೊಚ್ಚಲ ಮಗ ” ಎಂದು ಹೆಸರಿಟ್ಟಿದ್ದೇ ಬಹಳ ಪ್ರಸ್ತುತ ಮತ್ತು ಜನರನ್ನು ಆಕರ್ಶಿಸಲು ಸಹಕಾರಿಯಾಗಿರಬೇಕು.
ಸಿನಿಮಾ ನೋಡಿದವರು ನೋಯದೆ , ಕನಲದೆ , ಕಣ್ಣೀರಾಗದೆ , ಮಿಡಿಯದೆ ಹೊರಬಂದವರು ವಿರಳರೇ ಇರಬೇಕು. ಅಕಸ್ಮಾತ್ ಇದೆಲ್ಲಾ ಬೋಗಸ್ ಎಂದು ಕೊಂಡವರು ನಿಜಕ್ಕೂ ಕಠಿಣ ಕರುಳಿನವರೇ ವಿನಹ ಮೃದುವಾದ ಹೃದಯವಂಥರಂತೂ ಅಲ್ಲವೇ ಅಲ್ಲ.
ಏಕೆಂದರೆ ಪ್ರತಿಯೊಂದು ದೃಶ್ಯದಲ್ಲೂ ಅನ್ನದಾತನ ಕರುಣಾಜನಕ ಬದುಕನ್ನು ಸಹಜವಾಗಿ ಚೂರೂ ಉತ್ಫ್ರೇಕ್ಷೆ ಇಲ್ಲದಂತೆ ಎಳೆ ಎಳೆಯಾಗಿ ಬಿಡಿಸಿ ಚಿತ್ರಿಸಿರುವ ನಿರ್ದೇಶಕರು ಮಣ್ಣಿನ ಮಗನ ಒಡಲಾಳದ ತುಡಿತವನ್ನು ಅರಿತವರೇ ಇರಬೇಕು. ಅರಿಯದವರು ಇಂತಹ ಚಿತ್ರವನ್ನು ನೀಡಲು ಸಾದ್ಯವಿಲ್ಲದ ವಿಷಯ. ಈ ಸಿನಿಮಾವನ್ನು ವ್ಯಾಪಾರದ ಉದ್ದೇಶ ಮತ್ತು ದೃಷ್ಟಿಕೋನದಿಂದಲೇ ಚಿತ್ರಿಸಿದ್ದರೂ ಅನ್ನದಾತನ ಬದುಕಿನ ಭೀಕರ ಕಟು ಸತ್ಯವನ್ನೇ ಹೇಳಿದ್ದಾರೆ ಮತ್ತು ಆ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡಿದ್ದಾರೆ.ಅದು ಅವರ ಕರ್ತವ್ಯ.

ಆದರೆ ನಿಜ ಜೀವನದ ಭೂಮಿ ತಾಯಿಯ ಚೊಚ್ಚಲು ಮಗನ ಪರಿಸ್ಥಿತಿ ಸಿನೆಮಾಗಿಂಥ ಭೀಕರವಾಗಿದೆಯೆಂದು ಹೇಳಿದರೆ ಎಷ್ಟು ಜನ ನಂಬುತ್ತಾರೋ ಗೊತ್ತಿಲ್ಲ. ಏಕೆಂದರೆ, ಸಾಲು ಸಾಲು ರೈತರು ತಮ್ಮ ಬದುಕಿಗೆ ವಿದಾಯ ಹೇಳುತ್ತಿದ್ದರೂ ಸಾಂಸಾರಿಕ ವೈಫಲ್ಯಗಳಿಂದ, ವೈಯಕ್ತಿಕ ಸಮಸ್ಯೆಗಳಿಂದ, ಮಾನಸಿಕ ಅಸ್ವಸ್ಥತೆಯಿಂದ, ಧುಶ್ಚಟಗಳಿಗೆ ಬಲಿಯಾದ ಕಾರಣದಿಂದ, ಅನಾರೋಗ್ಯದ ಪರಿಣಾಮ. …ಎಂದು ನಾನಾ ರೀತಿಯ ಅರ್ಥಗಳನ್ನು ಕಲ್ಪಿಸುವ ಅಧಿಕಾರಿ ವರ್ಗ, ನಿಜಕ್ಕೂ ಕೃಷಿಕನ ಬದುಕು ಭೀಕರವಾಗಿದೆಯೆಂದು ನಂಬುವ ಸ್ಥಿತಿಯಲ್ಲಿದ್ದಾನೆಂದು ಹೇಗೆ ಹೇಳಲು ಸಾದ್ಯ? ಬಹುಪಾಲು ಸುಸ್ಥಿತಿಯಲ್ಲಿರುವ ನಾಗರೀಕ ಜನಾಂಗ ಸಮಾಜಕ್ಕೆ ರೈತನೊಬ್ಬನ ಅವಶ್ಯಕತೆ ಮತ್ತು ಅನಿವಾರ್ಯತೆ ಇಲ್ಲವೆಂಬಂತೆ ವರ್ತಿಸುತ್ತಿರುವ ಇವರಿಗೆ ರೈತನ ಕಷ್ಟ ಕೋಟಲೆಗಳ ಬಗ್ಗೆ ಚಿಂತಿಸುವಷ್ಟು ವ್ಯವಧಾನ, ಸಂಯಮ ಮತ್ತು ಸಮಯ ಇದೆಯೆಂದರೆ ಅದು ಅರ್ಥವಿಲ್ಲದ ಮಾತು.
ಪ್ರತಿನಿತ್ಯ ಟಿ.ವಿ ಹಾಕಿದರೆ , ಪತ್ರಿಕೆ ತೆರೆದರೆ , ಬ್ಲಾಗ್ ತೆರೆದರೆ , ಒಂದು ಸಭೆ ಸಮಾರಂಭಕ್ಕೆ ಹೋದರೆ ಎಲ್ಲಾ ಕಡೆ ಕೇಳುವ ಒಂದೇ ಸುದ್ದಿ ರೈತ ಆತ್ಮ ಹತ್ಯೆಗೆ ಶರಣಾದ, ರೈತ ವಿಷ ಕುಡಿಯುತ್ತಿದ್ದಾನೆ , ನೇಣಿಗೆ ಕೊರಳೊಡ್ಡುತ್ತಿದ್ದಾನೆ .ಇದೇ ಒಂದು ಮೀಟಿಂಗಿನ ವಿಷಯವೆಂಬಂತೆ ಮಾತಾಡುತ್ತಿರುತ್ತಾರೆ.ಆದರೆ ಸಿನೆಮಾ ನೋಡಿ ಅಲ್ಲಿನ ದೃಶ್ಯಗಳಿಗೆ ಮಿಡಿದ ಮನಸ್ಸುಗಳು ಇಲ್ಲಿನ ನಿಜ ಜೀವನಕ್ಕೆ ಮರುಕ ಪಡಲು ವಿಫಲವಾಗಿ ಸದ್ಯಕ್ಕೆ ನಾವು ಸಾಯುತ್ತಿಲ್ಲವಲ್ಲಾ, ಇದಕ್ಕೂ ನಮಗೂ ಸಂಭಂಧವೇ ಇಲ್ಲ ಎಂಬಂತೆ, ನಿರಾತಂಕವಾಗಿ , ಆನಂದವಾಗಿ ಬದುಕುತ್ತಿರುವ ಇವರಿಗೆ ರೈತರ ಭೀಕರವಾದ ಸತ್ಯದ ಅನುಭವ ಆಗಲಾರದು ಮತ್ತು ಆಗುವುದೂ ಇಲ್ಲ.
ಏಕೆಂದರೆ , ವಿವೇಚನೆ ಇಲ್ಲದ ಸರ್ಕಾರಗಳು ಅಧಿಕಾರದ ಆಸೆಯಿಂದ ವರ್ಷದಿಂದ ವರ್ಷಕ್ಕೆ ಅವರ ಅಗತ್ಯಕ್ಕೆ ಮೀರಿದಷ್ಟು ಸಂಬಳಗಳನ್ನು ಹೆಚ್ಚಿಸುತ್ತ ಅವರನ್ನು ಮಾತ್ರ ಸಾಕುತ್ತಿವೆ.ಅಕಸ್ಮಾತ್ ಒಂದು ವರ್ಷ ಸಂಬಳ ಹತ್ತಿಸದಿದ್ದರೂ ಸರ್ಕಾರದ ಬುಡ ಅಲ್ಲಾಡಿ ಬಿಡುವಂತೆ, ಪ್ರಬಲ ಭೂಕಂಪವೇ ಆಗಿಬಿಡುವಂತೆ , ನಿಜ ಪ್ರಳಯವೇ ಆಗುವಂತೆ ಮುಷ್ಕರ ಹೂಡಿ ತಮ್ಮ ಬೇಳೆ ಬೇಯಿಸಿಕೊಂಡು ಬಿಡುತ್ತಾರೆ. ಸಂಬಳ ಏರದೇ ಹೋದರೆ ಆ ಮರವನ್ನು ಉರುಳಿಸಿ ಅದೇ ಜಾಗಕ್ಕೆ ಅವರಿಗೆ ಮಾತ್ರ ನೆರಳು ನೀಡುವ ಮತ್ತೊಂದು ವಿಷ ವೃಕ್ಷವನ್ನು ನೆಡಲು ಸಿದ್ಧರಾಗಿ ಬಿಡುತ್ತಾರೆ. ಅದರ ಪರಿಣಾಮವೇ ಇಂದು ದಿನಕ್ಕೆ ನಾಲ್ಕಾರು ಗಂಟೆ ಮಾತ್ರ ಕೆಲಸ ಮಾಡುವ ಅವರ ತಿಜೋರಿಗೆ ತಿಂಗಳು ತಿಂಗಳು ಲಕ್ಷಾಂತರ ರೂ ಜಮೆಯಾಗುವುದು ಮತ್ತು ಬಡ ರೈತ ದಿನವಿಡೀ ದುಡಿದರೂ ಪೈಸೆ ಪೈಸೆಗೂ ಅಲೆದಾಡಿ ಬಂಡಾಟದ ಬದಕು ಸಾಗಿಸುತ್ತಿರುವುದು. ಸರಕಾರದ ಬಹಳಷ್ಟು ಸಂಪತ್ತನ್ನು ಆಳುವವರೇ ತಿಂದು ಉಳಿದದ್ದನ್ನು ಅಧಿಕಾರಿವರ್ಗಕ್ಕೆ ಹಂಚಿ ರೈತರ ಕಡೆ ಖಾಲಿ ಕೈ ತೋರಿಸಿದರೆ ಇವರು ಬದುಕುವುದಾದರೂ ಹೇಗೆ ?
ಪ್ರತಿಯೊಬ್ಬ ಮಂತ್ರಿ ಅಧಿಕಾರ ಸ್ವೀಕರಿಸುವಾಗಲೂ ರೈತರ ತಲೆಯ ಮೇಲೆ ಕೈಯಿಟ್ಟೇ ಪ್ರಮಾಣ ವಚನ ಸ್ವೀಕರಿಸುತ್ತಾನೆ ,ಬುರುಡೆ ಹೊಡೆದರೂ ಸುಮ್ಮನೆ ಇರುತ್ತಾರೆಂಬ ಕಾರಣವಿರಬೇಕು.
ಪ್ರತಿಯೊಬ್ಬ ಮಂತ್ರಿಯೂ ಮಣ್ಣಿನ ಮಗ ರೈತನ ಮಗ ಆ ಮಗ ಈ ಮಗ ಎಂದು ಹೇಳಿಯೇ ಸಿಂಹಾಸನಾರೂಡನಾಗುತ್ತಾನೆ , ಮಣ್ಣು ತಿನ್ನಿಸಿದರೂ ತಿನ್ನುತ್ತಾರೆಂಬ ನಂಬಿಕೆ ಇರಬೇಕು.
ನಾವು ಚಿಕ್ಕವರಿದ್ದಾಗ ಆಣೆ ಪ್ರಮಾಣದ ಮೇಲೆ ಬಹಳ ನಂಬಿಕೆ ಇಟ್ಟಿದ್ದೆವು.ಅಮ್ಮನ ಮೇಲೆ ಸುಳ್ಳು ಆಣೆ ಮಾಡಿದರೆ ಅವಳು ಸತ್ತು ಹೋಗುತ್ತಾಳೆಂದೂ , ಕಣ್ಣಿನ ಮೇಲೆ ಸುಳ್ಳು ಆಣೆ ಮಾಡಿದರೆ ಕುರುಡರಾಗಿ ಹೋಗಿಬಿಡುತ್ತೇವೆಂಬ ನಂಬಿಕೆಯಿಂದ ಸುಳ್ಳು ಹೇಳದೇ ಬೆಳೆದೆವು. ಈಗೀಗ ರಾಜಕಾರಣಿಗಳು ರೈತನ ಮೇಲೆ ಪ್ರಮಾಣ ಮಾಡಿ ಆ ಮಾತಿನಂತೆ ನಡೆದು ಕೊಳ್ಳದ ಕಾರಣವೇ ಈ ರೀತಿ ರೈತರು ಸಾಯುತ್ತಿದ್ದಾರೋ ಏನೋ !
ಏನೇ ಆಗಲಿ ಇನ್ನು ಮುಂದೆ ಬರುವವರು ರೈತನ ಮೇಲೆ ಆಣೆ ಮಾಡದೆ ಅವರ ಸ್ವಂತ ಕಣ್ಣಿನ ಮಲೆಯೋ , ದೇಹದ ಅಂಗಾಂಗಗಳ ಮೇಲೆ ಆಣೆ ಮಾಡಿಕೊಂಡರೆ ರೈತರ ಪಾಪ ಕೊಂಚವಾದರೂ ಕಡಿಮೆಯಾಗಬಹುದು
ಲೇಖನದಲ್ಲಿ ಜೋಗುರರವರು ಸಾಯಲೆಂದು ಸಾಲ ಮಾಡಬೇಡಿ ಎಂದು ಕಳಕಳಿಯಿಂದ ಕೇಳಿಕೊಂಡಿದ್ದಾರೆ. ಆದರೆ ನಿಜವಾಗಿಯೂ ಸತ್ತಂತೆ ಬದುಕಿರುವ ಜನ ಬದುಕಲೆಂದೇ ಸಾಲ ಮಾಡುತ್ತಾರೆ.ಅದೂ ಎಂತಹ ಸಾಲ!
ಲೇವಾದೇವಿ ಯವರ ಹತ್ತಿರ ಇದ್ದಬದ್ದ ವಡವೆ , ಜಮೀನು ಮನೆ ಮಠ ಎಲ್ಲವನ್ನೂ ಅಡವಿಟ್ಟು ಸಾಲ ಪಡೆಯುತ್ತಾರೆ.ಮಿತಿಮೀರಿದ ಜ್ವರದಿಂದ ನರಳುವ ವ್ಯಕ್ತಿಯ ಕೈಗೆ ಥರ್ಮಾ ಮೀಟರ್ ಕೊಟ್ಟೊಡನೆ ಪಾದರಸ ಡಿಗ್ರಿ ಗಟ್ಟಲೆ ಏರುವಂತೆ- ರಭಸವಾಗಿ ಏರುವ ಬಡ್ಡಿ , ಚಕ್ರಬಡ್ಡಿ ಸುಸ್ತಿಯಾಗಿಬಿಟ್ಟಾಗ, ಪಡೆದದ್ದನ್ನು ವಾಪಸ್ಸು ಕೊಡಲು ಆಗದಷ್ಟು ನಿಶ್ಯಕ್ತನಾದಾಗ, ಆಧಾರ ವಾಗಿದ್ಧ ಮನೆ ಮಠ ಜಮೀನನ್ನು ಕಳೆದು ಕೊಳ್ಳುವ ಸ್ಥಿತಿ ತಲುಪಿದಾಗ, ಯಾರೊಬ್ಬರ ಹಂಗಿಗೂ ಸಿಲುಕದೆ ಬದುಕಿದ ವ್ಯಕ್ತಿ ,ಇವತ್ತು ಏಕಾಏಕಿ ಬದುಕಿನ ಎಲ್ಲಾ ದಾರಿಗಳನ್ನು ಕಳೆದುಕೊಂಡು, ಮಾನ ಮರ್ಯಾದೆ ಎಂದು ತೊಳಲಾಡುವ ಇವನಿಗೆ ಇಂಥಹ ಹೀನ ಬದುಕನ್ನು ಬದುಕುವುದಕ್ಕಿಂಥ ಸಾಯುವುದೇ ಸರಿ ಎನಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಪ್ರತಿಯೊಂದು ವರ್ಷವೂ ಸರ್ಕಾರಗಳು ರೈತರಿಗಾಗಿ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕುಗಳ ಮೂಲಕ, ಸಹಕಾರ ಸಂಘಗಳ ಮೂಲಕ ಸಾಲ ನೀಡುತ್ತಾ ಬಂದಿವೆ. ಪಡೆದವ ಆ ಸಾಲಗಳನ್ನು ತೀರಿಸದೇ ಹೋದಾಗ ಮನ್ನಾ ಮಾಡಿದ ಉದಾಹರಣೆಗಳೂ ಇವೆ.ಆದರೆ ಆ ರೀತಿಯ ಸಾಲಗಳು ನಿಜವಾದ ಅರ್ಹ ರೈತನಿಗೆ ತಲುಪುವ ಬದಲು , ಅಧಿಕಾರಿಗಳ ಒಳ ಸಂಚಿನಿಂದ, ರೈತರಲ್ಲದ ಪ್ರಭಾವಿಗಳ ಪಾಲಾಗಿ , ಅದೇ ಸಾಲಗಳು ಮನ್ನಾ ಆಗುತ್ತ ಆ ಸಮಯ ಸಾದಕ ಮಾತ್ರ ದೊಡ್ಡವನಾಗುತ್ತಾನೆಯೇ ವಿನಹ ಬಡ ರೈತನಂತೂ ಅಲ್ಲವೇ ಅಲ್ಲ. ಬಡ ರೈತ ಸಾಲ ಬೇಕೆಂದು ಬ್ಯಾಂಕಿಗೆ ಹೋದರೆ , ಪಹಣಿ ತಪ್ಪಿದೆಯೆಂದೋ , ಖಾತೆ ನಿನ್ನ ಹೆಸರಿಗೆ ಬದಲಾವಣೆಯಾಗಿಲ್ಲವೆಂದೋ , ಸದ್ಯಕ್ಕೆ ತಮ್ಮ ಬ್ಯಾಂಕಿನಲ್ಲಿ ಅಂಥ ಯೋಜನೆಗಳು ಇಲ್ಲವೆಂದೋ ನಾನಾ ರೀತಿಯ ಸಬೂಬುಗಳ ಹೇಳಿ ಹೊರಹಾಕಿ ಬಿಡುತ್ತಾರೆಯೇ ವಿನಹ ಅವನಿಗೆ ಅನ್ನನೀಡುವ ಅನ್ನಧಾತನೆಂಬ ಕನಿಷ್ಟ ಗೌರವವನ್ನೂ ಸಹ ನೀಡುವುದಿಲ್ಲ. ಇದಿಷ್ಟೇ ಅಲ್ಲದೆ ರೈತರಿಗಾಗಿ ನೀಡುವ ಬೆಳೆ ವಿಮೆ , ಸಬ್ಸಿಡಿ,ಸಹಾಯಧನ ಮುಂತಾದ ಪ್ರತಿಯೊಂದು ಸವಲತ್ತುಗಳೂ -ಆಫೀಸಿನ ಅದಿಕಾರಿಗಳೊಂದಿಗೆ ಶಾಮೀಲಾಗಿರುವ ನಾಲ್ಕಾರು ಪ್ರಭಾವಿಶಾಲಿಗಳ ಪಾಲಾಗುತ್ತಿದೆಯೇ ವಿನಹ ಅರ್ಹ ರೈತನಿಗಂತೂ ಅಲ್ಲವೇ ಅಲ್ಲ.
ಇವತ್ತಿನ ದಿನ ಒಂದು ಲೀಟರ್ ಹಾಲು ಕರೆಯಬೇಕಾದರೆ ಹುಲ್ಲು , ಬೂಸ, ಫೀಡು , ಹಿಂಡಿ , ಕಾಯಿಲೆ ಖಸಾಲೆ ಎಂದು ಕನಿಷ್ಟ ಹದಿನೈದರಿಂದ ಇಪ್ಪತ್ತು ರೂಗಳವರೆಗೆ ಖರ್ಚು ಆಗುತ್ತದೆ. ಆದರೆ ರೈತನಿಗೆ ಡೈರಿಗಳು ಕೊಡುತ್ತಿರುವ ಹಣ ಎಷ್ಟು ಗೊತ್ತೆ ? ಕೇವಲ ಹದಿನೆಂಟರಿಂದ ಇಪ್ಪತ್ತೆರಡು ರೂಪಾಯಿ ಮಾತ್ರ. ಹಾಗೆಯೇ ಒಂದು ಕೆ.ಜಿ. ರೇಷ್ಮೆ ಗೂಡು ಬೆಳೆಯಲು ನೂರೈವತ್ತರಿಂದ ಇನ್ನೂರರವರೆಗೂ ಖರ್ಚಾಗುತ್ತಿದೆ.ಆದರೆ ಇಂದಿನ ಮಾರುಕಟ್ಟೆ ಬೆಲೆ ಬರೀ ಎಪ್ಪತ್ತೈದರಿಂದ ಇನ್ನೂರು ಮಾತ್ರ.
ರಾಗಿಯ ಬೆಲೆ , ಬತ್ತದ ಬೆಲೆ , ಕಬ್ಬಿನ ಬೆಲೆ ….ಯಾವುದೇ ಬೆಳೆ ಬೆಳೆದರೂ ಖರ್ಚಿಗಿಂಥ ಕಡಿಮೆ ಮಾರುಕಟ್ಟೆ ಮೌಲ್ಯವನ್ನು ಮಾತ್ರ ರೈತ ಪಡೆಯುತ್ತಿದ್ದಾನೆ.
ಈ ಪರಿಸ್ಥಿತಿ ಇದ್ದರೂ ಸುಭಿಕ್ಷವಾಗಿ ಬದುಕುತ್ತಿರುವ ಜನ ಬಾಟಲಿ ನೀರಿಗೆ ಇಪ್ಪತ್ತು ಮುವತ್ತು ರೂ ಕೊಟ್ಟು ಕಡಿಯುತ್ತಾರೆ.ಕೋಕಾ ಕೋಲಾ ಪೆಪ್ಸಿಗಳಂಥ ಕೊಳೆ ನೀರಿಗೆ ಐವತ್ತು ಅರವತ್ತು ರೂ ವ್ಯಯಿಸುತ್ತಾರೆ ಆದರೆ ಅಮೃತದಂಥ ಹಾಲಿಗಾಗಲಿ ಶ್ರೇಷ್ಟ ಎಳೆನೀರಿಗಾಗಲಿ ಸೂಕ್ತವಾದ ಮೌಲ್ಯ ಕೊಡಲು ಹಿಂದೇಟು ಹಾಕುತ್ತಾರೆ. ಪರಿಸ್ಥಿತಿ ಈ ರೀತಿ ಆದರೆ ರೈತ ಆತ್ಮ ಹತ್ಯೆ ಮಾಡಿಕೊಳ್ಳದೆ ಏನು ಮಾಡಿಯಾನು ?
ಕೇಂದ್ರ ಸರ್ಕಾರ, ಚೀನಾ ರೇಷ್ಮೆಯ ಮೇಲಿನ ಆಮದು ಶುಲ್ಕವನ್ನು ತೆಗೆದುಹಾಕಿದ ಪರಿಣಾಮ ತಪ್ಪು ನಿರ್ಧಾರದ ಪರಿಣಾಮ ಇಂದು ರೇಷ್ಮೆ ಬೆಳೆದು ಬದುಕುತ್ತಿದ್ದ ಒಂದು ದೊಡ್ಡ ರೈತ ಪಡೆ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ಅವರಿಗೆ ಚೀನಾ ರೈತನ ಬದುಕಿನ ಬಗೆಗಿನ ಕಾಳಜಿ ಮುಖ್ಯವಾಯಿತೇ ವಿನಹ ಭಾರತದ ರೈತನ ಬದುಕಲ್ಲ.
ಸ್ವಾಮಿ , ಅತಿವೃಷ್ಟಿ ಅನಾವೃಷ್ಟಿಗಳಂಥ ಪ್ರಕೃತಿ ವಿಕೋಪಗಳ ನಡುವೆ , ಕ್ರಿಮಿ ನಾಶಕ ಗೊಬ್ಬರ ಮತ್ತು ಕೃಷಿ ಪರಿಕರಗಳ ಮಿತಿಮೀರಿದ ಬೆಲೆಗಳ ನಡುವೆ , ಬೆಳೆಗೆ ತಗಲುವ ಮತ್ತು ತನಗೆ ತಗಲುವ ರೋಗಗಳ ನಡುವೆ , ಸಾಂಸಾರಿಕ ಕಷ್ಟಗಳ ನಡುವೆ , ಮತ್ತೆ ಯಾವಾಗೆಂದರೆ ಆವಾಗ ಸಮಸ್ಯೆಗಳನ್ನು ತಂದೊಡ್ಡುವ ಅಧಿಕಾರಿಗಳ ನಡುವೆ ರೈತ ಎಷ್ಟು ಅಧೋಗತಿಗಿಳಿದಿದ್ದಾನೆಂದು ರೈತನಾದವನಿಗೆ ಮಾತ್ರ ಗೊತ್ತಿದೆಯೇ ಹೊರತು ಬೇರಾರಿಗೂ ಅಲ್ಲ.
ಇವತ್ತಿನ ದಿನ ರೈತರ ಬಗ್ಗೆ ಮಾತಾಡುತ್ತಿರುವ ಎಲ್ಲರಿಗೂ ನಾನು ಹೇಳುವ ಮಾತೆಂದರೆ , ನಿಮಗೆ ರೈತನ ಕಷ್ಟ ಏನೆಂದು ಗೊತ್ತಿದ್ದರೆ , ಅದನ್ನು ಅರಿತುಕೊಳ್ಳವ ಮನಸ್ಸಿದ್ದರೆ , ನೀವು ಮಾನವೀಯತೆಯಿಂದ ತುಡಿಯುವಿರೆಂದಾದರೆ , ಮುಂದೆ ರೈತನ ಅಗತ್ಯ ಈ ದೇಶಕ್ಕೆ ಇದೆ ಎಂದು ಬಯಸುವಿರಾದರೆ , ಅಗತ್ಯಕ್ಕಿಂಥ ಹೆಚ್ಚು ಸಂಬಳ ಪಡೆಯುತ್ತಿರುವ ಪ್ರತಿಯೊಬ್ಬ ಅಧಿಕಾರಿಯೂ ತಲಾ ಒಬ್ಬ ರೈತನನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ , ಕೋಟಿಗಟ್ಟಲೆ ಗುಡ್ಡೆ ಹಾಕಿಕೊಂಡು ಖರ್ಚು ಮಾಡುವುದು ಹೇಗೆಂದು ಅರ್ಥವಾಗದೆ ಯದ್ವಾತದ್ವಾ ಬದುಕುತ್ತಿರುವ ಜನ ರೈತರ ಕಡೆ ನೋಡಿದರೆ ಮಾತ್ರ ರೈತ ಉಳಿದಾನು.ಇಲ್ಲದಿದ್ದಲ್ಲಿ ಈಗಾಗಲೇ ನಗರಗಳ ಕಡೆ ಮುಖ ಮಾಡಿರುವ ಇವನನ್ನು ಮತ್ತೆ ಹಳ್ಳಿಗೆ ಕಳುಹಿಸಲು ಸಾದ್ಯವೇ ಆಗದು.ಮುಂದೊಂದು ದಿನ, ಈಗಾಗಲೇ ಅಲ್ಪಸಂಖ್ಯಾತರಾಗುತ್ತಿರುವ ರೈತ ಕುಲ ಪೂರಾ ನಿರ್ನಾಮವಾಗಿ ತುತ್ತು ತುತ್ತಿಗೂ ಆಹಾಕಾರವಾಗುವ ಕಾಲ ಸನಿಹವಾಗುತ್ತಿದೆಯೆಂಬುದರಲ್ಲಿ ಎರಡು ಮಾತಿಲ್ಲ.
ಇದು ನಾನು ಒಬ್ಬ ದುಡಿಯುವ ರೈತನಾಗಿ ನನ್ನ ಸುತ್ತಲ ರೈತರ ಬದುಕಿನ ಕಷ್ಟ ಕೋಟಲೆಗಳನ್ನು ಮಾತ್ರ ಹೇಳಿದ್ದೇನೆ.ಬೇರೆ ಬೇರೆಯ ಕಡೆ ಇನ್ನೂ ಭೀಕರ ಸಮಸ್ಯೆಗಳೇ ಇರಬಹುದು.ನಾನು ಹೇಳಿರುವುದು ಬರೀ ಸತ್ಯವನ್ನು ಮಾತ್ರ. ಇದರಲ್ಲಿ ಯಾವುದೇ ಸುಳ್ಳಾಗಲಿ ಉತ್ಪ್ರೇಕ್ಷೆಯೇ ಆಗಲಿ ಖಂಡಿತಾ ಇಲ್ಲ.
 

‍ಲೇಖಕರು G

29 July, 2015

3 Comments

  1. Anonymous

    100% correct sir

  2. Mallappa

    ಆದರೆ ಅಧಿಕಾರದ ಬೆಂಬಲವಿರುವ ಹೊಟ್ಟೆ ತುಂಬಿದ ರೈತನಿಂದ ಬಡ ರೈತನನ್ನು ಬೇರ್ಪಡಿಸುವದು ಹೇಗೆ?. ನಿಜವಾದ ಕಷ್ಟದಲ್ಲಿ ಇರುವ ರೈತನ್ನು ಪತ್ತೆ ಮಾಡಿ ಅವನಿಗೆ ಸಹಾಯ ಮಾಡುವುದೇ ದೊಡ್ಡ ಕಷ್ಟದ ಕೆಲಸ.ಈ ವರ್ಗಾವಣೆ ಮಾಡುವದಕ್ಕಾಗಿಯೇ BPL ಲಾರ್ಡ್ ಇನ್ನಿತರ ಕಾರ್ಡಗಳು ಬಂದದ್ದು.ಆದರೆ ಅದರಲ್ಲಿಯೂ ಗೊಲ್ ಮಾಲ್. ಈ ಪ್ರಭಾವಿಗಳು ಯ್ಯಾರನ್ನೊ ಮುಂದೆ ಮಾಡಿ ಅದರ ಲಾಭ ತಿಂದು ಸಿಕ್ಕಿಬಿದ್ದಾಗ ಅವರನ್ನು ಜೈಲಿಗೆ ಕಳಿಸಿ ಇನ್ನೊಂದು ಬಕರಾನ್ನ ಹಿಡಿದು ಮತ್ತೆ ಹಳೆ ಬ್ರಷ್ಟಾಚಾರ ಮುಂದುವರಿಯುತ್ತದೆ. ಅಂಥವರಿಗೆ ಶಿಕ್ಷೆ ಆಗುವವರಗೂ ರೈತ ಸಾಯುತ್ತಿರುಯ್ತಾನೆ.ಪ್ರಭಾವಿಗಳಿಗೆ ಬೆನ್ನೆಲುಬು ರಾಜಕಾರಣಿಗಳು. ರಾಜಕಾರಣಿಗಳಿಗಂತೂ ಶಿಕ್ಷೆ ಇಲ್ಲಿಯವರೆಗೂ ಆಗಿಲ್ಲ.ಅವರು ತಾವು ಬದುಕಿ ಪ್ರಭಾವಿಗಳನ್ನು ಬದುಕಿಸುತ್ತಾರೆ.ಇವುಗಳ ಮಧ್ಯೆ ರೈತಯಾರಿಗೆ ಬೇಕು ಹೇಳಿ?

  3. ಅಕ್ಕಿಮಂಗಲ ಮಂಜುನಾಥ

    ಯಾಕೋ ಏನೋ ಸುಮಾರು ಜನ ಮಾತೆತ್ತಿದರೆ ಬಿ.ಪಿ.ಎಲ್.ಕಾರ್ಡಿನ ಬಗ್ಗೆಯೇ ಮಾತಾಡುತ್ತಾರೆ. ಆ ಕಾರ್ಡಿನಿಂದ ಬಡವ ಬದುಕಿದ್ದಾನೆಂದರೆ ಅದೊಂದು ರೀತಿಯ ಹಾಸ್ಯಾಸ್ಪದ ವಿಷಯವೇ ಸರಿ. ಓಟಿನ ಆಸೆಗೆ ಬಿದ್ದು ಕೊಡಮಾಡಿದ ಈ ಯೋಜನೆ ತಿಂಗಳಲ್ಲಿ ಎರಡು ದಿನದ (ಐದು ಕೆ.ಜಿ) ಊಟವೇ ವಿನಹ, ಅವನನ್ನು ಸುಖದ ಸುಪ್ಪತ್ತಿಗೆಯಲ್ಲಿ ಕೂರಿಸುವಂಥ ಸವಲತ್ತೇನೂ ಅಲ್ಲ. ಇದು ದೊಡ್ಡ ಹೋಟಲಿನಲ್ಲಿ ಕೂತ ವ್ಯಕ್ತಿಯೊಬ್ಬ ಒಂದು ಸಾರಿ ಉಂಡು ತಟ್ಟೆಯಲ್ಲೇ ಉಳಿಸಿ ಹೊರಗೆ ಚೆಲ್ಲುತ್ತಾರಲ್ಲಾ ಅಷ್ಟಕ್ಕೂ ಸರಿಗಟ್ಟಲಾರದು. ಈ ಪುಗಸಟ್ಟೆ ಅಕ್ಕಿ ಕೊಡಲು ಶುರು ಮಾಡಿದ ಮೇಲೇನೇ ಬಡವನ ಕಷ್ಟಗಳು ಇನ್ನೂ ಹೆಚ್ಚತೊಡಗಿರೋದು.ಏಕೆಂದರೆ , ಉಳ್ಳವನ ಕೆಟ್ಟ ದೃಷ್ಟಿ ಇದರ ಮೇಲೆ ಬಿದ್ದ ಪರಿಣಾಮವೋ ಏನೋ, ಏಕಾ ಏಕಿ ಕೃಷಿಗೆ ಬಳಸಬೇಕಾದ ಎಲ್ಲಾ ವಸ್ತುಗಳ ಬೆಲೆ ಸಿಕ್ಕಾಪಟ್ಟೆ ಹೆಚ್ಚಿಹೋಗಿರುವುದು ಮತ್ತು ಬೆಳೆದ ಬೆಳೆಯ ಬೆಲೆ ಪಾತಾಳಕ್ಕೆ ಕುಸಿದಿರುವುದು. ಒಂದು ತರಕಾರಿಯ ಬೆಲೆ ಇರುವ ಮೌಲ್ಯಕ್ಕಿಂಥ ಹತ್ತು ರೂಪಾಯಿ ಜಾಸ್ತಿಯಾದರೂ ಇಡೀ ದೇಶದ ಜನತೆ ಪ್ರಳಯವೇ ಆದಂತೆ ಬೊಂಬಡಾ ಬಾರಿಸಿಬಿಡುತ್ತಾರೆ. ಟಿ.ವಿ.,ಪೇಪರ್ ಮುಂತಾದ ಮಾದ್ಯಮಗಳಂತೂ ಅದೇ ಒಂದು ವಿಶೇಷ ಸುದ್ಧಿಯಂಬಂತೆ, ಅದರಿಂದಲೇ ದೇಶದ ಅರ್ಥ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಿಬಿಟ್ಟಂತೆ ಬಿಂಬಿಸಿ ಬಿಡುತ್ತವೆ. ಆದರೆ ಕೇವಲ ಐವತ್ತು ಕೆ.ಜಿ.ತೂಗುವ ಒಂದು ಗೊಬ್ಬರ ಚೀಲದ ಬೆಲೆ ಸಾವಿರದಿಂದ ಸಾವಿರದೈನೂರಿನವರೆಗೆ ಇದೆಯೆಂದು ಅವರಿಗೆ ತಿಳಿಯುವುದಿಲ್ಲ.ಒಂದು ಎಕರೆ ಉತ್ತು ಹದಗೊಳಿಸಲು ಮೂರು ನಾಲ್ಕು ಸಾವಿರ ಖರ್ಚು ಬೀಳುತ್ತದೆಂಬುದು ತಿಳಿಯುವುದೇ ಇಲ್ಲ. ಒಂದು ಲೀಟರ್ ಕ್ರಿಮಿನಾಶಕದ ಬೆಲೆ ಸಾವಿರಾರು ರೂ ಇದೆಯೆಂಬ ವಿಚಾರವೇ ಇವರಿಗೆ ಗೊತ್ತಿರುವುದಿಲ್ಲ.ಇದರ ಮದ್ಯೆಮದ್ಯೆ ಸಾಲು ಸಾಲು ಸಮಸ್ಯೆಗಳು ತಲೆದೋರುವುದೂ ತಿಳಿಯುವುದಿಲ್ಲ.
    ರೈತನಿಗೆ ಸಾಲ ನೀಡುವ ಬದಲು ಉಚಿತವಾಗಿ ಬೀಜ, ಗೊಬ್ಬರ, ತಗಲುವ ಖರ್ಚು ವೆಚ್ಚವನ್ನು ಸಮರ್ಪಕವಾಗಿ ತಲುಪಿಸಿದರೆ , ಬೆಳೆದ ಬೆಳೆಗೆ ವೈಜ್ಞಾನಿಕ ಮೌಲ್ಯ ನೀಡಿದರೆ , ಸರ್ಕಾರ ಕೊಡುತ್ತಿದ್ದೇವೆ ಎನ್ನುವ ಯಾವ ಸಬ್ಸಿಡಿಗಳಾಗಲೀ, ಯಾವ ಬಿಕ್ಷೆಗಳಾಗಲೀ ಅಗತ್ಯವೇ ಇರದು. ಆದರೆ ಯಾವುದೇ ಸರ್ಕಾರಕ್ಕಾಗಲಿ ಅಂತಹ ಕ್ರಿಯಾಶೀಲತೆ ಇರುವಂತೆಯೇ ಕಾಣದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading