ಮಾಜಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ
ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ತಮ್ಮನ್ನು ಆಳಬೇಕಾದ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕು ಜನತೆಗೆ ಇರುತ್ತದೆ. ರಹಸ್ಯ ಮತದಾನದ ಮೂಲಕ ಆಯ್ಕೆ ನಡೆದರೂ ರಾಜಕೀಯ ವ್ಯವಸ್ಥೆಯಲ್ಲಿ ಹಾಸು ಹೊಕ್ಕಾಗಿರುವ ಭ್ರಷ್ಟ ನೀತಿಗಳ ಪರಿಣಾಮವಾಗಿ ಜನಸಾಮಾನ್ಯರು ಅಭ್ಯರ್ಥಿಗಿಂತಲೂ ಹೆಚ್ಚಾಗಿ ಅಭ್ಯರ್ಥಿಯ ಜಾತಿ, ಪ್ರಾಬಲ್ಯ, ಹಣ ಮತ್ತು ಅಭ್ಯರ್ಥಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗಿ ತಮ್ಮ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ವರ್ತಿಸುವ ಪಕ್ಷಗಳನ್ನು ಆಯ್ಕೆ ಮಾಡುವ ಸಂಭವವೇ ಹೆಚ್ಚು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಭೌಮ ಪ್ರಜೆಗಳ ನಿರ್ಧಾರವೇ ಅಂತಿಮವಾದರೂ ಈ ತೀರ್ಮಾನ ಸದಾ ಸಕಾರಾತ್ಮಕವಾಗಿಯೇ ಇರಲು ಸಾಧ್ಯವಿಲ್ಲ. ಕೆಲವೊಮ್ಮೆ ಅನಿವಾರ್ಯತೆಗಳಿಗೆ ಬಲಿಯಾಗಿ ಜನತೆ ತಮ್ಮ ಇಚ್ಚೆಗೆ ವಿರುದ್ಧವಾಗಿ ಆಳ್ವಿಕರನ್ನು ಆಯ್ಕೆ ಮಾಡುವುದೂ ಉಂಟು, ಬಳಿಕ ಮಾಡಿದ ತಪ್ಪಿಗಾಗಿ ಪರಿತಪಿಸುವುದೂ ಉಂಟು. ಇದರ ಸ್ಪಷ್ಟ ನಿದರ್ಶನವನ್ನು ಕರ್ನಾಟಟಕದ ರಾಜಕಾರಣದಲ್ಲಿ ಕಾಣಬಹುದು.
ವಿಡಂಬನೆ ಎಂದರೆ ತಪ್ಪು ಮಾಡಿದ ಜನತೆ ಪರಿತಪಿಸದೆ ಮೌನವಾಗಿ ಎಲ್ಲ ಅಧ್ವಾನಗಳನ್ನೂ ಸಹಿಸಿಕೊಂಡಿದೆ. ಜನರು ಮಾಡಿದ ತಪ್ಪಿನಿಂದ ಅಧಿಕಾರದ ರುಚಿ ಸವೆದು ತಮ್ಮ ಧನಭಂಡಾರಗಳನ್ನು ಭರ್ತಿಯಾಗಿಸಿಕೊಂಡ ರಾಜಕಾರಣಿಗಳು ಪರಿತಪಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಮಾನ್ಯ ಯಡಿಯೂರಪ್ಪನವರ ಹಪಹಪಿ, ಹಳಹಳಿಯನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ತಮ್ಮ ರಾಜಕೀಯ ಜೀವನದಲ್ಲಿ ಎರಡು ತಪ್ಪುಗಳನ್ನು ಮಾಡಿರುವುದಾಗಿಯೂ, ಈ ತಪ್ಪುಗಳನ್ನು ಮಾಡದೆ ಹೋಗಿದ್ದರೆ ತಮಗೆ ಇಂದಿನ ಪರಿಸ್ಥಿತಿ ಉಂಟಾಗುತ್ತಿರಲಿಲ್ಲವೆಂದೂ ಯಡಿಯೂರಪ್ಪನವರು ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯ ಹಗರಣದಲ್ಲಿ ಲೋಕಾಯುಕ್ತದಿಂದ ಆರೋಪಿ ಎಂದು ಗುರುತಿಸಲ್ಪಟ್ಟಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ತಮ್ಮ ಮೊದಲ ತಪ್ಪು, ನಂತರ ಹುಬ್ಬಳ್ಳಿಯಲ್ಲಿ ನಡೆದ ತಮ್ಮ ಹುಟ್ಟುಹಬ್ಬದ ಸಮಾವೇಶದ ಸಂದರ್ಭದಲ್ಲಿ ನೂತನ ರಾಜಕೀಯ ಪಕ್ಷ ಸ್ಥಾಪಿಸದೆ ಹೋದದ್ದು ಎರಡನೆ ತಪ್ಪು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಮಾನ್ಯ ಯಡಿಯೂರಪ್ಪನವರೇ , ನೀವು ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ. ವಿರೋಧ ಪಕ್ಷಗಳು, ಜನಸಾಮಾನ್ಯರು, ಸಾರ್ವಜನಿಕ ಸಂಘಟನೆಗಳು ಬೀದಿಗಿಳಿದು ನಿಮ್ಮ ರಾಜೀನಾಮೆಗೆ ಆಗ್ರಹಿಸಿದರು. ನಿಮ್ಮ ಪಕ್ಷದಲ್ಲೇ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಜನಪ್ರತಿನಿಧಿಗಳನ್ನು ಧನಪ್ರತಿನಿಧಿಗಳನ್ನಾಗಿ ಪರಿವತರ್ಿಸಿ, ಶಾಸಕರನ್ನು ಮಾರುಕಟ್ಟೆಯಲ್ಲಿನ ಸರಕುಗಳಂತೆ ಪರಿಗಣಿಸಿ, ವಿಧಾನಸಭೆಯನ್ನು ದನದ ಸಂತೆಯನ್ನಾಗಿ ಮಾಡಿ ತಮ್ಮ ಸ್ಥಾನ ಉಳಿಸಿಕೊಂಡ ನಿಮ್ಮನ್ನು ನೀವೇ ಸಾಕಿದ ಗಿಣಿಗಳು ಕುಕ್ಕಲಾರಂಭಿಸಿದವು. ನಿಮ್ಮ ಪ್ರಜಾತಂತ್ರ ವಿರೋಧಿ ಕ್ರಮಗಳನ್ನು ಅಧಿಕಾರ ಉಳಿಸಿಕೊಳ್ಳುವ ಅನಿವಾರ್ಯ ಕ್ರಮ ಎಂದು ಸಮಥರ್ಿಸಿದ ನಿಮ್ಮ ಪಕ್ಷದ ಹೈಕಮಾಂಡ್ ನಿಮ್ಮ ಪದಚ್ಯುತಿಗಾಗಿ ಒತ್ತಾಯಿಸಲಾಂಭಿಸಿತು. ಉಚ್ಚಾಟನೆಗಿಂತಲೂ ರಾಜೀನಾಮೆ ಲೇಸು ಎಂಬ ಕುತ್ಸಿತ ರಾಜಕೀಯ ವರ್ತನೆ ನಿಮ್ಮ ರಾಜೀನಾಮೆಯಲ್ಲಿ ಪರ್ಯವಸಾನಗೊಂಡಿತ್ತು. ಅಲ್ಲವೇ ? ಎದೆ ಮುಟ್ಟಿ ಹೇಳಿ.
ಇನ್ನು ಹುಬ್ಬಳ್ಳಿ ಸಮಾವೇಶ. ಇಲ್ಲಿ ನೂತನ ಪಕ್ಷ ರಚಿಸುವ ಸನ್ನಿವೇಶವೇ ಇರಲಿಲ್ಲ. ನೀವು ನಿಮ್ಮ ಜನ್ಮವನ್ನೇ ವೈಭವೀಕರಿಸುವಂತೆ ಜನ್ಮದಿನದ ಆಚರಣೆಯನ್ನು ಹುಬ್ಬಳ್ಳಿಯಲ್ಲಿ ನಡೆಸಿದ್ದು ನಿಮ್ಮ ಬೆನ್ನೆಲುಬಾಗಿರುವ ವೀರಶೈವ ಸಮುದಾಯದ ಬೆಂಬಲವನ್ನು ಅಳೆಯಲು, ಉಳಿಸಿಕೊಳ್ಳಲು, ಬೆಳೆಸಲು ಮತ್ತು ಬಲವಾಗಿಸಲು. ನಿಮ್ಮ ಭವಿಷ್ಯದ ರಾಜಕೀಯ ನಡೆಗೆ ಇರಬಹುದಾದ ಬೆಂಬಲವನ್ನು ಅಳೆಯುವ ಮತ್ತು ಮಠಾಧೀಶರುಗಳ ಸಮರ್ಥನೆಯನ್ನು ಗ್ರಹಿಸುವ ಮಾನದಂಡವಾಗಿ ನೀವು ಸಮಾವೇಶವನ್ನು ಬಳಸಿಕೊಂಡಿರಿ. ಬಹುಶಃ ಆ ಸಂದರ್ಭದಲ್ಲಿ ನೀವು ಕೆಜೆಪಿ ಸ್ಥಾಪಿಸಿದ್ದರೆ, ವಿಫಲರಾಗುತ್ತಿದ್ದಿರಿ. ಇದು ನಿಮಗೂ ತಿಳಿದ ಸತ್ಯ, ಅಲ್ಲವೇ ? ಹಾಗಿದ್ದಲ್ಲಿ ನಿಮ್ಮ ತಪ್ಪಾದರೂ ಏನು. ಎರಡೂ ಸಂದರ್ಭಗಳಲ್ಲಿ ನೀವು ಅಧಿಕಾರ ರಾಜಕಾರಣದ ಅನಿವಾರ್ಯತೆಗಳ ಕೈಗೊಂಬೆಯಾಗಿದ್ದಿರಿ. ಪ್ರಾಮಾಣಿಕ ಜನಪ್ರತಿನಿಧಿಯಾಗಿರಲಿಲ್ಲ. ಈಗಲೂ ಹಾಗೆಯೇ ವರ್ತಿಸುತ್ತಿದ್ದೀರಿ.
ನಿಮ್ಮ ಮಾತು ಒಂದು ರೀತಿಯಲ್ಲಿ ನಿಜ ಯಡಿಯೂರಪ್ಪನವರೇ, ಎರಡು ತಪ್ಪುಗಳಾಗಿವೆ ಆದರೆ ನಿಮ್ಮಿಂದ ಅಲ್ಲ. ಈ ರಾಜ್ಯದ ಜನತೆಯಿಂದ. ಕರ್ನಾಟಕದ ಜನತೆ ಅಪ್ರಬುದ್ಧ, ಅಸಮರ್ಥ, ಅದಕ್ಷ, ಅಪ್ರಮಾಣಿಕ ರಾಜಕಾರಣಿಗಳನ್ನು ಆಯ್ಕೆ ಮಾಡುವ ಪ್ರಮಾದವನ್ನು ಕಳೆದ ಆರು ದಶಕಗಳಲ್ಲಿ ಹಲವು ಸಂದರ್ಭಗಳಲ್ಲಿ ಮಾಡಿದ್ದಾರೆ. ಆದರೆ ಇತ್ತೀಚಿನ ಇತಿಹಾಸ ಕೆದಕಿ ನೋಡಿದರೆ, 2008ರಲ್ಲಿ ಒಂದು ವಿಭಿನ್ನವಾದ ಪಕ್ಷ, ಶಿಸ್ತುಬದ್ಧವಾದ ಪಕ್ಷ ಎಂದು ಬೊಗಳೆ ಹೊಡೆಯುತ್ತಿದ್ದ ನಿಮ್ಮ ಪಕ್ಷಕ್ಕೆ ಒಂದೇ ಒಂದು ಅವಕಾಶ ನೀಡುವ ತೀರ್ಮಾನ ಕರ್ನಾಟಕದ ಜನತೆ ಮಾಡಿದ ಬಹು ದೊಡ್ಡ ಪ್ರಮಾದ. ಶರಪಂಜರ ಚಿತ್ರದ ಕಾವೇರಿ ಬೇಡುವಂತೆ ನಮಗೆ ಒಂದೇ ಒಂದು ಅವಕಾಶ ನೀಡಬೇಕಿತ್ತು ಎಂದು ಜನತೆಯ ಮುಂದೆ ಗಿಂಜಿದ ನಿಮ್ಮ ಪಕ್ಷಕ್ಕೆ ಬಹುಮತ ನೀಡಿದ್ದು ಈ ರಾಜ್ಯದ ಜನತೆ ಮಾಡಿದ ಮೊದಲ ತಪ್ಪು. ನಂತರ ನಿಮ್ಮ ಅಧಿಕಾರ ಉಳಿಸಿಕೊಳ್ಳಲು ನೀವು ಮತಸಂತೆಯಿಂದ ಶಾಸಕ ಸಂತೆಗೆ ಬೆಳೆಸಿದ ಪಯಣ, ಆಪರೇಷನ್ ಕಮಲ ಹೆಸರಿನಲ್ಲಿ ಶಾಸಕರನ್ನು ಸರಕುಗಳಂತೆ ಖರೀದಿಸಿದ ವೈಖರಿ, ವಿಧಾನಸಭೆಯನ್ನು ವಸ್ತುಶಃ ಮಾರುಕಟ್ಟೆಯನ್ನಾಗಿ ಪರಿವರ್ತಿಸಿದ ಪರಿ ಇವೆಲ್ಲವನ್ನೂ ಮೌನವಾಗಿ ಸಹಿಸಿಕೊಂಡಿದ್ದು ಜನತೆಯ ಮತ್ತೊಂದು ತಪ್ಪು. ಅಲ್ಲವೇ ಯಡಿಯೂರಪ್ಪನವರೇ ?
ಈಗ ನೀವು ನೂತನ ಪ್ರಾದೇಶಿಕ ಪಕ್ಷ ರಚಿಸುತ್ತಿದ್ದೀರಿ. ಅದಕ್ಕೂ ಇದೇ ರಾಜ್ಯದ ಜನತೆಯ ಬೆಂಬಲ ನಿರೀಕ್ಷಿಸುತ್ತಿದ್ದೀರಿ. ಸಂಘ ಪರಿವಾರದ ಶಿಸ್ತಿನ ಸಿಪಾಯಿಯಾದ ನೀವು ಮುಂದೊಂದು ದಿನ ಬಿಜೆಪಿಗೆ ಮರಳುವುದಿಲ್ಲ ಎಂದು ಖಾತರಿ ಏನಿದೆ. ಉಮಾಭಾರತಿ, ಮದನ್ ಲಾಲ್ ಖುರಾನ, ಕಲ್ಯಾಣ್ ಸಿಂಗ್ ಮುಂತಾದವರನ್ನು ನೆನಪಿಸಿಕೊಳ್ಳಿ. ನಿಮ್ಮಂತೆಯೇ ಫೈರ್ ಬ್ರ್ಯಾಂಡ್ ರಾಜಕಾರಣಿಗಳು. ಇವೆಲ್ಲಾ ತಿಳಿದಿದ್ದೂ ರಾಜ್ಯದ ಜನತೆ ನಿಮ್ಮ ಸೋಗಿನ ಮಾತುಗಳನ್ನು ನಂಬಬೇಕೇ ? ಮತ್ತೊಂದು ತಪ್ಪು ಮಾಡಲು ರಾಜ್ಯದ ಜನತೆ ಸನ್ನದ್ಧರಾಗಬೇಕೇ ? ಈಗ ಮಾಡಿರುವ ತಪ್ಪುಗಳಿಗೆ ಸಾಕಷ್ಟು ಶಿಕ್ಷೆಯಾಗಿದೆ. ಕರ್ನಾಟಕದ ಜನತೆ ಮತ್ತೊಂದು ತಪ್ಪು ಮಾಡುವುದಿಲ್ಲ. ಹೌದಲ್ಲವೇ ?





0 Comments