ತಪ್ಪಾಗಿರುವುದನ್ನು ನೋಡಿದ್ದೇನೆ… ಆದರೆ ತಡೆಯಲಿಲ್ಲ,

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

ʼಆ ಬೆಳಗಿನ ಜಾವ ಒಂದು ಹಳ್ಳಿಯಲ್ಲಿ ಒಂದು ತೆರೆದ ಬಾವಿಯ ಬಳಿ ಶ್ರೀಮಾನ್‌ ಸಂತೋಷ್‌ರವರು ನಿಂತಿದ್ದರುʼ ಮಕ್ಕಳ ಹಕ್ಕು, ಮಕ್ಕಳ ನ್ಯಾಯ ತರಬೇತಿಗಳಲ್ಲಿ ನಾನು ಸಾಮಾನ್ಯವಾಗಿ ಬಳಸುವ ಹತ್ತಾರು ಕತೆಗಳು, ಪ್ರಕರಣ ಅಧ್ಯಯನಗಳಲ್ಲಿನ ಒಂದು ಎಳೆ ನಿಮ್ಮೊಡನೆ. (ಈ ಹೆಸರು ಕೇವಲ ಪ್ರಾಸಂಗಿಕ).

ಅಷ್ಟೊತ್ನಲ್ಲಿ ಆ ಬಾವಿ ಹತ್ರ ಅವರಿಗೇನು ಕೆಲಸ ಅಂತೀರೇನೋ. ಹಿಂದಿನ ಸಂಜೆ ನಗರದಿಂದ ಸಾಕಷ್ಟು ದೂರದಲ್ಲಿದ್ದ ಹಳ್ಳಿಗೆ ಗೆಳೆಯರೊಬ್ಬರ ಆಹ್ವಾನದ ಮೇರೆಗೆ ಹೀಗೆ ಲೋಕಾಭಿರಾಮದ ಭೇಟಿ. ಆ ಊರಿಗೆ ಸರಿಯಾಗಿ ಬಸ್‌ ಇಲ್ಲ.  ತೀರಾ ಬೆಳಗ್ಗೆ ಹಳ್ಳಿಯ ಹತ್ತಿರದ ಮುಖ್ಯ ರಸ್ತೆಯಲ್ಲಿ ಹಾದು ಹೋದರೆ ಮತ್ತೆ ಅದೇ ಬಸ್‌ ಬರುವುದು ಸಂಜೆ. ಸಂತೋಷ್‌ ಅವರನ್ನು ಗೆಳೆಯ ಬೈಕ್‌ ಹತ್ತಿಸಿ ಕರೆತಂದಿದ್ದ. ಮಾರನೇ ದಿನ ಬೆಳಗ್ಗೆ ಬರುವ ಬಸ್‌ ಹತ್ತಿಸುವ ಖಾತ್ರಿ ಕೊಟ್ಟಿದ್ದ. ಆ ರಾತ್ರಿ ಹಳ್ಳಿಯಲ್ಲೊಂದು ಸುತ್ತು, ಅವರ ಮನೆಯಲ್ಲಿ ಊಟ, ಮಾತುಕತೆ ಆಮೇಲೆ ಮಲಗಲು ಹಾಸಲು ಹೊದೆಯಲು ಏರ್ಪಾಟು ಆಯಿತು. ಇನ್ನೇನು ಮಲಗಲು ಮೈ ಚಾಚಿದವರಿಗೆ ಒಂದು ಮುಖ್ಯ ವಿಚಾರದ ಬಗ್ಗೆ ಮಾಹಿತಿ ಬೇಕಾಯಿತು. ಕೇಳಲು ಸ್ವಲ್ಪ ಸಂಕೋಚ. ಆದರೂ ಕೇಳಿಬಿಟ್ಟರು.

ಗೊತ್ತಾಯ್ತ? ಏನು ಕೇಳಿದರು ಎಂದು. ಮೊದಲೇ ಮೇಲೆ ಕ್ಲೂ ಇದೆಯಲ್ಲ…

ಕೇಳೇ ಬಿಟ್ಟರು. ʼಅದಕ್ಕೇನಂತೆ ನಮ್ಮನೆ ಹಿಂದೆ ಕೊಟ್ಟಿಗೆ. ಅದರಿಂದ ಮುಂದೆ ಹೋದ್ರೆ ಅಲ್ಲಿ ಒಂದು ಬಾವಿ ಇದೆ. ನೀರು ಸೇದ್ಕೋಳೋದು. ಹೋಗೋಕ್ಮುಂಚೆ ಕೊಟ್ಟಿಗೆ ಮುಂದೆ ಇಟ್ಟಿರೋ ಚೆಂಬು ತಕ್ಕೋಂಡ್ಹೋಗಬೇಕು… ಊರೋರೆಲ್ಲಾ ಅದೇ ಬಾವಿಗೆ ಬರೋದು…ʼ

ಸಂತೋಷರಿಗೆ ಕೊಂಚ ಎದೆ ಹೊಡಕ್ಕೊಳ್ತು. ಅಲ್ಲಾ. ಇಲ್ಲಿ ಟಾಯ್ಲೆಟ್ಟೂ… ಕಮೋಡ್‌…

ʼಇದೆ. ಅಲ್ಲೊಂದು ಇಲ್ಲೊಂದು. ಕಾಲ್ತೊಳಕ್ಕೊಳಕ್ಕಷ್ಟೆ. ಮುಖ್ಯ ಕಾರ್ಯಕ್ಕೆಲ್ಲಾ ಬಾವಿ ಚೊಂಬು… ಏನೂ ಹೆದರಬೇಡಿ. ಹಾವು ಕಪ್ಪೆ ನಿಮ್ಮೇಲೇನೂ ಬರಲ್ಲʼ

ರಾತ್ರಿಯೆಲ್ಲಾ ನಿದ್ದೆ ಸುಳಿಯಲಿಲ್ಲ. ʼಬೆಳಗಾಗಿ ನಾನೆದ್ದು…ʼ ಗುನುಗುನಿಸುವಂತಾಯ್ತು! ಸೂರ್ಯೋದಯಕ್ಕೆ ಮೊದಲೇ ಕೆಲಸ ಮುಗಿಸಬೇಕು ಅಂತ ಸಂಕಲ್ಪ ಮಾಡಿಕೊಂಡು ಆ ಕಡೆ ಹೊರಳಿ ಈ ಕಡೆ ಹೊರಳಿ ರಾತ್ರಿ ಮುಗಿಸುತ್ತಿದ್ದರು. ಅರುಣ ಕಿರಣಗಳು ಬರುವ ಸೂಚನೆ ಬರ್ತಿದ್ದ ಹಾಗೆ ಚುಮು ಚುಮು ಬೆಳಕಲ್ಲೇ ಗೆಳೆಯ ಕೊಟ್ಟ ನಿರ್ದೇಶನ ಪಾಲಿಸಿದರು. ಯಶಸ್ವಿಯಾಗಿ ಕಾರ್ಯ ಮುಗಿಸಿ ಬಾವಿಯನ್ನು ದಾಟಿ ಅವನ ಮನೆಯ ಕಡೆ ಹೆಜ್ಜೆ ಹಾಕುವಾಗ ಹಕ್ಕಿಗಳ ಕಲರವ ಕಿವಿಗೆ ಬಿತ್ತು. (ಅಲ್ಲಿಯವರೆಗೂ ಬೇರೇನೂ ಕೇಳಿರಲಿಲ್ಲ, ಕಂಡಿರಲಿಲ್ಲ!). ಓಹೋ ಅದು ನವಿಲು, ಇದು ಗಿಣಿ, ಆಹಾ ಅಲ್ಲೆಲ್ಲೋ ಯಾವುದೋ ಪ್ರಾಣಿಯ ಕೂಗು… ಆಸ್ವಾದಿಸುತ್ತಿದ್ದರು.

ಆಗಲೇ ದಪದಪ ಸದ್ದು. ಯಾರೋ ಅಥವಾ ಏನೋ ಓಡೋಡಿ ಬರುವಂತೆ. ಆನೆಗೀನೆ… ಎನ್ನುವ ಭಯ ಕ್ಷಣ ಕಾಲ ಬೆನ್ನು ಹುರಿಯಲ್ಲಿ ಓಡಿ, ಕಾಲಿಗೆ ಓಡು ಅಂತ ಹೇಳಿತ್ತು. ಅಷ್ಟರಲ್ಲಿ ಮಿದುಳು ಹೇಳಿದ್ದು ಒಂದು ಸರ್ತಿ ನೋಡು ಅದೇನಿರಬಹುದು.

ನೋಡ್ತಾರೆ ಮಸುಕು ಮಸುಕು ಬೆಳಕಲ್ಲಿ ಕಂಡದ್ದು ಯಾರೋ ಹುಡುಗಿ. ಓಡಿ ಬರ್ತಿದ್ದಾಳೆ. ಯಾಕಪ್ಪಾ ಹೀಗೆ ಎಂದುಕೊಂಡರು ಸಂತೋಷ್‌. ಜೊತೆಗೇ ಸಮಾಧಾನ ಸಿಕ್ಕಿತು. ʼಊರೋವ್ರೆಲ್ಲಾ ಇದೇ ಬಾವಿ ನೀರಿಗೇ ಬರೋದು…ʼ ಸರಿ ಎಂದು ಮುಂದೆ ಹೆಜ್ಜೆ ಹಾಕಿದ ಕೆಲ ಕ್ಷಣಗಳಲ್ಲೇ ʼದಭಾರ್‌ʼ ಎಂದು ಏನೋ ದೊಡ್ಡ ವಸ್ತು ನೀರಿಗೆ ಬಿದ್ದ ಸದ್ದು.

ಸಂತೋಷ್‌ ಸ್ತಂಭೀಭೂತರಾದರು. ನಿಧಾನ ತಲೆ ತಿರುಗಿಸಿದರು. ಹುಡುಗಿ ಎಲ್ಲೂ ಕಾಣಲಿಲ್ಲ. ಅವರಿಗೆ ಏನೋ ಅನುಮಾನ… ನಿಜವೇ ಅಲ್ಲವೇ… ಬಹಳ ಕಷ್ಟಪಟ್ಟು ಭಾರವಾಗಿದ್ದ ಕಾಲು ಕಿತ್ತು ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಾವಿಯ ಹತ್ತಿರ ಹೋದರು. ಅಷ್ಟು ಹೊತ್ತಿಗೆ ಇನ್ನಷ್ಟು ಬೆಳಕು ಬಂದಿತ್ತು. ಹೆದರುತ್ತಲೇ ಬಾವಿಯೊಳಗೆ ಬಗ್ಗಿ ನೋಡಿದರು. ಆಳದಲ್ಲೆಲ್ಲೋ ನೀರು ಕಲಕುತ್ತಿರುವುದು ತಿಳಿಯುತ್ತಿತ್ತು. ಹುಡುಗಿ ಹೊದೆದುಕೊಂಡಿದ್ದ ಕೆಂಪು ವಸ್ತ್ರ ನೀರು ಸೇದುವ ಹಗ್ಗಕ್ಕೆ ಸಿಕ್ಕಿಕೊಂಡಿತ್ತು. ಸಂತೋಷ್‌ಗೆ ಖಾತ್ರಿಯಾಯಿತು. ಈ ಹುಡುಗಿ ನೀರಿಗೆ ಬಿದ್ದಿದ್ದಾಳೆ!

ತಟ್ಟನೆ ಅವರ ಮಿದುಳು ಕೆಲಸ ಮಾಡಲಾರಂಭಿಸಿತು. ಮೊದಲು ನೆನಪಿಗೆ ಬಂದಿದ್ದು ಮಧ್ಯಾಹ್ನ ಅವರಿಗೆ ಲಾಯರ್‌ ಜೊತೆ ಇರುವ ಮೀಟಿಂಗ್‌. ತಪ್ಪಿಸಲಾಗುವುದೇ ಇಲ್ಲ. ಇನ್ನು ಇಲ್ಲಿ ಹೆಚ್ಚು ಹೊತ್ತು ಇರಬಾರದು. ಧಡಬಢ ಗೆಳೆಯನ ಮನೆಗೆ ಬಂದವರೇ, ಫಸ್ಟ್‌ ಬಸ್‌ ಎಂದ್ಯಲ್ಲಯ್ಯಾ ನಡಿ ನಡಿ ಎಂದು ಹೊರಡಿಸಿ, ಮುಖ್ಯರಸ್ತೆಗೆ ಬಂದೇ ಬಿಟ್ಟರು. ಬಂದ ಬಸ್‌ ಹತ್ತಿ ನಗರದೆಡೆಗೆ ಹೊರಟುಬಿಟ್ಟರು.

***

ʼಏನು ಮನುಷ್ಯ ಸರ್‌ ಅವನು. ಮನುಷ್ಯತ್ವ ಇದೆಯಾ ಅವನಿಗೆ?ʼ ʼಇಂತಹವರಿಂದಲೇ ಜಗತ್ತು ಹೀಗಾಗಿರುವುದುʼ. ʼಅಲ್ಲ ಅಲ್ಲಿರೋ ಹಗ್ಗ ಬಿಟ್ಟು ಹಿಡ್ಕೋ ಅಂತ ಹೇಳಬಹುದಿತ್ತಲ್ಲʼ. ʼತಾನೂ ಬಾವಿಗೆ ಹಾರಿ ಆ ಹುಡುಗೀನ ರಕ್ಷಿಸಬಹುದಿತ್ತುʼ. ʼಬೇಡಪ್ಪ ಅಯ್ಯೋ ಅಯ್ಯೋ ಅಂತ ಕೂಗಿ ನಾಲ್ಕು ಜನರನ್ನ ಕೂಡಿಸಿ ಅವಳನ್ನ ರಕ್ಷಿಸಬಹುದಿತ್ತು.ʼ

ಕತೆ ಕೇಳಿ ಏನಾಯ್ತು, ನಿಮಗೇನನ್ನಿಸಿತು ಅಂತ ಕೇಳಿದಾಗ ಬರುವ ಜವಾಬುಗಳು. ಜೊತೆಗೆ ಬೇರೆಯವೂ ಇರುತ್ತೆ,

ʼಇದೆಲ್ಲಾ ಸುಳ್ಳು ಬಿಡಿ ಸರ್‌. ಯಾರ್ತಾನೆ ಹಾಗೆ ಬಂದ್ಬಿಡ್ತಾರೆ. ನೀವು ಸುಳ್ಳು ಕತೆ ಹೇಳ್ತಿದ್ದೀರಿʼ. ʼಸರ್‌ ನನಗನ್ನಿಸುತ್ತೆ ಆವಯ್ಯಾನೇ ಏನಾದ್ರೂ ಮಾಡಿ ಅಥ್ವ ಮಾಡಕ್ಕೋಗಿ…ʼ

ಹೀಗೇ ಮಾತುಕತೆ ಮೇಲುಮೇಲಕ್ಕೆ ಅಡ್ಡಡ್ಡವಾಗಿ ಬೆಳೆಯುತ್ತಾ ಹೋಗುತ್ತದೆ. ಮಧ್ಯದಲ್ಲಿ ನನ್ನದೊಂದು ಪ್ರಶ್ನೆಯಿರುತ್ತದೆ, ʼಸಂತೋಷ್‌ ಮಾಡಿದ್ದು ತಪ್ಪಾ ಸರೀನಾ…?ʼ 

ತಪ್ಪು ಅಂತ ಹೇಳುವವರು ಬಹುತೇಕರಿದ್ದರೂ, ಅಲ್ಲೊಂದು ಇಲ್ಲೊಂದು ʼಇನ್ನೇನ್ಮಾಡಕ್ಕಾಗುತ್ತೆ ಸರ್‌. ಆ ಹುಡ್ಗಿ ಬಾವೀಲ್‌ ಬೀಳಕ್ಕೆ ಇವರೇನೂ ಕಾರಣವಲ್ಲ. ಮತ್ತೆ ಏನೋ ಅರ್ಜೆಂಟು ಕೆಲಸ ಬೇರೆ ಇತ್ತು ಅಂತೀರಿ. ಅವರದೇನೋ ತಪ್ಪಿಲ್ಲ ಬಿಡಿʼ ಎನ್ನುವವರೂ ಇರುತ್ತಾರೆ.

ಮತ್ತೆ ಒಂದಷ್ಟು ಕಾಲ ಶಬ್ದಗಳ ಕಾದಾಟವಾದ ಮೇಲೆ ನನ್ನದು ಇನ್ನೊಂದು ಪ್ರಶ್ನೆ ಇರುತ್ತದೆ. ʼತಪ್ಪು. ಸಂತೋಷ್‌ ಮಾಡಿದ್ದು ತಪ್ಪು ಎನ್ನುವುದಾದರೆ ಅವರಿಗೇನು ಶಿಕ್ಷೆ?”

ಈ ಹಂತದಲ್ಲಿ ಎರಡು ಪದಗಳು ಪ್ರವೇಶ ಪಡೆಯುತ್ತವೆ – ಕರ್ತವ್ಯ ಲೋಪ (ಒಮಿಷನ್‌) ಮತ್ತು ಆಪರಾಧಿಕ ಕೃತ್ಯ (ಕಮಿಷನ್‌). ಮಾಡಬೇಕಾದ ಕೆಲಸಗಳನ್ನು ತಿಳಿದೂ ತಿಳಿದೂ ಮಾಡದಿರುವುದು ಕರ್ತವ್ಯ ಲೋಪ. ಮತ್ತು ಯಾವುದನ್ನು ಮಾಡಬಾರದು ಎಂದು ತಿಳಿದೋ, ತಿಳಿಯದೆಯೋ ಮಾಡುವುದು ಆಪರಾಧಿಕ ಕೃತ್ಯ.

ಒಂದಷ್ಟು ಕಾಲ ಮೌನ. ಅವರವರಲ್ಲೇ ಮಾತುಕತೆ. ಎಲ್ಲೋ ಕೆಲವರು ʼಶಿಕ್ಷೆ ಹೇಗೆ ಕೊಡೋದು. ಅದನ್ನ ನೋಡಿರೋರಿಲ್ಲ. ಸಾಕ್ಷಿ ಇಲ್ಲ…ʼ ಎಂದರೆ, ಬಹುತೇಕರು ಶಿಕ್ಷೆ ಕೊಡಲೇಬೇಕು ಎಂದು ದನಿ ಎತ್ತರಿಸುತ್ತಾರೆ. ಚರ್ಚೆಯ ನಡುವೆ ಆಪರಾಧಿಕ ಕೃತ್ಯ, ಕಾನೂನು, ಶಿಕ್ಷೆ ಕುರಿತು ಒಂದಷ್ಟು ವಿವರಣೆಗಳು, ಅಪರಾಧ ಶಾಸ್ತ್ರ ಮತ್ತು ಕಾನೂನು ಇತ್ಯಾದಿ ಚರ್ಚೆಯ ನಡುವೆ ಹೊರಬೀಳುತ್ತದೆ. ಒಂದು ಕೃತ್ಯ/ಕ್ರಿಯೆ ಆಪರಾಧಿಕ ಎಂದು ಗುರುತಿಸಬೇಕೆಂದರೆ ಅದನ್ನು ವಿವಿಧ ಕಾಯಿದೆಗಳಲ್ಲಿ ವಿವರಿಸಬೇಕು ಮತ್ತು ಅದಕ್ಕೆ ಶಿಕ್ಷೆ ಇರಬೇಕು. ಅಥವಾ ಇಂತಹ ಕೃತ್ಯಗಳನ್ನು ಪ್ರಕರಣಗಳ ಹಿನ್ನೆಲೆಯಲ್ಲಿ ಆಪರಾಧಿಕ ಎಂದು ಗುರುತಿಸುವ ಚಿಂತನೆ ಇರಬೇಕು. ಈಗ ಸಂತೋಷರ ಕೃತ್ಯವೇನು? ಅವನು ಏನೂ ಮಾಡಿಲ್ಲ ಎಂದು ಕೆಲವರ ವಾದ… ಯಾಕೆ ಏನೂ ಮಾಡಿಲ್ಲ, “ಏನೂ ಮಾಡದೆ ಓಡಿ ಹೋಗಿರೋದು, ʼಏನೋ ಮಾಡಿದ ಹಾಗೇನೇʼ. ಹೀಗಾಗಿ ಅವರಿಗೆ ಶಿಕ್ಷೆ ಆಗಲೇಬೇಕು”.

ಅಂತೂ ಇಂತೂ ಕೊನೆಗೊಮ್ಮೆ ʼಸಂತೋಷ್‌ ಹುಡುಗಿಯನ್ನು ರಕ್ಷಿಸಲು ಯತ್ನಿಸದಿರುವುದು, ಯಾರನ್ನಾದರೂ ಕೂಗಿ ಕರೆಯದಿರುವುದು, ಹೋಗಲಿ ಬಸ್‌ ಹತ್ತುವ ಮುನ್ನ ಗೆಳೆಯನಿಗೆ ಇಂತಹದು ಆಗಿದೆ ಎಂದು ಹೇಳದೇ ಹೋಗಿರುವುದು ಅವರ ಘನತೆಗೆ ತಕ್ಕುದಲ್ಲ. ಅವರು ಏನೂ ಮಾಡದಿರುವುದೇ ಅಪರಾಧ. ಅದಕ್ಕೆ ಶಿಕ್ಷೆ ಕೊಡಲೇಬೇಕುʼ ಎಂದು ಚರ್ಚೆಯಲ್ಲಿ ನಿರ್ಧಾರವಾಗುತ್ತದೆ.  

ʼಸರಿ. ಏನು ಶಿಕ್ಷೆ ಕೊಡೋಣ?ʼ

ಕಾನೂನು ಓದದಿರುವವರು, ಕಾನೂನು ಓದಿರುವವರು ಎಲ್ಲರಿಗೂ ಇದೊಂದು ಕಗ್ಗಂಟು. ಬಹುತೇಕರು ʼಏನು ಮಾಡುವುದು ಸರ್‌, ಏನು ಶಿಕ್ಷೆ ಕೊಡೋದು? ಅವರು ಸದಾಕಾಲಕ್ಕೂ ಈ ಒಂದು ಪಾಪಪ್ರಜ್ಞೆಯಿಂದ ಬದುಕಬೇಕಷ್ಟೆ. ವಿಷಾದಕರ ಘಟನೆಗೆ ತಾನು ಸಾಕ್ಷಿಯಾದೆನೆಲ್ಲಾ ಎಂದು ಪರಿತಪಿಸಬೇಕಷ್ಟೆʼ. ಎಲ್ಲೋ ಕೆಲವರು ʼಇದಷ್ಟು ಸುಲಭವಲ್ಲ. ಪೊಲೀಸರು ಖಂಡಿತಾ ಅವರನ್ನ ವಿಚಾರಣೆಗೆ ಕರೆತರ್ತಾರೆ. ಆ ಊರಲ್ಲಿ ಯಾರು ಯಾರು ಇದ್ದರು, ಯಾರು ಹೊರಗೆ ಹೋದರು, ಯಾವಾಗ ಹೋದರು, ಇವೆಲ್ಲಾ ನೋಡಿ ಸಂತೋಷ್‌ ಅವರೊಡನೆ ಮಾತನಾಡ್ತಾರೆ. ಕೇಳೇ ಕೇಳ್ತಾರೆ… ಇವರು ಸಾಕ್ಷಿ ಕೊಟ್ಟರೆ ಸಮರ್ಪಕವಾಗಿದ್ದರೆ ಬಿಡ್ತಾರೆ… ಆದ್ರೂ ಅವರದೇನೂ ತಪ್ಪಿಲ್ಲ ಅಂದ್ರೂ ಯಾಕೆ ಹೇಳದೆ ಕೇಳದೆ ಹೋದೆ ಅಂತ ಹಿಡ್ಕೋಳೋದಂತೂ ಗ್ಯಾರಂಟಿ. ಶಿಕ್ಷೆ…!ʼ

ʼತಾನು ತಪ್ಪು ಮಾಡಿಲ್ಲ ಅಥವಾ ಆಪರಾಧಿಕ ಕೃತ್ಯ ಮಾಡಿಲ್ಲ… ಆದರೆ ತಪ್ಪಾಗಿರುವುದನ್ನು ನೋಡಿದ್ದೇನೆ… ಆದರೆ ತಡೆಯಲಿಲ್ಲ, ತಪ್ಪಿಸಲಿಲ್ಲ… ತಪ್ಪಾಗಿರುವುದನ್ನು ಸಂಬಂಧಿತರಿಗೆ ವಿಚಾರ ತಿಳಿಸಲಿಲ್ಲ… ದೂರು ನೀಡಲಿಲ್ಲʼ ಎಂದರೆ ಅಂತಹವರು ತಪ್ಪಿನ ಭಾಗವಾಗುತ್ತಾರೆ. ಇಲ್ಲಿ ಆ ಹುಡುಗಿ ಬಾವಿಗೆ ಬಿದ್ದಿರುವುದನ್ನು ಯಾರಿಗೂ ಹೇಳದೆ ಹೋಗಿರುವ ಸಂತೋಷ್‌ ಶಿಕ್ಷಾರ್ಹರು!

***

ಇಂತಹ ಅನೇಕ ಪ್ರಸಂಗಗಳು ನಮ್ಮೆದುರು ಇರುತ್ತವೆ. ಕುಟುಂಬಗಳಲ್ಲಿ, ಸಮುದಾಯಗಳಲ್ಲಿ, ಶಾಲೆ, ಹಾಸ್ಟೆಲ್‌, ಸಾರ್ವಜನಿಕ ಸ್ಥಳಗಳು, ವಿವಿಧ ಕಛೇರಿಗಳು, ಸರ್ಕಾರಿ, ಖಾಸಗಿ… ಹೀಗೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿ. ಹೀಗೆ ಎಲ್ಲೆಲ್ಲೂ. 

ಮೊದಲನೆಯದಾಗಿ ಪ್ರತಿಯೊಬ್ಬರಿಗೂ ಒಂದೊಂದು ನಿರ್ದಿಷ್ಟ ಪಾತ್ರವಿದೆ, ಅಧಿಕಾರವಿದೆ. ಅದನ್ನು ನಿರ್ವಹಿಸುವುದು ನಮ್ಮ ಕರ್ತವ್ಯ. ಅದನ್ನು ಮಾಡದಿದ್ದರೆ ತಪ್ಪು (ಶಿಕ್ಷಾರ್ಹ ಎಂದೇ ಹೇಳಬಹುದು). ಉದಾ. ಸರ್ವಜ್ಞನ ತ್ರಿಪದಿಯನ್ನು ನೆನಪಿಸಿಕೊಳ್ಳಬಹುದು. ʼವಿದ್ಯೆ ಕಲಿಸದಾ ಗುರುವು, ಬುದ್ಧಿ ಹೇಳದಾ ತಂದೆ, ಬಿದ್ದಿರಲು ಬಂದು ನೋಡದಾ ತಾಯಿ ಶುದ್ಧ ವೈರಿಗಳು ಸರ್ವಜ್ಞಾʼ. ಇದನ್ನ ಸರ್ವಜ್ಞನರ ಮಾತಿನಂತೆಯೇ ಹಾಗೆಹಾಗೆಯೇ ತೆಗೆದುಕೊಳ್ಳಬೇಕಿಲ್ಲ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ದೃಷ್ಟಿಕೋನದಲ್ಲಿ ಪರಿಚ್ಛೇದ ೧೮ ಹೇಳುವಂತೆ ಪೋಷಕರಿಬ್ಬರೂ ಮಕ್ಕಳ ಅಭಿವೃದ್ಧಿಯಲ್ಲಿ ಪಾಲುದಾರರು ಮತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯ ಪರಿಚ್ಛೇದ ೧೦ ಕೂಡಾ ಇದನ್ನೇ ಧ್ವನಿಸುತ್ತದೆ. ಇಷ್ಟೆಲ್ಲಾ ಇರಲಿ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ೫೧(ಎ)ಕೆ ʼಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣದಲ್ಲಿ ತೊಡಗಿಸಿಬೇಕುʼ ಎಂಬ ನಿರ್ದೇಶನವಿದೆ. 

ಈ ತ್ರಿಪದಿಯನ್ನು ಇಂದಿನ ದಿನಗಳಿಗೆ ಹೋಲಿಸಿದರೆ… ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಎನ್ನೋಣ. ಮಕ್ಕಳಿಗೆ ಸಂಬಂಧಿಸಿದಂತೆ ಮಕ್ಕಳೆದುರಿಸುವ ಅನೇಕ ಸಮಸ್ಯೆಗಳಿಗೆ ಸಮೀಕರಿಸೋಣ. ಉದಾಹರಣೆಗೆ, ಮಕ್ಕಳ ಜನನ ಪ್ರಮಾಣ ಪತ್ರ ಕೊಡಲು ಲಂಚ ಕೇಳುವವರು ಅಥವಾ ಕೊಡದಿರುವವರು, ಮಕ್ಕಳಿಗೆ ಸರಿಯಾದ ರೀತಿಯಲ್ಲಿ ರೋಗ ನಿರೋಧಕಗಳನ್ನು ತಲುಪಿಸದವರು, ಮಕ್ಕಳಿಗಾಗಿ ಕೊಡುವ ಆಹಾರಗಳ ಕಲಬೆರಕೆ ಮಾಡುವವರು, ಔಷಧಿಗಳನ್ನು ವಿತರಿಸದಿರುವವರು… ಇನ್ಯಾರಿರಬಹುದು ಎಂದು ಪ್ರಶ್ನೆ ಕೇಳಿದೊಡನೆಯೇ, ಕಟ್ಟೆ ಒಡೆದು ಹರಿವ ನೀರಿನಂತೆ ಪಟ್ಟಿ ಬಿಚ್ಚಿಕೊಳ್ಳುತ್ತದೆ… ಕರ್ತವ್ಯಲೋಪಿಗಳು ಮತ್ತು ತಿಳಿದೂ ತಿಳಿದೂ ಮಕ್ಕಳ ಮೇಲೆ ಅಪರಾಧಗಳನ್ನು ಮಾಡುವವರದ್ದು.

ʼ…ಮಕ್ಕಳ ಸ್ಕಾಲರ್‌ಶಿಪ್‌ ಹಣ ಕೊಡದೆ ತಿನ್ನುವವರು… ಮಕ್ಕಳ ಪೌಷ್ಟಿಕ ಆಹಾರಕ್ಕೆ ಕಲಬೆರಕೆ ಕೊಡುವವರು… ಶಾಲೆಗೆ ಅಂಗನವಾಡಿಗೆ ಮಕ್ಕಳು ಬರದಿದ್ದರೂ ಅವರಿಗೆಲ್ಲಾ ಹಾಜರಾತಿ ಹಾಕಿ ಅವರ ಪಾಲಿನದನ್ನೆಲ್ಲಾ ಹೊಡೆಯುವವರು… ವೈದ್ಯಕೀಯ ಪರೀಕ್ಷೆಯನ್ನೇ ಮಾಡಿಸದೆ ಅದರ ಹಣವನ್ನು ಪಾವತಿಸಿದೆ ಎಂದು ಬರೆಯುವವರು… ಮಕ್ಕಳ ಆಟಿಕೆ ಪುಸ್ತಕಗಳನ್ನು ಕೊಳ್ಳದೆ ಬಿಲ್‌ ತೆಗೆದುಕೊಳ್ಳುವವರು… ಕಳಪೆ ಬೂಟು ಸಮವಸ್ತ್ರ ಕೊಡುವುದು ಅಥವಾ ಕೊಡದೇ ಇರುವುದು… ವಿದ್ಯಾರ್ಥಿ ನಿಲಯದಲ್ಲಿ ಆಹಾರವನ್ನು ಸರಿಯಾಗಿ ಕೊಡದಿರುವುದು, ಹೊದೆಯಲು, ಹಾಸಲು ಕೊಡುವ ಬಟ್ಟೆಯಲ್ಲಿ ಮಿಗಿಸಿಕೊಳ್ಳುವವರು… ಶಾಲೆಗೆ ಬಂದರೂ ಪಾಠ ಮಾಡದಿರುವವರು… ಶಾಲಾ ಗ್ರಂಥಾಲಯದ ಪುಸ್ತಕಗಳನ್ನು ಮಕ್ಕಳಿಗೆ ಕೊಡದೆ ಮುಚ್ಚಿಟ್ಟುಕೊಳ್ಳುವವರು… ಕಳಪೆ ಗುಣಮಟ್ಟದ ಬೈಸಿಕಲ್ ಸರಬರಾಜು ಮಾಡುವುದು… ಮಕ್ಕಳ ಮೇಲಾದ ಅಪರಾಧಗಳನ್ನ ಕುರಿತು ಪೊಲೀಸರು ದೂರು ದಾಖಲು ಮಾಡಿಕೊಳ್ಳದಿರುವುದು… ತಡ ಮಾಡುವುದು… (ಮಕ್ಕಳ ಹಕ್ಕುಗಳ ಒಡಂಬಡಿಕೆ ಪರಿಚ್ಛೇದ ೨೭ ಹೇಳುತ್ತದೆ, ಮಕ್ಕಳ ಜೀವನ ಮಟ್ಟವನ್ನು ವೃದ್ಧಿಸುವಲ್ಲಿ ಸರ್ಕಾರ ಮತ್ತು ಸಮಾಜದ ಪಾತ್ರವಿದೆ). 

ʼಮಕ್ಕಳ ಮೇಲೆ ಅನ್ಯಾಯವಾದರೂ ಅದರ ಬಗ್ಗೆ ಉಸಿರೆತ್ತದಿರುವವರು… ಮಕ್ಕಳನ್ನು ಮೋಸದಿಂದ ಬಳಸಿಕೊಂಡು, ಲೈಂಗಿಕವಾಗಿಯೂ ಉಪಯೋಗಿಸಿಕೊಂಡು… ೧೮ ಆಗಿಲ್ಲದಿದ್ದರೂ ಸುಳ್ಳು ವಯಸ್ಸಿನ ಪ್ರಮಾಣಪತ್ರ ಕೊಟ್ಟು ಮದುವೆ ಮಾಡುವುದು… ೧೮ ವರ್ಷದೊಳಗಿನ ಗರ್ಭಿಣಿ ಬಂದಾಗ ಅವಳ ವಯಸ್ಸನ್ನು ಇಪ್ಪತ್ತು ಅಥವಾ ಇಪ್ಪತ್ತೊಂದು ಎಂದು ಬರೆದು ತಮ್ಮ ತಲೆ ಕಾಯ್ದುಕೊಳ್ಳುವ ವೈದ್ಯರು…ʼ (ಮಕ್ಕಳ ಹಕ್ಕುಗಳ ಒಡಂಬಡಿಕೆ ಪರಿಚ್ಛೇದ ೧೯ ಮಕ್ಕಳನ್ನು ದುರುಪಯೋಗ ಮತ್ತು ನಿರ್ಲಕ್ಷ್ಯದ ವಿರುದ್ಧ ರಕ್ಷಿಸಬೇಕೆಂದು ನಿರ್ದೇಶಿಸುತ್ತದೆ).

ಈ ಎಲ್ಲವೂ ಒಂದು ಕಡೆ ಕರ್ತವ್ಯಲೋಪ, ಇನ್ನೊಂದು ಕಡೆ ಅಪರಾಧ.  ಈ ಎರಡೂ ಶಿಕ್ಷಾರ್ಹ. ಉದಾಹರಣೆಗೆ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ೨೦೧೫ ಮತ್ತು ಮಕ್ಕಳ ಮೇಲೆ ಲೈಂಗಿಕ ಅಪರಾಧಗಳ ವಿರುದ್ಧ ರಕ್ಷಣೆ ಕಾಯಿದೆ ೨೦೧೨ ಈ ಎರಡರಲ್ಲೂ ಕರ್ತವ್ಯಲೋಪಿಗಳಿಗೆ ಶಿಕ್ಷೆ ಘೋಷಿಸಲಾಗಿದೆ. ಮುಖ್ಯವಾಗಿ ಮಕ್ಕಳ ಮೇಲೆ ಆದ ಯಾವುದೇ ಅಪರಾಧದ ಅರಿವು ಒಬ್ಬರಿಗಿದ್ದರೆ, ವಿಷಯ/ವಿಚಾರ ತಿಳಿದಿದ್ದರೆ ಆ ಕುರಿತು ಪೊಲೀಸ್‌ ದೂರು ಕೊಡದಿದ್ದರೆ ಅದು ಅಪರಾಧವಾಗುತ್ತದೆ. ಅದೇ ರೀತಿ ಯಾವುದಾದರೂ ಮಗು ಶಾಲೆಗೆ ಬರದಿರುವುದು, ಮಗು ಬಾಲಕಾರ್ಮಿಕನಾ/ಳಾಗಿರುವುದು, ಬಾಲ್ಯವಿವಾಹಕ್ಕೆ ಬಲಿಯಾಗಿರುವುದು ಅಥವಾ ಸಾಗಣೆ ಮಾರಾಟಕ್ಕೆ ಬಲಿಯಾಗಿರುವುದು ತಿಳಿದಿದ್ದರೂ ದೂರು ದಾಖಲಿಸದಿರುವುದು ಮಕ್ಕಳ ಮೇಲೆ ಸಂಬಂಧಿಸಿದವರು ತಾವೇ ಅಪರಾಧ ಮಾಡಿದಂತಾಗುತ್ತದೆ.

ಇನ್ನೂ ಮುಂದೆ ಹೋಗುವುದಾದರೆ, ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ, ಯೋಜನೆ ಮೊದಲಾದವುಗಳಿಗೆ ಸರ್ಕಾರದಿಂದ ಹಣ ನಿಗದಿಯಾಗಿದ್ದರೂ ಆ ಹಣಕ್ಕೆ ಬೇಡಿಕೆಯನ್ನೇ ಸಲ್ಲಿಸದಿರುವುದು, ಹಣ ಬಂದರೂ ಅದನ್ನು ಉಪಯೋಗಿಸದಿರುವುದು ಸಂಬಂಧಿಸಿದ ಮಕ್ಕಳಿಗೆ ತಲುಪಿಸದಿರುವುದು ಕರ್ತವ್ಯಲೋಪ. ಕೆಲವು ಅಧಿಕಾರಿಗಳಿಗೆ ಖರ್ಚು ಮಾಡಲೂ ಭಯ! ಇರುವ ಅಧಿಕಾರ, ಸ್ಥಾನಮಾನ ಬಳಸಿಕೊಂಡು ಒಳಿತು ಮಾಡಲೂ ಎಷ್ಟೋ ಜನ ಮುಂದಾಗುವುದೇ ಇಲ್ಲ.  

ಮಕ್ಕಳ ನ್ಯಾಯ ಕಾಯಿದೆಯಲ್ಲಿ ʼಪೋಷಣೆ ಮತ್ತು ರಕ್ಷಣೆಯ ಆವಶ್ಯಕತೆ ಇರುವ ಮಕ್ಕಳುʼ ಎಂದು ಸೆ. ೨(೧೪)ರಲ್ಲಿ ಒಂದು ದೊಡ್ಡ ಪಟ್ಟಿಯನ್ನೇ ನೀಡಿದೆ: “ಯಾವ ಮಕ್ಕಳಿಗೆ ತಮ್ಮದೇ ಆದ ಮನೆಯಿಲ್ಲವೋ ಅಥವಾ ವ್ಯವಸ್ಥಿತವಾದ ವಾಸಸ್ಥಳವಿಲ್ಲವೋ ಅಥವಾ ಮೇಲು ನೋಟಕ್ಕೆ ಕಂಡುಬರುವಂತೆ ಜೀವನ ನಿರ್ವಹಣೆಗೆ ಸೂಕ್ತ ಮಾರ್ಗವಿಲ್ಲವೋ ಅಂತಹ ಮಕ್ಕಳು; ಅಥವಾ ಚಾಲ್ತಿಯಲ್ಲಿರುವ ಕಾರ್ಮಿಕ ಕಾಯಿದೆಗಳಿಗೆ ವಿರುದ್ಧವಾಗಿ ದುಡಿಯುತ್ತಿರುವ/ಬಾಲಕಾರ್ಮಿಕರನ್ನಾಗಿಸಿರುವ ಅಥವಾ ಭಿಕ್ಷೆ ಬೇಡುತ್ತಿರುವ ಅಥವಾ ಬೀದಿಯ ಮೇಲೆ ಬದುಕುತ್ತಿರುವ ಮಗು;” ಅಥವಾ “ಯಾವ ಮಗುವಿಗೆ ತನ್ನ ಪೋಷಕರು ಆಗಿರಬಹುದಾದ ಅಥವಾ ಅಲ್ಲದ ಯಾವ ವ್ಯಕ್ತಿಯೊಡನೆ ಇರುವಾಗ  ಅಂಥಹ ವ್ಯಕ್ತಿಯಿಂದ


ಎ).ಯಾವ ಮಗುವಿನ ಮೇಲೆ ಹಲ್ಲೆಯಾಗಿದ್ದು ಗಾಯಗಳಾಗಿವೆಯೋ, ಶೋಷಣೆಗೆ, ದುರುಪಯೋಗಕ್ಕೆ ಒಳಪಟ್ಟಿದೆಯೋ ಅಥವಾ ಮಕ್ಕಳ ರಕ್ಷಣೆಗೆ ಈಗ ಚಾಲ್ತಿಯಲ್ಲಿರುವ ಯಾವುದೇ ಕಾಯಿದೆಯನ್ನು ಉಲ್ಲಂಘಿಸುತ್ತಿದ್ದಲ್ಲಿ; ಅಥವಾ

ಬಿ)ಯಾವ ಮಗುವಿಗೆ ಕೊಲೆ ಬೆದರಿಕೆ ಅಥವಾ ದೈಹಿಕ ಹಲ್ಲೆ/ಗಾಯವಾಗಲಿದೆ ಎಂದು ನಂಬಲರ್ಹವಾದ ಸಾಧ್ಯತೆಗಳು ಇವೆಯೋ ಮತ್ತು ಅಂತಹ ಬೆದರಿಕೆ ಮುಂದುವರಿಯುವ ಸಾಧ್ಯತೆಗಳಿವೆಯೋ; ಅಥವಾ

ಸಿ)ಅಲ್ಲಿರುವ ಇತರ ಮಕ್ಕಳು/ಮಗುವನ್ನು ಕೊಂದಿರುವ, ದುರುಪಯೋಗ, ನಿರ್ಲಕ್ಷ್ಯ ಮಾಡಿರುವ ಪ್ರಕರಣವಿದ್ದು, ಒಂದು ನಿರ್ದಿಷ್ಟ ಮಗು ಅಥವಾ ಮಕ್ಕಳಿಗೆ ಕೊಲೆ/ದುರುಪಯೋಗ ಅಥವಾ ನಿರ್ಲಕ್ಷ್ಯ ಉಂಟಾಗುವ ಸಾಧ್ಯತೆಗಳಿದ್ದಲ್ಲಿ;”

“ಅಥವಾ ಮಾನಸಿಕ ಮತ್ತು/ಅಥವಾ ದೈಹಿಕ ಅಂಗವಿಕಲತೆಯಿಂದ ಬಳಲುತ್ತಿರುವ ಅಥವಾ ಅನಾರೋಗ್ಯದಿಂದಿರುವ ಅಥವಾ ಗುಣಪಡಿಸಲಾಗದಂತಹ ಮತ್ತು ಕ್ರಮೇಣ ಪ್ರಾಣಾಂತಕವಾದ ರೋಗದಿಂದ ಬಳಲುತ್ತಿದ್ದು ಯಾರೂ ಸಹ ಅಂತಹ ಮಕ್ಕಳನ್ನು ನೋಡಿಕೊಳ್ಳಲು ಇಲ್ಲದಿದ್ದಲ್ಲಿ, ಅಥವಾ ಆ ಮಗುವಿನ ಪೋಷಕರು ಅಥವಾ ತಂದೆ ತಾಯಿಯರು ಆ ಮಗುವನ್ನು ನೋಡಿಕೊಳ್ಳಲು ಅರ್ಹರಲ್ಲವೆಂದು ಜಿಲ್ಲಾ ಮಕ್ಕಳ ನ್ಯಾಯ ಮಂಡಳಿ ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ನಿರ್ಧರಿತವಾಗಿದ್ದಲ್ಲಿ; ಅಥವಾ, ಯಾವ ಮಕ್ಕಳಿಗೆ ಪೋಷಕರು ಅಥವಾ ಪಾಲಕರಿದ್ದೂ, ಅಂತಹ ಪೋಷಕರು/ಪಾಲಕರು ಮಕ್ಕಳ ಪಾಲನೆ, ಪೋಷಣೆ ಮತ್ತು ಸುರಕ್ಷತೆಯ ಜವಾಬ್ದಾರಿ ನಿರ್ವಹಿಸಲು ಅನರ್ಹರೆಂದು ಸಮಿತಿ ಅಥವಾ ಮಂಡಳಿಯು ನಿರ್ಧರಿಸಿದ್ದಲ್ಲಿ;” ಅಥವಾ

“ಯಾವ ಮಗುವಿಗೆ ಪೋಷಕರಿಲ್ಲವೋ ಅಥವಾ ಆ ಮಗುವಿನ ಪಾಲನೆಗೆ ಯಾರೂ ಮುಂದು ಬರುವುದಿಲ್ಲವೋ ಅಥವಾ ಯಾವ ಮಗುವನ್ನು ಪೋಷಕರೇ ತ್ಯಜಿಸಿದ್ದಾರೋ ಅಥವಾ ಪರಿತ್ಯಜಿಸಿದ್ದಾರೋ; ಅಥವಾ ಸಾಕಷ್ಟು ವಿಚಾರಣೆ, ತಪಾಸಣೆ ಮಾಡಿದ ಮೇಲೂ ಯಾವ ಮಗುವಿನ –ತಪ್ಪಿಹೋಗಿರುವ /ಕಳೆದು ಹೋಗಿರುವ, ಓಡಿ ಬಂದಿರುವ /ಬಿಟ್ಟು ಹೋಗಿರುವ- ಪೋಷಕರ ಪತ್ತೆ ಆಗದಿದ್ದಲ್ಲಿ; ಅಥವಾ ಯಾವುದೇ ರೀತಿಯ ಕಾನೂನು ಬಾಹಿರ ಅಥವಾ ಲೈಂಗಿಕವಾಗಿ ಮಗುವನ್ನು ಶೋಷಿಸುವ ಅಥವಾ ಅಂತಹ ಕಾನೂನು ವಿರೋಧೀ ಕೃತ್ಯಗಳಿಗೆ ಬಳಸುವ, ಹಿಂಸಿಸುವ ಮತ್ತು ದುರುಪಯೋಗಕ್ಕೆ  ಗುರಿಯಾಗುವ ಸಾಧ್ಯತೆಯಿರುವ ಮಕ್ಕಳು,” ಅಥವಾ

“ಯಾವ ಮಗು ಮಾದಕ ದ್ರವ್ಯಗಳ ಬಳಕೆಗೆ ಅಥವಾ ಸಾಗಣೆ/ಮಾರಾಟಕ್ಕೆ ತೊಡಗಿಕೊಳ್ಳುವಂತೆ ಮಾಡುವ ಮೂಲಕ ದುರುಪಯೋಗಕ್ಕೆ ಗುರಿಯಾಗುವ ಸಾಧ್ಯತೆ ಇದೆಯೋ, ಅಥವಾ ಯಾವ ಮಗು/ಮಕ್ಕಳ ಎಳೆ ವಯಸ್ಸು, ಮನಸ್ಸು, ದೇಹಗಳನ್ನು ದುಡಿಸಿ, ದಣಿಸಿ, ಆರ್ಥಿಕ ಲಾಭ ಗಳಿಸುವ ಉದ್ದೇಶವನ್ನು ಹೊಂದಿದ್ದಾರೆಂದು ಪರಿಗಣಿತವಾಗಿದೆಯೋ, ಅಥವಾ ಯಾವ ಮಗು/ಮಕ್ಕಳು ಸಶಸ್ತ್ರ ಸಂಘರ್ಷಗಳು, ನಾಗರೀಕ ಕ್ಷೋಭೆಗಳು ಅಥವಾ ನೈಸರ್ಗಿಕ ವಿಪತ್ತುಗಳಿಗೆ ಗುರಿಯಾಗಿದೆಯೋ,” ಅಥವಾ

“೧೮ ವರ್ಷ ಪೂರೈಸುವುದರೊಳಗೆ ಮದುವೆಗೆ ಗುರಿಯಾಗುವ ಆತಂಕವಿದ್ದು, ಆ ಮಗುವಿನ ಪೋಷಕರು, ಕುಟುಂಬದ ಸದಸ್ಯರು, ಪಾಲಕರು ಮತ್ತು ಯಾವುದೇ ಇತರ ವ್ಯಕ್ತಿಗಳಿಂದ ಅಂತಹ ಮದುವೆ ಆಗಿ ಬಿಡುವ ಸಾಧ್ಯತೆಯಿದೆಯೋ” – ಇಂತಹ ಮಕ್ಕಳೆಲ್ಲರೂ ಪೋಷಣೆ ಮತ್ತು ರಕ್ಷಣೆ ಆವಶ್ಯಕತೆ ಇರುವ ಮಕ್ಕಳು.

ಈ ಮಕ್ಕಳಿಗೆ ಯಾವುದೇ ಶೋಷಣೆ, ತೊಂದರೆ, ಮೋಸ ಆಗದಂತೆ ತಡೆಗಟ್ಟಿ ರಕ್ಷಿಸುವುದು ಸಮಾಜದ ಪ್ರತಿಯೊಬ್ಬ ಸದಸ್ಯರು ಮತ್ತು ಮಕ್ಕಳ ರಕ್ಷಣೆಗೆಂದೇ ನಿಯೋಜಿತರಾದವರ ಕರ್ತವ್ಯವಾಗಿದೆ.

ರಾಷ್ಟ್ರೀಯ ಅಪರಾಧಗಳ ಅಂಕಿಸಂಖ್ಯೆಯ ದಾಖಲೆಯನ್ನು ಪರಿಶೀಲಿಸಿದರೆ ಮಕ್ಕಳ ಮೇಲೆ ಆಗಿರುವ ಅಪರಾಧಗಳ ಸಂಖ್ಯೆ ಅಷ್ಟೇನೂ ದೊಡ್ಡದಾಗಿ ಕಾಣುವುದಿಲ್ಲ. ಹಾಗೆಂದರೆ ಮಕ್ಕಳ ಮೇಲೆ ಅಪರಾಧಗಳು ಅಷ್ಟು ಆಗುವುದಿಲ್ಲ ಎಂದೇನು? ವಾಸ್ತವವಾಗಿ ಮಕ್ಕಳ ಮೇಲೆ ಆಗುವ ಅಪರಾಧಗಳು ಪೊಲೀಸ್‌ ಠಾಣೆ ತಲುಪುವುದೇ ಕಷ್ಟ. ತಲುಪಿದರೂ ಹೇಗೋ ಏನೋ ಎಫ್‌.ಐ.ಆರ್‌ (ಪ್ರಥಮ ವರ್ತಮಾನ ವರದಿ) ಆಗದೆಯೇ ಸಂಧಿ ಸಂಧಾನ ಆಗಿಬಿಡುತ್ತದೆ. ಇದೂ ಒಂದು ರೀತಿಯಲ್ಲಿ ಕರ್ತವ್ಯಲೋಪ!

ಮಕ್ಕಳ ಮೇಲೆ ಆಗುವ ಕರ್ತವ್ಯಲೋಪಗಳೆಲ್ಲವೂ ಪೊಲೀಸ್‌ ಠಾಣೆ ತಲುಪುವಂತಾದರೆ ಎಫ್‌.ಐ.ಆರ್‌. ದಾಖಲಾಗುವಂತಾದರೆ, ಊಹಿಸಿಕೊಳ್ಳಿ ಪ್ರತಿದಿನ ಎಷ್ಟು ಪ್ರಕರಣಗಳು (ಮಕ್ಕಳಿಗೆ ಸಂಬಂಧಿಸಿದ್ದು ಮಾತ್ರ) ದಾಖಲಾಗಬೇಕಾಗುತ್ತದೆ. ನಮ್ಮ ಸಮಾಜ ಮಕ್ಕಳನ್ನು ಕುರಿತು ಆಗುವ ಅಪರಾಧಗಳಿಗೆ ಅಷ್ಟು ಗಂಭೀರವಾಗಿ ಗಮನ ಕೊಡುವುದಿಲ್ಲ, ಖಂಡಿತಾ ಕೊಡುತ್ತಿಲ್ಲ. ಮಕ್ಕಳಿಗೆ ಸಂಬಂಧಿಸಿದ ಕರ್ತವ್ಯಲೋಪಗಳನ್ನಂತೂ ಬಹಳ ಸುಲಭವಾಗಿ ಪಕ್ಕಕ್ಕೆ ತಳ್ಳಿಬಿಡಬಹುದು. ಯಾರೂ ಕೇಳುವುದಿಲ್ಲ. ಪಾಪ ಮಕ್ಕಳಿಗಂತೂ ಇವೆಲ್ಲಾ ಎಷ್ಟೋ ವಿಚಾರಗಳು ಗೊತ್ತಿಲ್ಲದಿರುವುದರಿಂದ ಅವರೂ ಕೇಳುವುದಿಲ್ಲ.

ಮಕ್ಕಳ ನ್ಯಾಯ ಕಾಯಿದೆ ʼಎಲ್ಲ ಮಕ್ಕಳ ನೆಮ್ಮದಿ, ಎಲ್ಲ ಮಕ್ಕಳ ರಕ್ಷಣೆʼ ಎನ್ನುವ ಧ್ಯೇಯವಾಕ್ಯವನ್ನಿಟ್ಟುಕೊಂಡು ಮಕ್ಕಳ ಸ್ನೇಹೀ ವಾತಾವರಣ ಮತ್ತು ಪ್ರಕ್ರಿಯೆಗಳೊಂದಿಗೆ ಮಕ್ಕಳಿಗೆ ನ್ಯಾಯ ಒದಗಿಸಲು ಸೂಚಿಸುತ್ತದೆ.

ಈ ಲೇಖನದಲ್ಲಿ ಬಳಸಿರುವ ʼಬಾವಿʼಯ ರೂಪಕದಲ್ಲಿ ಬಿದ್ದ ಹೆಣ್ಣುಮಗಳ ಬದಲಾಗಿ, ಮಕ್ಕಳ ಆರೋಗ್ಯ ಕಾಪಾಡದಿರುವ ಪ್ರಕರಣಗಳು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡದಿರುವುದು, ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಕದಿಯುವುದು, ಮಕ್ಕಳ ಮೇಲೆ ತಿಳಿದೂ ತಿಳಿದೂ ಅನ್ಯಾಯ ಅನಾಚಾರಗಳನ್ನು ಮಾಡುವುದು… ಇವುಗಳನ್ನು ಕಂಡೂ ಕಂಡೂ ತಿಳಿದೂ ತಿಳಿದೂ ಕತೆಯಲ್ಲಿ ಬರುವ ಸಂತೋಷನಂತೆ ಕಣ್ಮುಚ್ಚಿ ಕಿವಿ ಮುಚ್ಚಿಕೊಂಡಿರುವುದು ಅಥವಾ ಅಲ್ಲಿಂದ ಪಲಾಯನ ಮಾಡುವುದು… ʼಕರ್ತವ್ಯಲೋಪʼ.

ಮಕ್ಕಳ ಮೇಲೆ ಏನಾದರೂ ಅನ್ಯಾಯವಾಗುತ್ತಿರುವುದು ತಿಳಿದರೆ, ಕಂಡು ಬಂದರೆ (ಭಿಕ್ಷೆ, ದುಡಿಮೆಯಲ್ಲಿರುವ ಮಕ್ಕಳು, ಶೋಷಣೆಗೊಳಗಾಗುತ್ತಿರುವ ಮಕ್ಕಳು, ಮೋಸಕ್ಕೀಡಾದ ಮಕ್ಕಳು, ಇತ್ಯಾದಿ) ನಮ್ಮ ಕರ್ತವ್ಯ ಪಾಲನೆ ಮಾಡಬೇಕಿದೆ. ಮಕ್ಕಳ ನ್ಯಾಯ ವ್ಯವಸ್ಥೆಯ ಭಾಗವಾಗಿರುವ ಚೈಲ್ಡ್‌ಲೈನ್‌ ೧೦೯೮ಗೆ ದೂರವಾಣಿ ಮಾಡಿ ಮಾಹಿತಿ ಕೊಡಬೇಕು. ಇಲ್ಲವೇ ಹತ್ತಿರದ ಪೊಲೀಸ್‌ ಠಾಣೆಯಲ್ಲಿ ದೂರು ನೀಡಬೇಕು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ (CWC) ಸದಸ್ಯನಾಗಿ, ನಂತರ ಅಧ್ಯಕ್ಷನಾಗಿ ಏಳು ವರ್ಷಗಳ ಕೆಲಸದಲ್ಲಿ ಮಕ್ಕಳ ನ್ಯಾಯ ಕಾಯಿದೆಯ ಜಾರಿ ಸಮಯದಲ್ಲಿ ನನಗೆ ಕಂಡದ್ದು ಮಕ್ಕಳ ಮೇಲಿನ ಅಪರಾಧಗಳಿಗಿಂತಲೂ ಮಕ್ಕಳ ಹಕ್ಕುಗಳ ಜಾರಿಯಲ್ಲಿ ತಪ್ಪಿಸಿಕೊಂಡ ಕರ್ತವ್ಯ ಲೋಪಿಗಳೇ ಹೆಚ್ಚು.

ಮಕ್ಕಳನ್ನು ಹಕ್ಕುದಾರರು (Right holders) ಎಂದು ಪರಿಗಣಿಸುವ ಮತ್ತು ಎಲ್ಲ ವಯಸ್ಕರು ತಾವು ಕರ್ತವ್ಯ ಪಾಲಕರು (Duty bearers) ಎಂದು ಜವಾಬ್ದಾರಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಮಕ್ಕಳ ನ್ಯಾಯ ಖಚಿತವಾಗಬೇಕಿದೆ.

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು ವಾಸುದೇವ ಶರ್ಮ

December 24, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: