ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಟಕ್ಕನೇ ಸುಳಿಯುತ್ತಾಳೆ ಆ 'ಅಳದ' ಯುವತಿ..

ಕೃಷ್ಣೆ
ಅರ್ಚನಾ ಆರ್ಯ 
ಯಾಕೋ ಏನೋ ಬಹಳ ದಿನಗಳಿಂದ ಕರೆ ಮಾಡಿ ಮಾತಾಡಿರಲಿಲ್ಲ ಅವರೊಂದಿಗೆ. ಜೀವನದ ಜಂಜಾಟಗಳಲ್ಲಿ ಇಷ್ಟು ಮುಳುಗಿ ಹೋಗಬಾರದಿತ್ತೆಂದು ತಕ್ಷಣ ಫೋನೆತ್ತಿಕೊಂಡು ಮಾಡುತ್ತಿದ್ದ ಕೆಲಸಗಳನ್ನೆಲ್ಲ ಬದಿಗೊತ್ತಿ ಕರೆ ಮಾಡಿಯೇ ಬಿಟ್ಟೆ. ಬಹಳ ಹೊತ್ತು ರಿಂಗಾದರೂ ಎತ್ತುವ ನಿರೀಕ್ಷೆ ಬಿಟ್ಟೇ ಬಿಡು ಅಂದುಕೊಳ್ಳುತ್ತಿರುವಂತೆ ಕಡೆಗೂ ಹಲೋ, ಹೇಳೆಮಾ ಎಂಬ ಪರಿಚಿತ ಆದರೆ ಗುಹೆಯಲ್ಲೆಲ್ಲೋ ಕೇಳಿ ಬಂದಂತ ದನಿ. ಯಾಕೆ ಏನಾಯ್ತು ಅಂತ ವಿಚಾರಿಸಿದರೆ, ತಗುಲಿದ್ದು ಆಘಾತದ ಸುದ್ದಿ ಕಿವಿಗಳಿಗೆ.
ಅವರ ಅಣ್ಣನ ಮಗ ಬರೀ ೩೨ ವರ್ಷದ ಯುವಕನಿಗೆ severe heart attack ಆಗಿ ನೆನ್ನೆ ಹೋಗಿ ಬಿಟ್ಟ ಕಣೆಮಾ ಅಂದ್ರು. ಇಡೀ ದಿನ ಅತ್ತ ದುಃಖಕ್ಕೆ ಇವರಿಗೀ ಸ್ಥಿತಿ. ಕೇಳಿ ಕಣ್ಣಂಚಲ್ಲಿ ನೀರೊಡೆಯಿತು. ಮತ್ತದೇ ಪ್ರಶ್ನೆಗಳ ಸುರಿಮಳೆ ಸುರಿಸೋಣವೆಂದರೂ ಏನೂ ಕೇಳಲಾರದೆ ಹೋದೆ. ಕ್ಷಣ ಮೌನದ ನಂತರ ಮಾತು ಬದಲಾಯಿಸಿದರಾದರೂ ನೋವು ಕೊಂಚ ಹಗುರಾಗಬಹುದೆಂದು ಕೇಳಿದ ಪ್ರಶ್ನೆಗೆ ಸ್ವಲ್ಪ ಉತ್ಸಾಹದಿಂದಲೇ ಉತ್ತರಿಸುತ್ತಾ ಹೋದರು. ಕಡೆಗೆ ಏನಾಯ್ತು ಅಂದಾಗ ಹೇಳಿದ್ದು ಕೇಳಿದ್ರೆ, ಅತ್ತೆಯಾಗಿ ಇವರಿಗೇ ಇಷ್ಟು ಕನಲಿಹೋಗುವಂತೆ ಮಾಡಿದ್ದರೆ ಪಾಪ ಆ ಹೆತ್ತ ತಾಯಿಗೆ ಅದಿನ್ನೆಷ್ಟು ಪಾತಾಳಕ್ಕೆ ನೂಕಿರಬಹುದು ಈ ಘಟನೆ ಅನ್ನೋ ಭಾವವೊಂದು ಸುಳಿದು ಹೋಯಿತು.
ಅಣ್ಣನ ಮಗನಾದರೂ ಇವರನ್ನು ತಾಯಿಯಂತೆ ಕಾಣುತ್ತಿದ್ದನಂತೆ. ಇವರ ಮಗ ವಯಸ್ಸಿನಲ್ಲಿ ಚಿಕ್ಕವ ಅದಕ್ಕೆ ಅಣ್ಣನಂತೆ ಜೊತೆಗಿರುತ್ತಿದ್ದನಂತೆ. ಮೂರು ದಿನಗಳ ಹಿಂದಷ್ಟೇ ಕರೆ ಮಾಡಿ, ಆಂಟಿ ಮುಂದಿನ ವಾರ ಅಪಾರ್ಟ್ ಮೆಂಟ್ ಗೆ shift ಮಾಡ್ತಿದ್ದೀವಿ, ಎಲ್ಲಾ ರೆಡಿ ಆಯ್ತು ಅಂತ ಹೇಳಿದ್ದಷ್ಟೆ ಇವರಿಗೆ ಕಡೆಯ ನೆನಪು. ಕೀ ಕೈಗೆ ತೆಗೆದುಕೊಳ್ಳುವ ಹಿಂದಿನ ರಾತ್ರಿಯೇ ಆ ಜವರಾಯ ಇವನ ಪ್ರಾಣಕ್ಕೇ, ಆಯಸ್ಸಿಗೇ ಶಾಶ್ವತವಾಗಿ ಬೀಗ ಹಾಕಿಬಿಟ್ಟಿದ್ದ. ಯಾವ ಕಾಯಿಲೆಯಿರಲಿಲ್ಲ. ಮದುವೆಯಾಗಿ ವರ್ಷವಷ್ಟೇ ಕಳೆದಿದೆ. ಆ ಇಡೀ ಪರಿವಾರಕ್ಕೆ ಅಂದರೆ ಮುಂದಿನ ಪೀಳಿಗೆಯ ಮೂರು ಗಂಡು ಮಕ್ಕಳಲ್ಲಿ ಒಬ್ಬನ ಅಂತ್ಯ ಹೀಗಾಗಬಹುದೆಂದು ಯಾರಾದರೂ ಊಹಿಸಿರಲು ಸಾಧ್ಯವೇ?
ಅಪ್ಪನ ಬಳಿ ಹೊಟ್ಟೆ ಮೇಲ್ಭಾಗದಲ್ಲಿ ಉರಿ ನೋವು ಅಂತ ಹೇಳಿ ನೆಲದ ಮೇಲೆ ಬಿದ್ದದ್ದಷ್ಟೆ, ಮತ್ತೆ ಮೇಲೇಳಲೇ ಇಲ್ಲ ಆತ, ಆಸ್ಪತ್ರೆಯಿಂದ ಆಸ್ಪತ್ರೆಗೆ ಹೋಗೋಷ್ಟರಲ್ಲಿ brought dead ಎಂದು ಹೇಳಿ ಮರಣೋತ್ತರ ಪರೀಕ್ಷೆಗೆ duty doctor ಬರುವವರೆಗೂ ದೇಹವನ್ನು ಶವಪಟ್ಟಿಗೆಯಲ್ಲಿ ಇರಿಸಿದ್ದನ್ನು ಕಂಡ ಆ ತಂದೆತಾಯಿಗಳ ಮನಸಿನ ಅಲ್ಲೋಲ ಕಲ್ಲೋಲವನ್ನು ವಿವರಿಸಲು ಸುನಾಮಿಯ ಉಪಮೆಯೂ ಸಾಲದೇನೋ!!
ಕಡೆಗೆ ಬೆಳಗಿನ ಮೂರು ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಸಿ “body” ಹಸ್ತಾಂತರ ಮಾಡಿದ್ದನ್ನು ತಂದು ಕ್ರಿಯೆಗಳೆಲ್ಲ ಮುಗಿಸಿ ಹೊರಟಾಗ ಅವನ ಹೆಂಡತಿಯನ್ನು ಮಾತಾಡಿಸಹೋದರೆ ಕಣ್ಣಲ್ಲಿ ಒಂದು ಹನಿ ನೀರಿಲ್ಲ. ಬಂದವರೆಲ್ಲ ಅತ್ತು ಬಿಡು ಎಂದರೆ ಯಾಕೆ ಎಂಬ ಪ್ರಶ್ನಾರ್ಥಕ ಭಾವದಿಂದ ನೋಡುತ್ತಾಳಂತೆ. ಇನ್ನೂ ಆ ಶಾಕ್ ದಿಂದ ಚೇತರಿಸಿಕೊಂಡಿಲ್ಲ ಆಕೆ. ೨೭ ರ ಹರೆಯದ ಆ ಯುವತಿಯ ಮುಂದಿನ ಬಾಳೆಂಥದು?
ಹೋದವರಿಗೆಲ್ಲ ಆಯ್ತಾ , ನಾಳೆ ಬರ್ತೀರಾ ಅಲ್ವಾ ಎಷ್ಟೊತ್ತಿಗೆ, ಹೋಗಿ ಬನ್ನಿ ಅಂತ ಹೇಳುತ್ತಿದ್ದುದನ್ನು ಕಂಡರೆ ಎಲ್ಲರ ಮನದಲ್ಲೂ ಕರುಳು ಕಿತ್ತು ಬಂದ ಅನುಭವ ಅಂತ ಇವರು ಹೇಳ್ತಾ ಇದ್ರೆ, ಕೇಳುತ್ತಿದ್ದ ನನಗೂ ಕಣ್ತುಂಬಿ ಬಂತು.
ಇವತ್ತು ಹೋಗಬೇಕಾ ಬೇಡ್ವಾ ಹೇಗೆ ಎದುರಿಸೋದು ಅವರನ್ನೆಲ್ಲ ಅಂತ ಯೋಚಿಸುವಾಗಲೇ ನಿನ್ ಕಾಲ್ ಮಾಡಿದೆ, ಬಹುಶಃ ನಿನ್ ಜೊತೆಗೆ ಮಾತಾಡಿ ಹಗುರಾಗಲೆಂದೇ ನಿನ್ನಿಂದ phone ಮಾಡಿಸಿದ್ದಾನೆ ಆ ದೇವರು, ನೀನ್ ಕಾಲ್ ಮಾಡಿದ್ದು ಒಳ್ಳೆಯದಾಯ್ತು. ತುಂಬಾ ದುಃಖದಲ್ಲಿದ್ದೆ, ಮಾತಾಡಿ ಸಮಾಧಾನವಾಯ್ತು, ಬಹಳ thanks ಕಣೆಮಾ, ಅವರನ್ನು ಸಮಾಧಾನ ಮಾಡಲು ನಾನೊಂದಿಷ್ಟು ಶಕ್ತಿ ಸಂಚಯ ಮಾಡಲು ಸರಿ ಹೋಯ್ತು ಅಂತಂದು ಕರೆ ಮುಗಿಸಿದರು.
ಅಂದು ಇಡೀ ದಿನ ಮನಸೆಲ್ಲ ಕಲಸುಮೇಲೋಗರ. ಐವತ್ತು ಅರವತ್ತು ವರ್ಷಗಳ ಕಾಲ ಕೋಮಾದಲ್ಲಿದ್ದು ಬದುಕಿ ಬರ್ತಾರೆ, ಎಲ್ಲೆಲ್ಲೋ ಹೇಗೆ ಹೇಗೋ ಪವಾಡದಂತೆ ಬದುಕುಳಿದು ಬಿಡ್ತಾರೆ, ಆದರೆ ಹೀಗೊಂದು ಮುಕ್ತಾಯವಾದರೂ ಯಾಕೆ?
ಪಕ್ಕದಲ್ಲೇ ಹೀಗೆ ಕುಳಿತಿರುತ್ತದೆ ಸಾವು ಕೊಂಡೊಯ್ಯಲು ಎಂದು ಊಹೆ ಮಾಡುವುದೂ ಕಷ್ಟ.
ಇಂತಹ ವಿಚಾರಗಳನ್ನು ಕೇಳಿದಾಗ ಸ್ಮಶಾನ ವೈರಾಗ್ಯ ಮೂಡಿ, ಏನೇನೋ ಸಿದ್ಧಾಂತ, ವೇದಾಂತಗಳು ಹೊರಬರುತ್ತವೆ. ಆದರೆ ಅವೆಲ್ಲವನ್ನೂ ಬದಿಗಿಟ್ಟು ನೋಡಿದಾಗ ನಿಜವಾಗಿಯೂ ಹಾಗೊಂದು ವೈರಾಗ್ಯದಿಂದ ಬದುಕುವುದೂ ಒಂದು ಕಲೆಯೇ. ಅಂದರೆ ಇಲ್ಲ ಎಂಬ ಕಾರಣಕ್ಕೆ ವೈರಾಗ್ಯ ಮೂಡಿಸಿಕೊಳ್ಳದೇ ಇದ್ದರೂ, ಮಿತಬಳಕೆಯ ಭಾವ , ಔಚಿತ್ಯ ಎರಡೂ ಕೂಡಿದ್ರೆ ಆತ್ಮೋನ್ನತಿಯೂ ಆಗಬಹುದೇನೋ!
ಇಷ್ಟು,
ಇಷ್ಟು ಕ್ಷಣಿಕವೆಂದರಿತಿದ್ದರೂ, ಇನ್ನೊಬ್ಬರ ಮೇಲೆ ದ್ವೇಷ ಸಾಧನೆ, ಕಾಲೆಳೆಯುವುದು, ಹಿಯಾಳಿಸೋದು, ಸಮಯ ವ್ಯರ್ಥ ಮಾಡೋದು ಇವುಗಳಲ್ಲೇ ಕಾಲ ಕಳೆಯೋ ಬದಲು,
ಪ್ರೀತಿ ಹಂಚಲು, ಉನ್ನತಿಗೆ ಸಹಕರಿಸಲು, ಮುರಿದ ಮನಸುಗಳನ್ನು ಒಂದುಗೂಡಿಸಲು, ಕ್ಷಮೆ ಕೇಳಿ ಸಂಬಂಧದ ಹದಗೆಡುವಿಕೆಯನ್ನು ನಿವಾರಿಸಲು, ಕ್ಷಮಿಸಿ ಬಿಟ್ಟು ನಾವು ಬಂಧನದಿಂದ ಮುಕ್ತರಾಗೋ ಕಡೆ ನಾವ್ ಗಮನ ಹರಿಸಿದರೆ ಎಷ್ಟು ಚಂದ ಅಂತ ಯೋಚನೆ ಮಾಡ್ತಾ ಬೆಳಗಿನ ಕೆಲಸ ಮುಗಿಸಿ ಕಾಲೇಜಿಗೆ ಹೋಗಲು ಮೆಟ್ರೋ ಹಿಡಿದು ಕೂತು ಯೋಚಿಸುತ್ತಿದ್ದೆ.
ಮಗು ಎತ್ತಿಕೊಂಡು ವ್ಯಕ್ತಿಯೊಬ್ಬರು ಹತ್ತಿದ್ರು, ನನ್ ಸೀಟು ಬಿಟ್ಟು ಕೊಟ್ಟಾಗ ಧನ್ಯವಾದ ವಿನಿಮಯ, ನನ್ ಕೈಲಿದ್ದ ಬ್ಯಾಗನ್ನು ಪಕ್ಕದಲ್ಲಿದ್ದ ಮಹಿಳೆ ಹಿಡಿದುಕೊಂಡರು, ನಾನೂ ಧನ್ಯವಾದ ಹೇಳಿದೆ, ಅವರ ಪಕ್ಕದಲ್ಲಿದ್ದ ಯುವತಿ ಮುಂದೆ ನಿಂತ ಮುದ್ದು ಬಾಲಕಿಯನ್ನು ಕೂರಿಸಿಕೊಂಡಾಗ ತಾಯಿಗೆ ಮಗಳಿಗೊಂದು ಜಾಗ ಸಿಕ್ಕ ಖುಷಿ, ಅವರ ನಂತರದಲ್ಲಿ ಕೂತಿದ್ದ ತಾಯಿಯ ಮಡಿಲಲ್ಲಿದ್ದ ಮಗು ಅಳಲು ಆರಂಭಿಸಿದಾಗ, ಇಷ್ಟೆಲ್ಲಾ ನೋಡುತ್ತಿದ್ದ ನನ್ನ ಬದಿಯಲ್ಲಿದ್ದ ಮೂರು ಜನ ತಮ್ಮ ಮೊಬೈಲ್ ನಲ್ಲಿ ಶಿಶು ಗೀತೆಗಳನ್ನು ಹುಡುಕಿ ಆ ಮಗುವಿನ ಅಳು ನಿಲ್ಲಿಸಲು ಪ್ರಯತ್ನ ಪಟ್ಟಿದ್ದು ಇಡೀ ವಾತಾವರಣವನ್ನು ಧನಾತ್ಮಕ ತರಂಗಗಳಿಂದ ತುಂಬಿದ್ದಂತೂ ಈಗಲೂ ರೋಮಾಂಚನವಾಗತ್ತೆ.
ಇಷ್ಟೆಲ್ಲ ನಗುವಿನ ನಡುವೆ, ಮನದಲ್ಲಿ ತಟಕ್ಕನೇ ಸುಳಿಯುತ್ತಾಳೆ ಆ “ಅಳದ” ಯುವತಿ. ಅವಳ ಅಳುವಿಗೆ, ದುಃಖಕ್ಕೆ ಯಾರಾದರೂ ಹೀಗೆಯೇ ಹಿಡಿವರೆ ಗೀತೆಯೊಂದರ ಪ್ರತಿಬಿಂಬವನ್ನು… ಅವಳ ಪಯಣವನ್ನು ಸಹ್ಯವಾಗಿಸಲು…

‍ಲೇಖಕರು avadhi

5 June, 2019

1 Comment

  1. Vasudev nadig

    ಅಂತಃಕರಣ ದಲಿ ಅದ್ದಿ ಬರೆದ ಲೇಖನ
    ಬಹಳ ಕಲಕಿತು.
    ನಿಜ…ಕ್ಷಣಿಕ ಬಾಳಿನಲಿ ಕ್ಷಮಿಸಿ ಬಾಳೋದೇ ಸರಿ.
    ಅಥವ ಕ್ಷಮೆ ಯಾಚಿಸಿ…
    ಕಾಡುವ ಕಥನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading