ಡಾ.ಆರ್.ಜಯಶಂಕರ್ ಅವರು ನಮ್ಮ ನಡುವೆ ಇರುವ ಜನಪರ ಚಿಂತಕರು . ಈ ದೇಶದ ಕೋಟಿ ಕೋಟಿ ನತದೃಷ್ಟ ದೀನ ದಲಿತರ ಬಗ್ಗೆ ಅವರ ಬದುಕಿನ ಬದಲಾವಣೆಯ ಬಗ್ಗೆ ಸದಾ ಚಿಂತಿಸುವ ತರುಣ ಅರ್ಥ ಶಾಸ್ತ್ರಜ್ಞರು .
ಅತ್ಯಂತ ಕಷ್ಟದ ಹಿನ್ನಲೆಯಿಂದ ಬಂದರೂ ತಮ್ಮ ಪರಿಶ್ರಮ ಮತ್ತು ಪ್ರತಿಭೆಯಿಂದ ಮೇಲೇರಿ ಇನ್ನೂ ಅತಂತ್ರ ಸ್ಥಿತಿಯಲ್ಲಿರುವ ಗ್ರಾಮೀಣ ಸಹೋದರರಿಗೆ ಮಾದರಿಯಾದವರು. ಸದಾ ಚಟುವಟಿಕೆಯ , ಉತ್ಸಾಹದ ಬುಗ್ಗೆಯಂತಿರುವ ಜಯಶಂಕರ್ ಅವರ ಕಾರ್ಯ ಕ್ಷೇತ್ರ ವಿಶಾಲವಾದುದು. ಅವರ ಸ್ನೇಹಿತರ ಬಳಗವೂ ದೊಡ್ಡದು . ಮಾನವೀಯ ಮೌಲ್ಯಗಳ ಆರಾಧಕರ ಇವರು ನಮ್ಮ ಯುವ ಜನತೆಯ ಅತ್ಯುತ್ತಮ ನಾಯಕರಲ್ಲಿ ಒಬ್ಬರು.
ಪ್ರಸ್ತುತ ಕೃತಿ ಅವರ ಇತ್ತೀಚಿನ ಥಾಯ್ ಲ್ಯಾಂಡ್ ದೇಶದ ಪ್ರವಾಸಕಥನವಾಗಿದೆ . ಈ ಪ್ರವಾಸಕಥನ ಓಡಿಸಿಕೊಂಡು ಹೋಗುವ ಗುಣವನ್ನು ಹೊಂದಿದ್ದು ಇಲ್ಲಿ ಜಯಶಂಕರ್ ರವರು ಕೇವಲ ಚಿಂತಕರಷ್ಟೇ ಅಲ್ಲ.ಅವರು ಒಳ್ಳೆಯ ಲೇಖಕರೂ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ .ಕೃತಿಯ ಉದ್ದಕ್ಕೂ ಅವರ ಉತ್ಸಾಹ , ತುಂಟತನ , ಲವಲವಿಕೆ ಎದ್ದು ಕಾಣುತ್ತವೆ. ಥಾಯ್ ಲ್ಯಾಂಡ್ ಅನ್ನು ಒಬ್ಬ ಅರ್ಥಶಾಸ್ತ್ರಜ್ಞ ನಾಗಿ ಜಯಶಂಕರ್ ರವರು ಚಿಕಿತ್ಸಕ ದೃಷ್ಟಿಯಿಂದ ನೋಡಿದ್ದಾರೆ . ಆ ದೇಶದ ಲೈಂಗಿಕ ಪ್ರವಾಸೋದ್ಯಮದ ಇವರಿಗೆ ಮಾನವ ಸಮಾಜದ ದುರಂತಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತದೆ . ಅಲ್ಲಿಯ ಮಹಿಳೆಯರ ಅಸಾಹಯಕತೆಗೆ ಇವರ ಹೃದಯ ಮರುಗುತ್ತದೆ. ಶೋಷಣೆಯಿಲ್ಲದ ಸುಂದರ ಸಮಾಜದ ಕನಸನ್ನು ಕಾಣುವ ಇವರಂಥ ಚಿಂತಕರಿಗೆ ಇದು ಸಹಜವೇ ಆಗಿದೆ.
ಇವರ ಜೊತೆ ಪ್ರವಾಸ ಹೋಗಿದ್ದ ಲೇಖಕ ಮಿತ್ರರಾದ ಲಕ್ಷ್ಮೀಪತಿ ಮತ್ತು ಮುನಿವೆಂಕಟಪ್ಪ ನವರ ಪಾತ್ರಗಳು ಈ ಕೃತಿಯಲ್ಲಿ ಜೀವಂತವಾಗಿ ಒಡಮೂಡಿವೆ . ಕೇಶವಮೂರ್ತಿಯವರಂಥಹ ವ್ಯಕ್ತಿಗಳ ಜೀವನದ ರೀತಿನೀತಿಗಳನ್ನು ಕಂಡಾಗ ಮನುಷ್ಯನ ಆತ್ಮವಂಚನೆಯ ಅಭಿವ್ಯಕ್ತಿ ಎಂತಹವರಿಗೂ ಮನದಟ್ಟಾಗುತ್ತದೆ. ಮಾನವೀಯ ಸ್ವಭಾವಗಳನ್ನು ಈ ಮೂಲಕ ಜಯಶಂಕರ್ ರವರು ಸುಂದರವಾಗಿ ಸಂಯಮದಿಂದ ಚಿತ್ರಿಸಿದ್ದಾರೆ . ಅಲ್ಲಿಯ ಆರ್ಥಿಕ ಸಾಮಾಜಿಕ ಪರಿಸ್ಥಿತಿಯನ್ನು ಒಬ್ಬ ವಿದ್ವಾಂಸರಾಗಿ ವಿಶ್ಲೇಷಿಸಿದ್ದಾರೆ .
ಸ್ವಾರಸ್ಯಕರವಾದ ಬರವಣಿಗೆಯುಳ್ಳ ಕುತೂಹಲವನ್ನು ಕೆರಳಿಸುತ್ತಾ ಹೋಗುವ , ಈ ಪ್ರವಾಸ ಕಥನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲೆಂದು ಹಾರೈಸುತ್ತೇನೆ . ತಮ್ಮ ಚೊಚ್ಚಲ ಕೃತಿಯ ಸಮರ್ಪಣೆಯ ಈ ಸಂದರ್ಭದಲ್ಲಿ ಜಯಶಂಕರ್ ರವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ .
– ಡಾ. ಸಿದ್ದಲಿಂಗಯ್ಯ





pustike bagge nimma abhipraya chennagide,sahityada barahagararu bareyuva athava chintisuva dikku mattu arthashasrgnaru yochisuva dikku binnacvagiruttade adare obba barahaganige,arthashastrada parikalpane iddare antha barahagalu hechu social relevent agiruttave,but pustka publisher yaru,beleestu,vivara neede illa sir d.ravi varma hospet