ಬಯ್ಗುಳಗಳು ಬರಹರೂಪದಲ್ಲಿ ಕತೆ ಕಾದಂಬರಿಗಳನ್ನು ಬಿಟ್ಟರೆ ಬೇರೆ ಕಡೆಗಳಲ್ಲಿ ಕಾಣಸಿಗುವುದಿಲ್ಲ. ಇವು ನಮ್ಮ ನುಡಿಯಲ್ಲಿ ಬಳಕೆಯಲ್ಲಿದ್ದು ಈಗ ಕಳೆದು ಹೋಗಿರುವ ಪದಗಳನ್ನು ನಮ್ಮ ನಡಾವಳಿಗಳಲ್ಲಿ ಬಳಕೆಯಲ್ಲಿದ್ದ. ಆದರೆ ಈಗ ಮರೆಯಾಗಿರುವ ಹಲವಾರು ಸಂಗತಿಗಳನ್ನು ಅಡಗಿಸಿ ಇಟ್ಟುಕೊಂಡಿರುತ್ತವೆ. ಹಾಗಾಗಿ ಇವುಗಳನ್ನು ಕೂಡಿಟ್ಟು ಅರಿಯಲು ತೊಡಗಬೇಕಾಗುತ್ತದೆ. ಈ ನಿಟ್ಟಿನಿಂದ ಈ ಕೂಡಣವನ್ನು ನೋಡಬೇಕಾಗಿದೆ.
ಹಾಗೆ ನೋಡಿದರೆ ಬಯ್ಗುಳಗಳನ್ನು ನುಡಿ ಸಮುದಾಯ ದೂರವಿರಿಸುತ್ತಿರುವಂತೆ ಅದನ್ನು ಬೇರೆ ಬಗೆಯಲ್ಲೂ ನೋಡುತ್ತಿರುವುದು ನುಡಿಗಟ್ಟುಗಳನ್ನು ಗಮನಿಸಿದರೆ ತಿಳಿಯುತ್ತದೆ. ‘ಅವನಿಗೆ ಕೊಂಚ ಬಯ್ದು ಬುದ್ಧಿ ಹೇಳು’ ಎನ್ನುತ್ತೇವೆ. ‘ಬಯ್ಯುವರು ಬದುಕೋಕೆ ಹೇಳಿದರು’ ಎನ್ನುತ್ತೇವೆ. ಹೊಗಳಿಕೆಗೆ ಉಬ್ಬಿದರೂ, ಹೊಗಳಿಕೆಯನ್ನು ದೂರವಿರಿಸಬೇಕೆಂಬ ತಿಳುವಳಿಕೆಯೂ ಜನರಲ್ಲಿದೆ. ಈ ಎಲ್ಲಾ ಕಾರಣಗಳಿಂದ ಬಯ್ಗುಳಗಳ ಓದು ಇನ್ನೂ ಹೆಚ್ಚಾಗಿ ಆಗಬೇಕಿದೆ. ನಾಗರಾಜ್ ಅವರ ಕೆಲಸವನ್ನು ಅವರ ಜೊತೆ ಸೇರಿ ಬೇರೆಯವರು ಕೂಡ ಮುಂದುವರಿಸಬೇಕಿದೆ.
ಕೆ. ವಿ. ನಾರಾಯಣ

ಬಯ್ಗುಳ ಪದಗಳು ಒಂದು ಭಾಷಾ ಸಮುದಾಯದ, ಸಮಾಜದ ಆಳದ ಅಭಿವ್ಯಕ್ತಿ, ಅವು ನಿರಾಕರಣೆಗೆ ಒಳಪಡುತ್ತಲೇ ನಮ್ಮನ್ನು ಆವರಿಸಿಕೊಳ್ಳುತ್ತವೆ. ಸಾಮಾಜಿಕ ಬಳಕೆಯ ವ್ಯಾಪ್ತಿಯಿಂದಾಚೆಗೆ ಈ ಬಯ್ಗುಳ ಪದಗಳನ್ನು ಅಂಕಣವಾಗಿ ಪ್ರಯೋಗಿಸುವುದರ ಹಿಂದೆ ಅನೇಕ ವಿಚಾರಗಳು ತಲೆಯಲ್ಲಿ ಸುಳಿದು ಹೋಗಿದ್ದವು: ಒಬ್ಬ ಓದುಗನನ್ನು ಈ ಮೂಲಕ ಮನರಂಜಿಸಬಹುದೇ? – ಓದುಗರಿಗೆ ಪ್ರತಿದಿನ ಸಣ್ಣ ಆಘಾತ ಉಂಟು ಮಾಡಬಹುದೆ?- ಅವರ ತಾಳ್ಮೆಯ, ಸೈರಣೆಯ ಪರಿಧಿಯನ್ನು ಈ ಮೂಲಕ ಪರೀಕ್ಷಿಸಿ ವಿಸ್ತರಿಸಬಹುದೇ? – ಎಂದೆಲ್ಲಾ ಯೋಜಿಸಿದ್ದೆವು.
‘ಮನರಂಜನೆ’ – ‘ಆಘಾತ’ ಇತ್ಯಾದಿಗಳ ನಡುವೆ ‘ತಾಳ್ಮೆ’ ಮತ್ತು ‘ಸೈರಣೆ’ ಯ ವಿಚಾರ ನನಗೆ ರಾಜಕೀಯ ಪ್ರಶ್ನೆಗಳಾಗಿ ಕಂಡವು. ನಮ್ಮ ಸುತ್ತಲಿನ ವಾತಾವರಣವನ್ನು ನಾವು ‘ಏಕಮುಖ’ – ‘ಏಕಸಂಸ್ಕೃತಿ’ ಮಾಡಹೊರಟು, ಏಕಧರ್ಮದತ್ತ ಕೊಂಡೊಯ್ದು. ಅದಕ್ಕೆ ಇಲ್ಲಸಲ್ಲದ ಪೊಳ್ಳು ನೈತಿಕ ವಾಗ್ವಾದಗಳನ್ನು ನಮ್ಮ ದಿನಪತ್ರಿಕೆಗಳು ಸೃಷ್ಟಿ ಮಾಡುತ್ತಿದ್ದ ಹೊತ್ತಿನಲ್ಲಿ; ಜೊತೆಗೆ, ನಾವುಗಳು ವೈಯಕ್ತಿಕವಾಗಿ ಒಂದು ಅಪಾಯಕಾರಿ ನೀತಿಭ್ರಮೆಗೆ ಬೀಳುತ್ತಿದ್ದಾಗ – (a dangerous moral imagining of ourselves)- ಈ ಬಯ್ಗುಳ ಪದಗಳು ನಮ್ಮ ವಿಭಿನ್ನತೆ, ನಮ್ಮ ನಿಜಗುಣ, ನಮ್ಮ ನಡುವಿನ ಬೆಳಕಾಗಿ ಕಂಡಿದ್ದು ಒಂದು ಸೋಜಿಗ.
ಸುಗತ ಶ್ರೀನಿವಾಸರಾಜು
ಡೈಲಿ ಬುಕ್ : ಸಿ ಪಿ ನಾಗರಾಜ ಅವರ ’ಬಯ್ಗುಳ’
ನಿಮಗೆ ಇವೂ ಇಷ್ಟವಾಗಬಹುದು…

0 Comments