ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಶರತ್ ಎಚ್ ಕೆ ಬರೆದ ’ಮೊದಲ ತೊದಲು’

ಪುಸ್ತಕದ ವಿವರಗಳು

ಪ್ರಕಾರ : ಲೇಖನಗಳ ಸಂಕಲನ
ಪುಟಸಂಖ್ಯೆ – 136 ಪುಟಗಳು
ಬೆಲೆ – 80 ರೂ

ಪ್ರಕಾಶಕರ ವಿಳಾಸ – ‘ಪ್ರಜೋದಯ’ ಪ್ರಕಾಶನ
ಮುಖಪುಟ ಚಿತ್ರ: ನಿಖಿಲ್ ಪೂರ್ಣ
ವಿನ್ಯಾಸ: ಶರತ್ ಎಚ್.ಕೆ.
ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ಪ್ರಜೋದಯ, ವಿಜಯವಾಣಿ, ಕನ್ನಡಪ್ರಭ, ಉದಯವಾಣಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಪ್ರಜಾವಾಣಿ, ಮಂಗಳ, ಅವಧಿ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೊದಲ ತೊದಲು ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.
ಸಂಕಲನದಲ್ಲಿರುವ ಎರಡು ಲೇಖನಗಳು

ಮನಸ್ಸಿನ ಭಾಷಣ

ನೀರವ ದಿರಿಸು ತೊಟ್ಟು ನಿಂತ ಸಂಜೆ, ಮನಸು ಕನಸು ಹಡೆಯಲಾಗದ ಬಂಜೆ. ಪಶ್ಚಿಮದಲ್ಲಿ ಮುಳುಗುತ್ತಿರುವ ಸೂರ್ಯ ಮುಗುಳ್ನಗೆ ಹೊತ್ತೊಯ್ಯುತ್ತಿದ್ದಾನೆ. ಜಗದ ಜೀವಂತಿಕೆ ಮನದ ಕಡಲಿಗೆ ರವಾನೆಯಾಗುತ್ತಿಲ್ಲ. ಮನದ ಕಡಲು ಭೋರ್ಗರೆಯುತ್ತಿದೆ, ಜಗದ ಕಿವಿಗಳು ಆಲಿಸಲು ತಯಾರಿಲ್ಲ.
‘ನಾನು’ ನಾನಾಗೇ ಉಳಿದು ಬಿಡಲು ಬಿಡದ ಕಾಲ, ಎಲ್ಲೆಲ್ಲಿಗೋ ನನ್ನನ್ನು ದೂಡುತ್ತಿದೆ. ಕಾಲ ಪ್ರಶ್ನಾತೀತ. ನಾನು ಉತ್ತರ ಸಿಗದ ಪ್ರಶ್ನೆಗಳಿಗೆ ಅತೀತ.
ಓದಬೇಕೆಂದು ತಂದು ಗುಡ್ಡೆ ಹಾಕಿಕೊಂಡ ಪುಸ್ತಕಗಳು ಸತ್ತ ಶವದ ಪ್ರತಿರೂಪದಂತೆ ಬಿದ್ದಿವೆ. ಅಕ್ಷರ ಹಾದರಕ್ಕಿಳಿದ ಮಂದಿಯ ಕಣ್ಣಾರೆ ಕಂಡ ಮೇಲೆ ಓದುವ ಹಸಿವು ಹಾರಿ ಹೋಯ್ತು. ಆದರ್ಶದ ಶವಯಾತ್ರೆಯಲ್ಲಿ ಪಾಲ್ಗೊಂಡು ಬಂದ ಮೇಲೂ ಮನಸ್ಸು ನಿಟ್ಟುಸಿರು ಬಿಡುತ್ತಿಲ್ಲ.
ನೆಚ್ಚಿಕೊಂಡ ನಾಳೆಗಳು ನಿನ್ನೆಗಳಷ್ಟು ಸುಂದರವಾಗಿಲ್ಲ. ಮನಸ್ಸು ಕನಸು ಕಾಣುವಷ್ಟು ಪಾರದರ್ಶಕವಾಗಿ ಉಳಿದಿಲ್ಲ. ಹಲ್ಲಂಡೆಗಳ ಗುಡಾಣ ಹೊತ್ತುಕೊಂಡು ಹಾಯಾಗಿ ತಿರುಗುವ ಮಂದಿಯ ಕಂಡು ಅದು ಕರುಬುತ್ತಿದೆ.
ನಿರೀಕ್ಷೆಗಳು ಕಾರಣ ನೀಡದೆ ಸಾವನ್ನಪ್ಪುತ್ತಿವೆ. ನಿರಾಸೆಗಳು ಅಕಾರಣವಾಗಿ ಅಪ್ಪುತ್ತಿವೆ.
‘ಯಾರೋ ಬರುತ್ತಾರೆ. ಬದುಕು ಬೆಳಗುತ್ತಾರೆ. ಕನಸಿನ ಕದ ತೆರೆಯುತ್ತಾರೆ. ಮನಸ್ಸಿಗೆ ಮದ ತುಂಬುತ್ತಾರೆ’
ಒಂದು ಸುಂದರ ಭ್ರಮೆಯ ಪಯಣ ಹೀಗೆ ಸಾಗುತ್ತದೆ. ಕೊನೆಗೆ ಸಾಯುತ್ತದೆ.

ಕಲರವ ತುಂಬಿಕೊಂಡ ಮುಂಜಾನೆ, ಕನಸುಗಳ ಮೆರವಣಿಗೆ. ಎಲ್ಲೆಲ್ಲಿಂದಲೋ ಚಿಮ್ಮಿ ಬರುವ ಉತ್ಸಾಹ. ಮನಸ್ಸಿಗೆ ನೀಗದ ದಾಹ.
ಎಲ್ಲಿಂದಲೋ ಹುಟ್ಟುವ ಕಥೆ ಎಲ್ಲೆಲ್ಲಿಗೋ ಸಾಗಿ, ಎಲ್ಲೆಲ್ಲಿಗೋ ತಾಗಿ, ಒಸಿ ಮಾಗಿ, ತುಸು ಬಾಗಿ ದಡ ಮುಟ್ಟುವುದು. ಲವಲವಿಕೆ ಗೂಡು ಕಟ್ಟುವುದು.
ಮಾತಾಡುವ ಮಗು, ನೋವಲ್ಲೂ ನಗು ಸೂಸುವ ಮೊಗ, ರಾತ್ರಿ ಮಲಗದೇ ಮುಂಜಾನೆ ಮುಖ ತೊಳೆಯುವ ಮನಸಿನ ಮುಗ್ಧತೆ. ಚಿತೆ ಏರುವ ವಾಸ್ತವ. ಹೊಸ ಅನುಭವ.

ರೂಪಿಸಿಕೊಂಡ ಚೌಕಟ್ಟು, ಕಟ್ಟಿಕೊಂಡ ಮಿತಿಯ ಅಣೆಕಟ್ಟು… ಕಾಲ ಎಸೆಯುವ ಕಲ್ಲೇಟಿಗೆ ಚೂರು ಚೂರಾಗುತ್ತಿದೆ. ಜಡ್ಡುಗಟ್ಟಿದ ಗ್ರಹಿಕೆಗಳು ದಿಕ್ಕಾಪಾಲಾಗಿ ಹರಿಯುತ್ತಿವೆ. ಯಾವ ಕಾಲುವೆಯ ಆಸರೆ ಪಡೆಯುವುದೋ ತಿಳಿಯುತ್ತಿಲ್ಲ.
ಬದುಕು ಅನಿಶ್ಚಿತತೆಯ ತವರು.

***

ಬಾಲ್ಯದೊಂದಿಗೆ ಹೀಗೊಂದು ಭೇಟಿ
ಕಣ್ಮುಚ್ಚಿ ಕಣ್ಬಿಟ್ಟೆ. ಎದುರು ನಿಟ್ಟುಸಿರಿನ ತೀರ. ಮಾತಿನ ಮೆರವಣಿಗೆ ಹೊರಡುತ್ತಿತ್ತು. ಮಾತೂ ನನ್ನದೇ ಕೇಳುವ ಕಿವಿಯೂ… ವರ್ತಮಾನದ ಉಡುಗೆ ಕಳಚಿಟ್ಟು ಬಾಲ್ಯವೆಂಬ ಬೆತ್ತಲೆ ದೇಹದಲ್ಲಿ ನಿಂತೆ.
ನೆನಪಿನ ಹಾಯಿದೋಣಿ ನಿಟ್ಟುಸಿರಿನ ನದಿ ಮೇಲೆ ಸಾಗುತ್ತಿರುವುದು ಕಣ್ಣಿಗೆ ಬಿತ್ತು. ಹಳೆ ಅಮ್ಮ ನೆನಪಾದಳು. ಅವಳ ಕನವರಿಕೆಗಳು, ಮುಗಿಯದ ಚಡಪಡಿಕೆಗಳು, ನನ್ನ ಕುರಿತಾದ ಹಸಿ ಹಸಿ ಹೊಗಳಿಕೆಗಳು, ಹುಸಿ ತೆಗಳಿಕೆಗಳು ಮನಸ್ಸಿನ ಪರದೆ ಮೇಲೆ ಚಿತ್ತಾರ ಮೂಡಿಸುತ್ತ ಹೋದವು. ಅಪ್ಪನ ಅಟ್ಲಾಸ್ ಸೈಕಲ್ಲು, ಅರ್ಧ ಕಿಲೋಮೀಟರ್ ತಳ್ಳಿದ ಮೇಲಷ್ಟೇ ಸ್ಟಾಟರ್್ ಆಗುತ್ತಿದ್ದ ಟಿವಿಎಸ್ಸು ನೆನಪಿನ ರಸ್ತೆ ಮೇಲೆ ಹಾನರ್್ ಮಾಡುತ್ತ ಸಾಗಿದವು.
ಕಣ್ಬಿಟ್ಟ ಮೊದಲ ಕ್ಷಣ ಗ್ರಹಿಕೆಯ ಗುಡಿಯೊಳಗೆ ಬಂದು ಕೂರಲು ನಿರಾಕರಿಸಿತು. ಕಡೆಯ ಬಾರಿ ಕಣ್ಮುಚ್ಚುವ ಕ್ಷಣ ಬೇಡವೆಂದರೂ ಮನಸ್ಸಿನ ಕದ ತಟ್ಟಿತು. ಭೂತಕಾಲದ ಮಡಿಲಲ್ಲಿ ಮಲಗಲು ಹೊರಟಿದ್ದ ಮನಸ್ಸಿನ ದಿಕ್ಕು ತಪ್ಪಿಸಿ, ಭವಿಷ್ಯದ ಅಗೋಚರ ಹಾದಿಗೆ ದೂಡಿತು. ಸಾವಿನ ಚಿಂತೆಗೆ ಸಾವಿಲ್ಲವೆಂದು ಭಾವಿಸಿ ಬದುಕಿನ ಅತಾಕರ್ಿಕ ಕಸಿವಿಸಿಗೆ ತಾತ್ಕಾಲಿಕ ತಡೆ ಒಡ್ಡಿದೆ.
ವರ್ತಮಾನವೆಂಬ ಬರಡು ಭೂಮಿಯಿಂದ ಮನಸ್ಸಿನ ನಡಿಗೆ ಬಾಲ್ಯವೆಂಬ ಫಲವತ್ತಾದ ನೆಲದೆಡೆಗೆ ಸಾಗಿತು. ಮೊದಲ ಬಾರಿ ಶಾಲೆಯ ಮೆಟ್ಟಿಲು ಹತ್ತಿದ ದಿನದ ನೋವು ಕಣ್ಣಂಚಲ್ಲಿ ನಲಿವಾಗಿ ಮಿನುಗಿತು. ಇಷ್ಟದ ಮಿಸ್ಸುಗಳು ನೆನಪಾದರು. ಮಾಡಿದ ಕಿತಾಪತಿಗಳು ಕಣ್ಮುಂದೆ ಸುಳಿದವು.
ನನಗೇ ಅರಿವಿಲ್ಲದಂತೆ ಕಳ್ಳನಾಗಿದ್ದು, ಪಕ್ಕದಲ್ಲಿ ಕೂರುತ್ತಿದ್ದ ಹುಡುಗಿಯ ಬುಕ್ಕುಗಳನ್ನೆಲ್ಲ ಕದ್ದು ದಿನಪೂತರ್ಿ ಕುಕ್ಕರುಗಾಲಲ್ಲಿ ಕಿವಿ ಹಿಡಿದು ನಿಂತು ಗೊಣ್ಣೆ, ಕಂಬನಿಯ ರುಚಿ ಉಂಡಿದ್ದು ಆ ಕ್ಷಣಕ್ಕೆ ಸುಂದರ ನೆನಪಾಗಿ ಹೊರಹೊಮ್ಮಿತು. ನಿನ್ನೆಯ ನರಕ ಇಂದಿನ ಪಾಲಿಗೆ ಸ್ವರ್ಗವಾಗಬಹುದಾದ ಸಂಭಾವ್ಯ ಸಾಧ್ಯತೆಯ ಮೂಲ ಗೋಚರಿಸಿತು.
ಇಷ್ಟದ ಮಿಸ್ಸುಗಳ ಮನವೊಲಿಸಲು ಮಾಡಿದ ಕಸರತ್ತುಗಳು, ಹೊಡೆಯುವುದು ತಮ್ಮ ಜನ್ಮಸಿದ್ಧ ಹಕ್ಕೆಂದು ಭಾವಿಸಿ ಪದೇ ಪದೇ ಕೈ ಕೆಂಪು ಮಾಡುತ್ತಿದ್ದ ಮಿಸ್ಸುಗಳಿಂದ ಪಾರಾಗಲು ಪಡುತ್ತಿದ್ದ ಪ್ರಯಾಸ ನೆನೆದು ಮನಸ್ಸು ಅಗೋಚರ ಉಲ್ಲಾಸ ಅನುಭವಿಸಿತು.
ಅಕಾರಣವಾಗಿ ಹುಟ್ಟಿದ ಮೊದಲ ಪ್ರೀತಿ, ಅವಳು ಕಾಡಿದ ರೀತಿ, ಅವಳ ಒಲವಿನ
ತೆಕ್ಕೆಯಲ್ಲಿ ನಾ ಬೆರೆಯಲು ಹಂಬಲಿಸಿ ಪಟ್ಟ ಪಜೀತಿ ವರ್ತಮಾನದ ಎದೆಗೂ ಜೀವ ದಯಪಾಲಿಸಿತು. ‘ಬಾಲ್ಯ’ ಅನುಭವಿಸಿದ ಮೇಲೆ ಕನಸಿನಂತೆ ಮಿನುಗುವ, ದೂರದಲ್ಲಿ ನಿಂತು ಮನಸ್ಸು ಬೆಳಗುವ ಚುಕ್ಕಿಯಂತೆ ಕಂಡಿತು.
ಬಾಲ್ಯದ ಬಾಗಿಲು ಮುಚ್ಚಿದ್ದು ಯಾವಾಗ? ನನ್ನೊಳಗೆ ನಾನು ಪ್ರಶ್ನಿಸಿಕೊಂಡೆ. ಕಾಲ ಎಲ್ಲರ ಗ್ರಹಿಕೆಯಿಂದಲೂ ಜಾರುವುದು ಹೀಗೆ… ಅರಿವಿಗೆ ಮರೆವಿನ ರೂಪ ಕರುಣಿಸಿ.
ವರ್ತಮಾನ ದೂಷಿಸುತ್ತ, ಭೂತಕಾಲ ಆರಾಧಿಸುವುದು ಮನಸ್ಸಿನ ದೌರ್ಬಲ್ಯವೆಂದುಕೊಂಡೆ. ದೌರ್ಬಲ್ಯದ ಮಡಿಲಿನ ತುಂಬ ಹಿತವಾದ ಭಾವದ ಪಕಳೆಗಳು ಹರಡಿಕೊಂಡಿದ್ದರೆ, ಸ್ಪಶರ್ಿಸುತ್ತ ಸುಖಿಸುವುದರಲ್ಲಿ ತಪ್ಪೇನಿದೆ? ಪ್ರಶ್ನೆಯನ್ನು ಪ್ರಶ್ನೆಯ ಪಾಡಿಗೆ ಬಿಟ್ಟು ನಿಟ್ಟುಸಿರಿನ ತೀರದಿಂದ ವರ್ತಮಾನದ ಊರಿಗೆ ಬಂದೆ. ಗದ್ದಲ, ಗೊಂದಲ, ಜನ, ಮನ, ಧನ… ಮನಸ್ಸಿನೊಳಗೆ ಮಾತು ಮರೆಯಾಗಿ ಮೌನ ಆವರಿಸಿತು.
 

‍ಲೇಖಕರು G

7 January, 2015

4 Comments

  1. Rupa Hasana

    All the best sharath. Khushiyaytu.

  2. chalam

    Good sharath

  3. samyuktha

    Nice!!

  4. sharath h k

    thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading