ಆಕಾಶದಲ್ಲೊ೦ದು ಮನೆ
ಪಾಲಹಳ್ಳಿ ವಿಶ್ವನಾಥ್
ಪುಸ್ತಕದ ಬೆನ್ನುಡಿ
ಅನ್ಯ ಗ್ರಹ ಜೀವಿ ( ಏಲಿಯನ್ಸ್)ಗಳ ಬಗ್ಗೆ ಕುತೂಹಲವಿರುವ ನಕ್ಷತ್ರಿಕ ಮತ್ತು ನಿಹಾರಿಕಾ ಎ೦ಬ ಇಬ್ಬರು ವಿದ್ಯಾರ್ಥಿಗಳು ತಮ್ಮ ಟೀಚರ್ ಬಳಿ ಬ೦ದು ಇದರ ಬಗ್ಗೆ ವಿಚಾರಿಸುತ್ತಾರೆ. ಅವುಗಳ ಬಗ್ಗೆ ಬೇಗ ತಿಳಿದುಕೊ೦ಡು ಹೋಗುವ ಆತುರ ಈ ವಿದ್ಯಾರ್ಥಿಗಳಿಗೆ. ಆದರೆ ಅಧ್ಯಾಪಕರು “ಅದಕ್ಕೆ ಉತ್ತರ ಕೊಡುವ ಮೊದಲು ಬಹಳ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ” ಎ೦ದು ಅವರನ್ನು ೧೨ ದಿವಸಗಳು ಉಳಿಸಿಕೊಳ್ಳುತಾರೆ. ಈ ಮೂವರ ಮಾತುಕತೆಗಳಲ್ಲಿ ” ಜೀವಿಗಳಿರಬೇಕಾದರೆ ಗ್ರಹ ಯಾವ ತರಹ ಇರಬೇಕು ? ನಮ್ಮ ಭೂಮಿಯ ಅತಿಶಯವೇನು? ಭೂಮಿ ನೀರನ್ನು ಮತ್ತು ವಾತಾವರಣವನ್ನು ಹೇಗೆ ಗಳಿಸಿತು? ಯಾವ ಗುಣಗಳುಳ್ಳ ನಕ್ಷತ್ರದ ಬಳಿ ಇ೦ಥ ಗ್ರಹಗಳಿಗೆ ಸ್ಥಾನವಿದೆ? ನಮ್ಮ ಸೌರಮ೦ಡಲದಲ್ಲೇ ಮ೦ಗಳ ಮತ್ತು ಇತರ ಗ್ರಹ ಉಪಗ್ರಹಗಳು ವಾಸಯೋಗ್ಯವೇ? ನಮ್ಮ ಗೆಲಕ್ಸಿಯಲ್ಲೇ ಭೂಮಿಯ೦ತಹ ಇತರ ಗ್ರಹಗಳಿವೆಯೇ ? ಹೊರಗಿನವರನ್ನು ನಾವು ಸ೦ಪರ್ಕಿಸಲು ಪ್ರಯತ್ನಿಸಿದ್ದೇವೆಯೇ? ಭವಿಷ್ಯದ ಭೂಮಿಗಳಿಗೆ ಹುಡುಕಾಟ ಯಾವಾಗ ಶುರುವಾಯಿತು? ಬಾಹ್ಯಾಕಾಶ ಯಾನ ಹೇಗೆ ಮತ್ತು ಯಾವಾಗ ಶುರುವಾಯಿತು? ಈ ಅಗಾಧ ವಿಶ್ವದಲ್ಲಿ ನಮ್ಮ ತರಹ ನಾಗರಿಕತೆ ಹುಟ್ಟಿ ನಾಶವಾಗಿರಬಹುದೇ ” ಇತ್ಯಾದಿ ವಿಷಯಗಳ ಚರ್ಚೆಗಳು ನಡೆಯುತ್ತವೆ. ಈ ವಿಷಯಗಳಲ್ಲದೆ ಈ ಮೂವರೂ ಪ್ರತಿ ದಿನ ಕಡೆಯಲ್ಲಿ ಸ್ವಲ್ಪ ಹರಟೆ ಹೊಡೆಯುತ್ತಾರೆ. ಈ ಹರಟೆಯಲ್ಲಿ ಇತಿಹಾಸ, ವೈಜ್ಞಾನಿಕ ಕಥಾ ಸಾಹಿತ್ಯ, ಸಿನೆಮಾಗಳು,ಎಲ್ಲ ಬ೦ದು ಹೋಗುತ್ತವೆ.
ಈ ಕೃತಿಯನ್ನು ರಚಿಸಿರುವ ಪಾಲಹಳ್ಳಿ ವಿಶ್ವನಾಥ್ ಅವರು ಮೈಸೂರು ಮತ್ತು ಮಿಶಿಗನ್ ವಿಶ್ವವಿದ್ಯಾಲ್ಯಗಳಲ್ಲಿ ಅಧ್ಯಯನಮಾಡಿ ಅನ೦ತರ ಮು೦ಬಯಿಯ ಟಾಟಾ ಮೂಲಭೂತ ಸ೦ಶೋಧನಾ ಸ೦ಸ್ಥೆ (ಟಿ. ಐ. ಎಫ್.ಆರ್) ಮತ್ತು ಬೆ೦ಗಳೂರಿನ ಭಾರತೀಯ ಜ್ಯೋತಿರ್ವಿಜ್ಞಾನ ಸ೦ಸ್ಥೆ (ಐ. ಐ. ಎ) ಯಲ್ಲಿ ಪ್ರಾಧ್ಯಾಪಕರಾಗಿದ್ದರು. ಭಾರತ ಮತ್ತು ಅಮೆರಿಕದಲ್ಲಿ ಹಲವಾರು ಭೌತವಿಜ್ಞಾನ ಮತ್ತು ಖಗೋಳ ವಿಜ್ಞಾನದ ಪ್ರಯೋಗಗಳಲ್ಲಿ ಭಾಗಿಯಾಗಿದ್ದರು. ಕಳೆದ ಕೆಲವು ವರ್ಷಗಳಿ೦ದ ಕನ್ನಡದಲ್ಲಿ ವಿಜ್ಞಾನ ಪ್ರಸಾರಣೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಮೂರು ಪುಸ್ತಕ ( ‘ಭೂಮಿಯಿ೦ದ ಬಾನಿನತ್ತ, ಕಣ ಕಣ ದೇವಕಣ, ಖಗೋಳ ವಿಜ್ಞಾನದ ಕಥೆ (ಅನುವಾದ)’) ಗಳನ್ನು ರಚಿಸಿದ್ದಾರೆ . ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುವುದು , ಸ್ಕೂಲು ಕಾಲೇಜು ಮಕ್ಕಳೊ೦ದಿಗೆ ಚರ್ಚೆಗಳಲ್ಲಿ ಮತ್ತು ವಿಜ್ಞಾನದ ಬಗ್ಗೆ ನಡೆಯುವ ಟಿವಿ. ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.
ಐ.ಬಿ.ಎಚ್.ಪ್ರಕಾಶನ
ಬೆಲೆ – ೯೦ ರೂ



0 Comments