ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಡಿ ಸಿ ರಾಜಪ್ಪನವರ ’ಸಮವಸ್ತ್ರದೊಳಗೊಂದು ಸುತ್ತು’

ಡಾ . ಡಿ. ಸಿ. ರಾಜಪ್ಪ

“ಸಮವಸ್ತ್ರದೊಳಗೆ ಸುತ್ತುತ್ತಲೇ ಇದ್ದೇನೆ. ಖಾಕಿಯ ಖದರಿನೊಳಗೆ ಕಾಣದಿರುವ ಕವಿಗಳ ಹುಡುಕಾಟ ಮುಂದುವರಿಯುತಾ ಒಂದು ದಶಕ ಕಳೆದಿದ್ದೇನೆ” ಎನ್ನುವ ಡಾ . ಡಿ. ಸಿ. ರಾಜಪ್ಪ ವೃತ್ತಿಯಿಂದ ಪೊಲೀಸ್ ಅಧಿಕಾರಿ ಪ್ರವೃತ್ತಿಯಿಂದ ಕವಿ, ಲೇಖಕ, ಸಂಶೋಧಕ. ಕವಿ ಹೃದಯದ ಡಾ. ರಾಜಪ್ಪ ಅವರು ತಮ್ಮ ಪೊಲೀಸ್ ಸಹದ್ಯೋಗಿಗಳಲ್ಲಿ ಸುಪ್ತವಾಗಿ ಅಡಗಿರುವ ಕವಿತ್ವವನ್ನು ಬಡಿದೆಬ್ಬಿಸಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಬರೆದಿರುವ “ಸಮವಸ್ತ್ರದೊಳಗೊಂದು ಸುತ್ತ”- ಕವನ ಸಂಕಲನ ಸಂಪುಟ – ೩ ಪ್ರಕಟವಾಗುತ್ತಿದೆ. ತಾನು ಬೆಳೆದರೆ ಸಾಲದು ತನ್ನೆಲ್ಲಾ ಬಳ್ಳಿ-ಬಳಗ ಬೆಳೆಯಬೇಕು ಎಂಬ ಹಂಬಲದ ಡಾ. ರಾಜಪ್ಪ ಅಪರೂಪದ ಸಹೃದಯಿ.
ಚಿತ್ರದುರ್ಗ ಜಿಲ್ಲೆಯ ಹಿರೇಎಮ್ಮಿಗನೂರಿನ ರೈತ ಕುಟುಂಬದಿಂದ ಬಂದಿರುವ ಡಾ ರಾಜಪ್ಪ ಈ ನಾಡಿನ ಗ್ರಾಮೀಣ ಬದುಕಿನ ನಾಡಿಮಿಡಿತ ಬಲ್ಲವರು. ಸಂಕಷ್ಟಗಳನ್ನು ಅನುಭವಿಸಿ ತಿಳಿದವರು. ತಾನು ಬೆಳೆದು ಬಂದಿರುವ ಗ್ರಾಮೀಣ ಪರಿಸರವನ್ನು ಹಸನು ಮಾಡಲು ಹೊರಟಿರುವ ಡಾ ರಾಜಪ್ಪ ಅವರು ವಿಜಾಪುರ ಜೆಲ್ಲೆಯಲ್ಲಿ ಆರಂಭಿಸಿರುವ ಮಹಿಳಾ ಜಾಗೃತಿ ಅಭಿಯಾನ ಒಂದು ಉದಾಹರಣೆಯಷ್ಟೇ. ಒಬ್ಬ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲಾ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯಬಹುದು ಎನ್ನುವುದಕ್ಕೆ ಈ ಪ್ರಯೋಗ ಸಾಕ್ಷಿ. ವಿಜಾಪುರ ಜಿಲ್ಲೆಯಲ್ಲಿ ಆರಂಭಿಸಿರುವ ಈ ಮಹಿಳಾ ಜಾಗೃತಿ ಅಭಿಯಾನವನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವಂತೆ ಈಗಿನ ಲೋಕಾಯುಕ್ತ ನ್ಯಾಯಮೂರ್ತಿ ಶ್ರೀ ಶಿವರಾಜ ಪಾಟೀಲ ಅವರು ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಡಾ ರಾಜಪ್ಪ ಅವರ ಸಾಮಾಜಿಕ ಕಳಕಳಿಗೆ ಹಿಡಿದ ಕೈಗನ್ನಡಿ.

ಮೂಲತಃ ಸಂಶೋಧಕ ಪ್ರವೃತೀಯವರಾದ ಡಾ ರಾಜಪ್ಪ ಅವರು ಜೀವನದ ಪ್ರತಿಯೊಂದು ಕ್ಷಣವನ್ನು ವಿಚಕ್ಷಕ ದೃಷ್ಟಿಯಿಂದಲೇ ನೋಡುತ್ತಾರೆ. ಮೇಲ್ನೋಟಕ್ಕೆ ಖಾಕಿ ದಿರಿಸಿನಲ್ಲಿ ದರ್ಪದ ಪೊಲೀಸ್ ಅಧಿಕಾರಿಯಂತೆ ಕಂಡರೂ ಸಹೃದಯ ಸಂಪನ್ನರು. ನೊಂದ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಗುಣ ಹೊಂದಿರುವ ಅವರು, ಸಂಕಷ್ಟಕ್ಕೆ ಸಿಲುಕಿದವರು ರಾತ್ರಿ ಎಷ್ಟು ಹೊತ್ತಿಗೇ ಫೋನ್ ಮಾಡಿದರೂ ಅದನ್ನು ಸ್ವೀಕರಿಸಿ ಅಂತಹ ಸರಿರಾತ್ರಿಯಲ್ಲಿಯೂ ಸಮಾಧಾನ ಹೇಳಿ ಸಂಕಷ್ಟ ದೂರ ಮಾಡುವ ಅಪರೂಪದ ಅಧಿಕಾರಿ.
 
ವೃತ್ತಿ, ಪ್ರವೃತ್ತಿ ಎರಡನ್ನೂ ಮೇಳೈಸಿಕೊಂಡಿರುವ ಡಾ ರಾಜಪ್ಪ ಸಮ್ಯಕ್ಯ ದೃಷ್ಟಿಯಲ್ಲಿ ನಡೆ, ನುಡಿ ಒಂದಕ್ಕೊಂದು ಪೂರಕ. ಕಾಯಕದಲ್ಲಿ ತ್ರಿವಿಕ್ರಮ. ಎಲ್ಲೇ ಹೋದರೂ ಯಾವುದೇ ಹುದ್ದೆ ಸ್ವೀಕರಿಸಿದರೂ ಅಲ್ಲಿ ಏನಾದರೊಂದು ಹೊಸತು ಮಾಡಬೇಕೆಂಬ ಛಲ. ಅದನ್ನು ಸಾಧಿಸುವ ವಿಕ್ರಮ. ಅನಿಸಿದ್ದನ್ನು, ಕನಸು ಕಂಡದ್ದನ್ನು ಮಾಡಿಯೇ ತೀರುತ್ತೇನೆ ಎಂಬ ದೃಢ ವಿಶ್ವಾಸ. ಅದನ್ನು ಮಾಡಿಯೇ ಸಿದ್ಧ. ವೃತ್ತಿ ಬದುಕಿನಲ್ಲಿ ಶುದ್ಧತೆ, ಬದ್ಧತೆ, ಶ್ರದ್ಧೆ ನಿಷ್ಟೆಗಳೇ ಅವರ ಆಸ್ತಿ. ಜತೆಗೆ ಪೊಲೀಸ್ ಕವಿಗಳ ಸಂಗಮ. ವಿಶಿಷ್ಟ ಬದುಕು ಕಟ್ಟಿಕೊಂಡಿರುವ ಡಾ ರಾಜಪ್ಪ ಅದ್ಯಮ ಪೊಲೀಸ್ ಚೇತನ.
ಡಾ ಓಂಕಾರ ಕಾಕಡೆ
(ಬೆನ್ನುಡಿ )
ತಿರುಮಲ ಪ್ರಕಾಶನ ದಾವಣಗೆರೆ
ಬೆಲೆ : ರೂ ೧೨೫/-
 

‍ಲೇಖಕರು avadhi

18 April, 2014

1 Comment

  1. mmshaik

    abhinandanegaLu..sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading