ಫೋಟೋಗ್ರಾಫರನ ಕೆಲವು ನೆನಪುಗಳು
ಟಿ ಎಸ್ ಸತ್ಯನ್
“ನಮ್ಮ ದೇಶದ ಛಾಯಾಗ್ರಾಹಕರಲ್ಲಿ ಅಗ್ರಪಂಕ್ತಿಗೆ ಸೇರಿದವರು ಸತ್ಯನ್ ….
” ಕ್ಯಾಮರಾ ಯಾವ ನಿಲುವಿನಲ್ಲಿರಬೇಕು, ಷಟರ್ ಗಳ ವೇಗ ಎಷ್ಟಿರಬೇಕು, ಯಾವ ಲೆನ್ಸ್ ಬಳಸಬೇಕು ಎಂದು ಗಂಟೆಗಟ್ಟಲೆ ಯೋಚಿಸುವ ಫೋಟೋಗ್ರಾಫರ್ ಗಳ ಗುಂಪಿಗೆ ಸೇರಿದವರಲ್ಲ ಸತ್ಯನ್. ಅವರ ಬುದ್ಧಿ ಮಿಂಚಿನ ವೇಗದಲ್ಲಿ ಚಲಿಸುತ್ತದೆ. ಅವರ ಕಣ್ಣು ಕ್ಯಾಮರ ಕಣ್ಣು ಕಾಣುವುದಕ್ಕಿಂತ ಹೆಚ್ಚಿನದನ್ನು ಗಮನಿಸುತ್ತದೆ…
” ಸತ್ಯನ್ ಶ್ರೇಷ್ಠತಮ ಅಂತರರಾಷ್ಟ್ರೀಯ ಚಿತ್ರಪ್ರಬಂಧಕಾರರ ಸಾಲಿಗೆ ಸೇರುತ್ತಾರೆ….
“ಅವರು ತೆಗೆದಿರುವ ಪ್ರಖ್ಯಾತರ ಚಿತ್ರಗಳಿಗಿಂತ ಹೆಚ್ಚಾಗಿ ಅವರು ತೆಗೆದಿರುವ ಅನಾಮಧೇಯರ – ಹಳ್ಳಿಯ ಶಾಲಾ ಬಾಲಕ, ಕಳಕಳಿಯನ್ನು ತೋರಿಸುತ್ತಿರುವ ತಾಯಿ, ತಾನು ಧರಿಸಿರುವ ಒಡವೆಗಳ ಪ್ರಭೆಯನ್ನು ಮೀರಿಸುತ್ತಿರುವ ಕಣ್ಣಿನ ಬೆಳಕನ್ನು ಬೀರುತ್ತಿರುವ ಗುಳಿಕೆನ್ನೆಯ ಮಗ್ಧ ಹುಡುಗಿ, ಇಂಥವರ-ಚಿತ್ರಗಳಲ್ಲಿ ಸತ್ಯನ್ ಅವರ ಪ್ರತಿಭೆ, ಸಹಾನುಭೂತಿಗಳು ಬೆಳಗುತ್ತಿವೆ …

“ಅವರ ಪ್ರೀತಿಯ ಚಿತ್ರವಸ್ತು ಎಂದರೆ ಜನರು, ಅದರಲ್ಲೂ ಮಕ್ಕಳು, ೧೯೭೯ ರಲ್ಲಿ “ಮಗುವಿನ ಅಂತರರಾಷ್ಟ್ರೀಯ ವರ್ಷ’ದ ಆಚರಣೆಯ ಸಂದರ್ಭದಲ್ಲಿ ವಿಶ್ವಸಂಸ್ಥೆ ನ್ಯೂಯಾರ್ಕಿನ ತನ್ನ ಕೇಂದ್ರ ಕಟ್ಟಡದಲ್ಲಿ ಸತ್ಯನ್ ಅವರು ತೆಗೆದ ಮಕ್ಕಳ ಹಾಗೂ ಹುಡುಗರ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಅವರ ಚಿತ್ರಪ್ರತಿಭೆಗೆ ಗೌರವ ತೋರಿಸಿದ್ದರಲ್ಲಿ ಏನೇನೂ ಆಶ್ಚರ್ಯವಿಲ್ಲ ….
“ಅವರ ಚಿತ್ರಗಳು ಮೂಕ ಸಾಕ್ಷಿಗಳಲ್ಲ; ತಾವು ಹೇಳಬೇಕಾದುದನ್ನೆಲ್ಲ ಅವು ಕಾವ್ಯಮಯವಾಗಿ ಸೂಚಿಸುವಂಥವು, ನಿಜ. ಆದರೆ ಅವರ ಚಿತ್ರಗಳಿಗೆ ವಾಗ್ದೇವಿಯ ಕೃಪೆಯ ಸ್ಪರ್ಶವೂ ದೊರೆತು ಅವು ವಾಗ್ಮಿಗಳಾದಂತೆ ಭಾಸವಾಗುವ ಲೇಖನಗಳನ್ನು ಅವರು ಬರೆದಿದ್ದಾರೆ ….
“ಅನೇಕ ಮಹಾನ್ ಮತ್ತು ಸಾಮಾನ್ಯ ಘಟನೆಗಳು, ಶ್ರೀಸಾಮಾನ್ಯರ ಮೇಲೆ ಅವರಿಗಿರುವ ವ್ಯಾಮೋಹ ಎನ್ನುವಷ್ಟರಮಟ್ಟಿನ ಪ್ರೀತಿಯಿಂದ ಮೂಡಿದ ಚಿತ್ರಗಳು, ಜಗತ್ತನ್ನು ಅನೇಕ ಬಾರಿ ಸುತ್ತಿ ಬಂದಿರುವ ಅವರ ಅನುಭವದ ಗಣಿಯ ವಜ್ರಗಳು – ಈ ಎಲ್ಲವೂ ಸುಂದರವಾದ ಚಿತ್ರಗಳಾಗಿವೆ …. ”
ಎಚ್. ವೈ ಶಾರದಾ ಪ್ರಸಾದ್
(ಬೆನ್ನುಡಿ)
ಪ್ರಿಸಮ್ ಬುಕ್ಸ್ ಪ್ರೈ ಲಿ
ಬೆಲೆ : ರೂ. ೨೪೦/-



0 Comments